ಕಲಬುರಗಿ ಅಂದ್ರ ಏನನ್ಕೊಂಡೀರಿ: ಬಹುಬಾಶೆಗಳ ತವರು

Date: 02-02-2020

Location: ಕಲಬುರಗಿ


ಕಲಬುರಗಿ ಮೊದಲಿನಿಂದಲೂ ಬಹುಸಂಸ್ಕ್ರುತಿಯ, ಬಹುಬಾಶೆಯ ನೆಲ. ಕಲಬುರಗಿಯಲ್ಲಿ ಸುಮಾರು ಮೂವತ್ತಯ್ದು-ನಲವತ್ತು ಬಾಶೆಗಳು ಇಂದು ಬದುಕಿವೆ. ಬಿನ್ನ ಮನೆತನಕ್ಕೆ ಸೇರುವ ದೊಡ್ಡ-ಸಣ್ಣ ಬಾಶೆಗಳು ಇಲ್ಲಿವೆ.
ಕನ್ನಡ ಇಲ್ಲಿ ಮೊದಲಿನಿಂದಲೂ ಇರುವ ಬಾಶೆ. ಕಲಬುರಗಿ ಎಂಬ ಹೆಸರೆ ಕನ್ನಡದಲ್ಲಿದೆ. ಅಶೋಕನ ಪ್ರಿಯವಾದ ಕನಗನಹಳ್ಳಿ (ಅಶೋಕ ಇಲ್ಲಿಯೆ ಸತ್ತಿರಬೇಕು ಎಂಬುದು ಒಂದು ವಿಚಾರ), ಸನ್ನತಿ, ಮಸ್ಕಿ ಮೊದಲಾದ ಕಡೆಗಳಲ್ಲಿ ಪಾಲಿ ಬಾಶೆಯ ಶಾಸನಗಳು ಸಿಗುತ್ತವೆ. ಆನಂತರ ಇದು ಶಾತವಾಹನರ ಬಳಕೆಯಲ್ಲಿ ಪ್ರಾಕ್ರುತವಾಗಿ ಮುಂದುವರೆಯುತ್ತದೆ. ಕನಗನಹಳ್ಳಿ ಒಳಗೊಂಡು ಹಲವಾರು ಪ್ರದೇಶಗಳಲ್ಲಿ, ಮಳಕೇಡ, ಕೊಪಣದಂತಾ ಜಯ್ನ ಪ್ರದೇಶಗಳಲ್ಲಿ ಮಾತ್ರವಲ್ಲದೆ ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಮತ್ತು ಇಂದಿನ ಮಹಾರಾಶ್ಟ್ರ ಪರಿಸರದಲ್ಲಿ ಪ್ರಾಕ್ರುತ ಹಲಕಾಲ ಬಳಕೆಯಲ್ಲಿದ್ದಿತು. ಕಲಬುರಗಿ ಹತ್ತಿರದಲ್ಲಿಯೆ ಇದ್ದ ರಾಜಕೇಂದ್ರಗಳಾಗಿದ್ದ ಮಳಕೇಡದಾಗ, ಇನ್ನೊಂದೆಡೆ ಕಲ್ಯಾಣದಾಗ, ಹಾಗೆಯೆ ವಿದ್ಯಾಕೇಂದ್ರಗಳಾಗಿದ್ದ ನಾಗಾವಿ, ಸಾಲೋಟಗಿ ಮೊದಲಾದ ಕಡೆಗಳಲ್ಲಿ ಸಂಸ್ಕ್ರುತ ಬಳಕೆಯಲ್ಲಿ ಇದ್ದಿತು. ಮೀಮಾಂಸೆ, ವ್ಯಾಕರಣ, ಗಣಿತ, ತತ್ವಗ್ನಾನ, ಕಾನೂನು ಮೊದಲಾದ ವಿಶಯಗಳ ಅದ್ಯಯನ-ಅದ್ಯಾಪನ ಮಾತ್ರವಲ್ಲದೆ ಸಾಹಿತ್ಯ, ಸಂಶೋದನೆ ಕೆಲಸಗಳೂ ನಡೆದಿದ್ದವು. ಯಾದಗಿರಿಯಲ್ಲಿ ಸ್ವತಂತ್ರ ಬರುವವರೆಗೂ ಸಂಸ್ಕ್ರುತ ಕಾಲೇಜೊಂದು ಇದ್ದಿತು. ಕನ್ನಡದ ಜೊತೆಜೊತೆಗೆ ದ್ರಾವಿಡ ಮನೆತನದ ತೆಲುಗು ಬಾಶೆ ಇಲ್ಲಿ ಬಳಕೆಯಲ್ಲಿ ಇದ್ದಿತು. ಕಲಬುರಗಿ ಸುತ್ತಲಿನ ಹಲವು ಪರಿಸರಗಳಲ್ಲಿ ಇಂದಿಗೂ ತೆಲುಗರು, ತೆಲುಗು ಹಿನ್ನೆಲೆಯ ದಾರ್‍ಮಿಕ, ಸಾಹಿತ್ಯಿಕ ಹಿನ್ನೆಲೆಯ ವ್ಯಕ್ತಿಗಳು ಹಲವರು ಕಂಡುಬರುತ್ತಾರೆ. ವಾಕಟಾಕರ ಶಾಸನ ಬೀದರ ಪರಿಸರದಾಗ ಸಿಗುತ್ತದೆ. ಕಲಬುರಗಿ ಸುತ್ತಲಿನ ಪರಿಸರದಲ್ಲಿ ವಿಜಯನಗರ ಕಾಲದಾಗ ತೆಲುಗಿನ ಶಾಸನಗಳೂ ಸಿಗುತ್ತವೆ,

ರಾಯಚೂರು ಪರಿಸರದಾಗ ಇವು ಹೆಚ್ಚು. ಕಲಬುರಗಿ ನಗರದಲ್ಲಿ ತೆಲುಗು ಮಾತುಗರು ದೊಡ್ಡ ಸಂಕೆಯಲ್ಲಿದ್ದಾರೆ. ಅರಾಬಿಕ್ ಮತ್ತು ಪರ್‍ಶಿಯನ್ ಇವು ಮದ್ಯಪ್ರಾಚ್ಯದೊಡನೆಯ ಮಳಕೇಡದ ವ್ಯಾಪಾರ ಸಂಬಂದಗಳು, ಇಸ್ಲಾಮ್ ಮತ್ತು ಸೂಪಿ ಬರುವಿಕೆ ಇವುಗಳೊಂದಿಗೆ ಸುಮಾರು ಏಳನೆಯ ಶತಮಾನದ ವೇಳೆಗೆನೆ ಇಲ್ಲಿಗೆ ಬಂದಿದ್ದವು. ಹತ್ತನೆಯ ಶತಮಾನದ ವೇಳೆಗೆ ಪರ್‍ಶಿಯನ್ ಪದಗಳು, ಹೆಸರುಗಳು ಶಾಸನಗಳಲ್ಲಿ ದೊರೆಯುತ್ತವೆ. ಪ್ರಾಕ್ರುತವು ಮರಾಟಿ ಪ್ರಾಕ್ರುತ ಎಂದಾಗಿ ಮುಂದೆ ಮರಾಟಿ ಎಂದು ಬೆಳೆಯಿತು. ಮರಾಟಿ ಬೆಳೆದದ್ದೆ ಈ ಪರಿಸರದಲ್ಲಿ. ಆನಂತರ ನಡುಗಾಲದಲ್ಲಿ ಮರಾಟಿ ವ್ಯಾಪಾರ ಕಾರಣಕ್ಕಾಗಿ ವ್ಯಾಪಕ ಬೆಳವಣಿಗೆ ಪಡೆದುಕೊಂಡಿತು. ಇಂದಿಗೂ ಕಲಬುರಗಿಯ ಮಾರುಕಟ್ಟೆಯಲ್ಲಿ ಕೇಳಿಬರುವ ಅಂಕಿಗಳು ಮರಾಟಿಯವೆ ಆಗಿವೆ. ಮರಾಟಿ ಮಾತುಗರ ಸಂಕೆಯೂ ದೊಡ್ಡದಿದೆ. ಪರ್‍ಶಿಯನ್-ಕನ್ನಡಗಳು ಪರಸ್ಪರ ಬೆರೆತು ಹುಟ್ಟಿದ ಉರ್‍ದು ಕಲಬುರಗಿಯಲ್ಲಿಯೆ ಹುಟ್ಟಿದ್ದು, ಕಲಬುರಗಿಯ ನೆಲದ ಬಾಶೆಯೆ ಉರ್‍ದು. ಕನ್ನಡದ ನಂತರ ದೊಡ್ಡಸಂಕೆಯ ಮಾತುಗರಿರುವ ಬಾಶೆ ಉರ್‍ದು. ರಾಗವಾಂಕನ ಕಾವ್ಯದಲ್ಲಿ ಗುಜರಾತಿಗಳು ವ್ಯಾಪಾರಕ್ಕೆ ವಲಸೆ ಬಂದದ್ದರ, ಇಲ್ಲಿ ಮದುವೆ ಮೊದಲಾದ ಸಂಬಂದ ಬೆಳೆಸಿದ್ದರ ವಿಚಾರಗಳು ಸಿಗುತ್ತದೆ. ಮೊಗಲರ ಕಾಲದಲ್ಲಿ ಈ ಬಾಗಕ್ಕೆ ಒಬ್ಬ ಗುಜರಾತಿ ಮಾತನಾಡುವ ಅದಿಕಾರಿಯನ್ನು ಅವುರಂಗಜೇಬ ನೇಮಿಸುತ್ತಾನೆ. ಮುದಗಲ್ಲಿನಲ್ಲಿ ಗುಜರಾತಿಯ ಶಾಸನಗಳು ಸಿಗುತ್ತವೆ. ಸುರಪುರದ ದೊರೆಗಳ ಕಾಲದಲ್ಲಿ ಸುರಪುರದ ದೊರೆಗಳಿಗೆ ಸಾಲ ಕೊಟ್ಟ ಗುಜರಾತಿಯ ವಿಚಾರ ಇದೆ. ಇಂದಿಗೂ ಕಲಬುರಗಿ ನಗರದಲ್ಲಿ ಗುಜರಾತಿಗಳು ವಿವಿದ ಬಗೆಯ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡವರು ಇದ್ದಾರೆ. ಇವರೊಂದಿಗೆ ಅಶ್ಟೆ ಇಲ್ಲವೆ ಅದಕ್ಕಿಂತ ತುಸು ಇತ್ತೀಚಿನದಾಗಿರಬಹುದಾದ ಸಂಬಂದ ರಾಜಸ್ತಾನಿಯದು. ರಾಜಸ್ತಾನಿಗಳ ಸಂಕೆ ಕಲಬುರಗಿ ನಗರದಲ್ಲಿ ಪರಿಗಣಿಸುವಶ್ಟು ಇದೆ. ಇಂದಿನ ಪಾನಿಪೂರಿ ಮಾರುವವರಿಂದ ಹಲಬಗೆಯ ವ್ಯಾಪಾರದಲ್ಲಿ ಅವರು ಇದ್ದಾರೆ. ಇವರೊಂದಿಗೆ ಮಾರ್‍ವಾಡಿಗಳೂ ಇದ್ದಾರೆ. ಸಿಕ್ಕರ ದರ್‍ಮಗುರು ಗುರುನಾನಕ ಬೀದರವರೆಗೆ ಬಂದುಹೋಗುತ್ತಾನೆ. ಆಗಿನಿಂದ ಬೀದರ ಮತ್ತು ಸುತ್ತಲಿನ ಪ್ರದೇಶದಲ್ಲಿ ಪಂಜಾಬಿ ಮಾತುಗರು ನೆಲೆ ನಿಂತಿದ್ದಾರೆ.

