ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...


‘ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು’ ಸಾಮಾನ್ಯ. ಆದರೆ ಸೋಲನ್ನೇ ಗೆಲುವಿನ ಮೆಟ್ಟಲಾಗಿಸಿಕೊಳ್ಳಬೇಕಾದ ಮನಸ್ಥಿತಿ ನಮ್ಮಲ್ಲಿರಬೇಕು. ಎಲ್ಲರಿಗೂ ಒಳಿತನ್ನೇ ಬಯಸುವ ಮನಸ್ಸು ನಮ್ಮದಾಗಿರಬೇಕು ಎಂಬುದನ್ನು ‘ಅನಂತಯಾನ’ ಸರಣಿಯಲ್ಲಿ ವಿವರಿಸಿದ್ದಾರೆ ಸಂತೋಷ್‌ ಅನಂತಪುರ.

ಕೆಳಕ್ಕೆ ಬೀಳುವುದು ಯಾವತ್ತೂ ಸೋಲಲೆಂದೇ ಆಗಿರುವುದಿಲ್ಲ. ಕೆಳಕ್ಕೆ ಬೀಳುವುದು ನಮ್ಮನ್ನು ನಮಗೆ ಕಂಡುಕೊಳ್ಳಲಿಕ್ಕಿರುವ ಒಂದು ವಿಧಾನವಷ್ಟೆ. ಪತನ ಯಾವತ್ತೂ ಬೀಳು ಆಗಿರುವುದಿಲ್ಲ ಅದು ಬಾಳೂ ಆಗಿರುತ್ತದೆ. ನಡು ನೆಟ್ಟಗಿರುವಾಗ ತನು-ಮನ ಸೊಟ್ಟಗಿರುತ್ತದೆ. ಆವಾಗೆಲೆಲ್ಲ ಬೀಳುವುದೆಂದರೆ ನಮ್ಮನ್ನು ನಾವೇ ಕೊಂದುಕೊಂಡಂತೆ. ಬಿದ್ದಿದ್ದರಿಂದ ಆಗಿರೋ ನೋವಿಗಿಂತಲೂ ಹೆಚ್ಚಾಗಿ ಬಿದ್ದೆ ಎನ್ನುವ ಅವಮಾನದೇಟನ್ನು ಸಹಿಸಿಕೊಳ್ಳುವುದು ನಮಗೆ ತ್ರಾಸದಾಯಕವಾಗಿ ಬಿಡುತ್ತದೆ. ಬಾಗುವಿಕೆಯಿಂದ ದೊರಕುವ ಬಿಡುಗಡೆಯು ಸೆಟೆದು ನಿಲ್ಲುವುದರಲ್ಲಿ ಸಿಗುವುದಿಲ್ಲ. ಸೆಟೆದು ನಿಲ್ಲುವುದೆಂದರೆ ಬಂಧಿಯಾಗುವುದೆಂದರ್ಥ. ಸೆಟೆಯುವಿಕೆಯು ಹಲವು ಭವ ಭಾವ ಬಂಧನಗಳ ಸರಪಳಿಗಳಿಂದ ಸುತ್ತಿಕೊಂಡಿರುತ್ತವೆ. ಇಂದಿಗೆ ಸೆಟೆದು ಬಾಗುವ ಭಾವಸ್ಥಿತಿಯ ಅಗತ್ಯವಿದೆ.

ಕೊಡುವುದರಲ್ಲಿರುವ ಸುಖ ಪಡೆದುಕೊಳ್ಳುವುದರಲ್ಲಿ ಇಲ್ಲ. ಅದೆಷ್ಟು ಕಾದಾಟ-ಹೊಡೆದಾಟಗಳು! ಮಾನಸಿಕವಾಗಿಯೂ ದೈಹಿಕವಾಗಿಯೂ ನೆರೆತು-ಬಲಿತು ಆಡಿದ ಆಟಗಳತ್ತ ಒಂದೊಮ್ಮೆ ತಿರುಗಿ ನೋಡಿದರೆ ಛೆ... ಎನ್ನುವ ಪಶ್ಚಾತಾಪವೂ, ಥತ್...ಎನ್ನುವ ನಾಚಿಕೆಯೂ ಒಮ್ಮೆಲೇ ಮನದಲ್ಲಿ ಮೂಡಿ ಬಂದದ್ದೇ ಆದಲ್ಲಿ ನಾವು ಕೆಳಕ್ಕೆ ಬಿದ್ದಿದ್ದೇವೆಂದರ್ಥ. ಕೆಲವೊಮ್ಮೆ ನಮ್ಮ ತಪ್ಪೇ ಇಲ್ಲದಿದ್ದರೂ ಘಟನೆಗೆ ನಾವು ಸ್ಪಂದಿಸಿದ, ಪ್ರತಿಕ್ರಿಯಿಸಿದ ರೀತಿಯನ್ನು ನೆನೆದು ನಾಚಿ ಕ್ಷಮೆ ಯಾಚಿಸುವುದಿದೆ. ಆದರದು ಸೋಲಲ್ಲ. ಅದನ್ನು ವಿಜಯವೆಂದೇ ತಿಳಿಯಬೇಕು. ನಮ್ಮನ್ನು ನಾವು ಜಯಿಸಿಕೊಳ್ಳುವುದಿದೆ ನೋಡಿ ಅದರಂತಹ ದೊಡ್ಡ ಗೆಲುವು ಲೋಕದಲ್ಲಿ ಇನ್ಯಾವುದೂ ಇಲ್ಲ. ಸೋಲುವುದು ಸುಲಭ. ಗೆಲ್ಲುವುದು ಬಲು ಕಷ್ಟ.

