`ಬರವಣಿಗೆ ನೈತಿಕ ಕಾಳಜಿ, ಮಾನವೀಯ ಅಂತಃಕರಣಕ್ಕೆ ದಿಕ್ಸೂಚಿಯಾಗಿರಬೇಕು'


ಬರವಣಿಗೆ ಸಾಮಾಜಿಕ, ನೈತಿಕ ಕಾಳಜಿ, ಮಾನವೀಯ ಅಂತಃಕರಣಕ್ಕೆ ದಿಕ್ಸೂಚಿಯಾಗಿರಬೇಕು ಎನ್ನುತ್ತಾರೆ ಲೇಖಕ ಕಲ್ಯಾಣರಾವ ಜಿ. ಪಾಟೀಲ. ಅವರ ಸಾಹಿತ್ಯಕ್ಷೇತ್ರದ ಸಾಧನೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ಸಾಹಿತ್ಯ ಶ್ರೀ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ‘ಬುಕ್ ಬ್ರಹ್ಮ’ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಬುಕ್ ಬ್ರಹ್ಮ: ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ?
ಕಲ್ಯಾಣರಾವ ಜಿ. ಪಾಟೀಲ್: ಪ್ರಶಸ್ತಿಗಾಗಿ ಅರ್ಜಿ ಹಾಕದಿದ್ದರೂ, ಪ್ರತಿಷ್ಠಿತರ ಶಿಫಾರಸ್ಸು ಇಲ್ಲದಿದ್ದರೂ ಪ್ರಶಸ್ತಿ ಬಂದಿರುವುದು ಆಶ್ಚರ್ಯಕರ, ಸಂತಸದ ಸಂಗತಿ. ನಾಡಿನಾದ್ಯಂತ ಇರುವ ಸಾಧಕರನ್ನು ಗುರುತಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಧನ್ಯವಾದಗಳು

ಬುಕ್ ಬ್ರಹ್ಮ: ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ ..?
ಕಲ್ಯಾಣರಾವ ಜಿ. ಪಾಟೀಲ್ : ನಾನು ಮೂಲತಃ ಕನ್ನಡ ಶಿಕ್ಷಕ, ವಿದ್ಯಾರ್ಥಿಗಳಿಗೆ ಯಾವ ವಿಷಯ ಕಠಿಣ/ಕ್ಲಿಷ್ಟ ಎನಿಸುತ್ತದೆಯೋ ಅದನ್ನು ಅವರಿಗೆ ಮನದಟ್ಟು ಮಾಡಿಕೊಡುವ ಪ್ರಯುಕ್ತ ಶಾಸ್ತ್ರೀಯ ವಿಷಯಗಳಿರುವ (ಹಳಗನ್ನಡ ಕಾವ್ಯ, ವ್ಯಾಕರಣ, ಛಂದಸ್ಸು, ಸಂಶೋಧನೆ, ಸಂಪಾದನೆ ಮುಂತಾದ) ಸೃಜನೇತರ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವೆ.

ಬುಕ್ ಬ್ರಹ್ಮ: ಸಾಹಿತ್ಯಿಕ ಪಯಣದಲ್ಲಿ ನೀವು ಹೆಮ್ಮೆ ಪಡುವ ವಿಚಾರ ಯಾವುದು..?
ಕಲ್ಯಾಣರಾವ ಜಿ. ಪಾಟೀಲ್ : ಹಳಗನ್ನಡ ಕಾವ್ಯಾಸ್ವಾದನ, ಸಹೃದಯ ಸಂವಾದ, ಸರಳ ನಿರೂಪಣೆ, ಮಾರ್ಗ ಸಾಹಿತ್ಯದ ಬಗೆಗೆ ವ್ಯವಸ್ಥಿತ ವಿಶ್ಲೇಷಣೆ .

