ಬಹುಗುಣರಿಗೆ ಪ್ರೇರಣೆ: ಮಹಿಳೆಯರ ಬದುಕೇ ಆದ ಪರಿಸರವಾದ

Date: 05-06-2021

Location: ಬೆಂಗಳೂರು


ಜೂನ್ 5 ರ ’ಪರಿಸರ ದಿನಾಚರಣೆ’ಯನ್ನು ’ಅಭಿವೃದ್ಧಿ ದಿನಾಚರಣೆ’ಯೆಂದು ಆಚರಿಸಬೇಕೆಂದು ಮೇಲಿಂದ ಫರ್ಮಾನು ಬರಬಹುದೆ? ಎಂದು ಆತಂಕ ವ್ಯಕ್ತಪಡಿಸುವ ವಿಮರ್ಶಕ- ಲೇಖಕ ಡಾ. ರಾಜೇಂದ್ರ ಚೆನ್ನಿ ಅವರು ಪರಿಸರದ ದಿನದ ಹಿನ್ನೆಲೆಯಲ್ಲಿ ಸುಂದರಲಾಲ್‌ ಬಹುಗುಣ, ಚಿಪ್ಕೋ ಚಳುವಳಿ, ಪಶ್ಚಿಮ ಘಟ್ಟ ಉಳಿಸುವ ಹೋರಾಟಗಳ ಬಗ್ಗೆ ಚರ್ಚಿಸಿದ್ದಾರೆ. ಬಹುಗುಣ ಅವರಿಗೆ ತೆಹರಿ ಚಳುವಳಿಯ ನೀಡಿದ ಪ್ರೇರಣೆಗಳನ್ನೂ ಅವರು ಈ ಬರೆಹದಲ್ಲಿ ವಿವರಿಸಿದ್ದಾರೆ.

ಆಧುನಿಕ ಭಾರತದ ಸಂತರಲ್ಲಿ ಒಬ್ಬರಾದ ಸುಂದರಲಾಲ್ ಬಹುಗುಣ ಇತ್ತೀಚೆಗೆ ಕೊರೋನಾ ಪಿಡುಗಿಗೆ ಬಲಿಯಾದರು. ಎಲ್ಲಾ ಸಂತರೂ ಸಾಮುದಾಯಿಕ ಮರೆವಿಗೆ ಸೇರಿರುವ ಈ ಕಾಲದ ಹೊಸ ತಲೆಮಾರಿಗೆ ಅವರ ಹೆಸರು ಕೂಡ ಅಪರಿಚಿತವಾಗಿರಬಹುದು ಎಂದುಕೊಳ್ಳುವ ಹೊತ್ತಿಗೆ ಪಶ್ಚಿಮದ ಪ್ರಭಾವದಿಂದಾದರೂ ಆಗಲಿ ನಮ್ಮ ಶಿಕ್ಷಿತವರ್ಗ ಹಾಗೂ ಮೇಲ್ ಮಧ್ಯಮವರ್ಗವು ಈಗ ಪರಿಸರದ ಬಗ್ಗೆ ಮಾತನಾಡುತ್ತಿದೆ ಎನ್ನುವುದು ನೆನಪಾಯಿತು. ಪಶ್ಚಿಮದ ಅನೇಕ ದೇಶಗಳಲ್ಲಿ ಪರಿಸರವಾದವು ಪ್ರಬಲವಾಗುತ್ತಿದೆ. ಅದರ ದುರಂತಮಯ ಪರಿಣಾಮವೆಂದರೆ ಪರಿಸರ ವಿರೋಧಿ ಯೋಜನೆಗಳು, ಬಂಡವಾಳಶಾಹಿ ಉದ್ಯಮಗಳು ಮೂರನೇ ಜಗತ್ತಿಗೆ ವರ್ಗಾವಣೆಯಾಗುತ್ತಿವೆ. ಇದು ಭಾರತಕ್ಕೆ ಹೊಸತಲ್ಲ. ಬಿ.ಟಿ. ಹತ್ತಿಯಂಥ ಅನೇಕ ಜೈವಿಕ ಪರಿವರ್ತಿತ ವಸ್ತುಗಳ ಪ್ರಯೋಗಗಳು ಇಲ್ಲಿ ನಡೆಯುತ್ತಲಿವೆ. ನೆನ್ನೆ ಸಾಮಾಜಿಕ ತಾಣದಲ್ಲಿ ಹಲವು ವರ್ಷಗಳ ಹಿಂದೆ ಆಂಧ್ರ ಮತ್ತು ತೆಲಂಗಾಣ ಪ್ರದೇಶದ ಹೆಣ್ಣುಮಕ್ಕಳು ಮತ್ತು ಮಕ್ಕಳ ಮೇಲೆ ಅಕ್ರಮವಾಗಿ ಬಿಲ್‌ಗೇಟ್ಸ್‌ನ ಕಂಪನಿಗಳು ಔಷಧಿ ಪ್ರಯೋಗಗಳನ್ನು ಮಾಡಿದ್ದರ ಬಗ್ಗೆ ಪ್ರತಿಭಟನೆಯ ಬಗ್ಗೆ ಓದಿದೆ. ನನಗೆ ಚೆನ್ನಾಗಿ ನೆನಪಿರುವಂತೆ ಈ ಪ್ರಯೋಗಗಳ ಬಗ್ಗೆ ವಿವರವಾದ ವರದಿಗಳು ಬಂದಿದ್ದವು. ಆದರೆ ಎಂದಿನಂತೆ ನಮ್ಮ ರಾಜಕೀಯ ವರ್ಗಗಳು ಶಾಮೀಲಾಗಿ ಈ ದೇಶದ ಮಹಿಳೆಯರನ್ನು ಪ್ರಯೋಗಪಶುಗಳನ್ನಾಗಿ ಮಾಡಲು ಅನುವು ಮಾಡಿಕೊಟ್ಟವು. ಈ ಕಾರಣದಿಂದಾಗಿಯೇ “Bio technology is bio piracy” ಎನ್ನುವುದು ಪರಿಸರವಾದಿಗಳ ಘೋಷಣೆಯಾಯಿತು. ಪ್ರಜೆಗಳ ಮೇಲೆ ಪ್ರಯೋಗ ಮಾತ್ರವಲ್ಲ ಪಾರಂಪರಿಕ ಸ್ಥಳೀಯ ಜ್ಞಾನವನ್ನು, ಉತ್ಪಾದನೆಗಳನ್ನು ಕದ್ದು patent ಮಾಡಿಕೊಳ್ಳುವ ಬೌದ್ಧಿಕ ಆಸ್ತಿ ಒಪ್ಪಂದಗಳನ್ನು ಒಪ್ಪಿಕೊಂಡಿರುವ ಕಾಲದಲ್ಲಿ ಅನೇಕ ಮುಂದುವರೆದ ದೇಶಗಳು ಅವುಗಳನ್ನು ತಮ್ಮ ವಿಜ್ಞಾನವೆಂದು ವಾದಿಸಿ ಗೆಲ್ಲುತ್ತಿವೆ. ಪಶ್ಚಿಮದ ಬಂಡವಾಳಶಾಹಿಯು ಜನಾಂಗೀಯವಾದವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿರುವುದರಿಂದ ಮೂರನೇಯ ಜಗತ್ತಿನ ಅನಕ್ಷರಸ್ಥ ಬಡಜನರ ಮೇಲೆ ಯಾವ ಪ್ರಯೋಗವನ್ನು ಮಾಡಲು ಹಿಂಜರಿಯುವುದಿಲ್ಲ. ಇದಕ್ಕೆ ಬೆಂಬಲವಾಗಿರುವ ನಮ್ಮ ರಾಜಕೀಯ ವರ್ಗವು ಮತ್ತು ಸರಕಾರಗಳು ನಮ್ಮ ಜನಸಮುದಾಯಗಳ ಬಗ್ಗೆ ಇದೇ ಮನೋಭಾವನೆಯನ್ನು ಹೊಂದಿವೆ. ಅನಾಥ ಶವಗಳು, ಆಕ್ಸಿಜನ್, ಲಸಿಕೆ ಇಲ್ಲದೆ ನರಳುವ ಪ್ರಜೆಗಳು ಅವರಿಗೆ ಲೆಕ್ಕಕ್ಕಿಲ್ಲ.


