ಬಂಧನಕ್ಕೂ ಬಿಡುಗಡೆಗೂ ಏಕೈಕ ರಹದಾರಿ Modern Love

Date: 10-03-2022

Location: ಬೆಂಗಳೂರು


‘ಪ್ರೀತಿಯನ್ನು ಹೊಸತು-ಹಳತೆಂದು ವರ್ಗೀಕರಿಸಲು ಸಾಧ್ಯವೇ ಅಥವಾ ಹಾಗೆ ವರ್ಗೀಕರಿಸಿದರೂ ಅದರ ಅರ್ಥವ್ಯಾಪ್ತಿಯಲ್ಲಾಗಲೀ, ಬಾಂಧವ್ಯಗಳನ್ನು ಜೋಡಿಸಿಡುವ ಅದರ ರೀತಿಯಲ್ಲಾಗಲೀ ಏನಾದರೂ ವ್ಯತ್ಯಾಸವಾದೀತೇ!’ ಎಂದು ಪ್ರಶ್ನಿಸುತ್ತಾರೆ ಲೇಖಕಿ ಅಂಜನಾ ಹೆಗಡೆ ಅವರು ತಮ್ಮ ಬೆಳ್ಳಕ್ಕಿ ಸಾಲು ಅಂಕಣದಲ್ಲಿ Modern Love ಎಂಬ ಅಮೆರಿಕನ್ ವೆಬ್ ಸರಣಿಯ ಕುರಿತು ವಿಶ್ಲೇಷಿಸಿದ್ದಾರೆ. 

ಪ್ರೀತಿಗೊಂದು ಬೇಲಿ ಕಟ್ಟಿ, ಇದು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದು ಇಷ್ಟೇ ಅವಕಾಶದಲ್ಲಿ ಆನಂದ ಹೊಂದಬೇಕೆಂದು ಆಗ್ರಹಿಸುವಂತಿದ್ದರೆ ಎಲ್ಲವೂ ಎಷ್ಟೊಂದು ಸರಾಗವಾಗಿಬಿಡುತ್ತಿತ್ತು; ಬೇಲಿಯ ಆಚೆಗಿರುವ ಜೀವರಾಶಿಗಳ ಹಾಗೂ ಒಳಗಿರುವ ಬದುಕುಗಳ ನಡುವೆ ನಿರ್ವಾತವೊಂದು ಸೃಷ್ಟಿಯಾಗಿ ಪ್ರೀತಿಯ ಪರಿಕಲ್ಪನೆಯ ಪರಿಧಿಯೂ ಕಿರಿದಾಗುತ್ತ ಹೋಗುತ್ತಿತ್ತು! ಇದು ಕೇವಲ ತನ್ನದೆಂದುಕೊಂಡು ಲಘುವಾಗಿ ಪರಿಗಣಿಸುವ, ತನ್ನದಲ್ಲವೆನ್ನುವ ಅರಿವಿದ್ದೂ ಹಂಬಲಿಸುವ, ಎಲ್ಲಿಯೋ ತನಗಾಗಿಯೇ ಹುಟ್ಟಿರುವ ಜೀವವೊಂದು ತನ್ನ ಪ್ರೀತಿಗಾಗಿಯೇ ಕಾಯುತ್ತಿದೆಯೆನ್ನುವ ಆಶಾಭಾವದಲ್ಲಿ ಜೀವ ಹಿಡಿದಿಟ್ಟುಕೊಂಡಿರುವ, ಕಣ್ಣೆದುರಿಗೇ ಜೀವಂತವಾಗಿ ಓಡಾಡಿಕೊಂಡಿರುವ ಪ್ರೀತಿಯ ಚಹರೆಯನ್ನು ಗುರುತಿಸಲಾಗದೇ ಕಂಗಾಲಾಗಿರುವ ಎಲ್ಲರನ್ನೂ ನಿಯಂತ್ರಿಸಬಹುದಾಗಿದ್ದ ಆ ಬೇಲಿಯನ್ನು ಕಟ್ಟಲು ಸಾಧ್ಯವಾಗದಿರುವ ಕಾರಣಕ್ಕಾಗಿಯೇ ಪ್ರೀತಿಯ ನಡಾವಳಿಯನ್ನು ನಿಯಂತ್ರಿಸುವುದೂ ಸಾಧ್ಯವಿಲ್ಲ. ಕಟ್ಟುಪಾಡುಗಳನ್ನು ಒಂದೊಂದಾಗಿ ಕಳಚಿಕೊಳ್ಳುತ್ತ ಪರಿಪೂರ್ಣತೆಯ ಕ್ಷಣಗಳನ್ನು ತನ್ಮಯತೆಯಿಂದ ತನ್ನದಾಗಿಸಿಕೊಳ್ಳುತ್ತ ಸಾಗುವ ಪ್ರೀತಿಯ ಎಲ್ಲ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಡುವ, ಅಸಹಜವೆನ್ನಿಸಬಹುದಾದ ಸಂಬಂಧಗಳಲ್ಲಿಯೂ ಪ್ರೀತಿಯ ಸ್ವರೂಪವನ್ನು ಕೆಡಿಸದ ಬಿಡಿಬಿಡಿಯಾದ ಕಥೆಗಳ ಸರಣಿ Modern Love.          

