ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು

Date: 26-11-2022

Location: ಬೆಂಗಳೂರು


“ಗಂಗಾಬಿಕೆಯ ಈ ವಚನದಲ್ಲಿ ಬಂದಿರುವ ಬೆಡಗು ಕುತೂಹಲಕಾರಿಯಾಗಿದೆ. ಇಲ್ಲಿ ಬಂದಿರುವ ಹುಲಿ, ಅರಣ್ಯದಿಂದ ಬಂದ ಹುಲಿಯಲ್ಲ, ಅದು ಹಾಳಭೂಮಿಯ ಹುಲಿಯಾಗಿದೆ. ಇಲ್ಲಿ ಬಂದಿರುವ ಹಾಳಭೂಮಿಯಲ್ಲಿ ಬಿತ್ತಿ ಬೆಳೆಯುವುದು ಸಾಧ್ಯವಿಲ್ಲ” ಎನ್ನುತ್ತಾರೆ ಲೇಖಕಿ ವಿಜಯಶ್ರೀ ಸಬರದ. ಅವರು ತಮ್ಮ ಶಿವಶರಣೆಯರ ಸಾಹಿತ್ಯ ಚರಿತ್ರೆ ಅಂಕಣದಲ್ಲಿ ‘ಬೆಡಗಿನ ವಚನಕಾರ್ತಿಯರ’ ಬಗ್ಗೆ ಬರೆದಿದ್ದಾರೆ.

ಕಾವ್ಯವೆಂಬುದು ಭಾಷೆಯ ಮೇಲೆ ಕಟ್ಟುವ ಸೌಧವಾಗಿದೆ. ಆಡುಮಾತು, ಗಾದೆಮಾತು, ನುಡಿಗಟ್ಟು, ಪಡೆನುಡಿ, ಬೆಡಗಿನ ಮಾತು ಇವೆಲ್ಲವುಗಳ ಬಳಕೆಯಿಂದ ಕಾವ್ಯ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಅಂತಹ ಅನೇಕ ಪ್ರಯೋಗಗಳನ್ನು ವಚನಗಳಲ್ಲಿ ಕಾಣಬಹುದಾಗಿದೆ. ಬೆಡಗಿನ ಭಾಷೆಯಲ್ಲಿ ವಚನಕಾರ್ತಿಯರು, ಅನೇಕ ವಚನಗಳನ್ನು ಬರೆದಿದ್ದಾರೆ. ಬೆಡಗನ್ನು ಇವರಷ್ಟು ಸಮರ್ಥವಾಗಿ ದುಡಿಸಿಕೊಂಡ ಕವಿಗಳು ತುಂಬ ವಿರಳ. ಹೀಗಾಗಿ ಕಾವ್ಯಸೌಂದರ್ಯದ ಪರಿಕರಗಳಲ್ಲಿ ಬೆಡಗೂ ಕೂಡ ಪ್ರಮುಖವಾದುದಾಗಿದೆ. ಶಿಷ್ಯಕವಿಗಳು ರಸಸಿದ್ಧಾಂತಕ್ಕೆ, ಧ್ವನಿತತ್ವಕ್ಕೆ ಪ್ರಾಮುಖ್ಯತೆ ಕೊಟ್ಟರೆ, ವಚನಕಾರರು ಕಾವ್ಯದ ರಚನೆಯನ್ನು ಭಿನ್ನವಾಗಿ ಕಟ್ಟಿಕೊಡುತ್ತಾರೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ರಸಸಿದ್ಧಾಂತ, ಧ್ವನಿಸಿದ್ಧಾಂತ, ಔಚಿತ್ಯ, ಅಲಂಕಾರ ಇವು ಮುಖ್ಯವಾದರೆ ವಚನಕಾವ್ಯ ಮೀಮಾಂಸೆಯಲ್ಲಿ ಕೈವಲ್ಯಮೀಮಾಂಸೆ, ದೇಹಮೀಮಾಂಸೆ, ಬೆಡಗು, ಶರಣಸತಿ-ಲಿಂಗಪತಿ ಪರಿಕಲ್ಪನೆ, ಬಯಲು ಮೀಮಾಂಸೆಯಂತಹ ವಿಚಾರಗಳು ತುಂಬ ಮುಖ್ಯವಾಗುತ್ತವೆ. ಹಾಗಾಗಿ ಬೆಡಗಿನ ವಚನಗಳು ತನ್ನದೇ ಆದ ವಿಶಿಷ್ಟ್ಯತೆಯನ್ನು ಹೊಂದಿವೆ.

``ಒಂದು ಹಾಳಭೂಮಿಯ ಹುಲಿಬಂದು
ಎನ್ನ ಎಳಗರುವ ಭಕ್ಷಿಸಿತಲ್ಲಾ! ಆ ಹುಲಿ ಹಾಳಿಗೆ ಹೋಗದು.
ಆ ಹುಲಿ ಎಳೆಗರುವ ಕಂಡು ಜನನಿಯಾಯಿತ್ತು. ಇದನೇನೆಂಬೆ ಗಂಗಾಪ್ರಿಯ ಕೂಡಲಸಂಗಮದೇವಾ?''
- ಗಂಗಾಬಿಕೆ (ಸ.ವ. ಸಂ.5, ವ-755)

