ಬರಹಗಾರನ ಸಾಹಿತ್ಯ ನೈತಿಕತೆ ಹಾಗೂ ತಾತ್ವಿಕತೆಯ ಭಾಗವಾಗಿರಬೇಕು: ಸಾಹಿತಿ ಡಾ.ಎಲ್ ಹನುಮಂತಯ್ಯ

Date: 03-10-2021

Location: ಬೆಂಗಳೂರು


'ಸಾಹಿತ್ಯ ಯಾರೋ ಹೇಳಿ ಬರೆಸುವುದಲ್ಲ, ನೈತಿಕತೆ ಮತ್ತು ತಾತ್ವಿಕತೆಯ ಅಂಗವಾಗಿ ಲೇಖಕನ ಒಳಗಿನಿಂದ ಮೂಡಬೇಕು’ ಎಂದು ರಾಜ್ಯಸಭಾ ಸದಸ್ಯರು ಹಾಗೂ ಸಾಹಿತಿ ಡಾ.ಎಲ್ ಹಮನುಮಂತಯ್ಯ ಹೇಳಿದರು.

ಬೆಂಗಳೂರಿನ ಸಮರಿಟಾನ್ಸ್ ಟ್ರಸ್ಟ್, ಭೂಮಿ ಪ್ರಕಾಶನ ಹಾಗೂ ಕರ್ನಾಟಕ ಲೇಖಕಿಯರ ಸಂಘ ವತಿಯಿಂದ ತುಮಕೂರಿನ ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ದಿ ಟ್ರಸ್ಟ್ ಸಹಯೋಗದಲ್ಲಿ ಅಕ್ಟೋಬರ್ 3, 2021 ಭಾನುವಾರದಂದು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ತುಂಬಾಡಿ ರಾಮಯ್ಯನವರ ’ಓದೋ ರಂಗ’ ಕೃತಿ ಬಿಡುಗಡೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

'ಓದೋ ರಂಗ’ ಕೃತಿಯ ಕತೆ ಹಳ್ಳಿಯಲ್ಲಿ ಹುಟ್ಟಿ ಬೆಂಗಳೂರಿಗೆ ನಡೆದು ಬಂದಿದೆ. ಇಲ್ಲಿನ ಕತೆ ಯಾವ ಪ್ರಕಾರಕ್ಕೆ ಸೇರುತ್ತದೆ ಎಂಬ ಗೊಂದಲ ದಲಿತ ಲೇಖಕರಿಗೆ ಸಹಜವಾಗಿ ಬರಬಹುದು. ಯಾಕೆಂದರೆ ದಲಿತ ಸಂವೇದನೆಗಳು ಎಲ್ಲಾ ಪ್ರಕಾರಗಳಿಗೂ ಅನ್ವಯಿಸುತ್ತದೆ ಎಂದರು. ಪುರಾಣದ ಇತಿಹಾಸವನ್ನು ಕುರಿತು ಮಾತನಾಡುತ್ತಾ, ಆದಿ ಜಾಂಬವ ಪುರಾಣ ಪ್ರಮುಖವಾಗಿದ್ದೂ ಅಸ್ಪೃಶ್ಯ ಸಮುದಾಯ ಕೀಳಿರಿಮೆಯಿಂದ ಹೊರ ಬರಲು ಆದಿಜಾಂಬವ ಪುರಾಣದಲ್ಲಿನ ಹಿರಿಮೆಗೆ ನಾವು ಒತ್ತು ನೀಡಬೇಕು ಎಂದರು. ಪ್ರಸ್ತುತ ಶೈಕ್ಷಣಿಕ ಮಟ್ಟದಲ್ಲಿ ಆದಿ ಜಾಂಬವ ಸಮುದಾಯ ಹಿಂದುಳಿದ್ದಿದ್ದು ಅನೇಕ ಹೆಮ್ಮೆಯ ಪರಂಪರೆಗಳನ್ನು ಇತಿಹಾಸಕಾರರು ಉದ್ದೇಶ ಪೂರ್ವಕವಾಗಿಯೇ ಮರೆಮಾಚಿದ್ದಾರೆ. ತುಂಬಾಡಿ ರಾಮಯ್ಯ ಅವರ ’ಓದೋ ರಂಗ’ ಕೃತಿಯು ದಲಿತ ಪ್ರಜ್ಞೆಯನ್ನು ಅರಿಯುವಂತೆ ಮಾಡುತ್ತದೆ ಎಂದು ತಿಳಿಸಿದರು.