* * * * * * * * * * * * * * * * *

ವಿಜಯದ ಉನ್ಮಾದದಲ್ಲಿಯೇ ಸಾಯಬೇಕೆಂಬ ಮನುಷ್ಯನ ಹಠವು ಯಾವತ್ತೂ ಅವನನ್ನು ನೆಮ್ಮದಿಯಿಂದಿರಲು ಬಿಡುವುದಿಲ್ಲ. ಪರಾಕ್ರಮದ ಉನ್ಮಾದವು ಹೆಚ್ಚಿದಾಗಲೆಲ್ಲ ಅಭಿಮಾನವು ನೆಲಕ್ಕಚ್ಚಿ ಬಿಡುತ್ತದೆ. ತೋಳ್ ಬಲದೊಳಗಡಗಿದೆ ತೋಳ ಬುದ್ದಿ ಎಂದ ಮೇಲೆ ಕೇಳಬೇಕೆ! ಆಡಿದ್ದೇ ಆಟ ನೋಡಿದ್ದೇ ನೋಟ. ಅರಿಯದೆಯೋ, ಅರಿತರಿತೋ ನಮ್ಮೆದುರೇ ಬಿದ್ದಾಗ ಆಸರೆಗೆಂದು ಕೈಕೊಟ್ಟರೂ ಒಳಗೊಳಗೇ ಖುಷಿಪಡುವ ಮತ್ತು ನಮ್ಮವರೇ ಗೆದ್ದು ಬೀಗಿದಾಗಲೂ ಅಸೂಯೆಗೊಳ್ಳುವ ಮನಸ್ಥಿತಿಯನ್ನು ಜೊತೆಗೆ ಹೊತ್ತೊಯ್ಯುತ್ತಿರುತ್ತೇವೆ. ಮುಂದುವರಿದು ವಿತಂಡವಾದ, ಕುತರ್ಕ ತಪ್ಪಿದಲ್ಲಿ ರೆಟ್ಟೆಯ ಬಲದಿಂದಲಾದರೂ ಎದುರಿನವರನ್ನು ಕೆಡಹುವ ಮಗುದೊಂದು ಮನಸ್ಸು ಬದುಕನ್ನು ಆಲಯವನ್ನಾಗಿಸದೆ ರಣಾಂಗಣವನ್ನಾಗಿಸುತ್ತದೆ.

ಮನಸ್ಸಿನ ಘಟನೆ-ವಿಘಟನೆಗಳ ಆಟದೊಳಗೆ ದೇಹ-ಮನಸ್ಸು ನಲುಗಿ ಹೋಗಿಬಿಡುತ್ತವೆ. ಆದರೂ ಹಾಗೆಂದು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲವಷ್ಟೆ. ಒಳಗೊಳಗೇ ಹಿಡಿಶಾಪ ಹಾಕುತ್ತ ಕತ್ತನ್ನು ಚಾಚಿ ಅಪ್ಪಿಕೊಳ್ಳುವ ಮನಸ್ಸುಗಳು ಯಾವತ್ತಿದ್ದರೂ ಕೊರಳಿಗೆ ಉರುಳು ಎನ್ನುವುದರ ನೆನಪಿರಬೇಕು. ನೋವಾಗುತ್ತದೆಂದು ಗೊತ್ತಾದರೆ ಹೆಚ್ಚೆಚ್ಚು ನೋಯಿಸುವವರಿರುತ್ತಾರೆ. ಕೊಡುವ ನೋವು ನಮ್ಮನ್ನೂ ನೋಯಿಸದೆ ಬಿಡುವುದಿಲ್ಲವೆಂಬ ವಾಸ್ತವದ ಸಣ್ಣ ಅರಿವೂ ಸುಳಿಯದ ಸ್ಥಿತಿಯೊಳಗಿಳಿದು ಬಿಟ್ಟಿರುತ್ತೇವೆ. ಹಾಗಿದ್ದೂ ಇರಿಯುತ್ತಲೂ, ನೋಯಿಸುತ್ತಲೂ ಇದ್ದು ಬಿಡುತ್ತೇವೆ. ತೆರೆದ ಕಣ್ಣುಗಳಿಂಗಿಂತಲೂ ಮುಚ್ಚಿದ ಕಣ್ಣು ಹೆಚ್ಚಿನದನ್ನು ಕಾಣುತ್ತದೆ ಎಂಬುದನ್ನು ಆಗಾಗ ನೆನಪಿಸಿಕೊಳ್ಳುತ್ತಿರಬೇಕು.