ಗಂಗಾಬಿಕೆಯ ಈ ವಚನದಲ್ಲಿ ಬಂದಿರುವ ಬೆಡಗು ಕುತೂಹಲಕಾರಿಯಾಗಿದೆ. ಇಲ್ಲಿ ಬಂದಿರುವ ಹುಲಿ, ಅರಣ್ಯದಿಂದ ಬಂದ ಹುಲಿಯಲ್ಲ, ಅದು ಹಾಳಭೂಮಿಯ ಹುಲಿಯಾಗಿದೆ. ಇಲ್ಲಿ ಬಂದಿರುವ ಹಾಳಭೂಮಿಯಲ್ಲಿ ಬಿತ್ತಿ ಬೆಳೆಯುವುದು ಸಾಧ್ಯವಿಲ್ಲ. ಅದು ಬಂಜರಾಗಿದೆ. ಅಂತಹ ಹಾಳುಭೂಮಿಯಿಂದ ಬಂದ ಹುಲಿ ಹಾಳಿಗೆ ಅಂದರೆ ಗದ್ದೆ ತೋಟದ ಕಡೆ ಹೋಗುವಂತಹದ್ದಲ್ಲ. ಹೀಗಾಗಿ ಇಲ್ಲಿಯ ಹುಲಿ ಅಪಾಯಕಾರಿಯಾಗಿ, ಅನಿಷ್ಟವಾಗಿ ಕಾಣಿಸಿಕೊಂಡಿದೆ. ಎಳೆಗರುವನ್ನು ಭಕ್ಷಿಸಿತು ಎಂದರೆ ತನ್ನ ಮಗನನ್ನು ಸಾಯಿಸಿತೆಂಬುದೇ ಅರ್ಥವಾಗಿದೆ. ಹೀಗೆ ಎಳೆಗರುವನ್ನು ಭಕ್ತಿಸುವ ಬದಲು ಆ

ಹುಲಿ ಆ ಎಳೆಗರುವಿಗೆ ಜನನಿಯಾಗಬೇಕಿತ್ತು. "ನೆಲ ಎದ್ದು ಬಡಿದರೆ ಯಾರು ಕಾಯಬೇಕು? ಎಂಬ ಗಾದೆಮಾತು ಇಲ್ಲಿದೆ. ಕಾಯುವವನೇ ಕೊಲ್ಲುವವನಾದಾಗ ಏನು ಮಾಡಬೇಕೆಂಬ ಪ್ರಶ್ನೆಯ ಜತಗೆ ಅಸಹಾಯಕತೆ ಎದ್ದುಕಾಣುತ್ತದೆ. ತನ್ನ ಮಗು ಅಪ್ರಾಪ್ತನಿದ್ದಾಗಲೇ ತೀರಿ ಹೋದದನ್ನು ನೆನಪಿಸಿಕೊಂಡು ಗಂಗಾಬಿಕೆ ಈ ವಚನ ರಚಿಸಿರಬಹುದೆನಿಸುತ್ತದೆ.

``ಬಯಲ ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ
ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ
ಮುಂದೆ ಸರೋವರವ ಕಂಡೆ.
ಆ ಸರೋವರದ ಒಳಹೊಕ್ಕು ನೋಡಲು ಮುಂದೆ ಗುಡ್ಡಬೆಟ್ಟಗಳು, ಹೊಗಬಾರದು.
ಆನೆಗಳು ಅಡ್ಡಲಾದವು. ಕೋಡಗ ಮುಂದುವರಿದವು.
ನಾಯಿಗಳಟ್ಟಿಕೊಂಡು ಬಂದವು, ಇರುವೆ ಕಟ್ಟಿಕೊಂಡು ಬಿಡವು...''
- ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ (ಸ.ವ. ಸಂ. 5 ವ-1310)

