‘ಬದ್ಧತೆ ಎನ್ನುವುದು ಬಂಧನ’ :  ಕೆ.ವಿ.ತಿರುಮಲೇಶ್ ಸಂದರ್ಶನ


" ಕನ್ನಡದ ಯುವ ಕವಿಗಳಲ್ಲಿ ಮುಖ್ಯರಾದವರು. ಭಾಷೆಯನ್ನು ಕಾವ್ಯ ಮಾಧ್ಯಮದಲ್ಲಿ ಪಳಗಿಸಿ, ಸೂಕ್ಷ್ಮವಾದಗಳನ್ನು ಅಭಿವ್ಯಕ್ತಿಸುತ್ತಾ, ಭಾವನೆ ವಿಚಾರಗಳ ಹದವಾದ ಮಿಶ್ರಣದಲ್ಲಿ ಹೊಸ ಅನುಭವ ನೀಡುವ ಅವರ ಕವನಗಳನ್ನು ಓದುವಾಗ ನನಗೆ ಈ ಕವಿ ಹೇಗಿರಬಹುದು?. ಇವರ ವಿಚಾರಧಾರೆಗಳೇನಿರಬಹುದು? ಎಂಬ ಕುತೂಹಲ ಉಂಟಾಗುತ್ತಿತ್ತು. ಮೈಸೂರಿನ ಧ್ವನ್ಯಾಲೋಕಕ್ಕೆ ಭೇಟಿ ನೀಡಿದ ಅವರನ್ನು ಭೇಟಿಯಾಗುವ ಅವಕಾಶ ಒದಗಿತು. ನಾನು ಧ್ವನ್ಯಾಲೋಕಕ್ಕೆ ಬಂದಾಗ ಅವರು ಧ್ವನ್ಯಾಲೋಕದ ಅತಿಥಿ ಗೃಹದ ಒಂದು ಮೂಲೆ ಯಲ್ಲಿ ಬೆತ್ತದ ಕುರ್ಚಿಯೊಂದರಲ್ಲಿ ಕುಳಿತು, ಡಿ.ಎಮ್. ಥಾಮಸ್‌ನ “ದಿ ವೈಟ್ ಹೊಟೇಲ್ ಕಾದಂಬರಿಯಲ್ಲಿ ತನ್ಮಯರಾಗಿದ್ದರು ನನ್ನನ್ನು ಕಂಡೊಡನೆಯೇ ಫೀಡೆಲ್ ಕ್ಯಾಸ್ಕೋ ತರಹದ ತಮ್ಮ ಗಡ್ಡದ ನಡುವೆಯೊಮ್ಮೆ ನಗೆಬೀರಿ ನನ್ನನ್ನು ಬರಮಾಡಿಕೊಂಡರು ". ಎನ್ನುತ್ತಾರೆ ರಾಜು ಅಡಕಳ್ಳಿ. ಅವರು ಕೆ. ವಿ. ತಿರುಮಲೇಶ್ ಅವರ ಜೊತೆ 1987 ರಲ್ಲಿ ತುಷಾರಕ್ಕೆ ನಡೆಸಿದ ಸಂದರ್ಶನ ನಿಮ್ಮ ಓದಿಗಾಗಿ..

ನಂತರ ಲೋಕಾಭಿರಾಮವಾಗಿ ಮಾತನಾಡುತ್ತಾ ಮಾನಸಗಂಗೋತ್ರಿಯ ಕಡೆ ಸುತ್ತಾಡಿ ಬರೋಣ ಎಂದು ಹೊರಟೆವು. ಮಾತುಕತೆಯಾಡತೊಡಗಿದಂತೆ ತಿರುಮಲೇಶ್ ತೀರಾ ಆತ್ಮೀಯರಾಗಿ ಬಿಟ್ಟರು. ಗಂಗೋತ್ರಿಯ ಸಾಲು ಮರಗಳ ನೆರಳಿನಲ್ಲಿ, ಹಸಿರು ಹುಲ್ಲು ಹಾಸಿಗೆಯಲ್ಲಿ ಕುಳಿತು ಅವರೊಂದಿಗೆ ನನ್ನ ಹಲವಾರು ಪ್ರಶ್ನೆಗಳ ಸುರುಳಿಯನ್ನು ಬಿಚ್ಚುತ್ತಾ ಒಂದೊಂದಾಗಿ ಅವರ ಮುಂದಿಟ್ಟೆ.

ನೀವು ಬಾಲ್ಯದಲ್ಲಿಯೇ ಬರವಣಿಗೆಗೆ ತೊಡಗಿದ್ದೀರೆಂದು ಕೇಳಿ ಬಲ್ಲೆ. ಹೇಗಿತ್ತು ನಿಮ್ಮ ಪ್ರಾರಂಭ?

ತಿರುಮಲೇಶ್ : ಹೌದು. ಆಗ “ಜೀವನ”,, “ಜಯಂತಿ”, “ಜಯಕರ್ನಾಟಕ” ಮುಂತಾದ ಪತ್ರಿಕೆ ಗಳಲ್ಲಿ ನನ್ನ ಕವನಗಳು ಪ್ರಕಟಗೊಳ್ಳುತ್ತಿದ್ದವು. ಆಗ ನನಗೆ ಮುಖ್ಯವಾಗಿ ಗೋವಿಂದ ಪೈ ಮತ್ತು ಎಂ. ಎನ್. ಕಾಮತರ ಪ್ರಭಾವವೂ ಆಗಿತ್ತು. ಅದಕ್ಕೂ ಮುನ್ನ ಭಾಮಿನಿ ಷಟ್ನದಿ, ಕಂದಪದ್ಯ ಗಳಲ್ಲಿ ಬರೆಯುತ್ತಿದ್ದೆ.ವ್ಯಾಕರಣವೂ ಸ್ವಲ್ಪ ಮಟ್ಟಿಗೆ ಗೊತ್ತಿತ್ತು.

ಬರಹಗಾರನಾದವನು ಯಾವುದಾದರೂ ಸಮಾಜಕ್ಕೆ, ತತ್ವಕ್ಕೆ, ಸಿದ್ಧಾಂತಕ್ಕೆ ಬದ್ಧನಾಗಿರಬೇಕೇ?

ತಿರುಮಲೇಶ್ : ಬದ್ಧನಾಗಿ ಬರೆಯುವಂಥದ್ದು ಸೃಜನಶೀಲತೆಗೆ ಧಕ್ಕೆ ತರುವಂಥದು. ಬದ್ಧತೆ ಎನ್ನುವುದು ಬಂಧನವೂ ಆಗಬಹುದು. ಸೃಜನಶೀಲತೆಗೆ ಮುಕ್ತ ಚಿಂತನೆ ಮತ್ತು ಆಲೋಚನೆಗಳು ಮುಖ್ಯ ವಾಗುತ್ತದೆ. ಬದ್ಧತೆಯ ಮಿತಿಯನ್ನು ಬರಹಗಾರ ನಾದವನು ತನಗೆ ತಾನೇ ಹಾಕಿಕೊಂಡು ಕೈಕಟ್ಟಿ ಕೂರುವಂತಾಗಬಾರದು. ಆದರೆ ಲೇಖಕನಾದವನು ಪ್ರಾಮಾಣಿಕನಾಗಿರಬೇಕು. ಪ್ರಾಮಾಣಿಕತೆಯನ್ನು ಆತ ಬರವಣಿಗೆಯಲ್ಲಿ ಎತ್ತಿ ಹಿಡಿಯುವಂತಾಗಬೇಕು. ಭಾಷೆಯಲ್ಲಿ ಅಥವಾ ವೈಚಾರಿಕತೆಯಲ್ಲಿ ಅನುಕರಣೆ ಇರಬಾರದು. ಇನ್ನು ಕೇವಲ ಸಮಾಜದ ಬಗ್ಗೆ ಬರೆದ ಮಾತ್ರಕ್ಕೆ ಆತನ ಸಾಮಾಜಿಕ ಜವಾಬ್ದಾರಿ ಪೂರ್ಣವಾಗುವದಿಲ್ಲ.

ನೀವು ಅಡಿಗರಿಗಿಂತ ಭಿನ್ನವಾಗಿಯೇ ಬರೆಯಲು ಪ್ರಯತ್ನಿಸುತ್ತೀರಲ್ಲಾ? ಅವರಿಗಿಂತ ಭಿನ್ನವಾಗಿ, ವೈಶಿಷ್ಟ್ಯವಾಗಿ ಬರೆಯಬೇಕೆಂಬ ಹಂಬಲವೇನಾದರೂ ಇದೆಯೇ?

ತಿರುಮಲೇಶ್ : ಅಡಿಗರ ಪ್ರಭಾವ ಒಂದು ಕಾಲಕ್ಕೆ ನನ್ನ ಮೇಲೆ ಆದದ್ದು ನಿಜ. ಅದು ಅನುಕರಣೆಯ ಹಂತದಲ್ಲಿ ಇದ್ದರೂ ಇರಬಹುದು, ನಂತರ ಅದರಿಂದ ಬಿಡುಗಡೆ ಪಡೆದುಕೊಳ್ಳಬೇಕಾಯಿತು. ಈ ಯತ್ನ ತಿಳಿದೋ ತಿಳಿಯದೆಯೋ, ಹೇಳುವಂತಿಲ್ಲ. ಈಗಲೂ ಇತರರ ಪ್ರಭಾವದಿಂದ ಮುಕ್ತನಾಗಿದ್ದೇನೆಂಬ ಧೈರ್ಯವೇನೂ ಇಲ್ಲಅಥವಾ ಹಾಗೆ ಆಗಬೇಕೆಂದೇನೂ ಇಲ್ಲ. ಕವಿಯೆಂದರೆ ಏಕಕೋಶ ಜೀವಿಯಲ್ಲವಲ್ಲ? ಆತನ ಮೇಲೆ ಪ್ರಭಾವಗಳು ಇದ್ದೇ ಇರುತ್ತದೆ. ಈ ಪ್ರಭಾವದಿಂದ ಅವನು ಏನನ್ನು ಸೃಷ್ಟಿ ಮಾಡುತ್ತಾನೆ, ಎನ್ನೋದು ಮುಖ್ಯ ವಲ್ಲವೇ?