ಇರಲಿ, ನಾನು ಬರೆಯಹೊರಟದ್ದು ಚಿಪ್ಕೋ ಆಂದೋಲನದ ರೂವಾರಿಯಾದ ಬಹುಗುಣ ಅವರ ಬಗ್ಗೆ. ದಶಕಗಳ ಹಿಂದೆ ಅವರು ನಮ್ಮ ಶಿವಮೊಗ್ಗೆಗೆ ಬಂದಿದ್ದರು. ಕುವೆಂಪು ವಿಶ್ವವಿದ್ಯಾಲಯದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಅಂದಿನ ಸಭೆಗೆ ದೊಡ್ಡ ಸಂಖ್ಯೆಯಲ್ಲಿ ಹಾಜರಾಗಿದ್ದರು. ನಗರಸಭೆ ಕಚೇರಿಯ ಆವರಣದೊಳಗೆ ಸಭೆ ನಡೆದಿತ್ತು. ನನಗೆ ನೆನಪಿದೆ. ಕೆ.ವಿ.ಸುಬ್ಬಣ್ಣ ಕಚೇರಿ ಆವರಣದ ಮೋಟುಗೋಡೆಯ ಮೇಲೆ ಕುಳಿತು ಭಾಷಣಗಳನ್ನು ಕೇಳುತ್ತಿದ್ದರು. ಅವರ ಸರದಿ ಬಂದಾಗ ಕುಳ್ಳು ದೇಹದ ಸುಬ್ಬಣ್ಣ ಛಂಗನೇ ಹಾರಿ ಗೋಡೆಯಿಂದಿಳಿದು ವೇದಿಕೆಗೆ ಹೋದರು. ಬಹುಗುಣರ ಮಾತುಗಳಲ್ಲಿ ನನಗೆ ನೆನಪಿರುವುದು ಅವರು ಬಳಸುತ್ತಿದ್ದ ರೂಪಕಗಳು. ಭೂಮಿ ನಮ್ಮ ತಾಯಿಯಲ್ಲವೆ? ಅವಳ ಮೈಯನ್ನು ಕೆರೆದು, ಅಗೆದು ಮಾಡುವ ಗಣಿಗಾರಿಕೆ, ಯೋಜನೆಗಳು ನಮಗೆ ಬೇಕೆ? ನಮಗೆ ಪರಿಸರವಾದದ ಈ ಕಾವ್ಯಭಾಷೆ ಹೊಸದು. ಅಲ್ಲಿಯವರೆಗೆ ಪರಿಸರ ಹೋರಾಟವೆಂದರೆ ಭೂಮಿಗೆ ಆಗಿರುವ ಖಾಯಿಲೆಗೆ ನಾವು ಪರಿಹಾರ ಕೊಡುವುದು. ಅದನ್ನು ರಿಪೇರಿ ಮಾಡುವುದು ಎಂದುಕೊಂಡಿದ್ದೆವು. ಬಹುಗುಣರ ಸರಳವಾದ ರೂಪಕಗಳು ನಮ್ಮ ಅಹಂಕಾರವನ್ನು ತೊಡೆದುಹಾಕಿದವು. ಮನುಷ್ಯ ತನ್ನ ಅಹಂನಿಂದ ಭೂಮಿಯನ್ನು ನಾಶಮಾಡಿ ಈಗ ತನ್ನ ಬೌದ್ಧಿಕ, ವೈಜ್ಞಾನಿಕ ಅಹಂಕಾರದಿಂದ ಅದನ್ನು ಸರಿಪಡಿಸುತ್ತೇನೆ ಎಂದುಕೊಳ್ಳುವುದು ಪರಿಸರವಾದವಲ್ಲವೆಂದು ಅರ್ಥವಾಯಿತು. ಬಹುಗುಣರಿಗೆ ಎಲ್ಲವೂ ಭೂಮಿಯಿಂದ, ಪರಿಸರದಿಂದ ಬಂದುದು. ವಿವೇಕ ಹಾಗೂ ಜ್ಞಾನಗಳೂ ಕೂಡ. ಕೆ.ವಿ.ಸುಬ್ಬಣ್ಣ ಕೂಡ ಬೇರೆ ಸ್ತರದಲ್ಲಿ ಇದನ್ನೇ ಹೇಳಿದ್ದರು. ಅಭಿಜ್ಞಾನವೆಂದರೆ ಜ್ಞಾನವನ್ನು ಸೃಷ್ಟಿಸುವುದಲ್ಲ. ಜನಸಮುದಾಯಗಳಲ್ಲಿ ಇರುವ ಅರಿವನ್ನು ಗುರುತಿಸುವುದು ಎಂದು ಅವರು ಹೇಳುತ್ತಿದ್ದರು. ಪಶ್ಚಿಮದ ಪರಿಸರವಾದ ಈಗ ಇದನ್ನು ಅರ್ಥಮಾಡಿಕೊಂಡಿದೆ.