ಹಡಪದ ಲಿಂಗಮ್ಮನ ಈ ವಚನ ದೀರ್ಘವಾದುದಾಗಿದೆ. ಇಲ್ಲಿ ಬಳಕೆಯಾಗಿರುವ ಬೆಡಗಿನ ಭಾಷೆ ಕುತೂಹಲಕಾರಿಯಾಗಿದೆ. ಬಯಲೇ ಇಲ್ಲಿ ದೇಹವಾಗಿದೆ. ಅಂತಹ ಬಯಲ ದೇಹದಲ್ಲಿ ತೊಲಗದ ಕಂಬ ಕಾಣಿಸಿಕೊಂಡಿದೆ. ತೊಲಗದ ಎಂದರೆ ಕಾಣಿಸದ ಎಂಬ ಅರ್ಥವಿದೆ. ಆದರೆ ಕಾಣಿಸದ ಕಂಬವೇ ಕಾಣಿಸಿಕೊಂಡಿದೆ. ಅಂತಹ ಕಂಬವನ್ನು ಹಿಡಿದು ಮುಂದೆ ಹೋದರೆ ಸರೋವರ ಕಾಣಿಸುತ್ತದೆ. ಆ ಸರೋವರದ ಒಳಗೆ ಹೋಗಿ ನೋಡಲು ಪರ್ವತಗಳಿವೆ, ಬೆಟ್ಟಗಳಿವೆ, ಅಲ್ಲಿ ಹೋಗಲಾಗದಂತಹ ಸ್ಥಿತಿಯಿದೆ. ಆನೆಗಳು ಫೀಳಿಡುತ್ತವೆ, ಕೋಡಗ ಮೇಲೇರಿ ಬರುತ್ತವೆ. ನಾಯಿಗಳಟ್ಟಿಸಿಕೊಂಡು ಬರುತ್ತವೆ, ಇರುವೆ ಸಾಲುಗಟ್ಟಿ ಬಂದು ಕಚ್ಚುತ್ತವೆ. ವಚನದ ಉತ್ತರಾರ್ಧದಲ್ಲಿ ಲಿಂಗಮ್ಮ ಇದಕ್ಕೆ ಪರಿಹಾರವನ್ನು ಸೂಚಿಸಿದ್ದಾಳೆ. ಈ ಭಯದಿಂದ ಕಂಗಾಲಾದಾಗ ತನ್ನೊಳಗಡೆ ಮನಸ್ಸೆಂಬ ಅರಸನಿದ್ದಾನೆ. ಆ ಅರಸನಸಹಾಯದಿಂದ ಸರೋವರದಲ್ಲಿಯ ಪರ್ವತ, ಬೆಟ್ಟಗಳನ್ನು ದಾಟಿ ಅಷ್ಟಮದವೆಂಬ ಆನೆಯನ್ನು ಕಟ್ಟಿಹಾಕಿ, ಕೋಡಗನ ಕೊರಳ ಮುರಿದು, ನಾಯಿಗಳನ್ನು ಕೊಂದು, ಇರುವೆ ಗೂಡಿಗೆ ಬೆಂಕಿ ಹಚ್ಚಿದಾಗ ಇಕ್ಕಟ್ಟಿನ ಬಾಗಿಲವೊಂದು ಕಾಣಿಸುತ್ತದೆ. ಆ ಬಾಗಿಲಿನಲ್ಲಿ ಹೋಗಿ ಹಿತ್ತಲ ಬಾಗಿಲಿನ ಕದವ ತೆರೆದರೆ ಬಟ್ಟಬಯಲು ಕಾಣಿಸುತ್ತದೆ. ಆ ಬಟ್ಟ ಬಯಲಲ್ಲಿ ನಿಂತಾಗ ತಾನೆತ್ತ ಹೋದೆನೆಂದರಿಯೆನಯ್ಯಾ ಎಂದು ಹೇಳಿದ್ದಾಳೆ. ಇಲ್ಲಿ ಅಸಾಧ್ಯವಾದದ್ದು, ಸಾಧ್ಯವಾಗುತ್ತದೆ; ಅದೃಶ್ಯವಾದದ್ದು ಕಾಣಿಸಿಕೊಳ್ಳುತ್ತದೆ. ಮನಸ್ಸೆಂಬ ಅರಸನನ್ನು ಗೆದ್ದಾಗ ಇದೆಲ್ಲ ಸಾಧ್ಯವಾಗುತ್ತದೆ. ಆದುದರಿಂದ ನಮ್ಮ ಒಳಿತು- ಕೆಡಕುಗಳಿಗೆ, ಸುಖ-ದುಃಖಗಳಿಗೆ ಈ ಮನಸ್ಸೇ ಕಾರಣವಾಗಿದೆಯೆಂಬ ಸತ್ಯವನ್ನು ಈ ಬೆಡಗಿನ ವಚನ ಹೇಳುತ್ತದೆ.

"ಅತ್ತೆ ಮಾಯೆ, ಮಾವ ಸಂಸಾರಿ,
ಮೂವರು ಮೈದುನರು ಹುಲಿಯಂತವದಿರು,
ನಾಲ್ವರು ನಗೆವೆಣ್ಣು ಕೇಳು ಕೆಳದಿ. ಐವರು ಭಾವದಿರನೊಯ್ವ ದೈವವಿಲ್ಲ ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ, ಹೇಳುವಡೆ ಏಳು ಪ್ರಜೆತೊತ್ತಿರ ಕಾಹು ಕರ್ಮವೆಂಬ ಗಂಡನ ಬಾಯ ಟೊಣೆದು ಹಾದರನಾಡುವೆನು ಹರನ ಕೊಡೆ. ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ ಕರಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನೆಂಬ ಸಜ್ಜನ ಗಂಡನ ಮಾಡಿಕೊಂಡೆ.

- ಅಕ್ಕಮಹಾದೇವಿ (ಸ.ವ. ಸಂ. 5, ವ-17)

ಲೌಕಿಕ ಸಂಸಾರದ ಪ್ರತಿಮೆಯ ಮೂಲಕ, ಆಧ್ಯಾತ್ಮಿಕ ಸಂಸಾರದ ಮಹತ್ವವನ್ನು ಕಂಡುಕೊಳ್ಳುವ ಪ್ರಯತ್ನ ಇಲ್ಲಿದೆ. ಅಕ್ಕಮಹಾದೇವಿ ಬೆಡಗಿನ ಭಾಷೆಯಲ್ಲಿ ತನ್ನಂತರಂಗದ ತಳಮಳವನ್ನಿಲ್ಲಿ ಹೇಳಿದ್ದಾಳೆ. ಜಾತಿಯ ಸಂಕರವನ್ನು ನೋಡಿದ್ದೇವೆ. ಆದರೆ ಇಲ್ಲಿ ಪ್ರೀತಿಯ ಸಂಕರವಿದೆ. ಲೌಕಿಕ ಗಂಡನನ್ನು ಬಿಟ್ಟು, ಇಹದ ಸಂಸಾರವನ್ನು ತೊರೆದು ಅಲೌಕಿಕ ಗಂಡನನ್ನು ಹುಡುಕಿಕೊಂಡು ಆಧ್ಯಾತ್ಮಿಕ ಸಂಸಾರವನ್ನು ಮಾಡುವ ಪ್ರಯತ್ನ ಇಲ್ಲಿದೆ.

