ಬನ್ನಿ, ಬದುಕು ಹಂಚಿಕೊಳ್ಳೋಣ

Date: 15-06-2022

Location: ಬೆಂಗಳೂರು


“ಬಹುರೂಪದ ಜೀವಗಳು ಒಂದಾಗಿ ಬೆಸೆದುಕೊಂಡಿರುವ ರೀತಿ ಏಕತ್ವದಲ್ಲಿ ಬಹುತ್ವವನ್ನು ಕಾಣಿಸುವ ಇನ್ನೊಂದು ಪರಿಯಾಗಿದೆ” ಎನ್ನುತ್ತಾರೆ ಲೇಖಕ ಲಕ್ಷ್ಮಣ ಬಾದಾಮಿ. ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ಕ್ಯೂಬಾದ ಕಲಾವಿದ ಮ್ಯಾನುಯೆಲ್ ಮ್ಯಾಂಡೀವ್ ಕಲಾಕೃತಿಗಳ ಬಗ್ಗೆ ವಿಶ್ಲೇಷಿಸಿದ್ದಾರೆ.

ಕಲಾಕೃತಿ: “ಹಂಚಿಕೆ”
ಕಲಾವಿದ: ಮ್ಯಾನ್ಯುಲ್ ಮೆಂಡಿವ್
ದೇಶ: ಕ್ಯೂಬಾ
ಕಾಲ: 1944
ಕಲಾಪಂಥ: ಸಮಕಾಲೀನ

ಬಹಳಷ್ಟು ಸಲ ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲು ಯೋಗ್ಯವಾದದ್ದೋ, ಅಯೋಗ್ಯವಾದದ್ದೋ ನೋಡುವುದಿಲ್ಲ, ಹಾಗೇ ಶೇರ್ ಮಾಡುತ್ತಿರುತ್ತೇವೆ. ಇವುಗಳಲ್ಲಿ ಬಹಳಷ್ಟು ನಮ್ಮ ಗುಣ, ಹವ್ಯಾಸಗಳನ್ನು ವ್ಯಕ್ತ ಮಾಡಿದರೆ ಇನ್ನು ಕೆಲವಷ್ಟು ನಮ್ಮ ಸಾಮಾಜಿಕ ಸಿಟ್ಟು, ಬೋಧನೆಯ ರೂಪದಲ್ಲಿಯೋ ಇರುತ್ತವೆ. ಈ ರೀತಿ ಶೇರ್ ಮಾಡುತ್ತ ನಮ್ಮನ್ನು ನಾವು Build ಮಾಡಿಕೊಳ್ಳುವ ಇರಾದೆ ಇಲ್ಲಿ ಕಂಡು ಬರುತ್ತದೆ. ಒಂದು ನಿಯತಿಯಂತೆ ಇದು ನಡೆಯುತ್ತಿರುತ್ತದೆ. ಇಂಥದರಲ್ಲಿ ನಮ್ಮ ಬದುಕನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಕಾರಣ- ಕಂಡೂ ಕಾಣದಂತಿರುವವರ ಮಧ್ಯೆ ನಮ್ಮ ಸ್ವಂತ ಬದುಕನ್ನು ಯಾಕೆ ತೆರೆದಿಡಬೇಕು.? ಎನ್ನುವ ಪ್ರಶ್ನೆ ಮೂಡುತ್ತದೆ. ಒಡಲ ಸಂಕಟವನ್ನು ಹಂಚಿಕೊಳ್ಳಲು ಒಂದು ಜೀವ ಎದುರಿದ್ದರೇನೇ ಹಿತ ಅನ್ನಿಸುತ್ತದೆ. ಮಖಾಮುಖಿ ಇಲ್ಲಿ ಬಹಳ ಮುಖ್ಯವೆನಿಸುತ್ತದೆ. ಈ ಮುಖಾಮುಖಿ ಮನುಷ್ಯೇತರ ಜೀವಗಳೊಂದಿಗೆ ಸಾಧ್ಯವೇ.? ಅಂದರೆ ಕಷ್ಟ ಅನ್ನಿಸಬಹುದು.