ಪ್ರೀತಿಯನ್ನು ಹೊಸತು-ಹಳತೆಂದು ವರ್ಗೀಕರಿಸಲು ಸಾಧ್ಯವೇ ಅಥವಾ ಹಾಗೆ ವರ್ಗೀಕರಿಸಿದರೂ ಅದರ ಅರ್ಥವ್ಯಾಪ್ತಿಯಲ್ಲಾಗಲೀ, ಬಾಂಧವ್ಯಗಳನ್ನು ಜೋಡಿಸಿಡುವ ಅದರ ರೀತಿಯಲ್ಲಾಗಲೀ ಏನಾದರೂ ವ್ಯತ್ಯಾಸವಾದೀತೇ! ಪ್ರೀತಿ-ಪ್ರಣಯಗಳೇ ಸೃಷ್ಟಿಕ್ರಿಯೆಯನ್ನು ಸರಿಹೊಂದಿಸುವ ಭಾವನಾತ್ಮಕ, ದೈಹಿಕ ಅನುಭೂತಿಗಳಾಗಿರುವಾಗ ಅವುಗಳನ್ನು ಅಲ್ಲಗಳೆಯುವ ಆಧುನಿಕ ಮನಃಸ್ಥಿತಿಯೆಂದಿಗೂ ಹುಟ್ಟಿಕೊಳ್ಳಲಿಕ್ಕಿಲ್ಲ. ಸಾಂಸ್ಕೃತಿಕ-ಸಾಮಾಜಿಕ ಬದಲಾವಣೆಗಳಿಂದಾಗಿ ಪ್ರೀತಿಯ ಸ್ವರೂಪದಲ್ಲಿ ಮಾರ್ಪಾಡುಗಳಾಗಿರಬಹುದಾದರೂ, ಆ ಪ್ರೀತಿ ವ್ಯಕ್ತಗೊಳ್ಳುವ ರೀತಿಯಲ್ಲಿ ಹಠಾತ್ತಾದ ಪರಿವರ್ತನೆಗಳಾಗಿದ್ದರೂ ಎಲ್ಲ ಕಾಲದಲ್ಲಿಯೂ ಪ್ರೀತಿಯೆನ್ನುವುದು ಮನಸ್ಸನ್ನು ಮುದಗೊಳಿಸುವ, ಹೃದಯಗಳನ್ನು ಅರಳಿಸುವ, ಬದುಕುಗಳನ್ನೇ ಬದಲಿಸಿಬಿಡಬಲ್ಲ ಪರಿಭಾವ. ಸಾಂಪ್ರದಾಯಿಕವೆನ್ನಬಹುದಾದ ಮಾದರಿಯಲ್ಲಿ ಸಂಬಂಧಗಳನ್ನು ಹಿಡಿದಿಡುತ್ತಿದ್ದ ಪ್ರೀತಿಯ ಪರಿಕಲ್ಪನೆಯೊಂದು ಬದಲಾಗುತ್ತ ಸ್ವಾವಲಂಬಿ ಮನೋಭಾವದ, ಆಧುನಿಕ ಪ್ರವೃತ್ತಿಯ, ಸಾಧುವೂ-ಸರಳವೂ ಆದ ಪ್ರೀತಿಯ ವಿಭಿನ್ನವಾದ ವಿನ್ಯಾಸವೊಂದು ಲಭ್ಯವಿದೆ; ಬಂಧನವೂ, ಬಿಡುಗಡೆಯೂ ಇಲ್ಲಿ ಏಕಕಾಲಕ್ಕೆ ಸಾಧ್ಯವಿದೆ!          

