ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್

Date: 29-04-2021

Location: ಬೆಂಗಳೂರು


‘ಎಸ್. ದಿವಾಕರ್ ಅವರ ಕೃತಿಗಳನ್ನು ಅವಲೋಕಿಸುವುದು ಅಂದರೆ ಹಿಮಾಲಯವನ್ನು ಕಣ್ಣೊಳಗೆ ಇಳಿಸಿಕೊಂಡಂತೆ’ ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ತಮ್ಮ ‘ಅನಂತಯಾನ’ ಅಂಕಣದಲ್ಲಿ ಖ್ಯಾತ ಲೇಖಕ ಎಸ್. ದಿವಾಕರ್ ಅವರ ಕತೆಗಳ ಗಾಢತೆ ಮತ್ತು ಸಾಹಿತ್ಯದ ಸೂಕ್ಷ್ಮತೆಯ ಕುರಿತು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ಕಥಾ ಜಗತ್ತಿನಲ್ಲಿ, ಸಾಹಿತ್ಯ ಲೋಕದಲ್ಲಿ ಸದ್ದಿಲ್ಲದೆ ಹೊಸತನ್ನು ನೀಡುತ್ತಾ ಬಂದವರು ಎಸ್.ದಿವಾಕರ್. ತಮ್ಮ ಅಗಾಧ ಓದಿನಿಂದ ಕನ್ನಡದ ಭಾವ ಪ್ರಪಂಚವನ್ನು ವಿಸ್ತರಿಸಿದವರು ಅವರು. ಹಲವು ಆಸಕ್ತಿಗಳನ್ನು ಬೆಳೆಸಿ ಪೋಷಿಸಿ ಅದರ ಫಲವನ್ನು ಕನ್ನಡದ ಮನಸ್ಸುಗಳಿಗೆ ನೀಡಿದ ಹಿರಿಯ ಚೇತನ. ಸಾಹಿತ್ಯದ ವಿವಿಧ ಮಜಲುಗಳಲ್ಲಿ ಪ್ರವಹಿಸುವ ಇವರದ್ದು ದಣಿವರಿಯದ ಯಾನ. 'ಹಾರಿಕೊಂಡು ಹೋದವರು' - ಹಲವು ದೇಶಗಳ ಅತಿಸಣ್ಣ ಕತೆಗಳ ಗುಚ್ಚ. ಅವರ ಇತರ ಕೃತಿಗಳಂತೆ ಈ ಪುಸ್ತಕವೂ ನಮ್ಮ ಸಾಹಿತ್ಯ ಭಂಡಾರದಲ್ಲಿ ಇದ್ದರೆ ಅದು ಸಾಹಿತ್ಯ ಭಂಡಾರಕ್ಕೂ ನಮಗೂ ಹೆಮ್ಮೆಯ ವಿಚಾರ. ಇರಬೇಕು ಕೂಡ. ಕನ್ನಡದ ಗರ್ವವನ್ನು ಎತ್ತಿ ಹಿಡಿಯುವ ಹತ್ತು ಹಲವು ಕತೆ, ಕಾವ್ಯ, ಪ್ರಬಂಧ, ಮತ್ತಿತರ ಸಾಹಿತ್ಯ ಪ್ರಕಾರಗಳನ್ನು ರಚಿಸಿದ ಹಿರಿಮೆ ಇವರದ್ದು, ಅದನ್ನು ಓದಿ ಅರಗಿಸಿಕೊಳ್ಳುವ ಭಾಗ್ಯ ಕನ್ನಡದ ಮನಸ್ಸುಗಳದ್ದು.

