ಬದುಕಿನ ಸಹಜ ಲಯಗಳನ್ನು ಶೋಧಿಸುವ ಕತೆಗಳು `ಸ್ನೇಕ್ ಟ್ಯಾಟೂ’


ಅತ್ಯಂತ ವೈವಿಧ್ಯಪೂರ್ಣವಾಗಿರುವ ಈ ಕತೆಗಳ ಪ್ರಪಂಚಕ್ಕೆ ಪ್ರವೇಶ ಮಾಡುವ ಮುನ್ನ ಕತೆಗಾರರಾದ ಗಿರಿರಾಜ್ ಅವರು ನಡೆಸಿರುವ ಕಥಾಸೃಷ್ಟಿಯ ಪೂರ್ವ ತಯಾರಿಯನ್ನು ಕಥೆಗಳ ಒಡಲಿನಿಂದಲೇ ಕಂಡುಕೊಳ್ಳಲು ಸಾದ್ಯ. ವರ್ತಮಾನದ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಸಂದರ್ಭಗಳ ಸಂಕೀರ್ಣತೆಯ ಸ್ಪಷ್ಟ ತಿಳುವಳಿಕೆ ಈ ನಿರೂಪಣೆಗಳ ಹಿಂದೆ ಕ್ರಿಯಾಪ್ರವೃತ್ತವಾಗಿರುವುದು ಕಂಡುಬರುತ್ತದೆ ಎನ್ನುತ್ತಾರೆ ಲೇಖಕ ಕೆ.ವೈ. ನಾರಾಯಣಸ್ವಾಮಿ. ಅವರು ಬಿ.ಎಂ.ಗಿರಿರಾಜ ಅವರು ಸ್ನೇಕ್ ಟ್ಯಾಟೂ ಕೃತಿಯಲ್ಲಿ ಬರೆದ ಮುನ್ನುಡಿ ನಿಮ್ಮ ಓದಿಗಾಗಿ...

ಗಿರಿರಾಜ್ ಕನ್ನಡ ಚಲನಚಿತ್ರದ ಕೊಳಕ್ಕೆ ಎಸೆದ ಕಲ್ಲಿನಂತೆ ಬಂದವರು. ಜಟ್ಟ-ಅಮರಾವತಿ-ಮೈತ್ರಿ-ಕನ್ನಡಿಗ ಮುಂತಾದ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರದ ವ್ಯಾಕರಣವನ್ನು ಬದಲಿಸಲೆತ್ನಿಸಿದ್ದ ದಿಟ್ಟ ಪ್ರಯೋಗಶೀಲ ನಿರ್ದೇಶಕರಾಗಿ ಈಗಾಗಲೇ ಹೆಸರು ಮಾಡಿದ್ದಾರೆ. ಗಿರಿರಾಜ್ ಬರೆದು ನಿರ್ದೇಶನ ಮಾಡಿದ “ಭಾರತಭಾಗ್ಯ ವಿಧಾತ” ಎಂಬ ಅಂಬೇಡ್ಕರ್ ಅವರನ್ನು ಕುರಿತ ಬೃಹತ್ ರಂಗಪ್ರಯೋಗವೂ ಕೂಡ ಗಿರಿರಾಜ್ ಅವರ ರೂಪಕಶಕ್ತಿಯ ದರ್ಶನವನ್ನು ಅನಾವರಣ ಮಾಡಿತ್ತು. ಗಿರಿರಾಜ್ ಅವರಿಗೆ ಕನ್ನಡ ರಂಗಭೂಮಿಯ ಸಹಚರ್ಯವಿರುವಂತೆ, ಕರಾವಳಿಯ ಯಕ್ಷಗಾನ ಪರಂಪರೆಯ ಹಿನ್ನೆಲೆಯೂ ಬೆನ್ನಿಗಿರುವುದರಿಂದ ಇವರ ನಿರೂಪಣೆಗಳಲ್ಲಿ ವರ್ಣಕ ಪ್ರತಿಭೆಯ ವಿಲಾಸವಿರುವುದನ್ನು ಯಾರಾದರೂ ಗುರುತಿಸಬಹುದು. ಗಿರಿರಾಜ್ ಅವರು ರಚಿಸಿರುವ ಇಲ್ಲಿನ ಕಥೆಗಳನ್ನು ಓದಲು ಆರಂಭಿಸುತ್ತಿದ್ದಂತೆ ಗಿರಿರಾಜ್ ಬದುಕನ್ನು ಅಲಕ್ಷಿತ ಮೊಗ್ಗಲಿನಿಂದ ನಿಂತು ಗ್ರಹಿಸುತ್ತಿರುವ ಸಂಗತಿ ನಮ್ಮ ಅರಿವಿಗೆ ಬರುತ್ತದೆ. ಕನ್ನಡ ಕಥನ ಪರಂಪರೆಯು ಈವರೆಗೆ ನಿರ್ಲಕ್ಷಿಸಿದ್ದ ಸಮಾಜದ ಅಂಚಿಗೆ ಚಲಿಸುವ ಧೈರ್ಯವನ್ನು ಹಾಗೂ ಆ ಅಂಚಿನಿಂದ ಕಾಣುವ ಬೆಚ್ಚಿ ಬೀಳಿಸುವ ನೋಟವನ್ನು ಕಟ್ಟಿಕೊಡುವ ಸೃಜನಶೀಲತೆಯನ್ನು ಗಿರಿರಾಜ್ ಗಳಿಸಿಕೊಂಡಿರುವುದು ಅಚ್ಚರಿಯ ಸಂಗತಿಯಾಗಿದೆ. ಈ ನಿರೂಪಣೆಗಳ ಸಾಂದ್ರತೆಯು ಸುಂದರವಾಗಿ ಎಡಿಟ್ ಮಾಡಿರುವ ಚಲನಚಿತ್ರದ ಬಿಗಿಯನ್ನು ಹೊಂದಿವೆ. ಆದ್ದರಿಂದಲೇ ಈ ಕತೆಗಳನ್ನು ಓದುವಾಗ ಇವು ನಮ್ಮ ಕಣ್ಣು ಮತ್ತು ಮನಸ್ಸು ಎರಡನ್ನು ಲಾಕ್ ಮಾಡಿಬಿಡುತ್ತವೆ. ಕತೆ ಕಟ್ಟುವ ಕತೆಗಾರಿಗೆ ಕತೆಯ ಒಡಲೊಳಗೆ ಹುದುಗಿರುವ ನಾಟಕೀಯತೆಯನ್ನು ನಿರೂಪಣೆಗೆ ಇಳಿಸುವುದು ಯಾವೊತ್ತಿಗೂ ಸವಾಲಿನ ಕೆಲಸ. ಅನೇಕ ಕತೆಗಾರರು ಅಪರೂಪದ ಕಥಾ ವಸ್ತುಗಳನ್ನು ಆಯ್ದುಕೊಂಡರೂ ನಿರೂಪಣೆಯಲ್ಲಿ ನಾಟಕೀಯತೆಯ ಮ್ಯಾಜಿಕ್ ಅನ್ನು ಮಿಸ್ ಮಾಡಿಕೊಳ್ಳುವವರೆ ಹೆಚ್ಚು. ಆದರೆ ಗಿರಿರಾಜ್ ಅವರ ಕಥನ ಪ್ರತಿಭೆಯ ಯಶಸ್ಸು ಅವರು ಕತೆಯೊಳಗೆ ನಾಟಕೀಯತೆಯನ್ನು ಸೂಕ್ಷ್ಮವಾಗಿ ಹೊರತೆಗೆಯುವಲ್ಲಿ ಅಡಗಿದೆ ಎಂದು ತಿಳಿದಿದ್ದೇನೆ. ಈ ಸಂಕಲನದ 9 ಕತೆಗಳ ವಸ್ತುಗಳನ್ನು ನಿರ್ವಹಿಸಿರುವ ಕ್ರಮವನ್ನು ಗಮನಿಸಿದರೆ ಗಿರಿರಾಜ್ ಪತ್ತೇದಾರಿ ನಿರೂಪಣೆಯ ತಂತ್ರವನ್ನು ಹದವಾಗಿ ಬೆರೆಸುವ ಕೌಶಲ್ಯವನ್ನು ಸಾಧಿಸಿದ್ದಾರೆ. ಈ ಕತೆಗಳ ವಿನ್ಯಾಸದ ಒಳ ನೇಯ್ಗೆಯು ತೇಜಸ್ವಿ ಅವರ ನಿರೂಪಣೆಯ ಮಾದರಿಯನ್ನು ಮುಂದುವರಿಸಿದಂತೆ ಕಾಣುತ್ತದೆ. ತೇಜಸ್ವಿ ಅವರಂತೆ ಗಿರಿರಾಜ್ ಕೂಡ ಅತ್ಯಂತ ಗಂಬೀರ ವಸ್ತುವನ್ನು ಲಘು ವಿಡಂಬನಾ ಶೈಲಿಯ ಮೂಲಕ ನಿರೂಪಿಸಲು ಯತ್ನಿಸುವುದರಿಂದ ಈ ಕತೆಗಳಿಗೆ ಭಾವತೀವ್ರತೆಯ ಜೊತೆಜೊತೆಗೆ ವೈನೋದಿಕ ದಾಟಿಯೂ ಪ್ರಾಪ್ತವಾಗಿರುವುದರಿಂದ ಓದಿನ ಪಯಣ ಸುಖದಾಯಕವಾಗಿದೆ. ಕೆಲವು ಕತೆಗಳಲ್ಲಿ ಮಾಜಿಕಲ್ ರಿಯಲಿಸಮ್ ಎನ್ನಬಹುದಾದ ನಿರೂಪಣಾ ಶೈಲಿಯೂ ಮಿಳಿತವಾಗಿರುವುದನ್ನು ಕಾಣಬಹುದಾಗಿದೆ.