ಖ್ಯಾತ ಪತ್ರಕರ್ತ, ಕಥೆಗಾರ ರಘುನಾಥ್ ಚ.ಹ ಕೃತಿ ಬಿಡುಗಡೆಗೊಳಿಸಿ, 'ಓದೋರಂಗ’ ಕೃತಿಯೂ ಅಧುನಿಕ ಪುರಾಣ ಕಾದಂಬರಿಯಾಗಿ ಇಂದಿನ ಅನೇಕ ಸಾಮಾಜಿಕ ಆಯಾಮಗಳನ್ನು ಚಿತ್ರಿಸುವ, ಜೀವಂತವಾಗಿಸುವ ಪ್ರಯತ್ನವಾಗಿದೆ. ಓದುಗರ ವಿವೇಚನೆಯು ಅನಾವರಣವಾಗೊಳ್ಳುವಂತೆ ಪ್ರೇರೇಪಿಸುವ ಕೃತಿ ಇದಾಗಿದ್ದೂ, ಎಂ. ಶಂಕರಪ್ಪ ಅವರಿಗೆ ಅರ್ಪಣೆ ಮಾಡುವ ಮೂಲಕ ರಾಮಯ್ಯ ಅವರು ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ. ಭಾಷಾ ಶೈಲಿ, ಬರವಣಿಗೆಯ ಕೌಶಲ್ಯ, ಪಾತ್ರಗಳ ಜೀವಂತಿಕೆ, ಮೌಖಿಕ ಸಂಕಥನಗಳು ಇಲ್ಲಿ ವಿಶೇಷವಾಗಿ ಮೂಡಿಬಂದಿದೆ ಎಂದರು.

ಲಕ್ಮೀನಾರಾಯಣಸ್ವಾಮಿ ಮಾತನಾಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ರಾಜಕಾರಣದಲ್ಲಿ ’ಜಾತಿ’ಯ ಅಸ್ಮಿತೆಯನ್ನು ಉಳಿಸಿಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ತುಂಬಾಡಿ ರಾಮಯ್ಯ ಅವರು ತಮ್ಮ ಕೃತಿಯಲ್ಲಿ ದೇಸಿತನದ ಜೊತೆಗೆ ತಳ ಸಮುದಾಯಗಳ ದ್ವನಿಯನ್ನೂ ಹಾಗೂ ಸಾಮಾಜಿಕ ಸಂವೇದನೆಯ ಜವಾಬ್ದಾರಿಯನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆ. ಕವಿತ್ವದ ಭಾವನಾತ್ಮಕ ಪ್ರೇರಣೆಗಳನ್ನು ಹಾಗೂ ಕೌಶಲ್ಯಗಳನ್ನು ಬಳಸಿಕೊಂಡು ಆಧುನಿಕ ಪುರಾಣವನ್ನು ಕಲಾತ್ಮಕವಾಗಿ ಸೃಷ್ಟಿಸಿರುವುದು ಕೃತಿಯ ವೈಶಿಷ್ಠ್ಯತೆಯಾಗಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷರಾದ ಮಲ್ಲಿಕಾ ಬಸವರಾಜು, ಶೋಷಣೆಗೆ ಒಳಗಾದ ಮನುಷ್ಯ ನೋವಿಗೆ ಎದೆಗುಂದದೆ ಸಮಾಜಕ್ಕೆ ಬೆಳಕಾಗುವ ಮೂಲಕ ಪಾತ್ರಗಳನ್ನು ಹಾಗೂ ಸನ್ನಿವೇಶಗಳನ್ನು ಕಟ್ಟಿಕೊಟ್ಟಂತಹ ತುಂಬಾಡಿ ರಾಮಯ್ಯನವರ ಬರವಣಿಗೆಯ ಶೈಲಿ ಅಭಿನಂದನೀಯ ಎಂದರು.

ಸಾಹಿತಿಗಳಾದ ಡಾ.ಎಂ.ಎಸ್.ಮೂರ್ತಿಯವರು, ಭೂಮಿ ಪ್ರಕಾಶನದ ವತಿಯಿಂದ ಪುಸ್ತಕ ಬಿಡುಗಡೆಗೊಂಡಿದ್ದು ಸಂಭ್ರಮದ ವಿಚಾರವಾಗಿದೆ. ಸಾಮಾಜಿಕ ಜವಾಬ್ದಾರಿಯನ್ನು ಅವಲೋಕಿಸಿದಾಗ ದಲಿತ ಸಂವೇದನೆ ಮತ್ತು ಸಾಹಿತ್ಯದಾಚೆಗೂ ನಿಲುಕಬಲ್ಲ ವ್ಯಕ್ತಿತ್ವ, ಜಾತ್ಯತೀತ ದೋರಣೆ ರಾಮಯ್ಯ ಅವರದ್ದಾಗಿದೆ ಎಂದು ತಿಳಿಸಿದರು.

ವಿರ್ಮಶಕರಾದ ಡಾ.ರವಿ ಕುಮಾರ್ ನೀಹ ಪ್ರಾಸ್ತಾವಿಕ ನುಡಿಗಳನ್ನಾಡಿದರು.

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...