ಎಸ್. ದಿವಾಕರ್ ಅವರ ಕೃತಿಗಳನ್ನು ಅವಲೋಕಿಸುವುದು ಅಂದರೆ ಹಿಮಾಲಯವನ್ನು ಕಣ್ಣೊಳಗೆ ಇಳಿಸಿಕೊಂಡಂತೆ. ಈ ಮಾತು ಕ್ಲಿಷೆಯಂತೂ ಖಂಡಿತಾ ಅಲ್ಲ. ಹಾಗಾಗಿ ನನಗೆ ಕಾಣಿಸಿದಷ್ಟನ್ನು ಇಲ್ಲಿ ಹೇಳಿದ್ದೇನೆ. ಅಷ್ಟೇ. ಭಾಷಾಂತರ ಹೇಗಿರಬೇಕು ಎನ್ನವುದಕ್ಕೆ ಅವರೊಬ್ಬ ನಿದರ್ಶನ, ರೋಲ್ ಮಾಡೆಲ್. ಆಯಾ ಭಾಷೆಯ, ನೆಲದ, ಸಂಸ್ಕೃತಿಯ ಜೊತೆ ಜೊತೆಗೆ ಮೂಲ ಭಾವವನ್ನೂ ಕಟ್ಟಿಟ್ಟು ಕನ್ನಡಕ್ಕೆ ಹೊರಳಿಸುವ ಕಾರ್ಯ ಸುಲಭದ್ದಲ್ಲ. ಪ್ರಯೋಗಿಸುವ ಭಾಷೆ ಕೂಡ ಇಲ್ಲಿ ಮುಖ್ಯವೇ ಆಗಿರುತ್ತದೆ. ಭಾವಾನುವಾದಕ್ಕೆ ತಕ್ಕುದಾದ ಭಾಷಾ ಪ್ರಯೋಗವು ಕತೆಗಳ ಅಂತಃಸತ್ವವನ್ನು ಜೀವಂತವಾಗಿ ಇರಿಸುತ್ತವೆ. ಹಾಗಾಗಿ ಬಳಸುವ ಸಣ್ಣ ಸಣ್ಣ ವಾಕ್ಯಗಳು, ಶಬ್ದಗಳು ಅಭಿವ್ಯಕ್ತಿಸಬೇಕಾದದ್ದನ್ನು ಸಮರ್ಥವಾಗಿ ಹೇಳುವ ಚಾಕಚಕ್ಯತೆ ಅವರ ಭಾಷಾಂತರ ಕಾರ್ಯದಲ್ಲಿ ಕಂಡು ಬರುವ ಮೂಲ ಧನ. ಆ ಕಾರಣದಿಂದ ಅವರು ಆಯ್ಕೆ ಮಾಡಿಕೊಂಡ ಕತೆಗಳು ಆ ದೇಶದ್ದು ಮಾತ್ರವಾಗಿರದೆ ನಮ್ಮ-ನಿಮ್ಮದೂ ಆಗಿ ನಮ್ಮೊಳಗೆ ಇಳಿದು ಬಿಡುತ್ತವೆ. ನಮ್ಮ ನೆಲದ ಗಂಧವೇ ಇಲ್ಲದ..ಪರ ನೆಲದ ಗಂಧವನ್ನು ಈ ನೆಲದಲ್ಲಿ ಹರಡಿಸಿ..ಗಂಧ ಎಲ್ಲಿದ್ದರೂ ಒಂದೇ-ಮೂಗರಳಿಸಿ ಹೀರಿಕೊಳ್ಳುವಂತ ಸುಗಂಧವನ್ನು ಪಸರಿಸಿ ಬಿಡುತ್ತಾರೆ.