ಸ್ನೇಕ್ ಟ್ಯಾಟೂ ಕಥಾ ಸಂಕಲನದಲ್ಲಿ ಓದುಗರನ್ನು ನಿಬ್ಬೆರಗಾಗಿಸುವ ಒಂಬತ್ತು ಕತೆಗಳನ್ನು ಕೂಡಿಸಿಲಾಗಿದೆ. ಅತ್ಯಂತ ವೈವಿಧ್ಯಪೂರ್ಣವಾಗಿರುವ ಈ ಕತೆಗಳ ಪ್ರಪಂಚಕ್ಕೆ ಪ್ರವೇಶ ಮಾಡುವ ಮುನ್ನ ಕತೆಗಾರರಾದ ಗಿರಿರಾಜ್ ಅವರು ನಡೆಸಿರುವ ಕಥಾಸೃಷ್ಟಿಯ ಪೂರ್ವ ತಯಾರಿಯನ್ನು ಕಥೆಗಳ ಒಡಲಿನಿಂದಲೇ ಕಂಡುಕೊಳ್ಳಲು ಸಾದ್ಯ. ವರ್ತಮಾನದ ಸಾಮಾಜಿಕ ರಾಜಕೀಯ ಹಾಗೂ ಧಾರ್ಮಿಕ ಸಂದರ್ಭಗಳ ಸಂಕೀರ್ಣತೆಯ ಸ್ಪಷ್ಟ ತಿಳುವಳಿಕೆ ಈ ನಿರೂಪಣೆಗಳ ಹಿಂದೆ ಕ್ರಿಯಾಪ್ರವೃತ್ತವಾಗಿರುವುದು ಕಂಡುಬರುತ್ತದೆ. ಅಲ್ಲದೆ ಭಾರತೀಯ ಜೀವನಕ್ರಮಗಳ ಸಾಮಾಜಿಕ ಸ್ತರಗಳು, ಊಳಿಗಮಾನ್ಯ ವ್ಯವಸ್ಥೆ, ಪಿತೃಪ್ರದಾನತೆಯ ಪುರುಷ ಅಹಂಕಾರದ ವರ್ತನೆಗಳು, ಅಂಬೇಡ್ಕರ್ ಅವರ ಚಿಂತನೆಗಳ ಗಾಢಪರಿಚಯ ಹಾಗೂ ಪ್ರಜಾಪ್ರಭುತ್ವದ ಆರೇಳು ದಶಕಗಳ ಪ್ರಯೋಗಗಳು, ತಲೆಮಾರುಗಳ ನಡುವಣ ಸಂಘರ್ಷಗಳು, ತಳ ಮತ್ತು ಕೆಳ ಸಮುದಾಯಗಳ ಅಭೀಪ್ಸೆಗಳು, ಪ್ರಚಲಿತ ಶಕ್ತ ರಾಜಕಾರಣದ ಅಧಿಕಾರ ವರಸೆಗಳು ಮುಂದಿನ ಭವಿಷ್ಯದ ಸವಾಲುಗಳು ಇಂತಹ ಹತ್ತಾರು ಸಂಗತಿಗಳನ್ನು ಗಿರಿರಾಜ್ ತೀವ್ರವಾದ ವಿಶ್ಲೇಷಣೆಗೆ ಒಳಗು ಮಾಡಿರುವ ಚಿಂತನೆಗಳು ಈ ಕತೆಗಳಲ್ಲಿ ಮೈಪಡೆದುಕೊಂಡಿರುವುದನ್ನು ಓದಿನ ಮೂಲಕ ಗ್ರಹಿಸಬಹುದು. ಇಂತಹ ಸಾಂಸ್ಕೃತಿಕ ಸಿದ್ಧತೆಗಳಿಂದ ಹೊರ ಹೊಮ್ಮಿರುವ ಕಥನವಾಗಿರುವ ಕಾರಣ ಈ ಕತೆಗಳು ಓದುಗರನ್ನು ಮುಕ್ತವಾದ ಲೋಕ ಸಂವಾದಕ್ಕೆ ಆಹ್ವಾನಿಸುತ್ತವೆ. ಗಿರಿರಾಜ್ ಅವರ ಕಲ್ಪಕತೆಗೆ ನೀರೆರೆಯುತ್ತಿರುವ ಮತ್ತೊಂದು ತಲಪರಿಗೆಯೆಂದರೆ ಅವರು ನಿರಂತರವಾಗಿ ಅಭ್ಯಾಸ ಮಾಡುತ್ತಿರುವ ಜಾಗತಿಕ ವಾದ ಶ್ರೇಷ್ಠ ಸಿನಿಮಾಗಳ ಪ್ರತಿಮಾ ನಿರ್ಮಾಣದ ವಿನ್ಯಾಸಗಳು ಬೆನ್ನಿಗಿರುವಂತೆ ಕಾಣುತ್ತದೆ. ಇಂತಹ ಶ್ರೇಷ್ಠ ಸೃಜನ ಸಂಪನ್ಮೂಲಗಳಿAದ ಪರಿಣಿತಿ ಪಡೆದಿರುವ ಗಿರಿರಾಜ್ ಅದರ ಅತ್ಯುತ್ತಮ ಫಲಿತವನ್ನು ತನ್ನ ಕತೆಗಳ ಮೂಲಕ ಕನ್ನಡ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ.