ಇಂದಿನ ಕಾಲದ ಹಲಬಗೆಯ ಶ್ರೀಮಂತ-ಬಡ ವ್ಯಾಪಾರವಲಯದಲ್ಲಿ ಪಂಜಾಬಿಗಳು ನಗರದಾದ್ಯಂತ ಅಲ್ಲಲ್ಲಿ ಕಂಡುಬರುತ್ತಾರೆ. ಪಂಜಾಬಿಯದೆ ಇನ್ನೊಂದು ಬಗೆಯಾದ ಶೆಟ್ವಿ ಮಾತನಾಡುವ ಬಡವರಾದ, ಚಾಕು, ಚೂರಿಗಳನ್ನು ಮಾಡುವ ಸಮುದಾಯವೂ ಕಲಬುರಗಿ ಮತ್ತು ಸುತ್ತಮುತ್ತ ತಿರುಗಾಡಿಕೊಂಡಿರುವುದನ್ನು ಕಾಣಬಹುದು. ಕೊರಚ, ಕೊರವ ಎಂಬ ಎರಡು ಪ್ರದಾನ ಬುಡಕಟ್ಟುಗಳು ನಗರದಲ್ಲಿ ಮತ್ತು ಸುತ್ತಮುತ್ತ ಹಲವು ಕಡೆ ಕಾಣಸಿಗುತ್ತವೆ. ಈ ಬಾಗಕ್ಕೆ ಇವರು ಹಲವು ನೂರು ವರುಶಗಳ ಹಿಂದೆಯೆ ಬಂದಿರುವುದು ಸ್ಪಶ್ಟ. ಸುಮಾರು ನಾಲ್ಕಯ್ದು ನೂರು ವರುಶಗಳ ಹಿಂದೆ ಲಂಬಾಣಿಗರು ಇಲ್ಲಿಗೆ ವಲಸೆ ಬಂದರು. ಕಲಬುರಗಿ ನಗರ, ಸುತ್ತಮುತ್ತ ದೊಡ್ಡಸಂಕೆಯಲ್ಲಿ ಲಂಬಾಣಿಗರು ವಾಸಿಸುತ್ತಿದ್ದಾರೆ. ಬಹುಶಾ ಲಂಬಾಣಿ ಕಲಬುರಗಿಯ ದೊಡ್ಡ ಬಾಶೆಗಳಲ್ಲಿ ಒಂದು. ಲಂಬಾಣಿಗರ ನಂತರದಲ್ಲಿ ಬಾರತದಾಗ ಅವರಂತೆಯೆ ದೊಡ್ಡಪ್ರಮಾಣದಲ್ಲಿ ಆದುನಿಕಪೂರ್‍ವ ಕಾಲದಲ್ಲಿ ವಲಸೆ ಹೋದ ಸಮುದಾಯ ಮದ್ಯಪ್ರದೇಶದ ಕಾಂದೇಶಿ. ಕಾಂದೇಶಿ ಒಂದು ಬಾಶೆಯಾಗಿಲ್ಲದೆ ಹಲವಾರು ಬಿನ್ನ ಒಳನುಡಿಗಳ ಒಂದು ಗುಂಪು. ಈ ಗುಂಪಿಗೆ ಸೇರುವ ಕೆಲವಾದರೂ ಒಳನುಡಿಗಳು ಕಲಬುರಗಿ ನಗರ ಮತ್ತು ಸುತ್ತಮುತ್ತ ಸಿಗುತ್ತವೆ. ಶ್ರಮದಾಯಕವಾದ ಲೋಹಸಂಬಂದಿ ಕೆಲಸ ಮಾಡುವ ಇಂತಾ ಹಲವು ಗುಂಪುಗಳು ನಗರ ಮತ್ತು ಸುತ್ತಮುತ್ತ ತಿರುಗಾಡುತ್ತಿರುವುದನ್ನು ಕಾಣಬಹುದು. ಆದುನಿಕಪೂರ್‍ವ ಕಾಲದಲ್ಲಿ ನಿಜಾಮರ ಆಡಳಿತದಾಗ ಇಂಗ್ಲೀಶು ಈ ಬಾಗವನ್ನು ಪ್ರವೇಶಿಸುತ್ತದೆ. ಸುರಪುರದ ಆಡಳಿತದಲ್ಲಿ ಮತ್ತು ಇತರೆ ಹಲವೆಡೆ ಇಂಗ್ಲೀಶು ಸುತ್ತಮುತ್ತ ಬಳಕೆಗೆ ಬಂದಿದ್ದಿತು. ಇಂದು ಶಿಕ್ಶಣ ಸಂಸ್ತೆಗಳು ಒಳಗೊಂಡು ಹಲವಾರು ಕಾರಣಗಳಿಗಾಗಿ ಇಂಗ್ಲೀಶು ನಗರದ ದೊಡ್ಡಪ್ರಮಾಣದ ಬಳಕೆಯ ಬಾಶೆಗಳಲ್ಲಿ ಒಂದಾಗಿದೆ. ತಮಿಳು ಇಶ್ಟು ದೂರದವರೆಗೆ ಬಂದಿಲ್ಲವೆಂದರೂ ಮಸ್ಕಿಯಲ್ಲಿ ಹನ್ನೊಂದನೆ ಶತಮಾನದಲ್ಲಿಯೆ ತಮಿಳಿನ ಶಾಸನ ಸಿಗುವುದು ನೆನಪಿಸಿಕೊಳ್ಳುವ ವಿಚಾರವೆ ಆಗುತ್ತದೆ. ಹಾಗೆಯೆ ತಮಿಳು ನಾಯನ್ಮಾರರ ಪ್ರಬಾವವನ್ನೂ, ತಮಿಳು ಸಿದ್ದ ಶಯಿವ ಪಂತದ ಪ್ರಬಾವವನ್ನೂ ನೆನಪಿಸಿಕೊಳ್ಳಬೇಕು. ಆದುನಿಕ ವಲಸೆ ಕಾರಣವಾಗಿ ತಮಿಳು ಹಾಗೆಯೆ ಮಲಯಾಳಂ, ತುಳು ಮೊದಲಾದ ದ್ರಾವಿಡ ಬಾಶೆಗಳು ನಗರದಲ್ಲಿ ಕಂಡುಬರುತ್ತವೆ. ಅದೆ ರೀತಿ ಓರಿಸ್ಸಾ, ಮದ್ಯಪ್ರದೇಶ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ದ್ರಾವಿಡ ಬುಡಕಟ್ಟು ಬಾಶೆಗಳಾದ ಗೊಂಡಿ, ಕೊಂಡ ಮತ್ತು ಇವುಗಳ ಇನ್ನು ಕೆಲ ಸಾಮಾಜಿಕ-ಬಾಶಿಕ ಒಳಗುಂಪುಗಳು ಕಲಬುರಗಿ ನಗರದಲ್ಲಿ ನೆಲೆಸಿವೆ, ಹಾಗೆಯೆ ವಲಸೆಯಲ್ಲಿಯೂ ಇವೆ. ಇವುಗಳಲ್ಲದೆ ಕೆಲನೂರು ವರುಶಗಳ ಹಿಂದೆ ತೆಲುಗಿನ ಒಳನುಡಿಗಳಾದ ವಡರಿ ಮೊದಲಾದವೂ ಇಲ್ಲಿಗೆ ಬಂದಿವೆ.

