ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ

Date: 07-12-2022

Location: ಬೆಂಗಳೂರು


“15ನೇ ಶತಮಾನದ ಹೊತ್ತಿಗೆ 12ನೇ ಶತಮಾನದ ಶರಣರ ಕ್ರಾಂತಿಕಾರಿ ವಿಚಾರಗಳು ಮರೆಯಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಬತ್ತಲೆಯಾಗಿ ತಿರುಗುವುದು, ಮೌನಿಯಾಗಿದ್ದು ತಪಸ್ಸು ಮಾಡುವುದು, ತೋಟಗಳಲ್ಲಿ ಕುಳಿತು ಅನುಷ್ಠಾನ ಮಾಡುವುದು ಇಂತಹ ಕ್ರಿಯೆಗಳು ಸಾಧನೆಯ ಹೆಸರಿನಲ್ಲಿ ನಡೆಯುತ್ತಿದ್ದವು. ಇದನ್ನು ಕಂಡ ಮಸಣಮ್ಮ ಅಂತವರನ್ನು ಕುರಿತು ಈ ವಚನದಲ್ಲಿ ವಿಡಂಬಿಸಿದ್ದಾಳೆ ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ’ ಬಗ್ಗೆ ಬರೆದಿದ್ದಾರೆ.

ವೀರಶೈವ ಪುರಾಣ ಕಾವ್ಯಗಳಲ್ಲಿ ಮೂವರು ಗುಡ್ಡವ್ವೆಯರ ಹೆಸರುಗಳು ಬರುತ್ತವೆ. ವರದಾನಿ ಗುಡ್ಡವ್ವೆ, ನಾವದಿಗೆಯ ಗುಡ್ಡವ್ವೆ ಮತ್ತು ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆ. ವರದಾನಿ ಗುಡ್ಡವ್ವೆ ಮತ್ತು ನಾವದಿಗೆಯ ಗುಡ್ಡವ್ವೆ ಎಂಬ ಎರಡು ಹೆಸರಿದ್ದರೂ, ಈಕೆ ಒಬ್ಬಳೆಯಾಗಿದ್ದು ಬಸವಾದಿ ಶರಣರ ಹಿರಿಯ ಸಮಕಾಲೀನ ಶರಣೆಯಾಗಿದ್ದಾಳೆ. ವರದಾನಿ ಗುಡ್ಡವ್ವೆಯ ಬಗೆಗೆ ಅನೇಕ ಪುರಾಣಕಾವ್ಯಗಳು ಈಕೆಯ ಮಹತ್ವವನ್ನು ಹೇಳಿವೆ. ವರದಾನಿ ಗುಡ್ಡವ್ವೆಯು ವಚನ ರಚಿಸದೇ ಇದ್ದುದರಿಂದ, ಈ ಕೃತಿಯಲ್ಲಿ ಈಕೆಯ ಚರಿತ್ರೆ ಬರುವುದಿಲ್ಲ.

ಕವಿ ಚರಿತೆಕಾರರು ಬತ್ತಲೇಶ್ವರನ ಪುಣ್ಯಸ್ತ್ರೀ ಗುಡ್ಡವ್ವೆಯ ಕಾಲವನ್ನು ಕ್ರಿ.ಶ.1430 ಎಂದು ಹೇಳಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಚರಿತ್ರೆಯಲ್ಲಾಗಲಿ, ಘ.ಗು.ಹಳಕಟ್ಟಿಯವರ "ಶಿವಶರಣೆಯರ ಚರಿತ್ರೆ" ಕೃತಿಯಲ್ಲಾಗಲಿ ಇವಳ ಪ್ರಸ್ತಾಪವಿಲ್ಲ. ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ, ಕವಿಚರಿತೆಕಾರರು ಗುರುತಿಸಿರುವಂತೆ ಈಕೆಯ ಕಾಲವನ್ನು 15ನೇ ಶತಮಾನವೆಂದು ಹೇಳಬಹುದಾಗಿದೆ.

ನೂರೊಂದು ವಿರಕ್ತರು, ನೂರೊಂದು ಮಠಗಳನ್ನು ಸ್ಥಾಪಿಸಿ ವೀರಶೈವ ಧರ್ಮವನ್ನು ಪ್ರಸಾರ ಮಾಡಿದರು. ಈ ನೂರೊಂದು ವಿರಕ್ತರಲ್ಲಿ ಒಬ್ಬ ಮಹಿಳೆಯಾಗಲಿ, ಒಬ್ಬ ದಲಿತನಾಗಲಿ ಇರಲಿಲ್ಲ. 12ನೇ ಶತಮಾನದಲ್ಲಿ ಹೆಚ್ಚಿನ ಸಂಖ್ಯೆ ವಚನಕಾರರೆಲ್ಲ ಮಹಿಳೆಯರು, ದಲಿತರೇ ಆಗಿದ್ದಾರೆ. ನೂರೊಂದು ವಿರಕ್ತರಿಗೆ ಧಾರ್ಮಿಕ ಸಿದ್ಧಾಂತಗಳ ಪ್ರಸಾರ ಮುಖ್ಯವಾಗಿತ್ತು. ಏಕೆಂದರೆ ಆ ಕಾಲಕ್ಕಾಗಲೇ ಮುಸ್ಲಿಂ ಅರಸರು ಕನ್ನಡ ನಾಡಿಗೆ ದಾಳಿಯಿಕ್ಕಿದ್ದರು. ಈ ಕಾರಣದಿಂದ ಅವರಿಗೆ ಧರ್ಮಪ್ರಸಾರ ಮುಖ್ಯವಾಯಿತೇ ಹೊರತು 12ನೇ ಶತಮಾನದ ಶರಣರ ಕ್ರಾಂತಿಯ ವಿಚಾರಗಳಲ್ಲ. ಆದುದರಿಂದ ಅವರು ದಲಿತರತ್ತ, ಮಹಿಳೆಯರತ್ತ ಗಮನ ಕೊಡಲಿಲ್ಲ.

