ಭರವಸೆಯ ಜೊತೆ ಹೆಜ್ಜೆ ಹಾಕೋಣ..

Date: 07-07-2021

Location: ಬೆಂಗಳೂರು


‘ಅಗತ್ಯವಿರುವುದು ನಮ್ಮನ್ನು ನಾವು ಕಂಡುಕೊಳ್ಳುವ ಹಾಗೂ ಸಮರ್ಪಿಸಿಕೊಳ್ಳುವ ರೀತಿಯಲ್ಲಿ. ಎಡಚರದ್ದಾಗಲಿ-ಬಲಚರದ್ದಾಗಲಿ ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು’ ಎನ್ನುತ್ತಾರೆ ಲೇಖಕ ಸಂತೋಷ ಅನಂತಪುರ. ಅವರು ತಮ್ಮ ‘ಅನಂತಯಾನ’ ಅಂಕಣದಲ್ಲಿ ವೈಯಕ್ತಿಕ ಸ್ವಾರ್ಥ, ಸಿದ್ಧಾಂತಗಳ ಆಚೆಗೆ ದೇಶಕ್ಕಾಗಿ ಒಟ್ಟಾಗೋಣ ಎನ್ನುವ ಮೂಲಕ ವಾಸ್ತವ ಸ್ಥಿತಿ-ಗತಿಗಳನ್ನು ವಿಶ್ಲೇಷಿಸಿದ್ದಾರೆ.

ಪ್ರಜಾಪ್ರಭುತ್ವದ ಬಗೆಗಿನ ಕಾಳಜಿ-ಗೌರವ- ಪ್ರೀತಿ-ಹೆಮ್ಮೆಗಳೆಲ್ಲವೂ ಮನೆಯಿಂದಲೇ ಶುರುವಾಗಬೇಕು. ಬಹಳಷ್ಟು ಬಾರಿ ಹೆತ್ತವರ ನಡುವಿನ ಚರ್ಚೆ-ವಾದಗಳು ಏನೂ ಅರಿಯದ ಮುಗ್ಧ ಮನಸ್ಸುಗಳನ್ನು ಕದಡಿ ಬಿಡುವುದಿದೆ. ಬೆರಳೆಣಿಕೆಯ ಮನಸ್ಸುಗಳಿಗಷ್ಟೇ ಇವುಗಳಿಂದ ಪ್ರತ್ಯೇಕವಾಗಿ ನಿಂತು ಬೆಳೆಯಲು ಸಾಧ್ಯವಾಗುವುದು.‘ಹಿರಿಯರ ಚಾಳಿ ಮನೆ ಮಂದಿಗೆಲ್ಲ’ ಎನ್ನುವ ಹಾಗೆ ನಾವು ಕಕ್ಕಿದ್ದನ್ನೇ ಮಕ್ಕಳೂ ಕಕ್ಕುತ್ತವೆ. ಅವುಗಳಿಗೇನು ಗೊತ್ತು ಸರಿ-ತಪ್ಪು ಯಾವುದೆಂದು?

ಕಾಲಾನುಕಾಲಕ್ಕೆ ಬದಲಾಗುವ ರಾಜಕೀಯ ರುಚಿಗಳು ನಿಷ್ಠೆಗಳನ್ನೂ ಬದಲಿಸಿ ಬಿಡುತ್ತವೆ. ಅಷ್ಟಕ್ಕೇ ಮತ್ತೆ ಹೊಸ ವಾದ-ವಿವಾದಗಳು ಹುಟ್ಟಿಕೊಳ್ಳುತ್ತವೆ. ಪರಿಣಾಮ ಪರಸ್ಪರರ ಇಷ್ಟಾನಿಷ್ಟಗಳಲ್ಲಿ ತಪ್ಪುಗಳನ್ನು ಹುಡುಕುವ ಕೆಲಸಕ್ಕೆ ಮುಂದಾಗಿ ಬಿಡುತ್ತೇವೆ. ಯಾವುದೂ ಸರಿ ಇಲ್ಲವೆಂದು ಕರುಬುವ ಮನಸ್ಸಿಗೆ ದೇವಲೋಕದಿಂದ ಐರಾವತವನ್ನು ಹೊತ್ತು ತಂದರೂ ಅದು ಕೊರತೆಯನ್ನು ಕಟ್ಟದೆ ಬಿಡುವುದಿಲ್ಲ. ಅದರ ಹುಟ್ಟುಗುಣವದು. ಈ ಗುಣವೇ ಮುಂದೆ ಪ್ರಭುತ್ವದ ಶಾಂತಿ-ನೆಮ್ಮದಿಗೆ ಭಂಗವನ್ನು ತಂದಿಕ್ಕಿ ಬಿಡುತ್ತದೆ.