ನಮ್ಮಲ್ಲಿರುವುದು ಎಲ್ಲರಲ್ಲಿರಬಹುದು. ಎಲ್ಲರಲ್ಲಿರುವುದು ನಮ್ಮಲ್ಲಿರದೆಯೂ ಇರಬಹುದು.ಆದರೆ ನಾವೇನಾಗಿದ್ದೇವೋ ಅದು ಬೇರೆಯವರಾಗಲು ಸಾಧ್ಯವಿಲ್ಲ. ಅವರಂತೆ ನಾವು ಕೂಡ ಎನ್ನುವುದೂ ನಿಜವಷ್ಟೆ. ಬದುಕು ಹಿಗ್ಗುತ್ತಲೇ ಕುಗ್ಗುತ್ತಿರುವಾಗ ನಮ್ಮೊಳಗಿನ ಧೈರ್ಯವು ಬಾಳನ್ನು ಕುಗ್ಗಿದಲ್ಲಿಂದ ಮತ್ತೆ ಹಿಗ್ಗಿಸಿಬಿಡುತ್ತದೆ. ದೇಹ-ಮನಸ್ಸುಗಳೊಡ್ಡುವ ಮೋಹ, ಬಯಕೆಗಳನ್ನು ಹದ್ದು ಬಸ್ತಿನಲ್ಲಿಡಲಾಗದೆ ಓಡುವ ಓಟಕ್ಕೆ ಮುಗ್ಗರಿಸಿ ಬಿದ್ದೆದ್ದಾಗ ಮನಸ್ಸೇ ಬಹುದೊಡ್ಡ ವೈದ್ಯನಾಗಿ ಶುಶ್ರುಷೆಯನ್ನೂ ಕೊಡುತ್ತಿರುತ್ತದೆ.

* * * * * * * * * * * * * * * * *

ಕತ್ತಲನ್ನು ಸೀಳಿಕೊಂಡು ಬೆಳಕು ಬರಬೇಕು. ಅದಕ್ಕೆ ಕಾಯಬೇಕು. ಸೂರ್ಯನ ಪ್ರಭೆಯನ್ನು ಎಷ್ಟೆಂದು ತಡೆ ಹಿಡಿಯಲು ಸಾಧ್ಯ? ಅದು ಹೊರಕ್ಕೆ ಚಿಮ್ಮಲೇಬೇಕು ಮತ್ತದು ಚಿಮ್ಮುತ್ತದೆ ಕೂಡ. ನಾಚಿಕೆ ಸೌಂದರ್ಯಕ್ಕೊಂದು ಅಲಂಕಾರ; ಸತ್ಯಕ್ಕಲ್ಲ. ಸತ್ಯ ಬೆತ್ತಲೆಯಾಗಿರುತ್ತದೆ. ಅಂತಹ ಒಂದು ಸತ್ಯ ದರ್ಶನವು ಕಣ್ಣೆದುರೇ ನಡೆದಾಗ ನಾಳೆಗಳ ಹಾಳೆಗಳು ಹೇಗಿರಬೇಕೆಂದನ್ನು ಇಂದೇ ತೀರ್ಮಾನಿಸಿ ಬಿಡಬೇಕು. ಬಹಳಷ್ಟು ಸಂದರ್ಭಗಳಲ್ಲಿ ಕೆಲವೊಂದು ವಿಚಾರಗಳು ಪ್ರತಿಷ್ಠೆಯಾಗಿಬಿಟ್ಟು ಅಸಹನೀಯ ಸ್ಥಿತಿಯನ್ನು ನಿರ್ಮಿಸಿ ಬಿಡುವುದೂ ಇದೆ. ವೃತ್ತಿ-ಪ್ರವೃತ್ತಿ ಎರಡೂ ಒಂದೇ ಆಗಿ ಬಂದು ದೊರಕುವ ಸುಖ ಮತ್ತು ನೀಡುವ ಆತಂಕದ ನಡುವೆಯೇ ಹರಿದಿರುವ ಬಂಧವನ್ನು ಹೊದ್ದುಕೊಳ್ಳುತ್ತೇವೆ. ಹರಿದಲ್ಲಿ ಮತ್ತೆ ಮತ್ತೆ ಬಂಧವನ್ನು ಹೊಲಿಯುತ್ತಲೇ ಸಾಗುವ ಹಾದಿಯಲ್ಲಿ ಸಂಕಷ್ಟ ಯಾವತ್ತಿದ್ದರೂ ಅನಾಥವೇ ಎಂದೆನಿಸಿಬಿಡುವುದಿದೆ.