ಕ್ಯೂಬಾದ ಕಲಾವಿದ ಮ್ಯಾನುಯೆಲ್ ಮ್ಯಾಂಡಿವ್ ಮನುಷ್ಯ, ಮನುಷ್ಯೇತರ ಜೀವಿಗಳೊಂದಿಗೂ ಸಂವಾದ ನಡೆಸಬಹುದು, ಬದುಕು ಹಂಚಿಕೊಳ್ಳಬಹುದು ಎಂಬುದನ್ನು ತನ್ನ ಕಲಾಕೃತಿಗಳ ಮೂಲಕ ತೋರಿಸಿದ್ದಾನೆ. ನಿಸರ್ಗದಲ್ಲಿನ ಎಲ್ಲ ಜೀವಗಳು `ಕೂಡಿ ಬಾಳುವ, ಹಂಚಿ ತಿನ್ನುವ’ ಬದುಕಿನ ಬಹುದೊಡ್ಡ ಧರ್ಮದ ಅವನ ಕಲಾಕೃತಿಗಳು ದನಿ ಎತ್ತುತ್ತವೆ. ಇಲ್ಲಿ ಮನುಷ್ಯ-ಮನುಷ್ಯನಷ್ಟೇ ಅಲ್ಲ, ಸಕಲ ಜೀವಿಗಳು ಸೇರಿ ಬದುಕುವ ಜೀವ ಪ್ರೀತಿಯನ್ನು, ಜೀವ ಕಾರುಣ್ಯವನ್ನು ಕೃತಿಯಲ್ಲಿ ಕಾಣಿಸಿರುವುದು ಬಹಳ ಮುಖ್ಯವಾಗಿದೆ. `ಸಕಲ ಜೀವಿಗಳಿಗೆ ಲೇಸನೆ ಬಯಸುವ’ ನಮ್ಮ ಬಸವಣ್ಣನ ಉದಾತ್ತತೆ ಇಲ್ಲಿ ಎದ್ದು ಕಾಣುತ್ತದೆ. ಮನುಷ್ಯ ಮೀನಿಗೆ ತುತ್ತನಿಕ್ಕುತ್ತಿದ್ದರೆ, ಪಕ್ಷಿಯೊಂದು ಮನುಷ್ಯ ಮಗುವಿಗೆ ತುತ್ತನ್ನಿಡುತ್ತಿದೆ!!

ಹಾಗೆ ನೋಡಿದರೆ ಇಲ್ಲಿಯ ಮನುಷ್ಯ, ಪಕ್ಷಿ, ಮೀನು ಇವೆಲ್ಲವು ಪೂರ್ಣ ಪ್ರಮಾಣದಲ್ಲಿ ವಾಸ್ತವ ಆಕಾರದಲ್ಲಿ ಕಾಣಿಸಿಲ್ಲ. ಪಕ್ಷಿ ಮನುಷ್ಯನೂ ಹೌದು ಮತ್ತು ಪಕ್ಷಿಯೂ ಹೌದು; ಮೀನು ಮನುಷ್ಯನೂ ಹೌದು ಮತ್ತು ಮೀನೂ ಹೌದು. ಇವುಗಳನ್ನು ಸಂಕರ ಜೀವಿಗಳು ಎನ್ನಬಹುದು. ಮ್ಯಾಂಡಿವ್ ಅವರ ಕೃತಿಗಳಲ್ಲಿ ಉಭಯ ಜೀವಿಗಳು, ಹಲವು ಜೀವಿಗಳು ಭೇದವರಿಯದೆ ಒಂದಾಗಿರುವ ಪರಿಯೇ ವಿಶಿಷ್ಟವಾದುದು. ಆಕಾರಗಳು ಬೇರೆ ಬೇರೆ ಆಗಿರಬಹುದು. ಆದರೆ ಎಲ್ಲ ಜೀವಿಗಳೊಳಗೆ ಇರುವ `ಜೀವ’ ಮಾತ್ರ ಒಂದೇ ಎಂಬುದು ಎಂದೂ ಬದಲಾಗದ ಸತ್ಯ. ಹೀಗೆ ಬಹುರೂಪದ ಜೀವಗಳು ಒಂದಾಗಿ ಬೆಸೆದುಕೊಂಡಿರುವ ರೀತಿ ಏಕತ್ವದಲ್ಲಿ ಬಹುತ್ವವನ್ನು ಕಾಣಿಸುವ ಇನ್ನೊಂದು ಪರಿಯಾಗಿದೆ.

