ಬರಹದ ಮೊದಲು ಮನೋಸಿದ್ಧತೆಯ ವಿಚಿತ್ರ ವರ್ತನೆಗಳು….!


ಬೀchi ಗೀಚಿದ್ದೆಲ್ಲ ಸಾಹಿತ್ಯವಾಗುತ್ತಿತ್ತು. ಅಂಬಿಕಾತನಯದತ್ತ ಮಾತೇ ಕಾವ್ಯವಾಗುತ್ತಿತ್ತು ಎಂಬ ಮಾತುಗಳು ಅವರಿಗೇ ಅನ್ವಯಿಸಿ ಹೇಳಿದರೂ, ಅವರಿಗೂ ಬರಹ ಸುಲಭದ ತುತ್ತಾಗಿರಲಿಲ್ಲ. ಅದಕ್ಕೆ ಮನೋ-ದೈಹಿಕ ಸಿದ್ಧತೆ ಅಗತ್ಯವಿತ್ತು ಮತ್ತು ಇದ್ದೇ ಇರುತ್ತದೆ ಎಂಬ ಮನೋವೈಜ್ಞಾನಿಕತೆಯ ಹಿನ್ನೆಲೆಯಲ್ಲಿ, ಪರ್ತಕರ್ತ ವೆಂಕಟೇಶ ಮಾನು ಅವರು, ಹಲವು ಖ್ಯಾತ ಸಾಹಿತಿಗಳ ಬರಹಕ್ಕಿರುವ ಮನೋ ಪ್ರೇರಣೆಯ ಪೂರಕ ಪರಿಸರ ಕುರಿತು ಕೆಲ ಕುತೂಹಲಕಾರಿ ಅಂಶಗಳನ್ನು ಪ್ರಸ್ತಾಪಿಸಿದ ಬರಹವಿದು.

ಮಾತಿಗಿಂತ ಬರಹವು ಹೆಚ್ಚಿನ ಮನೋಸಿದ್ಧತೆಯನ್ನು ಬಯಸುತ್ತದೆ. ‘ಮಾತಾಡಿದ್ದನ್ನೇ ಬರೆದು ಕೊಡಿ’ ಎಂದರೆ ಲೇಖನಿ ನಿಲ್ಲುತ್ತದೆ. ಏಕೆಂದರೆ, ಮನೋ-ದೈಹಿಕ ಅನ್ಯೋನ್ಯ ಸಂಬಂಧದ ಫಲ-ಬರಹ. ಬರಹಕ್ಕೆ ಹೆಚ್ಚಿನ ಚಿಂತನ-ಮಂಥನದ ಅಗತ್ಯವಿದೆ ಎಂಬುದೇ ಇದರರ್ಥ. ಆದ್ದರಿಂದ, ಬರಹಗಾರರು (ಖ್ಯಾತನಾಮರು-ಆರಂಭಿಕ ಬರಹಗಾರರು) ಯಾರೇ ಆಗಿರಲಿ; ಅವರು ಬರಹಕ್ಕೆ ಇಳಿಯುವ ಮುನ್ನ ಮನೋ ಸಿದ್ಧತೆಗಾಗಿ ಒಂದು ರೀತಿಯ ಅದು: ನಿಶ್ಚಿತವಾದ ಬಾಹ್ಯ ವರ್ತನೆ ಇಲ್ಲವೇ ಆಂತರಿಕ ವರ್ತನೆಯನ್ನು ರೂಢಿಸಿಕೊಂಡಿರುತ್ತಾರೆ. ಹೀಗೆ ರೂಢಿಸಿಕೊಂಡ ವರ್ತನೆ ಕ್ರಿಯೆಯಾಗಿ ಸಾಕಾರಗೊಳ್ಳದ ಹೊರತು ಬರಹವು ಸಾಧ್ಯವಾಗುವುದೇ ಇಲ್ಲ. ಈ ವರ್ತನೆಗಳು ವಿಚಿತ್ರಗಳ ಮೊತ್ತವಾಗಿ ಕಾಣಬಹುದು. ಆದರೆ, ಮಾನಸಿಕವಾಗಿ ಎಷ್ಟೇ ಸದೃಢ ಬರಹಗಾರನೇ ಇರಲಿ; ಆತ ತನ್ನ ಬರಹಕ್ಕೆ ಮೊದಲು ಇಂತಹ ವರ್ತನೆಗಳನ್ನು ಗೀಳಾಗಿಸಿಕೊಂಡಿದ್ದರೆ, ಆ ವರ್ತನೆಯನ್ನು ನೆರವೇರಿಸಿದ ಮೇಲೆ ಆತನಿಗೆ ಬರಹ ಸಾಧ್ಯವಾಗುತ್ತದೆ. ಈ ವಿಚಿತ್ರ ಮನೋ ವರ್ತನೆಗಳೇ ಅವರ ಬರಹಕ್ಕೆ ಮೂಲ ಕಾರಣವಾಗುತ್ತಿರುತ್ತವೆ. ಏಕೆ ಹೀಗೆ ಎಂದು ಬರಹಗಾರರಿಗೆ ತಿಳಿದಿರುವುದಿಲ್ಲ. ಬರಹಕ್ಕೆ ಸೂಕ್ತ ಪರಿಸರ ನಿರ್ಮಿಸಿಕೊಳ್ಳುವುದು ಮತ್ತು ತಾವು ಅಪ್ರಜ್ಞಾಪೂರ್ವಕವಾಗಿ ರೂಢಿ ಮಾಡಿಕೊಂಡ ಪರಿಸರದಲ್ಲೇ (ಅದಿಲ್ಲದಿದ್ದರೂ ಬಲವಂತವಾಗಿ ನಿರ್ಮಿಸಿಕೊಂಡು) ಬರೆಯಲು ತೊಡಗುತ್ತಾರೆ.ದೊಡ್ಡ ದೊಡ್ಡ ಬರಹಗಾರರು ತಾವು ಬರೆಯುವ ಮುನ್ನ ಅವರ ಮನೋ-ದೈಹಿಕ ಸಿದ್ಧತೆಯ ವಿಚಿತ್ರ ತಾಲೀಮುಗಳನ್ನು ನೋಡುವ, ಕಾಣ್ಕೆಯ, ವೀಕ್ಷಿಸುವುದು ಈ ಬರಹದ ಉದ್ದೇಶ.

ನುಲೇನೂರು ಶಿವಮೂರ್ತಿ ಸ್ವಾಮೀಜಿ ಅವರು ಸ್ವಾಮಿ ರಾಮತೀರ್ಥರ ವೇದಾಂತೋಪನ್ಯಾಸಗಳನ್ನು ಸ್ಮಶಾನದಲ್ಲಿ ಕುಳಿತು ಬರೆದರು. ಖ್ಯಾತ ಹಾಸ್ಯ ಸಾಹಿತಿ ಬೀchi ಅವರು ತಾವು ಬರೆಯುವ ಮುನ್ನ ತಾವೇ ಸೇದಿ ಬಿಸಾಡುವ ಸಿಗರೇಟುಗಳ ತುಂಡುಗಳನ್ನು ತಾವು ಕುಳಿತುಕೊಳ್ಳುವ ಸ್ಥಳದಲ್ಲಿ ಹರಡಿಕೊಳ್ಳುತ್ತಿದ್ದರು. ಬರಹವು ದೈವದತ್ತ ಇಲ್ಲವೇ ಚಿಂತನೆಗಳ ಫಲವೇ ಆಗಿರಬಹುದು. ಬರಹಗಾರ ಮಾತ್ರ ತಮ್ಮ ಈ ಚಿಂತನೆಗಳಿಗೆ ಕಾವು ಕೊಡಲು ಮನೋ ಸಿದ್ಧತೆಗಾಗಿ ತನ್ನ ಸಮಯವನ್ನು ವಿಚಿತ್ರ ಕಸರತ್ತುಗಳ ಮೂಲಕವೇ ಸದುಪಯೋಗ ಪಡೆಯುತ್ತಾನೆ.ಕೆಲವು ಉದಾಹರಣೆಗಳನ್ನು ಗಮನಿಸಿ;