ಇಲ್ಲಿಯತನಕ ಬಂದಿರುವ ನಿಮ್ಮ ಕವನ ಸಂಕಲನಗಳಲ್ಲಿ, ಪ್ರತೀ ಸಂಕಲನಗಳಲ್ಲಿಯೂ ಮನಸ್ಸನ್ನು ಮುಟ್ಟುವ, ಪದೇ ಪದೇ ಮೆಲುಕು ಹಾಕುವಂತಹ ಹಲವಾರು ಕವನಗಳಿರುತ್ತಿದ್ದವು. ಆದರೆ ನಿಮ್ಮ ಇತ್ತೀಚಿನ 'ಅವಧ' ದಲ್ಲಿ ಈ ರೀತಿಯ ಕವನಗಳಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಈ ಬಗ್ಗೆ ವಿವರವಾಗಿ ಹೇಳುತ್ತೀರಾ?

ತಿರುಮಲೇಶ್ : ಇದನ್ನು ಓದುಗರೇ ನಿರ್ಧರಿಸ ಬೇಕಾದ ವಿಚಾರ, 'ಅವಧ'ದಲ್ಲಿ ಹೆಚ್ಚಿನ ಖುಷಿ ಕೊಟ್ಟಿರುವ ಕವನಗಳಿವೆ. ಅಷ್ಟೇನೂ ಖುಷಿ ಕೊಡದ ಕವನಗಳೂ ಇರಬಹುದು. ಇದೇ ರೀತಿ ಓದುಗರಿಗೂ ಆಗಿರಬಹುದು. ಆದರೆ ಒಂದು ಮುಖ್ಯ ವಿಷಯ, ಕವಿ ಅಥವಾ ಕಾದಂಬರಿಕಾರ ಬರೆದದ್ದು ಸುಲಭವಾಗಿ ಅರ್ಥವಾಗದಿದ್ದರೂ ಅದನ್ನು ಅರ್ಥೈಸಿ ಕೊಳ್ಳುವ ಪ್ರಯತ್ನವನ್ನು ಓದುಗರು ಮಾಡಬೇಕು ಇನ್ನು ಹೆಚ್ಚಾಗಿ, ನನ್ನದೇ ಕವಿತೆಗಳ ಬಗ್ಗೆ ನಾನು ಹೇಳಿಕೊಳ್ಳುವದು ಸರಿಯಲ್ಲ. ಆದರೂ ನೀವು ಕೇಳಿದ್ದರಿಂದ ಹೇಳಬಹುದು.

ಮುಖ್ಯವಾಗಿ 'ಅವಧ' ಎಂಬ ಹೆಸರಿನ ಬಗ್ಗೆ, ಇದೇನೆಂದೇ ತಿಳಿಯದವರಿಗೆ, ತಿಳಿಯಬೇಕೆಂಬ ಕುತೂಹಲ ಕೂಡಾ ಇಲ್ಲದವರಿಗೆ ಅಭಿಪ್ರಾಯ ಕೊಡುವ ಕೆಲಸವೇಕೆ? 'ಅವಧ' ಎಂದರೆ ಒಂದು ರಾಜ್ಯದ ಹೆಸರು. ಪುರಾತನ ಅಯೋಧ್ಯೆ ಇರಬಹುದು. ಮೊಘಲರ ಆಳ್ವಿಕೆಯಲ್ಲಿ ಇದೇ ಔಧ್‌ ಆಯಿತು. ಲಖನೌ ಇರೋದು ಇಲ್ಲೇ. ಔಧ ರಾಜ ಮನೆತನವೊಂದು ಇಲ್ಲಿತ್ತು. ನನ್ನ ಕವಿತೆ ಇದಕ್ಕೆ ಸಂಬಂಧಿಸಿದ್ದು "ಅವಧ' ಸಂಕಲನದಲ್ಲಿ ಅದೇ ಹೆಸರಿನ ಕವಿತೆಯೊಂದಿದೆ ಇದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿಲ್ಲದವರಿಗೆ ನನ್ನ ಪುಸ್ತಕದಿಂದ ಉಪಯೋಗವಿಲ್ಲ.

ಮೆಲುಕಾಡಲು ಸಿಗದಂತಹಾ ಕವಿತೆಗಳು ಅಲ್ಲಿ ಇಲ್ಲದಿದ್ದರೆ, ಅದಕ್ಕೆ ಕಾರಣ ನಾನು ಎಲ್ಲರಿಗೂ ಗೊತ್ತಿರುವ ಸಂಗತಿಗಳ ಬಗ್ಗೆ ಬರೆಯದೇ ಇರುವುದು ಆಗಿರಬಾರದೇಕೆ? ನನ್ನ “ಕೇರಳದ ಹುಡುಗಿಯರು” ಕವಿತೆ ಬಹಳ ಹಿಂದೆ ಬರೆದುದು. ಹಲವರಿಗೆ ಖುಷಿ ಯಾಗಿದೆ. ಇದರ ಲಯ ವಿಧಾನ ಬಹುಶಃ ಹಿತಕರವಾಗಿದೆ. ನಿಜ. ಇದು ನಮಗೆ ಚಿರಪರಿಚಿತವಾದ ವಿಷಯವೂ ಆಗಿದೆ ಎನ್ನೋದನ್ನ ಮರೆಯಬಾರದು. 'ಅವಧ' ಹಾಗಲ್ಲ.

ಇನ್ನೊಂದು ಉದಾಹರಣೆ ನೋಡಿ : ಹಿಂದೆ 'ಪ್ರಜಾವಾಣಿ' ವಿಶೇಷಾಂಕದಲ್ಲಿ ನನ್ನದೊಂದು 'ತುತಂಕಮನ್' ಎಂಬ ಕವನ ಪ್ರಕಟವಾಯಿತು. ಹೆಚ್ಚಿನ ಓದುಗರು ನನ್ನ ಬಳಿ ಈ ಕವನ ಅರ್ಥ ವಾಗುವದೇ ಇಲ್ಲ... ಯಾವ ಥರಾ ಕವನಾ ಬರೀ ತೀರಿ? ಎಂದುಬಿಟ್ಟರು. ಆದರೆ `ತುತಂಕಮನ್ ಎಂದರೆ ಏನು? ಈ ಕವನ ಯಾವುದಕ್ಕೆ ಸಂಬಂಧಿಸಿದ್ದು? ಎಂದು ಹೆಚ್ಚಿನ ಓದುಗರು ಅದನ್ನೂ ಕುತೂಹಲದಿಂದ ವಿಚಾರಿಸಿ ಸಂಶೋಧಿಸುವ ಆಸಕ್ತಿಯನ್ನು ತೋರಿಸುದೇ ಇಲ್ಲ. ಇಪ್ಪತ್ತನೆಯ ಶತಮಾನದಲ್ಲಿ ಎರಡು ಸುಪ್ರಸಿದ್ಧ ಘಟನೆಗಳು ಸಂಭವಿಸಿದವು. ಒಂದು ಮೊಹೆಂಜುದಾರೋ, ಇನ್ನೊಂದು ತುತಂಕಮನ್ ಪಿರಮಿಡ್. 'ತುತಂಕಮನ್' ಒಬ್ಬ ಫಾರೋ, ಈತ ಇಜಿಯನ್ ರಾಜ. ಅವನು ತನ್ನ ಬಾಲ್ಯದಲ್ಲಿಯೇ ತೀರಿಕೊಂಡ. ಆತನ ಗೋರಿಯನ್ನು ಅಗೆದಾಗ ಅತ್ಯಂತ ಪ್ರಾಚೀನವಾದ ಒಂದು ಲಿಪಿ ಅಲ್ಲಿ ಸಿಗುತ್ತದೆ.

ಅದರಲ್ಲಿ “ ಹಿಂದಾದದ್ದನ್ನು ಕಂಡಿದ್ದೇನೆ “ ಮುಂದಾಗು ವದು ನನಗೆ ಗೊತ್ತು” ಎಂದಿತ್ತು. ಈ ವಿವರಗಳನ್ನೆಲ್ಲಾ ನಾನು ಅಲ್ಲಿ ಬಳಸಿದ್ದೇನೆ. ಅದೇ ರೀತಿ ರಾಮಚಂದ್ರಶರ್ಮರ ಮತ್ತು ಎ.ಕೆ.ರಾಮಾನುಜನ್ ಅವರ ಬರಹದಲ್ಲಿ ನಮಗೆ ಸಾಮಾನ್ಯವಾಗಿ ಗೊತ್ತಿರದೇ ಇರುವ ವಿಷಯವನ್ನು ಅವರು ಬಳಸುವುದನ್ನು ನಾವು ಕಾಣುತ್ತೇವೆ. ಏಕೆಂದರೆ ಅವರು ಹಲವಾರು ಬಾರಿ ದೇಶ, ವಿದೇಶಗಳಲ್ಲಿ ಸಂಚರಿಸಿ ಅಲ್ಲಿಯ ಜನಜೀವನದೊಂದಿಗೆ ಸ್ಪಂದಿಸಿದ ಅನುಭವ ಅವರಿಗಿದೆ. ಅದನ್ನು ಅವರ ಬರವಣಿಗೆಯಲ್ಲಿ ಉಪಯೋ ಗಿಸಿಕೊಳ್ಳುತ್ತಾರೆ. ಆದ್ದರಿಂದ ಆ ಅರ್ಥವಿಸ್ತಾರವನ್ನೆಲ್ಲಾ ಆಳವಾಗಿ ಶೋಧಿಸುವ, ಜಗತ್ತಿನ ವಿವಿಧ ವಿಷಯಗಳ ಕುರಿತು ಚಿಂತಿಸುವ ವೈಚಾರಿಕತೆ.