ಲೋಕದ ಸಂಸಾರದಲ್ಲಿ ಬರುವ ಎಲ್ಲ ಸಂಬಂಧಿಕರೂ ಇಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತೆ ಮಾಯೆಯಾಗಿದ್ದರೆ, ಮಾವ ಭವಿಯಾಗಿದ್ದಾನೆ. ಮಲತ್ರಯಗಳೆಂಬ ಮೂವರು ಮೈದುನರು ಹುಲಿಯಂತೆ ಭಯಂಕರವಾಗಿದ್ದಾರೆ. ಮನ, ಬುದ್ಧಿ, ಚಿತ್ತ, ಅಹಂಕಾರವೆಂಬ ನಾಲ್ವರು ನೆಗೆಣ್ಣೆಯರಿದ್ದಾರೆ. ಪಂಚೇಂದ್ರಿಯಗಳೆಂಬ ಐದು ಭಾವಂದಿರರಿದ್ದಾರೆ. ಅರಿಷಡ್‍ವರ್ಗಗಳೆಂಬ ಆರು ಅತ್ತಿಗೆಯರಿದ್ದಾರೆ. ಇಂತಹ ಲೌಕಿಕ ಸಂಸಾರದಿಂದ ಬಿಡುಗಡೆಗೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಕರ್ಮವೆಂಬ ಗಂಡನಿಗೆ ಮೋಸಮಾಡಿ ಹರನಕೂಡ ಹಾದರವ ಮಾಡುವೆನು - ಎಂದು ಹೇಳುವಲ್ಲಿ

ಪ್ರೀತಿಸಂಕರದ ವಿಷಯ ಪ್ರಸ್ತಾಪವಾಗಿದೆ. ಚೆನ್ನಮಲ್ಲಿಕಾರ್ಜುನನೆಂಬ ಸಜ್ಜನ ಗಂಡನ ಮಾಡಿಕೊಂಡೆ - ಎಂಬಲ್ಲಿ ಆಧ್ಯಾತ್ಮದ, ಅಲೌಕಿಕದ ಮಹತ್ವವಡಗಿದೆ. ಮನುಷ್ಯನಲ್ಲಿರುವ ಅಂಗಾಂಗ, ಗುಣಸ್ವಭಾವಗಳನ್ನು ಲೌಕಿಕ ಸಂಸಾರಕ್ಕೆ ಹೋಲಿಸಿ, ಆ ಸಂಸಾರವನ್ನು ಅಲೌಕಿಕ ಸಂಸಾರವನ್ನಾಗಿ ಕಟ್ಟಿಕೊಂಡು ಸಜ್ಜನ ಗಂಡನನ್ನು ಮಾಡಿಕೊಳ್ಳುವ ಕಾತುರವಿದೆ. "ಸಂಸಾರದ" ಪ್ರತಿಮೆಯ ಮೂಲಕ ಬಿಚ್ಚಿಕೊಳ್ಳುವ ಈ ವಚನ ಇನ್ನೂ ಅನೇಕ ಅರ್ಥಗಳನ್ನು ತನ್ನೊಡಲೊಳಗಿಟ್ಟುಕೊಂಡಿದೆ.

"ಎಲ್ಲರ ಹೆಂಡಿರು ತೊಳಸಿಕ್ಕುವರು ಎನ್ನ ಗಂಡಂಗೆ ತೊಳಸುವುದಿಲ್ಲ. ಎಲ್ಲರ ಗಂಡಂದಿರು ಬಸಿವರು
ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು
ಎನ್ನ ಗಂಡಂಗೆ ಅಂಡದ ಬೀಜವಿಲ್ಲ ಎಲ್ಲರ ಗಂಡಂದಿರು ಮೇಲೆ
ಎನ್ನ ಗಂಡ ಕೆಳಗೆ, ನಾ ಮೇಲೆ
ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರಾ"
- ಕದಿರ ರೆಮ್ಮವ್ವೆ (ಸ. ವ. ಸಂ. 5, ವ-746)

ಕದಿರ ರೆಮ್ಮವ್ವೆ ನೇಕಾರಿಕೆಯ ಕಾಯಕದವಳು. ತನ್ನ ವೃತ್ತಿಪ್ರತಿಮೆಯ ಮೂಲಕ ಅನೇಕ ವಚನಗಳನ್ನು ರಚಿಸಿದ್ದಾಳೆ. ಇಲ್ಲಿ ಅಲೌಕಿಕ ಸಂಸಾರದ ಬಗೆಗೆ ಮಾತನಾಡಿದ್ದಾಳೆ.

ಲೌಕಿಕ ಗಂಡ ಮತ್ತು ಅಲೌಕಿಕದ ಗಂಡ ಇವರಲ್ಲಿರುವ ವ್ಯತ್ಯಾಸವನ್ನಿಲ್ಲಿ ಗುರುತಿಸಲಾಗಿದೆ. ಎಲ್ಲ ಹೆಂಡಿರಂತೆ ನಾನಿಲ್ಲ, ಇತರ ಲೌಕಿಕ ಗಂಡಂದಿರಂತೆ ತನ್ನ ಗಂಡನಿಲ್ಲವೆಂದು ಹೇಳಿರುವ ರೆಮ್ಮವ್ವೆ ಇಲ್ಲಿ ಲೈಂಗಿಕ ಪ್ರತಿಮೆಗಳ ಮೂಲಕ ಪಾರಮಾರ್ಥಿಕ ಪ್ರಾಮುಖ್ಯತೆಯನ್ನು ತಿಳಿಸಿದ್ದಾಳೆ. ಬೆಡಗಿನ ವಚನಗಳಲ್ಲಿ ಬರುವ ಪದಗಳನ್ನು ಶಬ್ದಸಹ ಅರ್ಥೈಸುವುದು ಸೂಕ್ತವಲ್ಲ. ತೊಳಸು ಎಂದರೆ ಕನ್ನಡ ನಿಘಂಟುವಿನಲ್ಲಿ ತುಳಸಿಯೆಂಬ ಅರ್ಥವಿದೆ. ಆದರೆ ಇಲ್ಲಿ ತುಳಸಿಯ ಪ್ರಸ್ತಾಪ ಬರುವುದಿಲ್ಲ. ತೊಳಸುವುದು, ಬಸಿವುದು, ಅಂಡದ ಬೀಜ, ಎಲ್ಲರ ಗಂಡರು ಮೇಲೆ ಎನ್ನ ಗಂಡ ಕೆಳಗೆ ನಾ ಮೇಲೆ, ಎಂಬಂತಹ ಪದಗಳನ್ನು ಪ್ರತ್ಯೇಕಿಸಿ ಹೇಳಿದರೆ ಬೇರೆ ಬೇರೆ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಈ ವಚನದ ಇಡಿಯಾದ ಗ್ರಹಿಕೆಯೆಂದರೆ, ಲೌಕಿಕ ಗಂಡ ಮತ್ತು ಅಲೌಕಿಕ ಗಂಡರ ನಡುವಿನ ವ್ಯತ್ಯಾಸವನ್ನು ಹೇಳುವದಾಗಿದೆ. ಅಕ್ಕಮಹಾದೇವಿಯಂತೆ ಕದಿರರೆಮ್ಮವ್ವೆ ಕೂಡ ಅಲೌಕಿಕ ಗಂಡನನ್ನೇ ಇಷ್ಟಪಟ್ಟಿದ್ದಾಳೆಂಬ ಸಂಗತಿ ಈ ವಚನದಿಂದ ಸ್ಪಷ್ಟವಾಗುತ್ತದೆ.

