ಬರಹ ಸಾರ್ಥಕವೆನಿಸಿದ್ದರೆ ಮತ್ತೊಂದು ಪುಸ್ತಕ ಏಕೆ ಬರೆಯುತ್ತಿದ್ದೆ?: ಕಂಬಾರ

Date: 07-03-2021

Location: ಬೆಂಗಳೂರು


‘ನನ್ನ ಬರಹ ಸಾರ್ಥಕ ಎನಿಸಿದ್ದರೆ ಈಗ ಮತ್ತೊಂದು ಕವನ ಸಂಕಲನ ಏಕೆ ಬರೆಯುತ್ತಿದ್ದೆ?’ ಎನ್ನುವುದು ಕವಿ, ಕಾದಂಬರಿಕಾರ, ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ವಿನಮ್ರ ಪ್ರಶ್ನೆ.

‘ಕಥೆ, ಕವನ, ಕಾದಂಬರಿ, ನಾಟಕ ಹೀಗೆ ಹತ್ತು ಹಲವು ಪ್ರಾಕಾರಗಳಲ್ಲಿ ಸಾಹಿತ್ಯ ರಚಿಸಿದ್ದರೂ ಬದುಕು ಸಾರ್ಥಕತೆಯ ಭಾವ ಹೊಂದಿಲ್ಲ. ಆ ಭಾವ ಇದ್ದಿದ್ದರೆ ಈಗ ಮತ್ತೆ ಕವನ ಸಂಕಲನ ರಚಿಸುವ ಅಗತ್ಯವಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸಂದರ್ಭ: ‘ಬುಕ್ ಬ್ರಹ್ಮ’ ಡಿಜಿಟಲ್ ಸಂಸ್ಥೆಯು ಆಯೋಜಿಸಿದ್ದ ‘ಫೇಸ್ ಬುಕ್ ಲೈವ್ ’ ಪ್ರಸಾರದಲ್ಲಿ.ಡಾ. ಚಂದ್ರಶೇಖರ ಕಂಬಾರ ಅವರ ಹಾಗೂ ಅಂಕಿತ ಪುಸ್ತಕ ಪ್ರಕಾಶನದ ‘ಎಂದೆಂದಿಗೂ ಶಿವಾಪುರ’ ಕವನ ಸಂಕಲನದ ಲೋಕಾರ್ಪಣೆ ಸಮಾರಂಭ ಹಾಗೂ ಸಂವಾದ.

‘ಬರಹದಿಂದ ಬದುಕು ಸಾರ್ಥಕ ಭಾವ ಪಡೆಯುತ್ತದೆ ಎಂದು ತಿಳಿದಿಲ್ಲ. ಬರೆಯುತ್ತಲೇ ಇರಬೇಕು; ಅಷ್ಟೇ!, ಅದೇ ತೃಪ್ತಿ. ಅದರೆ, ಅನುಭವನ್ನು ತರ್ಕಬದ್ಧವಾಗಿ ಹೇಳಬೇಕು. ಈ ಮಾತಿಗೆ ಬದ್ಧವಾಗಿ ಸಾಹಿತ್ಯ ರಚಿಸುತ್ತಾ ಬಂದಿದ್ದೇನೆ. ಸಾಹಿತ್ಯದಲ್ಲಿ ಛಂದಸ್ಸಿನಂತಹ ನೀತಿ ನಿಯಮ ಕಟ್ಟಳೆಗಳು ಇರಬೇಕು ಎಂಬ ಭಾವನೆ ನನ್ನಲ್ಲಿದೆ’ ಎಂದು ಹೇಳಿದರು.