ಮಾರ್ಕ್ ಟ್ವಾಯಿನ್, ಜಾರ್ಜ ಆರ್ವೆಲ್, ಎಡಿಟ್ ವಾರ್ಟ್‌ನ್, ವುಡೀ ಎಲೆನ್, ಮಾರ್ಷೆಲ್ ಪ್ರೌಸ್ಟ್ -ಈ ಮಹಾನ್ ಲೇಖಕರು ತಮ್ಮ ಬರಹದ ಮೊದಲು ತಮ್ಮ ಸೋಫಾ ಇಲ್ಲವೇ ಮಂಚದ ಮೇಲೆ ಮಲಗಿ ಪುಟಗಟ್ಟಲೇ ಬರೆಯುತ್ತಿದ್ದರು. ಇವರಿಗೆ ‘ಕುಳಿತು ಬರೆಯಿರಿ’ ಎಂದರೆ ಆಗದ ಕೆಲಸವಾಗಿತ್ತು. ಹಾಳೆಯ ಮೇಲೆ ಒಂದಕ್ಷರವೂ ಮೂಡುತ್ತಿದ್ದಿಲ್ಲ. ಅಮೆರಿಕದ ಪ್ರಸಿದ್ಧ ನಾಟಕಕಾರ ಟ್ರುಮನ್ ಕಾಪೊಟೆ ಅವರು ಹಾಸಿಗೆ ಮೇಲೆ ಚಿತ್ತ ಮಲಗಿದರೆ ಮಾತ್ರ ಬರೆಯುತ್ತಿದ್ದರು. ಬೋರಲಾಗಿ ಮಲಗಿದರೆ ಅವರಿಗೆ ಬರವಣಿಗೆ ಮುಂದೆ ಸಾಗುತ್ತಿರಲಿಲ್ಲ.

ಮತ್ತಷ್ಟು ವಿಚಿತ್ರ ಕಸರತ್ತುಗಳು ನೋಡಿ;

ರಷ್ಯಾದ ಪ್ರಸಿದ್ಧ ಕಾದಂಬರಿಕಾರ ವ್ಲಾದಿಮಿರ್ ನಬೊಕೊವ್ ಬರೆಯುತ್ತಿದ್ದದ್ದು-ಒಂದೇ ಅಳತೆಗೆ ಕತ್ತರಿಸಿದ ಸಣ್ಣ ಸಣ್ಣ ಹಾಳೆಗಳ (Index cards) ಮೇಲೆ. ತಮಗೆ ಚಿಂತನೆಗಳು ಹೊಳೆದಾಗ ಈ ಹಾಳೆಗಳ ಮೇಲೆ ಬರೆದು ಅವುಗಳನ್ನು ಕಾಯ್ದಿಡುತ್ತಿದ್ದರು. ಹೀಗೆ ಮಾಡುವುದರ ಲಾಭವೆಂದರೆ; ಘಟನೆ-ಸನ್ನಿವೇಶ ಕುರಿತ ಚಿಂತನೆಗಳು ದೊಡ್ಡ ಕಾದಂಬರಿಯೊಂದರ ಅನುಕ್ರಮದಲ್ಲಿ ಎಲ್ಲಿಯಾದರೂ ಸೇರ್ಪಡೆಗೊಳಿಸಲು ಇಲ್ಲವೇ ಅಲ್ಲಿಂದ ತೆಗೆಯಲು ಸಾಧ್ಯವಿತ್ತು. ಕೃತಿಯ ಚಿಂತನಾ ಕ್ರಮವು ಹೇಗೋ ಹೇಗೋ ಸಾಗಿ ಕೊನೆಗೆ ಅದು ಶಿಸ್ತುಬದ್ಧವಾಗಿ ರೂಪಿಸುವಲ್ಲಿ, ಈಗಾಗಲೇ ಬರೆದ ಸಣ್ಣ -ಸಣ್ಣ ಹಾಳೆಗಳನ್ನು ಅಗತ್ಯವಿದ್ದೆಡೆ ಸೇರಿಸುತ್ತಿದ್ದರು. ಮಲಗುವಾಗ ಆತ ತನ್ನ ತಲೆದಿಂಬಿನ ಕೆಳಗೆ ಇಂತಹ ಸಣ್ಣ ಸಣ್ಣಹಾಳೆಯ ಕಟ್ಟುಗಳನ್ನು ಇಟ್ಟುಕೊಳ್ಳುತ್ತಿದ್ದ. ಹೊಸ ವಿಚಾರ ಹೊಳೆಯುತ್ತಿದ್ದಂತೆ ಬರೆಯುತ್ತಿದ್ದ. ಹೀಗೆ ಬರೆದ ಹಾಳೆಗಳ ವಿಚಾರಗಳು ಒಟ್ಟು ಕೃತಿಯ ಪರಿಸರದಲ್ಲಿ ಯಾವುದೋ ಮೂಲೆ ಸೇರಿ, ಕೃತಿಯ ಅಂದ-ಅರ್ಥವಂತಿಕೆಯನ್ನು ಹೆಚ್ಚಿಸುತ್ತಿದ್ದವು.ಲೋಲಿತ್, ಪೇಲ್ ಫೈರ್, ಅಡಾ ಮುಂತಾದ ಖ್ಯಾತ ಕೃತಿಗಳನ್ನು ಹೀಗೆಯೇ ರಚಿಸಿದ್ದ ಎಂಬುದು ಗಮನಾರ್ಹ.