ಭೂಮಿಯ ಮೇಲಿನ ಜೀವಿಗಳೆಲ್ಲ ನಿಸರ್ಗದ ಕುಡಿಗಳು. ಇವು ಒಂದನ್ನೊಂದು ಆಶ್ರಯಿಸಿವೆ, ಒಂದನ್ನು ಬಿಟ್ಟು ಇನ್ನೊಂದಿಲ್ಲ ಎಂಬಂತೆ ಇವು ಪರಸ್ಪರರನ್ನು ಕಾಣುತ್ತಿವೆ. ಮನುಷ್ಯ ಗಿಡಕ್ಕೆ ನೀರುಣಿಸುವನು, ಬಾಯ್ತೆರೆದ ಭೂಮಿಗೆ ನೀರುಣಿಸುವನು. ಕಾರಣ ಇವುಗಳಿಂದ ಮನುಷ್ಯ ಸಾಕಷ್ಟು ಪಡೆದಿದ್ದಾನೆ. ಮುಂದೆಯೂ ಪಡೆಯಬೇಕೆಂದರೆ ಮನುಷ್ಯ ನಿಸರ್ಗವನ್ನು, ನಿಸರ್ಗದ ಜೀವಿಗಳನ್ನು ಪೋಷಿಸುವುದು ಅತ್ಯಂತ ಅವಶ್ಯಕ. `ನೀನೂ ಬದುಕು ಮತ್ತು ಇತರರನ್ನೂ ಬದುಕಲು ಬಿಡು’ ಎಂಬ ಜೀವದಾಯಿನಿಯಾದ ತತ್ವ ಮ್ಯಾಂಡಿವ್ ಅವರ ಎಲ್ಲ ಕೃತಿಗಳ ಮುಖ್ಯ ಧಾರೆಯಾಗಿದೆ.

ಮ್ಯಾಂಡಿವ್ ಅವರ ಚಿತ್ರಣ ಶೈಲಿ ಬಲು ವಿಶಿಷ್ಟವಾದುದು. ಇಲ್ಲಿ ಮನುಷ್ಯ ಏಕಪಾದಿ ಇಲ್ಲವೇ ತ್ರಿಪಾದಿಯಾಗಿರುವುದೇ ಹೆಚ್ಚು. ಮರದ ಎಲೆಗಳ, ನೀರಿನ ಅಲೆಗಳ ಮರ್ಮರವನ್ನು ಹಿಡಿದುಕೊಟ್ಟಿರುವ ರೀತಿ ಸರಳ ವಿಧಾನದಲ್ಲಿಯೇ ನಿಖರತೆಯ ಗಮ್ಯ ಸಾಧಿಸಿದ್ದಾಗಿದೆ. ಎಲ್ಲ ಕೃತಿಗಳಲ್ಲೂ ನೆಲಮೂಲದ ಅಂತಃಕರಣ ಎದ್ದು ಕಾಣುತ್ತದೆ. ಸ್ಯಾಂಟೇರಿಯಾ, ವುಡೋ ಮತ್ತು ಯೊರುಬಾ ಧರ್ಮಗಳಿಂದ ಮ್ಯಾಂಡಿವ್ ಕೃತಿ ಪ್ರೇರಣೆಯನ್ನು ಪಡೆದಿವೆ ಎನ್ನುತ್ತಾರೆ. ಹಾಗೆಯೇ ನಮ್ಮ `ಮಧುಬನಿ’ ಶೈಲಿಯ ಚಿತ್ತಾರಗಳು ಇವರ ಕೃತಿಗಳಲ್ಲಿ ಸಾಕಷ್ಟು ಕಂಡು ಬರುತ್ತವೆ.