ಯಾವುದೇ ಸಾಹಿತ್ಯ ರಚನೆಗೆ ಒಂದು ಕಥನವಿರುತ್ತೆ. ಕಥನವೆಂದರೆ ಅದು ರೂಪಕವೆ! ಈ ರೂಪಕವು ಬದುಕನ್ನು ಸಮಗ್ರವಾಗಿ ತೋರಬೇಕು. ಅಂದರೆ, ಅನುಭವವು ಸಮಗ್ರವಾಗಿ ಸಿಗುವಂತಾಗಬೇಕು. ಕಥೆಗೆ ಆದಿ, ಮಧ್ಯೆ ಹಾಗೂ ಅಂತ್ಯವೆಂಬುದು ಇರಬೇಕು. ಸಾಹಿತ್ಯವು ಪೂರ್ಣರೂಪದಲ್ಲಿ ಅರ್ಥವನ್ನು ಗ್ರಹಿಸುತ್ತಾ ಇರುತ್ತದೆ. ಅರ್ಥಪೂರ್ಣ ಬದುಕಿನ ಗುಟ್ಟು ಇರುವ ಹಾಗೆ ಉತ್ತಮ ಸಾಹಿತ್ಯ ರಚನೆಯೂ ಇದೇ ಆಗಿದೆ ಎಂದು ಅಭಿಪ್ರಾಯಪಟ್ಟರು.

ಅಹಂ’ ಬಿಟ್ಟರೆ ಉತ್ತಮ ರಸಾನುಭವದ ಸಾಹಿತ್ಯ ಉಗಮ: ಉತ್ತಮ ರಸಾನುಭವದ ಸಾಹಿತ್ಯ ಸೃಷ್ಟಿಗೆ ಮೊದಲು ಬರಹಗಾರ ತನ್ನ ಅಹಂ ಬಿಡಬೇಕು. ತನ್ನ ಐಡೆಂಟಿಟಿ ಬಗ್ಗೆ ಹೆಮ್ಮೆ ಇರಬಾರದು. ಕಾಲವನ್ನೂ ಮೀರಬೇಕು. ಯಾವುದರ ಹಂಗಿಗೆ ಒಳಗಾಗಬಾರದು. ಸ್ವಂತಿಕೆಯಷ್ಟೇ ಅವನ ಬಲವಾಗಬೇಕು. ಆಗಲೇ ಉತ್ತಮ ಸಾಹಿತ್ಯ ರಚನೆಯಾಗುತ್ತದೆ ಎಂದು ಹೇಳಿದರು.

ಒಂದು ದರ್ಶನದ ಹುಡುಕಾಟವಲ್ಲ: ‘ನನ್ನ ಸಾಹಿತ್ಯದ ವೈವಿಧ್ಯಮಯ ಪ್ರಾಕಾರಗಳಲ್ಲಿ ನಾದ, ರೂಪಕ, ಕಥನ ಹೀಗೆ ಯಾವುದೇ ಒಂದೇ ಒಂದು ದರ್ಶನದ ಹುಡುಕಾಟವಿಲ್ಲ. ಲೇಖಕನ ಆಲೋಚನಾ ಕ್ರಮವು ಒಂದೊಂದು ಬಾರಿ ಒಂದೊಂದು ಅಂಶವನ್ನು ಪ್ರಮುಖ ದರ್ಶನವಾಗಿಸುತ್ತೆ. ಲೇಖಕನ ಅನುಭವವು ಕಥನದ ಆಲೋಚನಾ ಕ್ರಮಕ್ಕೆ ಪೂರಕವಾಗಿರುತ್ತದೆ. ಆದರೆ, ಓದುಗರಿಗೆ ಒಂದು ದರ್ಶನವು ಪ್ರಮುಖವಾಗಿ ಕಾಣುತ್ತದೆಯಷ್ಟೆ. ಲೇಖಕನಿಗೆ ಆತನ ಸಾಹಿತ್ಯವು ಎಲ್ಲ ಅಂಶಗಳ ಸಮಗ್ರ ದರ್ಶನವೇ ಆಗಿರುತ್ತದೆ’ ಎಂದರು.