"ತನುವೆಂಬ ಹುತ್ತದಲ್ಲಿ ಮನೆವೆಂಬ ಸರ್ಪ ಹೆಡೆಯನುಡಿಗಿಕೊಂಡಿರಲು ಜ್ಞಾನಶಕ್ತಿ ಬಂದು ಎಬ್ಬಿಸಲು,
ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊಧ್ರ್ವಕ್ಕೇರಲು,
ಅಷ್ಟಮದವೆಲ್ಲ ಹಿಟ್ಟುಗಟ್ಟಿದವು, ಕರಣಂಗಳೆಲ್ಲ ಉರಿದು ಹೋದವು ಇದ್ದ ಶಕ್ತಿಯನೆ ಕಂಡು, ಮನನಿಶ್ಚಯವಾದುದನೆ ನೋಡಿ
ಪಶ್ಚಿಮದ ಕದವ ತೆಗೆದು, ಬಟ್ಟಬಯಲ ಬೆಳಗಿನೊಳ
ಓಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ"
- ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ (ಸ.ವ.ಸಂ.5, ವ-1306)

ಈ ವಚನದಲ್ಲಿ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ಬೆಡಗಿನ ಭಾಷೆಯಲ್ಲಿ ಮಹತ್ವದ ಸಂಗತಿಯನ್ನು ಹೇಳಿದ್ದಾಳೆ. ಹುತ್ತ, ಹುತ್ತದಲ್ಲಿ ಹಾವು, ಅದು ಹೆಡೆ ಎತ್ತುವುದು, ಆಡುವುದು ಇವೆಲ್ಲ ಹುತ್ತವನ್ನು ನೋಡಿದಾಗ ಕಂಡುಬರುವ ದೃಶ್ಯಗಳು. ಆದರೆ ಇಲ್ಲಿಯ ಹುತ್ತ ಮತ್ತು ಹಾವು ಬೇರೆಯವೇ ಆಗಿವೆ. ಇಲ್ಲಿ ತನುವೇ ಹುತ್ತ, ಮನವೇ ಸರ್ಪ. ಈ ಮನವೆಂಬ ಸರ್ಪ ಚಂಚಲವಾಗಿದೆ, ನೈಜ ಹಾವಿಗಿಂತ ಅಪಾಯಕಾರಿಯಾಗಿದೆ.

ಇಂತಹ ಮನವೆಂಬ ಹಾವನ್ನು ಎದುರಿಸಬೇಕಾದರೆ ಜ್ಞಾನಶಕ್ತಿಯೆಂಬ ಆಯುಧ ಬೇಕಾಗುತ್ತದೆ. ಈ ಮನಸ್ಸೆಂಬ ಹಾವು ಹೆಡೆಯೆತ್ತಿದಾಗ ಅಷ್ಟಮದಗಳೆಲ್ಲ ಹೊರಟುಹೋಗುತ್ತವೆ. ಕರಣಂಗಳೆಲ್ಲ ಉರಿದು ಹೋಗುತ್ತವೆ. ಹೀಗೆ ಮನನಿಶ್ಚಯವಾದಾಗ ಹೊಸ ಶಕ್ತಿಯೊಂದು ಕಾಣಿಸಿಕೊಳ್ಳುತ್ತದೆಂದು ಲಿಂಗಮ್ಮ ಈ ವಚನದಲ್ಲಿ ತಿಳಿಸಿದ್ದಾಳೆ.

``ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ
ಹಿರಿಯರಿಲ್ಲದಂದು ಹುಟ್ಟಿದ ಗಂಡನಾತ ನಮ್ಮಯ್ಯ
ಮಾನುಷರಿಲ್ಲದುದನರಿದು
ಆ ಮಾನುಷರ ಇರವೆ ಪ್ರಸಾದವಾಯಿತ್ತು. ಆ ಪ್ರಸಾದವ ತಿಳಿಯದ ಮುನ್ನ ಹೆಣ್ಣುತನದ ರೂಪಳಿಯಿತ್ತೆನಗೆ
ಆ ಹೆಣ್ಣುತನದ ರೂಪನಳಿದು
ನಿರೂಪಿಯಾದೆನಯ್ಯಾ ಸಂಗಯ್ಯ.''