ಮಾನಸಿಕ ಸಿದ್ಧತೆಯನ್ನು ಓದುಗನಾದವನು ಉಳಿಸಿ ಕೊಳ್ಳಬೇಕು. ಬೆಳೆಸಿಕೊಳ್ಳಬೇಕು. ಆಂಗ್ಲ ಸಾಹಿತ್ಯವನ್ನು ಓದುವಾಗ ಇದರ ಅರಿವಾಗುತ್ತದೆ. "ಏಟ್ಸ್” ನ 'ಬೈಸಾಂಟಿಯಮ್' ಕವನ ನೋಡಿ ಬೈಸಾಂಟಿ ಯಮ್ ಎಂದರೆ ಈಗಿನ ಇಸ್ತಾಂಬೂಲ್ (ಟರ್ಕಿಯ ಪ್ರಸಿದ್ಧ ನಗರ) ಮೊದಲು ಕಾನ್‌ಸ್ಟಂಟಿನೋಪಲ್ ಎಂದಿತ್ತು. ಅದಕ್ಕಿಂತಲೂ ಪೂರ್ವದಲ್ಲಿ ಅದಕ್ಕೆ ಬೈಸಾಂಟಿಯಮ್ ಎಂದು ಕರೆಯುತ್ತಿದ್ದರು. ಇದನ್ನೆಲ್ಲಾ ತಾಳ್ಮೆಯಿಂದ ಶೋಧಿಸುವ ವ್ಯವಧಾನ ವನ್ನು ಆಂಗ್ಲ ಸಾಹಿತ್ಯಪ್ರಿಯರು ಬೆಳೆಸಿಕೊಂಡಿದ್ದಾರೆನ್ನಬಹುದು. ಆದರೆ ದುರದೃಷ್ಟವಶಾತ್ ಈ ವ್ಯವಧಾನ ಕನ್ನಡಿಗರಲ್ಲಿ ಕಡಿಮೆ. ನಮ್ಮ ಓದುಗರು ಕವಿತೆ “ಕಾವಲಿಯಿಂದ ತೆಗೆದ ದೋಸೆ'ಯಂತಿರಬೇಕು ಎನ್ನುವ ಮನಃಸ್ಥಿತಿಯವರು. ಇನ್ನು ಕವಿತೆ ಎಲ್ಲಾ ವಿಧದಿಂದಲೂ ಸ್ವಯಂಪೂರ್ಣವಾಗಿ ಇರಬೇಕೆಂದು ಕೆಲವರು ತಿಳಿಯುತ್ತಾರೆ. ಎಂದರೆ ಕವಿತೆಯನ್ನು ತಿಳಿದುಕೊಳ್ಳುವದಕ್ಕೆ ಹೊರಗಿನ ಯಾವ ಜ್ಞಾನದ ಅಗತ್ಯವೂ ಇರಬಾರದು ಎಂದು. ಇದು ಸರಿಯಲ್ಲ; ಸಾಧ್ಯವೂ ಅಲ್ಲ; ಕವಿತೆಯನ್ನು ತಿಳಿದುಕೊಳ್ಳುವುದಕ್ಕೆ ಓದುಗ ಬೇರೆ ಸಲಕರಣೆಗಳನ್ನು ಬಳಸಿಕೊಂಡರೆ ತಪ್ಪೇನಿಲ್ಲ. ಬಳಸಿಕೊಳ್ಳದಿರುವುದು ಕೃತಕವಾಗುತ್ತದೆ. ಯಾವುದೋ ಒಂದು ಪದ, ಅದರ ಅರ್ಥವ್ಯಾಪ್ತಿ, ಇತಿಹಾಸ ಇದೆಲ್ಲಾ ಅಗತ್ಯ ಮಾತ್ರವಲ್ಲ. ವನ್ನೂ ನಾವು ಉಪಯೋಗಿಸಿಕೊಳ್ಳುತ್ತೇವೆ ಕೂಡ. ಇಲ್ಲದಿದ್ದರೆ ಕವಿತೆಯ ಅಧ್ಯಯನ ಬೇಕಿಲ್ಲ. ಯಾವ ಅಧ್ಯಯನವೂ, ಪರಿಶ್ರಮವೂ ಇಲ್ಲದೇ ಅರ್ಥ ಆಗುವ ಹಾಡುಗಳ ರೀತಿ ಬೇರೆ.

ನವ್ಯ ಕಾಲದ ಆರಂಭ ಕಾಲದಲ್ಲಿ ನಿರಂಜನರು ಅದನ್ನು ಟೀಕಿಸುತ್ತ. “ನವ್ಯಕಾವ್ಯ ಅರ್ಥವಾಗಬೇಕಿದ್ದರೆ ಓದುಗ ಒಂದು ವಿಶ್ವಕೋಶ ಆಗಬೇಕು” ಎಂದು ಹೇಳಿದ್ದರು. ನಿರಂಜನರು ತಮ್ಮ ಈ ಟೀಕ ಸರಿಯಾದದ್ದಲ್ಲ ಎಂದು ಈಚೆಗೆ ನನಗೆ ಹೇಳಿದರು. ಈ ಬದಲಾವಣೆ ಅದರಲ್ಲಿ ಆಗದಿರುತ್ತಿದ್ದರೆ 'ಮೃತ್ಯುಂಜಯ'ದಂಥ ಕಾದಂಬರಿ ಬಹುಶಃ ಬರುತ್ತಿರಲಿಲ್ಲ.

ಇದಕ್ಕೆ ಸಂಬಂಧಿಸಿದ ಇನ್ನೊಂದು ಟೀಕೆಯೆಂದರೆ ಕೆಲವರ ಕವಿತೆಗಳು ನಮ್ಮ ಪರಂಪರೆಗೆ ಸೇರಿದ್ದಲ್ಲ ಎನ್ನುವುದು. ಶರ್ಮರ, ರಾಮಾನುಜನ್‌ ಬಗ್ಗೆ ಈ ಅಭಿಪ್ರಾಯವಿದೆ. ಕನ್ನಡ ಎಷ್ಟನ್ನು ಪಡೆದು ಕೊಳ್ಳಬಹುದು? ಎಷ್ಟನ್ನು ತಿರಸ್ಕರಿಸಬಲ್ಲದು ಎನ್ನುವುದನ್ನು ನಾವು ಪೂರ್ವಧಾವಿಯಾಗಿ ಯಾಕ ನಿರ್ಧರಿಸಬೇಕು? ಮುಖ್ಯ ಪ್ರಶ್ನೆಯೆಂದರೆ ಒಂದು ಕೃತಿ ನಿಮಗೆ ಇಷ್ಟವಾಗುತ್ತೋ ? ಇಲ್ಲವೇ ಎನ್ನುವದು ಇಷ್ಟವಾಗದೇ ಇದ್ದರೆ ಯಾಕೆ ಎನ್ನುವ ಪ್ರಶ್ನೆ ಕೇಳಬಹುದು. ಹೊರತು, ಅದರ ಯಾವುದೋ ಒಂದೆರಡು ಪದಗಳ ಅರ್ಥ ತಿಳಿದಿಲ್ಲ ಎಂದು ಕಾರಣಗಳನ್ನು ಮುಂದೂಡಿ ಕೃತಿಯನ್ನು ತಳ್ಳ ಬೇಕಾದ್ದಿಲ್ಲ.

ನಿಮಗೆ ನಿಮ್ಮ ಬರಹದಲ್ಲಿ ಯಾವುದು ಹೆಚ್ಚು ತೃಪ್ತಿ ತಂದಿದೆ? ಪದ್ಯ…ಕಥೆ... ಕಾದಂಬರಿ ಅಂದರೆ ಗದ್ಯ...?

