ಬೆಳಗಾವಿ ಗಡಿ ಹೋರಾಟದಲ್ಲಿ ಶಿವರಾಮು ಕಾಡನಕುಪ್ಪೆಯವರದು ಮುಖ್ಯ ಪಾತ್ರ -  ಪ.ಮಲ್ಲೇಶ್ 

Date: 27-11-2022

Location: ಬೆಂಗಳೂರು


'ಸುಪ್ರೀಂಕೋರ್ಟ್‌ನಲ್ಲಿ ಮತ್ತೊಮ್ಮೆ ಬೆಳಗಾವಿ ಗಡಿ ವಿವಾದ ವಿಚಾರಣೆಗೆ ಬಂದಿದ್ದು, ಬೆಳಗಾವಿ, ನಿಪ್ಪಾಣಿ ಸೇರಿದಂತೆ ಕೆಲ ಪ್ರದೇಶಗಳು ಕರ್ನಾಟಕಕ್ಕೆ ಸೇರಿದವು ಎಂಬ ಗಟ್ಟಿ ಧ್ವನಿಯನ್ನು ಈಗ ಮೊಳಗಿಸಬೇಕಿದೆ' ಎಂದು ಹೋರಾಟಗಾರ ಪ.ಮಲ್ಲೇಶ್ ಸಲಹೆ ನೀಡಿದರು.

ಅವರು ಸಂವಹನ ಪ್ರಕಾಶನ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ವಿಜಯನಗರದ ಕಸಾಪ ಭವನದಲ್ಲಿ ಭಾನುವಾರ ನಡೆದ ಶಿವರಾಮು ಕಾಡನಕುಪ್ಪೆ ಅವರ ಸಂಸ್ಮರಣ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ರಾಜ್ಯಗಳು ರಚನೆಯಾಗಿವೆ. ಆದರೆ, ಗಡಿ ವಿವಾದವನ್ನು ಜೀವಂತವಾಗಿ ಇಡುವ ಪ್ರಯತ್ನ ನಡೆಯುತ್ತಿದೆ. ಬೆಳಗಾವಿ ಗಡಿ ಹೋರಾಟದ ಮುಂಚೂಣಿಯಲ್ಲಿ ಕಾಡನಕುಪ್ಪೆಯೂ ಇದ್ದರು. ಈಗ ಅನೇಕ ಸಮಸ್ಯೆಗಳು ನಮ್ಮ ಮನೆ ಬಾಗಿಲು ಬಡಿಯುತ್ತಿವೆ. ನಮ್ಮ ಜನ, ನೆಲ, ಭಾಷೆಗೆ ಧಕ್ಕೆ ಉಂಟಾಗುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋರಾಟವನ್ನು ತೀವ್ರಗೊಳಿಸಬೇಕು. ಬೆಳಗಾವಿ ಪರ ಧ್ವನಿ ಎತ್ತುವ ಮೂಲಕ ಕಾಡನಕುಪ್ಪೆಗೆ ಗೌರವ ಸಲ್ಲಿಸಬೇಕು' ಎಂದು ಸಲಹೆ ನೀಡಿದರು.

ಜಾನಪದ ವಿದ್ವಾಂಸ ರಾಗೌ ಅವರು ಮಾತಾನಾಡಿ, 'ಶಿವರಾಮು ಕಾಡನಕುಪ್ಪೆ ಒಳಹೊರಗೂ ನೇರ ನಡೆ-ನುಡಿ ವ್ಯಕ್ತಿತ್ವ ಹೊಂದಿದ್ದರು. ಉತ್ತಮ ಆಡಳಿತಗಾರ, ಪ್ರಾಧ್ಯಾಪಕ ಹಾಗೂ ಪ್ರಾಮಾಣಿಕತೆ, ತತ್ವ ನಿಷ್ಠೆ, ಸ್ವಾಭಿಮಾನಕ್ಕೆ ಹೆಸರಾಗಿದ್ದರು. ದಲಿತರು, ತುಳಿತಕ್ಕೊಳಗಾದವರ ಧ್ವನಿಯಾಗಿದ್ದರು. ಅವರು ಯಾವ ಸಿದ್ಧಾಂತವನ್ನೂ ಒಪ್ಪಿಕೊಂಡವರಲ್ಲ. ಒಳ್ಳೆಯದನ್ನಷ್ಟೇ ಅವರು ಒಪ್ಪಿಕೊಂಡವರು. ಭಾಷಾ ಚಳವಳಿ, ರೈತ, ಮಹಿಳೆ, ದಲಿತ ಬಂಡಾಯ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಅವರು ಮರೆಯಾದ ಮಾಣಿಕ್ಯದ ಜತೆಗೆ ಮರೆಯಲಾರದ ಮಾಣಿಕ್ಯವೂ ಹೌದು' ಎಂದು ಬಣ್ಣಿಸಿದರು.