ಭಾವನೆ, ಅನುಭವಗಳು ಸಾರ್ವತ್ರಿಕ. ಅಭಿವ್ಯಕ್ತಿಸಲು ಬಳಸುವ ಭಾಷೆ ಬೇರೆಯಷ್ಟೆ. ಅಂತಹ ಹಲವು ದೇಶದ ಭಾಷೆಗಳು ತಮ್ಮ ಮೈ ಮೇಲೆ ಸುರುವಿಕೊಂಡ ಭಾವ ತೀವ್ರತೆಗಳನ್ನು ಕನ್ನಡದ ಭಾವವನ್ನಾಗಿಸಿ ಈ ಸಂಕಲನದಲ್ಲಿ ಎಸ್.ದಿವಾಕರ್ ಅವರು ಕೊಟ್ಟಿದ್ದಾರೆ. ಅವರೊಬ್ಬ ವಿಶ್ವ ಸಾಹಿತ್ಯಕ್ಕೆ ಬೆಳಕಿಂಡಿಯಂತೆ ಅನ್ನುವುದು ಸುಮ್ಮನೇನು ! ಬದುಕಿನ-ಮನುಷ್ಯನ ಸಂಕೀರ್ಣತೆ, ಜಂಜಡ, ಸಂಘರ್ಷ, ಸಂಕಟ, ಭಿನ್ನ ಕಾಲಘಟ್ಟ, ಮನಶ್ಯಾಸ್ತ್ರ ಎಲ್ಲವನ್ನೂ ಹರಡಿಟ್ಟು ನಿಭಾಯಿಸಿಕೊಂಡು ಇಲ್ಲಿನ ಕತೆಗಳು ಸಾಗುತ್ತವೆ. ಒಂದೊಂದು ಮನಸ್ಥಿತಿಯನ್ನು ಕಲ್ಪಿಸಿ ಕೊಡುವ ಕತೆಗಳು ಆ ಕಾರಣದಿಂದ ಓದುವ ಮನಸ್ಸನ್ನು ತಟ್ಟುತ್ತವೆ. ಓದುತ್ತ ಹೋದಂತೆ ನಮ್ಮ ಅರಿವಿಗೆ ದಕ್ಕಿಸಿಕೊಂಡಷ್ಟನ್ನು ದಕ್ಕಿಸಿಕ್ಕೊಳ್ಳುತ್ತಲೂ ಹೋಗುತ್ತೇವೆ. ನಾನೂ ಅದಕ್ಕೆ ಹೊರತೇನಲ್ಲ. ಹಾಗೊಂದಿಷ್ಟು ದಕ್ಕಿಸಿಕೊಂಡದ್ದು…

'ಕನಸು ಮತ್ತು ವಾಸ್ತವ' ಎಂಬ ನಿಜದ ಭ್ರಾಮಕಾವಸ್ಥೆಯ ಒಟ್ಟಿಗೇ ದ್ವಂದ್ವವೂ ಇದ್ದ ಬಾಳಿನ ಗೋಳು.'ವರ್ಣ ಚಿತ್ರದ ಕುದುರೆ' ಯಂತೆ ಭಾಸವಾಗುವ ಬದುಕಿನ ಹೆಜ್ಜೆಗಳು. ಹಲವು ಸ್ಥಿತಿಯಂತರಗಳನ್ನು ಹಾಯುತ್ತ ಹೋಗುವ ಮಾನಸಿಕಾವಸ್ಥೆಯು ಕೊನೆಗೂ ನಮ್ಮದೇ ಪ್ರತಿಬಿಂಬವನ್ನು ತೋರಿಸುವ-'ಪಾವೋ-ಯು'. ಸಂತಸದಲ್ಲಿರುವುದು ಒಂದು ಸ್ಥಿತಿ. ಹಾಗೇಯೇ ದುಃಖವೂ. ಅಂತಹ ಒಂದು ಸ್ಥಿತಿಗೆ ಹೇಗೆ ತಲುಪಿದೆ ಎನ್ನುವುದಕ್ಕೆ ಉತ್ತರವಾಗಿ -'ವಿಚಿತ್ರ ಮನುಷ್ಯ' ನಿಂತಿರುತ್ತಾನೆ. ಸ್ವಾತಂತ್ರ್ಯ ಮತ್ತು ಬಂಧನವು ಅವನ ಸುಖದ ಸ್ಥಿತಿಯನ್ನು ಕಸಿದು ಮತ್ತೆ ಕೊಡುವುದನ್ನು ನಿಜವಾದ ಪ್ಯಾರಿಸಿನಲ್ಲಿ ನೋಡುತ್ತೇವೆ. ಕಟ್ಟುವ ಮತ್ತು ಕೆಡಹುವ ಕ್ರಿಯೆಗಳು 'ಕಾಗದದ ಉಂಡೆ'ಗಳಾಗಿ ಬಿಡುತ್ತವೆ. ಎಷ್ಟಾದರೂ ಮುರುಟಿಕೊಂಡ ಸೇಬಿನ ರುಚಿಯನ್ನು ಬಲ್ಲವರೇ ಬಲ್ಲರು !

