ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ

Date: 27-01-2025

Location: ಬೆಂಗಳೂರು


"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳಕ್ಕೆ ಸಾಗುತ್ತಿದ್ದ ನಮ್ಮ ಇನ್ನೋವ ಕಾರನ್ನು ವಿವಿಧ ವರ್ಗದ ಪೋಲಿಸರು ತಡೆದು ನಿಲ್ಲಿಸಿದರು," ಎನ್ನುತ್ತಾರೆ ಅಂಕಣಕಾರ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ ರೊಟ್ಟಿ ಬುತ್ತಿ ಅಂಕಣಕ್ಕೆ ಬರೆದ ಅವರ ‘ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ' ಕುರಿತು ಬರೆದ ಲೇಖನ.

ಖರೇವಂದ್ರ ಅದು ನನ್ನ ಮತ್ತು ಬನಶಂಕರಿ ನಾಟಕಗಳ ಜಾತ್ರೆಯ ಎರಡನೇ ಭೆಟ್ಟಿಯಾಗಿತ್ತು. ಈ ಎರಡೂ ಭೆಟ್ಟಿಗಳು ಸರ್ಕಾರಿ ಕೆಲಸದ ಸಂಬಂಧಿ ಭೆಟ್ಟಿಗಳಾಗಿದ್ದವೆಂಬುದು ಮಾತ್ರ ನಿಜಕ್ಕೂ ಸುಳ್ಳಲ್ಲ. ಅದಿನ್ನೂ 2025ರ ಹೊಸ ವರುಷದ ಹದಿನೇಳನೇ ದಿವಸ. ಅಂದರೆ ಜನವರಿ ಹದಿನೇಳನೇ ತಾರೀಖು. ಅಂದು ನಡುದಿನದ ಮಧ್ಯಾಹ್ನ ಹನ್ನೆರಡು ಗಂಟೆಯೂ ಆಗಿರಲಿಲ್ಲ. ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳಕ್ಕೆ ಸಾಗುತ್ತಿದ್ದ ನಮ್ಮ ಇನ್ನೋವ ಕಾರನ್ನು ವಿವಿಧ ವರ್ಗದ ಪೋಲಿಸರು ತಡೆದು ನಿಲ್ಲಿಸಿದರು.

ಕಾರಿನೊಳಗೆ ನಾಕೈದು ಮಂದಿ ನಮ್ಮ ಸಮಿತಿಯ ಸಿಬ್ಬಂದಿ ಇದ್ದೆವು. ನಾಲ್ಕಾರು ಮೈಲು ದೂರದ ಫೋರ್ ವ್ಹೀಲ್ ನಿಲ್ದಾಣದೆಡೆಗೆ ನಮ್ಮ ಕಾರು ನಿಲುಗಡೆಯ ವಿವರಗಳನ್ನು ಪೋಲಿಸರು ತೋರಿದರು. ಅವರು ತೋರಿದ ನಿಲುದಾಣದ ಅಷ್ಟು ದೂರದಿಂದ ನಡೆದು ಬಂದು ಬನಶಂಕರಿಯೆಂಬ ಜಾತ್ರೆಯ ನಾಟಕ ಕಂಪನಿಗಳನ್ನು ಪರಿವೀಕ್ಷಿಸಿ ಸರಕಾರ ನೀಡುವ ಅನುದಾನ ಶಿಫಾರಸ್ಸು ಮಾಡುವುದು ಕಷ್ಟದ ಕೆಲಸ ಅದಾಗಿತ್ತು. ಅಂತೆಯೇ ನಾವು 'ಸರ್ಕಾರ ನಿಗದಿ ಮಾಡಿದ ಕೆಲಸಕ್ಕಾಗಿ ಬಂದಿರುವುದಾಗಿ' ನಾನು ತಿಳಿಸಿದಾಗ, ಪೊಲೀಸರು ನಮ್ಮ ಗುರುತಿನ ಚೀಟಿ ಕೇಳಿ ಜಾತ್ರೆಯೊಳಗೆ ನೇರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.