ಆದ್ದರಿಂದಲೇ ಬಹುಗುಣರು ತಮ್ಮನ್ನು ಗುರು ಅಥವಾ ನಾಯಕ ಎಂದುಕೊಳ್ಳಲಿಲ್ಲ. ಎಲ್ಲವೂ ನಮ್ಮ ತೆಹರಿ-ಘರ್‌ವಾಲ್‌ನ ಅನಕ್ಷರಸ್ಥ ಮಹಿಳೆಯರಿಗೆ ಸೇರಿದ್ದು ಎಂದು ಹೇಳುತ್ತಿದ್ದರು. ಮರಗಳನ್ನು ಅಪ್ಪಿಕೊಳ್ಳುವುದನ್ನು ಬಹುಗುಣರಿಗೆ ಅವರ ಹೆಂಡತಿ ಹೇಳಿಕೊಟ್ಟರಂತೆ. ಅಲ್ಲದೆ ಬುಡಕಟ್ಟಿನವರಾದ ಬಿಶ್ನೋಯಗಳಿಗೆ ಮರಗಳನ್ನು ಅಪ್ಪಿಕೊಳ್ಳುವುದು ದೀರ್ಘಕಾಲದ ಸಾಂಸ್ಕೃತಿಕ ನೆನಪು ಆಗಿತ್ತು. ತನ್ನ ಐಷಾರಾಮಿ ಅರಮನೆಗಾಗಿ (ಅಂದರೆ ಆ ಕಾಲದ Central Vistaಗಾಗಿ) ಕಾಡಿನ ಮರಗಳನ್ನು ಕಡಿಯಲು ಹೇಳಿದಾಗ ಬಿಶ್ನೋಯಿ ಕುಲದವರು ಅದನ್ನು ತಡೆಯಲು ಮರಗಳನ್ನು ಅಪ್ಪಿಕೊಂಡರು. ರಾಜನ ಸೈನಿಕರು ಅವರ ಕತ್ತುಗಳನ್ನು ಕತ್ತರಿಸಿ ಮರ ಕಡಿದರು. ಇವತ್ತಿಗೂ ಬಿಶ್ನೋಯಿಗಳಿಗೆ ಧರ್ಮವೆಂದರೆ ಮರಗಳನ್ನು, ಪ್ರಾಣಿಗಳನ್ನು ರಕ್ಷಿಸುವುದಾಗಿದೆ. ಬಾಲಿವುಡ್‌ನ ಹೀರೋ ಸಲ್ಮಾನ್ ಖಾನ್ ಮೋಜಿಗಾಗಿ ಬೇಟೆಯಾಡಿ ಬಿಶ್ನೋಯಿಗಳಿಗೆ ಪವಿತ್ರವಾದ ಕೃಷ್ಣಮೃಗವನ್ನು ಬೇಟೆಯಾಡಿದ್ದ. ಅವನ ವಿರುದ್ಧದ ಮೊಕದ್ದಮೆಯಲ್ಲಿ ಗಟ್ಟಿಯಾಗಿ ನಿಂತವರು ಬಿಶ್ನೋಯಿಗಳೇ. ಆದರೆ ನ್ಯಾಯಾಲಯದ ತೀರ್ಪು ಸಲ್ಲು ಭಾಯಿ ವಿರುದ್ಧ ಬರದಿರಲಿ ಎಂದು ಆಧುನಿಕ ಭಾರತ ರಾಷ್ಟ್ರವು ತನ್ನ ಮಾಧ್ಯಮಗಳ ಮೂಲಕ ಪ್ರಾರ್ಥನೆ ಮಾಡಿತು. ಸಲ್ಮಾನ್ ಖಾನ್‌ನ ಖುಲಾಸೆಯಾಯಿತು. ಜೀವಕ್ಕಿಂತಲೂ ಬಾಲಿವುಡ್‌ನ್ನು ಪ್ರೀತಿಸುವ ನಮ್ಮ ಜನರಿಗೆ ಕೃಷ್ಣಮೃಗದ ಸಾವು ಒಂದು ಸಂಗತಿಯೇ ಅಲ್ಲ. ಈಗ ದೇವರಕಾಡನ್ನು ಸರಕಾರವು ಸವರಿ ನಾಶಮಾಡುತ್ತಿರುವುದೂ ಒಂದು ಸಂಗತಿಯಲ್ಲ. ನಮ್ಮ ಮಲೆನಾಡಿನಲ್ಲಿ ಜೀವವಿನಾಷಕವಾದ ಅಕೇಶಿಯಾ ಮರದ ತೋಪುಗಳನ್ನು ಮತ್ತೆ ಬೆಳೆಯಲು ಹೊರಟಿದ್ದು ಸಂಗತಿಯೇ ಅಲ್ಲ. ಕೊರೋನಾ ಪಿಡುಗಿನ ಪ್ರಯೋಜನ ಪಡೆದು ಮಲೆನಾಡಿನ ಕಾಡನ್ನು, ಮರಗಳನ್ನು ಕಡಿದು ಜಮೀನು ಆಸ್ತಿ ಮಾಡಿಕೊಳ್ಳುತ್ತಿರುವುದು ಸಂಗತಿಯೇ ಅಲ್ಲ. ಶಿವಮೊಗ್ಗೆಗೆ ಬನ್ನಿ. ಆಡಳಿತದ ಅಂದಾಜಿನ ಪ್ರಕಾರ ನಗರದಲ್ಲಿ, ಮತ್ತು ಸುತ್ತುಮುತ್ತು ಹಲವು ಲಕ್ಷ ಮರಗಳನ್ನು ಕಡಿದು ಅಭಿವೃದ್ಧಿ ಸಾಧಿಸಲಾಗಿದೆ. ಇಲ್ಲಿಂದ ಆಗುಂಬೆ ಘಾಟಿ ಇಳಿಯುವವರೆಗೆ ಅನೇಕ SUVಗಳು ಒಟ್ಟಿಗೆ ಓಡುವಂಥ ವಿಶಾಲ ರಸ್ತೆಗಳಿವೆ. ವಿಶೇಷವೆಂದರೆ ಇಲ್ಲಿ ವೈದ್ಯಕೀಯ ಕಾಲೇಜು ಆರಂಭವಾದಾಗ ಅದು ಮಾಡಿದ ಮೊದಲ ಕೆಲಸವೆಂದರೆ ಕಾಲೇಜು, ಮೆಗಾನ್ ಆಸ್ಪತ್ರೆಯ ಭವ್ಯವಾದ ಎಲ್ಲಾ ಮರಗಳನ್ನು ಕಡಿದಿದ್ದು. ಕಾರಣ? ಕಾಲೇಜಿನ ಭವ್ಯವಾದ ಕಟ್ಟಡ ರಸ್ತೆಗೆ ಕಾಣುತ್ತಿಲ್ಲವಾದ್ದರಿಂದ! ಮಲೆನಾಡು ಅಭಿವೃದ್ಧಿ ಮಂಡಳಿಯ ಕಛೇರಿಯೂ ಇದೇ ಕಾರಣಕ್ಕಾಗಿ ತನ್ನ ಆವರಣದ ಎಲ್ಲಾ ಮರಗಳನ್ನೂ ಕತ್ತರಿಸಿತ್ತು. ಹೀಗಾಗಿ ಮಲೆನಾಡಿನ ಅಭಿವೃದ್ಧಿಯೆಂದರೆ ಏನು ಎನ್ನುವುದು ಸಾಬೀತಾಗಿದೆ. ಅಂದ ಹಾಗೆ ಪ್ರಾಣವಾಯು ಕೊಡುವ ಮರಗಳನ್ನು ಕತ್ತರಿಸಿದ ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜುಗಳು ಈಗ ಸೋಂಕಿತರಿಗೆ ಪ್ರಾಣವಾಯು ಕೊಡಲು ಹೆಣಗಾಡುತ್ತಿವೆ. ಕಿಕ್ಕಿರಿದ ಮರಗಳನ್ನು ಕತ್ತರಿಸಿದ ಜಾಗದಲ್ಲಿ ಸ್ಥಳೀಯ ಆಕ್ಸಿಜನ್ ಪ್ಲಾಂಟ್ ಅನ್ನು ವಿಜೃಂಭಣೆಯಿಂದ ಉದ್ಘಾಟಿಸಲಾಗಿದೆ. plant ಮತ್ತು ಆಕ್ಸಿಜನ್ ಪ್ಲಾಂಟ್‌ಗಳ ನಡುವೆ ಮಲೆನಾಡಿನ ವ್ಯಥೆ ಇದೆ.

