ಬೇಟೆಯ ರೋಚಕತೆ, ನಿಗೂಢತೆಯ ಗ್ರಾಮ್ಯ ಸೊಗಡಿನ ಕಾದಂಬರಿ -ರೌದ್ರಾವರಣಂ


ಕಾದಂಬರಿಯ ಭಾಷೆ ರೌದ್ರಾವರಣಕ್ಕೆ ತಕ್ಕನಾದುದು. ಎಲ್ಲಿಯೂ ತೊಡಕಾಗದಂತೆ ಸರಾಗವಾಗಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಕೊನೆಯಲ್ಲಿ ಕೆಲವು ಪದಗಳ ಅರ್ಥವನ್ನೂ ಲೇಖಕರು ಒದಗಿಸಿದ್ದಾರೆ. ಭಾಷೆಯಿಂದಲೇ ಈ ಕಥನದ ಪ್ರಾದೇಶಿಕತೆಯ ಅರಿವು ಓದುಗನಿಗೆ ಲಭ್ಯವಾಗಿಬಿಡುತ್ತದೆ. ಕಚ್ಚಾ ಸಾಮಗ್ರಿಯ ಕೊರತೆ ಅನಂತ್ ಅವರಿಗಿಲ್ಲ. ಫ್ಯಾಂಟಸಿಯನ್ನೂ ಕಥೆಗೆ ಪೂರಕವಾಗಿ ದುಡಿಸಿಕೊಳ್ಳಬಲ್ಲ ಜಾಣ್ಮೆಯನ್ನು ಅವರು ತೋರಿರುವುದು ಗಮನಾರ್ಹ ಮತ್ತು ಅಭಿನಂದನಾರ್ಹ ಎನ್ನುತ್ತಾರೆ ಲೇಖಕ ಡಾ. ಹೆಚ್ ಎಸ್ ಸತ್ಯನಾರಾಯಣ. 'ರೌದ್ರಾವರಣಂ' ಕೃತಿಯ ಮೂಲಕ ಕಾದಂಬರಿ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿರುವ ಅನಂತ ಅವರ ಮೊದಲ ಕಾದಂಬರಿಗೆ ಅವರು ಬರೆದ ಮುನ್ನುಡಿ ಓದುಗರಿಗಾಗಿ..

'ರೌದ್ರಾವರಣಂ' ಇಡೀ ಆವರಣದ ತುಂಬಾ ಮನುಷ್ಯನ ಕ್ರೌರ್ಯವನ್ನು ಬಹುಬಗೆಯಲ್ಲಿ ಹಿಡಿಯುವ ಕಥಾನಕ. ಉಳ್ಳವರು ತಮ್ಮ ರಾಜಕೀಯ ಲಾಭಕ್ಕಾಗಿ ಮೌಢ್ಯ ಮತ್ತು ಜಾತಿ ವ್ಯವಸ್ಥೆಯ ಮೂಲಕ ಏನೂ ಇಲ್ಲದವರನ್ನು ಹೇಗೆ ದುಡಿಸಿಕೊಂಡು ದೂರ ಸರಿಸುತ್ತಾರೆ ಮತ್ತು ಮನುಷ್ಯ ಪ್ರಾಣಿಗಳನ್ನು ಭೇಟೆಯಾಡುವಹಾಗೆ, ಮನುಷ್ಯ ಮನುಷ್ಯನನ್ನೇ ಭೇಟೆಯಾಡುವ ಕ್ರೂರ ವ್ಯವಸ್ಥೆಯನ್ನು ಕಟ್ಟಿಕೊಡುವ ಚಿತ್ರಣ ಕಾದಂಬರಿಯುದ್ದಕ್ಕೂ ಕಾಣಸಿಗುತ್ತದೆ. ಕುಲುಮೆ ಕೆಲಸ ಮಾಡಿಕೊಂಡು ಊರಾಚೆ ಬದುಕುವವನೊಬ್ಬ ಉಳಿದವರೆಲ್ಲರ ಪಾಲಿಗಷ್ಟೇ ಅಲ್ಲ, ತನಗೇ ತಾನೇ ನಿಗೂಢ ವ್ಯಕ್ತಿ. ಈ ಕಾದಂಬರಿಗೆ ಈ ಬಗೆಯ ವಿಕ್ಷಿಪ್ತ ಮನಸ್ಥಿತಿಯ ವ್ಯಕ್ತಿಯನ್ನು ನಾಯಕನನ್ನಾಗಿಸಿರುವುದೇ ಇಲ್ಲಿನ ಮೊದಲ ವಿಶೇಷ. ನಮ್ಮ ಹೀರೋಗಳು ಮುಖ್ಯವಾಹಿನಿಯೊಪ್ಪುವ ಗುಣಗಳನ್ನೇ ಹೊಂದಿರಬೇಕಾಗಿಲ್ಲವೆಂಬ ಕ್ರಾಂತಿಕಾರಕ ಆಲೋಚನೆ ಅನಂತ್ ಅವರದ್ದಾಗಿರುವುದರಿಂದ ಇಲ್ಲಿ ನಿಗೂಢ ವ್ಯಕ್ತಿತ್ವದ ಬೇಟೆಗಾರ ಮತ್ತವನ ನಿಗೂಢ ಬದುಕಿನ ಆವರಣವೇ ಈ ಕಾದಂಬರಿಯ ಕೇಂದ್ರ ಪ್ರಜ್ಞೆಯಾಗಿದೆ.