ಪದರು ಪದರಿನ ಶಿಲಾವೃತ ಗಿರಿ ಕಂದರಗಳ ಮಲಪ್ರಭೆಯ ಮಡಿಲನಾಡು ಬನಶಂಕರಿ. ಶಕ್ತಿದೇವತೆಯ ದಿವ್ಯಸನ್ನಿಧಿಯಲ್ಲಿ ಈ ಬಾರಿ ಹತ್ತಕ್ಕೂ ಹೆಚ್ಚು ನಾಟಕ ಕಂಪನಿಗಳು ಮೊಕ್ಕಾಂ ಮಾಡಿವೆ. ಅಬ್ಬಬ್ಬಾ! ಎಲ್ಲಾ ಹತ್ತು ನಾಟಕ ಕಂಪನಿಗಳಲ್ಲಿ ಚಿತ್ರವಿಚಿತ್ರ ಹೆಸರುಳ್ಳ ನಾಟಕಗಳು. ಅವುಗಳ ಕಿವಿಗಡಚಿಕ್ಕುವ ತರಹೇವಾರಿ ಪ್ರಚಾರ. ದೈತ್ಯಾಕಾರದ ಕಲರ್ಫುಲ್ ಕಟೌಟುಗಳು. ನಾವು ಅಕ್ಷರಶಃ ಕಂಪನಿ ನಾಟಕಗಳ ಪ್ರಚಾರದ ಮಹಾ ಸಾಗರದಲ್ಲಿ ತೇಲಿ, ಮುಳುಗಿ ಹೋದೆವು. ಅದು ನಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದ ಅವು ಅಂತಿಂತಹ ಪ್ರಚಾರದ ಅನುಭವಗಳು ಆಗಿರಲಿಲ್ಲ. ಯಾವುದೇ ಸಾಹಿತಿ ಬರೆದು ನಿರೂಪಿತ ಸಾಹಿತ್ಯಕ್ಕೆ ಬದಲು ಅದರ ಪ್ರಚಾರದ ಶೈಲಿ, ಧ್ವನಿಭಾಷೆಯ ವೈಖರಿಯೇ ವಿಭಿನ್ನ. ನೋವಿನ ಸಂಗತಿ ಎಂದರೆ ನಾಟಕಗಳ ಹೆಸರುಗಳಲ್ಲಿ ಹೆಣ್ಣನ್ನು ಕಮರ್ಸಿಯಲ್ ಸರಕಿನಂತೆ ಬಳಸಿಕೊಂಡದ್ದು ಢಾಳಾಗಿ ಎದ್ದು ಕಾಣಿಸುತ್ತದೆ. ಮೂಲದ ನಾಟಕಗಳ ಹೆಸರು ಮರೆಮಾಚಿ ಇಂತಹ ವಿಕ್ಷಿಪ್ತ ಶೀರ್ಷಿಕೆಗಳಿಂದ ಹೆಣ್ಣನ್ನು ಅವಕೃಪೆಗೀಡು ಮಾಡುತ್ತಿದ್ದೇವೆಂಬ ಕನಿಷ್ಠ ಅರಿವಿರದ ಒಂದು ಬಗೆಯ ಜಾಣ ಮುಗ್ದತೆ. ಇದು ಅನಾರೋಗ್ಯಕರ ಬೆಳವಣಿಗೆಯೇ ಹೊರತು ಇನ್ನೇನಲ್ಲ.