ನಮ್ಮನ್ನು, ಇತರರನ್ನು ನಾವು ಪ್ರೀತಿಸುವಂತೆ ಇಷ್ಟಗಳನ್ನೂ ನೆಚ್ಚಿಕೊಳ್ಳುತ್ತೇವೆ ಎನ್ನುವುದೆಲ್ಲವೂ ಸರಿ. ಅಂತಹ ಭಾವ ಹೊಂದಲು ಒಳ್ಳೆಯ ಪರಿಸರದ ಅಗತ್ಯವಿದೆ. ನಾವು ನಿಂತ ನೆಲ ಅಂತಹದ್ದೊಂದು ಪರಿಸರ, ಸನ್ನಿವೇಶವನ್ನೊದಗಿಸಿ ಕೊಟ್ಟರೆ ಆ ನೆಲದ ಮಣ್ಣನ್ನು ಪ್ರೀತಿಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಜಾಗತಿಕವಾಗಿ ಸರಿ-ತಪ್ಪುಗಳ ಕುರಿತಾದ ಜಿಜ್ಞಾಸೆಗಳು ಇನ್ನೂ ನಡೆಯುತ್ತಲೇ ಇವೆ.

ಸ್ವಾರ್ಥವನ್ನೇ ಪೋಷಿಸಿಕೊಂಡು ಬಂದಂತಹ ನಾಯಕ ಗಣ ದೇಶದ ಹಿತ ಕಾಯುವಲ್ಲಿ ವಿಫಲವಾಗಿದೆ ಎನ್ನುವುದೇನೋ ನಿಜವೇ. ಒಪ್ಪಿಕೊಳ್ಳೋಣ. ಅದೇ ರೀತಿ ದೇಶವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿನ ಹಿರಿಯ ಚೇತನಗಳ ಶ್ರಮವನ್ನೂ ಸ್ಮರಿಸಬೇಕಾದುದೇ. ಶ್ಲಾಘನೆ-ದೂಷಣಗಳೆರಡೂ ವಿರುದ್ಧ ಧ್ರುವಗಳು ಶ್ಲಾಘಿಸುತ್ತಲೇ ದೂಷಿಸುವ, ದೂಷಿಸುತ್ತಲೇ ಶ್ಲಾಘಿಸುವ ಎಡಬಿಡಂಗಿಗಳೇ ವ್ಯವಸ್ಥೆಯನ್ನು ಅರ್ಧ ಹಾಳು ಮಾಡಿ ಬಿಡುತ್ತಾರೆ. ಎರಡೂ ಕಡೆಯಿಂದ ಉಡುಗೊರೆಯನ್ನು ಪಡೆಯುವ ಮನಸ್ಸು ನಿಶ್ಚಿತವಾದ ವಿಚಾರಗಳ ಪರವಾಗಿ ನಿಲ್ಲಲು ಹಿಂಜರಿಯುತ್ತವೆ. ಪರಿಣಾಮ ಎಲ್ಲಿಯೂ ಸಲ್ಲದವರೆಂಬ ಅತೃಪ್ತ ಆತ್ಮದ ಹಣೆಪಟ್ಟಿಗೆ ಸಾಕ್ಷಿಯಾಗಿಯೂ ಬಿಡುತ್ತವೆ. ಅಂತಹ ಹೊತ್ತಲ್ಲೂ ಮಹತ್ವಾಕಾಂಕ್ಷೆಯ ಸಿದ್ಧಾಂತ, ವಿಚಾರಧಾರೆಗಳೇ ಹೊಟ್ಟೆ ತುಂಬಿಸುವ ಸರಕುಗಳಾಗಿ ಬಿಡುತ್ತವೆನ್ನುವುದು ಬಲುದೊಡ್ಡ ವಿಪರ್ಯಾಸ. ಇಷ್ಟಾನಿಷ್ಟಗಳನ್ನು ಪೂರೈಸುವ ಈ ಸರಕುಗಳು ಮುಂದೆ ಋತು ಬದಲಿದಂತೆ ಬದಲಾಗುತ್ತಾ ಹೊಟ್ಟೆಯನ್ನು ಪೊರೆಯುತ್ತಲೇ ನಮ್ಮ ಚರ್ಮದ ಮತ್ತದಕ್ಕೆ ಮೆತ್ತಿಕೊಳ್ಳುವ ಬಟ್ಟೆಯ ಬಣ್ಣಗಳನ್ನು ಬದಲಿಸುತ್ತಿರುತ್ತವೆ.