ಮಾನವ ಮತ್ತು ಯಂತ್ರದ ನಡುವಿನ ಸಂಘರ್ಷ, ಭಾವನೆ ಮತ್ತು ಯಾಂತ್ರಿಕತೆಯ ನಡುವಿನ ಸಂಕಟವನ್ನು 'ಸಂಖ್ಯೆಯಿಲ್ಲದ ಗೋರಿಗಳು' ಕತೆಯಲ್ಲಿ ಕಾಣುತ್ತೇವೆ. ದನದ ಮಾಂಸ ತಯಾರಿಕಾ ಘಟಕದಲ್ಲಿ ಕೆಲಸದಲ್ಲಿ ನಿರತನಾಗಿದ್ದ ದೀಯೆಗೊ ಮಲಾಮೆಂತೆ ಒಂದು ದಿನ ಅಕಸ್ಮಾತ್ ದನದ ಮಾಂಸವನ್ನು ಬೇರ್ಪಡಿಸುವ ಬೃಹತ್ ಯಂತ್ರದೊಳಕ್ಕೆ ಬಿದ್ದು ಬಿಡುತ್ತಾನೆ. ಮೂಳೆ ಮತ್ತು ಮಾಂಸವನ್ನು ಬೇರ್ಪಡಿಸುವ ಯಂತ್ರವು ದನದ ಮಾಂಸದ ಜೊತೆಗೆ ದೀಯೆಗೊ ಎಂಬ ಮನುಷ್ಯನ ಮಾಂಸದ ತುಣುಕುಗಳನ್ನೂ ಸೇರಿಸಿಕೊಂಡು ಡಬ್ಬಿಯೊಳಗೆ ತುಂಬಿ ಬಿಡುತ್ತದೆ. ಅಂತಹ ಸಾಲು ಸಾಲು ಡಬ್ಬಿಗಳು ಅಂಗಡಿ-ಸ್ಟೋರ್ಸ್ ಗಳನ್ನು ಸೇರಿಕೊಳ್ಳುತ್ತವೆ. ಎಂತಹ ಐರನಿ! ಸತ್ತವನು ಅರ್ಧ ಪೌಂಡಿನ ಡಬ್ಬಿಗಳಲ್ಲಿ ಹಂಚಿ ಹೋಗಿರುವುದರಿಂದ ಅಂತಹ ಹಲವಾರು ಡಬ್ಬಿಗಳನ್ನು ಕುದುರೆ ಗಾಡಿಗಳಲ್ಲಿರಿಸಿ ದೀಯೆಗೊನ ಅಂತಿಮ ಯಾತ್ರೆಯು ಹೊರಡುತ್ತದೆ. ಅದು ಯಾವ ನವಾಬನ ಶವಯಾತ್ರೆಗಿಂತಲೂ ಕಡಿಮೆಯದ್ದಾಗಿರುವುದಿಲ್ಲ. ಜೊತೆಗೆ ಅವನ ಗೋರಿಯೂ..ಎಂತಹ ವಿಪರ್ಯಾಸಗಳು. ಹೀಗಿರಲು ದೀಯೆಗೊನ ವಿಧವೆ ಮರಿಯಾಳಿಗೆ ಹುಚ್ಚು ಹಿಡಿದು ಸಿಕ್ಕ ಸಿಕ್ಕ ಅಂಗಡಿಗಳಿಂದ ತನ್ನ ಗಂಡನ ಅವಶೇಷಗಳಿರುವ ಡಬ್ಬಗಳನ್ನು ಖರೀದಿ ಮಾಡುತ್ತಾ ಹೋಗುತ್ತಾಳೆ. ಎಷ್ಟರವರೆಗೆ ಅಂದರೆ ಸಿಲ್ ಮಾಡಿದ ದಿನಾಂಕವನ್ನು ನೋಡಿ ತಪ್ಪಿರಲೂಬಹುದು ಎಂದು ಸಂಶಯಪಟ್ಟು, ಮತ್ತು ಮತ್ತು ಡಬ್ಬಗಳನ್ನು ಕೊಳ್ಳುತ್ತಾ, ಕದಿಯುತ್ತಾ ಹೋಗುವ ಅವಳು, ಅವೆಲ್ಲವನ್ನೂ ಅಗೆದ ದೊಡ್ಡ ಹಳ್ಳದಲ್ಲಿ ಹೂತಿಡುತ್ತಾಳೆ. ಒಂದು ದಿನ ಆಕೆ ಸ್ಮಶಾನದಲ್ಲಿ ಸಿಕ್ಕಿ ಬೀಳುತ್ತಾಳೆ. ಹಾಗೆ ಅವಳ ಆ ದಂಧೆ ಅಲ್ಲಿಗೆ ನಿಂತು ಹೋಗುತ್ತದೆ ಎಂಬ ದಾರುಣ ಚಿತ್ರಣ. ತನ್ನವನ ನೆನಪುಗಳನ್ನು ಅರ್ಧ ಪೌಂಡ್ ಡಬ್ಬದಲ್ಲಿ ಕಾಣುವ ಮರಿಯಾಳ ಭಾವುಕ ಪ್ರಪಂಚದ ಓಡಾಟವು ದಂಧೆಯಾಗಿ ಬಿಡುವ ವೇದನೆಯನ್ನು ಕಾಣಬಹದು. '..ಇದೀಗ ಹುಚ್ಚಾಸ್ಪತ್ರೆಯಲ್ಲಿ ಇರಬೇಕೋ ಏನೋ..' ಎಂಬ ಸಾಲಿನೊಂದಿಗೆ ಮುಗಿಯುವ ಕತೆಯು ಭಾವುಕನಾಗಿಯೂ ನಿರ್ಭಾವುಕನಾದವನೊಬ್ಬನ ಮನಸ್ಥಿತಿ..ಬದುಕಿನ ನಿರಂತರ ಸಂಘರ್ಷವನ್ನು, ಸಂಕೀರ್ಣತೆಯನ್ನು ಅನಾವರಣ ಗೊಳಿಸುತ್ತದೆ.