ತಿರುಮಲೇಶ್‌: ನನಗೆ ಕೆಲವೊಂದು ವೇಳೆ ಪದ್ಯ ಬರೆಯೋಣ ಅನ್ನಿಸುತ್ತೆ. ಕೆಲವೊಮ್ಮೆ ಗದ್ಯ ಅಂತ ಅನ್ನಿಸುತ್ತೆ. ಆದರೆ ಯಾವುದು ತೃಪ್ತಿ ಎಂದು ಆತ್ಮಶೋಧನೆಯನ್ನು ನಾನು ಯಾವತ್ತೂ ಮಾಡಿಕೊಳ್ಳುವದಿಲ್ಲ. ಇನ್ನು ಪದ್ಯಕ್ಕೆ ನಿಷ್ಠರಾಗಿರಬೇಕು, ಗದ್ಯಕ್ಕೆ ನಿಷ್ಠರಾಗಿರಬೇಕು ಎಂಬ ಪಾತಿವೃತ್ಯ ನನಗೆ ಇಷ್ಟವಲ್ಲದ ಸಂಗತಿ. ಕೆಲವೊಮ್ಮೆ ಭಾಷಾಂತರದ ಕೆಲಸವನ್ನು ಕೂಡಾ ಮಾಡುತ್ತೇನೆ. ಕೆಲವು ಜನ ನನ್ನ ಗದ್ಯ ಲೇಖನಗಳನ್ನು ತುಂಬಾ ಇಷ್ಟ ಪಡುತ್ತಾರೆ. ಭಾಷೆ ಬಲ್ಲ ಜೀವಿಯಾಗಿ ನಾನು ಅದರ ಇದನ್ನೆಲ್ಲ ಸಕಲ ಸಾಧ್ಯತೆಗಳನ್ನೂ ಬಳಸಿಕೊಳ್ಳಲು ಇಚ್ಛಿಸುತೇನೆ. ಅಲ್ಲದೇ ಬಹುಷಃ ಕವಿಯಾದವನು ಗದ್ಯವನ್ನೂ, ಗದ್ಯ ಲೇಖಕನು ಪದ್ಯವನ್ನೂ ಆಗಾಗ ಬರೆಯೋದು ಒಳ್ಳೆಯದೆಂದು ನನಗನ್ನಿಸುತ್ತದೆ. 'ಫಾಸ್ಟರ್‌ನಾಕ್' ತಗೊಳ್ಳಿ, ಈತ ಮೂಲತಃ ಕವಿ, ಆದರೆ ಇಂದು ಆತ ಪ್ರಸಿದ್ಧನಾಗಿರೋದು 'ಡಾಕ್ಟರ್ ಜಿವಾಗೋ' ಎಂಬ ಕಾದಂಬರಿಯಿಂದಾಗಿ, ಈ ಕಾದಂಬರಿ ಬಹಳ ಕಾವ್ಯಾತ್ಮವಾಗಿದೆ. ಎಂದರೆ ಫಾಸ್ಟರ್‌ನಾಕ್ ಕಾವ್ಯಮಯವಾದ ಭಾಷೆ ಉಪಯೋಗಿಸುತ್ತಾನೆ ಎಂದಲ್ಲ. ಕಾವ್ಯಮಯವಾಗಿ ಅಲ್ಲಲ್ಲಿ ಕಾಣಬಹುದು. ಆದರೆ ಕಾವ್ಯಾತ್ಮಕ', ಎಂದರೆ ಅದು ಸಂವೇದನೆಗೆ ಸಂಬಂಧಿಸಿದ್ದು. ಒಂದೆಡೆ ಗೋಲಿ ಬಾರಿನ ಬಗ್ಗೆ ಹೇಳುತ್ತಾ, ಸಂಜೆಯ ಸೂರ್ಯನು ರಸ್ತೆಯ ಮೇಲಿದ್ದ ಕೆಂಪು ಬಣ್ಣವನ್ನು ಹೆಕ್ಕಿದ ಎನ್ನುತ್ತಾನೆ. ಇದು ಕಾವ್ಯಾತ್ಮಕ ಭಾಷೆ, ಡಾಕ್ಟರ್ ಜಿವಾಗೋ ಪ್ರತಿಯೊಂದು ಅಧ್ಯಾಯದಲ್ಲೂ ಇಂಥ ಶೃಂಗಗಳಿವೆ. ಸದ್ಯ ನಾನು ಓದುತ್ತಿರುವ ಡಿ.ಎಸ್‌. ಥಾಮಸ್‌ನ, 'ದಿ ವೈಟ್ ಹೊಟೆಲ್' ಕಾದಂಬರಿ ಈಚೆಗೆ ಬ್ರಿಟನ್‌ನಿಂದ ಬಂದ ಒಂದು ಬಹು ಮುಖ್ಯ ಕೃತಿಯೆಂದು ನನಗೆ ತೋರುತ್ತದೆ. ಥಾಮಸ್ ಕೂಡಾ ಕವಿಯೇ, ಹಾರ್ಡಿ, ಲಾರೆನ್ಸ್ ಮುಂತಾದ ಇತರ ಉದಾಹರಣೆಗಳೂ ಕೂಡಾ ಇವೆ. ಹೆಚ್ಚೇಕೆ ನಮ್ಮ ಕುವೆಂಪು ಕೂಡಾ ಕವಿಯಾಗಿದ್ದು ಕಾದಂಬರಿ ಬರೆದವರು, ಆದರೆ ಇದೇ ಪ್ರಮಾಣದಲ್ಲಿ ಗದ್ಯ ದಿಂದ ಕವಿಗೆ, ಕಾವ್ಯಕ್ಕೆ ಉಪಯೋಗವಾಗಿದೆಯೋ ಎಂಬ ಪ್ರಶ್ನೆಗೆ ಉತ್ತರ ಸ್ಪಷ್ಟವಿಲ್ಲ. ನನ್ನ ಅನುಭವ ದಿಂದ ಹೇಳುವುದಾದರೆ, ಗದ್ಯ ಕವಿಗೆ ಒಂದು ಬಗೆಯ ಶಿಸ್ತನ್ನು ಕಲಿಸಿಕೊಡುತ್ತದೆ. ವಿವರಗಳನ್ನು ವಿವರವಾಗಿ ಗ್ರಹಿಸುವ ಶಕ್ತಿಯನ್ನು ಕಲಿಸಿಕೊಡುತ್ತದೆ. ಗದ್ಯಲೇಖಕನೇ ಆಗಿರಲಿ, ಕವಿಯೇ ಆಗಿರಲಿ, ವಸ್ತು, ವಿವರಗಳ ಗ್ರಹಿಕೆ ಅತ್ಯಗತ್ಯ. ಇವುಗಳನ್ನು ಬಳಸುವ ಉದ್ದೇಶ ಮತ್ತು ವಿಧಾನಗಳಲ್ಲಿ ವ್ಯತ್ಯಾಸವಿರಬಹುದು.

ಇತ್ತೀಚಿನ ಬರಹಗಾರರಿಗೆ ವ್ಯಾಕರಣ, ಛಂದಸ್ಸು, ಪ್ರಾಸ ಇತ್ಯಾದಿಗಳ ಜ್ಞಾನವಿಲ್ಲದೇ ಕನ್ನಡ ಕಾವ್ಯ ಕ್ಷೇತ್ರ ನೀರಸವಾಗುತ್ತಿದೆಯೆಂಬ ಮಾತು ಕೇಳಿ ಬರುತ್ತಿದೆಯಲ್ಲಾ... ಇವೆಲ್ಲದರ ಜ್ಞಾನವಿದ್ದರೆ ಮಾತ್ರ ಬರೆಯಬಹುದೇ ಸರ್?

ತಿರುಮಲೇಶ್ : ಖಂಡಿತಾ ಇಲ್ಲಾ ನೋಡಿ, ಬರಹಗಾರನ ಅಭಿವ್ಯಕ್ತಿ ಮುಕ್ತತೆಯಲ್ಲಿ ಸೃಜಿಸು ವಂಥದು. ವ್ಯಾಕರಣ, ಪ್ರಾಸ, ಛಂದಸ್ಸುಗಳ ಕಲ್ಪನೆ ಇದ್ದರೆ ಮಾತ್ರ ಬರೆಯಬೇಕು ಎಂದಾದರೆ ಈ ಕಲ್ಪನೆ ಇಲ್ಲದ ವ್ಯಕ್ತಿಗಳಿಗೆ ಅಭಿವ್ಯಕ್ತಿಯೇ ಇಲ್ಲವೇ? ಆದರೆ ಬರಹಗಾರನಿಗೆ ಭಾಷೆಯ ಜ್ಞಾನ ಚೆನ್ನಾಗಿರಬೇಕು. ಅಪಭ್ರಂಷದ ಅಪಾಯವನ್ನು ಆತ ಅರಿತಿರಬೇಕು. 'ಆಫ್‌ಕೋರ್ಸ್' ವ್ಯಾಕರಣ ಜ್ಞಾನವಿದ್ದರೆ ಉತ್ತಮವಲ್ಲವೆಂತಲ್ಲ. ಇನ್ನು ಎಲ್ಲಾ ಕಲೆಗೂ ಕಸಬುಗಾರಿಕೆಯ ಹಿನ್ನೆಲೆ ಬೇಕಾಗುತ್ತೆ, ಚಿತ್ರಕಲಾವಿದನಿಗೆ ಬಣ್ಣಗಳ ಪರಿಜ್ಞಾನ, ಸಂಗೀತಗಾರನಾದವನಿಗೆ ನಾದದ ಪರಿಜ್ಞಾನ, ನರ್ತಕನಿಗೆ ತಾಳದ ಪರಿಜ್ಞಾನ ಇರಬೇಕು. ಅದೇ ರೀತಿ ಕವಿಗೆ ಭಾಷೆಯ ಸಾಧ್ಯತೆಗಳ ಬಗ್ಗೆ ತಿಳಿವು ಇರುತ್ತೆ: ಇರಬೇಕು. ಆದರೆ ಕಲೆಯೆಂದರೆ ಪ್ರಾಸವಾಗಲಿ, ಛಂದಸ್ಸಾಗಲೀ, ವ್ಯಾಕರಣವಾಗಲೀ ಅಲ್ಲ. ಇವನ್ನು ಉಪಯೋಗಿಸಿಕೊಂಡು ಕವಿ ಏನು ಮಾಡಿದ್ದಾನೆ ಎನ್ನೋದು ಮುಖ್ಯ.

ಹಾಡುಗಾರ, ನರ್ತಕ, ನಟ, ಮುಂತಾದವರಿಗೆ ತಾಲೀಮು ಹೇಗೆ ಬೇಕಾಗುತ್ತದೆಯೋ ಹಾಗೆಯೇ ಸಾಹಿತಿಗೂ ಬಹುಶಃ ನಿರಂತರವಾದ ಅಭ್ಯಾಸ ಬೇಕೆಂದು ನನ್ನ ಅನಿಸಿಕೆ. ಕೇವಲ ಸ್ಫೂರ್ತಿವಾದದಲ್ಲಿ ನನಗೆ ನಂಬಿಕೆಯಿಲ್ಲ. ಸ್ಪೂರ್ತಿ ಅಂದರೆ ಬರೀಬೇಕು ಎನ್ನೊ ಅನಿಸಿಕೆಯೊಂದಲ್ಲದೇ ಇನ್ನೇನೂ ಅಲ್ಲ. ಆದರೆ ಈ ಅನಿಸಿಕೆ ಕೂಡಾ ಅಭ್ಯಾಸ ಬಲದಿಂದ, ಕೆಲವೊಮ್ಮೆ ತೀರಾ ಒತ್ತಾಯದಿಂದ ಬರೋ ಸಂಗತಿ.

ಬೇಂದ್ರೆ... ಕುವೆಂಪು... ಮಾಸ್ತಿಯವರ ಬರಹದ ಕುರಿತು...?

ತಿರುಮಲೇಶ್ : ಬೇಂದ್ರೆಯವರು ಕನ್ನಡ ಭಾಷೆ ಉಪಭಾಷೆಗಳ ಸಮರ್ಥವಾದ ಉಪಯೋಗ ಮಾಡಿ ಕೊಂಡವರು. ಜನಪದದ ಹಲವು ಲಯಗಳನ್ನು ಕವಿತೆಗಳಿಗೆ ತಂದವರು. ಈ ದೃಷ್ಟಿಯಿಂದ ಹೊಸ ಗನ್ನಡ ಕಾವ್ಯಕ್ಕೆ ಇಂಥ ಕೊಡುಗೆಯನ್ನು ಇನ್ಯಾರೂ ಕೊಟ್ಟಿಲ್ಲ.