ಇಲ್ಲೊಬ್ಬ ಕಾವಲುಗಾರ ಬಾಗಿಲನ್ನಷ್ಟೇ ಅಲ್ಲದೇ ಪ್ರೀತಿಯನ್ನೂ ಕಾಯುತ್ತಾನೆ. ತನಗೆ ಬಾಗಿಲು ಕಾಯುವುದರಲ್ಲಿ ಸಂತೋಷವಿದೆ ಎನ್ನುವ ಆತನ ನಡೆಯಲ್ಲೊಂದು ವಿಶಿಷ್ಟವಾದ ಆತ್ಮವಿಶ್ವಾಸವಿದೆ. ಹೊಂದಾಣಿಕೆಯಾಗದೇ ದೂರವಾದ ಗೆಳೆಯನ ಮಗುವಿಗೆ ತಾಯಿಯಾಗುವುದೋ ಬೇಡವೋ ಎನ್ನುವ ಸಂದಿಗ್ಧದಲ್ಲಿ ಅವಳು ಸಹಾಯಕ್ಕಾಗಿ ಹುಡುಕಿಕೊಂಡು ಬರುವುದು ಇದೇ ದ್ವಾರಪಾಲಕನನ್ನು. "ಇಲ್ಲಿ ಯಾರೂ ನಿನ್ನ ಯೋಗ್ಯತೆಯನ್ನು ನಿರ್ಣಯಿಸುವವರಿಲ್ಲ. ನಿನಗೆ ಯಾವುದು ಸರಿಯೆನ್ನಿಸುತ್ತದೆಯೋ ಅದನ್ನೇ ಮಾಡು. ಹೆದರಬೇಕಾಗಿಲ್ಲ. ನಿನ್ನ ಬದುಕಿನ ನಿರ್ಧಾರಗಳ ಹೊಣೆಗಾರಿಕೆ ನಿನ್ನದು ಮಾತ್ರ" ಎನ್ನುವ ಅವನ ಅಭಿಪ್ರಾಯದಲ್ಲಿ ಅವಳ ಪ್ರೀತಿಯನ್ನಾಗಲೀ, ಬದುಕನ್ನಾಗಲೀ ವಿಮರ್ಶಿಸುವ ಕೊಂಕಿಲ್ಲ. ಕಳವಳದಿಂದ ತನ್ನ ತೆಕ್ಕೆಯಲ್ಲಿ ಅಳುತ್ತಿರುವ ಅವಳನ್ನು ಸಮಾಧಾನಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಆ ಸಮಯದಲ್ಲಿ ಆತ ಸ್ನೇಹಿತನಾಗಿ ಆಕೆಯನ್ನು ಸಮರ್ಥಿಸಿಕೊಳ್ಳುತ್ತಾನೆ; ಸಹೋದರನಾಗಿ ಸಾಂತ್ವನ ಹೇಳುತ್ತಾನೆ; ತಂದೆಯೂ ಆಗುತ್ತಾನೆ. ಪುಟ್ಟ ಮಗುವಿನಂತೆ ತನ್ನನ್ನು ತಬ್ಬಿನಿಂತ ಅವಳು ಏಕಾಂಗಿಯಾಗಿ ಮಗುವನ್ನು ಸಲಹುವಂತೆ ಸಿದ್ಧಗೊಳಿಸುವ ಆ ದ್ವಾರಪಾಲಕನ ಪ್ರೀತಿಯನ್ನು ಯಾವ ಮಾಪಕದಿಂದ ಅಳೆಯಲಾದೀತು!          

