ಬಾನಲೀನ ಉಲಿಯನರಸುತ್ತ... ಇದು ಬರಿ ಬೆಳಗಲ್ಲೊ ಅಣ್ಣಾ...sss 

Date: 13-01-2021


ಬೇಂದ್ರೆ ಅಜ್ಜನ್ನ ನೋಡಿದ್ ಮ್ಯಾಲ, ’ಯಪ್ಪಾ, ಈ ಹಾಡು ಬರದ್ ಮನಶ್ಯಾ ಇವನನಾ! ಅಂತ ಚೋಜಿಗ ಆಗಿ, ಒಮ್ಮೆರ ಆ ಅಜ್ಜನ್ನ ಭೆಟ್ಟ್ಯಾಗಿ ಮಾತಾಡ್ಬೇಕು ಅಂತನಿಸಿ, ಒಮ್ಮೆ ಹೆದರ್‍ಕೊಂತs ಸಾಧನಕೇರಿಯ ‘ಶ್ರೀಮಾತಾ’ಕ್ಕ ಹ್ವಾದ್ಯಾ’ ಎನ್ನುತ್ತಾ ನೆನಪಿನ ಬುತ್ತಿಯನ್ನು ತೆರೆದಿಡುತ್ತಾರೆ ವಿಮರ್ಶಕ - ಲೇಖಕ ಡಾ. ಬಸವರಾಜ ಸಾದರ. ಧಾರವಾಡದ ಆಕಾಶವಾಣಿಯಲ್ಲಿ (1996) ದ.ರಾ. ಬೇಂದ್ರೆ ಅವರ ‘ಇದು ಬರಿ ಬೆಳಗಲ್ಲೊ ಅಣ್ಣಾ’ ಕಾರ್ಯಕ್ರಮದ ನೆನಪಿನ ಪ್ರಸಂಗವನ್ನು ನಿಮ್ಮೆಲ್ಲರ ಮುಂದೆ ಬಿಚ್ಚಿಟ್ಟದ್ದು ಹೀಗೆ.

(ನೂರುಗಳನ್ನೊಳಗೊಂಡ ನೂರನೆಯ ನೆನಪಿನ ನೇರ ಪ್ರಸಾರ)

ನಾವು ಸಣ್ಣವ್ರಿದ್ದಾಗ ನಮ್ಮೂರ್‍ಗೆ, ಅರವತ್ತೆಪ್ಪತ್ ವರ್ಷದ ಒಬ್ಬ ಮನಶ್ಯಾ ನೀಡಸ್ಕೊಳ್ಳಾಕ ಬರ್‍ತಿದ್ದಾ. ಅಂವಾ ಹಂಗ್ ಬಂದವ್ನs, ಒಂದ್ ತಪ್ಪಡಿ ಹಿಡಕೊಂಡು, ಕರ್ಜ ದನಿ ತಗದು, `ಇನ್ನೂ ಯಾಕ್ ಬರಲಿಲ್ಲವ್ವಾ ಹುಬ್ಬಳ್ಳೀಯಾಂವಾ, ವಾರದಾಗ ಮೂರ್ ಸರ್‍ತೆ ಬಂದ್ ಹೋಗಾಂವಾ’ ಅಂತ ಹಾಡ್ಕೋಂತ ಊರಾಗಿನ ಮನಿಮನೀ ತಿರಗಿ, ಮಂದಿ ಕೊಟ್ಟದ್ದನ್ನ ನೀಡಸ್ಕೊಂಡು ಹೊಕ್ಕಿದ್ದ. ಅಂವನ ಆ ಹಾಡು ಆವಾಗ ನಮಗೆಲ್ಲಾ ಒಂದ್ ನಮೂನಿ ಗುಂಗs ಹಿಡಿಸಿಬಿಟ್ಟಿತ್ತು. ನಾವೆಲ್ಲ ಮಂಗ್ಯಾ ಹುಡಗೂರು ಕೂಡಿ, ಆ ಹಾಡಿನೆಂಗs, `ಇನ್ನೂ ಯಾಕ ಬರಲಿಲ್ಲವ್ವಾ ಹೊಲಕ್ಕ ಹೋದಾಂವಾ, ಮೂರು ಸಂಜಿ ಆಗೂದ್ರಾಗ ಮನೀಗೆ ಬರಾಂವಾ’ ಅಂತ, ಮತ್ತ್ ಇನ್ನೂ ಒಮ್ಮೊಮ್ಮೆ, `ಇನ್ನೂ ಯಾಕ ಬರಲಿಲ್ಲವ್ವಾ ಗೌಡರ ಮನಿ ಹುಡುಗಾ, ಕಳ್ಳಗಣ್ಲೆ ಕಾಯತಾಳ ಸಾವ್ಕಾರ್ ಮನಿ ಹುಡಗಿ’ ಅಂತ ಮನಸೀಗೆ ಬಂದದ್ದನ್ನ ಹೊಸದು ಗುನುಗುನಸ್ತದ್ವಿ.
ನಮ್ಮ ಕಾಕಾ ಒಬ್ಬಾಂವಾ ಭಾಳ್ ಶೋಕಿ ಮನಶ್ಯಾ ಇದ್ದ. ಅಂವಾ ಇಡೇ ಊರ್‍ಗೇ ಮದಲ್ನೇದ್ದಾಗಿ ಒಂದ್ ರೇಡವೇ (ರೇಡಿಯೋ) ಕೋಡ್ಕೊಂಡ್ ತಂದಿದ್ದಾ. ಅದರಾಗ ಧಾರ್‍ವಾಡ್ ಆಕಾಶವಾಣೀಲಿಂದ ’ಹುಬ್ಬಳ್ಳಿಯಾಂವನ’ ಅದs ಹಾಡಿನ ರಿಕಾರ್ಡು ಬರಾಕ್ಹತ್ತಿಂದ್, ಬಾಳ್ ಮಜಾ ಅನಸಾಕ್ಹತ್ತಿತು. ’ಅಲೆ ಇವ್ನ! ಎಲ್ಲಾರೂ ಇದs ಹಾಡು ಹಾಡ್ತಾರಲ್ಲಪಾ?, ಹಂಗಾದ್ರ ಈ ಹುಬ್ಬಳ್ಳಿಯಾಂವ ಯಾರಿರ್‍ಬೇಕು? ಅಂವಾ ಭಾರೀ ಆಸಾಮಿನs ಇರಬೇಕು’ ಅನಕೊಂತ್, ಮುಂದ ಅವನ್ನ ಎಲ್ಲಾ ಕಡೆ ಹುಡಕಿದ್ದs ಹುಡಕಿದ್ದು. ಆದ್ರ, ಅಂವಾ ಎಲ್ಲೂ ಸಿಗ್ಲೇ ಇಲ್ಲ. ಮಜಕೂರದ ಮಾತಂದ್ರ, ಭಾಳ ದಿನದ್ ಮ್ಯಾಲ, ಅಂದ, ನನ್ನ ಇಪ್ಪತ್ತೆರಡ್ನೇ ವಯಸ್ಸಿನ್ಯಾಗ ಕರ್ನಾಟಕ ಕಾಲೇಜಿನ್ಯಾಗ ಎಡ್ಮೀಶನ್ ಸಿಕ್ಕು ಧಾರ್‍ವಾಡಕ್ಕ ಬಂದಾಗ ಸಿಕ್ಕದ್ದು ಹುಬ್ಬಳ್ಳಿಯಾಂವ ಅಲ್ಲ; ಹುಬ್ಬಳ್ಳಿಯಂವನ್ನ ಹುಟ್ಸಿದ ಬೇಂದ್ರೆ ಅಜ್ಜ! ಅಲ್ಲಿಂದ ಸುರೂವಾತ್ ನೋಡ್ರಿ, ಪಾತರಗಿತ್ತಿ ಪಕ್ಕಾ, ನೋಡೀದೇನs ಅಕ್ಕಾ...., ಬಾರೋ ಸಾಧನಕೇರಿಗೆ...., ಕುಣಿಯೋಣ ಬಾರs ...., ನಾನು ಬಡವಿ, ಆತ ಬಡವ...., `ಕುರುಡು ಕಾಂಚಾಣ..., ನೀ ಹೀಂಗ ನೋಡಬ್ಯಾಡ ನನ್ನ....-ಹೀಂಗ್ ಒಂದs, ಎರಡs, ಸಾಲ್ ಸಾಲು ಬೇಂದ್ರೆ ಅಜ್ಜನ ಹಾಡು ಕಿಂವಿ ಮ್ಯಾಲ ಬೀಳಾಕ್ಹತ್ತಿದ್ವು.
ಈ ಹಾಡು ಕೇಳ್ತಿಂದಗನs, ಕೈಯಾಗೊಂದು ಕೊಡಿ ಹಿಡಕೊಂಡು, ಮೈಮ್ಯಾಲೊಂದು ಕೋಟು, ತೆಲೀ ಮ್ಯಾಲ ಕರೇ ಟೊಪಗಿ ಹಾಕ್ಕೊಂಡು ಆವಾಗಿವಾಗ ಧಾರ್‍ವಾಡದ ಸುಭಾಸ್ ರಸ್ತೇದಾಗ, ಓಡಾಡ್ತಿದ್ದ ಬೇಂದ್ರೆ ಅಜ್ಜನ್ನ ನೋಡಿದ್ ಮ್ಯಾಲ, ’ಯಪ್ಪಾ, ಈ ಹಾಡು ಬರದ್ ಮನಶ್ಯಾ ಇವನನಾ! ಅಂತ ಚೋಜಿಗ ಆಗಿ, ಒಮ್ಮೆರ ಆ ಅಜ್ಜನ್ನ ಭೆಟ್ಟ್ಯಾಗಿ ಮಾತಾಡ್ಬೇಕು ಅಂತನಿಸಿ, ಒಮ್ಮೆ ಹೆದರ್‍ಕೊಂತs ಸಾಧನಕೇರಿಯ ’ಶ್ರೀಮಾತಾ’ಕ್ಕ ಹ್ವಾದ್ಯಾ. ಬಾಗಲ್ದಾಗs ನಿಂತಿದ್ದ ಅಜ್ಜ, ’ಬಾ, ಬಾ, ತಮ್ಮಾ. ಯಾವೂರ್‍ಪಾ ನಿಂದು?’ ಅಂತ ಕೇಳಿದಾಗ, ’ಹುಲ್ಲಂಬಿರೀ’ ಅಂತ ಉತ್ರಾ ಕೊಟ್ಟಿದ್ದೆ. ’ಅದರ ಅರ್ಥ ಗೊತ್ತನ ನಿನಗ?’ ಅಂತ ಏಕದಂ ಮತೊಂದ್ ಪ್ರಶ್ನೆ ಒಗೀಬೇಕ ಅಜ್ಜಾ? ನನಗ ಹೆದರ್‍ಕೀನs ಬಂತು. ಗೊತ್ತಿಲ್ಲದ ಉತ್ರಾ ಎಲ್ಲಿಂದ ಹೇಳೂದು? ಕಾಲ್ ಕೆದರಕೊಂತ್ ನಿಂತಾಗ, ’ನಿಮ್ಮೂರು ಮಲ್ಲಾಡದಾಗೈತ್ಯೋ ತಮ್ಮಾ. ಅಲ್ಲೆ ಮಳೀ ಭಾಳ ಅಕ್ಕೈತೆಲ್ಲಾ, ಹಂಗಾಗಿ ಗುಡ್ಡದಾಗ ಹುಲ್ಲು ಹುಲಸಾಗಿ ಬೆಳೀತೈತಿ. ಮತ್ತs ಮಲ್ಲಾಡದಾಗ ಮಳೀ ಬಾಳಲ್ಲ, ಅದಕ್ಕ ನೀರೂನೂ ಬಾಳ ನಿಮ್ಮೂರಾಗ. ನೀರಿಗೆ ಅಂಬು ಅಂತಾರ. ಈ ಹುಲ್ಲು ಮತ್ತ್ ಅಂಬು ಭಾಳ ಇರೂದ್ರಿಂದ, ಅವೆರ್‍ಡೂ ಕೂಡೇ ನಿಮ್ಮೂರ್‍ಗೆ ಹುಲ್ಲಂಬಿ ಅಂತ ಹೆಸರು ಬಂದಿರ್‍ಬೇಕು. ಪ್ರತಿಯೊಂದ್ ಊರಿನ್ ಹೆಸರಿನ ಹಿಂದ್ ಹೀಂಗ ಒಂದೊಂದ್ ಅರ್ಥ ಇರತೈತೇನಪಾ. ಇದನ್ನೆಲ್ಲಾ ತಿಳಕೋಬೇಕು ನೀನು...’ ಅನಕೊಂತ ಕೈಮ್ಯಾಲ ಕಲ್ಸಕ್ರಿ ಹಾಕಿ, ’ಚೊಲೋತಂಗ್ ಅಭ್ಯಾಸಾ ಮಾಡಿ ಬಿ.ಎ., ಎಂ.ಎ. ಪಾಸಾಗು’ ಅಂತ್ಹೇಳಿ, ’ಹೋಗಿ ಬಾ’ ಅಂದಿದ್ರು ಆ ಸಾಧನಕೇರಿ ಸಾಧಕ ಅಂಬಿಕಾತನಯದತ್ತರು. ಅಲ್ಲಿಂದ ಸುರೂವಾತ್ ನೋಡ್ರಿ ಬೇಂದ್ರೆ ಅಜ್ಜನ ಪ್ರಭಾವ.
ಹಿಂತಾ ಅಜ್ಜನ ಊರಾಗs ಬಿ.ಎ. ಮುಗಸಿ, ಎಮ್ಮೇ ಮಾಡಿದ ನನಗ, ಅವರ್‍ನ ಧಾರ್‍ವಾಡದಾಗ ನಡೀತಿದ್ದ ಬ್ಯಾರೆ ಬ್ಯಾರೇ ಕಾರ್ಯಕ್ರಮಗಳೊಳಗ ನೋಡೂವಂಥಾ ಅವಕಾಶ ಸಿಕ್ವು. ಆದ್ರ ಅವೆಲ್ಲಕ್ಕಿಂತ ಹೆಚ್ಚಾಗಿ ಅವರ್‍ನ ನಾನು ಭಾಳ ಹತ್ತಿರದಿಂದ ನೋಡಿ, ಮಾತಾಡೂ ಅವಕಾಶ ಮತ್ತೊಮ್ಮೆ ಸಿಕ್ಕದ್ದು ಅಂದ್ರ, ಎಮ್ಮೇ ಫೈನಲ್‌ನ್ಯಾಗಿದ್ದಾಗ. 1980ನೇ ಸಾಲಿನ ಕನ್ನಡ ಅಧ್ಯಯನ ಪೀಠದ ನಮ್ಮ ಕರ್ನಾಟಕ ಸಂಘದ ಮುಕ್ತಾಯ ಸಮಾರಂಭಕ್ಕೆ ಅವರ್‍ನ ಗೆಸ್ಟ್ ಅಂತ ಕರೀಬೇಕನ್ನೂ ಠರಾವ್ ಆಗಿ, ನಮ್ಮ ಕಾರ್ಯದರ್ಶಿ ಶ್ಯಾಮಸುಂದರ ಕೋಚಿ ಕೂಡ ಅವರ್‍ನ ಆಮಂತ್ರಿಸೋ ಸಲವಾಗಿ ನಾನು ಮತ್ತೊಮ್ಮೆ ಅವರ ಮನೀಗಿ ಹ್ವಾದ್ಯಾ. ’ಏ ನೀವು, ವಿದ್ಯಾರ್ಥಿಗಳು ಕರ್‍ಯಾಕ ಬಂದೀರಂದ್ ಮ್ಯಾಲ ಒಲ್ಲೆನ್ನಾಕ ಅಕ್ಕೈತಿ? ಜರೂರ್ ಬರ್‍ತೇನಿ’ ಅಂದಾಗ ಕೋಚಿಗೆ ಮತ್ತ ನನಗ ಗೋದಿ ಹುಗ್ಗಿ ಉಂಡಷ್ಟು ಆನಂದಾಗಿತ್ತು.
ನನ್ನ ಪಾಲಿಗೆ ಖರೇವಂದ್ರೂ ಭಾಳ ಖುಷಿ ಆಗಿದ್ದಂದ್ರ ಬೇಂದ್ರೆ ಅಜ್ಜಾ ನಮ್ಮ ಡಿಪಾರ್ಟಮೆಂಟೀಗೆ ಗೆಸ್ಟ್ ಆಗಿ ಬಂದದ್ದು. ಅದಕ್ಕೂ ದೊಡ್ಡ ಖುಷಿ ಆಗಿದ್ದಂದ್ರ, ನನ್ನ ಜೀವನದಾಗ ಮರೀಲಾರದಂತಾ ಒಂದ್ ಘಟನಾ ಅವತ್ತ ನಡದದ್ದು. ಆ ವ್ಯಾಳೆ ಇನ್ನೂ ನನ್ನ ಕಣ್ಣಾಗೈತಿ, ಎದೀಯೊಳಗೈತಿ. ಎಮ್ಮೇ ಕಡೇ ವರ್ಷ ಓದ್ತಿದ್ದ ನಾನು, ಕರ್ನಾಟಕ ಸಂಘದ ವಾರ್ಷಿಕೋತ್ಸವದ ಆ ದಿನಾ, ’ಕನ್ನಡ ಕವಿಗೋಳು’ ಅಂತ ಟೈಟಲ್ಲಿಟಕೊಂಡು ಬರೆದಿದ್ದ ಒಂದು ಲಾವಣಿ ಓದಿದ್ಯಾ. ನನ್ನ ಕರ್ಮಕ್ಕ ಆ ಲಾವಣಿಯ ಪ್ರತಿ ಈಗ ನನ್ನ ಹಂತೇಕ ಇಲ್ಲ. ಎಲ್ಲಿ ಕಳದ್ ಹೋತೋ ಗೊತ್ತೂ ಇಲ್ಲ. ಆದ್ರ, ಒಂದ್ ಸ್ಟಾಂಜಾ ಮಾತ್ರ ಯಾವಾಗ್ಲೂನೂ ನೆನಪೈತಿ. ಅದು ಹಿಂಗಿತ್ತು-
ಪಂಪ ಹುಟ್ಟಿದ ನಾಡಿನ್ಯಾಗ,
ಪಂಪ್ ಹೊಡಿಯೋ ಕವಿಗೋಳು ಹುಟ್ಟಿ,
ಇಂಪ ಹಾಳು ಮಾಡಿದರಪ್ಪ ಕನ್ನಡದ್ದ,
ಕಂಪs ಇಲ್ಲದ್ ಕವನಾ ಹೊಸದು,
ಸಂಪ ಗಳಿಕಿ ಮಾಡ್ಕೊಂಡು
ಗಂಪರ ಗುಂಪು ಮೆರದೈತೆಪ್ಪ ನಾಡೊಳಗೆ.