ಈ ಕತೆಗಳಲ್ಲಿ ಕಾಣುವ ಜಗತ್ತು ಬದುಕಿನ ಸಹಜ ಲಯಗಳನ್ನು ಕಳೆದುಕೊಂಡಿರುವ ರೂಕ್ಷ ಪ್ರಪಂಚವಾಗಿರುವುದನ್ನು ಗಿರಿರಾಜ್ ಗುರುತಿಸುತ್ತಾರೆ. ಈ ಕತೆಗಳ ಪಾತ್ರಗಳು ಎದುರಿಸುತ್ತಿರುವ ಪ್ರಶ್ನೆಗಳನ್ನು ಸಮಾಜ ಅವರ ಮೇಲೆ ಬಲವಂತವಾಗಿ ಏರಿರುವುದನ್ನು ಗಮನಿಸಬಹುದು. ತಲೆಮಾರುಗಳ ನಡುವಣ ತಲ್ಲಣಗಳು ಗಿರಿರಾಜ್ ಅವರನ್ನು ನಿರಂತರವಾಗಿ ಕಾಡುತ್ತಿರುವ ಸ್ಥಾಯಿಭಾವವಾಗಿ ಕಾಣುತ್ತದೆ. ಬದುಕಿನ ಸಹಜ ವ್ಯಾಪಾರಗಳನ್ನು ಒಪ್ಪಿಕೊಳ್ಳದ ಹಿಪೋಕ್ರಿಟಿಕಲ್ ನಡವಳಿಕೆಗಳನ್ನು ಬತ್ತಲೆಗೊಳಿಸುವಕಡೆ ಕಥೆಗಳ ಗುರಿ ಇರುವಂತೆ ಕಾಣುತ್ತದೆ. ರತಿ, ಮಂಗಳೆ, ಲತೀಫ ಮುಂತಾದ ಸ್ರೀ ಪಾತ್ರಗಳು ಅಪ್ಪೆಮಿಡಿಭಟ್ಟ, ಶ್ರವಣ, ಕಜ್ಜಿ ಮುಂತಾದ ಗಂಡು ಪಾತ್ರಗಳು ತಮ್ಮನ್ನು ವಿವಿಧ ವಿನ್ಯಾಸಗಳಲ್ಲಿ ಸೆರೆ ಹಿಡಿಯುತ್ತಿರುವ ಏರಿಕೆಯ ಮೌಲ್ಯಗಳ ವಿರುದ್ಧ ಪ್ರತಿರೋಧ ತೋರುತ್ತಿರುವವರೇ ಆಗಿದ್ದಾರೆ. ಆದಕಾರಣ ಲೋಕದ ಕಣ್ಣಲ್ಲಿ ಈ ಪಾತ್ರಗಳು ಸಮಾಜದ ವಿರುದ್ಧ ಬಂಡೇಳುತ್ತಿರುವಂತೆ ಕಾಣುತ್ತವೆ. ಹಲವು ಬಗೆಯ ಮನೋಪಾತಳಿಯ ಪಾತ್ರಗಳ ವೈವಿದ್ಯತೆಯೂ ಈ ಕತೆಗಳ ಮತ್ತೊಂದು ಗುಣಾತ್ಮಕವಾದ ಸಂಗತಿಯಾಗಿದೆ. ಈ ಕತೆಗಳ ಮತ್ತೊಂದು ವೈಶಿಷ್ಟತೆ ಎಂದರೆ ಮನುಷ್ಯರ ಬೇಸಿಕ್ ಇನ್ಸ್ಟಿಕ್ಟ್ ಆಗಿರುವ ಲೈಂಗಿಕ ಮನೋವೃತ್ತಿಗಳ ಕುರಿತ ನಿರ್ಬಿಡೆಯಾದ ವಿವರಗಳು ಓದುಗರ ಸಂಪ್ರದಾಯಿಕ ಮನಸ್ಸಿಗೆ ಶಾಕ್ ನೀಡುತ್ತವೆ. ಓದುಗರನ್ನು ಕೇವಲ ಬೆಚ್ಚಿಸುವ ಕಾರ್ಯ ಮಾತ್ರ ಈ ಬರವಣಿಗೆಯ ಉದ್ದೇಶವಿರುವಂತೆ ಕಾಣುವುದಿಲ್ಲ. ಬದಲಿಗೆ ಸಮಾಜ ಜೀವನದಲ್ಲಿ ಬಚ್ಚಿಟ್ಟಿರುವ ಅಥವಾ ಬಚ್ಚಿಡಲು ಪ್ರಯತ್ನಿಸುತ್ತಿರುವ ಸಹಜ ಲೈಂಗಿಕ ವರ್ತನೆಗಳನ್ನು ಗುಟ್ಟುಗಳಾಗಿಸುವ ಹುಸಿ ಮನೋಧರ್ಮಕ್ಕೆ ಕನ್ನಡಿ ಹಿಡಿಯುವ ಕೆಲಸವನ್ನು ಈ ಕತೆಗಳು ಮಾಡುತ್ತವೆ.

ಕನ್ನಡ ಕಥಾ ಪರಂಪರೆಯ ದೃಷ್ಟಿಯಿಂದ ಈ ಸಂಕಲನ ಹೊಸ ಅನುಭವಲೋಕವೊಂದರ ಸೇರ್ಪಡೆಯಾಗಿದೆ. ಇಲ್ಲಿನ ಎಲ್ಲಾ ಕತೆಗಳು ಪ್ರಕೃತಿ ಮತ್ತು ಮನುಷ್ಯರ ನಡುವಣ ಕೊಂಡಿ ಕಳಚಿರುವ ಜೈವಿಕ ಸಾಮರಸ್ಯವನ್ನು ಹುಡುಕುವ ಹಂಬಲವನ್ನು ಪ್ರಕಟಿಸುತ್ತವೆ. ವ್ಯಕ್ತಿ ವಿಶಿಷ್ಟತೆಯಾಗಿ ಕಾಣಿಸುವ ಅಸಹಜ ನಡವಳಿಕೆಗಳನ್ನು ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಕೂಡ ಈ ಕಥನಗಳು ಪರೀಕ್ಷೆಗೆ ಒಡ್ಡುತ್ತವೆ. ಇಲ್ಲಿನ ಒಂಬತ್ತು ಕತೆಗಳು ವಸ್ತು, ತಂತ್ರ ಮತ್ತು ಪರಿಣಾಮದ ದೃಷ್ಟಿಯಿಂದ ಸಫಲತೆಯನ್ನು ಸಾಧಿಸಿವೆ ಎಂದೇ ಹೇಳಬೇಕು. ಎಲ್ಲಾ ಕಥೆಗಳ ಓದು ನಮಗೆ ಪರಿಚಿತವಿರುವ ಮನುಷ್ಯರ ಅಪರಿಚಿತಮುಖಗಳನ್ನು ಧುತ್ತನೆ ತೋರಿಸುವ ಮಾಯಕದ ಆಯಾಮವನ್ನು ಪಡೆದುಕೊಂಡಿವೆ.
ಈ ಸಂಕಲನದ ಮೂರು ಕತೆಗಳು ಗಿರಿರಾಜ್ ಅವರ ಪ್ರತಿಭೆಯ ಆಳ ವಿಸ್ತಾರವನ್ನು ಪ್ರಾತಿನಿಧಿಕವಾಗಿ ಪರಿಚಯಿಸುವ ಕಾರಣದಿಂದ ಭವಿಷ್ಯವಿಲ್ಲದ ಭವಿಷ್ಯ-ರತಿಯೆಂಬ ದೇಶದ್ರೋಹಿ-ಪ್ರೀತಿಗೊಂದು ಆಯುರ್ವೇದಿಕ್ ಮದ್ದು ಎಂಬ ಕತೆಗಳನ್ನು ಓದಿದ ನನ್ನ ಅನುಭೂತಿಯನ್ನು ಇಲ್ಲಿ ದಾಖಲಿಸಿದ್ದೇನೆ.