ಅದೇನಾದರೂ ಚಲನಚಿತ್ರ ಮತ್ತು ರಿಯಾಲಿಟಿ ಶೋ ಪ್ರಚಾರಕರ ಕಿವಿ ಮೇಲೆ ಬಿದ್ದರೆ ಸಾಕು, ನಿಜಕ್ಕೂ ಅನುಕರಿಸಬಹುದಾದ ಪ್ರಖರ ಪ್ರಚುರತೆಯ ಅಗ್ಗದ ಸಾಹಿತ್ಯ ಅದಾಗಿರುತ್ತದೆ. ಅಷ್ಟು ಮಾತ್ರವಲ್ಲ ಅದು ಅಕ್ಷರಲೋಕಕ್ಕೆ ಸವಾಲೊಡ್ಡುವಂತೆ ಸ್ಥಳೀಯ ನುಡಿಗಟ್ಟು ಜಗತ್ತನ್ನೇ ಬಿಚ್ಚಿಡಬಲ್ಲದು. ಅದನ್ನು ಕೇಳಿಸಿಕೊಂಡವರೆಲ್ಲ ನಾಟಕ ನೋಡಬಲ್ಲ ಸಾಧ್ಯತೆಗಳನ್ನು ಖಂಡಿತಾ ಅಲ್ಲಗಳೆಯಲಾಗದು. ಅಷ್ಟು ಮಾತ್ರವಲ್ಲ ಮೊದಲು ಯಾವ ನಾಟಕ ನೋಡಬೇಕೆಂಬ ದಿವಿನಾದ ಕೌತುಕ. ದಿನಕ್ಕೆ ಹತ್ತು ನಾಟಕಗಳ ನಲವತ್ತು ಪ್ರದರ್ಶನಗಳ ಭರಪೂರ ಮನರಂಜನೆ. ಹೆಣ್ಣು ಗಂಡು, ಮಕ್ಕಳು ಮುದುಕರಾದಿಯಾಗಿ ಸಾಲಲ್ಲಿ ನಿಂತು ಟಿಕೆಟ್ ಪಡೆಯುವುದು ಅಲ್ಲಿ ಸಾಹಸದ ಪ್ರಕ್ರಿಯೆ.

ಪ್ರಾಯಶಃ ದೇಶದ ಬೇರೆಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ತಿಂಗಳುಗಟ್ಟಲೇ ನಾಟಕ ನೋಡುವ ಪ್ರೇಕ್ಷಕ ಪ್ರಭುಗಳು ಇರಲಿಕ್ಕಿಲ್ಲ. ಒಂದು ಸಮೀಕ್ಷೆಯ ಪ್ರಕಾರ ದಿನವೊಂದಕ್ಕೆ ಬನಶಂಕರಿ ಜಾತ್ರೆಯಲ್ಲಿ ನಲವತ್ತು ಸಾವಿರದಷ್ಟು ಪ್ರೇಕ್ಷಕರು ಮೊದಲ ಹತ್ತು ದಿನಗಳ ಕಾಲ ನಾಟಕ ನೋಡುತ್ತಾರೆ. ಕೆಲವೊಬ್ಬರು ಒಂದು ದಿನಕ್ಕೆ ಬೇರೆ ಬೇರೆ ಕಂಪನಿಯ ಎರಡು, ಮೂರು ನಾಟಕಗಳನ್ನು ವೀಕ್ಷಿಸಿ ಸಂಭ್ರಮ ಪಡುತ್ತಾರೆ. ಹಗಲು ರಾತ್ರಿ ಎನ್ನದೇ ನಿದ್ದೆಗೆಟ್ಟು ಇಪ್ಪತ್ನಾಲ್ಕು ತಾಸುಗಳಲ್ಲಿ ನಾಲ್ಕೂ ನಾಟಕಗಳನ್ನು ನೋಡುವವರೂ ಇದ್ದಾರೆ. ಬಾದಾಮಿ ಸೇರಿದಂತೆ ದೂರದ ಬೇರೆ ಬೇರೆ ಊರುಗಳಿಂದ ತುಂಬಿ ತುಳುಕುವ ಪ್ರೇಕ್ಷಕರ ಮಹಾಜಾತ್ರೆ ಅದಾಗಿರುತ್ತದೆ. ನೆನಪಿರಲಿ ನಾಟಕ ನೋಡಲಿಕ್ಕಾಗಿಯೇ ಜಾತ್ರೆಗೆ ಬರುವವರೂ ಅಲ್ಲಿರುತ್ತಾರೆ.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳಿಂದಲೂ ನಾಟಕ ನೋಡುವ ಭಕ್ತರು ಜಾತ್ರೆಗೆ ಬಂದಿರುತ್ತಾರೆ. ಪ್ರಾದೇಶಿಕವಾಗಿ ಬಹುಪಾಲು ರೈತಾಪಿ ಜನಗಳಿಗೆ ಬೇಕಾಗುವ ಕೃಷಿಗೆ ಸಂಬಂಧಿಸಿದ ಸಾಮಾನು ಸಲಕರಣೆಗಳ ಮಾರಾಟ ಮೇಳವೂ ಅದಾಗಿರುತ್ತದೆ. ಆದರೆ ಅದೆಲ್ಲದರ ನಡುವೆ ಅದನ್ನು ವೃತ್ತಿ ನಾಟಕ ಕಂಪನಿಗಳ ಕುಂಭಮೇಳವೇ ಎಂಬುದಾಗಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಕರೆಯುತ್ತಾರೆ. ರಂಗಭೂಮಿ ಜಾತ್ರೆಯ ನಾಟಕಗಳ ಇಂತಹ ಕುಂಭಮೇಳಕ್ಕೆ ತಿಂಗಳ ಪರ್ಯಂತರ ಅಜಮಾಸು ಒಂದು ಕೋಟಿಯಷ್ಟು ಜನರು ನಾಟಕಗಳ ವೀಕ್ಷಣೆ ಮಾಡುತ್ತಾರೆಂಬುದು ಅತ್ಯುಕ್ತಿಯ ಮಾತಲ್ಲ.