ಕು. ವೆಂ. ಪು. ಅವರು ಕಾವ್ಯದಲ್ಲಿ ಸಂಸ್ಕೃತಕ್ಕೆ ಮನಸೋತವರು. ಅದು ಬಹುಶಃ 'ರಾಮಾಯಣ ದರ್ಶನಂ' ಕಾವ್ಯಕ್ಕೆ ಹೊಂದಿಕೊಂಡಿರಬಹುದು. ಆದರೆ ಅವರ ಬಿಡಿ ಕವಿತೆಗಳಿಗೆ ಹೊಂದಿಕೊಳ್ಳಲಿಲ್ಲ. ಆದರೆ ಅವರ ಗದ್ಯ ನನಗೆ ತುಂಬಾ ಇಷ್ಟ. ಕಾವ್ಯದಲ್ಲಿ ಮಾಡುವ ಜನರಲ್ಯಾಜೇಶನ್ಸ್ ಅವರು ಗದ್ಯದಲ್ಲಿ ಮಾಡುವದಿಲ್ಲ. ಗದ್ಯದಲ್ಲಿ ಅವರಿಗೆ ವಸ್ತು ವಿವರಗಳ ಬಗ್ಗೆ ಪ್ರೀತಿಯಿರುವದು ಗೊತ್ತಾಗುತ್ತದೆ. ಪದ್ಯ ಎಂದಾಕ್ಷಣ ಅವರು ಆಕಾರದಲ್ಲೇ ಸಂಚರಿಸಿ ಬಿಡುತ್ತಾರೆ. ಪದ್ಯದಲ್ಲಿ ಕುವೆಂಪು ಅವರನ್ನು ಕಳಕೊಳ್ಳುವಂತೆ, ನಾವು ಗದ್ಯದಲ್ಲಿ ಅವರನ್ನು ಕಳಕೊಳ್ಳುವದಿಲ್ಲ.

ಮಾಸ್ತಿಯವರು ತಮ್ಮ ವೈಶಿಷ್ಟ್ಯತೆಯನ್ನು ತಮ್ಮ ಕಥಾ ರಚನೆಯಲ್ಲಿ ತೋರಿದ್ದಾರೆ. ಮಾಸ್ತಿಯವರ ಕತೆಗಳಲ್ಲಿ ಕತೆಯೇ ಮುಖ್ಯ, ಕಲಾವಂತಿಕೆಯಲ್ಲ. ಒಂದು ವಿಧದಲ್ಲಿ ಕಾರಂತರೂ ಹಾಗೇನೇ. ಆದರೆ ಕಾರಂತರು ನಿಸರ್ಗದ ಸೌಂದರ್ಯಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವುದು ಕಂಡು ಬರುತ್ತದೆ. ಮಾಸ್ತಿಯವರಲ್ಲಿ ಈ ಕೊರತೆಯಿದೆ. ಆದ್ದರಿಂದಲೇ ಅವರ ಕವಿತೆಗಳು ಚೆನ್ನಾಗಿಲ್ಲ.

ಆದರೆ ಕಾರಂತರ ಕಾದಂಬರಿಗಳಲ್ಲಿ ಜೀವನ ಶ್ರದ್ದೆಯೇ' ಕೇಂದ್ರ ಬಿಂದು ಎಂದು ಪ್ರಸಿದ್ಧ ವಿಮರ್ಶಕ ಜಿ. ಎಚ್. ನಾಯಕ್ ಅಭಿಪ್ರಾಯ ಪಡುತ್ತಾರಲ್ಲ...?

ತಿರುಮಲೇಶ್ : ಈ ಮೊದಲೇ ಹೇಳಿದಂತೆ, ಕಾರಂತರು ನಿಸರ್ಗದ ಮುಂದೆ ಕವಿಯಾಗಿ ಬಿಡು ತ್ತಾರೆ.ಕಾರಂತರು ಸಾಹಿತ್ಯವೊಂದನ್ನು ಮಾತ್ರ ಬೆನ್ನು ಹತ್ತಿದವರಲ್ಲ. ಸಾಹಿತ್ಯಕ್ಕಿಂತ ಭಿನ್ನವಾದ ಆಸಕ್ತಿಗಳು ಅವರಿಗಿವೆ. ಇದನ್ನೇ ನಾಯಕರು ಜೀವನ ಶ್ರದ್ದೆ' ಎಂದು ಕರೆದಿರಬೇಕು, ಕಾರಂತರ ದೃಷ್ಟಿಯಲ್ಲಿ ಮನುಷ್ಯರೂ ಸೇರಿದಂತೆ ಪ್ರಪಂಚದ ಘಟಕಗಳೆಲ್ಲ ಒಂದು ಸಮತೋಲನದಲ್ಲಿ ಬದುಕಬೇಕು, ಈ ಸಮತೋಲನ ತಪ್ಪಿದರೆ ಅನಾಹುತ ಆಗುತ್ತದೆ. ಇಕಾಲಜಿ ಹೇಳುವುದೂ ಇದನ್ನೇ...

ಈ ಸಮತೋಲನಕ್ಕೆ ಎಷ್ಟು ಹುಲ್ಲು... ಎಷ್ಟು ಮೊಲ ಬೇಕು ಎನ್ನುವ ಗಣಿತ ಅದ್ಭುತವಾದದ್ದೇ ಸರಿ, ಹುಲ್ಲು ಧಾರಾಳವಾಗಿ ದೊರೆತರೆ ಮೊಲಗಳು ಕೊಬ್ಬಿ ಬಲಿತವೆ. ಮೊಲಗಳ ಜನಸಂಖ್ಯೆ ಜಾಸ್ತಿಯಾಗುತ್ತದೆ. ಮೊಲಗಳ ಜನಸಂಖ್ಯೆ ಜಾಸ್ತಿಯಾದರೆ ಅವು ಒಂದಕ್ಕೊಂದು ಸಿಗುವ ಹುಲ್ಲಿನ ಪ್ರಮಾಣ ಕಡಿಮೆಯಾಗಿ ಅವುಗಳ ಸಂತಾಭಿವೃದ್ಧಿ ಕುಂಠಿತ ಗೊಳ್ಳುತ್ತದೆ. ಆದ್ದರಿಂದ ಹುಲ್ಲಿನ ಪ್ರಮಾಣ ತೀರಾ ಜಾಸ್ತಿಯೂ ಅಗಬಾರದು. ತೀರಾ ಕಡಿಮೆಯೂ ಆಗಬಾರದು.ಅದೇ ರೀತಿ ಮೊಲಗಳ ಸಂಖ್ಯೆ ಕೂಡಾ. ಕಾರಂತರು ಯಾತಕ್ಕಾದರೂ ಬದ್ಧರಾಗಿದ್ದರೆ ಅದು ಇಕಾಲಜಿಗೆ ಮಾತ್ರ. ಹೀಗೆ ಅವರು ಮುಕ್ತವಾಗಿ ಬರೆಯಬಲ್ಲವರಾದ್ದರಿಂದಲೇ ಅವರು ತಾವು ಸ್ವತಃ ಕ್ರಾಂತಿಕಾರಿಯಾಗಿದ್ದು, ಸಾಂಪ್ರದಾಯಿಕ ಸಮಾಜದ ಬಗ್ಗೆ ಲಿಬರಲ್ ಆಗಿ ಬರೆಯಬಲ್ಲವರು.

ಕನ್ನಡದ ಇತರ ಪ್ರಮುಖ ಬರಹಗಾರರಾದ ಅನಂತಮೂರ್ತಿ, ಲಂಕೇಶ್ ಮತ್ತು ತೇಜಸ್ವಿಯವರ ಬರಹ...?

ತಿರುಮಲೇಶ್ : ಅನಂತಮೂರ್ತಿ ಕನ್ನಡದಲ್ಲಿ ಗದ್ಯ ಮತ್ತು ಪದ್ಯ ಎರಡರ ಮೇಲೂ ಚೆನ್ನಾಗಿ ಹಿಡಿತವುಳ್ಳ ಬರಹಗಾರ. ಆದರೆ ಸಾಹಿತ್ಯದ ಬಗ್ಗೆ ಥಿಅರೈಸಿಂಗ್ ತುಸು ಅತಿಯಾಗಿ ಮಾಡುವ ಅನಂತಮೂರ್ತಿ ತಮ್ಮ ಗೊಂದಲಗಳಿಂದ ತಾವೇ ಬಿಡಿಸಿಕೊಳ್ಳಲಾರದೇ ಇದ್ದಾರೆ. ಆದ್ದರಿಂದಲೇ ಬಹುಷಃ 'ಸಂಸ್ಕಾರ'ದ ತಾಜಾತನ ಅವರ ಆಮೇಲಿನ ಬರಹಗಳಲ್ಲಿ ಬರಲಿಲ್ಲ. ಅವರು ಕಲಾವಿದನಿಗೆ ಬೇಕಾಗುವ ಮುಗ್ಧತೆಯನ್ನು ಕಳೆದು ಕೊಂಡಿದ್ದಾರೆ ಅನಿಸುತ್ತದೆ. ನನಗೆ ತೇಜಸ್ವಿಗೆ ಕಾರಂತರ ಹಾಗೇ ಅನೇಕ ಆಸಕ್ತಿಗಳಿವೆ. ಪರಿಸರ, ಹಕ್ಕಿ, ಹೂವು, ವಿಜ್ಞಾನ ಇತ್ಯಾದಿ. ಆದ್ದ ರಿಂದ ಅವರ ಕವಿತೆಗಳಲ್ಲಿ ಹೊಸತನ ಇರುತ್ತೆ. ಉದಾಹರಣೆಗೆ - ಕರ್ವಾಲೋ, ಆದರೆ ತೇಜಸ್ವಿಗೆ ಕಾವ್ಯಶಕ್ತಿಯ ಕೊರತೆಯಿದೆ' ಅಂತ ನನ್ನ ಭಾವನೆ.

“ವಿಮರ್ಶಕನಿಗೆ ಸಾಹಿತ್ಯ ಕೃತಿ ತನ್ನ ವಿಚಾರಗಳನ್ನು ತೂಗಿ ನೋಡುವುದಕ್ಕೊಂದು ಗೂಟವಾಗಿ ಬಿಡುವುದು, ಇದು ನಿಜಕ್ಕೂ ಅಪಾಯವೋ ಅಲ್ಲವೋ ಎಂಬುದರ ಬಗ್ಗೆ ಚರ್ಚೆ ಅಸಾಧ್ಯ”.