ಒಬ್ಬಂಟಿಯಾಗಿ ಬದುಕುವ ಈ ಬೇಟೆಗಾರ ಊರಿನವರ ಉಳುಮೆ ಪರಿಕರಗಳನ್ನು ತಟ್ಟಿಕೊಟ್ಟು, ಹರಿತಗೊಳಿಸಿ ಒಂದರ್ಥದಲ್ಲಿ ಊರಿನ ಎಲ್ಲ ಚಟುವಟಿಕೆಗಳ ಚಾಲಕ ಶಕ್ತಿಯಾಗಿದ್ದಾನೆ. ಹೊಲಗದ್ದೆಗಳಲ್ಲಿ ದುಡಿಯುವವರ ಕತ್ತಿ, ಗುದ್ದಲಿ, ಗುರಾಣಿ, ನೇಗಿಲ ಕುಳ ಮುಂತಾದವುಗಳಿಗೆ ಈತನ ಕುಲುಮೆಯ ಕಾವು ತಟ್ಟಲೇಬೇಕು. ಹಾಗೆಯೇ ಹೆಂಗಸರ ಅಡುಗೆ ಮನೆಯ ಮೆಟ್ಟುಗತ್ತಿ, ಚಾಕು, ಬಾಕು ಮುಂತಾದವಕ್ಕೂ ಕೂಡ. ಈ ಅರ್ಥದಲ್ಲಿ ಈತ ಇಡೀ ಊರಿಗೇ ಬೇಕಾದ ವ್ಯಕ್ತಿ. ಅವರೆಲ್ಲ ತಂದುಕೊಡುವ ರಾಗಿ, ಜೋಳ, ಪುಡಿಗಾಸು, ರೊಟ್ಟಿ, ಚಟ್ನಿ, ಅನ್ನ, ಮುದ್ದೆ, ಸಾರುಗಳಲ್ಲಿ ಅವನ ಹಾಗೂ ಅವನ ಸಂಗಾತಿಯಾಗಿ ಸಾತ್ ನೀಡುವ ಪರಮನಿಷ್ಠ ನಾಯಿಯ ಹೊಟ್ಟೆಪಾಡು ನಡೆಯುತ್ತದೆ.