ನಾನು ನನ್ನ ಈ ’ಕನ್ನಡ ಕವಿಗೋಳು’ ಕವಿತಾ ಓದಾಕತ್ತಿದ್ ಕೂಡ್ಲೇ ಬೇಂದ್ರೆ ಅಜ್ಜ, ಮ್ಯಾಲ ಕೈ ಬೀಸ್ಕೊಂತ, ವಾಹವಾ, ವಾಹವಾ ಅನ್ನಾಕ ಸೂರೂ ಮಾಡಿದ್ಯಾಗ ನನಗ ಇನ್ನೂ ಒಳೇ ಹುರುಪು ಬಂದು, ಲಾವಣಿ ಹಾಡೂ ಶೈಲಿಯೊಳಗ ಹಾಡಾಕ್ಹತ್ತಿದ್ಯಾ. ಮ್ಯಾಲಿನ ಈ ಸ್ಟಾಂಜಾ ಹೇಳಿದ ಕೂಡ್ಲೇ, ಬೇಂದ್ರೆ ಅಜ್ಜಾ, ಎದ್ದ್ ನಿಂತವ್ರs , ಜೋರ್ ದನೀಲೇ ಬಪ್ಪರೆ ಮಗನ! ಖರೇ ಕವಿ ನೀನು ಅಂತ ಕೂಗಿದ್ದನ್ನ ನಾನು ಮರ್‍ಯಾಕ ಸಾಧ್ಯಾನ ಇಲ್ಲ. ತೆಳಗ ಬಂದವ್ನ ಅವರ ಕಾಲಿಗೆ ಬಾಗಿ ನಮಸ್ಕಾರಾ ಮಾಡಿ ಆಶೀರ್ವಾದಾ ಮಾಡಿಸ್ಕೊಂಡಿದ್ದು ನಿನ್ನೆ ಮೊನ್ನೆ ನಡದಂಗೈತಿ. ಅವ್ರು ತೆಲೀಮ್ಯಾಲ ಕೈ ಇಟ್ಟದ್ದು ಈಗೂನೂ ಇಟ್ಟಾರನೋ ಅನಸ್ತಿರತೈತಿ.
ಹಿಂತಾ ಬೇಂದ್ರೆಯವರನ್ನು ಖರೇವಂದ್ರೂ ನಮ್ಮ ಎದೀ ಒಳಗ, ಆಳಕ್ಕ ಬಿತ್ತಿದೆವರಂದ್ರ ನಮ್ಮ ಗುರುಗಳಾದ ಡಾ. ಗುರುಲಿಂಗ ಕಾಪಸೆ ಅವರು. ಅವರ ಅನುಭಾವದ ಬದುಕಿನ ಗುರುಗಳೇ ಆಗಿದ್ದ ಹಲಸಂಗಿ ಚೆನ್ನಮಲ್ಲಪ್ಪ ಅವರು (ಮಧುರಚೆನ್ನ) ಬೇಂದ್ರೆಯವರ ಖಾಸಾ ಸೋದರರಂಗಿದ್ದದ್ದು, ಅರವಿಂದರು ಮತ್ತ್ ಮಾತಾ ಅವರ ಪ್ರಭಾವಳಿಯೊಳಗ ಇಬ್ರೂ ಸಾಧಕರಾಗಿದ್ದು, ಗೆಳೆಯರ ಗುಂಪು ಕಟ್ಟಿದ್ದು, ಅನುಭವ ಮತ್ತು ಅನುಭಾವ-ಎರಡನ್ನೂ ಮಿದ್ದಿ ಕಾವ್ಯಾ ಬರದಿದ್ದು, ಬೇಂದ್ರೆ ಅಜ್ಜ ಮಾತಾಡಿದ್ರೂ ಕವನ ಅಕ್ಕಾವ ಅನ್ನೂದುನ್ನ ಉದಾಹರಣೆ ಸೈತ ಹೇಳಿ ತೋರ್‍ಸಿದ್ದು, ಅವರ ನಾದಲೀಲೆಯ ಕವನಗಳನ್ನ ನಾದಿ ನಾದಿ ನಮಗ ಉಣಿಸಿದ್ದು-ಹೀಂಗ್ ಕಾಪಸೆ ಸರ್ ಅವರು ಬೇಂದ್ರೆ ಅಜ್ಜನ್ನ ನಮ್ಮ ಮಿದುಳಿನೊಳಗ ಹಾಕಿಬಿಟ್ಟ ಮ್ಯಾಲಂತೂ, ಉಬ್ಬುಬ್ಬಿ ಅವರ ಕವನ, ನಾಟ್ಕಾ ಓದಾಕ್ಹತ್ತಿದ್ಯಾ. ಓದ್ಕೊಂತ್ ಹೋದಂಗ್ ಭಾಳ ದೊಡ್ಡ ಸಂಪತ್ತು ಗಳಿಸಿದ ಅನುಭವಾ ಆದಂಗಾಗಾಕ್ಹತ್ತಿತು. ಆ ಸಂಪತ್ತು ಇಡೇ ಜೀವನಕ್ಕ ಬೇಕಾಗುವಷ್ಟು ಬುತ್ತೀ ಗಂಟಾಗೇತಿ ಅಂತs ಹೇಳಬೇಕು.
ಈ ರೀತಿ ತೆಲೀಯೊಳಗ ಹೊಕ್ಕು, ಗುಂಯ್ಗುಡಾಕ್ಹತ್ತಿದ್ರು ಅಂಬಿಕಾತನಯದತ್ತ ಅಜ್ಜ. ಆದ್ರ, ನಾನು ಎಮ್ಮೇ ಮುಗಿಸಿ, ಹೊಟ್ಟೀ ಸಲುವಾಗಿ ಆಕಾಶವಾಣಿಯೊಳಗ ನೌಕ್ರಿಗೆ ಸೇರಿ ಗುಲ್ಬರ್ಗ, ಬೆಂಗ್ಳೂರು ಅಂತ ತಿರಗಿ, ಒಂದ್ ಸುತ್ತ ಹೊಡದು, ಹೊಡಮಳ್ಳಿ ಮತ್ತ ಧಾರ್‍ವಾಡಕ್ಕ ಬಂದಾಗ ಸಾಧನಕೇರಿಯೊಳಗ ಆ ಸಾಧಕ ಬೇಂದ್ರೆ ಅಜ್ಜ ಇರಲಿಲ್ಲ. ಆದ್ರ ಅಂವಾ ಹಾಡಿದ ’ಬಾ ಬಾರೋ, ಬಾರೋ ಬಾರೋ, ಬಾರೋ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ’ ಅನ್ನೂ ಹಾಡು ಮಾತ್ರ ಪ್ರೀತಿಲಿಂದ ಕರೀತಿತ್ತು. ಮತ್ತ ’ಶ್ರೀಮಾತಾ’ದ ಬಾಗಲಕ್ಕ ಹೋದ್ರ, ವಾಮನ ಬೇಂದ್ರೆಯವರು ಇದ್ರು. ಅವರು ಅಪ್ಪನ ಬಗ್ಗೆ ಎಲ್ಲಾ ಹೇಳಿ ಕಣ್ಣೀರು ತಂದದ್ದು ಕಳ್ಳು ಚುರುಕ್ ಅನಿಸ್ತು. ಬರೀರಿ ಸರ್ ಅಜ್ಜನ ಬಗ್ಗೆ ಒಂದ್ ಹಾಡು, ಅದನ್ನ ಕಂಪೋಜ್ ಮಾಡಿಸಿ, ’ಎದೆ ತುಂಬಿದ ಹಾಡು’ ಸರಣಿಯೊಳಗ ಹಾಡಿಸ್ತೇನಿ ಅಂದಾಗ, ಪಾಪ ಅವ್ರು ’ಓ ದತ್ತಾ, ನಮ್ಮತ್ತ ಕೊಡು ನಿನ್ನ ಚಿತ್ತಾ, ನಿಮ್ಮೊಳಗ ನಮ್ಮ ಸತ್ತಾ...’ಅನ್ನೂ ಅದ್ಭುತ ಹಾಡು ಬರದು ಕೊಟ್ರು. ಶ್ರೀಕಾಂತ ಕುಲಕರ್ಣಿ ಅವರಿಂದ ಕಂಪೋಜ್ ಮಾಡಿಸಿ, ರೇಖಾ ಕೋಟೇಮನೆ ಅವರಿಂದ ಅದನ್ನು ಹಾಡಿಸಿದ್ಯಾಗ ಮತ್ತ ಬೇಂದ್ರೆ ಅಜ್ಜ ಕಣ್ಮುಂದ್ ಬಂದಂಗಾಗಿತ್ತು.
ಇದೆಲ್ಲಾದ್ದರ ಕೂಡ ಬೇಂದ್ರೆ ಅಜ್ಜನ ಬಗ್ಗೆ ಧಾರ್‍ವಾಡದ ಮಂದೀಗೆ ಇದ್ದ ಪ್ರೀತಿ, ಅಷ್ಟs ಅವರ ಬಗ್ಗೆ ಕೆಲವರಿಗಿದ್ದ ಹೊಟ್ಟೇಕಿಚ್ಚು, ಅವರ ಕೂಡ ಎಲ್ಲೆಂದ್ರ ಅಲ್ಲಿ ಮಾಡ್ತಿದ್ದ ಜಗಳಗೋಳು, ಆ ಜಗಳದಾಗೂ ಇದ್ದಂತಾ ಕಕ್ಕುಲಾತಿ-ಇಂತಾವನ್ನೆಲ್ಲಾ ನಾನು ಬೇಕಾದಷ್ಟು ಕೇಳಿದ್ದ್ಯಾ, ನೋಡಿದ್ದ್ಯಾ. ಕರ್ನಾಟಕ ವಿದ್ಯಾವರ್ಧಕ ಸಂಘದೊಳಗ ನಡಿಯೂ ಕಾರ್ಯಕ್ರಮಗಳೊಳಗೆ ಅಜ್ಜ ಭಾಷಣಾ ಮಾಡಿದ್ದನ್ನ ಎಷ್ಟೋ ಸರ್‍ತೆ ಕೇಳಿದ್ದ್ಯಾ. ಇವೆಲ್ಲಾ ಕೂಡಿ, ಒಂದ್ನಮೂನಿ ಮೋಡಿ ಮಾಡಿ, ಮೈ-ಮನಸಿನ ತುಂಬ ಬೇಂದ್ರೆ ಅಜ್ಜನ್ನs ತುಂಬಿ ಬಿಟ್ವಿದ್ವು. ಅಜ್ಜನ ಆ ಅಪರೂಪದ ವ್ಯಕ್ತಿತ್ವ ಮತ್ತ್ ಗಾರುಡಿಗತನದಿಂದ ತಪ್ಪಸಿಕೊಳ್ಳೂದು ಯಾರಿಗೆ ಸಾಧ್ಯೈತಿ ಹೇಳ್ರಿ.
ಬೇಂದ್ರೆ ಅಜ್ಜನ ಬಗ್ಗೆ ಇಷ್ಟೆಲ್ಲಾ ಕತೀ ಹೇಳೂದಕ್ಕ ಬಾಳ ದೊಡ್ಡ ಕಾರಣ ಐತಿ. ಅಜ್ಜನ ಬಗ್ಗೆ, ಇರಲಾರದ ಪ್ರೀತಿ ಇಟಗೊಂಡಿದ್ದ ನನಗ, 1995ರ ಜೂನ್ ತಿಂಗಳದಾಗ ಬೆಂಗಳೂರಿಂದ, ಧಾರ್‍ವಾಡಕ್ಕ ವರ್ಗ ಆಗಿ ಬಂದಾಗ ಹೊಟ್ಟೀ ತುಂಬ ಖುಷಿ ಆಗಿತ್ತು. ಇದಕ್ಕ ಬಾಳ ದೊಡ್ಡ ಕಾರ್‍ಣ ಅಂದ್ರ, ನಾನು ಬಂದ ವರ್ಷದ ಮುಂದಿನ ವರ್ಷಾನs, ಅಂದ್ರ 1996 ರೊಳಗ ಬೇಂದ್ರೆ ಅಜ್ಜನ ಜನ್ಮಶತಮಾನೋತ್ಸವ ವರ್ಷ ಇದ್ದದ್ದು. ಇದನ್ನ ಸರಿಯಾಗಿ ಉಪಯೋಗ ಮಾಡ್ಕೊಂಡು ಆಕಾಶವಾಣಿ ಧಾರ್‍ವಾಡ ಕೇಂದ್ರದಿಂದ ಏನರ ಒಂದು ವಿಶೇಷ ಕಾರ್ಯಕ್ರಮಾ ಮಾಡ್ಬೇಕು ಅನ್ನೂ ಹುಳಾ ನನ್ನ ತೆಲ್ಯಾಗ ಹೊಕ್ಕಿತು. ವಿಶೇಷ್ರ ಅಂದ್ರ ಅದು ವಿಶೇಷನs ಆಗಿರ್‍ಬೇಕು, ಇಲ್ಲೀತನಕ ಯಾರೂ ಮಾಡಿರಲಾರದ ಕಾರ್ಯಕ್ರಮಾನs ಅದು ಆಗಿರಬೇಕು ಅನ್ನೂದೂ ನನ್ನ ದೊಡ್ಡ ಆಸೇ ಆಗಿತ್ತು. ಒಂದೆರ್‍ಡ ದಿನಾ ಅದರ ಬಗ್ಗೆನs ತೆಲೀ ಕೆಡಿಸ್ಕೊಂಡು ಯೋಚನಾ ಮಾಡಿದೆಂಗ್, ಖರೇವಂದ್ರೂ ಅಂಥಾ ಒಂದ್ ಹೊಸಾ ಕಾರ್ಯಕ್ರಮದ ಹೊಳಹು ಹೊಳದಿತ್ತು. ಅದರ ಪರಿಣಾಮನs, 27-1-1996ರ ಸಂಜೀ 4 ಗಂಟೇಕ್ಕ ಕರೆಕ್ಟಾಗಿ ಧಾರವಾಡದ ವಿದ್ಯಾವರ್ಧಕ ಸಂಘದೊಳಗ ನಡದ, ಇದು ಬರಿ ಬೆಳಗಲ್ಲೊ ಅಣ್ಣಾ..... ಅನ್ನೋ ಸಾಹಿತ್ಯಕ ವಿಚಾರ ಸಂಕಿರಣ.
ಅರೆ!, ಸಾಹಿತ್ಯದ ವಿಚಾರ ಸಂಕಿರಣ ಅಂದ್ರ, ಅದರಾಗೇನೈತೆಪಾ ವಿಶೇಷ? ಅಂತ ಯಾರಿಗಾದ್ರೂ ಸಂಶೇ ಬರೂದು ಸಹಜ. ಸಂಶೆ ಬರೂದೇನು? ನಮ್ಮ ಎಷ್ಟೋ ಪ್ರಸಾರಕುಲಬಾಂಧವ ಸಹೋದ್ಯೋಗಿ ಸ್ನೇಹಿತರು ನನ್ನ ಬಗ್ಗೆ ಇಟಕೊಂಡಿದ್ದ ಸ್ನೇಹದ ಕಿಚ್ಚಿನಿಂದ, ’ಇದ್ಯಾವ ಹೊಸಾ ಕಾರ್ಯಕ್ರಮಾ? ಏನ್ ಮಹಾ ಮಾಡಾಕ್ ಹೊಂಟಾನ ಇಂವಾ?’ ಅಂತ, ಅದು ನಡಿಯೂ ಮೊದ್ಲs ಅಲ್ಲಲ್ಲೆ ವ್ಯಂಗ್ಯ ಮಾಡಿ, ಮಾತಾಡಿದ್ದೂ ಕೇಳ್ಸಿತ್ತು ನನಗ. ಅದ್ಯಾವ್ದನ್ನೂ ಕಿಂವಿಗೆ ಹಾಕ್ಕೊಳ್ದನs ನಾನು ವಿದ್ಯಾವರ್ಧಕ ಸಂಘದ ಆ ಸಣ್ಣ ಸಭಾಭವನದ ವೇದಿಕೆಯ ಮ್ಯಾಲ ನಿಂತಿದ್ದ್ಯಾ.
ಹಂಗಾದ್ರ ಏನಪಾ ಈ ಕಾರ್ಯಕ್ರಮದ ವಿಶೇಷ ಅಂತೀರೇನು? ಇದು ಬೇಂದ್ರೆಯವರು ಹುಟ್ಟಿ ನೂರು ವರ್ಷ ಆದ ಸಂದರ್ಭದೊಳಗ, ಅಂದ್ರ ಅವರ ಜನ್ಮಶತಮಾನೋತ್ಸವ ವರ್ಷದ ನೆನಪಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಾ ಅನ್ನೂದು ಒಂದ್ನೇ ವಿಶೇಷ. ಅಜ್ಜನ ಜನ್ಮಶತಮಾನೋತ್ಸವದ ನೂರರ ನೆನಪನ್ನ ತರೂವಂಗ್ ನಾನು ಈ ಕಾರ್ಯಕ್ರಮಾನ ಬರೋಬ್ಬರಿ ’ಒಂದು ನೂರು ನಿಮಿಷಕ್ಕ’ ಸರಿಯಾಗಿ ಹೊಂದಿಸಿ ಪ್ಲ್ಯಾನ್ ಮಾಡಿದ್ದ್ಯಾ ಅನ್ನೂದು ಮತ್ತೊಂದು ವಿಶೇಷ. ಇನ್ನೊಂದು ವಿಶೇಷ ಅಂದ್ರ, ಇದನ್ನ ನೋಡೂದಕ್ಕ ಮತ್ತ ಕೇಳೂದಕ್ಕಂತ ಪಕ್ಕಾ ಆರಿಸಿ, ಆರಿಸಿ, ಮತ್ತ್ ಎಣಿಸಿ ನೂರಂದ್ರ ನೂರs ಜನ ಪ್ರೇಕ್ಷಕರನ್ನ ಸಭಾಭವನಕ್ಕ ಆಮಂತ್ರಿತರನ್ನಾಗಿ ಕರದಿದ್ದು. ಇವೆಲ್ಲಕ್ಕೂ ಕಳಸಾ ಇಡೂವಂಥಾ ಬಾಳ ದೊಡ್ಡ ವಿಶೇಷ ಅಂದ್ರ, ವಿದ್ಯಾವರ್ಧಕ ಸಂಘದ ಸಣ್ಣ ಸಭಾಭವನದೊಳಗ ನಡಿಯೋ ಈ ಲೈವ್ (ಜೀವಂತ) ಕಾರ್ಯಕ್ರಮವನ್ನ, ಅದು ನಡೀತಿರುವಂಗs ಅಲ್ಲಿಂದನs ನೇರ ಪ್ರಸಾರ ಮಾಡೂದಕ್ಕ ವ್ಯವಸ್ಥಾ ಮಾಡಿದ್ದು. ಬಹುಶಃ ಆಕಾಶವಾಣಿಯ ಯಾವ್ದs ಒಂದ್ ಸಾಹಿತ್ಯಕ ಕಾರ್ಯಕ್ರಮ, ಹೀಂಗ್ ನೂರು ನಿಮಿಷಗಳ ಅವಧಿಗೆ, ನೂರು ಶ್ರೋತೃಗಳ ಎದುರು ನಡೆದು, ಅದು ನಡೀತಾ ಇರೂವಂಗನs ನೇರ ಪ್ರಸಾರ ಆಗಿದ್ದು ಬ್ರಾಡ್‌ಕಾಸ್ಟಿಂಗಿನ ಇತಿಹಾಸದೊಳಗ ಮೊಟ್ಟ ಮೊದಲ್ನೇದ್ದು ಅಂತ ಹೇಳಿದ್ರ ಅದೇನೂ ಅಹಂಕಾರದ ಮಾತಲ್ಲ. ಖರೇ ಹೇಳಾಕ ಯಾರ್‍ದೇನ್ರೀ ಭಿಡೆ? ಇದನ್ನ ನಾ ಹೇಳೂದಲ್ಲ, ’This programme was first of its kind from AIR Dharwad, planned and presented by Dr. B.C. Sadar, Programme Executive’ (Quick feedback study by Audience Research Unit of AIR, Dharawad, Page-3) ಅಂತ ಆಕಾಶವಾಣಿಯ ಸಂಶೋಧನಾ ವರದೀನ ಹೇಳಿದ ಮ್ಯಾಲ ಇನ್ನೇನು?
ಇಷ್ಟೆಲ್ಲಾ ವಿಶೇಷಗಳಿದ್ದ ಈ ಕಾರ್ಯಕ್ರಮಾನ ನಾನು ನೂರಾ ಎಂಟು ರಿಸ್ಕ್ ಮೈಮ್ಯಾಲ ಹಾಕ್ಕೊಂಡು ಅರೇಂಜ್ ಮಾಡಿದ್ದ್ಯಾ ಅನ್ನೂದು ಮಾತ್ರ ಖರೆ. ಹಿಂತಾ ರಿಸ್ಕ್ ತೊಗೊಂಡು ಹೊಸಾ ಹೊಸಾ ಕಾರ್ಯಕ್ರಮಾ ಅರೇಂಜ್ ಮಾಡಿ ಪ್ರಸಾರಾ ಮಾಡೂದಂದ್ರ ನನಗ ಎಲ್ಲಿಲ್ಲದ ಖುಷಿ. ನಮ್ಮ ಎಂಜಿನೀಯರಿಂಗ್ ವಿಭಾಗದ ರೆಂಗರಾಮಾನುಜನ್ ಮತ್ತ್ ಜಯದಾಸನ್ ಅವರು ಈ ಕಾರ್ಯಕ್ರಮಕ್ಕಂತ ಮೊದ್ಲನs ಟೆಲಿಫೋನ್ ಲೈನ್‌ಗಳನ್ನ ಬುಕ್ ಮಾಡಿಕೊಂಡು ಚೊಲೋ ವ್ಯವಸ್ಥಾ ಮಾಡಿದ್ದನ್ನ ಇಲ್ಲೆ ಮನಸ್ನಿಂದ್ ನೆನಸ್ಕೊಂತೇನಿ. ಆಕಾಶವಾಣಿಯೊಳಗ ಕಾರ್ಯಕ್ರಮದವ್ರಿಗೆ ಮತ್ತ ಇಂಜನೀಯರ್ ವಿಭಾಗದವ್ರಿಗೆ ಹಿಂಗ್ ಹೊಂದಾಣಿಕಿ ಇದ್ರ ಆಕಾಶಕ್ಕೂ ಕೈ ಕೊಡಬೌದು. ನಾ ಹೋದಲ್ಲೆಲ್ಲಾ ಏನs ಹೊಸಾ ಕಾರ್ಯಕ್ರಮಾ ಮಾಡಿದ್ರೂ ಹಿಂಗ್ ಎಲಾರ್‍ನೂ ಕೂಡಸ್ಕೊಂಡ್ ದಂದಣ-ದತ್ತಣ ಮಾಡಿದ್ದು ನನಗ ಯಾವಾಗ್ಲೂ ನೆನಪಿಗೆ ಬರತೈತಿ.