ಬಣ್ಣವೂ ಬರಹಕ್ಕೆ ಪ್ರೇರಣೆ?

ಯಾವ ಪ್ರಕಾರದ ಸಾಹಿತ್ಯ ರಚನೆಗೆ ಮನೋದೈಹಿಕ ಸಿದ್ಧತೆ ಮಾತ್ರವಿರಲಿಲ್ಲ; ಅದು, ಬರೆಯುವ ಬಣ್ಣದ ಶಾಯಿಯನ್ನೂ ಅವಲಂಬಿಸಿರುತ್ತಿತ್ತು. ಫ್ರೆಂಚ್ ಬರಹಗಾರ ಅಲೆಕ್ಸಾಂಡರ್ ಡುಮಾಸ್ ಎಂಬಾತ `ದಿ. ತ್ರೀ ಮಸ್ಕಿಟೀರ್ಸ್’ ಹಾಗೂ ‘ದಿ. ಕೌಂಟ್ ಆಫ್ ಮಾಂಟೆ ಕ್ರಿಸ್ಟೋ’ ಕೃತಿಗಳನ್ನು ವಿವಿಧ ಬಣ್ಣದ ಶಾಹಿಯಲ್ಲೇ ಬರೆದ. ಆತನ ಸಮರ್ಥನೆ ಎಂದರೆ; ಕಾಲ್ಪನಿಕ ಕಾದಂಬರಿಗಳಿಗೆ ನೀಲಿ ಶಾಯಿ, ತೆಳುಕೆಂಪು ಗುಲಾಬಿಯಾದರೆ ಅದು ಲೇಖನ ಇಲ್ಲವೇ ಕಾಲ್ಪನಿಕವಲ್ಲದ ಕೃತಿಗಳಿಗೆ ಮತ್ತು ಹಳದಿ ಬಣ್ಣದ ಸಾಯಿಯಾದರೆ ಬಡತನ ಆಧರಿಸಿ ಬರೆಯುವ ಕೃತಿಗಳಾಗಿರುತ್ತಿದ್ದವು. ಕೃತಿಯು ಯಾವುದರ ಮನೋಕೇಂದ್ರಿತವಾಗಿದೆಯೋ ಎಂಬುದರ ಮೇಲೆ ಈತ ಬಣ್ಣ-ಬಣ್ಣದ ಶಾಯಿಯನ್ನು ಬಳಸುತ್ತಿದ್ದ. ಕಾಲ್ಪನಿಕ ಕೃತಿಗಳನ್ನು ಹಳದಿ ಬಣ್ಣದ ಶಾಯಿಯಿಂದ ಬರೆಯಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಈತನ ಬರಹವು ಲೇಖನಿಯ ಶಾಯಿಯ ಬಣ್ಣ ನಿರ್ಧರಿಸುತ್ತಿತ್ತು.

ತಲೆ ಕೆಳಗು ಮಾಡಿ ಜೀಕುವುದು…!