ಇದರ ಹೊರತಾದ ಮತ್ತೊಂದು ಭಿನ್ನ ಬದುಕು ಈತನಿಗಿದೆ. ಅದು ರಾತ್ರಿಹೊತ್ತು ಕಾಡು ತಿರುಗುವ, ಲೈಸನ್ಸ್ ರಹಿತ ಬಂಧೂಕಿನಲ್ಲಿ ಕದ್ದು ಬೇಟೆಯಾಡುವ, ಬೇಟೆಯಾಡಿದ್ದನ್ನು ಮನೆಗೆ ತಂದು, ರಾತ್ರೋರಾತ್ರಿ ಮಸಾಲೆ ಅರೆದು, ಅಡುಗೆ ಮಾಡಿ ತನ್ನ ಪ್ರೀತಿಯ ನಾಯಿಯೊಂದಿಗೆ ತಿಂದು ಮುಗಿಸುವ ಚಪಲಚಿತ್ತತೆ. ಈ ಬೇಟೆಯ ಹುಚ್ಚು ಈತನೊಳಗಿನ ಕ್ರೌರ್ಯತನದ ಅನಾವರಣಕ್ಕೂ ಕಾರಣವಾಗುತ್ತದೆ. ಮದುವೆಯಾಗಿದ್ದರೂ ಈತನ ಹೆಂಡತಿ ಜೊತೆಗಿರುವುದಿಲ್ಲ. ಆಕೆ ಇವನನ್ನು ತೊರೆದು ಹೋಗಿದ್ದಾಳೋ ಅಥವಾ ಲೋಕವನ್ನೇ ಬಿಟ್ಟುಹೋಗಿದ್ದಾಳೋ ಎಂಬುದು ಕೊನೆಯವರೆಗೂ ನಿಗೂಢ. ಈ ವಿಚಾರದಲ್ಲಿ ಬೇಟೆಗಾರ ದಿವ್ಯ ಉದಾಸೀನತೆ ತೋರುತ್ತಾನೆ.

ಹಲವು ಬಾರಿ ಪೋಲಿಸರಿಂದ ತಪ್ಪಿಸಿಕೊಳ್ಳುವಾಗ ಈತ ತೋರುವ ಭಂಡಧೈರ್ಯ, ಹೆಣವನ್ನು ಮನೆಯಲ್ಲೇ ಹುಗಿದಿಟ್ಟು ಏನೂ ಆಗಿಲ್ಲವೆಂಬಂತೆ ಬದುಕುವ ವಿಕ್ಷಿಪ್ತತೆ ಓದುಗರಲ್ಲಿ ರೋಚಕತೆಯನ್ನು ಹುಟ್ಟಿಹಾಕುತ್ತದೆ. ಅಚಾನಕ್ಕಾಗಿ ಕಾಡಿನಲ್ಲಿ, ಅಪವೇಳೆಯಲ್ಲಿ ಅನಿರೀಕ್ಷಿತವಾಗಿ ಸಿಗುವ ತಾಯಿ ಮತ್ತು ಮಗುವಿನ ಜವಾಬ್ದಾರಿಗೆ ಬಾಧ್ಯಸ್ಥನಾಗಬೇಕಾಗುವುದು ಕೂಡ ಬೇಟೆಯ ಹುಚ್ಚಿನಿಂದಲೇ. ಸಾವಿರಾರು ಪ್ರಾಣಿಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದಿರುವ ಈತನ ಅಂತರಂಗದೊಳಗಣ ಮನುಷ್ಯಪ್ರೇಮ ಗೋಚರವಾಗುವುದೇ ಅಪರಿಚಿತ ತಾಯಿ ಮತ್ತವಳ ಮೊಲೆಗೂಸನ್ನು ಗುಡಿಸಲಿಗೆ ಕರೆತಂದ ಮೇಲೆ. ತಾಯಿಯ ಕೌಟುಂಬಿಕ ಹಿನ್ನೆಲೆ ಮತ್ತು ಅವಳ ತೊಂದರೆಗಳನ್ನು ತಿಳಿದ ಮೇಲೆ ಕಾದಂಬರಿಗೆ ಬೇರೊಂದು ಆಯಾಮ ಪ್ರಾಪ್ತವಾಗುತ್ತದೆ. ಉಳ್ಳವರು ಮತ್ತವರ ಬೆಂಬಲಿಗರ ಸಣ್ಣತನವನ್ನು ಪ್ರತಿರೋಧಿಸುತ್ತ ಮಗುವನ್ನು ಅಕ್ಷರ ಸಂಪರ್ಕಕ್ಕೆ ತರುವ ಈತನ ಶ್ರಮ ಕೊನೆಗೂ ನಿರರ್ಥಕವಾಗುತ್ತದೆ. ಊರಿನವರ ಅಸಹಾಯಕತೆ, ಕೆಲವರ ಅಸಹಿಷ್ಣತೆ, ಪೋಲೀಸರ ದಬ್ಬಾಳಿಕೆ ಮುಂತಾದವೆಲ್ಲ ಕಾದಂಬರಿಯನ್ನು ಮತ್ತಷ್ಟು ರೌದ್ರವಾಗಿಸುತ್ತವೆ. ಇದುವರೆಗೂ ನಾವು ಕಾಣದ ಹಾಗೂ ಕೇಳದ ಒಂದು ಧರ್ಮದ ಬಗ್ಗೆ ಲೇಖಕರು ಕೊಡುವ ಆಖ್ಯಾನ ನಮ್ಮನ್ನು ಅಚ್ಚರಿಗೊಳಿಸುತ್ತದೆ. ಶಾಲೆಗೆ ಹೊಸದಾಗಿ ಬಂದ ಮೇಸ್ಟ್ರು ತನ್ನ ಕರ್ತವ್ಯನಿಷ್ಠೆಯಲ್ಲಿ ವಿಫಲನಾಗಿ ತಲೆತಪ್ಪಿಸಿಕೊಳ್ಳಬೇಕಾದ ದುಷ್ಟ ವ್ಯೂಹದ ತಂತ್ರಕ್ಕೆ ಬೇಟೆಗಾರ, ಅವನ ಮಗ ಮತ್ತು ನಾಯಿ ಮೂವರು ಬಲಿಯಾಗುವುದು ನಿರೀಕ್ಷಿತವೆನ್ನಿಸುವಂತೆ ಕಾದಂಬರಿ ಅಂತ್ಯ ಕಾಣುತ್ತದೆ.