ಗೆದ್ದಲು ಹಿಡಿಯದಂತೆ, ಉಡವು ನುಗ್ಗದಂತೆ ಮನೆಯನ್ನು ಹೇಗೆ ರಕ್ಷಿಸುತ್ತೇವೋ ಅದೇ ರೀತಿ ನಮ್ಮ ಪರಿಸರ, ಹಳ್ಳಿ, ರಾಜ್ಯ, ದೇಶವನ್ನು ಸಂರಕ್ಷಿಸಬೇಕು. ಅದರಲ್ಲೇನು ತಪ್ಪಿಲ್ಲ. ದೇಶದ ಹಿತ ಕಾಯುವ ವಿಚಾರದಲ್ಲಿ ಅನಗತ್ಯ ಗೊಂದಲ ಖಂಡಿತಾ ಬೇಕಿಲ್ಲ. ಜಗತ್ತು ಬದಲಾಗುತ್ತಿದೆ. ಬದಲಾದ ಲೋಕಕ್ಕೆ ನಮ್ಮನ್ನು ನಾವು ಒಗ್ಗಿಸಿ ಕೊಳ್ಳಬೇಕಿದೆ. ಹೊಸ ಜನಾಂಗವೊಂದು ಈ ಎಲ್ಲ ಸಿದ್ಧಾಂತ, ವಿಚಾರಧಾರೆಗಳಿಂದ ದೂರವಿದೆಯೇನೋ ನಿಜ. ಹಾಗಂತ, ದೇಶದ ಕುರಿತಾದ ಅಭಿಮಾನ, ಮತ್ತದರ ಹಿತ ಕಾಯುವ ವಿಚಾರಕ್ಕೆ ಬಲು ಹತ್ತಿರವಾಗಿಯೇ ಇದೆ. ಮೂರು ಹೊತ್ತಿನ ನೆಮ್ಮದಿಯ ಬದುಕಿಗೆ ಕರ್ಮ ಸಿದ್ಧಾಂತವನ್ನು ನಂಬಿದರಷ್ಟೇ ಸಾಕು. ಮತ್ತಿನ್ಯಾವ ಸಿದ್ಧಾಂತಗಳ ಅಗತ್ಯವೂ ಬೇಕಿಲ್ಲ. ಆದರೇನು ಮಾಡೋಣ? ತುಂಬಿಸಿಕೊಂಡಷ್ಟೂ ಹಸಿವಿನ ಚೀಲ ದೊಡ್ಡದಾಗುತ್ತಲೇ ಹೋಗುತ್ತದಲ್ಲ. ತಣಿಯದ ದಾಹವೊಂದು ನಮ್ಮನ್ನು ಆವರಿಸಿಕೊಂಡೂ ಬಿಟ್ಟಿರುತ್ತದಲ್ಲ.

ಅಗತ್ಯವಿರುವುದು ನಮ್ಮನ್ನು ನಾವು ಕಂಡುಕೊಳ್ಳುವ ಹಾಗೂ ಸಮರ್ಪಿಸಿಕೊಳ್ಳುವ ರೀತಿಯಲ್ಲಿ. ಎಡಚರದ್ದಾಗಲಿ-ಬಲಚರದ್ದಾಗಲಿ ಒಳ್ಳೆಯ ಮತ್ತು ಕೆಟ್ಟ ವಿಚಾರಗಳನ್ನು ಮುಲಾಜಿಲ್ಲದೆ ಒಪ್ಪಿಕೊಳ್ಳುವ ಮನಸ್ಥಿತಿ ಇರಬೇಕು. ನಮ್ಮದೇ ಶ್ರೇಷ್ಠವೆಂಬ ಗುಮ್ಮ ವಕ್ಕರಿಸಬಾರದಷ್ಟೆ. ಟೀಕಿಸಬೇಕೆಂದೇ ಟೀಕಿಸುವ ಪಕ್ಷಗಳು ಒಂದೆಡೆಯಾದರೆ ಇನ್ನೊಂದೆಡೆ ಬೆಳಗಾಗೆದ್ದು ಟೀಕಾ ಭಜನೆಯನ್ನು ಮಾಡುವ ಮಂದಿ. ಕೆಡುಕಿಗೆ ಹೇಗೂ ಟೀಕೆ ಇದೆಯಲ್ಲ ಒಳಿತಿಗೂ ಟೀಕೆ! ಕೆಲವೊಂದು ಚಟಕ್ಕೆ ಮದ್ದಿಲ್ಲ ಕಣ್ರೀ. ಚಟ್ಟಕ್ಕೇರುವರೆಗೂ ಜೊತೆಯಲ್ಲೇ ಇರುತ್ತದೆ.