ಸತ್ಯ ಅದೆಷ್ಟೇ ಕಠೋರವಾಗಿದ್ದರೂ ಅದನ್ನು ಒಪ್ಪಿಕೊಂಡರೆ ಪಾಪವೆಂತು? ಮುಖವಾಡ ಧರಿಸಿ ಮಾಡಿದ ಅಪರಾಧಗಳನ್ನು ಒಪ್ಪಿಕೊಳ್ಳದಿದ್ದರೆ ಅದೊಂದು ಘೋರ ಪಾಪವಲ್ಲವೇ? ಎಚ್ಚರವಾಗಿರುವಾಗ ಕಾಣುವ ಕನಸಿನಿಂದ ಯಾವುದೇ ಪ್ರಯೋಜನವಿಲ್ಲ. ಹಾಗೊಮ್ಮೆ ಕಂಡ ಕನಸುಗಳು ಜೀವಿತದುದ್ದಕ್ಕೂ ಭಾರವೆನಿಸಿಬಿಡುವುದುಂಟು. ಮೋಹಕ್ಕೆ ಕೊನೆಯೇ ಇಲ್ಲವಲ್ಲ. ಮೋಹದ ಮೊದಲ ಕ್ಷಣ ಪಾಪದ ಮೊದಲ ಮೆಟ್ಟಿಲು. ನಮ್ಮ ಜೀವನ ಹಾಗೂ ಮನಸ್ಸುಗಳ ಹೆಣಿಕೆ ಬಹಳ ವಿಲಕ್ಷಣವಾದದ್ದು. ಸುಖ ಎನ್ನುವುದು ಎಷ್ಟೋ ಬಾರಿ ಮರೀಚಿಕೆಯಾಗಿ ಬಿಡುವುದಿದೆ. ಜೀವಿತದುದ್ದಕ್ಕೂ ಸುಖ-ದುಃಖ ಪರಸ್ಪರ ನೆರಳಾಗಿವೆಯೋ ಎನ್ನುವಂತೆ ಭಾಸವಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಸುಖ ಎಂದರೇನೆಂದು ಕೇಳಿದರೆ; ಅದು ಕತ್ತಲಿನೊಳಗಿನ ಮಧುರವಾದ ಮೂರ್ಛೆ ಎಂದು ಸುಮಧುರವಾಗಿ ಹೇಳಬೇಕಾಗುತ್ತದೆ.

ಬಾಲ್ಯದಲ್ಲಿರುವ ಒಂದೇ ಒಂದು ಕಾಲ ಅದು ವರ್ತಮಾನ. ಆದರೆ ನಾವು ಬೆಳೆದಂತೆಲ್ಲಾ ಅನುಭವಿಸುವ ಕಾಲಮಾನಗಳು ವ್ಯತ್ಯಸ್ತವಾಗಿರುತ್ತವೆ. ನಮ್ಮವರ ಭೂತ ನಮಗೆ ವರ್ತಮಾನವಾಗಿ, ನಮ್ಮ ವರ್ತಮಾನವು ನಮ್ಮವರ ಭವಿಷ್ಯ ಆಗಿ ಬರುವುದು ಸಹ್ಯವಲ್ಲ. ಆಯಾ ಕಾಲವನ್ನು ಆ ಕಾಲದೊಳಗೇ ಬಿಟ್ಟು ಈ ನಿಮಿಷದ ಕಾಲದೊಳಗೆ ನಿಲ್ಲುವುದೇ ಬಾಳು. ಮತ್ತದು ಹೆಚ್ಚು ಬಾಳುವುದೂ ಹೌದು. ಶಾಪಕ್ಕೆ ಹೆದರುವ ನಾವು ಈ ಲೋಕದಲ್ಲಿ ಹುಟ್ಟಿ ಬಂದದ್ದೇ ಶಾಪಗ್ರಸ್ತರಾಗಿ ಎನ್ನುವ ಕಲ್ಪನೆಯಿರುವುದಿಲ್ಲ. ಆದರೆ ಜೀವನ ಶಾಪವಲ್ಲ. ಅದೊಂದು ದಿವ್ಯವಾದ ವರವಾದರೂ ಅನೇಕ ಶಾಪಗಳಿಂದ ಕೂಡಿದ್ದು ಎನ್ನುವುದಂತೂ ಸುಳ್ಳಲ್ಲ. ಹಾಂ..ಅಂದಹಾಗೆ ಮಕ್ಕಳು ಉತ್ತರಾಧಿಕಾರಿ, ವಾರಸ್ದಾರರಾಗುವುದು ಹೆತ್ತವರ ಒಳಿತು-ಕೆಡುಕುಗಳಿಗಷ್ಟೇ.