ನೂರೈವತ್ತು ಮತ್ತು ನೂರಿಪ್ಪತ್ತು ರುಪಾಯಿ ತಿಕೀಟು ದರದ ಒಂದೂವರೆ ಸಾವಿರ ಕುರ್ಚಿಗಳುಳ್ಳ ಒಂದೊಂದು ನಾಟಕ ಕಂಪನಿ ತುಂಬೆಲ್ಲ ಆರಂಭಿಕ ಹತ್ತು ದಿನಗಳವರೆಗೆ ತುಂಬಿ ತುಳುಕುವ ರಂಗಸಂಭ್ರಮ. ಹಾಗೆ ಹತ್ತು ನಾಟಕ ಕಂಪನಿಗಳಿಂದ ಏನಿಲ್ಲವೆಂದರೂ ದಿನವೊಂದಕ್ಕೆ ನಲವತ್ತು ಸಾವಿರ ಪ್ರೇಕ್ಷಕರು ನಾಟಕಗಳ ಸವಿ ಸಂಭ್ರಮಿಸುವ ದಾಖಲೆ ಕರ್ನಾಟಕದ ಬೇರೆಲ್ಲೂ ಇಲ್ಲ. ರುಪಾಯಿ ನೂರೈವತ್ತು ಮತ್ತು ನೂರಿಪ್ಪತ್ತು ದರಗಳಂತೆ ಲಕ್ಷ ಲಕ್ಷ ರುಪಾಯಿ ಹಣದ ವಹಿವಾಟು ಜರುಗುತ್ತದೆ. ನೆನಪಿರಲಿ, ಹಗಲು ರಾತ್ರಿಯೆನ್ನದೇ ದಿನವೊಂದಕ್ಕೆ ಮೂರುತಾಸಿನ ನಾಲ್ಕು ನಾಟಕಗಳ ನಲವತ್ತು ಪ್ರದರ್ಶನಗಳು. ಅಂದಗಾಗೆ ದಿನವೊಂದಕ್ಕೆ ರುಪಾಯಿ ನಲವತ್ತು ಲಕ್ಷಗಳು ವಹಿವಾಟುಗೊಳ್ಳುವ ಪ್ರೇಕ್ಷಾಂಗಣಗಳು ಅಲ್ಲಿ ವ್ಯವಸ್ಥಿತಗೊಂಡಿರುತ್ತವೆ. ಸೋಜಿಗವೆಂದರೆ ಹೆಣ್ಣುಮಕ್ಕಳು ಸಹಿತ ನಾಟಕ ನೋಡಲು ಮುಗಿ ಬೀಳುತ್ತಾರೆ. ಹಾಗೆ ನೋಡಿದರೆ ಅವರು ಟಿಕೆಟ್ ಪಡೆಯಲು ಮಾಡುವ ಹರಸಾಹಸವೇ ನಿಜವಾಗಿಯೂ ದಾಖಲಾರ್ಹ.