ಶಿವಮೊಗ್ಗ ಎನ್ನುವ ಯಕಶ್ಚಿತ್ ನಗರವನ್ನು ಬಿಟ್ಟು ಈಗ ಪರಿಸರವಾದಕ್ಕೆ ಮರಳೋಣ. 2012ರಲ್ಲಿ ರಾಮಚಂದ್ರ ಗುಹಾ ಪತ್ರಿಕೆಯೊಂದರಲ್ಲಿ ಚಿಪ್ಕೋ ಚಳುವಳಿಯ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ ಅವರು ಸರಿಯಾಗಿ ಗುರುತಿಸಿದಂತೆ ಪಶ್ಚಿಮದ ದೇಶಗಳಲ್ಲಿ ಕೂಡ ಪರಿಸರವಾದವು ಪ್ರಗತಿವಿರೋಧಿಯೆಂದೇ ಪರಿಗಣಿತವಾಗಿತ್ತು. ಡಿ.ಡಿ.ಟಿ.ಯ ವಿರುದ್ಧ ಅದ್ಭುತವಾಗಿ ‘Silent Spring’ ಕೃತಿಯನ್ನು ಬರೆದ ರೇಚಲ್ ಕಾರ್‍ಸ್‌ನ್ ಅವಳನ್ನು ಬಂಡವಾಳಶಾಹಿ ಕಂಪನಿಗಳು ಅರೆಹುಚ್ಚಿಯೆಂದು ಕರೆದವು; ಅನೇಕ ಕೋರ್ಟು ಕೇಸುಗಳಲ್ಲಿ ಕಿರುಕುಳಕೊಟ್ಟವು. ಅಲ್ಲಿಂದಾಚೆಗೆ ನಿಧಾನವಾಗಿ ಪರಿಸರಪ್ರಜ್ಞೆ ಬೆಳೆಯುತ್ತ ಬಂದಿತು. ಆದರೆ ಪಶ್ಚಿಮದ ಪರಿಸರವಾದವು ಪ್ರಾಣಿಗಳನ್ನು ಉಳಿಸುವ, ಮನುಷ್ಯವಾಸವಿಲ್ಲದ ಕಾಡುಗಳನ್ನು ಬೆಳೆಸುವುದರಲ್ಲಿ ಆಸಕ್ತಿ ಹೊಂದಿದೆ. ಭಾರತದಲ್ಲಿ ಪರಿಸರವಾದವೆಂದರೆ ಬಡ, ರೈತಾಪಿ ಮಹಿಳೆಯರು, ಆದಿವಾಸಿಗಳು ಇವರನ್ನು ಉಳಿಸುವ ಚಳುವಳಿಯಾಗಿದೆ. ಅವರ ಅಸ್ತಿತ್ವದ ಹೋರಾಟವಾಗಿದೆ. ಹೀಗಾಗಿಯೇ ತೆಹರಿ ಘರ್‌ವಾಲ್‌ನ ಮಹಿಳೆಯರು ಪ್ರಭುತ್ವವನ್ನು, ಪೋಲೀಸರನ್ನು, ಕ್ರಿಮಿನಲ್ ಕಂಟ್ರಾಕ್ಟುದಾರರನ್ನು ದಶಕಗಳವರೆಗೆ ಎದುರಿಸಿ ಹೋರಾಡಿದರು. ಪರಿಸರ ವಿನಾಶದ ಬಲಿಪಶುಗಳು ಅವರಾಗಿದ್ದರಿಂದ ಅವರಿಗೆ ವಿಜ್ಞಾನದ ಬೆಂಬಲವೂ ಬೇಕಾಗಿರಲಿಲ್ಲ. ಸಮುದಾಯದ ಹಾಡುಗಳು, ಕತೆಗಳು, ದಿನನಿತ್ಯದ ಕೆಲಸಗಳು, ಬದುಕು ಇವುಗಳೇ ಸಾಕಿತ್ತು. ಉತ್ತರಖಂಡದ ಸ್ವರ್ಗಸಮಾನ ಪರಿಸರದ ಅನೇಕ ಪ್ರಾಂತ್ಯಗಳು ಅತ್ಯಂತ ಸೂಕ್ಷ್ಮವೂ ಹೌದು. ಭೂಕುಸಿತ, ಭೂಕಂಪ ಇವುಗಳ ಅಪಾಯವು ಯಾವಾಗಲೂ ಇದ್ದದ್ದೆ. ಇಂಥ ಪರಿಸರದಲ್ಲಿ ಎರಡು ಭೀಕರ ವಿದ್ಯಮಾನಗಳು ಅವರಿಗೆ ಎದುರಾದವು. ಒಂದು ಗಣಿಗಾರಿಕೆ, ಇನ್ನೊಂದು ಜಗತ್ತಿನ ಎರಡನೇ ಅತಿ ಎತ್ತರದ ಜಲಾಶಯವನ್ನು ಕಟ್ಟುವ ತೆಹರಿ ಯೋಜನೆ. ಗಣಿಗಾರಿಕೆ ಮತ್ತು ಬೃಹತ್ ಅಣೆಕಟ್ಟುಗಳಿಲ್ಲದಿದ್ದರೆ ಅಭಿವೃದ್ಧಿ ಹೇಗೆ ಸಾಧ್ಯ? ಕೊನೇ ಪಕ್ಷ ಜವಾಹರಲಾಲ್ ನೆಹರು ಅವರಿಗೆ ಅವು ಆಧುನಿಕ ದೇವಾಲಯಗಳಾಗಿ ಕಂಡಿದ್ದವು. ನಂತರದ ಸರಕಾರಗಳಿಗೆ ಅವು ಸ್ಥಳೀಯ ಸ್ವಿಸ್ ಬ್ಯಾಂಕ್‌ಗಳಾಗಿ ಕಂಡವು. ಹೀಗಾಗಿ ಭಾರತದ ರಾಜಕೀಯ ವ್ಯಕ್ತಿಗಳಿಗೆ ಗೊತ್ತಿರುವ ಏಕಮಾತ್ರ ಇಂಗ್ಲಿಷ್ ಪದವೆಂದರೆ development’. ನಮ್ಮ ಕಡಿದಾಳ ಶಾಮಣ್ಣನವರ ಪ್ರಕಾರ development’ ಪದ ಇವರಿಗೆ ಯಾಕೆ ಇಷ್ಟು ಆಪ್ಯಾಯಮಾನವೆಂದರೆ development’ಅಂದಾಗ ಅವರಿಗೆ ಅದು “Thirty percent, Forty percent”ಎಂದು ಕೇಳುತ್ತದೆಯಂತೆ! ಇತ್ತೀಚೆಗೆ ‘Sixty percent’ ದು ಕೇಳುತ್ತಿದೆಯೆಂದು ಅನಧಿಕೃತ ವರದಿ.