ನಮ್ಮೊಳಗಿನ ಬಹು ಸಹಜವಾದ ವಿಷಯಗಳತ್ತ ಆಗಾಗ ಗಮನವೀಯಬೇಕು. ಸಾಮಾನ್ಯವಾಗಿ ಅವುಗಳು ನಮ್ಮ ದಾರಿ, ಆಸಕ್ತಿ ಮತ್ತು ಬಾಳಿನ ಉದ್ದೇಶಗಳಿಗೆ ಬಹಳಷ್ಟು ಹತ್ತಿರವಿರುವುದನ್ನು ಕಾಣಬಹುದು. ಆದರೆ ನಾವು ಹಾಗೆ ಮಾಡದೆ ಇನ್ಯಾವುದರತ್ತಲೋ ಬೊಟ್ಟು ಮಾಡುತ್ತಿರುತ್ತೇವೆ. ಹಣತೆಯೊಂದು ಇನ್ನೊಂದು ಹಣತೆಗೆ ತನ್ನ ಬೆಳಕನ್ನು ನೀಡುವ ಹಾದಿಯಲ್ಲಿ ಬೆಳಕನ್ನೆಂದೂ ಕಳೆದುಕೊಳ್ಳುವುದಿಲ್ಲ ಎಂಬ ನಿಜದ ನೆನಪಿರಬೇಕಷ್ಟೆ.

* * * * * * * * * * * * * * * * *

ನಾನಿರುವುದೇ ಹೀಗೆ ಎಂಬ ಮನಸ್ಥಿತಿಯ ಹಿಂದೆ ಅವ್ಯಕ್ತವಾದೊಂದು ನೋವಿನೆಳೆಯ ಜೊತೆಗೆ ತುಂಡು ಅಹಂಕಾರವೂ ಸೇರಿರುತ್ತದೆ. ಸಂಕೀರ್ಣ ಮನಸ್ಸುಗಳಾಟವಿದು. ತಾನೇನಾಗಿದ್ದೇನೆಯೋ ಅದುವೇ ತಾನೆಂಬುದು ಅಹಂಮಿನ ಒಂದು ರೂಪ. ಅದನ್ನು ಸ್ವಾಭಿಮಾನವೆಂದು ಕರೆಯುವವರೂ ಇದ್ದಾರೆ. ಆದರೆ ಅವೆರಡರ ನಡುವಿನ ತೆಳು ಗೆರೆಯನ್ನು ಗುರುತಿಸದೆ ಹೊದದುದರ ಲಕ್ಷಣವದು. ಕೊನೆ ಪಕ್ಷ ಅದನ್ನು ಗಮನಿಸಿದ್ದೇ ಆದಲ್ಲಿ ಅಹಂ ಅನ್ನು ಎಲ್ಲಿಳಿಸಬೇಕೋ ಅಲ್ಲಿಳಿಸಿ ಸ್ವಾಭಿಮಾನದಿಂದ ಬೆಳಗಬಹುದು. ಮನುಷ್ಯನನ್ನು ಬಿಟ್ಟರೆ ಇತರ ಪ್ರಾಣಿಗಳಿಗೆ ಶಾರೀರಿಕ ಸುಖ-ದುಃಖಗಳಾಚೆಯ ಅನುಭೂತಿ ಇರುವುದಿಲ್ಲ. ಬೇಡ ಬೇಡವೆನ್ನುತ್ತಲೇ ಬೇಕು ಬೇಕೆನ್ನುವ ಹಂಬಲಗಳು ಜೊತೆಯಲ್ಲೇ ಇರುತ್ತವೆ. ಕರುಣೆಯನ್ನು ಬಯಸುತ್ತಲೇ ಅನುಭೂತಿಯನ್ನು ಕಾಣಬಾರದೇಕೆಂಬ ಪ್ರಶ್ನೆಯೂ ಮೂಡುತ್ತಿರುತ್ತದೆ. ಕೆಲಸ ಕಾರ್ಯಗಳು ವ್ಯತ್ಯಸ್ತವಾಗಿರುತ್ತವೆ ಎನ್ನುವುದೇನೋ ನಿಜ. ಆದರೆ ಮನಸ್ಸಿನಾಟಕ್ಕೆ ಕೊನೆ ಎಂತು?