ಕೃತಿ ಬಿಡುಗಡೆ ಮಾಡಿದ ಪತ್ರಕರ್ತ ಜಿ.ಪಿ. ಬಸವರಾಜು ಮಾತನಾಡಿ, ಶಿವರಾಮು ಕಾಡನಕುಪ್ಪೆ ಅವರಿಗೆ ಬದುಕಿನ ಬಗ್ಗೆ ಅಖಂಡ ವಿಶ್ವಾಸವಿತ್ತು. ಅವರು ವಿರ್ಮಶಕರಾಗಿ ಎತ್ತರಕ್ಕೆ ಏರುವ ಸಂದರ್ಭದಲ್ಲೇ ಪದ್ಯ, ಕಾದಂಬರಿ ಬರೆಯಲು ಆರಂಭಿಸಿದ್ದರು. ಸುಧಾ ವಾರ ಪತ್ರಿಕೆಯಲ್ಲೂ ಅಂಕಣ ಬರೆದರು. 20 ವರ್ಷಗಳವರೆಗೆ ಅನಾರೋಗ್ಯದಿಂದ ಬಳಲಿದರೂ ಧೈರ್ಯವಾಗಿ ಜೀವನ ಸಾಗಿಸಿದರು. ಕ್ಯಾನ್ಸರ್, ಭೀಕರ ಅಪಘಾತಕ್ಕೆ ಈಡಾದರು. ಆಸ್ಪತ್ರೆಯಲ್ಲಿನ ಅನುಭವಗಳನ್ನೇ ವಿಶಿಷ್ಟವಾಗಿ ಬರೆದರು' ಎಂದು ಸ್ಮರಿಸಿದರು.

'ಕಾನೂನು ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವಂತೆ ಕಾಡನಕುಪ್ಪೆ ಅವರು ತಮ್ಮನಿಗೆ ಪ್ರೇರೇಪಿಸುವ ಜತೆಗೆ ಹೋರಾಟವನ್ನೂ ನಡೆಸುವಂತೆ ಹುರಿದುಂಬಿಸಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಅಧ್ಯಾಪಕ ವೃತ್ತಿಯನ್ನೂ ಕಳೆದುಕೊಂಡರು. ಕ್ಷಮಾಪಣಾ ಪತ್ರ ನೀಡಿದರೆ ಕೆಲಸಕ್ಕೆ ಮತ್ತೆ ಸೇರಿಸಿಕೊಳ್ಳುವುದಾಗಿ ಹಾ.ಮಾ.ನಾಯಕರು ಹೇಳಿದರೂ, ಕ್ಷಮಾಪಣಾ ಪತ್ರವನ್ನು ಕಾಡನಕುಪ್ಪೆ ನೀಡಲಿಲ್ಲ. ಅಂತಹ ಸ್ವಾಭಿಮಾನಿ ಅವರು' ಎಂದು ಬಣ್ಣಿಸಿದರು.