ಬಹುಗುಣರ ನಾಡಿನ ಮಹಿಳೆಯರಿಗೆ ಅರ್ಥವಾಗಿದ್ದೆಂದರೆ ಗಣಿಗಾರಿಕೆ, ಅಣೆಕಟ್ಟು ಇವುಗಳಿಂದ ಜೀವನದಿಗಳು ಬತ್ತಿ ಹೋಗುತ್ತವೆ. ಕಾಡುಗಳು ಕರಗಿ ಬೋಳು ನೆಲ ಉಳಿಯುತ್ತದೆ. ಕಾಡುಗಳು, ಮರಗಳು ಹೋದರೆ ಇಲ್ಲಿಯವರೆಗೆ ಸ್ವಾವಲಂಬಿಯಾಗಿದ್ದ ಸ್ವತಂತ್ರವಾಗಿದ್ದ ಮಹಿಳೆಯರು ಭಿಕ್ಷುಕರಾಗುತ್ತಾರೆ, ಗುಲಾಮರಾಗುತ್ತಾರೆ. ಅವರ ಸರಳ ಬದುಕಿಗೆ ನದಿ, ಕಾಡು ಮರಗಳು ಬೇಕಾದದ್ದನ್ನು ಕೊಡುತ್ತಿದ್ದವು. ಅವಶ್ಯವಿದ್ದದ್ದನ್ನು ಮಾತ್ರ ಬೆಳೆಯುತ್ತಿದ್ದರು. ಅವರು ಶ್ರಮಜೀವಿಗಳೂ ಹೌದು. ಸ್ವಾಭಿಮಾನಿ ಸ್ವತಂತ್ರ ವ್ಯಕ್ತಿಗಳೂ ಹೌದು. ಹೀಗಾಗಿ ಅವರು ಅಪ್ಪಿಕೋ ಚಳುವಳಿಯ ನಿಜವಾದ ನೇತಾರರಾದರು. ಮರಕಡಿಯಲು ಬರುತ್ತಿದ್ದ ಲಾರಿಗಳನ್ನು ತಡೆಯಲು ಅವುಗಳ ಎದುರಿಗೆ ನಿಲ್ಲುತ್ತಿದ್ದರು. ಕಂಟ್ರಾಕ್ಟುದಾರರ ಗೂಂಡಾಗಳು ಕಲ್ಲು, ಬಡಿಗೆಗಳಿಂದ ಹೊಡೆದರೂ ಸಹಿಸಿಕೊಳ್ಳುತ್ತಿದ್ದರು. ಮರಗಳನ್ನು ಅಪ್ಪಿಕೊಂಡು ನಿಲ್ಲುತ್ತಿದ್ದರು. ಇವರು ಸುಂದರಲಾಲ್ ಬಹುಗುಣರ ಗುರುಗಳು.