’ಇದು ಬರಿ ಬೆಳಗಲ್ಲೊ ಅಣ್ಣಾ...’ ಕಾರ್ಯಕ್ರಮದೊಳಗ ಭಾಗವಹಿಸೂದಕ್ಕ ನಾನು ಐದು ಮಂದಿ ವಿದ್ವಾಂಸರನ್ನ ಕರೆದಿದ್ದ್ಯಾ. ಹಿರಿಯರಾದ ಶ್ರೀ ಚೆನ್ನವೀರ ಕಣವಿ ಅವರು ಇಡೇ ಕಾರ್ಯಕ್ರಮಕ್ಕ ಅಧ್ಯಕ್ಷತೆ ವಹಿಸಿದ್ರು. ಬೇಂದ್ರೆಯವರ ಬಗ್ಗೆ ಸಾಕಷ್ಟು ಅಭ್ಯಾಸಾ ಮಾಡಿ ತಿಳಕೊಂಡಿದ್ದ ಪ್ರೊ. ಕೀರ್ತಿನಾಥ ಕುರ್ತಕೋಟಿ, ಡಾ. ಗುರುಲಿಂಗ ಕಾಪಸೆ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್-ಅವರ್‍ನ ಬೇಂದ್ರೆ ಅವರ ಸಾಹಿತ್ಯ ಕುರಿತಂಗ ಬ್ಯಾರೆ ಬ್ಯಾರೆ ವಿಷಯಗಳ ಬಗ್ಗೆ ಮಾತಾಡಾಕ ಕೇಳಿಕೊಂಡಿದ್ದ್ಯಾ. ಅವರೆಲ್ಲಾರೂ ಈ ನೇರಪ್ರಸಾರದ ಮತ್ತ ಶತಮಾನೋತ್ಸವದ ಕಾರ್ಯಕ್ರಮದ ಮಹತ್ವ ತಿಳಕೊಂಡು, ಬಾಳ ಮುತುವರ್ಜಿಲಿಂದ ತಮ್ಮ ತಮ್ಮ ವಿಷಯಗಳ ಬಗ್ಗೆ ಚೊಲೋತಾಗಿ ಓದಿ, ಅರ್ಥಪೂರ್ಣವಾದ ಭಾಷಣಗಳನ್ನು ಸಿದ್ಧ ಮಾಡಿಕೊಂಡು ಬಂದಿದ್ರು. ಇನ್ನೂ ಗುಟ್ಟಿನ ವಿಷಯ ಅಂದ್ರ, ಇವರ್‍ನೆಲ್ಲಾರ್‍ನೂ ಎರಡು ದಿನಾ ಮೊದ್ಲನs ನಮ್ಮ ಸ್ಟುಡಿಯೋಕ್ಕ ಕರದು, ಎರಡೆರಡು ಸರ್ತೆ ಅವರ ಭಾಷಣಗಳನ್ನ ಓದಿಸಿ, ಪಕ್ಕಾ ರಿಹರ್ಸಲ್ ಮಾಡ್ಸಿದ್ದು. ಅದು ನನಗ ಈಗ್ಲೂ ನೆನಪಕ್ಕೈತಿ. ಬಾಳ ಖುಷಿ ಆಗೂ ವಿಷಯ ಅಂದ್ರ, ಈ ಹಿರ್‍ಯಾರೆಲ್ಲಾ ಒಂದೀಟೂ ಬ್ಯಾಸರಾ ಮಾಡಿಕೊಳ್ದ ಸ್ಟುಡಿಯೋ ರಿಹರ್ಸಲ್‌ಗೆ ಬಂದದ್ದು, ಮತ್ತ, ನೇರ ಪ್ರಸಾರದ ಉದ್ದೇಶಕ್ಕ ಬೇಕಾಗೂವಂಗ್, ನಾನು ಹೇಳಿದ ರೀತಿಯೊಳಗ ತಮ್ಮ ಭಾಷಣಗಳನ್ನ ಬದ್ಲೀ ಮಾಡ್ಕೊಂಡಿದ್ದು. ಅವರ ಸಹಕಾರಾನs ಈ ಕಾರ್ಯಕ್ರಮದ ಯಶಸ್ಸಿಗೆ ಕಾರ್‍ಣಾ ಅಂತ ಸಾರಿ ಹೇಳಬೌದು.
ದಿನಾಂಕ : 27-1-1996ರ ಸಂಜೀ 4 ಗಂಟೇಕ್ಕ ಬರೋಬ್ಬರಿ ’ಇದು ಬರಿ ಬೆಳಗಲ್ಲೊ ಅಣ್ಣಾ...’ ಕಾರ್ಯಕ್ರಮಾ ಸುರುವಾತು. ಅಂಬಿಕಾತನಯದತ್ತರ ವ್ಯಕ್ತಿತ್ವದ ಹಿರಿತನ ಮತ್ತ ಕವಿತ್ವದ ಶ್ರೇಷ್ಠತೆಯ ಬಗ್ಗೆ ಸಣ್ಣ ಮುನ್ನುಡಿ ರೂಪದೊಳಗ ತಿಳಿಸಿ, ಅವರ ಜನ್ಮಶತಮಾನೋತ್ಸವದ ನೆನಪಿಗೆ ಈ ನೂರ ಮಿನೀಟಿನ ನೇರಪ್ರಸಾರದ ಕಾರ್ಯಕ್ರಮವನ್ನ ಆಯೋಜನಾ ಮಾಡೇವಿ ಅಂತ ಪೂರ್ವಭಾವಿ ಮಾತು ಹೇಳಿ ನಾನು ನೇರ ಪ್ರಸಾರಾ ಸುರೂ ಮಾಡಿದ್ದ್ಯಾ. ಅದಾದ ಮ್ಯಾಲ, ಭಾವಗೀತೆಗಳನ್ನ ಹಾಡೂದ್ರಾಗ ದೊಡ್ಡ ಹೆಸರು ಮಾಡಿದ್ದ, ನಮ್ಮ ಕೇಂದ್ರದ ಉದ್ಘೋಷಕಿ ಶ್ರೀಮತಿ ಅನುರಾಧಾ ಧಾರೇಶ್ವರ ಅವರ್‍ನ, ಬೇಂದ್ರೆಯವರ ’ಬೆಳಗು’ ಕವಿತೆಯನ್ನು ಹಾಡಲು ವೇದಿಕೆಗೆ ಆಮಂತ್ರಿಸಿದ್ದೆ. ಈ ಭಾವಗೀತೆ ಇಡೇ ಕಾರ್ಯಕ್ರಮಕ್ಕ ಸ್ವಾಗತಾನೂ ಆಗಿತ್ತು, ದೀಪಾ ಹಚ್ಚಿದೆಂಗ ಬೆಳಕಿನ ಹಾಡೂ ಆಗಿತ್ತು.
ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ, ಬೆಳಕೂ ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ ಜಗವೆಲ್ಲಾ ತೋಯ್ದಾ.
. . . . . . . . . . . . . . . . .
ಅರಿಯದು ಅಳವು ತಿಳಿಯದು ಮನವು
ಕಾಣsದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದಾ
ಮೈದೋರೀತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ...’