ಅಚ್ಚರಿ ಮತ್ತು ಆಕರ್ಷಕ ಎನ್ನುವಂತೆ ಸಿನೆಮಾ, ಕಿರುತೆರೆ, ರಿಯಾಲಿಟಿ ಸರಣಿ ಶೋಗಳ ತಾರಾಲೋಕವೇ ಬನಶಂಕರಿ ಜಾತ್ರೆಯಲ್ಲಿ ಜಂಡಾ ಹೂಡಿರುತ್ತದೆ. ಬೆಂಗಳೂರು ಕೇಂದ್ರಿತ ತಾರೆಯರಿಗೆ ತಾವು ಅಭಿನಯಿಸುವ ಅಲ್ಲಿಯ ನಾಟಕಗಳ ಥರಾವರಿ ಹೆಸರಗಳನ್ನೇ ಉಚ್ಚರಿಸಲು ಬಾರದು. ಹೀಗಿರುವಾಗಲೂ ಬಹುಪಾಲು ನಾಟಕ ಕಂಪನಿಗಳಿಗೆ ಸೆಲೆಬ್ರಿಟಿ ತಾರಾ ವರ್ಚಸ್ಸುಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುವ ಹಬ್ಬದ ಹುಚ್ಚು. ಅದು ಅವರ ಮುಗ್ದ ನಂಬಿಕೆ ಅಲ್ಲದೇ ಮತ್ತೇನೂ ಅಗಿರಲಾರದು. ಇದೆಲ್ಲಾ ನಾವು ಭೆಟ್ಟಿ ನೀಡಿದ ನಾಟಕ ಕಂಪನಿಗಳ ಗಲ್ಲಾಪೆಟ್ಟಿಗೆ ಆಧಾರದಿಂದ ಪರಿಶೀಲಿಸಿ ಹೇಳಲು ಸಾಧ್ಯವಾಯಿತು.

ಪರಮ ಸೋಜಿಗ ಎಂಬಂತೆ ದಕ್ಷಿಣ ಕರ್ನಾಟಕದ ಒಂದೇ ಒಂದು ನಾಟಕ ಮಂಡಳಿ ಅಲ್ಲಿ ಮೊಕ್ಕಾಂ ಮಾಡಿರುವುದಿಲ್ಲ. ಅಷ್ಟೇ ಯಾಕೆ ಚಿತ್ರದುರ್ಗವೇ ಉತ್ತರ ಕರ್ನಾಟಕದ ಕೊನೆ ಎಂಬಂತೆ ಸರಕಾರ ನೀಡುವ ಅನುದಾನ ಪಡೆಯುವ ನಾಟಕ ಕಂಪನಿಗಳ ಪೈಕಿ ಕೊನೆಯ ಜಿಲ್ಲೆ. ಹಾಗಾದರೆ ದಕ್ಷಿಣ ಕರ್ನಾಟಕದಲ್ಲಿ ನಾಟಕ ಕಂಪನಿಗಳೇ ಇಲ್ಲವೇ.? ಇದ್ದರೂ ಸರಕಾರ ನೀಡುವ ಅನುದಾನಕ್ಕೆ ಅರ್ಜಿ ಸಲ್ಲಿಸುವುದಿಲ್ಲವೋ ಗೊತ್ತಿಲ್ಲ. ನಾಟಕ ಕಂಪನಿಯೊಂದರ ಓರ್ವ ಹಿರೀಕ ಮಾಲೀಕರ ಹೇಳಿಕೆಯಂತೆ ತಿಂಗಳೊಪ್ಪತ್ತರ ಬನಶಂಕರಿ ಜಾತ್ರೆ ಕ್ಯಾಂಪಿಗೆ ಒಂದೊಂದು ಕಂಪನಿಗೆ ಹತ್ತು ಲಕ್ಷದಷ್ಟು ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಖರ್ಚಾಗುವ ಅಷ್ಟು ಹಣವಂತೂ ದುಡಿಯಲೇ ಬೇಕು. ಮುಂದುವರೆದು ಅವರೇ ಹೇಳಿದ ಮತ್ತೊಂದು ಮಾತು ಹೀಗಿದೆ. ಈ ಜಾತ್ರೆಯಲ್ಲಿ ಉತ್ಕೃಷ್ಟ ಮಟ್ಟದ ಮತ್ತು ನಿಕೃಷ್ಟ ಗುಣಮಟ್ಟದ ನಾಟಕಗಳು ಮಾತ್ರ ಓಡುತ್ತವೆ. ಅವೆರಡರ ನಡುವಿನ ಮಧ್ಯಮ ಗುಣಮಟ್ಟದ ನಾಟಕಗಳು ಓಡುವುದಿಲ್ಲ. ಅವು ವಾರವೊಪ್ಪತ್ತಿನಲ್ಲಿ ಮುಗ್ಗರಿಸುತ್ತವೆ. ಇದು ಅವರ ಅನುಭವದ ಮಾತು.