ಇಂದು ಬಂಡವಾಳಶಾಹಿ ಪ್ರೇರಿತ ಪರಿಸರ ವಿನಾಶದ ವಿರುದ್ಧ ಹೋರಾಡುತ್ತಿರುವ ಪಶ್ಚಿಮಘಟ್ಟದ ಹೋರಾಟಗಾರ್ತಿ ವಂದನಾ ಶಿವಾ ಈ ಮಹಿಳೆಯರನ್ನು ಭೇಟಿಯಾಗಿ ಅವರನ್ನು ಮಾತನಾಡಿಸುತ್ತಾರೆ. ಈ ಮಾತುಕತೆಯನ್ನು ಓದಿದ ಮೇಲೆ ಮಹಿಳೆಯರ ಬಗ್ಗೆ ಇರುವ ದಡ್ಡ ಕಲ್ಪನೆಗಳೆಲ್ಲ ಕಳಚಿಹೋಗುತ್ತವೆ. ಅವರೆದುರಿಗೆ ಗಂಡಸರೆಲ್ಲಾ ಕ್ಯಾಬಿ ನೈ ಆಗಿ ಕಾಣುತ್ತಾರೆ. ಪರಿಸರವಾದವು ಮಹಿಳೆಯರ ಬದುಕೇ ಆಗಿದೆ. ಅದನ್ನು ಕದ್ದು ನಾವು ಪೇಟಂಟ್ ಮಾಡಿಕೊಂಡಿದ್ದೇವೆ. ಆ ಮಾತುಕತೆಯ ಕೆಲವು ಭಾಗಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ. ಭಾವಾನುವಾದ ಮಾತ್ರ ಮಾಡಿದ್ದೇನೆ.