ಎಲ್ಲರಿಗೂ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಹಾಗಂತ ಸುಮ್ಮನಿರುವುದನ್ನು ಬಿಟ್ಟು ಅವುಗಳನ್ನೆಲ್ಲ ಮೈಮೇಲೆ ಎಳೆದುಕೊಂಡು ಅನ್ಯರ ದೃಷ್ಟಿಯಲ್ಲಿ ಕೀಳಾಗಿಯೋ ಮೇಲಾಗಿಯೋ ಕಾಣಿಸಿಕೊಳ್ಳುತ್ತ, 'ಪಾಪ' 'ಅದ್ಭುತ' ಎಂಬೆರಡು ಪದಗಳು ಸೃಷ್ಟಿಸುವ ರೋಮಾಂಚನಕ್ಕೆ ಶರಣಾಗುತ್ತಿರುತ್ತೇವೆ. ನಮ್ಮದೇ ಕಣ್ಣಲ್ಲಿ ಕೀಳಾಗಿಯೂ, ಮೇಲಾಗಿಯೂ ಕಾಣಿಸಿ, ಪರಿತಪಿಸಿ ಆತ್ಮ ಸಂತೋಷವನ್ನು ಹೀಗೂ ಕಾಣುತ್ತಿರುತ್ತೇವೆ. ಒಂದೋ ಸಂತಸಿಸುತ್ತಾ ಇಲ್ಲ ಸಂತೈಸಿಕೊಳ್ಳುತ್ತ ದಿನಗಳನ್ನು ದೂಡುತ್ತಿರುತ್ತೇವೆ.

ನಮ್ಮ ನೋವು, ಆನಂದ ಎಲ್ಲರದ್ದೂ ಆಗಿದ್ದ ಕಾಲವೊಂದರಲ್ಲಿ ನಾವಿದ್ದೆವು. ಕಾಲ ಉರುಳಿದಂತೆ ನೋವು, ನಲಿವುಗಳು ಕೇವಲ ನಮ್ಮದಾಯಿತು. ಹಂಚಿಕೊಳ್ಳಲು, ನೆಚ್ಚಿಕೊಳ್ಳಲು ಮನಸ್ಸುಗಳು ಹಿಂದೇಟು ಹಾಕತೊಡಗಿದವು. ಕಾರಣವಿಷ್ಟೆ; ಇತರರ ನೋವಲ್ಲಿ ಪಾಲುದಾರರಾದರೆ, ಅವರ ಖುಷಿಯಲ್ಲಿ ಭಾಗಿಯಾದರೆ ನೋಡುವ ಇತರೆ ಕಣ್ಣುಗಳು, ಚಿಂತಿಸುವ ಹಲವು ಮನಸ್ಸುಗಳು, ಸ್ಪಂದಿಸುವ ಅದೆಷ್ಟೋ ಹೃದಯಗಳು ಏನಂದುಕೊಂಡಾವೋ? ಎಂಬ ಚಿಂತೆ. ಯಾಕೆ ಬೇಡದ ಉಸಾಬರಿ ಎಂಬ ಭಾವವು ನಮ್ಮನ್ನು ನಾವಾಗಿರಲು ಬಿಡುವುದಿಲ್ಲ.

ಈ ನಿಲುವು ಮುಂದೊಂದು ದಿನ ಅಲ್ಲಿಗೂ-ಇಲ್ಲಿಗೂ ಎಲ್ಲೆಲ್ಲಿಗೂ ಸಲ್ಲದವರಂತೆ ಮಾಡಿಬಿಡುತ್ತದೆಂಬ ವಿವೇಕವೂ ಅಂದಿಗೆ ಹೊಳೆದಿರುವುದಿಲ್ಲ. ಎಲ್ಲವನ್ನೂ ಆಹ್ಲಾದಿಸುತ್ತಾ, ಎಲ್ಲರಿಗೂ ಒಳ್ಳೆಯವರಾಗುತ್ತಾ ಸಾಗುವ ಬಾಳು ಬಹು ದುಸ್ತರವಾದದ್ದು. ಎಲ್ಲರ ದೃಷ್ಟಿಯಲ್ಲೂ ಒಳ್ಳೆಯವರಾಗುವವರು ತಮ್ಮದೇ ದೃಷ್ಟಿಯಲ್ಲಿ ತುಚ್ಚರೆನಿಸಿಕೊಂಡು ಬಿಡುವುದು ಆ ಹೊತ್ತಿಗೆ ತಿಳಿದು ಬಂದಿರುವುದಿಲ್ಲವಷ್ಟೆ. ಕಾರಣ ನಮ್ಮನ್ನು ನಾವು ಶೋಧಿಸಿಕೊಂಡಿರುವುದಿಲ್ಲವಲ್ಲ. ಬಂಧ ಎನ್ನುವುದು ಅನುಭವವಕ್ಕೆ ದಕ್ಕುವ ಒಂದು ಅನುಭೂತಿ. ಅದಕ್ಕಿಂತ ಹೆಚ್ಚಿಗೆ ಏನನ್ನೂ ಹೇಳಲಾಗದು.