ಒಳ್ಳೆಯದೂ, ಕೆಟ್ಟದ್ದೂ ಇದೆ: ಜಗತ್ತಿನಲ್ಲಿ ಒಳ್ಳೆಯದು ಕೆಟ್ಟದ್ದೂ ಎರಡೂ ಇದೆ. ಯಾವುದು ತನ್ನ ಸಂತತಿ ಇಷ್ಟಪಡುವ ಜೀವಿಯು ಎಂದಿಗೂ ಒಳ್ಳೆಯದನ್ನೇ ಬಯುಸುತ್ತದೆ. ಅದನ್ನು ತಾಯಿ ಎನ್ನಬಹುದು. ಆದರೆ. ತಂದೆಗೆ ಅಹಂ ಸ್ವಲ್ಪ ಜಾಸ್ತಿ. ಆದರೆ. ತಂದೆಯಲ್ಲೂ ತಾಯ್ತತನ ಇರಬೇಕು. ತಾಯ್ತತನ ಇದ್ದರೆ ಒಳ್ಳೆಯದು. ಅಹಂ ಇದ್ದರೆ ಕೆಟ್ಟದ್ದು. ಅದಕ್ಕೆಂದೇ, ನಮ್ಮ ಜಾನಪದರು ‘ಕನ್ನಡಿ ನೋಡಬೇಡ; ಸರೋವರ ನೋಡು’ ಎನ್ನುತ್ತಾರೆ. ಕನ್ನಡಿ ನೋಡಿದರೆ ನಮ್ಮ ಮುಖ ಮಾತ್ರ ಕಾಣುತ್ತೆ. ಸರೋವರ ನೋಡಿದರೆ ಗಿಡ-ಮರ-ಪಶು-ಪಕ್ಷಿ ಹೀಗೆ ಎಲ್ಲವೂ ಕಾಣುತ್ತವೆ. ನಮ್ಮ ನೋಟ ಸಮಗ್ರವಾಗಿರಬೇಕು ಎಂಬುದಕ್ಕೆ ಈ ಮಾತು ಅರ್ಥಪೂರ್ಣ ಎಂದರು.

ಜೀವನ ಕೇಂದ್ರಿತ ಸಾಹಿತ್ಯ: ಪುಸ್ತಕ ಬಿಡುಗಡೆ ಮಾಡಿ ನಂತರ ಸಂವಾದದಲ್ಲಿ ಪಾಲ್ಗೊಂಡ ಹಿರಿಯ ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರ ರಾವ್ ‘ ಡಾ. ಕಂಬಾರರ ಸಾಹಿತ್ಯವು ಜೀವನ ಕೇಂದ್ರಿತ ದರ್ಶನ ವಾಗಿದೆ. ಆಧುನಿಕತೆಯನ್ನು ಒಳಗೊಂಡೂ ಆರೋಗ್ಯಕತೆಯನ್ನು ಕಂಡುಕೊಳ್ಳುತ್ತಾರೆ. ಕಂಬಾರರಿಗೆ ಪ್ರತಿ ಕವನವೂ ತಂಗುದಾಣವೇ ಹೊರತು ನಿಲ್ದಾಣವಲ್ಲ. ಅದು ಕವಿಯ ಹೆಗ್ಗಳಿಕೆಯೂ ಆಗಿದೆ. ಅಲೌಕಿಕ ಗೊತ್ತಿದ್ದಷ್ಟೇ ಲೌಕಿಕವೂ ಗೊತ್ತು. ಬೌದ್ಧಿಕತೆ ತಿಳಿದಷ್ಟೇ ಅಧ್ಯಾತ್ಮವೂ ಗೊತ್ತು. ಇಂತಹ ವಿವೇಕದ ಪ್ರತೀಕವಾಗಿ ಕಂಬಾರರ ಕವನಗಳಿವೆ ಎಂದರು.