"ಮಗುವಿಗೆ ಹಾಲುಕೊಟ್ಟು ಹೊರಡಬೇಕೆನ್ನುವಷ್ಟರಲ್ಲಿ ಲಾರಿಯ ಸದ್ದು ಕೇಳಿಸಿತು. ಅರೆ, ಸರಕಾರದ ಆಜ್ಞೆ ಮೀರಿ ಇದು ಹೇಗೆ ಬಂದಿತು? ಅದನ್ನು ತಡೆಯಲು ಅಲ್ಲಿ ಇದ್ದ ನಮ್ಮ ಸ್ವಯಂಸೇವಕರಿಗೇನಾಯಿತು ಎಂದು ಯೋಚಿಸಿದೆ. ಹೋಗಿ ನೋಡಿದರೆ ಅವರನ್ನು ಎತ್ತಿಕೊಂಡು ಹೋಗಿಬಿಟ್ಟಿದ್ದಾರೆ, ನಾನು ಲಾರಿಯ ಎದುರಿಗೆ ನಿಂತುಕೊಂಡು ’ನನ್ನ ಮೇಲೆ ಹರಿದೇ ಈ ಲಾರಿ ಹೋಗಬೇಕು’ ಎಂದೆ. ಸುಮಾರು ಹೊತ್ತಿನ ಮೇಲೆ ಅದು ವಾಪಸ್ಸು ಹೊರಟು ಹೋಯಿತು".

"ಈ ಕಂಟ್ರಾಕ್ಟುದಾರರ ಗುಜ್ರಾಲ್ ಇದ್ದಾನಲ್ಲ, ಅವನು ನಮಗೆ ಹೇಳಿದ. ನಮಗೆ ಅಡ್ಡಿಮಾಡದಿದ್ದರೆ ಇಲ್ಲಿ ನಿಮಗೆ ಆಸ್ಪತ್ರೆ ಕಟ್ಟಿಸಿಕೊಡುತ್ತೇನೆ. ಸ್ಕೂಲ್ ಕಟ್ಟಿಸಿಕೊಡುತ್ತೇನೆ ಅಂತ. ನಾವು ಹೇಳಿದೆವು ಇಪ್ಪತ್ತಾರು ವರ್ಷ ಬರದೇ ಇದ್ದ ಬುದ್ಧಿ ಈಗ ಬಂದಿದೆಯ? ಕಾಡು ಇಲ್ಲದೆ, ಬದುಕೇ ಇಲ್ಲದ ಮೇಲೆ ಆಸ್ಪತ್ರೆ ಏನಕ್ಕೆ?"


"ನಮ್ಮ ನದಿ, ಮರಗಳು ಕಾಡುಗಳು ಇದ್ದರೆ ನಾವು ಬಡವರಲ್ಲ, ಶ್ರೀಮಂತರೇ. ನಮಗೆ ಪಟ್ಟಣಕ್ಕೆ ಬಂದು ಸಾಲಿನಲ್ಲಿ ನಿಂತು ಕೊಳ್ಳುವುದು ಏನೂ ಇಲ್ಲ. ನಮ್ಮ ಕಾಡು, ನದಿ, ನಮ್ಮ ಸ್ವಾತಂತ್ರ್ಯ ಇವು ಮೂರೇ ನಮಗೆ ಸಾಕು. ಅವಳ ಮಗ ಹೇಳಿದ್ದು ಕಂಟ್ರಾಕ್ಟುದಾರ ನನಗೆ 5 ಲಕ್ಷ ದುಡ್ಡು ಕೊಡಲು ಬಂದ. ಇದನ್ನು ತಗೋ. ನಿನ್ನ ತಾಯಿ ಚಳುವಳಿಯನ್ನು ಬಿಡುವಂತೆ ಮಾಡು ಇದೇನು ಕಡಿಮೆ ದುಡ್ಡಲ್ಲ. ನಾನು ಹೇಳಿದೆ, ಬೇಡ ದುಡಿದರೆ ದುಡ್ಡು ಬಂದೀತು. ನನ್ನ ತಾಯಿಯ ಮರ್ಯಾದೆ, ಘನತೆ ಹೋದರೆ ನಮ್ಮ ಸಮುದಾಯದಲ್ಲಿ ಬದುಕೋಕೆ ಆಗುತ್ತಾ."