ದೇಶವನ್ನು ಪ್ರೀತಿಸಿ ಬರೆದರೆ, ನುಡಿದರೆ ಬಲಚ-ಕೇಸರಿ-ಚಡ್ಡಿಯೆಂದು ಟ್ಯಾಗ್ ಮಾಡಿ ಬಿಡುತ್ತಾರೆ. ದೇಶದ ಅಸ್ಮಿತೆಯನ್ನು ಪ್ರಶ್ನಿಸಿ ಆಡಿದರೆ ಸುಧಾರಣಾವಾದಿ, ಪ್ರಗತಿಪರ, ಜಾತ್ಯತೀತನೆಂಬ ನಾಮಾಂಕಿತಗಳು ವಕ್ಕರಿಸಿಕೊಂಡು ಬಿಡುತ್ತವೆ. ದೇಶವನ್ನು ಪ್ರೀತಿಸುತ್ತಾ, ದೇಶವೇ ಮೊದಲೆಂದು ಭಾವಿಸುವುದು ಅಷ್ಟೊಂದು ದೊಡ್ಡ ಅಪರಾಧವೇನು? ಹೆತ್ತು ಸಲಹಿದವರನ್ನು,ಹುಟ್ಟಿ ಬೆಳೆದ ಮನೆಯನ್ನು, ನಮ್ಮದು ಎನ್ನುವಂತಹ ಯಾವುದನ್ನೂ ಪ್ರೀತಿಸದೆ ಅವೆಲ್ಲವನ್ನೂ ಧಿಕ್ಕರಿಸಿ ಒಗೆದು ಬಿಡೋಣ. ಸಾಧ್ಯವೇನು? ಪ್ರತಿರೋಧಿಸಬೇಕು, ಟೀಕಿಸಬೇಕು ಎಂಬ ಒಂದೇ ಕಾರಣಕ್ಕೆ ಲಂಗು ಲಗಾಮಿಲ್ಲದೆ ಆಡುತ್ತೇವಲ್ಲ ಏನನ್ನೋಣ ಇದಕ್ಕೆ? ಕಾಲ ಬದಲಾಗ್ತಾ ಇದೆ. ಚಿಂತಿಸುವ ಕ್ರಮವೂ ಕೂಡ. ಅದರ ಎಚ್ಚರವಿರಬೇಕಷ್ಟೆ.