ನಾಟಕಗಳ ಗುಣಮಟ್ಟದ ಮಾತೆಂಬುದು ಬನಶಂಕರಿಯ ರಂಗ ಜಾತ್ರೆಯಲ್ಲಿ ಅಪ್ರಸ್ತುತ ಆಲೋಚನೆಯೇ ಆಗಿರುತ್ತದೆ. ಪ್ರತಿಯೊಬ್ಬ ಪ್ರೇಕ್ಷಕನಿಗೆ ನಾಟಕ ನೋಡುವ ಧಾವಂತ ಮಾತ್ರ. ಅದೊಂದು ರೀತಿಯ ಸಾಂಸ್ಕೃತಿಕ ಪ್ರಜಾಪ್ರಭುತ್ವದ ಅಬ್ಬರ. ಅವುಗಳ ಅಬ್ಬರದ ಪ್ರಚಾರ ಮಾತ್ರ ವಾರದ ಮಟ್ಟಿಗೆ ನಿರಂತರವಾಗಿರುತ್ತದೆ. ಅದಾದ ಒಂದೆರಡು ದಿನಕ್ಕೆ ತುಸು ಏರುಪೇರು.‌ ತದನಂತರ ಮತ್ತೆ ಎರಡು ವಾರಕಾಲ ಭರ್ಜರಿ ಕಲೆಕ್ಷನ್. ಇದ್ದುದರಲ್ಲೇ ನಾಕೈದು ಕಂಪನಿಗಳದ್ದು ದಾಖಲೆ ಹುಟ್ಟಿಸುವ ಗಲ್ಲಾಪೆಟ್ಟಿಗೆ ಯಶಸ್ಸು.