ಬೆಳಗಿನ ಬೆಡಗನ್ನ ಅನುಭಾವದ ಅರ್ಥಕ್ಕ ಸಮೀಕರಣ ಮಾಡಿದ ಈ ಭಾವಗೀತೆ ಹಾಡಿದ್ಯಾಗ ಸಭಾಭವನದೊಳಗ ಒಂದ್ ಗೌರವದ ವಾತಾವರಣ ತಾನಾಗೇ ನಿರ್ಮಾಣ ಆಗಿಬಿಟ್ಟಿತ್ತು. ಅದು ಮುಗಿಯೂದರೊಳಗs, ಇಡೇ ಸಭಾಭವನದೊಳಗ ಮೌನ ಹಾಸಿ-ಹೊತಗೊಂಡು ಮಲಗಿತ್ತು. ಅಲ್ಲಿದ್ದವ್ರ ಕಿಂವಿಗಳೆಲ್ಲ ವೇದಿಕೆ ಕಡೆ ನೋಡಾಕ್ಹತ್ತಿದ್ವು. ಅಕ್ಕಡೆ, ರೇಡಿಯೋದೊಳಗ ವಿಚಾರ ಸಂಕಿರಣ ನೇರ ಪ್ರಸಾರ ಆಗಾಕ್ಹತ್ತಿತ್ತು. ಲಕ್ಷಾಂತರ ಜನಾ ತಮ್ಮ ಮನಿಗಳೊಳಗs ಕುಂತಗೊಂಡು ಅದನ್ನ ಕೇಳಾಕ್ಹತ್ತಿದ್ರು. ಕೇಂದ್ರ ನಿರ್ದೇಶಕರಾಗಿದ್ದ ಶ್ರೀ ವೆಂಕಟೇಶ್ ಗೋಡಖಿಂಡಿ ಅವರ ಸ್ವಾಗತದ ನಂತರ, ಮುಂದ್ ಸುರೂವಾದದ್ದs ವಿಚಾರ ಸಂಕಿರಣದ ಮುಖ್ಯ ಭಾಷಣಗಳು. ಬೇಂದ್ರೆಯವರ ಸಾಹಿತ್ಯದ ಸಾರವನ್ನ ಹೀರಿ ಕೊಟ್ಟಂಗಿದ್ದ ಈ ಎಲ್ಲಾ ಭಾಷಣಗಳು ಕೇಳವ್ರ ಮೈ ಮರೆಸಿದ್ದು ಒಂದು ಪವಾಡನ ಅನಬೇಕು. ‘Allmost, cent percent of listeners frankly accepted that the programme added new information to their knowledge 0n Bendre’s thoughts/literature’ (Quick feedback study by Audience Research Unit of AIR, Dharawad, Page-6) ಹೀಂಗ್, ಆಕಾಶವಾಣಿ ಶ್ರೋತೃ ಸಂಶೋಧನಾ ವಿಭಾಗದವ್ರು ರಿಪೋರ್ಟ್ ಕೊಟ್ಟಿದ್ದs ಇದಕ್ಕ ಸಾಕ್ಷಿ. ಈ ಭಾಷಣಗಳ ಪೂರ ಸಾರಾಂಶ ಮತ್ತ ಸಮೀಕ್ಷೆಯನ್ನ ಕೊಡೋದು ಇಲ್ಲಿ ಸಾಧ್ಯ ಇಲ್ಲ; ಅಗತ್ಯನೂ ಇಲ್ಲ. ಆದ್ರ ಈ ವಿದ್ವಾಂಸರು ಮಾತಾಡಿದ ವಿಷಯಗಳ ಒಂದ್ ಸಣ್ಣ ಪರಿಚಯ ಮಾತ್ರ ಮಾಡಬೌದು.
ಬೇಂದ್ರೆ ಹಾಗೂ ಗೆಳೆಯರ ಗುಂಪು - ಪ್ರೊ. ಕೀರ್ತಿನಾಥ ಕುರ್ತಕೋಟಿ
ಬೇಂದ್ರೆ ಕಾವ್ಯದ ಮುಖ್ಯ ನೆಲೆಗಳು ಮತ್ತು ದರ್ಶನ - ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್
ಬೇಂದ್ರೆ ಕಾವ್ಯದಲ್ಲಿ ಒಲವು - ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ.
ಬೇಂದ್ರೆಯವರ ಕಾವ್ಯೇತರ ಸಾಹಿತ್ಯ - ಡಾ. ಗುರುಲಿಂಗ ಕಾಪಸೆ.
ಬೇಂದ್ರೆ ಕಾವ್ಯಭಾಷೆ ಮತ್ತು ಪ್ರತಿಮಾ ವಿಧಾನ (ಮತ್ತು ಸರ್ವಾಧ್ಯಕ್ಷತೆ) - ಪ್ರೊ. ಚನ್ನವೀರ ಕಣವಿ.