ಕಂಬಾರ ಸಾಹಿತ್ಯದಲ್ಲಿ ಪುರಾಣ ಸೃಷ್ಟಿ : ಸಂವಾದದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಹಿರಿಯ ಲೇಖಕ, ವಿಮರ್ಶಕ ಎಸ್.ಆರ್. ವಿಜಯಶಂಕರ, ಅಡಿಗರು ಪುರಾಣದ ಕಥೆಗಳನ್ನು ಪ್ರತಿಮೆಯಾಗಿ ಸ್ವೀಕರಿಸಿದರೆ ಕವಿ ಬೇಂದ್ರೆ ಅವರು ಪುರಾಣದ ಯಾವುದೇ ಕಥೆಗೆ ಅರ್ಥವ್ಯಾಪ್ತಿಯನ್ನು ನೀಡುತ್ತಾರೆ. ಆದರೆ, ಕಂಬಾರರು ಆಧುನಿಕತೆಯಲ್ಲೂ ಪುರಾಣಗಳನ್ನು ಸೃಷ್ಟಿಸುವ ಮೂಲಕ ಸಾಹಿತ್ಯಕ್ಕೆ ಸುಂದರವಾದ ಕಲ್ಪನಾ ಸಾಮಥ್ಯವನ್ನು ನೀಡುತ್ತಾರೆ. ಸ್ವಂತಿಕೆ, ಅಸ್ಮಿತೆ ಹಾಗೂ ಸ್ಥಳೀಯತೆಗೆ ಪ್ರಾಧಾನ್ಯತೆ ನೀಡುವುದು ಕಂಬಾರ ಸಾಹಿತ್ಯದ ವಿಶೇಷತೆಯೂ ಆಗಿದೆ ಎಂದು ಅಭಿಪ್ರಾಯಪಟ್ಟರು.

MORE NEWS

ಪುಸ್ತಕ ಸಂಸ್ಕೃತಿ ಬೆಳೆಸುವುದು ಸಾಮಾಜಿಕ ನ್ಯಾಯದ ಭಾಗ ಅಂತ ಸರ್ಕಾರಗಳು ಭಾವಿಸಬೇಕು: ಬರಗೂರು

23-04-2024 ಬೆಂಗಳೂರು

ಬೆಂಗಳೂರು: ನಿಜವಾದ ಪುಸ್ತಕ ಪ್ರೀತಿ ಬೆಳೆಯ ಬೇಕಿರುವುದು, ಉಳಿಯ ಬೇಕಿರುವುದು ಮುಂದಿನ ಪೀಳಿಗೆಯಿಂದ, ಆ ಮುಂದಿನ ಪೀ...

ಪ್ರಕಾಶನ ಸಂಸ್ಥೆಯನ್ನು ತೆರೆದಿರುವ ಪ್ರಕಾಶಕರೆಲ್ಲರೂ ಹುಚ್ಚರೇ; ಕೆ.ಎನ್. ಗಣೇಶಯ್ಯ

23-04-2024 ಬೆಂಗಳೂರು

ಪುಸ್ತಕಗಳನ್ನು ಕೊಂಡುಕೊಂಡು ಓದುವವರ ಪ್ರಮಾಣ ಕಡಿಮೆಯೂ ಆಗಿಲ್ಲ ಹೆಚ್ಚು ಕೂಡ ಆಗಿಲ್ಲ. ಬಹುಶಃ ಪುಸ್ತಕವನ್ನು ಓದಬೇಕು ಅನ್...

‘ಕಠಾರಿ ಅಂಚಿನ ನಡಿಗೆ’ ಸಮಕಾಲೀನ ವಿಡಂಬನೆಗಳ ಪುಸ್ತಕ: ಶಿವಸುಂದರ್

22-04-2024 ಬೆಂಗಳೂರು

ಬೆಂಗಳೂರು: ಚಂದ್ರಪ್ರಭ ಕಠಾರಿಯವರು ವಿಡಂಬನೆಗಳನ್ನು ಬರೆದಿದ್ದಾರೆ. ವಿಡಂಬನೆ, ಲೇವಡಿ ಮಾಡುವುದಕ್ಕೆ ಇಂದು ಬಹಳ ಧೈರ್ಯ ಬ...