ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ಇದು ಸಕಾಲ


‘ಬೇಂದ್ರೆಯವರ ಹದಿನಾಲ್ಕು ನಾಟಕಗಳ ಅಭಿವ್ಯಕ್ತಿ, ಆಶಯ ಹಾಗೂ ರಂಗ ಭಾಷೆಯ ಹಿನ್ನೆಲೆಯಲ್ಲಿ ಓದಿಗೆ ಅವಕಾಶ ಮಾಡಿಕೊಳ್ಳಬೇಕಾದ ಅಗತ್ಯ ಕಾಲರೂಪಿಯಾಗಿದೆ’ ಎನ್ನುತ್ತಾರೆ ಲೇಖಕ, ರಂಗಕರ್ಮಿ ಡಾ.ಬೇಲೂರು ರಘುನಂದನ್. ಅವರು 'ಬುಕ್ ಬ್ರಹ್ಮ'ಕ್ಕಾಗಿ ಬೇಂದ್ರೆ ನಾಟಕಗಳ ರಂಗ ಪ್ರವೇಶ ಎಂಬ ವಿಶೇಷ ಸರಣಿಯಲ್ಲಿ ಲೇಖನಗಳನ್ನು ಬರೆಯಲಿದ್ದು, ಪ್ರಸ್ತುತ ಬೇಂದ್ರೆ ನಾಟಕಗಳ ಕುರಿತು ವಿಶ್ಲೇಷಿಸಿದ್ದಾರೆ. ಅದರ ಪ್ರವೇಶಿಕೆ ಇಲ್ಲಿದೆ.