ಈ ಕಾದಂಬರಿಯಲ್ಲಿ ನಾಯಿಯ ಪಾತ್ರಚಿತ್ರಣ ಅದ್ಭುತವೆಂಬಂತೆ ಮೂಡಿದೆ. ಈ ನಾಯಿ ಬೇಟೆಗಾರನ ನಿರಂತರ ಒಡನಾಡಿಯಾದ್ದರಿಂದ, ನಾಯಿಯನ್ನು ನಾಯಿ ಎಂದು ಕಾದಂಬರಿಕಾರರು ಎಲ್ಲಿಯೂ ಉಲ್ಲೇಖಿಸದಿರುವುದು ಉದ್ದೇಶಪೂರ್ವಕವಾಗಿದೆಯೆನಿಸಿದರೂ.. ಆ ಪ್ರಾಣಿಯ ವ್ಯಕ್ತಿತ್ವಕ್ಕೊಂದು ಘನತೆಯನ್ನು ತರುವ ಪ್ರಯತ್ನ ಖಂಡಿತ ಸಫಲವಾಗಿದೆ. ಆರಂಭದಿಂದ ಕೊನೆಯವರೆಗೂ ನಾಯಿಯೇ ಕಾದಂಬರಿಯ ಹೀರೋ ಎಂಬಂತೆ ಭಾಸವಾದರೆ ಅಚ್ಚರಿಯೇನಿಲ್ಲ. ತನ್ನ ಒಡೆಯನ ಎಲ್ಲ ಕಷ್ಟ-ಕಾರ್ಪಣ್ಯಗಳಲ್ಲೂ ಸಹಭಾಗಿತ್ವವಹಿಸುವ ನಾಯಿಯ ಸಾಹಸಮಯ ಬದುಕು, ಸ್ವಾಮಿನಿಷ್ಠೆ, ಬುದ್ಧಿವಂತಿಕೆ, ಸಮಯಪ್ರಜ್ಞೆ, ಧೈರ್ಯ, ಸೂಕ್ಷ್ಮಗ್ರಹಿಕೆಗಳು ಅನನ್ಯವೆಂಬಂತೆ ಚಿತ್ರಿತಗೊಂಡಿವೆ. ತನ್ನ ಒಡೆಯನ ಶತ್ರುಗಳನ್ನು ತನ್ನ ಶತ್ರುಗಳಂತೆಯೇ ಭಾವಿಸುವ ಈ ನಾಯಿ ಅಸಾಧಾರಣ ಬುದ್ಧಿಜೀವಿ. ಈ ಪುಟ್ಟ ಜೀವವು, ಕೃತಿಯನ್ನು ಓದಿದವರೆಲ್ಲರ ಮನದಲ್ಲಿ ಮರೆಯಾಗದಂತೆ ಶಾಶ್ವತವಾಗಿ ಉಳಿಯಬಲ್ಲದು.