Contemporary:: `ಸಮಕಾಲೀನ ಕಲೆ’ ತುಂಬಾ ವಿಶಾಲಾರ್ಥವನ್ನು ಹೊಂದಿದೆ. ಇದನ್ನು ಒಂದು ಶೈಲಿ ಅಥವಾ ಈ ಹಿಂದಿನ ಕಲಾಪಂಥಗಳಂತೆ ಒಂದು ಪ್ರಕಾರವಾಗಿ ನೋಡುವುದಕ್ಕಿಂತಲೂ ಇದನ್ನು ನಮ್ಮ ನಡುವೆ ಜೀವಿಸಿರುವ ಕಲಾವಿದರ ಕಲೆ ಎಂದು ಹೇಳಲಾಗುತ್ತದೆ. ಇನ್ನೂ ಸುಲಭವಾಗಿ `ಇತ್ತೀಚಿನ ಕಲೆ’ ಅಥವಾ `ಇಂದಿನ ಕಲೆ’ ಎಂದು ಹೇಳುತ್ತಾರೆ. ಇನ್ನೊಂದು ದೃಷ್ಟಿಯಲ್ಲಿ `ಎಲ್ಲಾ ಕಲೆಗಳು ಆಯಾ ಕಾಲಕ್ಕೆ ಸಮಕಾಲೀನವೇ ಆಗಿದ್ದವು’ ಎಂದು ಸುಲಭವಾಗಿ ಹೇಳಿ ಬಿಡಬಹುದಾದರೂ ಈ ಹೊತ್ತಿನ ದೃಶ್ಯಕಲೆ ದಕ್ಕಿಸಿಕೊಂಡಿರುವ ಅಗಾಧ ವ್ಯಾಪ್ತಿಯ ಪರಿಪ್ರೇಕ್ಷ್ಯ ಅಷ್ಟು ಸಾಮಾನ್ಯವಾದುದಲ್ಲ.