ಕನ್ನಡ ಕಾವ್ಯ ಜಗತ್ತು ಬೇಂದ್ರೆಯವರನ್ನು ಭಿನ್ನ ಭಿನ್ನ ಆಯಾಮಗಳಲ್ಲಿ ಆವರಿಸಿಕೊಂಡಿದೆ. ಜೀವನದರ್ಶನವನ್ನು ಸಹಜವಾಗಿ ತಮ್ಮ ಅಭಿವ್ಯಕ್ತಿಗಳಲ್ಲಿ ಸಹೃದಯ ಲೋಕಕ್ಕೆ ದಾಟಿಸುವ ಬೇಂದ್ರೆ ಕವಿಯಾಗಿ ಪಡೆದ ಯಶಸ್ಸನ್ನು ದಕ್ಕಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನಾವೆಲ್ಲರೂ ನಾಟಕಕಾರರಾಗಿ ಬೇಂದ್ರೆಯವರನ್ನು ಅರಗಿಸಿಕೊಳ್ಳುವ, ಅಭ್ಯಾಸ ಮಾಡಬೇಕಾದ ಅಗತ್ಯ ಅನಿವಾರ್ಯತೆಗಳೂ ಇವೆ. ಲೋಕದ ಸಂಕಟ ವ್ಯಕ್ತಿಯದ್ದೇ ಆದಾಗ ಅದು ಸೃಜನಶೀಲತೆಯಲ್ಲಿ ಮೈದಳೆಯುತ್ತದೆ. ಸಂಘರ್ಷ ಮಾತಿನೊಂದಿಗೆ ಬೆರೆತಾಗ ಸಂಭಾಷಣೆ ಶಕ್ತಿಯುತವಾಗಿ ಅಂತರಂಗವನ್ನು ತಟ್ಟುತ್ತದೆ. ಕವಿತೆಯಲ್ಲಿ ಮಾತು ಅಲಂಕಾರವಾದರೆ, ನಾಟಕದಲ್ಲಿನ ಮಾತು ಸರಳ ಸಂವಹನಕ್ಕೆ ಬಹುದೊಡ್ಡ ಸಾಧ್ಯತೆಯಾಗುತ್ತದೆ. ಸಮಾಜದ ಕಣ್ಣು ನಾಟಕಕಾರನ ಕಣ್ಣಿನ ದೃಷ್ಟಿಯಾದಾಗ ಮೂಡುವ ಮಾತುಗಳೆಲ್ಲ ಲೋಕ ವ್ಯಾಪಾರದ ಪ್ರತಿನಿಧಿಗಳಂತೆ ಕಾಣುತ್ತವೆ. ಅಭದ್ರತೆ ಜಾಗೃತವಾದಷ್ಟು ಕಲಾಕೃತಿಗೆ ಮಾತು ಮೂಡುತ್ತಾ ಹೋಗುತ್ತದೆ. ನಾಟಕ ಸಾಹಿತ್ಯ ಹೀಗೆ ಮಾತಿನ ಮೂಲಕ ಸಾಮಾಜಿಕವಾಗುತ್ತದೆ. ನವೋದಯ ಕಾಲಘಟ್ಟದಲ್ಲಿ ಕುಟುಂಬ ಮತ್ತು ಸಾಮಾಜಿಕ ಚಿತ್ರಣವನ್ನು ಸರಳವಾದ ಭಾಷೆ, ನಿರೂಪಣೆಗಳೊಂದಿಗೆ ನಾಟಕ ಲೋಕಕ್ಕೆ ತೆರೆದುಕೊಂಡ ಕವಿ ಬೇಂದ್ರೆಯವರು. ಬೇಂದ್ರೆಯವರು ಕವಿತೆಗಳಲ್ಲಿ ನಮಗೆ ಕಂಡ ಬಗೆಗಿಂತ ನಾಟಕಗಳಲ್ಲಿ ಕಂಡದ್ದು ಬೇರೆಯೇ. ಕಾವ್ಯ ಸತ್ವದ ಮೂಲಕ ಅತ್ಯಂತ ಶ್ರೇಷ್ಠ ಕಾವ್ಯ ರಚನೆಗಳನ್ನು ಮಾಡಿದ ಕವಿ ನಾಟಕಗಳನ್ನು ಅತ್ಯಂತ ಸರಳ, ನಿರೂಪಣೆಗೆ ಸೀಮಿತಗೊಳಿಸಿದ್ದು ಯಾಕೆ? ಎಂಬ ಪ್ರಶ್ನೆ ಒಟ್ಟು ಬೇಂದ್ರೆಯವರ ಹದಿನಾಲ್ಕು ನಾಟಕಗಳನ್ನು ಓದಿದಾಗ ಮುಖ್ಯವಾಗಿ ಕಾಣುತ್ತದೆ. ಸರಳ ಎನ್ನುವುದು ಅನಗತ್ಯ ಎನ್ನುವುದು ಈ ಮಾತಿನ ಆಶಯವಲ್ಲ.