ಡಾ.ಎಲ್.ಬಸವರಾಜು ಮೊದಲಾದ ವಿದ್ವಾಂಸರು ಗುಡ್ಡವ್ವೆ 15ನೇ ಶತಮಾನದವಳೆಂದು ಹೇಳಿದ್ದಾರೆ. ಈ ಎಲ್ಲ ಸಂಗತಿಗಳನ್ನು ಗಮನಿಸಿದಾಗ ಎಡೆಮಠದ ನಾಗಿದೇವಯ್ಯಗಳ ಪತ್ನಿ ಮಸಣಮ್ಮ ಮತ್ತು ಬತ್ತಲೇಶ್ವರ ಪತ್ನಿ ಗುಡ್ಡವ್ವೆ ಈ ಇಬ್ಬರೂ ವಚನಕಾರ್ತಿಯರು 15ನೇ ಶತಮಾನಕ್ಕೆ ಸೇರಿದವರಾಗಿರಬಹುದೆಂದು ತಿಳಿದುಕೊಳ್ಳಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾಗಿದೆ.

ಗುಡ್ಡವ್ವೆಯ ಒಂದು ವಚನ ಪ್ರಕಟವಾಗಿದೆ. ನಿಂಬೇಶ್ವರ ಅಂಕಿತದಲ್ಲಿ ಗುಡ್ಡವ್ವೆ ವಚನ ರಚಿಸಿದ್ದಾಳೆ. ಬತ್ತಲೇಶ್ವರನೆಂಬ ಈಕೆಯ ಪತಿ ಆ ಕಾಲದಲ್ಲಿ ಗುಡ್ಡಪರ್ವತಗಳಲ್ಲಿ ಬತ್ತಲಾಗಿದ್ದುಕೊಂಡು ತಪಸ್ಸು ಮಾಡುತ್ತಿರಬೇಕು. ಅಂತೆಯೇ ಆತನಿಗೆ ಬತ್ತಲೇಶ್ವರನೆಂಬ ಹೆಸರು ಬಂದಿದೆ. ಆಕೆಯ ವಚನ ಹೀಗಿದೆ.

"ತನು ಬತ್ತಲೆಯಾದಡೇನು, ಮನ ಬತ್ತಲೆಯಾಗದನ್ನಕ್ಕ? ವ್ರತವಿದ್ದಡೇನು, ವ್ರತಹೀನರಾದ ಬಳಿಕ?
ನೆರದಡೆ ನರಕವಯ್ಯಾ ನಿಂಬೇಶ್ವರಾ"
- ಸ.ವ.ಸಂ.5, ವ-1089, 1993

ಈ ವಚನದಲ್ಲಿ ಗುಡ್ಡವ್ವೆ ಮಹತ್ವದ ಸಂಗತಿಯನ್ನು ತಿಳಿಸಿದ್ದಾಳೆ. 15ನೇ ಶತಮಾನದ ಹೊತ್ತಿಗೆ 12ನೇ ಶತಮಾನದ ಶರಣರ ಕ್ರಾಂತಿಕಾರಿ ವಿಚಾರಗಳು ಮರೆಯಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಬತ್ತಲೆಯಾಗಿ ತಿರುಗುವುದು, ಮೌನಿಯಾಗಿದ್ದು ತಪಸ್ಸು ಮಾಡುವುದು, ತೋಟಗಳಲ್ಲಿ ಕುಳಿತು ಅನುಷ್ಠಾನ ಮಾಡುವುದು ಇಂತಹ ಕ್ರಿಯೆಗಳು ಸಾಧನೆಯ ಹೆಸರಿನಲ್ಲಿ ನಡೆಯುತ್ತಿದ್ದವು. ಇದನ್ನು ಕಂಡ ಮಸಣಮ್ಮ ಅಂತವರನ್ನು ಕುರಿತು ಈ ವಚನದಲ್ಲಿ ವಿಡಂಬಿಸಿದ್ದಾಳೆ. ಮನಸ್ಸು ಬತ್ತಲೆಯಾಗಬೇಕು, ಅಂದರೆ ಮನಸ್ಸು ತೆರೆದುಕೊಳ್ಳಬೇಕು ವಿಶಾಲವಾಗಿ ಬೆಳೆಯಬೇಕು, ಆಗ ಸಾಧಕ ಬೆಳೆಯುತ್ತಾನೆ. ಅದನ್ನು ಬಿಟ್ಟು ತನು ಬತ್ತಲೆ ಮಾಡಿಕೊಂಡು ತಿರುಗಿದರೇನು ಪ್ರಯೋಜನ?ವೆಂದು ಮಸಣಮ್ಮ ಕೇಳಿದ್ದಾಳೆ. ಮಸಣಮ್ಮನ ಮೇಲೆ 12ನೇ ಶತಮಾನದ ಶರಣರ ಪ್ರಭಾವ ದಟ್ಟವಾಗಿದೆಯೆಂದು ಈ ವಚನದಿಂದ ತಿಳಿದುಬರುತ್ತದೆ.

ಈ ಅಂಕಣದ ಹಿಂದಿನ ಬರೆಹಗಳು:
ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...