ಜಾತ್ಯತೀತತೆ ಎನ್ನುವುದು ಬದುಕುವ ರೀತಿಯಲ್ಲಿ ಇರುವಂತದ್ದೇ ಹೊರತು ಹೇರುವಂತದ್ದೋ, ಹೇರಿಸಿಕೊಳ್ಳುವಂತದ್ದೋ ಅಲ್ಲ. ಹೇರಿ ಹೋರಿಸಿಕೊಂಡದ್ದಕ್ಕೆ ಆಯಸ್ಸು ಕಡಿಮೆಯೇ. ಈ ಮಣ್ಣಿನಲ್ಲಿ ಸಹಿಷ್ಣುತೆಯಿರುವಷ್ಟು ಲೋಕದ ಯಾವ ಮಣ್ಣಲ್ಲೂ ಇಲ್ಲ. ಇಂದು ನಾವೇನೆಂಬುದನ್ನು ಸೂಚಿಸುವುದು ಕೂಡ ನಮ್ಮ ಆಯ್ಕೆಗಳೇ ಎನ್ನುವಲ್ಲಿವರೆಗೆ ಈ ದೇಶವು ಬೆಳೆದು ನಿಂತಿದೆ. ನಾವಾಡುವ ಭಾಷೆ, ಬಳಸುವ ಶಬ್ದಗಳು,ಚಡ್ಡಿ-ಪ್ಯಾಂಟು-ಟೊಪ್ಪಿಗಳು, ಬಣ್ಣಗಳ ಆಯ್ಕೆಗಳು ನಾವು-ನೀವೇನೆಂದು ತೀರ್ಮಾನಿಸಿ ಬಿಡುವಷ್ಟು ಜಮಾನ ಬೆಳೆದು ನಿಂತಿದೆ. ನಿತ್ಯವೂ ಉರಿಸುತ್ತಿರುವ, ಪ್ರಕ್ಷುಬ್ಧ ಸ್ಥಿತಿಯನ್ನೇ ಬಯಸುವ ವೈರಿ ರಾಷ್ಟ್ರಕ್ಕೆ ಜಿಂದಾಬಾದ್ ಕೂಗಿದರೆ,ಅದರ ಪರವಾಗಿ ನಿಂತು ಮಾತನಾಡಿದರೆ ಸೆಕ್ಯುಲರ್ ಸಹಿಷ್ಣುಗಳಾಗಿ ಬಿಡುತ್ತೇವೆಯೇ? ಏನೋ ಆಗಿಬಿಡಬೇಕು, ಬಿಡುತ್ತೇನೆಂಬ ನಶೆಯ ಭ್ರಮೆಯಲ್ಲಿ ಮನಸ್ಸು-ಬಾಯಿಗೆ ಬಂದ ಹಾಗೆ ಆಡಿದರೆ ಸೆಕ್ಯುಲರ್ ಎನಿಸಿಕೊಳ್ಳುವುದಿಲ್ಲ. ಸಹಿಷ್ಣುಗಳೂ ಆಗುವುದಿಲ್ಲ. ದಿನಾ ಬೆಳಗೆದ್ದು ಹಸಿರೇ ಉಸಿರಿಗೆ ಮಾರಕವೆಂದು ಗೊಣಗಿದರೆ ದೇಶಪ್ರೇಮಿ ಎಂದೆನಿಸಿಯೂ ಕೊಳ್ಳುವುದಿಲ್ಲ. ಆಗಬಾರದ್ದು ಆಗಿ ಹೋಯಿತು. ಇರಲಿ, ತಪ್ಪೊಪ್ಪುಗಳನ್ನು ಸಮವಾಗಿ ಸ್ವೀಕರಿಸೋಣ. ಮುಂದಕ್ಕೆ ಇನ್ನೂ ಹೆಚ್ಚಿನ ಕೆಡುಕು ಆಗದಂತೆ ನೋಡಿಕೊಳ್ಳೋಣ. ಘಟಿಸಿದ ಘಟನೆಗಳನ್ನೇ ಹಿಡಿದು ಅದೆಷ್ಟು ಅಂತ ಜಗ್ಗುತ್ತೀರಿ? ಇಂತಹವೆಷ್ಟೋ ಸಿಹಿ-ಕಹಿಯನ್ನು ಚರಿತ್ರೆಯು ತನ್ನ ಹಿರಣ್ಯ ಗರ್ಭದೊಳಕ್ಕೆ ಇಳಿಸಿಕೊಂಡಿದೆ. ನೀಡ್ ಟು ಮೂವ್ ಆನ್. ಕೆಲವೊಂದು ಪದಗಳು ಅದೆಷ್ಟು ಸವೆದು ಹೋಗಿವೆ ಎಂದರೆ ಸವೆಯಲು ಇನ್ನೇನೂ ಉಳಿದಿಲ್ಲ ಅನ್ನುವಷ್ಟರವರೆಗೆ ಅವುಗಳು ಸವೆದು ಬಿಟ್ಟಿವೆ. ಆದರೂ ಅದೇ ಸವಕಲು ನಾಣ್ಯವನ್ನು ಮತ್ತೆ ಮತ್ತೆ ಹಿಡಿದು ತಿರುತಿರುಗಿಸಿ ಆಡಿ-ಪಾಡುವ ಕರ್ಮಕ್ಕೆ ಏನನ್ನೋಣ? ಬದಲಾದ ಕಾಲದೊಳಗೆ ಬೇಕಿರುವುದು ಒಳಗೊಳ್ಳುವಿಕೆ ಎಂಬ ದಿವ್ಯ ಔಷಧ ಮಾತ್ರ.