ವಿಚಾರ ಸಂಕಿರಣದ ಎಲ್ಲಾ ಭಾಷಣಗಳ ಸಮೀಕ್ಷೆ ಮಾಡದಿದ್ರೂ, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ನಮ್ಮೆಲ್ಲರ ಪ್ರೀತಿಯ ಚೆಂಬೆಳಕಿನ ಕವಿ ಶ್ರೀ ಚನ್ನವೀರ ಕಣವಿ ಅವರು ಕಾರ್ಯಕ್ರಮ ಅಧ್ಯಕ್ಷ ಸ್ಥಾನದಿಂದ ಹೇಳಿದ ಒಂದೆರಡು ಮಾತುಗಳ್ನ ಇಲ್ಲಿ ದಾಖಲಿಸಿದ್ರ ತಪ್ಪಾಗಕಿಲ್ಲ ಅನಸ್ತೈತಿ. ಅವರು ಹೇಳಿದ್ದು ಹಿಂಗ್- ’ಸಹೃದಯರೇ ಕೊನೆಯದಾಗಿ ಈ ವಿಚಾರಸಂಕಿರಣದ ಅಧ್ಯಕ್ಷನಾಗಿ ಎರಡು ಮಾತು ಹೇಳುವುದು ನನ್ನ ಕರ್ತವ್ಯವೆಂದು ನಾನು ಭಾವಿಸಿದ್ದೇನೆ. ವರಕವಿ ಡಾ. ದ. ರಾ. ಬೇಂದ್ರೆ ಜನ್ಮಶತಮಾನೋತ್ಸವ ವರ್ಷಾಚರಣೆಯ ಮುಕ್ತಾಯ ಘಟ್ಟದಲ್ಲಿ ಬೇಂದ್ರೆ ಕಾವ್ಯ ಮತ್ತು ಸಾಹಿತ್ಯದ ಕೆಲವು ಮಹತ್ವದ ಅಂಶಗಳನ್ನು ಕುರಿತು ’ಇದು ಬರಿ ಬೆಳಗಲ್ಲೋ ಅಣ್ಣಾ’ ಅನ್ನುವ ವಿಚಾರಸಂಕಿರಣವನ್ನು ಯೋಜಿಸಿ, ಆಮಂತ್ರಿಸಿದ ಶ್ರೋತೃಗಳ ಸಮ್ಮುಖದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸಿದ್ದಲ್ಲದೆ, ಬಹುಶಃ ಮೊಟ್ಟಮೊದಲ ಬಾರಿಗೆ ಅದರ ನೇರಪ್ರಸಾರವನ್ನು ಆಯೋಜಿಸಿ, ಆಸಕ್ತಿಯುಳ್ಳ ಅಸಂಖ್ಯ ಕೇಳುಗರಿಗೂ ಅದು ತಲುಪುವಂತೆ ವ್ಯವಸ್ಥೆ ಮಾಡಿದ ಧಾರವಾಡ ಆಕಾಶವಾಣಿ ಕೇಂದ್ರಕ್ಕೆ ನಮ್ಮೆಲ್ಲರ ಅಭಿನಂದನೆಗಳು ಸಲ್ಲಬೇಕು. ಕೇಂದ್ರದ ನಿರ್ದೇಶಕರಾದ ಶ್ರೀ ವೆಂಕಟೇಶ್ ಗೋಡ್ಖಿಂಡಿ ಅವರಿಗೂ, ಈ ವಿಚಾರಸಂಕಿರಣದ ರೂಪರೇಷೆಗಳನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿ, ಪ್ರಸಾರಕ್ಕೆ ಅಣಿಗೊಳಿಸಿದ, ಕಾರ್ಯಕ್ರಮ ನಿರ್ವಾಹಕರಾದ ಡಾ. ಬಸವರಾಜ ಸಾದರ ಅವರಿಗೂ ಆಕಾಶವಾಣಿಯ ಇತರ ಎಲ್ಲಾ ಸಿಬ್ಬಂದಿಯವರಿಗೂ ವೈಯಕ್ತಿಕವಾಗಿ ಹಾಗೂ ಎಲ್ಲ ಶ್ರೋತೃವೃಂದದ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.’

ಇನ್ನೊಂದ್ ಮಾತು, ಭಾಷಣಕಾರರು ಮಾಡಿದ ಈ ಎಲ್ಲಾ ಭಾಷಣಗಳು ಬೇಂದ್ರೆ ಅಜ್ಜನ ಸಾಹಿತ್ಯದ ಬಗ್ಗೆ ಇದ್ದವಾದ್ರೂ, ಆ ವಿಷಯಗಳ ಕೂಡ ಅಜ್ಜನ ವ್ಯಕ್ತಿತ್ವದ ದರ್ಶನಾ ಸೈತ ಅಲ್ಲಿ ಆಗಿದ್ದು ಬಾಳ ಮಹತ್ವದ ಅಂಶ. ಖುಷೀಲೇ ಹೇಳ್ಬೇಕಾದ ಒಂದ್ ಮಾತಂದ್ರ, ಈ ಇಡೇ ಕಾರ್ಯಕ್ರಮದ ಪ್ರತಿ ಸೆಕೆಂಡ್, ಸೆಕೆಂಡಿನ ಮಾತುಗಳೆಲ್ಲಾ ಪೂರ ಧ್ವನಿಮುದ್ರಣ ಆಗಿ ಆಕಾಶವಾಣಿ ಧಾರ್‍ವಾಡ ಕೇಂದ್ರದ ಧ್ವನಿಭಂಡಾರದೊಳಗ ಸುರಕ್ಷಿತ ಆಗಿ ಉಳದಿದ್ದು. ಮುಂದ ಯಾವ ಕಾಲದ ಜನರಿಗಾದ್ರೂ ಇಂಥಾ ಧ್ವನಿಮುದ್ರಣ ಬಂಗಾರದ ಬೆಲೀಗಿಂತ ಹೆಚ್ಚಿನ ಕಿಮ್ಮತ್ತಿಂದು ಆಗೂದು ಗ್ಯಾರಂಟಿ. ಬೇಂದ್ರೆ ಅಜ್ಜನ ದ್ವಿ-ತ್ರಿ-ಜನ್ಮಶತಮಾನಕ್ಕೂ ಅಥವಾ ಮುಂದಿನ ಯಾವ ವ್ಯಾಳೇಕ್ಕಾದ್ರೂ ಈ ಕಾರ್ಯಕ್ರಮಾ ನೂರರ ನೆನಪಾಗಿ ಸಿಕ್ರ, ಅದಕ್ಕಿಂತ ಹೆಚ್ಚಿನ ಲಾಭ ಇನ್ನೇನೈತಿ? ಅಥವಾ ಧಾರ್‍ವಾಡ ಆಕಾಶವಾಣಿಯ ಈಗಿನ ಅಧಿಕಾರಿಗಳು, ದೊಡ್ಡ ಮನಸ ಮಾಡಿ ಯಾವಾಗರs ಈ ಕಾರ್ಯಕ್ರಮವನ್ನ ಮರುಪ್ರಸಾರ ಮಾಡಿದ್ರ, ಅದು ಈಗಿನ ಕೇಳುಗರಿಗೂ ದೊಡ್ಡ ಲಾಭ ಆಗೂದ್ರಾಗ ಸಂದೇಹನ ಇಲ್ಲ. ಆ ದೊಡ್ಡ ಮನಸು ಅವ್ರಿಗೆ ಬರ್‍ಲಿ ಅಂತ ಅಂಬಿಕಾತನಯರನ್ನ ನೆನಿಸ್ಕೊಂತs ಹಾರೈಸ್ತೇನಿ.