ಆಕೆಗೆ ಅಸ್ವಾಭಾವಿಕವಾದ ಮತ್ತು ತೀವ್ರ ಸ್ವರೂಪದ ಚಿತ್ತ ಚಾಂಚಲ್ಯವನ್ನುಂಟುಮಾಡುವ ಗಂಭೀರವಾದ ಮಾನಸಿಕ ಸಮಸ್ಯೆಯಿದೆ. ಆದರೆ ಅವಳದನ್ನು ಪ್ರಪಂಚದಿಂದ ಮುಚ್ಚಿಟ್ಟಿದ್ದಾಳೆ. ಎಲ್ಲರಂತೆ ಸ್ವಾಭಾವಿಕವಾಗಿ ಬದುಕುವ ಪ್ರಯತ್ನ ಮಾಡಿದಾಗಲೆಲ್ಲ ಸೋಲುತ್ತಾಳೆ. ಸುಂದರವಾಗಿದ್ದೂ ಪ್ರೀತಿಯ ಆಕರ್ಷಣೆಗೆ ಬೀಳಲಾರದ, ಸಾಮರ್ಥ್ಯವಿದ್ದೂ ವೃತ್ತಿಜೀವನದಲ್ಲಿ ಗೆಲುವು ಸಾಧಿಸಲಾರದ ಅವಳ ಬದುಕು ಆರಂಭವಾಗುವ ಮುನ್ನವೇ ಮುಗಿದುಹೋದ ಸ್ಥಿತಿಯಲ್ಲಿದೆ. ಈ ಕ್ಷಣದಲ್ಲಿ ಕಾಲಿಗೆ ರೆಕ್ಕೆ ಬಂದಂತೆ ಹಾರಾಡುವ ತನ್ನ ಬದುಕು ಮರುಘಳಿಗೆಯೇ ಹಾಸಿಗೆಯ ಮೇಲೆ ಬಿದ್ದು ಅನಾಥವಾಗಿ ಚಡಪಡಿಸುವ ಪರಿಸ್ಥಿತಿಗೆ ಪರಿಹಾರವೇ ಇಲ್ಲವೆಂದು ಸೋಲನ್ನೊಪ್ಪಿಕೊಳ್ಳುವ ಸಮಯದಲ್ಲಿ ಅವಳಿಗೆ ಸ್ನೇಹಿತೆಯೊಬ್ಬಳು ಸಿಗುತ್ತಾಳೆ. ಅಲ್ಲಿಂದ ಎಲ್ಲವೂ ಬದಲಾಗುತ್ತವೆ. ಪ್ರಾಮಾಣಿಕವಾದ ಸ್ನೇಹವೊಂದು ಹೇಗೆ ಆಶ್ಚರ್ಯಕರವೆನ್ನಿಸುವ ರೀತಿಯಲ್ಲಿ ಬದುಕನ್ನು ಬದಲಾಯಿಸಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗುವ ಅವಳು ಉನ್ಮಾದವನ್ನೂ, ಖಿನ್ನತೆಯನ್ನೂ ಸಂಭಾಳಿಸುವ ಹಂತವನ್ನು ತಲುಪುತ್ತಾಳೆ. ಒಳ್ಳೆತನ, ದುರ್ಗುಣ, ತಿಳಿಗೇಡಿತನಗಳೆಲ್ಲವೂ ಮನುಷ್ಯ ಸ್ವಭಾವದ ಬೇರೆಬೇರೆ ಮುಖಗಳಷ್ಟೇ. ಕೇವಲ ಒಂದೇ ಮುಖವನ್ನು ಪ್ರಪಂಚದೆದುರು ತೆರೆದಿಡುತ್ತೇನೆ ಎಂದುಕೊಳ್ಳುವುದು ಸಾಧುವಲ್ಲ. ಖಂಡಿತವಾಗಿಯೂ ಒಬ್ಬನಾದರೂ ಹಿತೈಷಿಯಿದ್ದಾನೆ, ನಮ್ಮನ್ನು ನಾವಿರುವ ಹಾಗೆಯೇ ಅರ್ಥೈಸಿಕೊಳ್ಳಬಲ್ಲಂಥವನು; ಎಲ್ಲ ಮುಖಗಳ ಹಿಂದೆಯೂ ಇರುವ ಕಥೆಗಳಿಗೆ ಕಿವಿಯಾಗಬಲ್ಲಂಥವನು.

ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಅವಳು ಅವನನ್ನು ತಂದೆಯ ಸ್ಥಾನದಲ್ಲಿಟ್ಟು ಪ್ರೀತಿಸುತ್ತಾಳೆ. ಆದರೆ ಅವನು ಅವಳನ್ನು ಮಗಳೆಂದುಕೊಂಡು ಪ್ರೀತಿಸಲಾರ. ಅವಳ ನಿರೀಕ್ಷೆಗೆ ತಕ್ಕಂತೆ ಅವನು, ಅವನ ಬಯಕೆಗಳಿಗೆ ಅನುಗುಣವಾಗಿ ಅವಳು ಬದಲಾಗಲು ಪ್ರಯತ್ನಿಸುತ್ತಾರಾದರೂ ಬಯಸಿದ್ದ ಸಂತೋಷವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಬೇರೆಯಾಗುತ್ತಾರೆ. ತಮ್ಮನ್ನು ಪರಸ್ಪರ ದೂರಮಾಡಿದ್ದು ಆಶಾಭಂಗವೇ, ತಮ್ಮಿಬ್ಬರ ನಡುವಿನ ವಯಸ್ಸಿನ ಅಂತರವೇ ಅಥವಾ ಪರಸ್ಪರರ ಶೂನ್ಯತೆಯನ್ನು ತುಂಬಲು ಮಾಡಿದ ವ್ಯರ್ಥಪ್ರಯತ್ನವೇ ಎನ್ನುವುದಕ್ಕೆ ಉತ್ತರ ಹುಡುಕುವಷ್ಟು ಸಮಯವನ್ನು ಬದುಕು ಯಾರಿಗೂ ಕೊಟ್ಟಿಲ್ಲವಷ್ಟೇ! ಸಂಪೂರ್ಣ ಸ್ವರೂಪದ ನಿಜವಾದ ಪ್ರೀತಿಯ ಉದ್ದೇಶಗಳು ಸಾಕಷ್ಟಿರಬಹುದಾದರೂ, ಅದು ಹುಟ್ಟಿಕೊಳ್ಳುವ ಸಮಯದಲ್ಲಿ ಅನುಭವಿಸುವ ಆನಂದವಷ್ಟೇ ಶಾಶ್ವತವಾದದ್ದು. ಬದುಕಿನ ಪ್ರತಿ ಹಂತದಲ್ಲಿಯೂ ಅದೇ ಪ್ರೀತಿಯನ್ನು ಅದೇ ಸ್ವರೂಪದಲ್ಲಿ ಜೀವಂತವಾಗಿರಿಸಿಕೊಂಡು ಮುಂದುವರಿಯಲಿದ್ದೇನೆ ಎನ್ನುವುದು ಹುಂಬತನವೂ, ಕ್ಲೀಷೆಯೂ ಆದೀತು! ಹತಾಶೆಯ ಅನುಭವವನ್ನು ಅದರಷ್ಟಕ್ಕೇ ಬಿಟ್ಟು, ಬದಲಾಗುತ್ತಿರುವ ಪ್ರೀತಿಯ ಸ್ವರೂಪವನ್ನು ವಿಶ್ಲೇಷಿಸಲು ಹೋಗದೇ ಅದು ನೀಡಿದ ಆನಂದವನ್ನಷ್ಟೇ ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುವುದು ಸಕಾಲಿಕ.          