ವಂದನಾ ಶಿವ ಆ ಮಹಿಳೆಯರನ್ನು ಕೇಳುತ್ತಾರೆ- ನಿಮಗೆ ಈ ಶಕ್ತಿ ಎಲ್ಲಿಂದ ಬರುತ್ತದೆ?
ಉತ್ತರ ಹೀಗಿದೆ,
"ನಮಗೆ ಶಕ್ತಿ ಈ ಕಾಡುಗಳಿಂದ, ಹಲ್ಲುಗಾವಲುಗಳಿಂದ ಬರುತ್ತದೆ. ಅವು ತಮ್ಮ ಆಂತರಿಕ ಶಕ್ತಿಯಿಂದ ವರ್ಷದಿಂದ ವರ್ಷಕ್ಕೆ ಬೆಳೆಯುವುದನ್ನು ನೋಡಿದ್ದೇವೆ. ನಮ್ಮ ಈ ನೀರ ಧಾರೆಗಳು ಮತ್ತೆ ಮತ್ತೆ ಹೊಸದಾಗಿ ಜೀವ ಪಡೆದುಕೊಳ್ಳುವುದನ್ನು ನೋಡಿದ್ದೇವೆ. ಮಿರುಗಿ ಹೊಳೆಯುವ ಅವುಗಳ ನೀರನ್ನು ಕುಡಿದು ಶಕ್ತಿಯನ್ನು ಹೀರಿಕೊಂಡಿದ್ದೇವೆ. ನಾವು ತಾಜಾ ಹಾಲನ್ನು ಕುಡಿದು, ತುಪ್ಪವನ್ನು ತಿಂದು ನಮ್ಮ ಹೊಲಗಳಲ್ಲಿ ಬೆಳೆದದ್ದನ್ನೇ ಉಣ್ಣುತ್ತೇವೆ. ಇದೆಲ್ಲ ನಮ್ಮ ದೇಹಗಳಿಗೆ ಮಾತ್ರವಲ್ಲ ಮನಸ್ಸುಗಳಿಗೂ ಶಕ್ತಿಕೊಡುತ್ತದೆ. ನಾವು ನಮ್ಮ ಒಡೆಯರು, ಯಾರ ಗುಲಾಮರೂ ಅಲ್ಲ. ನಿಸರ್ಗದ ಶಕ್ತಿಯೇ ನಮ್ಮ ಶಕ್ತಿ. ಈ ಕಂಟ್ರಾಕ್ಟುದಾರರು ನಮ್ಮ ಮಕ್ಕಳನ್ನು ಕಲ್ಲಿನಿಂದ ಹೊಡೆದರು; ಕಬ್ಬಿಣದ ಸಲಾಕೆಗಳಿಂದ ಹೊಡೆದರು, ಆದರೆ ಅವರ ಕೈಲಿ ನಮ್ಮ ಶಕ್ತಿಯನ್ನು ನಾಶಮಾಡಲು ಆಗಲಿಲ್ಲ".


ಆದರೆ ಈ ಮಹಿಳೆಯರಿಗೆ, ಅಲ್ಲಿಯ ಜನಸಮುದಾಯಗಳಿಗೆ ನಮ್ಮ ಎಲ್ಲಾ ಸರಕಾರಗಳು ಮೋಸ ಮಾಡಿದವು. ಸುಂದರಲಾಲ್ ಬಹುಗುಣ ಎರಡು ಸಾರಿ ಸುದೀರ್ಘ ಕಾಲದ ಉಪವಾಸ ಮಾಡಿದರು. ಇನ್ನೇನು ಅವರು ಬದುಕುವುದಿಲ್ಲವೆನ್ನುವಾಗ ಜಾರ್ಜ್ ಫರ್ನಾಂಡಿಸ್ ಪ್ರಧಾನ ಮಂತ್ರಿಗಳಿಗೆ ಬಹುಗುಣ ವಿರೋಧಿಸುತ್ತಿರುವ ಯೋಜನೆಯನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸಲು ಆದೇಶ ನೀಡಿ ಎಂದು ಕೇಳಿಕೊಳ್ಳುತ್ತಾರೆ. ಪ್ರಧಾನಿಗಳು ಅವರೆದುರಿಗೇ ಅಧಿಕಾರಿಗಳನ್ನು ಕರೆದು ಆದೇಶಗಳನ್ನು ಕೊಡುತ್ತಾರೆ. ಅವು ಬಹುಗುಣರು ಉಪವಾಸವಿದ್ದ ಸ್ಥಳಕ್ಕೆ ತಲುಪುವುದೇ ಇಲ್ಲ, ಬಹುಗುಣರ ಆರೋಗ್ಯ ವಿಚಾರಿಸಲು ಇಂದಿರಾ ಜೈಸಿಂಗ್ ಅಲ್ಲಿಗೆ ಹೋದರೆ ಬಹುಗುಣ ಮೌನವ್ರತದಲ್ಲಿರುತ್ತಾರೆ. ಆದರೆ ತಮ್ಮ ಅಭಿಪ್ರಾಯವನ್ನು ಅನೇಕ ಪುಟಗಳಲ್ಲಿ ಬರೆದುಕೊಡುತ್ತಾರೆ. ಈ ಮನುಷ್ಯನನ್ನು ಕಣ್ಣಿಗೆ ಕಾಣದ ಯಾವುದೋ ಶಕ್ತಿ ಕಾಪಾಡುತ್ತದೆ ಎಂದು ಇಂದಿರಾ ಜೈಸಿಂಗ್ ಬರೆಯುತ್ತಾರೆ. ಬಹುಗುಣರ ಗುರುಗಳಾದ ಮಹಿಳೆಯರಿಗೆ ಈ ಶಕ್ತಿ ಯಾವುದೇ ದೈವಿಕ ಪವಾಡವಾಗಿರಲಿಲ್ಲ. ಕಾಡು, ನದಿ, ಮರ ಎನ್ನುವ ಹಲವು ತಾಯಂದಿರ ಪ್ರೀತಿಯ ಕೊಡುಗೆ ಆಗಿತ್ತು.

ಈ ಲೇಖನ ಪ್ರಕಟವಾಗುವ ಹೊತ್ತಿಗೆ (೫ ಜೂನ್) ಮತ್ತೆ ಪರಿಸರ ದಿನಾಚರಣೆ ಬರುತ್ತದೆ. ಇನ್ನು ಮೇಲೆ ಅದನ್ನು ಅಭಿವೃದ್ಧಿ ದಿನಾಚರಣೆಯೆಂದು ಆಚರಿಸಬೇಕೆಂದು ಮೇಲಿಂದ ಫರ್ಮಾನು ಬರಬಹುದೆ?

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...