ನವೋದಯ ಕಾಲಘಟ್ಟದಲ್ಲಿ ಅಥವಾ ಆಧುನಿಕ ಸಾಹಿತ್ಯ ಸಂದರ್ಭವೇ ಅನೇಕ ಹೊಸತುಗಳಿಗೆ ಎದುರಾಗುತ್ತಿರುವಾಗ ಕಾವ್ಯವನ್ನು ಪ್ರಧಾನ ಭೂಮಿಕೆಯಾಗಿ ಕಾಲವೇ ಆರಿಸಿಕೊಂಡಿದ್ದರೂ, ಕಾವ್ಯವನ್ನು ಹೊರತುಪಡಿಸಿ ಇನ್ನಿತ್ಯ ಸಾಹಿತ್ಯ ಪ್ರಕಾರಗಳು ಕನ್ನಡ ಸಾಹಿತ್ಯದಲ್ಲಿ ದಾರಿಗಳನ್ನು ಕಂಡುಕೊಳ್ಳುತ್ತಿದ್ದವು. ಕಾವ್ಯದಲ್ಲೇ ಕಥನ, ನಾಟಕ, ವಿಮರ್ಶೆ ಮತ್ತಿತರ ಪ್ರಕಾರಗಳ ಅಂಶಗಳನ್ನು ತನ್ನೊಳಗೆ ಸೇರಿಸಿಕೊಂಡ ಸಾಹಿತ್ಯ ಪರಂಪರೆಯಿಂದ ಬಹುದೊಡ್ಡ ಜಿಗಿತವನ್ನು ಆಧುನಿಕ ಕನ್ನಡ ಸಾಹಿತ್ಯದ ಮಾರ್ಗದಲ್ಲಿ ಹುಡುಕಿಕೊಳ್ಳಬಹುದು. ಕಾವ್ಯಕ್ಕಿರುವ ಸಾವಿರಾರು ವರ್ಷಗಳ ಹಿನ್ನೆಲೆಯಿಂದ ತಪ್ಪಿಸಿಕೊಳ್ಳಲಾಗದಿದ್ದರೂ ಹೊಸ ಪ್ರಕಾರಗಳ ಅಭಿವ್ಯಕ್ತಿ ಕ್ರಮ ದುಡಿಸಿಕೊಳ್ಳಲು ನವೋದಯದ ಕಾಲದ ಅನೇಕರು ಹುಡುಕಾಟ ಮಾಡಿದ್ದಾರೆ. ಕುವೆಂಪು ಅವರು ತಮ್ಮ ನಾಟಕಗಳಲ್ಲಿ ಕಾವ್ಯವನ್ನೇ ಬರೆದು, ಕಾವ್ಯದ ಮೂಲಕವೇ ಮಾತು ಸಂಭಾಷಣೆಯಾಗುವಂತೆ ಕೃತಿ ರಚಿಸಿದರು. ಆದರೆ ಬೇಂದ್ರೆಯವರು ತಮ್ಮ ನಾಟಕಗಳಲ್ಲಿ ಕವಿಯ ಮಾತಿಗಿಂತ ಮಿಗಿಲಾಗಿ ಲೋಕದ ಮಾತುಗಳನ್ನೇ ತಮ್ಮ ನಾಟಕಗಳ ಮೂಲಭಿತ್ತಿಯಾಗಿಸಿಕೊಂಡರು. ಅಭಿವ್ಯಕ್ತಿ, ಕಥನ, ವಸ್ತು, ನಿರೂಪಣೆ ಎಲ್ಲ ದೃಷ್ಟಿಯಿಂದಲೂ ಇಬ್ಬರೂ ಮಹಾಕವಿಗಳು ಕನ್ನಡ ನಾಟಕ ಪ್ರಪಂಚದಲ್ಲಿ ತಮ್ಮ ಚಿಂತನಾಕ್ರಮಗಳ ಮೂಲಕ ಆಧುನಿಕ ಸಾಹಿತ್ಯ ಸಂದರ್ಭದ ಪ್ರವೇಶಿಕೆಯಾಗುತ್ತಿದ್ದ ನಾಟಕದ ಜಗತ್ತನ್ನು ಭಿನ್ನವಾಗಿ ಕಟ್ಟಲು ಪ್ರಯತ್ನಿಸಿದರು. ಇದು ಕೇವಲ ಇಬ್ಬರು ಕವಿಗಳ, ನಾಟಕಕಾರರ ಹುಡುಕಾಟ ಮಾತ್ರವಲ್ಲ, ಹೊಸ ಪ್ರಕಾರವಾಗಿ ಬೆಳೆಯುತ್ತಿದ್ದ ಆಧುನಿಕ ರಂಗಭೂಮಿಯ ಹೊಸ ಹುಡುಕಾಟಗಳೂ ಆಗಿದ್ದವು. ಈ ಕಾರಣಕ್ಕೆ, ಬೇಂದ್ರೆಯವರ ನಾಟಕಗಳನ್ನು ಮತ್ತೆ ಮತ್ತೆ ಓದುವ ತುರ್ತು ಕನ್ನಡ ನಾಟಕ ಜಗತ್ತು ಬೆಳೆದಂತೆಲ್ಲ ನಮ್ಮ ಮುಂದೆ ನಿಲ್ಲುತ್ತದೆ. ಏಕೆಂದರೆ ಇದು ಕೇವಲ ನಾಟಕದ ಓದು ಮಾತ್ರವಲ್ಲ ಕಾಲದ ಓದು ಕೂಡ ಆಗಿದೆ.

ಕಾಲೇಜು ದಿನಗಳಿಂದಲೇ ಸಾಹಿತ್ಯ ರಚನೆ ಮಾಡಲು ಆರಂಭಿಸಿದ ಬೇಂದ್ರೆಯವರು ಸಮಾಜವನ್ನು ನೋಡಿದ ದೃಷ್ಟಿಕೋನ ಅವರ ನಾಟಕಗಳಲ್ಲೂ ಪ್ರತಿಬಿಂಬಿಸಿದೆ. 1921ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ "ಗೆಳೆಯರ ಗುಂಪು" ಕೂಡ ಬೇಂದ್ರೆಯವರ ನಾಟಕಗಳ ವಸ್ತು ಮತ್ತು ಆಶಯವನ್ನು ನಿರ್ವಹಿಸಿದೆ. ಕೌಟುಂಬಿಕ ವ್ಯವಸ್ಥೆ ಮತ್ತು ಆರೋಗ್ಯಯುತ ಸಮಾಜ ಬೇಂದ್ರೆಯವರ ಎಲ್ಲ ನಾಟಕಗಳ ಮೂಲಭಿತ್ತಿಯಾಗಿದೆ. ಆಗಿನ್ನೂ ಸ್ವಾತಂತ್ರ್ಯ ಚಳವಳಿ ಬಿಸಿ ಏರಿದ್ದ ಸಮಯ. ಅಧಿಕಾರ ಮತ್ತು ಸ್ವತಂತ್ರವನ್ನು ಬೇಂದ್ರೆಯವರು ತಮ್ಮ “ಗರಿ” ಕವನ ಸಂಕಲನದಲ್ಲಿನ “ನರಬಲಿ” ಅಭಿವ್ಯಕ್ತಿಸಿದ ನೆಲೆಯೇ ಅವರ ನಾಟಕಗಳಲ್ಲೂ ಕೂಡ ಭಿನ್ನ ಭಿನ್ನ ಆಯಾಮಗಳಲ್ಲಿ ಸಾಮಾಜಿಕ ಸುಸ್ಥಿರತೆ ಬಹು ರೂಪಗಳನ್ನು ಪಡೆದುಕೊಂಡಿದೆ. ಅಷ್ಟೇ ದೇಶಪ್ರೇಮ ಮತ್ತು ದೇಶಭಕ್ತಿಯ ನಿರ್ವಚನವನ್ನು ಬೇಂದ್ರೆಯವರು ತಮ್ಮ ನಾಟಕಗಳಲ್ಲಿ ಅಗತ್ಯ ಅನುಗುಣವಾಗಿ ಕೃತಿಯಲ್ಲಿ ಬೆರೆಸಿದ್ದಾರೆ. ಸ್ವತಃ ತಾವೂ ಚಳವಳಿಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದ ಬೇಂದ್ರೆಯವರು ತಮ್ಮ ನಾಟಕಗಳಲ್ಲಿ ದೇಶವೆನ್ನುದನ್ನು ಕುಟುಂಬ ವ್ಯವಸ್ಥೆಯ ಆಯಕಟ್ಟಿನ ಮೇಲೆ ನೋಡಿದ್ದಾರೆ.