ರೂಮಿನ ಖಾಲಿ ಮೂಲೆಯನ್ನು ವೇದನೆಯಿಂದ ನೋಡುವ ಕಣ್ಣುಗಳಿಗೆ ಮನಸ್ಸಿನ ಮೂಲೆಯಲ್ಲಿರುವ ಖಾಲಿ ಜಾಗವನ್ನು ಪ್ರವೇಶಿಸಲು ತಿಳಿದಿರುವುದಿಲ್ಲವಷ್ಟೆ. ನಡೆದು ಬಂದ ಹಾದಿಯತ್ತ ತಿರುಗಿ ನೋಡಿದರೆ- ಹಾರಿ ಬರುವ ನೆನಪುಗಳು ಸಂಸತಸವನ್ನು ಮೊಟಕುಗೊಳಿಸಿ ಬಿಡುತ್ತದೆ. ಪೊಳ್ಳು ಆಕರ್ಷಣೆಗಳಿಗೆ ಬಲಿಯಾಗುವ ಮನಸ್ಸು ನಿಜದ ಪ್ರೀತಿಯನ್ನು ಮರೆತೇ ಬಿಡುತ್ತದೆ. ಆಕೆಯ ಜೊತೆಗೆ ಕಳೆದ ಸಂತಸದ ಕ್ಷಣಗಳು ಆರನೇ ಮಜಲಿನಿಂದ ಎಸೆಯಲ್ಪಟ್ಟ ಯುವಕನ ಹಾರುವ ಖುಷಿಯನ್ನು ಕಮರಿಸಿ ಬಿಡುತ್ತದೆ. ಒಂದೊಂದು ಮಜಲನ್ನು ದಾಟಿಕೊಂಡು ಹಾರುತ್ತಿರುವಾಗಲೂ ಮಜಲುಗಳಲ್ಲಿ ಅವನಿಗೆ ಕಾಣುವ ಅಂಶವು ಸತ್ಯ ದರ್ಶನವನ್ನು ಒದಗಿಸುತ್ತದೆ. ಅವುಗಳೆಲ್ಲವೂ ತಾನು ಸವೆದು ಬಂದ ದಾರಿಯನ್ನು ನೆನಪಿಸಿ, ಹೊಸ ಹೊಳಹನ್ನು ಕರುಣಿಸಿ; ಬದುಕಿರುವುದು ಉಪಯೋಗವಿಲ್ಲವೆಂಬ ಅರಿವು ಮೂಡಲು - ಎದೆ ನಡುಗದೆ ಫುಟ್ ಪಾತ್ ಗೆ ರಭಸದಿಂದ ಹೊಡೆದ ಅವನ ತಲೆಯು ದೇಹವನ್ನು ನಿಶ್ಚಲಗೊಳಿಸಿ ಬಿಡುತ್ತದೆ. ಬದುಕಿನ ರಮ್ಯತೆ-ಕುರೂಪಗಳನ್ನು ಕಾಣುವ ಅವನಿಗೆ ಬದುಕಿನ ನಶ್ವರತೆಯ ಅರಿವಾಗಿರುತ್ತದೆ. ಹಾಗಾಗಿಯೇ ಅವನ ಎದೆ ಆ ಕ್ಷಣದಲ್ಲೂ ನಡುಗುವುದಿಲ್ಲ. ಒಂದೊಂದು ದೃಶ್ಯವನ್ನು ಕಂಡು, ಕಲಿತ ಯುವಕನ ಮನಸ್ಸಲ್ಲಿ ಅದೆಂತಹ ಸಂಕೀರ್ಣತೆಗಳಿದ್ದವು ಎನ್ನುವುದನ್ನು ಉಸಿರು ನಿಂತ ಅವನ ದೇಹವನ್ನು ಸುತ್ತುವರಿದವರಿಗೆ ತಿಳಿಯುವುದಿಲ್ಲ. ಅಂತಹ ಸಂಕೀರ್ಣತೆಗಳನ್ನು ಒಳಗೊಂಡ ಮನಸ್ಸು ಯಾರಿಗೂ ತಿಳಿಯದೆ ಸರಿದು ಹೋಗುವ ಸಂಭವನೀಯತೆಯು ಜೀವ ಇರುವವರಿಗೂ ಅನ್ವಯವಾಗುತ್ತದೆ -'ಹಾರಿಕೊಂಡು ಬಂದವನು' ಕತೆ ಹಾಗೆ ಇಷ್ಟವಾಗಿ ಬಿಡುತ್ತದೆ.

