ಭಾನುಮತಿ ಪರಿವಾರ ಕಟ್ಟಿಕೊಂಡ ಬಗೆ


“ಮಹಾಭಾರತದ ಕತೆಯಲ್ಲಿ ಎಲ್ಲಿಯೂ ಭಾನುಮತಿಯ ಹೆಸರು ಪ್ರಸ್ತಾಪವಾದಂತೆ ಕಾಣುವುದಿಲ್ಲ. ಪಂಪಭಾರತದ ಒಂದು ಪದ್ಯವು 'ಭಾನುಮತಿಯ ನೆತ್ತ’ ಎಂದೇ ಗುರುತಿಸಲ್ಪಟ್ಟು ಪ್ರಚಾರ ಗಳಿಸಿತು. ಹಾಗೆಯೇ ಕಡೆಂಗೋಡ್ಲು ಶಂಕರ ಭಟ್ಟರ 'ಘೋಷಯಾತ್ರೆ' ಹಾಗೂ ಮರಾಠಿ ಲೇಖಕ ಶಿವಾಜಿ ಸಾವಂತರ 'ಮೃತ್ಯುಂಜಯ' ಕೃತಿಗಳಲ್ಲಿ ಭಾನುಮತಿಯ ಪ್ರಸ್ತಾಪ ಬರುತ್ತದೆ,” ಎನ್ನುತ್ತಾರೆ ಕುಮಾರಸ್ವಾಮಿ ತೆಕ್ಕುಂಜ. ಅವರು ತಮ್ಮ ‘ಭಾನುಮತಿಯ ಪರಿವಾರ’ ಕೃತಿಗೆ ಬರೆದಿರುವ ಲೇಖಕರ ಮಾತು ನಿಮ್ಮ ಓದಿಗಾಗಿ.

ಮಹಾಭಾರತದ ಪ್ರತಿ ನಾಯಕ ದುರ್ಯೋಧನನ ಪತ್ನಿ ಭಾನುಮತಿಯ ಕುರಿತಾಗಿ ಬರೆಯಬೇಕೆಂದು ಯೋಚಿಸಿ ಸಾಕಷ್ಟು ವಿಷಯ ಸಂಗ್ರಹಣೆ ಮಾಡಿಕೊಳ್ಳುತ್ತಿರುವ ಸಮಯದಲ್ಲಿ ಹಿರಿಯರಾದ ಹರಿಕೃಷ್ಣ ಭರಣ್ಯರು 'ಭಾನುಮತಿ ಕಾ ಕುನ್ಬಾ' ಎನ್ನುವ ಹಿಂದಿ ನಾಣ್ಣುಡಿಯ ಬಗ್ಗೆ ನನ್ನ ಗಮನ ಸೆಳೆದರು. ನಾಣ್ಣುಡಿಯ ಪೂರ್ಣ ಪಾಠ ಹೀಗಿದೆ- ‘ಕಹೀಂ ಕಿ ಈಂಟ್ ಕಹೀಂ ಕಾ ರೋಡಾ ಭಾನುಮತಿ ನೆ ಕುನ್ಬಾ ಜೋಡಾ'. ವಿಲೋಮ ಗುಣವುಳ್ಳ ವಸ್ತುಗಳ ಜೋಡಣೆಯನ್ನು ವಿವರಿಸಲು ಈ ನಾಣ್ಣುಡಿಯ ಬಳಕೆಯಾಗುತ್ತದೆ. ಮಹಾಭಾರತದ ದುರ್ಯೋಧನನ ಪತ್ನಿ ಭಾನುಮತಿಯೇ ಈ ನಾಣ್ಣುಡಿಯಲ್ಲಿ ಹೆಸರಿಸಲ್ಪಟ್ಟವಳು. ಕುನ್ಹಾ ಎಂದರೆ ಪರಿವಾರ, ಕುಟುಂಬ, ಕುಲ ಇತ್ಯಾದಿ ಅರ್ಥಗಳಿವೆ. ಭಾನುಮತಿಯ ಕತೆ ಬರೆಯಲು ನನಗೆ ಈ ತಾತ್ಪರ್ಯ ಉಪಯೋಗವಾಯಿತು. ಆ ಹಿನ್ನೆಲೆಯನ್ನಿಟ್ಟುಕೊಂಡೇ ಈ ಕಾದಂಬರಿಯನ್ನು ಬರೆದಿದ್ದೇನೆ.