ಸೊಕ್ಕಿನ ಧ್ವನಿ ಗಂಟಲಲ್ಲಿ ಮೊಳಗ ಬೇಕಿದ್ದರೆ ಅದಕ್ಕೆ ದೇಶದ ಗಡಿ ಕಾಯುವ ಯೋಧ ಚೆಲ್ಲಿದ ರಕ್ತ ಕಾರಣವಾಗಿರುತ್ತದೆ ಎನ್ನುವುದರ ಅರಿವಿರಬೇಕು. ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಆರೋಗ್ಯಕರ ರೀತಿಯಲ್ಲಿ ಚರ್ಚೆ-ವಾದಗಳು ನಡೆಯಬೇಕಾದುದು ಕಾಲದ ತುರ್ತು. ಸಮಸ್ಯೆಗಳಿಗೆಲ್ಲ ದೊಂಬಿ-ಗಲಭೆಗಳೇ ಉತ್ತರವಲ್ಲ. ಹಲವು ರೀತಿಯ ಪರಿಹಾರ ಮಾರ್ಗಗಳಿವೆ. ಆದರೆ ಅದಕ್ಕೆ ಪೂರ್ವಾರ್ಗ್ರಹವಿಲ್ಲದ ನಿಷ್ಕಲ್ಮಶ, ಸ್ವಾರ್ಥರಹಿತ ಮನಸ್ಸಿರಬೇಕಷ್ಟೇ. ಸಮೃದ್ಧಿಯ ಬಾಳು ಯಾರಿಗೆ ಬೇಕಿಲ್ಲ ಹೇಳಿ? ಬೆಂಕಿ ಹಚ್ಚುವವರಿಗೂ, ಗೋಡೆ ಉರುಳಿಸುವವರಿಗೂ, ಕಲ್ಲು ಎಸೆಯುವವರಿಗೂ ಅಂತಹದ್ದೊಂದು ಜೀವನ ಬೇಕಿದೆ ಎನ್ನುವುದು ಪರಮ ಸತ್ಯ. ಆದರೆ ನಾಯಕರೆನಿಸಿ ಕೊಂಡವರು ಮಾತ್ರ ಸಿದ್ಧಾಂತ, ವಿಚಾರಧಾರೆ ಮತ್ತು ಬಣ್ಣಗಳ ಲೇಪನದ ನಶೆಯನ್ನು ತಮ್ಮ ಸುತ್ತಲಿನವರ ತಲೆಗೇರಿಸಿ ಬಿಟ್ಟಿರುತ್ತಾರೆ. ಅಷ್ಟಕ್ಕೇ ನಶೆಯಾಡಿಸುವ ಆಟದಲ್ಲಿ ಜನರು ದಾಳವಾಗಿ ಬಿಡುತ್ತಾರೆ. ಸೈದ್ಧಾಂತಿಕ ನಶೆಯನ್ನು ಇಂಜೆಕ್ಟ್ ಮಾಡಲೆಂದೇ ಒಂದಷ್ಟು ಗುಂಪುಗಳೂ ನಮ್ಮ ನಡುವೆ ಇದ್ದಾವೆ. ಇಂದಿನ ಯಾವುದೇ ಪಕ್ಷವೂ ವೋಟ್ ಬ್ಯಾಂಕ್ ಸಿದ್ಧಾಂತದಿಂದ ಹೊರತಾಗಿಲ್ಲ. ಈಗಾಗಲೇ ಅಂತಹದ್ದೊಂದು ಧ್ರುವೀಕರಣ ದೇಶದಲ್ಲಿ ಜರುಗಿಬಿಟ್ಟಿದೆ. ಅಂತಹದ್ದರಲ್ಲಿ ಯಾರು ಹಿತವರು ಮೂವರೊಳಗೆ ಎನ್ನುವ ಪ್ರಶ್ನೆ ಸಾರ್ವಕಾಲಿಕ ಸತ್ಯವಾಗಿ ಉಳಿದು ಬಿಡುತ್ತದೆ.