* * * * * * * * * * * * * * * * *

ಕಾಲವೇ ನಮ್ಮನ್ನು ಬಂಧಿಯಾಗಿಸುತ್ತದೆನ್ನುವ ವಿವೇಕವೂ ಇಲ್ಲದೆ ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಚಿಂತಿಸುವುದರಲ್ಲೇ ಹೆಚ್ಚಿನ ಕಾಲವನ್ನು ಕಳೆಯುತ್ತೇವೆ. ಇನ್ನೊಬ್ಬರ ಯೋಚನೆಯೊಳಗೆ ನಾವು ಹೇಗಿರಬೇಕು ಎನ್ನುವುದರೊಳಗೇ ನಾವು ನಾವಾಗಿ ಹೇಗಿರಬೇಕೆನ್ನುವ ವಿಚಾರವೇ ಮಾಸಿ ಹೋಗಿರುತ್ತದೆ.

ಎಲ್ಲರೂ ತಮಗೆ ಸಮಾನರೇ, ನುಡಿದು ಯಾಕೆ ಹಾಳಾಗಬೇಕೆಂದು ಹೇಳುವ ಮನಸ್ಸು ಮತ್ತದು ತೋರುವ ಬುದ್ಧಿಯು ತಪ್ಪುಗಳನ್ನೂ ಸರಿಯೆಂದೇ ಸಾರಿ ಬಿಡುವುದಿದೆ. ಅಂತಹ ಕಾಲಘಟ್ಟದೊಳಗೆ ನಿಜದ ಹಾದಿಯನ್ನು ಹುಡುಕುತ್ತಲೇ ಇರುವಾಗ ಅವರವರು ಕಂಡುಕೊಂಡ, ಅನ್ಯರು ತೋರಿದ ಹಾದಿಯೇ ನಿಜವಾದದ್ದೇನು? ಹಾಗಾದರೆ ನಿಜವಾಗಿಯೂ ನಿಜ ಮತ್ತು ನಿಜದ ಹಾದಿ ಯಾವುದು? ‘ಏನಂದುಕೊಂಡಾರೋ’ ಎಂಬ ನಿತ್ಯದ ಭಯದೊಳಗೆ ಬದುಕನ್ನು ಕಟ್ಟಿಕೊಳ್ಳುವವರ ಗೋಳಿನ ಕತೆಯನ್ನು ಏನೆಂದು ಬಣ್ಣಿಸುವುದು ?

ಅವರಿವರಿಗೆ ಅಂಜುತ್ತ, ಇನ್ನೊಬ್ಬರೆದುರು ಬಣ್ಣದ ಪುಗ್ಗೆಯನ್ನು ಹಾರಿಸುತ್ತ, ಬಹು ಪರಾಕುಗಳೊಂದಿಗೆ ಆಹ್ಲಾದವನ್ನು ನೀಡುತ್ತಾ, ನಮ್ಮತನವನ್ನು ನಾವೇ ಕರಗಿಸಿ ಮುಗಿಸಿ ಬಿಡುತ್ತೇವಲ್ಲಾ... ಜೀವನವು ಊಸರವಳ್ಳಿಯಾಗುವುದು, ಬಾಳು ಗೋಸುಂಬೆಯಂತಾಗುವುದೆಲ್ಲ ಇಂತಹದ್ದೇ ಕ್ಷಣಗಳಲ್ಲಿ. ಅಷ್ಟಕ್ಕೂ ರಾಜಕಾರಣಿಗಳಿಗಿಂತ ಬಂಧ- ಬಂಧುಗಳೇನು ಕಮ್ಮಿ ಅಂದುಕೊಂಡಿರೇ ! ಛೇ.. ಖಂಡಿತಾ ಇಲ್ಲ.