ಬುಕ್ ಬ್ರಹ್ಮ: ಯಾವ ಲೇಖಕರ ಕೃತಿಗಳು ನಿಮ್ಮನ್ನು ಹೆಚ್ಚು ಪ್ರೇರೇಪಿಸುತ್ತವೆ ಅಥವಾ ಕಾಡುತ್ತವೆ...?
ಕಲ್ಯಾಣರಾವ ಜಿ. ಪಾಟೀಲ್ : ಡಾ.ಜಿ.ಎಸ್. ಶಿವರುದ್ರಪ್ಪನವರ ಗದ್ಯ-ಪದ್ಯ-ಕಾವ್ಯ ಚಿಂತನೆ, ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ವಿಮರ್ಶೆ-ಮೀಮಾಂಸೆ, ಹಾಮಾ ನಾಯಕ, ಪಿ. ಲಂಕೇಶ ಮತ್ತು ಎಚ್ಚೆಸ್ಕೆಯವರ ಗದ್ಯ

ಬುಕ್ ಬ್ರಹ್ಮ: ಇದನ್ನು ನಾನು ಬರೆಯಬೇಕಿತ್ತು ಎನಿಸುವಂತಹ ಇತರೆ ಲೇಖಕರ ಕೃತಿ ಯಾವುದು...?
ಕಲ್ಯಾಣರಾವ ಜಿ. ಪಾಟೀಲ್ : ಪ್ರಾಚೀನ ಕಾಲದಿಂದ ಹಿಡಿದು ಆಧುನಿಕ ಘಟ್ಟದವರೆಗೆ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮರು ಓದಿಗೆ ಒಳಪಡಿಸಿ (ರಂ.ಶ್ರೀ. ಮುಗಳಿ, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್.ಎಸ್, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ಸಾಹಿತ್ಯ ಚರಿತ್ರೆ ಸಮೀಕ್ಷೆಗಳ ಮುಂದುವರಿಕೆಯ ಭಾಗವಾಗಿ ಸಾಮಾನ್ಯನಿಗಾಗಿ ಸಾಹಿತ್ಯ ಚರಿತ್ರೆ ಮಾದರಿಯಲ್ಲಿ) ಇನ್ನೂ ವ್ಯವಸ್ಥಿತವಾಗಿ ಬರೆಯುವ ಯೋಜನೆ ಹಾಕಿಕೊಂಡಿರುವೆ. ಡಾ.ಎಚ್. ತಿಪ್ಪೇರುದ್ರಸ್ವಾಮಿಯವರ ವಚನಗಳ ಸರಳ ವಿಶ್ಲೇಷಣೆಯನ್ನು ಅನ್ಯಜ್ಞಾನ ಶಿಸ್ತಿಗೆ ಒಳಪಡಿಸಿ, ಅನ್ವಯಿಕವಾಗಿ ವಿಶ್ಲೇಷಿಸುವ ಅಗತ್ಯ ಇದೆ ಎನಿಸುತ್ತದೆ.

ಬುಕ್ ಬ್ರಹ್ಮ: ನಿಮ್ಮ ಸಾಹಿತ್ಯಿಕ ಬದುಕಿನ ಮೂಲ ಧ್ಯೇಯವೇನು...?
ಕಲ್ಯಾಣರಾವ ಜಿ. ಪಾಟೀಲ್ : ಆಕರ್ಷಕ ವಿದ್ಯುನ್ಮಾನ ಮಾಧ್ಯಮಗಳ ಭ್ರಾಮಕ ಲೋಕದ ವಶೀಕರಣದಲ್ಲಿ ಒದ್ದಾಡುತ್ತಿರುವ ಯುವ ಸಮುದಾಯವನ್ನು ಆ ಮಾಯಾಜಾಲದಿಂದ ಬಿಡಿಸಿ, ಅವರಲ್ಲಿ ಜೀವನ ಪ್ರೀತಿ, ಸಮಸ್ಯೆಗಳನ್ನು ನಿಭಾಯಿಸುವ ಆತ್ಮವಿಶ್ವಾಸ, ಸಾಧನೆಯತ್ತ ತುಡಿಯುವ ಮನೋಸ್ಥೈರ್ಯವನ್ನು ಹೆಚ್ಚಿಸುವ, ಮಾನವೀಯ ಮೌಲ್ಯಗಳಿಗೆ ಸ್ಪಂದಿಸುವ, ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ, ಸಂವಿಧಾನಿಕ ಪ್ರಜ್ಞೆ ಇರುವ, ಜಾತ್ಯತೀತ, ಸೌಹಾರ್ದಯುತ, ಸಮುದಾಯದ ಸಿದ್ಧತೆಯ ಕಿರುಪ್ರಯತ್ನವೇ ನನ್ನ ಜೀವನದ, ಅಧ್ಯಾಪನ, ಬರವಣಿಗೆಯ ಆಶಯ