ಬೇಂದ್ರೆಯವರ ಮಾತೂ, ಅಭಿವ್ಯಕ್ತಿ ಎಲ್ಲವೂ ಕಾವ್ಯದ ರಸಪಾಕದಲ್ಲಿ ಅದ್ದಿ ತೆಗೆದಂತೆ ಇರುತಿತ್ತು. ಆದರೆ, ಬೇಂದ್ರೆಯವರ ಹದಿನಾಲ್ಕು ನಾಟಕಗಳಲ್ಲೂ ಕಾವ್ಯ ಸತ್ವ ಮರೆಯಾಗಿದ್ದು, ಆಡು ನುಡಿಯೇ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಕವಿ ಬೇಂದ್ರೆಯವರು ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ನಾಟಕ ರಚನೆಗೆ ಕಥಾ ವಸ್ತುವನ್ನು ಪುರಾಣ, ಮಹಾಕಾವ್ಯ ಇಲ್ಲವೇ ಜನಪದದಿಂದ ಎರವಲು ತರದೇ, ತಮ್ಮ ಕಂಡ ಸಾಮಾಜಿಕ ಕಥನಗಳನ್ನಾಗಿ ಮಾಡಿರುವುದು ವಿಶೇಷ. ದಾರ್ಶನಿಕ ಕವಿಯ ಈ ನಿಲುವು ನಾಟಕ ಮತ್ತು ಅದರ ಭಾಷೆ ತಂತ್ರವನ್ನು ಜನ ಜೀವನದ ಜೊತೆಗೆ ಕೊಂಡೊಯ್ಯಬೇಕು ಎನ್ನುವುದು ನಾಟಕಕಾರ ಬೇಂದ್ರೆಯವರ ನಿಲುವು ಎಂಬಂತೆ ತೋರುತ್ತದೆ. ಕುರುಡು ಕಾಂಚಾಣ, ನರಬಲಿ, ಒಲವೇ ನಮ್ಮಬದುಕು ಮುಂತಾದ ಕವಿತೆಗಳಲ್ಲಿ ಬೇಂದ್ರೆಯವರ ಸಾಮಾಜಿಕ ದೃಷ್ಟಿ ಮತ್ತು ಅವರ ನಾಟಕಗಳಲ್ಲಿಯ ಸಾಮಾಜಿಕ ದೃಷ್ಟಿ ಬೇರೆ ಬೇರೆಯಲ್ಲದೇ ಇದ್ದರೂ ಅದರ ನಿರೂಪಣೆಯ ದೃಷ್ಟಿಯಿಂದ ಗಮನಿಸಿದರೆ ಬಹುದೊಡ್ಡ ಅಂತರ ಕಾಣುತ್ತದೆ. ಆಧ್ಯಾತ್ಮದ ವಿಷಯದಲ್ಲಿ ಅವರು ಒಲವು ಬೆಳೆಸಿಕೊಂಡಿದ್ದ ಬೇಂದ್ರೆಯವರು ಅರವಿಂದರ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದರು. ಬೇಂದ್ರೆಯವರ ಕಾವ್ಯದಲ್ಲಿ ಹುಲುಸಾಗಿ ಕಾಣುವ ಆಧ್ಯಾತ್ಮ, ಅವರ ನಾಟಕಗಳಲ್ಲಿ ಲೌಕಿಕದ ಉಡುಗೆಯನ್ನು ತೊಟ್ಟಿರುವುದನ್ನು ಗಮನಿಸಬಹುದು.