ಯಾದಗಿರಿಯಿಂದ ಕೆಳಗೆ ಚೆಂಚು ಇದ್ದಾರೆ. ಮಹಾರಾಶ್ಟ್ರ ಪ್ರದೇಶದಿಂದ ತುಸು ಕೆಳಗೆ ಬಂದ ಆರ್‍ಯನ್ ಬಾಶೆಗಳೂ ಇವೆ. ಪಾರ್‍ದಿ ಅಂತದೊಂದು ಬಾಶೆ. ಕಲಬುರಗಿ ನಗರದಲ್ಲಿಯೂ, ಸುತ್ತ ಕೆಲವು ಊರುಗಳಲ್ಲಿಯೂ ಪಾರ್‍ದಿಗಳು ಕಂಡುಬರುತ್ತಾರೆ. ಹಾಗೆಯೆ ಕೋಳಿ ಇಲ್ಲವೆ ಟೊಕ್ರಿಕೋಳಿ ಕೂಡ ಕಲಬುರಗಿ ಸುತ್ತಲಿನ ಪರಿಸರದಲ್ಲಿ ಕಾಣಿಸುತ್ತದೆ. ಜೋಗೇರ ಮೊದಲಾದ ಮರಾಟಿ ಒಳನುಡಿಗಳೂ ಕೂಡ ಬಳಕೆಯಲ್ಲಿವೆ. ಆದುನಿಕ ವಲಸೆ ಕಾರಣವಾಗಿ ಬೆಂಗಾಲಿ, ನೇಪಾಳಿ, ಓಡಿಯಾ ಮೊದಲಾದ ಬಾಶೆಗಳೂ ಇಲ್ಲಿಗೆ ಬಂದಿವೆ. ಆದುನಿಕ ಕಾಲದಲ್ಲಿ ಉರ್‍ದುವಿನಿಂದ ಬೇರೆಯಾದ ಹಿಂದಿ ಹಲವಾರು ಕಾರಣಗಳಿಗಾಗಿ ದೊಡ್ಡ ಸಂಕೆಯ ಮಾತುಗರನ್ನು ನಗರದಲ್ಲಿ ಪಡೆದುಕೊಂಡಿದೆ. ಹಿಂದಿ ಮಾತ್ರವಲ್ಲದೆ ಹಿಂದಿಯ ಬಿನ್ನ ಒಳನುಡಿಗಳಾದ ಬಿಹಾರಿ, ಹರಿಯಾಣ್ವಿ, ಚತ್ತಿಸ್‌ಗಡಿ, ಹಿಮಾಚಲಿ ಮೊದಲಾದವೂ ಇಲ್ಲಿ ಇವೆ.
ಕಲಬುರಗಿ ಪರಿಸರದಲ್ಲಿ ಇದ್ದ/ಇರುವ ಎಲ್ಲ ಬಾಶೆಗಳ ಪಟ್ಟಿ. ಕನ್ನಡ, ಪಾಲಿ, ಪ್ರಾಕ್ರುತ, ಸಂಸ್ಕ್ರುತ, ತೆಲುಗು, ಅರಾಬಿಕ್, ಪರ್‍ಶಿಯನ್, ಮರಾಟಿ, ಉರ್‍ದು, ಗುಜರಾತಿ, ರಾಜಸ್ತಾನಿ, ಮಾರ್‍ವಾರಿ, ಪಂಜಾಬಿ, ಶೇಟ್ವಿ, ಕೊರವ, ಕೊರಚ, ಲಂಬಾಣಿ, ಕಾಂದೇಶಿ, ಇಂಗ್ಲೀಶು, ತಮಿಳು, ಮಲಯಾಳಂ, ತುಳು, ಗೊಂಡಿ, ಕೊಂಡ, ವಡರಿ, ಚೆಂಚು, ಪಾರ್‍ದಿ, ಟೊಕ್ರಿಕೋಳಿ, ಜೋಗೇರ, ಬೆಂಗಾಲಿ, ನೇಪಾಳಿ, ಓಡಿಯಾ, ಹಿಂದಿ, ಬಿಹಾರಿ, ಹರಿಯಾಣ್ವಿ, ಚತ್ತಿಸ್‌ಗಡಿ, ಹಿಮಾಚಲಿ. ನಿರ್‍ದಿಶ್ಟವಾಗಿ ಕಲಬುರಗಿ ನಗರ ಎಂದು ನೋಡಿದಾಗ ಇವುಗಳಲ್ಲಿ ಕೆಲವು ಸಿಗಲಾರವು. ಕಲಬುರಗಿ ನಗರದ ಒಂದು ಬಾಶಿಕ ಸರ್‍ವೆ ಅತ್ಯಂತ ಜರೂರಾಗಿ ಆಗಬೇಕಾದ ಕೆಲಸ.

ಚಿತ್ರಗಳು: ರಾಜಾ ದೀನ್‌ ದಯಾಳ್‌ (1880)

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...