ರಾಬರ್ಟ್ ಲಾಂಗ್ ಡೆನ್, ಎಂಜೆಲ್ಸ್ ಆಂಡ್ ಡೆಮನ್ಸ್, ದಿ ದ ವೀಂಚಿ ಕೋಡ್, ದಿ. ಲಾಸ್ಟ್ ಸಿಂಬಲ್, ಇನ್ ಫರ್ನೋ, ಓರಿಜಿನ್ ಹೀಗೆ ಸಾಲು ಸಾಲಾಗಿ ಅತಿ ಹೆಚ್ಚು ಮಾರಾಟ ಖ್ಯಾತಿ ಕಾದಂಬರಿಗಳನ್ನು ಬರೆದ ಡ್ಯಾನ್ ಬ್ರೌನ್, ಬರಹಕ್ಕೆ ಮುನ್ನ ಮನೋದೈಹಿಕ ಸಿದ್ಧತೆಯಾಗಿ ತನ್ನ ತಲೆ ಕೆಳಗೆ ಮಾಡಿ ಒಂದೆರಡು ಬಾರಿ ಜೀಕುತ್ತಾ ಚಿಂತನೆ ನಡೆಸುತ್ತಿದ್ದ. ಆತನ ಸಮರ್ಥನೆ ಹೀಗಿತ್ತು; ವಿಲೋಮ ಚಿಕಿತ್ಸೆಯು (Inversion Therapy) ಬರಹಕ್ಕೆ ಸ್ಪೂರ್ತಿನೀಡುತ್ತದೆ. ವಿಷಯ ವಸ್ತುವಿನ ಮೇಲೆ ಏಕಾಗ್ರತೆ ಹೆಚ್ಚುತ್ತದೆ.ಇದೇ ಲೇಖಕನ ಮತ್ತೊಂದು ಕಸರತ್ತು; ಗಾಜಿನ ಲೋಟಗಳ ಗಂಟೆ ಸೂಚಕ. ಮೇಲಿನ ಲೋಟದ ಮರಳು ಕೆಳಗಿನ ಲೋಟ ತುಂಬುತ್ತಿದ್ದಂತೆ ಒಂದು ಗಂಟೆಯ ಅವಧಿಪೂರ್ಣಗೊಳ್ಳುತ್ತದೆ. ಹೀಗೆ ಪ್ರತಿ ಗಂಟೆಗೊಮ್ಮೆ ತಾನು ಬರೆದ ಹಸ್ತಪ್ರತಿಯನ್ನು ಪಕ್ಕಕ್ಕೆ ಇಟ್ಟು, ಬೈಟಕ್ ಹೊಡೆಯುವುದು, ಕೈ-ಕಾಲುಗಳನ್ನು ಚಾಚಿ ಕಸರತ್ತು ನಡೆಸುವುದು ಹೀಗೆ ಮಾಡುವ ಮೂಲಕ ಮತ್ತೆ ಬರವಣಿಗೆಯಲ್ಲಿ ತೊಡಗಿಕೊಳ್ಳಲು ಪ್ರೇರಣೆ ಪಡೆಯುತ್ತಿದ್ದ. ‘ಬ್ಲ್ಯು ಏಂಜಲ್’ ಕಾದಂಬರಿ ಬರೆದು ಖ್ಯಾತಿ ಪಡೆದ ಫ್ರೆಂಚ್ ಲೇಖಕಿ ಪ್ರೋಸ್, ಬರಹಕ್ಕೆ ಮುನ್ನ ಕಿಟಕಿಯಿಂದಾಚೆಯ ಎತ್ತರದ ಗೋಡೆಯನ್ನೇ ಸುದೀರ್ಘ ಕಾಲದವರೆಗೆ ನೋಡುತ್ತಿದ್ದಳು.

ಕನ್ನಡಿ ಮುಂದೆ ನಿಂತು ಮೂಗನ್ನೇ ಗುದ್ದಿಕೊಂಡ..!

ದಿ. ವೆಸ್ಟ್ ವಿಂಗ್ ಹಾಗೂ ದಿ ಸೋಷಿಯಲ್ ನೆಟ್ ವರ್ಕ್ ನಾಟಕಗಳನ್ನು ಬರೆದ ಲೇಖಕ ಅರಾನ್ ಸೊರ್ಕಿನ್, ಕನ್ನಡಿಯ ಮುಂದೆ ನಿಂತು ಪಾತ್ರಗಳನ್ನು ನಟಿಸುತ್ತಲೇ ಬರೆಯುತ್ತಿದ್ದ. ಹೀಗೆ ಮಾಡುವಾಗ ಪಾತ್ರದ ಆವೇಶಭರಿತ ಮಾತುಗಳನ್ನು ಆಡುತ್ತಾ ನಟಿಸುವಾಗ ತನ್ನ ಮೂಗನ್ನೇ ಗುದ್ದಿಕೊಂಡಿದ್ದ. ಕನ್ನಡಿ ಮುಂದೆ ನಿಂತು ಬರೆಯುವುದನ್ನು ಮಾತ್ರ ಬಿಡಲೇ ಇಲ್ಲ.

