ಬದುಕು ಮತ್ತು ಜೀವನ ಮೌಲ್ಯಗಳ ಕುರಿತಾದ ವಿಚಾರಗಳನ್ನು ತಿಳಿಸುವಂತಹ ಕೃತಿ


"ಗೊರೂರು ಅವರ ಕೃತಿಗಳನ್ನು ಓದುತ್ತಿದ್ದಾಗ ಒದಗುತ್ತಿದ್ದ ನಿಷ್ಕಲ್ಮಶ, ತಿಳಿ ಹಾಸ್ಯ ಭೂಮಿಕೆಗಳು ಮತ್ತೆ ಸಿಕ್ಕಿದ್ದು ಶ್ರೀನಿವಾಸ ವೈದ್ಯರ ಕೃತಿಗಳಲ್ಲಿ. ಅವರ 'ಮನಸುಖರಾಯನ ಮನಸು', ನನ್ನ ಮೆಚ್ಚಿನ ಕೃತಿಗಳಲ್ಲೊಂದು" ಎನ್ನುತ್ತಾರೆ ಸಂಜಯ್‌ ಮಂಜುನಾಥ್‌. ಅವರು ಲೇಖಕ ಶ್ರೀನಿವಾಸ ವೈದ್ಯ ಅವರ ‘ಮನಸುಖರಾಯನ ಮನಸು’ ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...