ಅಧಿಕಾರಕ್ಕಾಗಿ ಎಂತಹ ಮಟ್ಟಕ್ಕಾದರೂ ಇಳಿಯಲು ಸಿದ್ಧರಿರುವ ಸಂದಿಗ್ಧ ಸಮಯದೊಳಗೆ ನಮ್ಮ ಆಯ್ಕೆಗಳು ಹೇಗಿರಬೇಕು? ಕೆಂಪಗಿನ ಎಡವನ್ನು ಹಿಡಿದರೆ ಕೇಸರಿ ಬಲವನ್ನು ಕಳಕೊಳ್ಳಬೇಕಾಗುತ್ತದೆ. ಹಾಗಂತ ಬಲವನ್ನು ಹಿಡಿದಿರೋ ಎಡವು ಕೆಂಪಾಗಿ ಉರಿ ಉರಿದು ಹೊತ್ತಿ ಬಿಡುತ್ತದೆ. ಇವೆರಡೂ ಬೇಡವೆಂದು ಹಸಿರು-ಬಿಳಿಯನ್ನು ಏನಾದರು ಹಿಡಿದಿರಿ, ಅಷ್ಟೇ. ಲೇಬಲಿಲ್ಲದ ಸೀದಾ ಸಾದಾ ಬದುಕಿಗೆ ಅದೆಷ್ಟು ಲೇಬಲ್ಲುಗಳು? ಬಣ್ಣಗಳು ಹುಟ್ಟು ಹಾಕುವ ಅಮಲುಗಳು ಒಂದೋ ಎರಡೋ.. ಹೀಗಿರಲು, ವ್ಯವಸ್ಥೆಯನ್ನು ದೂಷಿಸಿಕೊಂಡೇ, ವ್ಯವಸ್ಥೆ ಒದಗಿಸುವ ಎಲ್ಲಾ ಸವಲತ್ತುಗಳನ್ನು ಅನುಭವಿಸುವವರು ಒಂದೆಡೆಯಾದರೆ, ವ್ಯವಸ್ಥೆಯಲ್ಲಿದ್ಡುಕೊಂಡೇ ಹೊಸ ಭರವಸೆಯನ್ನು ಕಾಣುವ ಸಾಮಾನ್ಯರು ಇನ್ನೊಂದೆಡೆ. ಸರಿಯಾದ ಹಾದಿಯಲ್ಲಿ ವ್ಯವಸ್ಥೆಯನ್ನು ನಡೆಸುವವರು ಶ್ರೀ ಸಾಮಾನ್ಯರೇ ಹೊರತು ನಿತ್ಯವೂ ಮೊಸರಲ್ಲಿ ಕಲ್ಲು ಹುಡುಕುವ ಮಂದಿಯಂತು ಅಲ್ಲವೇ ಅಲ್ಲ.