'ಅವನತಿʼ ಮುಂತಾದ ಕಥೆಗಳಲ್ಲಿ ಅಪರೂಪಕ್ಕೆ ಈ ಕಾವ್ಯಶಕ್ತಿ ಮಿಂಚಿದರೂ ಭಾಷೆಯ ಸಾವಯವ ಆಗಿ ಇಲ್ಲ. ಲಂಕೇಶ್ ಬರವಣಿಗೆ ಬಹಳ ಶಕ್ತಿಯುಳ್ಳದ್ದು. ಹರಿತವಾಗಿ ಹೇಳುತ್ತಾರೆ. ಗೇಲಿಮಾಡಲು, ಗೇಲಿ ಮಾಡಿಸಿಕೊಳ್ಳಲು ಅವರು ತಯಾರಾಗಿರುತ್ತಾರೆ. ಆದರೆ ಈ ಗೇಲಿತನ ಅವರ ಬರವಣಿಗೆಯ ಮಿತಿಯಂತೆಯೂ ನನಗೆ ತೋರುತ್ತದೆ. ಒಟ್ಟಾರೆ ನಾನಿ ದನ್ನೆಲ್ಲಾ ಹೀಗೆ ನೋಡುತ್ತೇನೆ. ಲಂಕೇಶ್, ಲಂಕೇಶ್ ನಾಗಿರೋದೇ ಚೆನ್ನ. ಅನಂತಮೂರ್ತಿ ಅನಂತಮೂರ್ತಿಯಾಗಿರೊಂದೇ ಚೆನ್ನ. ಹಾಗಂತ ಒಂದು ತೌಲನಿಕ ದೃಷ್ಟಿ ಬೇಡವೆಂದಲ್ಲ. ಆದರೆ ತುಲನೆ ಮಾಡುತ್ತಾ ನಾವು ಬೇರೆ ಬೇರೆ ಸಾಹಿತಿಗಳ ಪ್ರತ್ಯೇಕ ಕೊಡುಗೆಯನ್ನು ಮರೆಯಬಾರದು ಅಷ್ಟೇ.

ಈ ಹಿಂದೆ ನಮಗೆ ತಿಳಿದಂತೆ ಯಾವ ಕನ್ನಡದ ಯುಗವೂ (ಬಹುಶಃ ವಚನಕಾರರ ಯುಗವನ್ನು ಬಿಟ್ಟು) ಇಂದಿನಷ್ಟು ದ್ವಂದ್ವ, ಸಂಘರ್ಷ, ಸ್ವಾರಸ್ಯ ಗಳಿಂದ ಕೂಡಿದಂತೆ ಕಂಡು ಬರುವದಿಲ್ಲ. ಆದ್ದರಿಂದ ಇಂದು ಬರೆಯುತ್ತಿರುವ ಪ್ರಮುಖ ಸಾಹಿತಿಗಳಿಗೆಲ್ಲ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಸ್ಥಾನವಿದೆ.

ವಿಮರ್ಶೆಯ, ವಿಮರ್ಶಕರ ಬಗ್ಗೆ ನಿಮ್ಮ ಅಭಿಪ್ರಾಯ?

ತಿರುಮಲೇಶ್ : ಕೃತಿಕರ್ತ ವಿಮರ್ಶೆಯ ಬಗ್ಗೆ ಉದಾರನಾಗಿರಬೇಕು. ಓದುಗನಾದವನು ವಿಮರ್ಶೆ ಸರಿಯಾಗಿದೆಯೋ, ತಪ್ಪಾಗಿದೆಯೇ ಎಂಬ 'ವಿಮರ್ಶೆಯ ವಿಮರ್ಶೆ' ಮಾಡುವಲ್ಲಿ ಯತ್ನಿಸಬೇಕು. ಇನ್ನು ವಿಮರ್ಶೆಯಲ್ಲಿ ಪ್ರಾಮಾಣಿಕತೆ ಮತ್ತು ಸಂವೇದನಾ ಶೀಲತೆ ಮುಖ್ಯವಾಗಿರಬೇಕು. ವಿಮರ್ಶೆಯೆಂಬ ಮೌಲ್ಯಮಾಪನವನ್ನು ಪ್ರತಿಯೊಬ್ಬ ವಿಮರ್ಶಕನೂ ತನ್ನ ವಿದ್ವತ್ತಿನ ಮಿತಿಯೊಳಗೆ ಮಾಡುತ್ತಾನೆ. 'ವಿಮರ್ಶೆಯ ವಿಮರ್ಶೆ' ನಮ್ಮಲ್ಲಿ ಇನ್ನೂ ಪ್ರಾರಂಭದ ಹಂತದಲ್ಲಿವೆಯಷ್ಟೇ. ಇಂಥ ವಿಮರ್ಶೆ ಬಂದಾಗಲೇ ವಿಮರ್ಶಕ ಹೊಣೆಗಾರನಾಗುವದು. ಅದಿಲ್ಲದಿದ್ದರೆ ಏನು ಬೇಕಾದರೂ ಹೇಳಿ ಹೊಣೆ ಯಿಂದ ತಪ್ಪಿಸಿಕೊಳ್ಳಬಹುದು. ಇಂದು ವಿಮರ್ಶೆ ಕೂಡಾ ಹಲವು ದಾರಿಗಳಲ್ಲಿ ಬೆಳೆಯುತ್ತಿದೆ. ಹಲವು ಸಿದ್ಧಾಂತಗಳ ಯುದ್ಧರಂಗ ಕೂಡಾ ಆಗಿದೆ. ಆದರೆ ಬರಿಯ ಪಠ್ಯವೊಂದೇ ಸಾಕು ಎಂಬ ಹಠವನ್ನು ಇಂದು ಯಾರೂ ಮಾಡುವದಿಲ್ಲ ಅಂದುಕೊಂಡಿದ್ದೇನೆ, ವಿಮರ್ಶೆ ಸೀಮಿಯಾಟಿಕ್ಸ್ (ಸಂಜ್ಞಾ ಲೋಕ), ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಭಾಷಾ ವಿಜ್ಞಾನ, ಚರಿತ್ರೆ ಮುಂತಾದ ಕ್ಷೇತ್ರಗಳಿಂದ ತನಗೆ ಬೇಕಾದ್ದನ್ನು ಎತ್ತಿಕೊಳ್ಳುವದು ಸಾಧ್ಯವಾಗಿರೋದರಿಂದ ಕೇವಲ ಅನ್ವಯಾರ್ಥ ಮಾಡುತ್ತಾ ತೃಪ್ತಿ ಪಟ್ಟುಕೊಳ್ಳುವಂತಿಲ್ಲ. ಆದರೆ ವಿಮರ್ಶೆ ಹೀಗೆ ವಿಸ್ತ್ರತವಾಗುತ್ತಾ ಹೋಗುವದರಿಂದ ಅಪಾಯವಿದೆ. ಅದೇನೆಂದರೆ ವಿಮರ್ಶಕನಿಗೆ ಸಾಹಿತ್ಯ ಕೃತಿ ತನ್ನ ವಿಚಾರಗಳನ್ನು ತೂಗಿ ನೋಡುವದ ಕೊಂದು ಗೂಟವಾಗಿ ಬಿಡುವದು. ಇದು ನಿಜಕ್ಕೂ ಅಪಾಯವೋ ಅಲ್ಲವೋ ಎಂಬುದರ ಬಗ್ಗೆ ಚರ್ಚೆ ಅಸಾಧ್ಯ.

ನವ್ಯ ಬರಹಗಾರರ ಮೇಲೆ ಇಂಗ್ಲೀಷ್ ಸಾಹಿತ್ಯದ ಪ್ರಭಾವವೇ ಹೆಚ್ಚಾಗಿದೆಯೆಂಬ ಭೈರಪ್ಪನವರ ಆರೋಪಕ್ಕೆ ನಿಮ್ಮ ಪ್ರತಿಕ್ರಿಯೆಯೇನು?

ತಿರುಮಲೇಶ್ : ಈ ಆರೋಪಬಹುಶಃ ಪ್ರಭಾವ ಇರಬಾರದೆಂಬ ಮನೋಭಾವನೆಯಿಂದ ಬಂದೆದ್ದಿರ ಬಹುದು. ಇದು ಖಂಡಿತಾ ತಪ್ಪು, ನನ್ನ ದೃಷ್ಟಿಯಲ್ಲಿ ಪ್ರಭಾವವಿಲ್ಲದೇ ಸೃಜನಶೀಲತೆಯಿಲ್ಲ. ಆದರೆ ಪ್ರಭಾವ ಅನುಕರಣೆಯಾಗಬಾರದು. ಅನುಕರಣೆಯಿದ್ದಲ್ಲಿ ಸೃಜನಶೀಲತೆಯಿರುವದಿಲ್ಲ. ನೋಡಿ, 'ರಾಜು ಅಡಕಳ್ಳಿಯವರೇ'... ಯಾವುದೇ ಸಾಹಿತ್ಯ, ಸಂಸ್ಕೃತಿ, ಜನಜೀವನದ ಪ್ರಭಾವವಿಲ್ಲದಿದ್ದರೆ ಕನ್ನಡ ನಿಂತ ನೀರಿನಂತಾಗುತ್ತದೆ. ಇನ್ನು ಇಂಗ್ಲೀಷ್ ತಿಳಿದಿರುವ ಮಂದಿಯಿಂದ ಕನ್ನಡಕ್ಕೆ ಅಪಚಾರವಾಗಿ ದಯಂದರೆ ಮೂರ್ಖತನದ ಮಾತಾದೀತು.