ಮಹಾಭಾರತದ ಕತೆಯಲ್ಲಿ ಎಲ್ಲಿಯೂ ಭಾನುಮತಿಯ ಹೆಸರು ಪ್ರಸ್ತಾಪವಾದಂತೆ ಕಾಣುವುದಿಲ್ಲ. ಪಂಪಭಾರತದ ಒಂದು ಪದ್ಯವು 'ಭಾನುಮತಿಯ ನೆತ್ತ’ ಎಂದೇ ಗುರುತಿಸಲ್ಪಟ್ಟು ಪ್ರಚಾರ ಗಳಿಸಿತು. ಹಾಗೆಯೇ ಕಡೆಂಗೋಡ್ಲು ಶಂಕರ ಭಟ್ಟರ 'ಘೋಷಯಾತ್ರೆ' ಹಾಗೂ ಮರಾಠಿ ಲೇಖಕ ಶಿವಾಜಿ ಸಾವಂತರ 'ಮೃತ್ಯುಂಜಯ' ಕೃತಿಗಳಲ್ಲಿ ಭಾನುಮತಿಯ ಪ್ರಸ್ತಾಪ ಬರುತ್ತದೆ. ಇತ್ತೀಚೆಗೆ ಬಂದ ಬೆರಳೆಣಿಕೆಯ ಲೇಖನಗಳನ್ನು ಬಿಟ್ಟರೆ ಬೇರೆ ಎಲ್ಲಿಯೂ ಭಾನುಮತಿಯ ಪ್ರಸ್ತಾಪ ಬರಲಿಲ್ಲ. 'ಭಾನುಮತಿ ಕಾ ಕುನ್ಬಾ' – ಎಂಬ ಒಂದು ನಾಣ್ಣುಡಿಯೇ ಬಳಕೆಗೆ ಬಂದಿರುವಾಗ ಭಾನುಮತಿಯ ಬಗ್ಗೆ ವಿಸ್ತಾರವಾಗಿ ಬರೆಯಬೇಕೆಂಬ ನನ್ನ ಯೋಚನೆ ಬಲವಾಯಿತು. ಮಹಾಭಾರತದ ಕತೆಯನ್ನು ಬಾಲ್ಯದಲ್ಲಿಯೇ ಕೇಳಿ ತಿಳಿದುಕೊಂಡದ್ದು. ಅದು ಬಿಟ್ಟರೆ ಈ ಕೃತಿ ರಚನೆಗಾಗಿ ಮೂಲ ಪಾಠವನ್ನು ವಿಶೇಷವಾಗಿ ಅಧ್ಯಯನ ಮಾಡಲಿಲ್ಲ. ಆದರೆ ಮಹಾಭಾರತವನ್ನಾಧರಿಸಿ ಬರೆದ ಕೆಲವು ಕೃತಿಗಳನ್ನು ಅಭ್ಯಾಸ ಮಾಡಿದ್ದೇನೆ. ಅವುಗಳಲ್ಲಿ ಪ್ರಮುಖವಾದವುಗಳು ಮೂರು.

1. ಮರಾಠಿ ಲೇಖಕ ಶಿವಾಜಿ ಸಾವಂತ್ ಅವರ 'ಮೃತ್ಯುಂಜಯ' ಕಾದಂಬರಿ.
2. ಕಡೆಂಗೋಡ್ಲು ಶಂಕರ ಭಟ್ಟರ ‘ಘೋಷಯಾತ್ರೆ’ ಎಂಬ ಖಂಡ ಕಾವ್ಯ.
3. ಮರಾಠಿ ಲೇಖಕಿ ಇರಾವತಿ ಕರ್ವೆಯವರ ‘ಯುಗಾಂತ’ ಕೃತಿ.