ನಾವು ಪ್ರೀತಿಸುವವರ ಸಾವು ನಮಗೆ ಅವರ ಮೇಲಿರುವ ಪ್ರೀತಿಯನ್ನೂ ಸಾಯಿಸಿಬಿಡುವ ಸಾಮರ್ಥ್ಯವನ್ನು ಹೊಂದಿದೆಯೇ; ಇಲ್ಲವೆಂದಾದರೆ ಆ ಪ್ರೀತಿಯ ನೆನಪುಗಳು ನಮ್ಮ ಮುಂದಿರುವ ದಿನಗಳನ್ನು ಕೊರಗದೇ ಕಳೆಯಲು ನೆರವಾಗಬಲ್ಲವೇ ಅಥವಾ ಅವೇ ನೆನಪುಗಳು ಎಡೆಬಿಡದೆ ಬಾಧಿಸುತ್ತ ಪ್ರಾಮಾಣಿಕ ಪ್ರೀತಿಯನ್ನೇ ಅಪರಾಧವನ್ನಾಗಿಸಬಲ್ಲವೇ! ಪ್ರೀತಿಸಿದವನನ್ನೇ ಮದುವೆಯಾಗಿ ಸುಖವಾದ ಸಂಸಾರ ನಡೆಸುತ್ತಿದ್ದ ಅವಳ ಬದುಕನ್ನು ಕಂಗೆಡಿಸುವುದು ಗಂಡನ ಸಾವು. ಇನ್ನೊಬ್ಬನನ್ನು ಮದುವೆಯಾಗಿ ಸುಖವಾಗಿದ್ದಾಳಾದರೂ ಕಳೆದುಕೊಂಡ ಗಂಡನ ನೆನಪಿನಿಂದ ಹೊರಬರುವುದು ಅವಳಿಗೆ ಸಾಧ್ಯವಾಗಿಲ್ಲ. ಅವನು ನಲವತ್ತು ವರ್ಷಗಳ ಹಿಂದೆ ಖರೀದಿಸಿದ್ದ ಕಾರನ್ನು ಈಗಲೂ ಉಪಯೋಗಿಸುತ್ತಾಳೆ; ಏಕಾಂಗಿಯಾಗಿ ಅದನ್ನು ಚಲಿಸುವ ಸಮಯದಲ್ಲಿ ಅವನು ಪಕ್ಕದಲ್ಲಿಯೇ ಕುಳಿತಿರುವಂತೆ ಭಾವಿಸಿ ಅವನೊಂದಿಗೆ ಮಾತನಾಡುತ್ತಾಳೆ. ಅವಳಿಗದನ್ನು ಮಾರುವ ಮನಸ್ಸಿಲ್ಲ; ಕಳೆದುಹೋದವನ ನೆನಪನ್ನು ಜೀವಂತವಾಗಿರಿಸಿಕೊಳ್ಳುವ, ಆ ನೆನಪುಗಳಿಗೆ ಜೀವತುಂಬಿ ಅವನ ಪಕ್ಕ ಕುಳಿತು ಏಕಾಂತದ ಸಮಯವನ್ನು ಕಳೆಯುವ ಏಕೈಕ ಅವಕಾಶವೆಂದರೆ ಆ ಕಾರು. ಅವಳದನ್ನು ಕಳೆದುಕೊಳ್ಳಲಾರಳು. ಕಳೆದುಕೊಂಡವನ ನೆನಪುಗಳನ್ನು ಬಿಟ್ಟುಕೊಡಲಾರಳು. "ಪ್ರೀತಿಗೂ ಸಂತಾಪಕ್ಕೂ ಯಾವ ಕಟ್ಟುಕಟ್ಟಳೆಗಳೂ ಅನ್ವಯವಾಗುವುದಿಲ್ಲ. ಪ್ರೀತಿಸುವವರು ಬಿಟ್ಟುಹೋದಮೇಲೂ ಅವರನ್ನು ಒಬ್ಬಂಟಿಯಾಗಿಸದವರಲ್ಲಿ ನೀನೂ ಒಬ್ಬಳು" ಎಂದು ಅವಳನ್ನು ಸಮಾಧಾನ ಮಾಡುವ ಕಣ್ಣೆದುರಿಗಿರುವ ಗಂಡನ ಪ್ರೀತಿಯಲ್ಲಿ ಅವಳ ನೆನಪುಗಳು ಸುರಕ್ಷಿತ.          