ಆಧುನಿಕ ಕನ್ನಡ ರಂಗಭೂಮಿಯ ಹೊಸ ತಲೆಮಾರಿನ ನಾಟಕಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುಟುಂಬ ಪ್ರಧಾನ ನೆಲೆಯಲ್ಲಿ ಕಾಣುತ್ತದೆ. ಟಿ.ಪಿ ಕೈಲಾಸಂ, ಸಂಸ, ಶ್ರೀರಂಗರು ಅಥವಾ ಇನ್ನಿತರ ನಾಟಕಕಾರರು ಕುಟುಂಬದ ಮೂಲಕವೇ ಇನ್ನಿತರ ಸಾಮಾಜಿಕ ಕಥನಗಳನ್ನು ಶೋಧಿಸುವುದು ನವೋದಯ ಕಾಲದ ಅಭಿವ್ಯಕ್ತಿಗಳಲ್ಲಿ ಮುಖ್ಯವಾಗಿ ಕಾಣುತ್ತದೆ. ಸಾಮಾಜಿಕ ನಾಟಕಗಳು ಎಂದೊಡನೆ ಕುಟುಂಬ ಮತ್ತು ಸಮಾಜವನ್ನು ಪ್ರಾಥಮಿಕ ಅಗತ್ಯತೆಗಳೆಂಬಂತೆ ಕನ್ನಡದ ನಾಟಕ ಜಗತ್ತು ಕಂಡಿದೆ. (ಕುವೆಂಪು ಪುರಾಣ ಮತ್ತು ಮಹಾಕಾವ್ಯಗಳನ್ನು ಸಾಮಾಜಿಕಗೊಳಿಸಿದರು). ಬೇಂದ್ರೆಯವರು ತಮ್ಮ ಎಲ್ಲ ನಾಟಕಗಳಲ್ಲೂ ಸಾಮಾಜಿಕ ನೆಲೆಯೆಂಬುದನ್ನು ಜನಜೀವನದ ನೆಲೆ ಎಂಬುದಾಗಿಯೇ ಕಂಡುಕೊಂಡಿದ್ದಾರೆ. ನಾಟಕ ಬರೆಯುವ ಮತ್ತು ನಾಟಕ ಆಡುವ ಎರಡೂ ಸಾಧ್ಯತೆಗಳು ಜನಕೇಂದ್ರಿತವಾಗಿರಬೇಕು. ಜನ ಸಮುದಾಯದ ನಡುವಿನ ಕಥನಗಳೇ ಆಗಿರಬೇಕು ಮತ್ತು ತನ್ನ ಕಾಲದ ಜನಜೀವನದ ಮಾದರಿಗಳೇ ಆಗಿರಬೇಕು ಎಂಬ ನಿಲುವು ಬೇಂದ್ರೆಯವರ ನಾಟಕಗಳಲ್ಲಿ ಕಾಣುತ್ತದೆ. ಈ ಸೂಕ್ಷ್ಮ ಅಂಶ ಜನಸಂಸ್ಕೃತಿಯ ನೆಲೆಗಳನ್ನು ಪ್ರಧಾನ ಭೂಮಿಕೆಯನ್ನಾಗಿಸುವ ಸಾಂಸ್ಕೃತಿಕ ನಿರೀಕ್ಷೆ ಮತ್ತು ತುರ್ತುಗಳನ್ನು ನಮ್ಮ ಮುಂದಿಡುತ್ತದೆ. ಕನ್ನಡ ರಂಗಭೂಮಿ ಇಲ್ಲಿಯತನಕ ಅನೇಕ ಪ್ರಯೋಗಗಳನ್ನು ಕಾಲಕಾಲಕ್ಕೆ ಮಾಡುತ್ತಾ ಬಂದಿದೆ. ಬೇಂದ್ರೆಯವರ ನಾಟಕಗಳೂ ಕೂಡ ಈ ಕಾಲದ ಜೊತೆಗೆ ಚಲಿಸಿವೆ. ನಾಟಕ ಸಾಹಿತ್ಯ ಕೃತಿ ರಂಗಕೃತಿಯಾಗುವುದೇ ಒಂದು ಬೆರಗು. ಆ ಬೆರಗು ಸಾಹಿತ್ಯ ಕೃತಿಯಲ್ಲಿ ಲಭ್ಯವಿದ್ದರೆ ರಂಗ ಭಾಷೆಗೆ ಸತ್ವ ಸೇರಿಕೊಳ್ಳುತ್ತದೆ. ನಾಟಕ ರಂಗದ ಮೇಲೂ, ಪ್ರೇಕ್ಷಕನ ಅಂತರಂಗದಲ್ಲೂ ದರ್ಶನವಾಗುತ್ತದೆ. ಈ ಅಂಶಗಳನ್ನು ಬೇಂದ್ರೆಯವರ ನಾಟಕಗಳಲ್ಲಿ ಹುಡುಕಲು ಅಥವಾ ಕಂಡುಕೊಳ್ಳಲು ಕೆಲವು ಅವಕಾಶಗಳಿವೆ. ಅಂದರೆ ಕವಿ ಬೇಂದ್ರೆಯವರ ಸಮಗ್ರ ನಾಟಕಗಳನ್ನು ಓದಿ ಸಾಹಿತ್ಯ ಮತ್ತು ರಂಗಭೂಮಿಯ ನೆಲೆಗಳಿಂದ ಅಭ್ಯಾಸ ಮಾಡಿ ಕೃತಿಯ ಸ್ವೀಕರಣೆ ಮತ್ತು ನಿರಾಕರಣೆಗೆ ತಾತ್ವಿಕ ಕಾರಣಗಳನ್ನು ಕಂಡುಕೊಳ್ಳಬೇಕಾದ ತುರ್ತು ಕೂಡ ನಮ್ಮ ಮುಂದಿದೆ.