ಬರೋಬ್ಬರಿ 5 ಗಂಟೆ 40 ನಿಮಿಷಕ್ಕ, ಅಂದ್ರ ಸರಿಯಾಗಿ ಒಂದ್ ನೂರು ನಿಮಿಷಕ್ಕ, ಗೆರೀ ಕೊರದಂಗ ’ಇದು ಬರಿ ಬೆಳಗಲ್ಲೊ ಅಣಾ...’ ವಿಚಾರ ಸಂಕಿರಣದ ನೇರಪ್ರಸಾರ ಮುದಗು, ’ನಮ್ಮ ಕೇಳುಗರನ್ನು ಈಗ ಆಕಾಶವಾಣಿ ಧಾರವಾಡ ಕೇಂದ್ರದ ಸ್ಟುಡಿಯೋಗೆ ಕರೆದೊಯ್ಯುತ್ತೇವೆ’ ಅಂತ ಅನೌನಸ್ಮೆಂಟ್ ಬಂದಮ್ಯಾಲ, ಅಲ್ಲೀ ತನಕ ಗಟ್ಟ್ಯಾಗಿ ಹಿಡಿದಿದ್ದ ನನ್ನ ಉಸರೂ ಒಮ್ಮೀಕಿಲೇ ’ಉಫ್’ ಅಂತ ಹೊರಗ ಬಂದಿತ್ತು. ಎಲ್ಲ್ಯೂ ಒಂದು ಸೆಕೆಂಡಿನ ಕಾರ್ಯಕ್ರಮಾನೂ ಯಾವ ತೊಂದ್ರಿ ಇಲ್ದಂಗ ಸುಸೂತ್ರ ನೇರ ಪ್ರಸಾರಾಗಿದ್ದು ನನಗ ಹೊಟ್ಟೀ ತುಂಬಿ ಬಂದಂಗಾಗಿತ್ತು. ಬೇಂದ್ರೆ ಅಜ್ಜನ ಜನ್ಮಶತಮಾನೋತ್ಸವಾನ ಆಕಾಶವಾಣೀಲಿಂದ ಹೀಂಗ್ ಏನರ ಒಂದು ಹೊಸಾ ಕಾರ್ಯಕ್ರಮಾ ಮಾಡಿ ಆಚರಿಸ್ಬೇಕು ಅನ್ನೂ ನನ್ನ ಕನಸು ನನಸಾಗಿದ್ದು ಮನಸಿಗೆ ಬಾಳ ಸಂತೋಷ ಕೊಟ್ಟಿತ್ತು. ಈ ಕಾರ್ಯಕ್ರಮಾ ಮುಗದಾಗ ಒಂದ್ನಮೂನಿ ರೋಮಾಂಚನ ಆದಂಗಾಗಿ, ಹಿಂದ 1980ರೊಳಗ ಬೇಂದ್ರೆ ಅಜ್ಜ, ನಮ್ಮ ಕನ್ನಡ ಡಿಪಾರ್ಟಮೆಂಟಿನೊಳಗ ನನ್ನ ತೆಲೀಮ್ಯಾಲ ಕೈ ಇಟ್ಟು ಆಶೀರ್ವಾದಾ ಮಾಡಿದ್ದು ನೆನಪಾಗಿ ಕಣ್ತಂಬ ನೀರು ಹನದಿದ್ವು. ಆ ಆಶೀರ್ವಾದ ಇನ್ನೂ ಜೀವಂತ ಐತ್ಯಂತ ಈಗ ಸೈತ ನನಗ ಅನಸ್ತಿರತೈತಿ. ಅದರ ಕೂಡ, Tha ‘Vichara Snkirana ‘ may be considered as ‘Lively’ and it sustained the interest of 71% listeners for about 100 minutes.’ ((Quick feedback study by Audience Research Unit of AIR, Dharawad, Page-11) -ಅಂತ ಪರೀಕ್ಷಾದ ರಿಸಲ್ಟೂ ಬಂದಿದ್ದು ಈ ಕಾರ್ಯಕ್ರಮಾ ಮಾಡಿದ್ದಕ್ಕೂ ಸಾರ್ಥಕ ಆತು ಅಂತ ಅನಿಸ್ತು.

ಈ ಕೆಲಸದಾಗ ನನಗೆ ಪೂರ್ತಿ ನೆರವು ನೀಡಿದವ್ರು ಅಂದ್ರ ಕೇಂದ್ರದ ಸಹಾಯಕ ನಿರ್ದೇಶಕರಾಗಿದ್ದ ಶ್ರೀ ಎಸ್. ಎಸ್. ಹಿರೇಮಠ ಅವರು. ಹಂಗs ಸಹಕಾರಾ ನೀಡಿದವ್ರು ಗೆಳೆಯರಾದ ಶ್ರೀ ದಿವಾಕರ ಹೆಗಡೆ ಮತ್ತ ಶ್ರೀ ಮೃತ್ಯುಂಜಯ ಕೆಂಡದಮಠ ಅವರು. ತಾಂತ್ರಿಕ ಸಹಾಯಕ್ಕ ನಿಂತವು ಶ್ರೀ ಬಸವರಾಜ ಅರಕೇರಿ, ಶ್ರೀ ಸುರೇಶ್ ಬೆಟಗೇರಿ ಮತ್ತ ಶ್ರೀ ವಿಠ್ಠಲ್ ಎರಗಟ್ಟಿ ಅವರು. ಇವರ ಕೂಡ, ಹಿಂದ-ಮುಂದ ಸಹಾಯ ಮಾಡಿದೆವ್ರು ಬಾಳ ಮಂದಿ ಅದಾರ. ’ಇದು ಬರಿ ಬೆಳಗಲ್ಲೊ ಅಣ್ಣಾ...’ ಕಾರ್ಯಕ್ರಮ ನೆನಪಾದಾಗೊಮ್ಮೆ ಈ ಎಲ್ಲಾ ಸ್ನೇಹತರೂ ಕಣ್ಮುಂದ ಬರತಾರ.

ಮರೀಲಾರ್ದ ಹೇಳ್ಬೇಕಾದ ಇನ್ನೊಂದು ವಿಷಯ ಐತಿ. ನೇರಪ್ರಸಾರಕ್ಕ ಪ್ಲ್ಯಾನ್ ಆಗಿದ್ದ ಈ ಕಾರ್ಯಕ್ರಮ ಪ್ರಸಾರ ಆಗ್ತಿದಂಗನs, ಅಕಸ್ಮಾತ್ ಕರೆಂಟ್ ಹೋಗಿ, ಲೈನ್ ಕಟ್ ಆಗಿ ಅಥವಾ ಇನ್ನೂ ಏನಕೇನರ ತೊಂದ್ರಿ ಆಗಿ, ನಡವೆ ನಿಂತ್ರ ಏನ್ ಮಾಡೂದು? ಅಂತ ಯೋಚನಾ ಮಾಡಿ, ನಾನು ಈ ಇಡೇ ಕಾರ್ಯಕ್ರಮಾನ ಮೊದ್ಲ ಪೂರ್ತಿ ರೆಕಾರ್ಡ್ ಮಾಡಿ ಇಟಗೊಂಡಿದ್ದ್ಯಾ. ಎಷ್ಟ್ ಎಚ್ಚರಿಕೆ ತೊಗೊಂಡಿದ್ದ್ಯಾ ಅಂದ್ರ, ನಮ್ಮ ಅನೌನ್ಸರ್ ಲತಾ ಹೇಗಡೆ ಅವರಿಗೆ ಮೊದ್ಲs ಹೇಳಿ, ಸ್ಟುಡಿಯೋ ಅನೌನ್ಸ್‌ಮೆಂಟ್ ಮುಗದ್ ಕೂಡ್ಲೇ ರೆಕಾರ್ಡ್ ಆಗಿದ್ದ ಕಾರ್ಯಕ್ರಮಾನ ಪ್ಲೇ ಮಾಡಾಕನೂ ಹೇಳಿ ಬಂದಿದ್ದ್ಯಾ.. ಒಂದ್ ವ್ಯಾಳೆ ವಿದ್ಯಾವರ್ಧಕ ಸಂಘದಿಂದ ಪ್ರಸಾರ ಆಗೂ ಕಾರ್ಯಕ್ರಮಾ ನಡುವೇ ಏನರ ನಿಂತ್ರ, ಸ್ಟುಡಿಯೋದಿಂದ ಹೋಗ್ತಿದ್ದ ಕಾರ್ಯಕ್ರಮಾ ಏರ್ ಮ್ಯಾಲ ಹೋಗೂವಂಗ ವ್ಯವಸ್ಥಾ ಮಾಡಿಟಗೊಂಡಿದ್ದು ಈಗ್ಲೂ ನೆನಪಕ್ಕೈತಿ. ಆದ್ರ, ಹಂತಾದ್ದೇನೂ ಆಗ್ಲಿಲ್ಲನ್ನೂದು ಖುಷಿ ಮಾತು.

’ಇದು ಬರಿ ಬೆಳಗಲ್ಲೊ ಅಣ್ಣಾ...’ ಕಾರ್ಯಕ್ರಮದ ಬಗ್ಗೆ ಮರ್‍ನೇ ದಿನಾ ಎಲ್ಲಾ ಪೇಪರ್‌ಗೋಳು ಮುಖಪುಟದಾಗ ಚಿತ್ರದ ಕೂಡ ದೊಡ್ಡ ದೊಡ್ಡ ವರದಿ ಪ್ರಕಟ ಮಾಡಿದ್ವು. ಒಂದ್ ಪತ್ರಿಕೆ, ’ಇದು ಬರಿ ಆಕಾಶವಾಣಿಯಲ್ಲೊ ಅಣ್ಣಾ.....’ ಅಂತ ಬರದ್ರ, ಮತ್ತೊಂದು ಪತ್ರಿಕೆ, ’ಧಾರವಾಡ ಆಕಾಶವಾಣಿಯಿಂದ ಬೇಂದ್ರೆ ನಭೋವಾಣಿ....’ ಅಂತ ಅರ್ಥಪೂರ್ಣವಾದ ಹೆಡ್‌ಲೈನ್ ಕೊಟ್ಟ ಬರೀತು. ಈ ಕಾರ್ಯಕ್ರಮ ಪ್ರಸಾರದ ಸರ್ವೇ ಮಾಡಿದ ಆಕಾಶವಾಣಿಯ ಶ್ರೋತೃ ಸಂಶೋಧನಾ ವಿಭಾಗದವ್ರು, ‘Allmost all the listeners unanimously said that the ‘Vichar Sankirana’was topical and timely. Most of them appreciated AIR, Dharawad for arranging a ‘Vichara Sankirana’ in honour of Dr. Da. Ra. Bendre on the occasion of his Birth centenary’ (Quick feedback study by Audience Research Unit of AIR, Dharawad, Page-7)- ಅಂತ ಕೊಟ್ಟಂಥಾ ಸರ್ಟೀಪಿಕೇಟು ಸಣ್ಣದಲ್ಲ. ಇವನ್ನೆಲ್ಲಾ ಮೀರ್‍ಸೂವಂಗ್, ಆವಾಗ ’ಪ್ರಜಾವಾಣಿ’ಗೆ ಪ್ರತಿ ವಾರಕ್ಕೊಮ್ಮೆ ’ಚಹಾದ ಜೋಡಿ ಚೂಡಾದಂಗ.....’ ಅನ್ನೂ ಅಂಕಣಾ ಬರೀತಿದ್ದ ಪ್ರೊ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ತಮ್ಮ ಮುಂದಿನ ವಾರದ ಅಂಕಣದೊಳಗ ವಿವರವಾದ ಮತ್ತ ವಿಮರ್ಶಾತ್ಮಕವಾದ ವರದಿ ಬರದ್ರು. ಅದರೊಳಗಿನ ಮಾತು ಈಗ್ಲೂ ಮತ್ತ ಮತ್ತ ಮೆಲುಕು ಹಾಕೂವಂಗದಾವು.

’ಇದು ಬರಿ ಬೆಳಗಲ್ಲೊ ಅಣ್ಣಾ...’

ಆಕಾಶವಾಣಿ ಭಾಳ ಜನರ ದೃಷ್ಟಿಯೊಳಗ, ಕೇವಲ ಕೆಲವರ ಅವಕಾಶವಾಣಿ ಆಗಿರೂದು ಏನ ಸುಳ್ಳಲ್ಲ. ಆದರೂ ಒಮ್ಮೊಮ್ಮೆ ಅಲ್ಲೀನೂ ಹೊಸಾ ಗಾಳಿ ಬೀಸತೈತಿ. ಹೊಸಾ ಹಾಡು ಮೂಡತಾವು. ಅಂಥಾ ಹೊತ್ತಿನ್ಯಾಗ ಸರಕಾರೀ ಭೋಂಗಾವನ್ನ ಜನರುಪಕಾರೀ ಗಂಗಾ-ತುಂಗಾವನ್ನಾಗಿಸುವ ಪ್ರಯತ್ನ ನಡೀತಾವು. ನಿಲಯದ ನಿಲವು ಬದಲಾಗಿ ಗೌರವ ಹೆಚ್ಚತೈತಿ. ಬಾನ್ ಉಲಿಯ ಬೆಲೆ ಏರತೈತಿ. ಇಂಥ ಒಂದು ಪ್ರಯತ್ನವನ್ನ ಧಾರವಾಡ ಆಕಾಶವಾಣಿಯವರು ಮಾಡಿದರು. ’ಇದು ಬರಿ ಬೆಳಗಲ್ಲೋ ಅಣ್ಣಾ’ ಅನ್ನುವ ಹೆಸರ್‍ಲೆ ಬೇಂದ್ರೆ ಬಗ್ಗೆ ಕರ್ನಾಟಕ ವಿದ್ಯಾವರ್ಧಕ ಸಂಘದಾಗ ವಿಚಾರಗೋಷ್ಠಿ ಆಯೋಜಿಸಿದ್ದರು. ನೂರು ತುಂಬಿದ ಕವಿಗೆ ನೂರು ನಿಮಿಷದ ನೇರ, ಅಂದರ ಲೈವ್, ಮೀನ್ಸ್, ಜೀವಂತ ಅರ್ಥಾತ್, ಜೀಂವ ಇದ್ದಂಥ ಶ್ರದ್ಧಾ-ಕಾರ್‍ಯಕ್ರಮ ಪ್ರಸಾರ ಮಾಡಿ ಅರ್ಪಿಸಿದರು.