ಕಾದಂಬರಿಯ ಭಾಷೆ ರೌದ್ರಾವರಣಕ್ಕೆ ತಕ್ಕನಾದುದು. ಎಲ್ಲಿಯೂ ತೊಡಕಾಗದಂತೆ ಸರಾಗವಾಗಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಕೊನೆಯಲ್ಲಿ ಕೆಲವು ಪದಗಳ ಅರ್ಥವನ್ನೂ ಲೇಖಕರು ಒದಗಿಸಿದ್ದಾರೆ. ಭಾಷೆಯಿಂದಲೇ ಈ ಕಥನದ ಪ್ರಾದೇಶಿಕತೆಯ ಅರಿವು ಓದುಗನಿಗೆ ಲಭ್ಯವಾಗಿಬಿಡುತ್ತದೆ. ಕಚ್ಚಾ ಸಾಮಗ್ರಿಯ ಕೊರತೆ ಅನಂತ್ ಅವರಿಗಿಲ್ಲ. ಫ್ಯಾಂಟಸಿಯನ್ನೂ ಕಥೆಗೆ ಪೂರಕವಾಗಿ ದುಡಿಸಿಕೊಳ್ಳಬಲ್ಲ ಜಾಣ್ಮೆಯನ್ನು ಅವರು ತೋರಿರುವುದು ಗಮನಾರ್ಹ ಮತ್ತು ಅಭಿನಂದನಾರ್ಹ. ಕಾದಂಬರಿಯಂಥಹ ಸುದೀರ್ಘ ರಚನೆಗೆ ಮನಸ್ಸು ಮಾಡುವವರು ವಿರಳವಾಗಿರುವಾಗ ಅನಂತ್ ಅವರಂಥ ಹೊಸ ತಲೆಮಾರಿನ ಲೇಖಕರು ಈ ಪ್ರಕಾರವನ್ನು ಆಯ್ದುಕೊಂಡಿರುವುದು ಮೆಚ್ಚಬೇಕಾದ ಸಂಗತಿ.

ನನ್ನ ಮೇಲಿನ ಪ್ರೀತಿಯಿಂದ ಅನಂತ್ ಅವರು ಈ ಕಾದಂಬರಿಯನ್ನು ಓದಲಿತ್ತು, ನಾಲ್ಕು ಮಾತುಗಳನ್ನು ಬರೆದುಕೊಡುವಂತೆ ಕೋರಿದ್ದಾರೆ. ಅವರ ಅಪೇಕ್ಷೆಯಂತೆ ಓದಿದಾಗ ನನಗನ್ನಿಸಿದ ಈ ಕೆಲವು ಮಾತುಗಳನ್ನು ಬರೆದಿರುವೆ. ಓದುಗರು ಪ್ರೀತಿಯಿಂದ ಈ ಕಾದಂಬರಿಯನ್ನು ಬರಮಾಡಿಕೊಳ್ಳುವರೆಂದು ಆಶಿಸುವೆ.

- ಡಾ. ಎಚ್. ಎಸ್. ಸತ್ಯನಾರಾಯಣ

ಬೇಟೆಯ ರೋಚಕತೆ, ನಿಗೂಢತೆಯಿಂದ ತುಂಬಿದ ಕುತೂಹಲ, ಗ್ರಾಮ್ಯ ಸೊಗಡಿನ ನಿರೂಪಣೆ ಹೊಂದಿರುವ ಈ ಕಾದಂಬರಿಯು, ಕೋವಿಡ್ ನಿಯಂತ್ರಣಕ್ಕೆ ಬಂದರೆ, ಸಧ್ಯದಲ್ಲೇ ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗಲಿದೆ ಎಂದು ಅನಂತ ಅವರು ತಿಳಿಸಿದ್ದಾರೆ.

ಫೆಬ್ರುವರಿಯಿಂದ ಪುಸ್ತಕದ ಪ್ರತಿಯನ್ನು ಮುಂಗಡ ಕಾಯ್ದಿರಿಸಲು ಅವ್ವ ಪುಸ್ತಕಾಲಯವನ್ನು ಸಂಪರ್ಕಿಸಬಹುದಾಗಿದೆ.

ಮೊ : 8548948660

ಮೇಲ್ : avvapustakaalaya@gmail.com

 

MORE FEATURES

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಈ ಪುಸ್ತಕ ಇರಬೇಕಾದದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ

20-04-2024 ಬೆಂಗಳೂರು

`ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ...

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...