ಬೇಂದ್ರೆ ಎನ್ನುವ ಆಕರ್ಷಣೆ ನಮ್ಮನ್ನು ಸದಾ ಸೆಳೆತಕ್ಕೆ ಕೊಂಡೊಯ್ಯುತ್ತಿರುವಾಗ ಬೇಂದ್ರೆಯವರ ನಾಟಕಗಳ ಓದು ಕಾಲಿಕವಾಗಿದೆ. ಬೇಂದ್ರೆಯವರ ಸಮಗ್ರ ನಾಟಕಗಳನ್ನು ಬಿಡಿಬಿಡಿಯಾಗಿ ಗಮನಿಸಿ ಅದರ ಸಮಗ್ರತೆಯ ಆಶಯ ಯಾವುದು ಎಂಬುದನ್ನು ಕೂಡ ಕಂಡುಕೊಳ್ಳಬೇಕಿದೆ. ವಿವರಣಾತ್ಮಕವಾಗಿ, ಪರಿಚಯಾತ್ಮಕವಾಗಿ ಇಲ್ಲವೇ ಸಾರಾಂಶೀಕರಿಸುವ ವರ್ಣನಾತ್ಮಕ ನೆಲೆಯಿಂದ ಬೇಂದ್ರೆಯವರ ನಾಟಕಗಳನ್ನು ಬಿಡಿಸಿಕೊಂಡು, ಈ ನಾಟಕಗಳ ದೃಷ್ಟಿ ಮತ್ತು ವಿವೇಕ ಹಾಗೂ ರಂಗಕೃತಿಯ ಸಾಧ್ಯತೆಗಳನ್ನು ಸೂಕ್ಷ್ಮವಾಗಿ ನೋಡಬೇಕಿದೆ. ನಾಟಕವನ್ನು ಕುರಿತು ಪ್ರತಿಕ್ರಿಯಿಸುವಾಗ ರಂಗಸಾಧ್ಯತೆಗಳನ್ನು ಪಕ್ಕಕ್ಕಿಟ್ಟು ನೋಡುವಂತಿಲ್ಲ. ಏಕೆಂದರೆ ನಾಟಕ ಕೇವಲ ಸಾಹಿತ್ಯ ಕೃತಿಯಲ್ಲ ಅದು ನಾಟಕ ಆಡಲು ಬೇಕಾದ ಧ್ವನಿ, ಬೆಳಕು, ಅಭಿನಯ, ರಂಗಸಜ್ಜಿಕೆ, ಪ್ರೇಕ್ಷಕ, ಪ್ರಸಾದನ, ವಸ್ತ್ರವಿನ್ಯಾಸ ಇತ್ಯಾದಿ ಪರಿಕರಗಳಂತೆ ನಾಟಕ ಸಾಹಿತ್ಯವು ಒಂದು ಮುಖ್ಯ ಪರಿಕರ. ಹಾಗಾಗಿ ಸಾಹಿತ್ಯ ಮತ್ತು ರಂಗಪ್ರಯೋಗದ ಹಿನ್ನೆಲೆಯಲ್ಲೂ ಕೂಡ ಬೇಂದ್ರೆಯವರ ನಾಟಕಗಳನ್ನೂ ಅಭ್ಯಾಸ ಮಾಡಬೇಕಿದೆ.