ಪ್ರೀತಿಗೊಂದು ಆಯುರ್ವೇದಿಕ್ ಎಂಬ ಹೆಸರಿನ ಕತೆ. ಕರ್ನಾಟಕದ ಕರಾವಳಿಯಲ್ಲಿ ನಡೆಯುತ್ತಿರುವ ಪ್ರಸ್ತುತ ಸಂಘಟನೆಗಳಿಗೆ ಹಿಡಿದ ಕನ್ನಡಿಯಾಗಿದೆ. ನದಿ ನದಗಳಿಂದ ಸಮೃದ್ದವಾಗಿರುವ ಕಡಲತೀರದ ಜೀವವೃಕ್ಷಕ್ಕೆ ಕೋಮುವಾದದ ಗೆದ್ದಲು ಹತ್ತಿರುವ ಸಂಗತಿಯನ್ನು ರೂಪಕಾತ್ಮಕವಾಗಿ ಕಟ್ಟಿಕೊಟ್ಟಿರುವ ಕತೆಯಾಗಿದೆ ಇದು. ಇಲ್ಲದ ಧರ್ಮ ಮತ್ತು ದೇವರು ಹೆಸರಿನಲ್ಲಿ ಮುಟ್ಟುಚಿಟ್ಟುಗಳ ಬೇಧಕಲ್ಪಿಸಿ ಹಿಂಸೆಯನ್ನು ಉತ್ಪಾದಿಸುವ ನೆಲವಾಗಿ ಕರಾವಳಿಯನ್ನು ಮಾರ್ಪಡಿಸಿದ ಕೋಮು ರಾಜಕೀಯ ಶಕ್ತಿಗಳ ಬಗೆಗೆ ಈ ಕತೆ ಸೂಕ್ಷ್ಮವಾದ ಒಳನೋಟಗಳನ್ನು ಕೊಡುತ್ತದೆ. ಪಾರಂಪರಿಕವಾಗಿ ಆಯುರ್ವೇದದ ಮದ್ದು ಮಾಡುವ ವೈದಿಕ ಕುಟುಂಬವೊಂದರ ಮನಸ್ಸಿನ ಕಾಯಿಲೆಯನ್ನು ಡಯ್ಗನೈಸ್ ಮಾಡಿ ರೋಗ ಮೂಲವನ್ನು ತೋರಿಸುವ ಸುಂದರವಾದ ಕತೆ ಇದು. ಇಸ್ಲಾಂ ಅನ್ನು ದ್ವೇಷಿಸುತ್ತಿದ್ದ ವೈದಿಕ ಪಂಡಿತರ ಕುಟುಂಬಕ್ಕೆ ಆವರಣಕ್ಕೆ ದೇಹದ ಮೇಲೆ ಸ್ವಾಧೀನ ಕಳೆದುಕೊಂಡಿರುವ ಗಂಡನನ್ನು ಉಪಚರಿಸುವಂತೆ ಕೋರಿ ದೂರದ ತಾಂಜಾನಿಯ ಸಂಜಾತೆ ನಸ್ರಿನ್ ಎಂಬ ಸುಂದರ ಹೆಣ್ಣಿನ ಪ್ರವೇಶವೇ ಈ ಕತೆಯ ಜೀವಕೇಂದ್ರ. ಆಯುರ್ವೇದ ಮದ್ದಿನಿಂದ ನಿಧಾನವಾಗಿ ರೋಗಿ ಸಲಿಂ ಭಟ್ಕಳ್ಗೆ ಜೀವಂತಿಕೆ ಹಿಂತಿರುಗಿ ಬರುವಂತೆ ಆ ಮನೆಯ ವ್ಯಕ್ತಿಗಳಿಗೆ ಧರ್ಮಕ್ಕಿಂತ ಮನುಷ್ಯತ್ವ ದೊಡ್ಡದ್ದು ಎಂಬ ಪಾಠವನ್ನು ನಸ್ರಿನ್ ಬೋಧಿಸದೆಯೇ ತನ್ನ ಜೀವನಪ್ರಿತಿಯಿಂದಲೇ ಮನವರಿಕೆ ಮಾಡಿಕೊಡುತ್ತಾಳೆ. ಧರ್ಮಭೀರುಗಳಾಗಿದ್ದ ಪಂಡಿತರ ಮನೆಯ ಗಂಡಸರ ಆಲೋಚನೆಗಳಲ್ಲಿ ಸುಧಾರಣೆಯನ್ನು ಕಾಣಿಸುವ ಕತೆ ನಮ್ಮ ವರ್ತಮಾನದ ದಿಕ್ಕೆಟ್ಟ ಮನಸ್ಥಿತಿಗೆ ಮದ್ದುಮಾಡುವಂತಿದೆ.