ಹಾಕಿದ ಬಂಡವಾಳಕ್ಕೆ ದೋಖಾ ಇಲ್ಲ. ಅಂದಹಾಗೆ ಅಲ್ಲಿನ ನಾಟಕ ಕಂಪನಿಗಳನ್ನು ನಿಯಂತ್ರಣ ಮಾಡುವ ದೊಡ್ಡ‌ ಮಾಫಿಯಾ ಅಲ್ಲಿದೆ. ಅದನ್ನು ಕಲ್ಚರಲ್ ಮಾಫಿಯಾ ಎಂದು ಕರೆದು ಕೆಲವು ಮಂದಿ ಮಾಲೀಕರು ತುಂಬಾ ನೋವಿನಿಂದ ಅಳಲು ತೋಡಿಕೊಳ್ಳುತ್ತಾರೆ. ಅದು ಸ್ಥಾಪಿತ ಹಿತಾಸಕ್ತಿಗಳ ಆರ್ಥಿಕ ವಿಷವರ್ತುಲ. ಅದರಿಂದ ನಾಟಕ ಕಂಪನಿ ಮಾಲೀಕರಿಗೆ ಬಿಡುಗಡೆಯೇ ಇಲ್ಲದಂತಾಗಿದೆ. ಒಟ್ಟಾರೆ ಅವರದು ಹೇಳಲಾಗದ ಮತ್ತು ಹೇಳದಿರಲಾಗದ ಸಂಕಟ. ನಾಟಕ ಕಂಪನಿಗಳ ಜಾತ್ರೆ ದುಡಿಮೆಯ ಅರ್ಧದಷ್ಟು ಹಣ ಈ ಮಾಫಿಯಾ ಕೈ ಸೇರುತ್ತದೆ. ಅದೇನೇ ಅಪಸವ್ಯಗಳಿರಲಿ, ಬನಶಂಕರಿಯೆಂಬ ನಾಟಕಗಳ ಜಾತ್ರೆಯಲ್ಲಿ ಜನರು ಅಷ್ಟೊಂದು ಪ್ರೀತಿಯಿಂದ ನಾಟಕಗಳನ್ನು ನೋಡುವ ಅಭಿರುಚಿ ಮಾತ್ರ ನಿಜವಾಗಿಯೂ ಶ್ಲಾಘನೀಯ. ಬನಶಂಕರಿ ಜಾತ್ರೆಯಲ್ಲಿ ನನ್ನೊಂದಿಗೆ ಸಮಿತಿಯ ಸದಸ್ಯರಾಗಿ ಬಂದಿದ್ದ ಡಾ. ವಿಶ್ವನಾಥ ವಂಶಾಕೃತಮಠ, ಮೈಸೂರು ಹೆಲನ್, ಶಂಭುಲಿಂಗ ವಾಲ್ದೊಡ್ಡಿ, ಕಂಪನಿ ನಾಟಕಗಳ ಸಡಗರವನ್ನು ಸಂಭ್ರಮಿಸಿದರು.

ಮಲ್ಲಿಕಾರ್ಜುನ ಕಡಕೋಳ
9341010712

MORE NEWS

ಪ್ರೇಮದ ಹೊಸ ಆಖ್ಯಾನದ ಕವಿತೆಗಳು

14-02-2025 ಬೆಂಗಳೂರು

"ಬದುಕಿನ ಹಲವು ಆಯಾಮಗಳ ಮೂಲಕ ಪ್ರೇಮವನ್ನು ನೋಡುತ್ತವೆ. ಇಲ್ಲಿ ದುಃಖ, ವಿಷಾದ, ನೋವು, ಸಂಕಟ, ಸಂಭ್ರಮ ಒಂದಕ್ಕೊಂದು...

ಶ್ರಾದ್ಧ ಕಥೆಯಲ್ಲಿ ಕಾಣುವ ಆಚಾರದ ದ್ವಂದ್ವ ನಿಲುವು

13-02-2025 ಬೆಂಗಳೂರು

"ಶ್ರೀನಿವಾಸನ ಮನೆಯಲ್ಲಿ ತಂದೆಯ ಶ್ರಾದ್ಧ ಕಾರ್ಯ ಕುರಿತು ತಾಯಿ ಮಗನಲ್ಲಿ ತಿಳಿಸಿದರು ಕೂಡ ಅದರ ಬಗ್ಗೆ ಇದ್ದ ಅಸಡ್ಡ...

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ಬದುಕಿನಲ್ಲಿ ಸೋಲು

12-02-2025 ಬೆಂಗಳೂರು

"ಪೆರಮಾತಿನ ಶಿಕ್ಶಣ ಮಕ್ಕಳನ್ನು ಅವರದಲ್ಲದ ಇನ್ನೊಂದಕ್ಕೆ ಕಸಿ ಮಾಡುವುದರಿಂದ ಇಂತದೆಲ್ಲ ಅನಾಹುತಗಳ ಸಾದ್ಯತೆಗಳನ್ನು...