ಶಿವರಾಮು ಕಾಡನಕುಪ್ಪೆ ಪತ್ನಿ ಸುವರ್ಣ ಮಾತನಾಡಿ, 'ನಮ್ಮ ಆಗಮನ, ನಿರ್ಗಮನ ಆಕಸ್ಮಿಕ. ಆದರೆ, ಅವರು (ಕಾಡನಕುಪ್ಪೆ) ಅಪ್ರಸ್ತುತ ಅನಿಸುತ್ತಿಲ್ಲ' ಎಂದ ಅವ 'ಕೌದಿ ಮತ್ತು ಧ್ಯಾನ' ಕವಿತೆ ವಾಚಿಸಿ ಪತಿಯನ್ನು ಸ್ಮರಿಸಿದರು.

ವಿಶ್ರಾಂತ ಪ್ರಾಂಶುಪಾಲ ಕೆ. ಕಾಳಚನ್ನೇಗೌಡ, ಪತ್ರಕರ್ತ ಬಿ.ಎಂ. ಹನೀಫ, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು ಕಾಡನಕುಪ್ಪೆ ಅವರೊಂದಿಗಿನ ಒಡನಾಟವನ್ನು ಬಿಚ್ಚಿಟ್ಟರು. ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ, ಕಾಡನಕುಪ್ಪೆ ಪುತ್ರ ನೇಸರ ಕಾಡನಕುಪ್ಪೆ ಇದ್ದರು.

ಪ್ರೊ.ಜಿ. ಚಂದ್ರಶೇಖರ್ ಮಾತಾನಾಡಿ 'ನಾನು ಸಾಹಿತ್ಯ ಕೃಷಿ ಮಾಡಲು ಶಿವರಾಮು ಕಾಡನಕುಪ್ಪೆ ಕಾರಣ. ಅವರೊಂದಿಗೆ 35 ವರ್ಷ ಕೆಲಸ ಮಾಡಿದ್ದೇನೆ. ಅವರ ಅಂತರಂಗದ ಮಿತ್ರನೂ ಹೌದು. ಅವರ ಒಳ-ಹೊರಗು ಬಲ್ಲವನಾಗಿದ್ದೆ. ಆಸ್ತಿಕರ ನಡುವೆ ನಾಸ್ತಿಕನೊಬ್ಬನ ತಲ್ಲಣಗಳು ಸೇರಿದಂತೆ ನಾಲೈದು ಕೃತಿಗಳನ್ನು ರಚಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದರು. ಆದರೆ, ಆ ವೇಳೆಗಾಗಲೇ ಅವರು ಇಹಲೋಕವನ್ನು ತ್ಯಜಿಸಿದರು. ನನ್ನ ಶವವನ್ನು ಮನೆಗೆ ಕೊಂಡೊಯ್ಯಬೇಡಿ, ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ನೀಡಿ ಎಂಕೆ ಅವರು ಸೂಚಿಸಿದ್ದರು. ಆದರೆ, ಅವರ ಮಾತನ್ನು ಉಲ್ಲಂಘಿಸಿ ಮನೆಗೆ ಶವವನ್ನು ಕೊಂಡೊಯ್ದು, ಪುನಃ ವೈದ್ಯಕೀಯ ಕಾಲೇಜಿಗೆ ನೀಡಿದೆವು' ಎಂದು ವಿಶ್ರಾಂತ ಪ್ರಾದ್ಯಾಪಕ ಜಿ. ಚಂದ್ರಶೇಖರ್ ಹೇಳಿ ಭಾವುಕರಾದರು.

MORE NEWS

ಅವಿರತ ಹರೀಶ್ ಅವರ ಅಭಿನಂದನಾ ಕಾರ್ಯಕ್ರಮ ಎಲ್ಲರಿಗೂ ಆದರ್ಶವಾಗಿದೆ; ಬರಗೂರು ರಾಮಚಂದ್ರಪ್ಪ

25-04-2024 ಬೆಂಗಳೂರು

ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...

ಮಾತೋಶ್ರೀ ರತ್ನಮ್ಮ ಹೆಗ್ಗಡೆ 47ನೇ ಮಹಿಳಾ ಗ್ರಂಥ ಬಹುಮಾನಕ್ಕೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...

ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿಗೆ ಕೃತಿಗಳ ಆಹ್ವಾನ

25-04-2024 ಬೆಂಗಳೂರು

ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...