ಇದು ಹೀಗೆಯೇ ಎಂದು ನಿರ್ಧರಿಸಲಾಗದ, ಆರಂಭಕ್ಕೂ-ಅಂತ್ಯಕ್ಕೂ ಸಂಪರ್ಕವನ್ನೇ ಕಲ್ಪಿಸಲಾಗದ ಇಂತಹ ಎಷ್ಟೋ ಕಥೆಗಳು ಎಲ್ಲೆಲ್ಲಿಯೂ ಇವೆ; ನಮ್ಮೊಳಗೂ! ಪ್ರೀತಿಯ ಮಾತು-ಆಲಿಂಗನಗಳು, ಪ್ರೀತಿ ತುಂಬಿದ ನೋಟ-ಒಡನಾಟಗಳೆಲ್ಲವೂ ನಮ್ಮೊಂದಿಗೇ ಇವೆ; ಅನುಕೂಲಕ್ಕೆ ತಕ್ಕಂತೆ ಬದಲಾಗಿವೆ. ಅಸಮಾಧಾನದಿಂದಾಗಿಯೋ, ಅನಿವಾರ್ಯವಾಗಿಯೋ ಅಥವಾ ಅಹಂಭಾವದಿಂದಲೋ ಎದುರಿಗೇ ಇರುವ ಪ್ರೀತಿಯನ್ನು ತಮ್ಮದಾಗಿಸಿಕೊಳ್ಳದವರು ಹಲವರಾದರೆ ಹೃದಯದ ತುಂಬಾ ಪ್ರೀತಿಯನ್ನೇ ತುಂಬಿಕೊಂಡು ಅದನ್ನು ತನ್ನದಾಗಿಸಿಕೊಳ್ಳುವ ಮಡಿಲಿಗಾಗಿ ಕಾಯುತ್ತ ಕುಳಿತವರು ಇನ್ನು ಕೆಲವರು. ಎಲ್ಲಿಯೋ ಜೀವನ ಸಾಗಿಸುತ್ತ ಇನ್ನೆಲ್ಲಿಯೋ ಇರುವ ಯಾರದೋ ಪ್ರೀತಿಯನ್ನು ನಂಬಿಕೊಂಡವರ ಹೃದಯದಲ್ಲೊಂದು ಅಸಹಾಯಕ ನೋವಿದ್ದಿರಬಹುದು, ಕಂಡವರಾರು! ಯಾರೋ ತೋರಿಸುವ ವಿಶ್ವಾಸ, ಕಾಳಜಿ, ಕಾರುಣ್ಯಗಳೇ ಪ್ರೀತಿಯ ರೂಪದಲ್ಲಿ ಆ ನೋವನ್ನು ಕೊಂಚವಾದರೂ ಕಡಿಮೆ ಮಾಡುವುದಾದರೆ ಯಾವ ರೂಪದಲ್ಲಿಯಾದರೂ ಸರಿ ಪ್ರೀತಿ ತುಂಬಿದ ಧ್ವನಿಯೊಂದು ಅವರ ಹೃದಯಗಳನ್ನು ತಲುಪುವಂತಾಗಲಿ.

ಈ ಅಂಕಣದ ಹಿಂದಿನ ಬರಹಗಳು:
ಕೆಂಪು ಕೂದಲಿನ ರಾಜಕುಮಾರಿಯ ಕತೆ ANNE WITH AN E
https://www.bookbrahma.com/news/asahayaka-gadirekheya-kanasina-payana-crash-landing-on-you
ಮುಗುಳ್ನಗೆಯ ಆಲಿಂಗನ SOMETHING IN THE RAIN (KOREAN ROMANTIC DRAMA)
ಒಳತಾರಸಿಯ ಒಂಟಿ ಚೌಕಗಳು THE QUEEN'S GAMBIT
ಅನುರಾಗದ ಮಧುರ ಆಲಾಪ BANDISH BANDITS (INDIAN ROMANTIC DRAMA)
ಆಧುನಿಕ ಲೋಕದ ಆತ್ಮಾವಲೋಕನ MADE IN HEAVEN (INDIAN ROMANTIC DRAMA)
ನೋವು-ನಲಿವುಗಳ ಪಂಚಾಯಿತಿ PANCHAYAT (HINDI COMEDY-DRAMA)
ಬಿಡುಗಡೆಯ ಹಾದಿಯ ಪಿಸುಮಾತು IT'S OKAY TO NOT BE OKAY(KOREAN DRAMA)

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...