ನಾವು ಸಣ್ಣವರಿದ್ದಾಗ ಬಾನುಲಿಯೊಳಗ ಈಗಿನೆಂಗ ಮೊದಲು ರೆಕಾರ್ಡ್ ಮಾಡಿಕೊಳ್ಳುವ ವ್ಯವಸ್ಥೆ ಇರಲಿಲ್ಲ. ಆಗ ಕಾರ್‍ಯಕ್ರಮದವರು ತಮ್ಮ ತಮ್ಮ ಟೈಮಿಗೆ ಓಡಿ ಹೋಗೂದುನ್ನ ನೋಡ್ತಿದ್ದಿವಿ. ಧ್ವನಿಮುದ್ರಣದ ಅನುಕೂಲ ಬಂದ ಮ್ಯಾಲ ಈಗ್ಯಾರಿಗೂ ಅಂಥಾ ಧಗೀ ಉಳದಿಲ್ಲ. ಮಾತಾಡಿದವನ ದನಿಯ ಕೊರಳಿಗೆ ಬೇಕಾದಲ್ಲಿ ಚೂರಿ-ಕತ್ತರಿ ಹಾಕುವ ಸೌಲಭ್ಯ ಸಿಕ್ಕಿದ್ದರಿಂದ ಈಗ ಅಧಿಕಾರಿಗಳ ದಿಗರ ಹೆಚ್ಚಾಗಿಬಿಟ್ಟೈತಿ. ಇಂಥಾ ಕಾಲದಾಗ ಬೇಂದ್ರೆ ಬಗ್ಗೆ ಐದ್ ಮಂದಿನ್ನ ಹಿಡದು, ಅವರನ್ನ ಹದಿನಾಲ್ಕು ಅಂದರ ಹದಿನಾಲ್ಕ್‌ಅ ಮಿನಿಟು ಮಾತಾಡೂ ಹಂಗ ಮಾಡಿದ್ದು, ತಾಂತ್ರಿಕವಾದ 333 ಸಮಸ್ಯೆಗಳನ್ನ ನಿವಾರಿಸಿಕೊಂಡಿದ್ದು ಸಾಮಾನ್ಯಲ್ಲ ತಗೀರಿ. ನನಗ ತಿಳಿದಂಗ ಒಬ್ಬ ಕವಿಯ ಬಗ್ಗೆ ಆಸಕ್ತಿಯಿಂದ ತಾವಾಗಿ ಬಂದ, ಇಂಥ ಶ್ರೋತೃಗಳ ಮುಂದ ಇಂಥಾ ವಿಚಾರಗೋಷ್ಠಿಯನ್ನ ಹಿಂಗ ನೇರಪ್ರಸಾರಗೊಳಿಸಿದ್ದು ಭಾರತದ ಆಕಾಶವಾಣಿಯ ಚರಿತ್ರೆಯೊಳಗ ಮೊಲನೇ ಸರ್‍ತೆ ಇರಬೇಕು.

ಗೆಳೆಯರ ಗುಂಪಿನ ಬಗ್ಗೆ ಕುರ್‍ತಕೋಟಿ, ಕಾವ್ಯದ ಮೂಲ ನೆಲೆಗಳು ಮತ್ತು ದರ್ಶನದ ಬಗ್ಗೆ ಮಲ್ಲೇಪುರಂ ಜಿ. ವೆಂಕಟೇಶ್ ಭಾಷಣ ಓದಿದರು. ಬೇಂದ್ರೆ ಕಾವ್ಯದಲ್ಲಿ ಒಲವು ಅಂತ ನಾ ಮಾತಾಡಿದೆ. ಕಾವ್ಯೇತರ ಸಾಹಿತ್ಯದ ಬಗ್ಗೆ ಡಾ. ಕಾಪಸೆ ಬರಕೊಂಡು ಬಂದಿದ್ದರು. ಕಾವ್ಯಭಾಷೆ ಮತ್ತು ಪ್ರತಿಮಾ ಯೋಜನೆ ಬಗ್ಗೆ ವಿವರಿಸಿದ ಕಣವಿಯವರು ಪೂರ್ವಲಿಖಿತ ಅಧ್ಯಕ್ಷೀಯ ಮಾತನ್ನೂ ಹೇಳಿದರು. ಇದೆಲ್ಲ ಕೇಳಿದ ನಾಡಿನ ಮಂದಿ ಧಾರವಾಡ ಆಕಾಶವಾಣಿಯವರ ಈ ಸಾಹಸ ಮೆಚ್ಚಿರಲೇಬೇಕು. ಇಂಥಾದ್ದ ಮಾಡಾಕ ಮನಸ್ಸು ಬೇಕು, ಸಾಹಸ ಬೇಕು, ಸಹಕಾರ ಬೇಕು. ಅದಕ್ಕೂ ಮುಖ್ಯ ಒಂದು ಕಲ್ಪನಾ ಬೇಕು. ಇಂಥಾ ಕಲ್ಪನಾ ಮಾಡಿ ದುಡಿದ ವ್ಯಕ್ತಿ ಡಾ. ಬಸವರಾಜ ಸಾದರ ಅಂತ ತಿಳಿದಾಗ ಖಶಿ ಆಯ್ತು.

‘ತಲೆ ತುಂಬ ಹೊಸ ಸಾಹಸದ ವಾಸನೆ’

ಕರ್ನಾಟಕ ಕಾಲೇಜಿನಿಂದ ಬಿ. ಎ. ಆದ ಮ್ಯಾಲ, ಕರ್ನಾಟಕ ವಿಶ್ವವಿದ್ಯಾಲಯದ ಕನಡಾದವರಿಗೆ ಕನ್ನಡದ ’ಶಿಸ್ತು’ ಕಲಿಸಿದ ಮೂರ್‍ನಾಲ್ಕು ಮಂದಿ ಪಳೆಂಕರ ಗುಂಪಿನ ಸದಸ್ಯನಾಗಿದ್ದ ಬಸವರಾಜ ಸಾದರ (20-7-1955) ಒಳ್ಳೆಯದನ್ನು ನೀಡುವ, ನೋಡುವ, ಎಲ್ಲರ ಎಲ್ಲ ಪ್ರಯತ್ನಗಳ ಸೋದರ. ಕಲಘಟಗಿ ತಾಲೂಕಿನ ಹುಲ್ಲಂಬಿಯ ಬಸವರಾಜ ಸಾದರ ಡಾಕ್ಟರೇಟ್ ಮಾಡಿಕೊಂಡದ್ದು ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳ’ ಬಗ್ಗೆ. ಮೊದಲಿಂದ ಎಲ್ಲಾ ಫರ್ಸ್ಟ್ ಕ್ಲಾಸು, ರ್‍ಯಾಂಕು ಇದ್ದಿದ್ದರಿಂದ ಎಲ್ಲ್ಯಾರ ’ಪ್ರೊ’ ಆಗಿ ಹೊಟ್ಟೀ ತುಂಬಿಕೊಳ್ಳಬಹುದಿತ್ತು. ಆದರೆ 1984 ರಾಗ ಆಕಾಶವಾಣಿಯ ನಿರ್ವಾಹಕ ಹುದ್ದೆಗೆ ಆಯ್ಕೆಯಾಗಿದ್ದು ಅವರ ವ್ಯಕ್ತಿತ್ವಕ್ಕ ಹೊಸ ಮೆರುಗು ಸಿಕ್ಕಿತು. ಗುಲ್ಬರ್ಗಾ, ಬೆಂಗಳೂರುಗಳಲ್ಲಿ ದುಡಿದು ಈಗ ಧಾರವಾಡಕ್ಕ ಬಂದಿರುವ ಸಾದರರ ತಲೆ ತುಂಬ ಹೊಸ ಸಾಹಸದ ವಾಸನೆ, ಹೊಸ ಯೋಜನೆ. ಪ್ರಸಾರ, ಪ್ರಕಾಶನ ವ್ಯವಸ್ಥೆ ಅಂತ ಬರೇ ಕಲ್ಪಿಸೂದಲ್ಲ, ದೆವ್ವಿನಂಗ ಬೆನ್ನತ್ತಿ ದುಡಿಯೂದಕ್ಕೂ ಭಾಳ ಧೈರ್‍ಯ ಬೇಕಾಕ್ಕೈತಿ. 1990ರೊಳಗ ’ನೇರ ನಗೆಜಾಲ’ ಅಂತ ಕಾರ್‍ಯಕ್ರಮ ರೂಪಿಸಿ ಕರ್ನಾಟಕದ ಎಲ್ಲಾ ಆಕಾಶವಾಣಿ ನಿಲಯಗಳಲ್ಲಿ ಅಲ್ಲಲ್ಲಿಯ ಕವಿಗಳನ್ನ ಅವರವರ ಟೈಮಿಗೆ ಸಂಪರ್ಕಿಸಿ ಲೈವ್ ಹಾಸ್ಯ ಕವಿಗೋಷ್ಠಿಯನ್ನ ಸಾದರ ಪಡಿಸಿದ ಸಾದರರ ಸಾಹಸ ಭಾರತದ ಆಕಾಶವಾಣಿ ಚರಿತ್ರಯೊಳಗ್‌ಅ ಪ್ರಪ್ರಥಮ. ಆಮ್ಯಾಲ ಇಂಥ ಪ್ರಥಮಗಳು ಅವರ ಬೆನ್ನು ಹತ್ತಿದ್ದರಿಂದ ಬೇಂದ್ರೆ ವಿಚಾರಗೋಷ್ಠಿನೂ ಆಯ್ತು. ಬಾನುಲಿಯೊಳಗ ಅಸಂಖ್ಯ ಬೆಲೆಯುಳ್ಳ ಭಾಷಣ, ಚಿಂತನ ಇತ್ಯಾದಿ ಪ್ರಸಾರ ಆಗಿ ಸಾರ ಕಳಕೊಂಡು ಫೈಲಾಗೂದು ಸಾಮಾನ್ಯ. ಆದರ ಸಾದರ ಇದ್ದರ ಅಂಥಾವುನೂ ಸ-ಆದರ ಪ್ರಕಾಶಕ್ಕ, ಪ್ರಕಾಶನಕ್ಕ ಬರೂದು ಸಾಧ್ಯನ್ನೂದು ಈಗಾಗಲೇ ರೆಕಾರ್ಡ್ ಆಗೇತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಕ್ರೈಸ್ಟ್ ಕಾಲೇಜು ಕನ್ನಡ ಸಂಘಗಳ ನೆರವಿನಿಂದ 1990, 91, 92ರ ಸಮಗ್ರ ಕನ್ನಡ ಸಾಹಿತ್ಯದ ಬಗ್ಗೆ ಪ್ರಸಾರಗೊಂಡಿದ್ದ ಭಾಷಣಗಳನ್ನು ಸಂಪಾದಿಸಿ ಸಾದರ ಅವರು ಪ್ರಕಟಿಸ್ಯಾರ. ’ನೂರೊಂದು ಚಿಂತನ’, ’ಪ್ರಸಾರ ಹಾಸ್ಯ’, ’ಬದುಕು ನನ್ನ ದೃಷ್ಟಿಯಲ್ಲಿ’, ’ಆಧುನಿಕ ಕನ್ನಡ iಹಾಕಾವ್ಯಗಳು’ ಯಾರಾದರೂ ಅಭಿಮಾನ ಪಡುವಂಥ ಪುಸ್ತಕಗಳು. ’ದಿನಕ್ಕೊಂದು ನುಡಿಮುತ್ತು’, ’ಹೊಸ ಆಲೋಚನೆ’, ’ಮೃದುವಾಗಿ ಮುಟ್ಟು’ ಇತ್ಯಾದಿ ಸಾದರರ ಸ್ವತಂತ್ರ ಕೃತಿಗಳು. ಪತ್ರಿಕೆಗಳಲ್ಲಿ ಪ್ರಕಟವಾದ ಅನೇಕ ಕವನ, ಕಥೆ, ಲೇಖನ ಮುಂತಾದವು ಇನ್ನೂ ಪುಸ್ತಕ ರೂಪದಲ್ಲಿ ಬರಬೇಕು. ’ಕೆರೆಗೆ ಹಾರ” ಅನ್ನುವ ಜನಪದ ಸಂಗೀತ ರೂಪಕಕ್ಕ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಸಾದರ ಪ್ರಸಾರ ನಿಯೋಜನೆಯೊಳಗೂ ನಿಷ್ಣಾತ. (ಚಹಾದ ಜೋಡಿ ಚೂಡಾದ್ಹಂಗ..ಭಾಗ-2., ಪುಟ-88).