ಪ್ರಶ್ನೆ-ಉತ್ತರ, ವಾದ-ಪ್ರತಿವಾದ ಹಾಗೂ ಚರ್ಚೆಗಳು ಪ್ರಜಾಪ್ರಭುತ್ವದಲ್ಲಿ ಇರಬೇಕಾದದ್ದೇ. ಅಂತಹ ವ್ಯವಸ್ಥೆಯೊಳಗಡೆ ಆಡಳಿತ ಪಕ್ಷದಷ್ಟೇ ಗುರುತರವಾದ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇದೆ. ಆದರೆ ವಿರೋಧಿಸಬೇಕೆಂದೇ ವಿರೋಧಿಸುವ ಜಾಯಮಾನ ವಿರೋಧ ಪಕ್ಷದ್ದಾಗಬಾರದಲ್ಲವೇ? ದೇಶದ ಸಾರ್ವಭೌಮತ್ವದ ವಿಚಾರದಲ್ಲಂತೂ ಖಂಡಿತಾ ಸಲ್ಲ. ಅದೇರೀತಿ, ವಿಪಕ್ಷಗಳನ್ನು ಮೆಟ್ಟಿ ತುಳಿಯುವ ಗುಣ ಆಡಳಿತ ಪಕ್ಷಕ್ಕೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವದ ಸೊಬಗು ಅಡಗಿರುವುದೇ ಅದು ತರುವ ಬದಲಾವಣೆಯಲ್ಲಿ ಹಾಗೂ ಹರಿಸುವ ಹೊಸತನಗಳಲ್ಲಿ. ಹಾಗಂತ ಪ್ರಜಾಪ್ರಭುತ್ವವು ಹೊತ್ತು ತರುವ ಅಂತಹ ಯಾವುದೇ ಬದಲಾವಣೆ-ಹೊಸತನಗಳು ದೇಶದ ಹಿತಕ್ಕೆ ಮಾರಕ ಆಗಬಾರದಷ್ಟೇ. ಹೊಸ ಹೊಸ ಚಿಂತನೆಗಳು ಹೊಮ್ಮುತ್ತಿರುವ ಕಾಲದಲ್ಲಿ ಪ್ರತಿಭಟಿಸುವ ಕ್ರಮವೂ ಬದಲಾಗಬೇಕು. ಅರಚಿ-ಕಿರುಚಿ ಕೂಗಾಡಿ ವ್ಯಕ್ತಪಡಿಸುವುದಕ್ಕಿಂತಲೂ ಒಂದಷ್ಟು ಆರ್ದ್ರತೆಯನ್ನು ಮೂಡಿಸಿ ಏಕ ಕಾಲಕ್ಕೆ ಬಹು ಹೃದಯಗಳಿಗೆ ಸತ್ಯವು ಮುಟ್ಟಿ ತಟ್ಟುವ ರೀತಿ.. ಹರಿತ,ನುರಿತ ಚಿಂತನೆಗಳಿಂದ ತಣ್ಣಗೆ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುವ ಪ್ರಕಾರಗಳು ಹೆಚ್ಚು ಪ್ರಭಾವ ಬೀರುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸಿನಿಕತನವು ದುರ್ಬಲಗೊಳಿಸಿ ಬಿಡುತ್ತದೆ. ಮನೆ ಚೆನ್ನಿದ್ದರೆ ಊರು, ಊರು ಚೆನ್ನಿದ್ದರೆ ರಾಜ್ಯ, ರಾಜ್ಯ ಚೆನ್ನಿದ್ದರೆ ದೇಶ ಚೆನ್ನಾಗಿರುತ್ತದೆ. ಹಕ್ಕನ್ನು ಬಳಸುವುದೂ ಒಂದು ಕಲೆ. ದೇಶದ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಯಾವುದೇ ಸ್ವೇಚ್ಚಾಚ್ಚಾರವನ್ನು ಸಹಿಸಲಾಗದು. ಅಷ್ಟಕ್ಕೂ ಇಂತಹ ಧಿಮಾಕಿಗೆ ಕಾರಣ ಸಂವಿಧಾನವು ಕೊಟ್ಟ ಹಕ್ಕು. ಸವಲತ್ತು ಇದೆಯೆಂದು ನಾಲಗೆಯನ್ನು ತಿರುಗಿಸುತ್ತಾ, ಮನಬಂದಂತೆ ಶಬ್ದಗಳನ್ನು ಉರುಳಾಡಿಸುವ ಅಬ್ಬರದಲ್ಲಿ ಸ್ವಂತ ಮನೆಯನ್ನೇ ಧಿಕ್ಕರಿಸುವುದಿದೆಯಲ್ಲ.. ಅದು ಕಾಲದ ಬಹುದೊಡ್ಡ ವ್ಯಂಗ್ಯವೂ, ದುರಂತವೂ ಹೌದು. ನೆನಪಿಡಿ ಪ್ರಪಂಚದಲ್ಲಿ ಇಂತಹ ಅಸಂಬದ್ಧಧಿಮಾಕಿನ ಸ್ವೇಚ್ಛಾಚಾರಗಳಷ್ಟನ್ನೂ ಸಹಿಸಿಯೂ ಪೊರೆಯುವ ದೇಶವೊಂದಿದ್ದರೆ ಅದು ಭಾರತ ಮಾತ್ರ.

ಯಾವುದೇ ಪಕ್ಷವನ್ನಾದರೂ ಹೊತ್ತುಕೊಳ್ಳಿ, ಯಾವುದೇ ನಾಯಕರನ್ನಾದರೂ ತಬ್ಬಿಕೊಳ್ಳಿ, ಯಾವುದೇ ಸಿದ್ಧಾಂತವನ್ನಾದರೂ ಅಪ್ಪಿಕೊಳ್ಳಿ. ಅದು ಅವರವರ ಭಾವ, ಭಕುತಿ ಎಂದೇ ಬಿಟ್ಟು ಬಿಡೋಣ. ಭರವಸೆಯ ಜೊತೆ ಹೆಜ್ಜೆ ಹಾಕುವವರ ಸಂಖ್ಯೆ ದ್ವಿಗುಣವಾಗಬೇಕಷ್ಟೇ. ದೇಶ ಮೊದಲು ಎಂಬ ಪ್ರೀತಿ, ಕಾಳಜಿ, ವಿಶ್ವಾಸವೇ ಬಹುಮುಖ್ಯವಾಗಿರಲಿ ಎಂಬ ನಂಬಿಕೆಯೊಂದಿಗೆ ಎಲ್ಲರೂ ಜೊತೆಯಾಗಿರೋಣ.

ಈ ಅಂಕಣದ ಹಿಂದಿನ ಬರೆಹಗಳು:
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...