ನಾನು ಹೊರಗಿನ ಸಾಹಿತ್ಯ ಓದೋದಿಲ್ಲ. ಹೊರಗಿ ನವರನ್ನು ನೋಡೋದಿಲ್ಲ. ಇದರಿಂದ ನನ್ನ 'ತನ್ನ ತನ' ಹಾಳಾಗುತ್ತದೆ ಎನ್ನುವುದು ಹೇಡಿತನದ ಮಾತು. ಉದಾಹರಣೆಗೆ ನೋಡಿ : ಇತ್ತೀಚೆಗೆ ಪಾಶ್ಚಾತ್ಯ ಸಂಗೀತ (ಪಾಪ್ ಮುಜಿಕ್) ಬಂದಿದ್ದ ರಿಂದ ನಮ್ಮ ಕರ್ನಾಟಕ, ಹಿಂದುಸ್ತಾನಿ ಸಂಗೀತ ವೇನೂ ನಶಿಸಿ ಹೋಗಿಲ್ಲ. ಹೋಗುವುದೂ ಇಲ್ಲ: ಅಕಸ್ಮಾತ್ ನಮ್ಮ ಸಂಗೀತ ಪಾಶ್ಚಾತ್ಯ ಸಂಗೀತ ವನ್ನು ತಡೆದುಕೊಳ್ಳುವುದಿಲ್ಲ ಅಂತಾದರೆ ದೌರ್ಬಲ್ಯ ವುದು. ವಾಗುತ್ತದೆ. ಈ ರೀತಿಯ ಮಡಿವಂತಿಕೆ ನನಗೆ ಸಲ್ಲದು, “ಅದು ಬೇಡಾ, ಇದು ಬೇಡಾ" ಎಂಬ “ಎಲ್ಲಾ ಬೇಡ"ಗಳಲ್ಲಿಯೇ ಕಳೆಯುವುದು ಬೇಡ. ಉತ್ತಮವಾದದ್ದನ್ನು ಸ್ವೀಕರಿಸುವದರ ಜೊತೆಗೇ ನಮ್ಮತನವನ್ನೂ ನಾವು ಕಾಪಾಡಿ ಕೊಳ್ಳೋಣ. ನೋಡಿ... ಪರಂಪರೆಯನ್ನೋದು ಕೂಡಾ ಪೂರ್ವಭಾವಿಯಾಗಿ ನಿಶ್ಚಿತವಾಗಿರುತ್ತೇ? ಕನ್ನಡದ ಪರಂಪರೆ ಹೇಗೆಂದು ಪಂಪಕವಿಯನ್ನು ಕೇಳಿರುತ್ತಿದ್ದರೆ ಮುಂದೆ ವಚನಕಾರರು ಬರುತ್ತಾರೆ. ನವೋದಯವಾಗುತ್ತದೆ ಎಂದೆಲ್ಲಾ ತಿಳಕೊಂಡು ಆತ ಉತ್ತರಿಸೋದು ಸಾಧ್ಯವಿತ್ತೇ? ಇಲ್ಲ. ಬರೋ ಸಾಹಿತ್ಯ ಮುಖ್ಯವೋ ಅಲ್ಲವೋ,

ಅದರಿಂದ ಪಡೆದುಕೊಳ್ಳುವದೇನಾದರೂ ಇದೆಯೇ ಇಲ್ಲವೇ? ಇದು ವೃತ್ತ ಛಂದಸ್ಸಿಗೆ ಸರಿಯಾಗಿದೆಯೇ ಇಲ್ಲವೇ? ಅದು ಯಾವ ಊರಿನ ಪ್ರೇರಣೆಯಿಂದ ಬಂದಿರೋದು ಎಂಬುದರ ಮೇಲಿಂದ ಅದರ ಪ್ರಾಮುಖ್ಯತೆಯ ಬಗ್ಗೆ ತೀರ್ಮಾನಿಸುವುದು ಸರಿಯಲ್ಲ, ಯಾವುದೇ ಪ್ರಮುಖ ಸಾಹಿತ್ಯ ಕೂಡಾ. ಅದು ಅರೇಬಿಕ್ ಆಗಿರಲಿ, ಚೈನಿಸ್ ಆಗಿರಲಿ, ಇಂಗ್ಲೀಷ್ ಆಗಿರಲಿ, ಸ್ಪ್ಯಾನಿಕ್ ಆಗಿರಲಿ ಇತರ ನೀರನ್ನು ಒಳಗೊಳ್ಳದ ಹಳ್ಳದಂತೆ ಬೆಳೆದು ಬರುವದಿಲ್ಲ. ಕೇವಲ ಕನ್ನಡವೆಂದರೇನು? ಇತರ ಭಾಷೆಯನ್ನು ತಿಳಿಯದೇ ಕನ್ನಡ ಮಾತ್ರ ಬಲ್ಲ ಸಾಹಿತಿಯ ಬರವಣಿಗೆಯೆಂದೇ? ಅದೃಷ್ಟವಶಾತ್ ಅಂಥ ಮಾದರಿ ಕನ್ನಡದಲ್ಲಿ ಸಿಗಲಾರದು. ಅಂಥ “ಶುದ್ಧ ಕನ್ನಡ ಸಾಹಿತಿ ಯಾರು? ಅಥವಾ ಅಂಥ ಸಾಹಿತಿ ಒಂದು ಆದರ್ಶದ ನೆಲೆಯಲ್ಲಾದರೂ ಅಗತ್ಯವೇ? ಅಂಥ ಮಡಿವಂತಿಕೆಯ ಮನೋಭಾವ ಸೃಜನಶೀಲತೆಗೆ ಹೇಗೋ ವಾಸ್ತವತೆಗೆ ಕೂಡಾ ವಿರುದ್ಧವಾದುದು. ಹೈದರಾಬಾದಿನಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ನಾನು ನನ್ನ ವಸ್ತು ವಿಷಯಗಳನ್ನು ಅಲ್ಲಿಂದ ಆರಿಸಿಕೊಳ್ಳುತ್ತೇನೆ ಎನ್ನೋಣ. ಮುಸ್ಲಿಮರ ಬಗ್ಗೆ, ಮಸೀದಿಗಳ ಬಗ್ಗೆ. ವರ್ಗಗಳ ಬಗ್ಗೆ ನನ್ನ ಕವಿತೆಗಳಲ್ಲಿ ವಿವರಗಳು ಬರಬಹುದು. ಅನೇಕ ಮುಸ್ಲಿಂ ಲೇಖಕರು ಕೂಡಾ ಈಗ ಕನ್ನಡದಲ್ಲಿ ಬರೆಯಲು ಸುರುಮಾಡಿದ್ದಾರೆ. ಇವರೆಲ್ಲಾ ಪರಂಪರೆಗೆ ಸೇರುತ್ತಾರೆಯೇ ಇಲ್ಲವೇ? ಇಸ್ಲಾಂ ಕನ್ನಡದ ಪರಂಪರೆಗೆ ಹೇಗೆ ಸೇರಿತು? ಅದಕ್ಕೂ ಮುಖ್ಯ ಪ್ರಶ್ನೆ : ಹೇಗೆ ಸೇರಿತು ಎನ್ನುವುದು.

ಇಂಗ್ಲೀಷ್ ಸಾಹಿತ್ಯದ ಅನುಕರಣೆಯನ್ನು ನಿವಾರಿಸುವದಕ್ಕಾಗಿ ಆ ಸಾಹಿತ್ಯದ ಓದುವಿಕೆಯನ್ನೇ ನಿರಾಕರಿಸಲಾದೀತೇ...? ಇಂತಹಾ ಸಂದರ್ಭದಲ್ಲಿ ಅನುಕರಣೆಯ ಬರಬಹುದು. ಸೃಜನಶೀಲ ಸಾಹಿತ್ಯವೂ ಬರಬಹುದು.

ಇನ್ನೊಂದು ಮುಖ್ಯ ವಿಷಯ..ಅಡಕಳ್ಳಿ ಯವರೇ... ಅನುಕರಣೆ ಮಾಡೋ ವ್ಯಕ್ತಿ ಕನ್ನಡ ಸಾಹಿತ್ಯದಿಂದಲೇ ಮಾಡಲು ಸಾಧ್ಯವಿಲ್ಲವೇ? ಈ ಲೋಕದಲ್ಲಿ 'ತನ್ನತನ' ಅನ್ನೋ ಅಂಶ ಕಡಿಮೆ. ಇನ್ನೂ ಯಾರೂ ಈ ತನಕ ಮಾಡದೇ ಇರೋ ಕೆಲಸಾನ ನಾನು ಮಾಡಿದ್ದೇನೆ ಎಂಬ ಖಂಡಿತ ವಾದಕ್ಕೆ ಯಾವ ಕಲೆಯಲ್ಲೂ ಸ್ಥಾನವಿಲ್ಲ. ಕಲೆಯನ್ನೋದು ಅನುಕರಣೆಯಿಂದ ಆರಂಭವಾಗಿ ಕಲಾ ವಿದನ ಸ್ವಂತಿಕೆಗೆ ಅಭಿವ್ಯಕ್ತಿ ಮಾಧ್ಯಮವಾಗಿ ಮುಂದುವರಿಯಬೇಕು. ಯುಗಾಂತ'ದ ಪ್ರಭಾವವಿದೆಯೆಂದು ಕೆಲವರು ಹೇಳುತ್ತಾರೆ. ಯಾಕಿರಬಾರದು? ಭೈರಪ್ಪನವರು ಇದನ್ನು ಅಲ್ಲಗಳೆಯುವದರಿಂದ ಅವರ ಮಾತನ್ನು ಒಪ್ಪೋಣ. ಆದರೆ ನಿಜವಾದ ಪ್ರಶ್ನೆಯೆಂದರೆ 'ಯುಗಾಂತ' ಇರುತ್ತಲೂ 'ಪರ್ವ' ನಮಗೆ ಬೇಕೇ ಬೇಡವೇ ಅನ್ನೋದು ಎಂದರೆ ಇವೆರಡರ ಹೋಲಿಕೆಗಳನ್ನು ಒಪ್ಪಿಕೊಂಡ ಮಾತ್ರಕ್ಕೆ 'ಪರ್ವ'ಕ್ಕೆ ನಷ್ಟವೇನೂ ಆಗಬೇಕಾದ್ದಿಲ್ಲ. ನಮ್ಮ ಕ್ಲಾಸಿಕಲ್ ಯುಗದಲ್ಲಿ ಇಂಥ ಪ್ರಶ್ನೆಯೇ ಏಳಲಿಲ್ಲ. ರಾಮಾಯಣ, ಮಹಾಭಾರತ ಕಥೆಗಳನ್ನು ಎತ್ತಿಕೊಂಡು ಎಷ್ಟೋ ಮಂದಿ ಬರೆದಿದ್ದಾರೆ. ರನ್ನನ ಮೇಲೆ ಪಂಪನ ವಂಥದ್ದು. ಪ್ರಭಾವ ಇದೆ - ಆದರೆ ಅದರಿಂದ 'ಗದಾಯುದ್ಧ'ಕ್ಕೆ ಕೊರತೆಯೇನೂ ಆಗುವುದಿಲ್ಲವೆಂದು ನನಗೆ ತೋರುತ್ತದೆ.