ಬೆತ್ತಲೆಯಾಗೇ ಬರೆದ…

ವಿಶ್ವ ಖ್ಯಾತಿಯ ಫ್ರೆಂಚ್ ಲೇಖಕ, ಕಾದಂಬರಿಕಾರ ವಿಕ್ಟರ್ ಹ್ಯೂಗೋ, ಆತನ ಬರೆಯುವ ಮನೋಸಿದ್ಧತೆ ಎಂದರೆ ಮೈ ಮೇಲಿನ ಬಟ್ಟೆ ಬಿಚ್ಚುವುದು. ನಿಗದಿತ ಸಮಯದಲ್ಲಿ ಕಾದಂಬರಿ ಮುಗಿಸಲೇ ಬೇಕು ಎಂಬ ಅವಸರವಿದ್ದಾಗ ಸಂಪೂರ್ಣವಾಗಿ ಬಟ್ಟೆ ಬಿಚ್ಚಿ ಬರೆಯಲು ಕುಳಿತುಕೊಳ್ಳುತ್ತಿದ್ದ. ದಿ. ಹಂಚ್ ಬ್ಯಾಕ್ ಆಫ್ ನೊಟ್ರೆಡೇಮ್ ಕಾದಂಬರಿ ಬರೆಯುವಾಗ, ತನ್ನ ಸೇವಕನನ್ನು ಕರೆದು ತನ್ನ ಎಲ್ಲ ಬಟ್ಟೆಗಳನ್ನು ಹೊರಗೆ ತೆಗೆದುಕೊಂಡು ಹೋಗಲು ಸೂಚಿಸಿದ್ದ. ಕಾದಂಬರಿ ಮುಗಿಯುವವರೆಗೂ ತಾನು ಮನೆಯಿಂದ ಹೊರ ಬರುವಂತಿಲ್ಲ ಎಂಬುದು ಆತನ ಯೋಚನೆ. ಕೊರೆವ ಚಳಿಗಾಲದಲ್ಲೂ ಬೆತ್ತಲೆಯಾಗಿದ್ದು, ಅತಿ ಹೆಚ್ಚೆಂದರೆ ಒಂದು ಟಾವೆಲ್ ಸುತ್ತಿಕೊಂಡು ಬರೆಯುತ್ತಿದ್ದ. ಬರಹದ ಮತ್ತೊಂದು ಗುಟ್ಟು ಎಂದರೆ- ದಿನಕ್ಕೆ ಕನಿಷ್ಠ 40 ಕಪ್ ಕಾಫಿ ಸೇವಿಸುತ್ತಿದ್ದ. ಇದೇ ರೀತಿ, ಫ್ರೆಂಚ್ ಕಾದಂಬರಿಕಾರ ಹೊನೊರೆ ಡೆ ಬಾಲ್ಝಾಕ್ ನ ಬರವಣಿಗೆಯು ಹೆಚ್ಚು-ಕಡಿಮೆ ಒಂದು ದಿನಕ್ಕೆ 50 ಕಪ್ ಕಾಫಿ ಕುಡಿಯುವ ಸ್ಫೂರ್ತಿಯನ್ನು ಅವಲಂಬಿಸಿತ್ತು.

MORE FEATURES

ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ...

07-05-2021 ಬೆಂಗಳೂರು

‘ಬೇಂದ್ರೆಯವರ ಹದಿನಾಲ್ಕು ನಾಟಕಗಳ ಅಭಿವ್ಯಕ್ತಿ, ಆಶಯ ಹಾಗೂ ರಂಗ ಭಾಷೆಯ ಹಿನ್ನೆಲೆಯಲ್ಲಿ ಓದಿಗೆ ಅವಕಾಶ ಮಾಡಿಕೊಳ್...

‘MAKING OF ಬಂಗಾರದ ಮನುಷ್ಯ’ ಸಾಧನ...

05-05-2021 ಬೆಂಗಳೂರು

ಕನ್ನಡ ಸಿನಿಮಾ ಗಗನಮಂಡಲದಲ್ಲಿ ಧ್ರುವತಾರೆಯಂತಿದ್ದ ‘ಬಂಗಾರದ ಮನುಷ್ಯ’ ಸಿನಿಮಾದ ಸಾಧನೆಯ ಶ್ರಮವನ್ನು ಲೇಖಕ...

ಇಲ್ಲಿ ರುಚಿ ನೋಡಿ, ಲೋಕ ಪಾಕಶಾಲೆಯಲ...

30-04-2021 ಬೆಂಗಳೂರು

‘ಕಾಕ್ ಟೇಲ್’ -ಲೇಖಕಿ ಚೇತನಾ ತೀರ್ಥಹಳ್ಳಿ ಅವರ ಹೊಸ ಕೃತಿ. ಅವರೇ ಹೇಳುವಂತೆ ಇದೊಂದು ಮಿಶ್ರಣಗಳ ಕಾಕ್ ಟೇಲ...