ಈ ಮಾತುಗಳೊಳಗ ನನ್ನ ವೈಯಕ್ತಿಕ ವಿವರ ಒಂದೀಟು ಹೆಚ್ಚಾತು ಅನಸ್ತೈತಿ. ಆದ್ರ, ಅದನ್ನ ಎಡಿಟ್ ಮಾಡೂದು, ಖರೇ ಎಡಿಟರ್‌ನ ಧರ್ಮ ಅಲ್ಲಂತ, ಅದು ಇರೂವಂಗ ಹಂಗs ಹಾಕಬೇಕಾತು. ಇದು ಸುಳ್ಳಲ್ಲ ಅನ್ನೂದು ಮಾತ್ರ ಸತ್ಯ. ಇದಕ್ಕೂ ಹೆಚ್ಚಿಂದು ನಾ ಏನೂ ಹೇಳಬಾರ್‍ದು.

ಆಕಾಶವಾಣಿಯಿಂದ ಹಿಂತಾ ಕಾರ್ಯಕ್ರಮಾ ಮಾಡುವಾಗ ಬೇಕಾದಷ್ಟು ಅಡಚಣಿ, ಆತಂಕ ಮತ್ತ ತೊಂದ್ರೆ ಬರತಾವು. ಅದರಾಗ ಒಳಗಿನ ಸಮಸ್ಯೇನs ಹೆಚ್ಚಿಗೀ ಇರತಾವು. ಇರಬಿಯಂಗ್ ಕೆಲಸಾ ಮಾಡೂವಂಥಾ ಕೆಳಗಿನ ಕೆಲವು ಅಧಿಕಾರಿಗಳು ಹಿಂತಾದ್ದು ಏನರ ವಿಶೇಷ ಕಾರ್ಯಕ್ರಮಾ ಮಾಡಕ್ಹತ್ತಿದ್ರಂದ್ರ ಮ್ಯಾಲಿನೆವ್ರು ಅಷ್ಟು ಸರಳ್ ಸಹಕಾರಾ ಕೊಡೂದುಲ್ಲಾ. ಇದರ ಕೀರ್ತಿ ಇಂವಗs ಮಾತ್ರ ಹೊಕ್ಕೈತಿ ಅನ್ನೂದು ಅವರ ಮನಸಿನ್ಯಾಗ ಕೊರೀತಿರತೈತಿ. ಕೀರ್ತಿ ಯಾಂವಗರs ಬರ್‍ಲಿ, ಇದು ಒಟ್ಟs ಆಕಾಶವಾಣಿ ಕಾರ್ಯಕ್ರಮಾ ಅನ್ನೂ ದೊಡ್ಡ ಮನಸು ಮಾಡಿದ್ರ ಆ ಮಾತು ಬ್ಯಾರೆ ಆಗಬೌದು. ಆದ್ರ ಅಷ್ಟು ದೊಡ್ಡ ಮನಸಿನ ಅಧಿಕಾರಿಗಳು ಭಾಳ ಕಡಿಮಿ. ಅದರ ಅನುಭವಾ ನನಗ ಭಾಳ ಆಗೇತಿ. ಆ ಅನುಭವಾ ಬಿಚ್ಚಿದ್ರ, ಮತ್ತೊಂದು ದೊಡ್ಡ ಪುರಾಣನ ಆಗೂದು ಗ್ಯಾರಂಟಿ. ಅದೇನರ ಇರ್‍ಲಿ, ನಾನು ಆ ಮ್ಯಾಲಿನ ಸ್ಥಾನಕ್ಕ ಹೋದಮ್ಯಾಲ ಕೆಲಸಾ ಮಾಡವ್ರಿಗೆ ಪ್ರೋತ್ಸಾಹ ಕೊಟ್ಟಿದ್ದಷ್ಟ ಅಲ್ಲ, ಅವರ ಜೊತಿಗೆ ನಿಂತು, ಹೆಗಲಿಗೆ ಹೆಗಲಗೊಟ್ಟು ಆಕಾಶವಾಣಿ ಮಾಧ್ಯಮಕ್ಕ ಕೀರ್ತಿ ತರೂವಂಗ್ ಕೆಲಸಾ ಮಾಡಿದ ಆತ್ಮಸಂತೋಷ ನನಗೈತಿ. ಇದು ಅಹಂಕಾರದ ಮಾತಲ್ಲ; ಬಾನುಲಿ ಮಾಧ್ಯಮದ ಬಗ್ಗೆ ನನಗಿದ್ದಂತಾ ಹೃದಯದೊಳಗಿನ ಪ್ರೀತೀ ದನಿ. ಇದನ್ನ ಬಿಟ್ಟು ಉಳದವ್ರ ಮಾತು ತೊಗೊಂಡು ಏನೂ ಮಾಡೂದೈತಿ? ಕಡೇಕ್ ದೊರಿಯೂ ಸಂತೋಷ ಅಂದ್ರ ಕೇಳುಗ ಪ್ರಭುಗಳ ನಿರ್ಣಯ ಮತ್ತ ಅವರು ತೋರ್‍ಸೂವಂಥಾ ಪ್ರೀತ್ತಿ. ಅದನ್ನಂತೂ ನಾನು ಹೊಟ್ಟಿ ತುಂಬಿ ಹೊರಚಲ್ಲೂವಷ್ಟು ಅನುಭವಿಸೇನಿ.

’ಇದು ಬರಿ ಬೆಳಗಲ್ಲೊ ಅಣ್ಣಾ’ ಕಾರ್ಯಕ್ರಮಾ ಮುಗದ ಮ್ಯಾಲ, ವಿದ್ಯಾವರ್ಧಕ ಸಂಘದ ಕಛೇರಿಯೊಳಗ ಚಾ ಕುಡಿಯೂವಾಗ, ಕುರ್ತಕೋಟಿ ಮಾಸ್ತರು, ಏ ತಮ್ಮಾ, ಅದೇನ್ ಪ್ರೀತಿನೋ ನಿನಗ ಬೇಂದ್ರೆ ಅಂದ್ರ! ಅವರ ಜನ್ಮ ಶತಮಾನೋತ್ಸವದ ಹೊತ್ತಿನ್ಯಾಗ ಬೇಕಾದಷ್ಟು ಕಾರ್ಯಕ್ರಮಾ ಆಗ್ಯಾವ. ಆದ್ರ, ನೀ ಏನ್ ಮಾಡಿದೆಲ್ಲಾ, ಈ ಕಾರ್ಯಕ್ರಮಾ ಎಲ್ಲಾ ತಂತಿಗಳನ್ನ ಒಂದಗೂಡಿಸ್ತು ನೋಡು. ಇದು ಖರೇವಂದ್ರೂ ನಬೋವಾಣಿ ಆಗಿ ಬೇಂದ್ರೆಯವರಿಗೆ ಕೇಳ್ಸಿರತೈತಿ. ಅಂತ ಹೇಳಿದ ಅರ್ಥಪೂರ್ಣ ಮಾತು ನನಗ ಹಾಲು-ಬೆಲ್ಲಾ ಕರಗಿಸಿ ಕುಡದಷ್ಟು ಸಂತೋಷಾ ಕೊಟ್ಟಿತ್ತು.

ಅಧ್ಯಕ್ಷರ ಮಾತು ಮುಗಿದ ನಂತರ, ’ಇದು ಬೆಳಗಲ್ಲೊ ಅಣ್ಣಾ...’ ವಿಚಾರ ಸಂಕಿರಣದ ಕಡೀಕ ನಾನು ಆಡಿದ ಮಾತುಗಳಿಂದ ಈ ಕಥೀ ಮುಗಸಬೌದು. ಅವು ಹಿಂಗಿದ್ವು- ವಿದ್ಯಾವರ್ಧಕ ಸಂಘದ ಸಭಾಭವನದ ಒಳಗೆ ಕುಳಿತು, ಆಕಾಶವಾಣಿ ಧಾರವಾಡ ಕೇಂದ್ರವು ಏರ್ಪಡಿಸಿದ ’ಇದು ಬರಿ ಬೆಳಗಲ್ಲೊ ಅಣ್ಣಾ...’ ಕಾರ್ಯಕ್ರಮವನ್ನು ಪ್ರತ್ಯಕ್ಷವಾಗಿ ನೋಡಿದ ಮತ್ತು ಕೇಳಿದ ಆಮಂತ್ರಿತರೆ, ಹಾಗೂ ದೂರದ ಊರುಗಳಲ್ಲಿ ಕುಳಿತು ಪ್ರೀತಿಯಿಂದ ಈ ಕಾರ್ಯಕ್ರಮ ಕೇಳಿ ಸಂತೋಷಪಟ್ಟ ಶ್ರೋತೃಗಳೆ, ಬೇಂದ್ರೆಯವರ ’ನಭೋವಾಣಿ’ ಕವಿತೆಯ ಒಂದು ನುಡಿ, ನಮ್ಮ ಈ ಕಾರ್ಯಕ್ರಮವನ್ನ ಕುರಿತೇ ಹೇಳಿದ ಹಂಗಿರೂದ್ರಿಂದ, ಅದನ್ನ ಕೇಳಿಸೋ ಮೂಲಕ ಈ ಕಾರ್ಯಕ್ರಮವನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತಿದ್ದೇವೆ-
ಓ ಶ್ರೋತ್ರೀಯನೆ ಶ್ರೋತಾರ ಕೇಳು
ಇದು ನಭೋ ವಾಣಿ
ನಾನು ಬಾಯಿ, ನೀನು ಕಿವಿ
ಬಾನ ಕಡಲಲ್ಲಿ ತೇಲಿ ಬಿಟ್ಟ ಈ ನುಡಿದೋಣಿ
ನಿನ್ನ ಹೃದಯದ ಬಂದರವ ಮುಟ್ಟೀತು
ನಿನ್ನ ಬುದ್ದಿಯ ಮನ ತಟ್ಟೀತು
ನೀನು ಎಲ್ಲೇ ಇರು ಕೇಳುವ ಸೂತ್ರ ಸರಿಯಿರಲಿ
ಹೃದಯ ತೆರೆದಿರಲಿ,

ಆಕಾಶವಾಣಿ ಧಾರವಾಡ ಕೇಂದ್ರ, ಬಾನಿನ ಕಡಲೊಳಗ ತೇಲಿಸಿ ಬಿಟ್ಟಂಥ ’ಇದು ಬರಿ ಬೆಳಗಲ್ಲೊ ಅಣ್ಣಾ...’ ಅನ್ನೂ ಈ ನುಡಿದೋಣಿ ನಿಮ್ಮ ಕಿಂವಿ ಮುಟ್ಟಿ, ಹೃದಯಗಳನ್ನ ತಟ್ಟೇತಂತ ಭಾವಿಸ್ತೇವಿ. ಈ ದೋಣಿಯೊಳಗ ನಮ್ಮ ಕೂಡ ಪ್ರಾಯಾಣ ಮಾಡಿದ ನಿಮಗೆಲ್ಲಾ ಮತ್ತೊಮ್ಮೆ ಧನ್ಯವಾದಗಳು.
ಎಲ್ಲರಿಗೂ ನಮಸ್ಕಾರ
----- * -----

ಈ ಅಂಕಣದ ಹಿಂದಿನ ಬರೆಹಗಳು

ಅಡಿಗಡಿಗೂ ನೆನಪಾಗುವ ಅಡಿಗರ ಕೊನೆಯ ಭೆಟ್ಟಿ-ಕೊನೆಯ ಕವನ

ಕರಿದ ಮಿರ್ಚಿಯಾದ ಜೀವಂತ ಮನುಷ್ಯರು....

ಐವತ್ತು ಕಲ್ಲು ಒಗೆದು ಮಹಾದೇವರಾಯನ ಸಾವಿನ ಶಬ್ದ ಹಿಡಿದು…

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...