ಬರಹಗಾರನಾದವನು ಸಮಕಾಲೀನತೆಗೆ ಒಳ ಪಟ್ಟು ಬರೆಯುವ ಔಚಿತ್ಯವಿದೆಯೇ?

ತಿರುಮಲೇಶ್ : ಇದು ಅಷ್ಟು ಸರಿಯಲ್ಲ. ಸಾಹಿತಿ ತಾತ್ಕಾಲೀನತೆ ಮತ್ತು ಸಮಕಾಲೀನತೆಗಳ ಬಂಧನದಿಂದ ಮುಕ್ತನಾಗಿರಬೇಕೆಂದು ಈ ಮೊದಲೇ ಹೇಳಿದೆ. ಇದರಲ್ಲಿ ಅವನ ಅಸಮಾನ್ಯತೆ ಇರೋದು. ಯಾಕೆಂದರೆ ಸಾಧಾರಣ ಮಂದಿ ಇಂತಹಾ ಬಂಧನದಲ್ಲಿ ಕಳೆದಿರುತ್ತಾರೆ. ಅವರು ಚರಿತ್ರೆಯ ಶಿಶುಗಳಾಗಿದ್ದರೂ ಅವರಿಗೆ ಚರಿತ್ರೆಯ ಕಲ್ಪನೆಯಿರುವುದಿಲ್ಲ ನಾಳೆಗಿಂತ ಆಚಿನ ದೂರವನ್ನು ಅವರು ನೋಡಲಾರರು. ನೋಡಿ... ಒಂದು ಕಾಲದಲ್ಲಿ ಅಸಂಗತ ನಾಟಕದ ಅಲೆ ಎದ್ದಿತು. ಆ ವೇಳೆಯಲ್ಲಿ ಹೆಚ್ಚಿನವರು ಆ ರೀತಿ ನಾಟಕ ಬರೆಯುವದೇ ಸಾರ್ಥಕತೆ ಎಂದು ತಿಳಿದು ಬರೆಯಲು ಪ್ರಾರಂಭಿಸಿದರು. ಈ ರೀತಿಗೊಳ ಪಟ್ಟೇ ಬರೆಯುತ್ತಾ ಹೋದಾಗ ಅವು ಕ್ರಮೇಣ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗುವವು. ಕ್ರಿಯೇಟಿವಿಟಿ ಅನ್ನೋದು ಇಲ್ಲದಿದ್ದನ್ನೂ ಕೊಡುವುದು; ಹೊರತು ಇದ್ದದ್ದನ್ನೇ ಕೊಡುವುದಿಲ್ಲ. ಯಾವತ್ತೂ ಹೊಸತನವನ್ನು ಅಭಿವ್ಯಕ್ತಿಸುವಂಥದ್ದು. ಹೊಸ ಹೊಸತರ ಶೋಧದ ಚೈತನ್ಯ ಬರಹ ಗಾರನಾದವನಿಗೆ ಮತ್ತು ಓದುಗರಾದವರಿಬ್ಬರಿಗೂ ಇರಬೇಕಾದದು ಆವಶ್ಯಕ.

ಹೊಸತನ ಎಂದರೇ...?

ತಿರುಮಲೇಶ್ : 'ಹೊಸತನ' ಎಂದರೆ ಅದೊಂದು ದೃಷ್ಟಿಕೋನವಲ್ಲದೇ ಇನ್ನೇನಲ್ಲ. ವಿಜ್ಞಾನಿ ಕೂಡಾ ಏನು ಮಾಡುತ್ತಾನೆ ಎರಡು ವಿಷಯಗಳ ನಡುವೆ ಸಂಬಂಧ ಕಲ್ಪಿಸುತ್ತಾನೆ. ಈ ಎರಡು ವಿಷಯಗಳೇನೂ ಹೊಸತಾಗಿರಬೇಕಾದ್ದಿಲ್ಲ. ಆದರೆ ಸಂಬಂಧ ಇದೆಯಲ್ಲ – ಅದು ಹೊಸತು. ವಿಜ್ಞಾನಿ ತೋರಿಸೋದು ಇದನ್ನ, ಅದೇ ರೀತಿ ಕವಿ - ಆತ ಒಂದು ರೂಪಕ ನಿರ್ಮಿಸಿದಾಗ ಹೊಸತೊಂದು ಸಂಬಂಧ ನಿರ್ಮಿಸುತ್ತಾನೆ. ನಮ್ಮ ದೃಷ್ಟಿಕೋನ ಬದಲಿಸುತ್ತಾನೆ. ಸಾಹಿತ್ಯದಿಂದ ನಾವು ಬಯಸ ಬೇಕಾದ ಹೊಸತನ ಇಂಥದು, ಅದಕ್ಕೆ ಅನುಕೂಲ ವಾದ ಎಲ್ಲವನ್ನೂ ಸಾಹಿತಿ ಬಳಸಿಕೊಳ್ಳಬಹುದು.

ಅದು ಸಮಕಾಲೀನತೆಯಿಂದ ಬಂದರೆ ಬರಲಿ, ಆದರೆ ಸಮಕಾಲೀನತೆಯೇ ಒಂದು ಗುರಿಯಾಗುವುದು ಸಾಧ್ಯವಿಲ್ಲ. ಅಗತ್ಯವೂ ಇಲ್ಲ. ಸಮಕಾಲೀನತೆ ಎನ್ನುವುದು ಯಾವ ಅಧ್ವಾನವೂ ಇಲ್ಲದೇ ಬರ ಬೇಕಾದ ಸಂಗತಿ. ಕಾಲ ಮತ್ತು ದೇಶದ ಸಂದರ್ಭ ನಮ್ಮೆಲ್ಲರನ್ನೂ ಸಮಕಾಲೀನರನ್ನಾಗಿ ಮಾಡುತ್ತದೆ.

ನಿಮ್ಮ ವಿಚಾರಧಾರೆಯನ್ನೂ, ಕಲ್ಪನೆಯನ್ನೂ ನಿಮ್ಮ ಬರಹದಲ್ಲಿ ಹೇಗೆ ಅಭಿವ್ಯಕ್ತಿಸುತ್ತೀರಿ...?

ತಿರುಮಲೇಶ್: ನನ್ನ ಬರಹದ ಬಗ್ಗೆ ನಾನೇ ಮಾತಾಡುವುದು ಸರಿಯಲ್ಲ. ಅದೂ ಅಭಿವ್ಯಕ್ತಿಯ ವಿಧಾನದ ಬಗ್ಗೆ. ಅದನ್ನು ನಾನು ನಿಮಗೆ ಹೇಗೆ ಹೇಳಲಿ? ಸಾಹಿತ್ಯವೆಂದರೆ ಭಾಷೆಯ ಜೊತೆ ನಿರಂತರ ನಡೆಸುವ ಸಂವಾದ, ಪದಗಳನ್ನು ಹೇಗೆ ಆರಿಸುತ್ತೀರಿ? ಅವುಗಳನ್ನು ಹೇಗೆ ವಾಕ್ಯಗಳಾಗಿ ಹೊಂದಿಸಿಕೊಳ್ಳುತ್ತೀರಿ, ರೂಪಕಗಳನ್ನು ಹೇಗೆ ಕಲ್ಪಿಸುತ್ತೀರಿ? ಇದರಲ್ಲಿ ಜಾಗೃತ ಪ್ರಜ್ಞ ಅಥವಾ ಸುಪ್ತ ಪ್ರಜ್ಞೆಯ ಪಾಲೆಷ್ಟು ಎಂದೆಲ್ಲಾ ಹೇಳುವುದು ಕಷ್ಟವಾಗುತ್ತದೆ.

ನಮ್ಮ ಓದುಗರ ಬಗ್ಗೆ...

ತಿರುಮಲೇಶ್: ನಮಗೆ ಹೆಚ್ಚೆಚ್ಚು ತಿಳುವಳಿಕೆಯ ಆಸಕ್ತಿ ಹೊಂದಿದ ಓದುಗರು ಬೇಕು, ಕೇವಲ ಯಾವುದೋ ವ್ಯಕ್ತಿ ಅಥವಾ ವಿಮರ್ಶಕನೆಂದ ಮಾತ್ರಕ್ಕೆ ಕೃತಿಯನ್ನು ಬದಿಗೆ ತಳ್ಳೋ ಓದುಗ ನಿಂದ ಹೆಚ್ಚೇನನ್ನೂ ನಿರೀಕ್ಷಿಸುವಂತಿಲ್ಲ. ಇಂಥ ಓದುಗನಿಗೆ ಸಾಹಿತ್ಯದ ಜೊತೆಗೆ ಜೀವನವನ್ನೂ ಅರ್ಥಮಾಡಿಕೊಳ್ಳಲು ಸಾಮರ್ಥ್ಯವಿರುವದಿಲ್ಲ. ಶ್ರದ್ಧೆಯ ಗಟ್ಟಿತನ ಬೆಳೆಸುವ ಮುಕ್ತ ಚಿಂತನೆ ಯನ್ನೂ ಹೊಸತನದ ಶೋಧನೆಯನ್ನೂ, ವ್ಯಕ್ತಿ ಯಾದವನು ಪ್ರಾರಂಭದಿಂದಲೂ ಬೆಳೆಸಿಕೊಳ್ಳಬೇಕು. ಇದನ್ನು ಸೃಷ್ಟಿಸುವ ವಿದ್ಯಾಭ್ಯಾಸಕ್ರಮ ಮೊದಲು ಸೃಷ್ಟಿಯಾಗಬೇಕು.

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...