ರತಿಯೆಂಬ ದೇಶದ್ರೋಹಿ ಕತೆ ಚಲನಚಿತ್ರ ಕತೆಯಂತೆ ತನ್ನ ರೋಚಕತೆಯಿಂದ ಗಮನ ಸೆಳೆಯುತ್ತದೆ. ರತಿ ಎಂಬ ಹರೆಯದ ಹುಡುಗಿ ಜಡ್ಡು ಗಟ್ಟಿದ ಪುರುಷಪ್ರಧಾನ ಮೌಲ್ಯಗಳ ವಿರುದ್ಧ ಬಂಡಾಯವೇಳುವ ಪಾತ್ರವಾಗಿ ಚಿತ್ರಿತಳಾಗಿದ್ದಾಳೆ. ತನ್ನ ತಂದೆತಾಯಿಗಳ ವಿಷಮ ದಾಂಪತ್ಯಕ್ಕೆ ರೋಸಿ ಹೋಗಿದ್ದ ರತಿ ತನ್ನ ಸ್ವಂತಿಕೆಯನ್ನು ಅರಿಸಿ ಹೊರಟ ಸಾಹಸಿ ಹೆಣ್ಣು. ಸಮಾಜ ಒಪ್ಪಿತ ಹೆಣ್ಣುತನ, ಹೆಣ್ಣಿನ ದೇಹಭಾಷೆ ಮತ್ತು ಅಧೀನತೆಯನ್ನು ಪ್ರತಿಯೊಂದು ಹಂತದಲ್ಲೂ ಪ್ರಶ್ನಿಸುವ ಮನೋಸ್ಥೈರ್ಯ ವನ್ನು ಬೆಳಸಿಕೊಂಡವಳು ತನ್ನ ಇಷ್ಟದಂತೆ ಸಿನಿಮಾ ತಾರೆಯಾಗಿ ಪ್ರಸಿದ್ದಿ ಪಡೆದರೂ ಸಿನಿಮ ಎಂಬ ಪುರುಷ ಆಳ್ವಿಕೆಯ ಲೋಕದಲ್ಲಿ ಹೆಣ್ಣ ನೋಟಕ್ರಮವನ್ನು ಬಿಂಬಿಸುವ ಚಿತ್ರ ಮಾಡಿದಾಗ ಅದೇ ಚಿತ್ರರಂಗ ಅವಳನ್ನು ದೇಶದ್ರೋಹಿಯಾಗಿ ನಿಲ್ಲಿಸುವ ವಿಷಾದವನ್ನು ಕತೆ ಕಟ್ಟಿಕೊಡುತ್ತದೆ. ರತಿಯ ಬೆಳವಣಿಗೆಯಲ್ಲಿ ಶಿಕ್ಷಣ ರಾಜಕಾರಣ ಮಾರುಕಟ್ಟೆ ಮಾಧ್ಯಮಗಳು ಹೇಗೆ ಸ್ತ್ರೀವಿರೋಧಿಯಾಗಿವೆ ಎನ್ನುವುದನ್ನು ಕತೆ ಅನಾವರಣ ಮಾಡಿದೆ. ಈ ಕತೆಯಲ್ಲಿ ರತಿ ಕೊನೆಗೂ ಒಬ್ಬ ಗಂಡಿನ ಬಳಿಯೇ ಆಶ್ರಯಪಡೆಯುವುದು ಮಾತ್ರ ತಣ್ಣಗಿನ ವಿಷಾದವನ್ನು ಮೂಡಿಸುತ್ತದೆ.