ಗೋಲ್, ತಿರುಕರಪಿಡುಗು, ಶೋಭನಾ, ಸಾಯೋಆಟ, ಜಾತ್ರೆ, ಮಂದೀ ಮದಿವಿ, ಮಂದೀ ಮಕ್ಕಳು, ಮಂದೀ ಮನಿ(ಹೊಸ ಸಂಸಾರ), ಹಳೆಯ ಗೆಣೆಯರು, ದೆವ್ವದಮನೆ,ಮಕ್ಕಳು ಅಡುಗೆ ಮನೆ ಹೊಕ್ಕರೆ,ನಗೆಯ ಹೊಗೆ, ಉದ್ಧಾರ ಹಾಗೂ ಆಥರಾ - ಈಥರಾ ನಾಟಕಗಳನ್ನು ಮರು ಓದಿನ ಮೂಲಕ ಮರುಪ್ರವೇಶಿಸಬೇಕಿದೆ. ಬೇಂದ್ರೆಯವರ ಹದಿನಾಲ್ಕು ನಾಟಕಗಳ ಅಭಿವ್ಯಕ್ತಿ, ಆಶಯ ಹಾಗೂ ರಂಗ ಭಾಷೆಯ ಹಿನ್ನೆಲೆಯಲ್ಲಿ ಓದಿಗೆ ಅವಕಾಶ ಮಾಡಿಕೊಳ್ಳಬೇಕಾದ ಅಗತ್ಯ ಕಾಲರೂಪಿಯಾಗಿದೆ.

***
ಮುಂದಿನ ಸರಣಿಗಾಗಿ ನಿರೀಕ್ಷಿಸಿ....

MORE FEATURES

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...

ಓದಿದಷ್ಟೂ ವಾಚಕರ ಅಭಿರುಚಿಯನ್ನು ಕೆರಳಿಸುತ್ತ ಹೋಗುವ ಕೃತಿ ಪ್ರಕೃತಿಯ ನಿಗೂಢಗಳು

19-04-2024 ಬೆಂಗಳೂರು

‘ಇನ್ನೂ ಹೆಚ್ಚಿನ ಪ್ರಕೃತಿಯ ನಿಗೂಢಗಳನ್ನು ಮಲಗಿರುವ ಬುದ್ಧನ ಆಕೃತಿಯ ಬೆಟ್ಟಗಳು, ಗಂಡು ಹೆಣ್ಣಾಗುವ ಹೆಣ್ಣು ಗಂಡಾ...

ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ

19-04-2024 ಬೆಂಗಳೂರು

‘ಒಲವಿನ ಬದುಕಿನ ಆಶಯದಂತೆ ಅಥವಾ ಗುರಿಯಂತೆ ನಲ್ಲೆಯ ಬದುಕು ಚಿತ್ರಿತವಾಗಿದೆ. ಹೀಗಾಗಿ ನಾಟಕ ಭಿನ್ನ ನೆಲೆಗಳ ಕಥೆಯನ...