ಹಾಗೆ ನೋಡಿದರೆ ಸಮಕಾಲೀನ ಕಲೆ ತೀರಾ ಇತ್ತೀಚೆಗೆ ಶುರುವಾದದ್ದೇನಲ್ಲ. 20ನೇ ಶತಮಾನದ ಉತ್ತರಾರ್ಧದಲ್ಲಿಯೇ ಇದರ ಚಹರೆಗಳು ಕಾಣಸಿಗುತ್ತವೆ. ಮೇಲ್ನೋಟಕ್ಕೆ `ಆಧುನಿಕ ಕಲೆ’ ಮತ್ತು `ಸಮಕಾಲೀನ ಕಲೆ’ ಎರಡರಲ್ಲೂ ಹೆಚ್ಚಿನ ವ್ಯತ್ಯಾಸಗಳಿಲ್ಲ ಅನ್ನಿಸಬಹುದು. ಆದರೆ ಸಮಾಜಶಾಸ್ತ್ರಜ್ಞ ನತಾಲಿ ಹೈನಿಚ್ ಎರಡರ ನಡುವಿನ ವ್ಯತ್ಯಾಸವನ್ನು ಹೀಗೆ ಗುರುತಿಸುತ್ತಾರೆ- “`ಆಧುನಿಕ ಕಲೆ’ ಸಂಪ್ರದಾಯಗಳ ಪ್ರಾತಿನಿಧ್ಯವನ್ನು ಪ್ರಶ್ನಿಸಿದರೆ, `ಸಮಕಾಲೀನ ಕಲೆ’ ಒಂದು ಕಲಾಕೃತಿಯ ಕಲ್ಪನೆಯನ್ನು ಪ್ರಶ್ನಿಸುತ್ತದೆ” ಎಂದು. ಕಲಾಕೃತಿಯ ಕಲ್ಪನೆಯನ್ನು ತೀವ್ರವಾಗಿ ಬದಲಾಯಿಸಿದ್ದನ್ನು ನಾವು ಡುಚಾಂಪ್‍ನ `ಕಾರಂಜಿ’ ಕೃತಿಯ ಸಂದರ್ಭದಲ್ಲಿ ನೋಡಬಹುದು. ಇಲ್ಲಿಂದ ದೃಶ್ಯಕಲೆಯ ಮಾಧ್ಯಮಗಳು, ಮಾದರಿಗಳು ಬದಲಾಗುತ್ತಲೆ ಬಂದಿವೆ. ಬ್ರಶ್ಶು, ಬಣ್ಣ, ಕ್ಯಾನವಾಸ್, ಪೇಂಟಿಂಗ್ ಇಷ್ಟೇ ಆಗಿದ್ದ ಕಲೆಯ ಪರಿಕರಗಳು, ಪರಿಭಾಷೆಗಳು ಇಂದು ಬೆಳೆದ ರೀತಿ ವಿಸ್ಮಯಕಾರಿಯಾಗಿದೆ!! ಇನ್ಸ್ಟಲೇಶನ್, ಫರ್ಫಾರ್ಮನ್ಸ್ ಆರ್ಟ್, ಬಾಡಿ ಪೇಂಟಿಂಗ್, ಕೈನೆಟಿಕ್ ಆರ್ಟ್, ಮ್ಯೂಸಿಕಲ್ ಪೇಂಟಿಂಗ್ಸ್, ನಿಯಾನ್ ಆರ್ಟ್, ಅರ್ಥ್ ಆರ್ಟ್, ಸೈಟ್ ಸ್ಪೆಸಿಫಿಕ್, ವಿಡಿಯೋ, ಅನಿಮೇಶನ್ ಹೀಗೆ ಹಿಡಿದಷ್ಟು ವಿಭಿನ್ನವಾದ ವಿಸ್ತಾರವಾದ ಹಾದಿಗಳು!

ಮ್ಯಾನುಯೆಲ್ ಮ್ಯಾಂಡಿವ್ ಜೀವನ: ಮ್ಯಾಂಡಿವ್ ಕೇವಲ ವರ್ಣಚಿತ್ರಕಾರನಷ್ಟೇ ಅಲ್ಲ ಶಿಲ್ಪಿ, ಪ್ರದರ್ಶನ ಕಲಾವಿದ ಮತ್ತು ಬಾಡಿ ಆರ್ಟ್‍ನಲ್ಲೂ ಪ್ರಖ್ಯಾತರಾದ ಆಫ್ರೋ-ಕ್ಯೂಬನ್ ಕಲಾವಿದರಾಗಿದ್ದಾರೆ. ಇವರು 1944ರಲ್ಲಿ ಕ್ಯೂಬಾದ ಹವಾನಾದಲ್ಲಿ ಜನಿಸಿದರು. ಕಲಾ ಶಿಕ್ಷಣವನ್ನು ನ್ಯಾಷನಲ್ ಫೈನ್ ಆಟ್ರ್ಸ್ ಅಕಾಡೆಮಿ ಅಲ್‍ಜಾಂಡ್ರೊದಲ್ಲಿ ಪಡೆದುಕೊಂಡರು. ಆರಂಭದಲ್ಲಿ ಔಪಚಾರಿಕ ಸ್ಕೆಚ್‍ಗಳು, ಚಿತ್ರಗಳನ್ನು ರಚಿಸುತ್ತಿದ್ದ ಮ್ಯಾಂಡಿವ್ ಅವರನ್ನು ನಂತರದಲ್ಲಿ ಆಫ್ರಿಕನ್ ಪುರಾಣ ಮತ್ತು ಕೆರಿಬಿಯನ್ ಸಂಸ್ಕೃತಿಗಳು ಸೆಳೆದವು. ಪೌರಾಣಿಕದ ಕಡೆಗೆ ಇಂದಿನ ಹೊಸನೋಟವನ್ನು ಬೀರಲು ಇವರ ಕೃತಿಗಳು ಪ್ರೇರೇಪಿಸುತ್ತವೆ.