ಇಲ್ಲಿನ ಕತೆಗಳಲ್ಲಿ ಬರುವ ರೂಪಕಗಳು ಮನದಲ್ಲಿ ಉಳಿದು ವಾಸ್ತವದ ನೆಲೆಯಲ್ಲಿ ಅಳಿಯಂದಂತೆ ಮಾಡಿ ಬಿಡುತ್ತದೆ. ಈ ನಿಟ್ಟಿನಲ್ಲಿ ಕನ್ನಡಕ್ಕೆ ಹಾರಿಕೊಂಡು ಬಂದ ಜಗತ್ತಿನ ಐವತ್ತೇಳು ಅತಿಸಣ್ಣ ಕತೆಗಳು ಸಾರ್ಥಕವೆನಿಸಿಕೊಳ್ಳುತ್ತವೆ. ಬೆಳಕ ದಾಟಿಸುವ ಹಣತೆಯಾಗಿ ವಿಶ್ವ ಸಾಹಿತ್ಯವನ್ನು ಕನ್ನಡಕ್ಕೆ ಎಸ್. ದಿವಾಕರ್ ಅವರು ದಾಟಿಸಿದ್ದಾರೆ. ಕತ್ತಲನ್ನು ಓಡಿಸುವ ಬೆಳಕಿನ ಜೊತೆಗೆ ನಾವಿರಬೇಕಷ್ಟೆ.

ಈ ಅಂಕಣದ ಹಿಂದಿನ ಬರೆಹಗಳು:
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ

ಜೀವ ಜೀವಗಳ ಅಳು…

ಹನಿ ಹನಿಸಿದ ಚೊಕ್ಕಾಡಿ

ಶಾಂತ ಕಡಲೊಳು ಬೀಸಿದ ಬಿರುಗಾಳಿ

ರಂಗದ ಮೇಲಿನ ಬಣ್ಣದ ಭಾವಗಳು

ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...