- ನೀಲಮ್ಮ (ಸ.ವ. ಸಂ.5, ವ-850)

ಬಸವಣ್ಣನ ವಿಚಾರ ಪತ್ನಿ ನೀಲಾಂಬಿಕೆ ಈ ವಚನದಲ್ಲಿ ಶರಣಸತಿ-ಲಿಂಗಪತಿಯೆಂಬ ಸತಿ-ಪತಿಭಾವದ ವಿಚಾರವನ್ನು ಹೇಳಿದ್ದಾಳೆ. ತನ್ನ ಗಂಡ ಆರಾಧ್ಯರಿಲ್ಲದಂದು, ಹಿರಿಯರಿಲ್ಲದಂದು ಹುಟ್ಟಿದ್ದಾನೆಂದು ಪ್ರಾರಂಭದಲ್ಲಿ ಹೇಳಿದ್ದಾಳೆ. ಹೀಗೆ ಯಾರೂ ಇಲ್ಲದಂದು ಹುಟ್ಟಿದವನೇ ಆದಿಶಿವ, ಆದಿಲಿಂಗ. ಅದೇ ತನ್ನ ಪತಿ, ತಾನು ಆತನ ಸತಿ. ಈ ಜಗದ ಜೀವಿಗಳೆಲ್ಲರೂ. ಸತಿಯಾಗುವ ಅವನೊಬ್ಬನೇ ಪತಿಯಾಗುವ ಸತಿ- ಪತಿ ಭಾವದ ಚಿಂತನೆ ಈ ವಚನದಲ್ಲಿದೆ. ಈ ಆದಿಶಿವನ ಕೈ ಹಿಡಿದಾಗ ಹೆಣ್ಣುತನದ ರೂಪಳಿಯೆತ್ತನಗೆಂದು ಹೇಳಿದ್ದಾಳೆ. ಸತಿ ಸತಿಯಾಗಿ ಮಾತ್ರ ಉಳಿಯುವುದಿಲ್ಲ, ಸಾಧನೆಯಿಂದ ಆಕೆಯೂ ಪತಿಯಾಗುತ್ತಾಳೆ. ಆಕೆಯೇ ಪರಶಿವತತ್ವವಾಗುತ್ತಾಳೆ. ಆಗ ಹೆಣ್ಣುತನದ ರೂಪ ಅಳಿದು ಹೋಗುತ್ತದೆಂದು ಇಲ್ಲಿ ನೀಲಾಂಬಿಕೆ ವಿವರಿಸಿದ್ದಾಳೆ. ಗುರು-ಶಿಷ್ಯ ಸಮಾನರಾದಂತೆ ಸತಿ-ಪತಿಯರು ಸಮಾನರಾಗಲು ಸಾಧ್ಯ, ಹರ-ನರರು ಸಮಾನರಾಗಲು ಸಾಧ್ಯವೆಂಬ ತತ್ವ ಈ ವಚನದಲ್ಲಡಗಿದೆ.

ವಚನಕಾರ್ತಿಯರಲ್ಲಿ ಹಡಪದಪ್ಪಣ್ಣನ ಪುಣ್ಯಸ್ತ್ರೀ ಲಿಂಗಮ್ಮ ಹೆಚ್ಚು ಬೆಡಗಿನ ವಚನಗಳನ್ನು ರಚಿಸಿದ್ದಾಳೆ. ಇನ್ನೆರಡು ವಚನಗಳನ್ನಿಲ್ಲಿ ನೋಡಬಹುದಾಗಿದೆ.

"ಒಂದು ಊರಿಗೆ ಒಂಭತ್ತು ಬಾಗಿಲು
ಆ ಊರಿಗೆ ಐವರು ಕಾವಲು, ಆರು ಮಂದಿ ಪ್ರಧಾನಿಗಳು ಇಪ್ಪತ್ತೈದು ಮಂದಿ ಪರಿವಾರ.
ಅವರೊಳಗೆ ತೊಟ್ಟನೆ ತೊಳಲಿ ಬಳಲಲಾರದೆ
ಎಚ್ಚತ್ತು ನಿಶ್ಚಿಂತನಾದ ಅರಸನ ಕಂಡೆ ಆ ಅರಸನ ಗೊತ್ತುವಿಡಿದು
ಒಂಭತ್ತು ಬಾಗಿಲಿಗೆ ಲಿಂಗಸ್ಥಾಪ್ಯವ ಮಾಡಿ, ಒಂದು ಬಾಗಿಲಲ್ಲಿ ನಿಂದು ಕಾವಲವನೆ ಕಟ್ಟಿಸಿ, ಪ್ರಧಾನಿಗಳನೆ ಮೆಟ್ಟಿಸಿ

ಪರಿವಾರವನೆ ಸುಟ್ಟು, ಅರಸನ ಮುಟ್ಟಿ ಹಿಡಿದು ಓಲೈಸಲು
ಸಪ್ತಧಾತು ಷರ್ಡ್‍ವರ್ಗವನೆ ಕಂಡು ಕತ್ತಲೆಯ ಕದಳಿಯ ದಾಂಟಿ,
ನಿಶ್ಚಿಂತದಲ್ಲಿ ಬಟ್ಟಬರಿಯ ಬೆಳಗಿನೊಳಗೋಲಾಡಿ
ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ, ಚೆನ್ನಬಸವಣ್ಣಾ"

- ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ (ಸ.ವ. ಸಂ.5, ವ-1308)