ಕೆಲವು ಪುಸ್ತಕಗಳೇ ಹಾಗೆ ಅವು ನೀಡುವ ಖುಷಿ ಹೇಳಲಾಗದು. ಅಂತಹ ಒಂದು ಪುಸ್ತಕ ಮನಸುಖರಾಯನ ಮನಸು. ಎಂಥ ಚಂದದ ಟೈಟಲ್ 'ಮನಸುಖರಾಯನ ಮನಸು', ಅಷ್ಟೇ ಚೆಂದದ ಬರಹಗಳು ಈ ಕೃತಿಯ ಒಳಗೂ ಇದೆ. ಧಾರವಾಡದ ಭಾಷೆ ಓದುವುದಕ್ಕೆ ಆಚೀಚೆ ಆಗುತ್ತಿದ್ದರೂ, ಈ ವರ್ಷ ಓದಿದ ಪುಸ್ತಕಗಳಲ್ಲಿ ತುಂಬಾ ಖುಷಿ ಕೊಟ್ಟಂತಹ ಕೃತಿ.
#ಪುಸ್ತಕದಹುಳು
ಲೇಖಕರು ಇಲ್ಲಿಯವರೆಗೂ ಸಂಗ್ರಹಿಸಿರುವ ಪುಸ್ತಕಗಳಲ್ಲಿ ಕೆಲವೊಂದು ಪುಸ್ತಕಗಳ ಬಗ್ಗೆ ಹೇಳುತ್ತಾ, ಅವುಗಳನ್ನು ಓದದೇ ತಮ್ಮದೇ ಆದ ಕಥೆಗಳನ್ನು ಅವುಗಳ ಬಗ್ಗೆ ಕಟ್ಟುತ್ತಾ, ಅದರಲ್ಲೇ ತಮ್ಮ ಮನಸ್ಸನ್ನು ಹರಿಬಿಡುತ್ತಾ, ಓದುಗರನ್ನು ಅವರ ಕಲ್ಪನಾ ವಿಲಾಸದೊಳಗೆ ಕರೆದೊಯ್ಯುತ್ತಾರೆ. ಆ ಕಲ್ಪನಾ ವಿಲಾಸವೇ ಪುಸ್ತಕದ ಹುಳು.
#ಶ್ರದ್ಧಾ
ತಮ್ಮ ತಂದೆಯವರ ಸರ್ವರೂಪವನ್ನು ಸಾದರಪಡಿಸುತ್ತಾ, ಅವರಿಗೂ ತಂದೆಯವರಿಗೂ ಇದ್ದ 'ತಲಿ ಬೋಳಿಸಿಕೊಳ್ಳುವ' ಎಂಬ ಅನ್ಯೋನ್ಯ ಬಾಂಧವ್ಯವನ್ನು ವಿವರಿಸುತ್ತಾ, ತಾವು ಕೆಲಸಕ್ಕೆಂದು ಮುಂಬೈಗೆ ಹೊರಟು ನಿಂತಾಗ ಹೊಸರೂಪ ಪಡೆದ ತಂದೆಯವರ ಭಾವನಾತ್ಮಕತೆಯನ್ನು ಎಂದೆಂದಿಗೂ ಅಳಿಯದಂತೆ ತಮ್ಮ ಮನಸ್ಸಿನೊಳಗೆ ಕಾಪಿಟ್ಟುಕೊಂಡಿರುವ ಬರಹವೇ ಶ್ರದ್ಧಾ.
#ಬಾಶಿಂಗಬಲ
ತನ್ನ ಅಣ್ಣನ ಮಗನ ಮದುವೆಗೆ ಬಾಷಿಂಗ ತರುವುದಕ್ಕೆ ಹೋಗಿ, ತನ್ನ ವಿಧವಾ ಜೀವನವನ್ನು ಮುಕ್ತಿಗೊಳಿಸಲು ಮುಂದೆ ಬಂದ ವಿಧುರನೊಂದಿಗೆ ಕಲ್ಯಾಣಯೋಗ ಪಡೆದುಕೊಂಡ ಸಣ್ಣಿರವ್ವ ಮತ್ತು ಮಲ್ಲಿಕಾರ್ಜುನರ ವಿಚಿತ್ರ ಪ್ರೇಮಕಥೆ ಬಾಶಿಂಗ ಬಲ.
#ತ್ರಯಸ್ಥ
ಬಾಲ್ಯಾವಸ್ಥೆಯಿಂದ ಸ್ನೇಹಿತರಾಗಿದ್ದ ಶೀನೂ ಮತ್ತೆ ಕಮಲಿಯೂ ಹರೆಯಕ್ಕೆ ಕಾಲಿಡುತ್ತಿದ್ದಂತೆ ತಮಗೇ ಅರಿಯದಂತೆ ಪ್ರೇಮದ ಬಲೆಯೊಳಗೆ ಸಿಕ್ಕಿ, ಅದು ಹರಿದು ಹೋಗಿ, ಕಾಲಾನಂತರ ಸಿಕ್ಕಾಗಲೂ ಅವರ ಅಂತರಂಗಗಳನ್ನು ಚಡಪಡಿಸುವಂತೆ ಮಾಡಿದ ಕಥೆಯನ್ನೊಳಗೊಂಡ ಪ್ರೇಮಕಥೆ ತ್ರಯಸ್ಥ.
#ಗಾಯಕವಾಡದಾದಾ
ಶಾಲೆಯಲ್ಲಿ ಬೆಪ್ಪುತಕ್ಕಡಿಯಾಗಿದ್ದು, ನಂತರದ ಜೀವನದ ಹೊರಗಡೆ ಪ್ರಪಂಚದಲ್ಲಿ ಸಿರಿವಂತರಿಂದ ಹಿಡಿದು ಬಡವರವರೆಗೂ 'ಬೇಕಾದವ'ನಾಗಿದ್ದ, ಒಂಚೂರು ಕಲ್ಮಶವಿಲ್ಲದ ಎಲ್ಲರಿಂದಲೂ ಪ್ರೀತಿಸಲ್ಪಡುತ್ತಿದ್ದ, ಸಾದಾಸೀದ ವ್ಯಕ್ತಿಯಾಗಿದ್ದ ಲೇಖಕರ ಆತ್ಮೀಯ ಗೆಳೆಯ ದಾದಾ ಬಗೆಗಿನ ಬರಹವೇ ಗಾಯಕವಾಡ ದಾದ. ತುಂಬಾ ಹಿಡಿಸಿದ ಬರಹ ನನಗೆ.
#ಗದೇಪಂಚವೀಶಿ
ಮುಂಬಯಿಯಲ್ಲಿದ್ದುಕೊಂಡು, ತನ್ನ ಹಳ್ಳಿ ಮತ್ತು ತನ್ನಪ್ಪನನ್ನು ಬೈದುಕೊಂಡು, ಸುಂದರಿಯೊಬ್ಬಳ ಪ್ರೇಮಕ್ಕೆ ಹಪಾಹಪಿಸುತ್ತಾ, ಅದೇ ಸುಂದರಿಯಿಂದಾಗಿ ಪೋಲಿಸ್ ಸ್ಟೇಷನ್ ಮೆಟ್ಟಿಲು ಹತ್ತಿ, ಸುಂದರಿಯ ಕುರೂಪಿತನ ಮತ್ತು ತನ್ನಪ್ಪನ ಹೆಸರಿನ ಶಕ್ತಿಯಿಂದ ಹೊರಬರುವ ಯಂಕಣ್ಣನ ವಿನೋದ ಪ್ರೇಮಕಥೆಯೇ ಗದೇ ಪಂಚವೀಶಿ. ಹೀಗೆ ಧಾರವಾಡ ಪೇಡದಂತ ಆರು ಬರಹಗಳು ಮನಸುಖರಾಯನ ಮನಸು ಪೊಟ್ಟಣದೊಳಗೆ ಸಿಕ್ಕುತ್ತವೆ.

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...