ಈ ಕಾದಂಬರಿಯಲ್ಲಿ ಬರುವ ಯಾವುದೇ ಪಾತ್ರಗಳು, ಕತೆಗಳು, ಘಟನಾವಳಿಗಳು ನನ್ನ ಸೃಷ್ಟಿಯಲ್ಲ. ಎಲ್ಲವನ್ನೂ ಮೇಲೆ ಹೆಸರಿಸಿದ ಕೃತಿಗಳಿಂದ ಆಯ್ದುಕೊಂಡಿದ್ದೇನೆ. ಹಾಗೆಯೇ ಇನ್ನೂ ಕೆಲವು ಕೃತಿಗಳಿಂದಲೂ ಹೆಕ್ಕಿ ಅಳವಡಿಸಿದ್ದೇನೆ. ಇದರ ರಚನೆಯ ಸಮಯದಲ್ಲಿ ವಿದ್ವಾನ್ ಜಗದೀಶಶರ್ಮಾ ಸಂಪ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಅವರು 'ಹಳೇ ಕೃಷ್ಣ ಸಂಧಾನ ಯಕ್ಷಗಾನ ಪ್ರಸಂಗ ಕೃತಿಯೊಂದರಲ್ಲಿ ಭಾನುಮತಿಯ ಪಾತ್ರ ಬರುತ್ತದೆ' ಎಂದು ತಿಳಿಸಿದರು. ಇದರ ಮಾಹಿತಿಯನ್ನು ಗೆಳೆಯ ಹಾಗೂ ಬಂಧು ರಘುರಾಮ ಮುಳಿಯ ನನಗೆ ಒದಗಿಸಿದರು. ಈ ಮಾಹಿತಿಯನ್ನೂ ಸೂಕ್ತವಾಗಿ ಬಳಸಿಕೊಂಡಿದ್ದೇನೆ.

ಹೀಗೆ ಅಲ್ಲಲ್ಲಿ ಸಿಕ್ಕಿದ ಮಾಹಿತಿಗಳನ್ನು ಕಲೆ ಹಾಕಿ, ಅವುಗಳನ್ನು ಸೂಕ್ತವಾಗಿ ಜೋಡಿಸಿ, ನನ್ನ ಕಲ್ಪನೆಯಿಂದ ಹಿಗ್ಗಿಸಿ ಈ ಕಾದಂಬರಿಯನ್ನು ಬರೆದೆ. ಹಾಗಾಗಿಯೇ 'ಭಾನುಮತಿಯ ಪರಿವಾರ' ಎಂದು ಹೆಸರಿಸಿದ್ದೇನೆ. ಇದನ್ನು ಬರೆಯುವಾಗ ನನಗೆ ಉಪಯುಕ್ತ ಮಾಹಿತಿಗಳನ್ನು ಒದಗಿಸಿದ ಎಲ್ಲ ಮಹನೀಯರುಗಳಿಗೆ ನಾನು ಕೃತಜ್ಞನಾಗಿದ್ದೇನೆ. ಮೇಲೆ ಹೆಸರಿಸಿದ ಕೃತಿಕಾರರಿಗೆ ನಾನು ಎಂದೆಂದೂ ಋಣಿ.

MORE FEATURES

‘ಬೆಳ್ಳಿ ಮೂಡಿತು’ ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ

22-09-2023 ಬೆಂಗಳೂರು

"ಬೆಳ್ಳಿ ಮೂಡಿತು" ಇದು ಕೊಡಗಿನ ಜನಜೀವನವನ್ನು ಚಿತ್ರಿಸುವ ಒಂದು ಪ್ರಾದೇಶಿಕ ಕಾದಂಬರಿ. ನಾಗರಿಕತೆಯ ಜಂಜಡಕ್ಕ...

ಪೃಥ್ವಿಯಲ್ಲೊದಗಿದ ಘಟವು..ಕರ್ನಾಟಕದ ನೆನ್ನೆಗಳು

22-09-2023 ಬೆಂಗಳೂರು

ಬಂಡಾರ ಪ್ರಕಾಶನದ ಸಹಯೋಗದಲ್ಲಿ ‘ಬುಕ್ ಬ್ರಹ್ಮ’ ಪ್ರಕಟಿಸುತ್ತಿರುವ ‘ಒಳತಿಳಿ’ ವಾರದ ಓದು ವಿ...

 ‘ಚಿತ್ರೋದ್ಯಮ’ ಬಣ್ಣಗಳ ಲೋಕ ಹಾಗೂ ಕನಸುಗಳ ಪ್ರಪಂಚ

21-09-2023 ಬೆಂಗಳೂರು

"ಕಿರುತೆರೆ ಅಥವಾ ಚಿತ್ರೋದ್ಯಮದ ಏಳ್ಗೆಗೆ ತಮ್ಮ ಬೆವರ ಹನಿ ಹರಿಸಿದ ಇಂತಹ ಮಹಾನುಭಾವರನ್ನು ನೆನೆಯುವುದೇ ಒಂದು ಪುಣ್...