ಒಂದು ಊರೇ ಇಲ್ಲಿ ಪ್ರತಿಮೆಯಾಗಿ ಬೆಳೆದು ನಿಂತಿದೆ. ಈ ಊರು ಬೇರಾವುದೂ ಅಲ್ಲ, ಅದು ಮನುಷ್ಯನ ದೇಹವೇ ಆಗಿದೆ. ಆ ಊರಿಗೆ ಒಂಭತ್ತು ಬಾಗಿಲುಗಳೆಂದರೆ, ಅವು ಶರೀರದ ನವದ್ವಾರಗಳಾಗಿವೆ. ಈ ದೇಹವು ಒಂಭತ್ತು ತೂತಿನ ಕೊಡವೆಂದು ತತ್ವಪದಕಾರರು ಹೇಳಿದ್ದಾರೆ. ಒಟ್ಟು ಇಲ್ಲಿ ಇಪ್ಪತ್ತೆ ೈದು ಮಂದಿಯ ಪರಿವಾರವಿದೆ. ಅಂದರೆ ನವದ್ವಾರಗಳು, ಐವರು ಕಾವಲಿನವರು, ಕಾಮ-ಕ್ರೋಧ-ಲೋಭ-ಮೋಹ- ಮದ-ಮತ್ಸರಗಳೆಂಬ ಆರು ಪ್ರಧಾನಿಗಳು, ಐದು ಕರ್ಮೇಂದ್ರಿಯಗಳು ಹೀಗೆ ಒಟ್ಟು ಇಪ್ಪತ್ತೈದು ಮಂದಿಯ ಪರಿವಾರ ಈ ಊರಲ್ಲಿದೆ. ಅಂದರೆ ಇಪತ್ತೆ ೈದು ಸಮಸ್ಯೆಗಳು ಈ ಶರೀರದಲ್ಲಿವೆ. ಈ ಶರೀರದಲ್ಲಿ ಅಥವಾ ಈ ಊರಲ್ಲಿ ಒಬ್ಬ ಅರಸನಿದ್ದಾನೆ. ಆ ಅರಸ ಬೇರೆ ಯಾರೂ ಆಗಿರದೆ, ಆತ ಜೀವಾತ್ಮನಾಗಿದ್ದಾನೆ. ಈ ಜೀವಾತ್ಮನನ್ನು ಜಾಗೃತಗೊಳಿಸಿ ಒಂಭತ್ತು ಬಾಗಿಲಿಗೆ ಲಿಂಗಸ್ಥಾಪಿಸಿದ ನಂತರ, ಎಲ್ಲ ಸಮಸ್ಯೆಗಳು ಬಗೆಹರಿದವೆಂದು ಲಿಂಗಮ್ಮ ಹೇಳಿದ್ದಾಳೆ. ಕತ್ತಲೆಯ ಕದಳಿಯನ್ನು ದಾಟುವುದು ಸುಲಭದ ಕೆಲಸವಲ್ಲ. ಅದು ಲಿಂಗಸ್ಥಾಪನೆಯ ಮೂಲಕ ಅರಿವನ್ನು ಗುರುವನ್ನಾಗಿ ಮಾಡಿಕೊಳ್ಳುವುದರ ಮೂಲಕ, ಮನದ ಮೈಲಿಗೆಯನ್ನು ತೊಳೆಯುವುದರ ಮೂಲಕ ಸಾಧ್ಯವಾಗುತ್ತದೆ. ಆಗ ಸುಖಿಯಾಗಲು ಸಾಧ್ಯವಾಗುತ್ತದೆ. ಇದೇ ವಿಷಯದ ಮುಂದುವರಿದ ಭಾಗವಾಗಿ ಈ ಕೆಳಗಿನ ವಚನವಿದೆ.

``ನಾನೊಂದು ಹಾಳೂರಿಗೆ ಹೋಗುತ್ತಿರಲು, ಆ ಹಾಳೂರ ಹೊಕ್ಕಡೆ
ಅಲ್ಲಿ ನಾಯಿಗಳು ಅಟ್ಟಿಕೊಂಡು ಬಂದವು, ಹುಲಿಕರಡಿ ಅಡ್ಡಲಾದವು
ಇವರ ಕಂಡು ನಾ ಹೆದರಿಕೊಂಡು
ನನ್ನ ಕೈಗೊಂದು ಕಲ್ಲ ತಕ್ಕೊಂಡು ನೋಡುತ್ತಾ ಬರುತ್ತಿರಲು ಆ ನಾಯಿಗಳು ಓಡಿ ಹೋದವು.
ಹುಲಿಕರಡಿಗಳು ಅಲ್ಲಿಯೇ ಬಯಲಾದವು. ಆ ಊರು ನಿರ್ಮಲವಾಯಿತ್ತು. ''

- ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ (ಸ.ವ.ಸಂ.5, ವ-1313)