ಬಂಧಗಳೊಳಗೂ ರಾಜಕಾರಣದ ಛಾಯೆ ದಟ್ಟವಾಗಿ ಹಬ್ಬಿದೆ. ಮತದಾರರೇ ಇಲ್ಲದ ಚುನಾವಣೆಯಲ್ಲಿ ಎಲ್ಲರೂ ಚುನಾವಣಾ ಕಣದ ಅಭ್ಯರ್ಥಿಗಳೇ. ಅವರವರ ವೋಟು ಅವರವರಿಗಷ್ಟೇ. ಅಂದಮೇಲೆ ಎಲ್ಲರೂ ವಿಜಯೀಭವ. ಕುಟು೦ಬ ರಾಜಕೀಯ ಮತ್ತದರ ತಂತ್ರಗಾರಿಕೆಯು ರಾಜ್ಯ-ರಾಷ್ಟ್ರ ರಾಜಕಾರಣಕ್ಕಿಂತಲೂ ಮಿಗಿಲಾದದ್ದು. ಒಳ್ಳೆಯವರಾಗುವ, ಒಳ್ಳೆಯದು ಮಾಡುವ ಚಟ ನಶೆಯಿದ್ದಂತೆ. ಅದರ ಅಮಲು ಇಳಿಯುವುದು ತುಸು ಕಷ್ಟವೇ ಸರಿ. ಒಂದೊಮ್ಮೆ ಆ ನಶೆಯಿಂದ ಹೊರಬರಲಾಗುವುದಿಲ್ಲ. ಅದರ ರುಚಿ ಅಂತಹದ್ದು. ಸದಾ ಒಳ್ಳೆಯವನೆನಿಸುವ ಗೀಳು ಅಪಾಯವನ್ನು ತರುವುದೇ ಹೆಚ್ಚು. ಇನ್ನೊಬ್ಬರ ಮಾತಿಗೆ, ಅಭಿಪ್ರಾಯಕ್ಕೆ ಡೋಂಟ್ ಕೇರ್ ಎನ್ನುವ ಮನಸ್ಥಿತಿಗೆ ಇನ್ನೊಬ್ಬರ ಕುರಿತಾಗಿ ಮಾತನಾಡುವ ಹಕ್ಕಿಲವಷ್ಟೇ. ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆಯವರಾಗುವುದಿದೆ ನೋಡಿ ಅದೊಂದು ಮದ್ದಿಲ್ಲದ ವ್ಯಸನ ಕಣ್ರೀ.

ನಮ್ಮ ಮಾತುಗಳಲ್ಲಿ, ನಿತ್ಯದ ವ್ಯವಹಾರಗಳಲ್ಲಿ ವಾಸ್ತವದ ರೇಖೆಯ ಮೇಲೆ ನಡೆಯುತ್ತಿರುವಾಗ ರುಚಿಗೆ ತಕ್ಕಷ್ಟು ಭಾವನೆಯನ್ನು ಪರಿಸ್ಥಿತಿ, ಪರಿಸರಕ್ಕನುಗುಣವಾಗಿ ಬಡಿಸುತ್ತಿರಬೇಕು. ಹೆಚ್ಚಲ್ಲದ ಕಡಿಮೆಯೂ ಅಲ್ಲದ ಹದವಾದ ಭಾವ ಮಿಶ್ರಣವು ಮಾತಿನ ಓಘಕ್ಕೆ, ಹಿಡಿದ ಉದ್ದೇಶಕ್ಕೆ ಅನುಗುಣವಾಗಿದ್ದರೆ ಹಿಡಿದ ಮೂಲ ಕಾರ್ಯದ ಸಾಧನೆ ನೆರವೇರಲು ಹೆಚ್ಚಿನ ಹೊತ್ತೇನೂ ಬೇಕಿಲ್ಲ. ಪ್ರತಿ ನಿರ್ಗಮನವು ಹೊಸದೊಂದು ಪ್ರವೇಶವನ್ನು, ಪ್ರತಿ ಕೊನೆಯು ನವ ಆರಂಭವನ್ನು ಕಲ್ಪಿಸುತ್ತದೆ. ಕಾರ್ಮೋಡದೊಳಗೆ ಬೆಳ್ಳಿಗೆರೆಯು ಮೂಡುವಂತೆ ಬಾಳಲ್ಲಿಯೂ ಭರವಸೆಗಳು ಮಿನುಗುತ್ತಿರುತ್ತವೆ.ಬದುಕೆಂದರೆ ಸಾಧ್ಯತೆಗಳ ಗುಚ್ಛ. ಭರವಸೆಯನ್ನು ಕಳೆದುಕೊಳ್ಳಬಾರದಷ್ಟೆ.

(ಕಲಾಕೃತಿ: ರವಿ ಎಸ್. ಕೋಟಗದ್ದೆ)

ಇದನ್ನು ಓದಿ:

ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ

ಸಖನೂ ಸುಖವೂ ಒಂದೇ ಆಗುವ ಕ್ಷಣ

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...