ಬುಕ್ ಬ್ರಹ್ಮ: ಸಾಹಿತ್ಯದಿಂದ ನಿಮ್ಮ ಬದುಕಿನಲ್ಲಾದ ಮಹತ್ವದ ಬದಲಾವಣೆಗಳೇನು...?
ಕಲ್ಯಾಣರಾವ ಜಿ. ಪಾಟೀಲ್ : ಎಂತಹ ಕ್ಲಿಷ್ಟ/ ಸಂಕೀರ್ಣ ಪರಿಸ್ಥಿತಿ ಬಂದರೂ ಅದನ್ನು ಸವಾಲಾಗಿ ಸ್ವೀಕರಿಸುವ, ಸರಿಯಾಗಿ ನಿಭಾಯಿಸುವ, ಸಕರಾತ್ಮಕವಾಗಿ ಚಿಂತಿಸುವ, ಯಾವತ್ತೂ ಜೀವನ ಪ್ರೀತಿಯನ್ನು ಬಿಡದೆ, ಪಲಾಯನಗೈಯದೆ, ನೊಂದವರ ನೋವಿಗೆ ಸಾಧ್ಯವಾದಷ್ಟು ಸ್ಪಂದಿಸಲು ಸಾಧ್ಯವಾಗಿದೆ. ಇದಕ್ಕೆ ಕುವೆಂಪು, ಕಾರಂತ, ಜಿ.ಎಸ್.ಎಸ್. ಪಿ.ಲಂಕೇಶ, ಪೂ.ಚಂ.ತೇಜಸ್ವಿ, ದೇವನೂರು ಮಹಾದೇವ ಮುಂತಾದವರ ಸಾಹಿತ್ಯ ಕೃತಿಗಳ ಅಧ್ಯಯನವೇ ಮೂಲ ಪ್ರೇರಣೆ.

ಬುಕ್ ಬ್ರಹ್ಮ: ನಿಮ್ಮ ಬದುಕಿನಲ್ಲಿ ಬರವಣಿಗೆಯ ಪಾತ್ರ...?
ಕಲ್ಯಾಣರಾವ ಜಿ. ಪಾಟೀಲ್ : ಸಾಹಿತ್ಯದ ಯಾವುದೇ ಕ್ಷೇತ್ರ ಇರಲಿ ಅದು, ವೈಯಕ್ತಿಕ ಮನೋದೈಹಿಕ ಸ್ವಾಸ್ಥ್ಯ, ಕೌಟುಂಬಿಕ ನೆಮ್ಮದಿ, ಸಾಮಾಜಿಕ, ನೈತಿಕ ಕಾಳಜಿ, ಮಾನವೀಯ ಅಂತಃಕರಣಕ್ಕೆ ದಿಕ್ಸೂಚಿಯಾಗಿರಬೇಕು.

ಕಲ್ಯಾಣರಾವ ಜಿ. ಪಾಟೀಲ ಅವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ವಿವಿಧ ಕಾರ್ಯಕ್ರಮಗಳಲ್ಲಿ ಲೇಖಕ ಕಲ್ಯಾಣರಾವ ಜಿ. ಪಾಟೀಲ:

 

MORE FEATURES

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...

ನೀ ಹಿಂಗ ನೋಡಬ್ಯಾಡ ನನ್ನ: ರವಿ ಬೆಳಗೆರೆ 

23-04-2024 ಬೆಂಗಳೂರು

"ಪ್ರೀತಿ ಬದುಕಿನ ಅಸ್ಮಿತೆಯಾ? ಪ್ರೀತಿ ಕೇವಲ ನೆಪವಾ? ಗರ್ವ? ಅಥವಾ ಸಿಗಲೇಬೇಕು ಎನ್ನುವ ಅಂಶವಾ? ಪ್ರೀತಿ ಸಮುದ್ರವಾ...

ಓದುಗ ಬಳಗ ಹೆಚ್ಚಿಸಲು ಬೇಕು ನೆಟ್‌ವರ್ಕ್‌ ಮಾರ್ಕೆಟಿಂಗ್‌ ತಂತ್ರ

23-04-2024 ಬೆಂಗಳೂರು

'ವಿಶ್ವ ಪುಸ್ತಕ ದಿನದ ಸಂದರ್ಭದಲ್ಲಿ ನಾವು ಒಂದು ನಿರ್ಧಾರವನ್ನು ಮಾಡಬೇಕಿದೆ. ಇದಕ್ಕೆ ಈಗಿನ ನೆಟ್‌ವರ್ಕ್&zwn...