ಈ ವಚನದಲ್ಲಿ ಮತ್ತೆ ಅದೇ ಊರು ಕಾಣಿಸಿಕೊಂಡಿದೆ. ಅದು ಸುಂದರವಾದ ಊರಾಗಿರದೆ ಹಾಳೂರಾಗಿದೆ. ಅಲ್ಲಿ ಮಲತ್ರಯಗಳೆಂಬ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ. ಕಾಮ-ಕ್ರೋಧ-ಲೋಭ-ಮೋಹ-ಮತ-ಮತ್ಸರಗಳೆಂಬಹುಲಿ-ಕರಡಿಗಳು ಅಡ್ಡ ನಿಲ್ಲುತ್ತವೆ. ಈ ಹಾಳೂರು ಬೇರೆ ಯಾವುದೇ ಆಗಿರದೆ, ನಮ್ಮೊಳಗಿನ ವೈರಿಗಳಿಂದ ಹಾಳಾದ ಶರೀರವೇ ಆಗಿದೆ. ಮೊದಲಿನ ವಚನದ ಭಾವವೇ ಇಲ್ಲಿ ಮುಂದುವರೆದಿದೆ. ಈ ನಾಯಿ, ಹುಲಿ, ಕರಡಿಗಳೆಂಬ ಒಳಗಿನ ವೈರಿಗಳಿಗೆ ಕಲ್ಲು ತೆಗೆದುಕೊಂಡು ಹೊಡೆದಾಗ ಅವು ಓಡಿಹೋಗುತ್ತವೆ. ನಮ್ಮ ಮನ ಜಾಗೃತಗೊಂಡು, ನಮ್ಮಲ್ಲಿ ಅರಿವು ಮೂಡಿದಾಗ ಈ ಒಳವೈರಿಗಳು ಓಡಿಹೋಗುತ್ತವೆಂದು ಹೇಳಿದ್ದಾಳೆ. ಆಗ ಆ ಊರೆಂಬ ಶರೀರ ನಿರ್ಮಲವಾಗಿ ಕಾಣುತ್ತದೆಂದು ತಿಳಿಸಿದ್ದಾಳೆ. ನಿರ್ಮಲವಾದ ಊರ ಹೊಕ್ಕು ನೋಡಲು, ಆ ಊರನಾಳುವ ಅರಸ, ಊರಿನೊಡನೆ ಕೂಡಿಕೊಂಡು ಒಂದಾಗುತ್ತಾನೆ. ಹೀಗೆ ದ್ವೈತವಳಿದು ಅದ್ವೈತ ಏರ್ಪಟ್ಟಾಗ, ದ್ವಂದ್ವವಳಿದು ಮನುಷ್ಯ ಸುಖಿಯಾಗಿ ಕಾಣಿಸುತ್ತಾನೆಂದು ಲಿಂಗಮ್ಮ ಹೇಳಿದ್ದಾಳೆ. ಹೀಗೆ ಶರಣೆಯರ ಅನೇಕ ಬೆಡಗಿನ ವಚನಗಳಿವೆ. ಅವುಗಳ ಬಗೆಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.

ಈ ಅಂಕಣದ ಹಿಂದಿನ ಬರೆಹಗಳು:
ವಿಡಂಬನೆ
ಶರಣರ ಸಮಕಾಲೀನ ವಚನಕಾರ್ತಿ ‘ಸೂಳೆ ಸಂಕವ್ವೆ’
ಜಾತ್ಯಾತೀತ ಮನೋಭಾವ
ಗರತಿಯರ ಹಾಡಿನಲ್ಲೂ ನಲಿದಾಡುವ ಶಿವಶರಣೆಯರು

ಲೌಕಿಕದ ಮೂಲಕವೇ ಅಲೌಕಿಕದ ಹಾದಿ
ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ ಮತ್ತು ಕದಿರ ರೆಮ್ಮವ್ವೆ
ರಾಜವೈಭವ ತೊರೆದು ಜಾತಿಭೇದದ ವಿರುದ್ಧ ಮಾತನಾಡಿದ ಬೊಂತಾದೇವಿ
ಲೌಕಿಕದ ಮೂಲಕವೇ ಆಧ್ಯಾತ್ಮವನ್ನು ಹೇಳಿರುವ ಗೊಗ್ಗವ್ವೆ
ಶರಣಧರ್ಮ ರಕ್ಷಣೆಗೆ ನಿಂತಿದ್ದ ಗಂಗಾಂಬಿಕೆ
ಮಹತ್ವದ ವಚನಕಾರ್ತಿ ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
ಶಿವಶರಣೆ ಅಕ್ಕನಾಗಮ್ಮ
ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಶಿವಶರಣೆ ಸತ್ಯಕ್ಕ
ಮುಕ್ತಾಯಕ್ಕ
ಮೋಳಿಗೆ ಮಹಾದೇವಿ
ಹಡಪದಪ್ಪಣ್ಣಗಳ ಪುಣ್ಯಸ್ತ್ರಿ ಲಿಂಗಮ್ಮ

ಶಿವಶರಣೆ ಅಕ್ಕಮ್ಮ
ನೀಲಾಂಬಿಕೆ
ಅಕ್ಕಮಹಾದೇವಿ
ಚರಿತ್ರೆ ಅಂದು-ಇಂದು

MORE NEWS

ಬೇಲಿಯ ಗೂಟದ ಮೇಲೊಂದು ಚಿಟ್ಟೆಃ ಅನುದಿನದ ದಂದುಗದೊಂದಿಗೆ ಅನುಸಂಧಾನ

31-12-1899 ಬೆಂಗಳೂರು

"ಲೋಕದ ವಾಸ್ತವವಗಳ ಮುಖವಾಡಗಳೊಂದಿಗೆ ಮುಖಾಮುಖಿಯಾಗುವ ಇವರ ಕವಿತೆಗಳು ದೈನಂದಿನ ಬದುಕಿನ ವಿನ್ಯಾಸವನ್ನೇ ಕಾವ್ಯವನ್ನ...

ಚಕ್ರಾಸನ ಮತ್ತು ಭುಜಂಗಾಸನ

26-03-2024 ಬೆಂಗಳೂರು

"ವ್ಯಕ್ತಿಯು ‘ಚಕ್ರಾಸನ’ ಮಾಡುವಾಗ ಮೊದಲು ಬೆನ್ನಿನ ಮೇಲೆ ಮಲಗಬೇಕು. ಇದು ವ್ಯಕ್ತಿಯನ್ನು ಶಕ್ತಿಯುತವ...

ಹಿಂದಿನ ನಿಲ್ದಾಣದಲ್ಲಿ...

19-03-2024 ಬೆಂಗಳೂರು

'ಪ್ರಯಾಣದ ಭಾಗವಾಗಿ ನಮ್ಮೊಂದಿಗಿದ್ದು ನೆನಪುಗಳ ಬುತ್ತಿ ಕಟ್ಟಿಕೊಡುವ ಈ "ಹಿಂದಿನ ನಿಲ್ದಾಣಗಳೇ" ಬದುಕಲು...