ಭವಿಷ್ಯವಿಲ್ಲದ ಭವಿಷ್ಯ ಎಂಬ ಕತೆ ನಮ್ಮ ಆಧುನಿಕ ಸಮಾಜಗಳ ಮುಂದಿನ ಹಂತವನ್ನು ಕಾಲಜ್ಞಾನದಂತೆ ಚಿತ್ರಿಸಿ ಭಯಗೊಳಿಸುತ್ತದೆ. ಈ ಕತೆಯು ನಡೆಯುವ ಕಾಲ್ಪನಿಕ ಸಮಾಜ ಮುಕ್ತ ಮಾರುಕಟ್ಟೆಯ ನೀತಿಗಳಿಂದಾಗಿ ಆಧುನಿಕೋತ್ತರ ಕಾಲಘಟ್ಟದಂತೆ ಚಿತ್ರಿತವಾಗಿದೆ. ಸಮಾಜವನ್ನು ಕೇವಲ ಎರಡು ಗುಂಪುಗಳಾಗಿ ಡಿಜಿಟಲ್ ಡೀವೈಡ್ ಮಾಡಲಾಗಿದೆ. ಅಫ್ಲುಯಂಟ್ರೇಖೆಯ ಮೇಲಿನವರು ಮತ್ತು ಅಫ್ಲುಯಿಂಟ್ ರೇಖೆಯ ಕೆಳಗಿನವರು ಎಂಬ ವರ್ಗೀಕರಣದಿಂದ ಛೇದಿಸಲ್ಪಟ್ಟ ಜನ ಸಮುದಾಯಗಳು ಬದುಕುತ್ತಿರುವ ಒಂದು ಸಮಾಜವನ್ನು ಗಿರಿರಾಜ್ ಚಿತ್ರಿಸಿದ್ದಾರೆ. ಶೋಷಣೆ ಹಿಂಸೆ ಮತ್ತು ಅಭದ್ರತೆಗಳು ಮಾನವೀಯತೆಯನ್ನು ಪೂರ್ಣವಾಗಿ ನಾಶದ ಅಂಚಿಗೆ ತಂದಿರುವ ಎಲ್ಲಾ ಸಂಬಂಧಗಳು ಹಣದ ಮೂಲಕವೇ ಅರ್ಥೈಸಲ್ಪಡುವ ಕಾಲ ಬಂದರೆ ಅದು ಎಷ್ಟು ಭೀಕರವಾಗಿರಬಲ್ಲದು ಎಂಬುದನ್ನು ವಿಡಂಬನಾತ್ಮಕವಾಗಿ ಈ ಕತೆ ಸೂಚಿಸುತ್ತದೆ. ಭಾರತೀಯ ಸಮಾಜವನ್ನು ಆತ್ಮನಿರ್ಭರವಾಗಿಸುವತ್ತ ನಮ್ಮ ಸರ್ಕಾರಗಳು ಅಭಿವೃದ್ಧಿಯಂತ್ರವನ್ನು ಮುನ್ನಡೆಸುತ್ತಿರುವ ಗುರಿಗಳ ಅಂತಿಮ ನಿಲ್ದಾಣದಂತೆ ಈ ಕತೆ ಓದುಗರನ್ನು ಚಿಂತೆಗೆ ದೂಡುವಷ್ಟು ಶಕ್ತಾಗಿದೆ.

ಇನ್ನು ಗಲೀಜು ಕತೆಯ ಕಜ್ಜಿ ದೇವನೂರರ ಅಮಾಸ ಆಧುನಿಕ ಅವತಾರವೆನ್ನಿಸಿಬಿಡುವಷ್ಟು ಸಾದೃಶ್ಯವಾಗಿದೆ. ಮಂಗಳAಗೆ ಮೊದಲಿಂದಲೂ ಹಾಗೆ ಎನ್ನುವ ಕತೆ ಹೆಣ್ಣು ಲೈಂಗಿಕತೆಯ ಸಂಕಥನವನ್ನು ಬೆಳೆಸುವಷ್ಟರ ಮಟ್ಟಿಗೆ ಪ್ರಬುದ್ಧತೆಯನ್ನು ಸಾಧಿಸಿದೆ. ಹೀಗೆ ಇಲ್ಲಿನ ಪ್ರತಿಯೊಂದ ಕತೆಯು ನಮ್ಮ ನೆನಪು ವಾಸ್ತವ ಮತ್ತು ಭವಿಷ್ಯಗಳ ಜೊತೆಗೆ ತಳಕು ಹಾಕಿಕೊಳ್ಳುವುದರಿಂದ ನಮ್ಮನ್ನು ಕಾಡುವ ಮಾತ್ರವಲ್ಲ ಬೆಳೆಸುವ ಶಕ್ತ ಕತೆಗಳಾಗಿವೆ. ಕಥಾ ನಿರೂಪಣೆಯಲ್ಲಿ ಗಿರಿರಾಜ್ ಮತ್ತಷ್ಟು ಸಂಯಮ ತೋರಿದ್ದಾದರೆ ಕನ್ನಡ ಶ್ರೇಷ್ಠಕತೆಗಾರರಾಗಿ ರೂಪಗೊಳ್ಳುತ್ತಾರೆ ಎನ್ನುವ ವಿಶ್ವಾಸವನ್ನು ಈ ಕಥನಗಳು ನನ್ನಲ್ಲಿ ಮೂಡಿಸಿವೆ.

-ಕೆ.ವೈ.ನಾರಾಯಣಸ್ವಾಮಿ

ಕೆ.ವೈ. ನಾರಾಯಣಸ್ವಾಮಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ...

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...