ಮ್ಯಾಂಡಿವ್‍ರ ಮಹತ್ವಪೂರ್ಣ ಕಲಾಕೃತಿಗಳು 1960-70ರ ಅವಧಿಯಲ್ಲಿ ನಿರ್ಮಾಣವಾದವು. ಪುರಾಣದ ನೇರ ಪರಿಣಾಮವಿರುವ `ವುಡೋ ಅಲ್ಟರ್’ ಕೃತಿಯ ಮಾಧ್ಯಮ ವಿಭಿನ್ನವಾಗಿತ್ತು. ಇದರಲ್ಲಿ ಅವರು ಬಣ್ಣದ ಜೊತೆಗೆ ಮರದ ತುಣುಕು, ಕೂದಲು, ಗರಿಗಳು ಮತ್ತು ಗಾಜನ್ನು ಸಹ ಬಳಸಿದ್ದರು. ಇವರ ಕ್ಯಾನವಾಸ್ ರೂಢಿಯಂತೆ ಯಾವಾಗಲೂ ಆಯತ ಇಲ್ಲವೇ ಚೌಕ ಆಕಾರದಲ್ಲಿ ಇರುತ್ತಿರಲಿಲ್ಲ. ಚಿತ್ರದ ಆಶಯಕ್ಕನುಗುಣವಾಗಿ ಅದರ `ಫ್ರೇಮ್’ ಬದಲಿಯಾಗುತ್ತಿತ್ತು. ಚೌಕಟ್ಟಿನ ಮೇಲೆಯೂ ಸಹ ಆಕೃತಿಗಳನ್ನು ಶಿಲ್ಪದ ರೀತಿಯಲ್ಲಿ ಅವರು ತಂದು ಕೂರಿಸಿದ್ದಾರೆ.

ಹಲವಾರು ಅಂತರರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸಿ ಇವರ ಕೃತಿಗಳು ಬಹುಮಾನಕ್ಕೆ ಭಾಜನವಾಗಿವೆ. 1968ರಲ್ಲಿ ಪ್ಯಾರಿಸ್‍ನಲ್ಲಿ ನಡೆದ `Salon de mai’’ ಪ್ರದರ್ಶನದಲ್ಲಿAdam Montparnasse prizeನ್ನು ಪಡೆದುಕೊಂಡರು. ಅದೇ ವರ್ಷ ಹವಾನದಲ್ಲಿ ನಡೆದ Internacional de Artes Plásticas ಪ್ರದರ್ಶನದಲ್ಲಿ ಮೂರನೇ ಬಹುಮಾನವನ್ನು ಪಡೆದುಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿರುವ ಮ್ಯಾಂಡಿವ್‍ರ ಕೃತಿಗಳು ಅಮೇರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಸಂಗ್ರಹಗೊಂಡಿವೆ.

ಕ್ಯೂಬಾದ ಕಲಾವಿದ ಮ್ಯಾನುಯೆಲ್ ಮ್ಯಾಂಡೀವ್ ಕಲಾಕೃತಿಗಳು:

ಈ ಅಂಕಣದ ಹಿಂದಿನ ಬರೆಹಗಳು:
ವರ್ಣಯಾತ್ರೆ
ವರ್ಣ ವ್ಯಾಖ್ಯಾನ
ಚಂದವಿರುವುದಷ್ಟೇ ಕಲೆಯಲ್ಲ
ಕನಸುಗಳು ಮೈದೋರಿದಾಗ
ಕತ್ತಲೆಯ ಅಳತೆಗಾರ
ದುಃಖದ ಉತ್ಪಾತ - ದಿ ಸ್ಕ್ರೀಮ್
ಹಸಿವು ತಣಿಸುವ ತಾಯಿ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು
ಗೌಳಿಗಿತ್ತಿಯ ಮೌನ ಜಾಗರಣೆ!
ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

 

 

 

 

 

 

 

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...