ಭಾಷೆ-ಭಾವ-ಧ್ವನಿಗಳ ಲಯದೊಂದಿಗೆ ರಂಜನಿ ರಾಘವನ್ ಬರೆದ ‘ಸ್ವೈಪ್ ರೈಟ್’ ಕಾದಂಬರಿ...


ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ ಎನ್ನುತ್ತಾರೆ ಕತೆಗಾರ, ಲೇಖಕ ವಸುಧೇಂದ್ರ. ಕತೆಗಾರ್ತಿ ರಂಜನಿ ರಾಘವನ್ ಅವರ ಸ್ವೈಪ್ ರೈಟ್ ಕಾದಂಬರಿಯಲ್ಲಿ ಅವರು ಬರೆದ ಮುನ್ನುಡಿ ಹಾಗೂ ಲೇಖಕಿಯ ಮಾತುಗಳು ನಿಮ್ಮ ಓದಿಗಾಗಿ...

ಬೆಂಗಳೂರಿನ ಯುವಜನತೆ ತನ್ನದೇ ಆದ ವಿಭಿನ್ನ ಪರಿಸರವನ್ನು ಕಟ್ಟಿಕೊಂಡಿದೆ. ದೊಡ್ಡ ಕನಸುಗಳು, ವೈಯಕ್ತಿಕ ಸ್ಪೇಸ್, ಡಿಜಿಟಲ್ ಸುನಾಮಿ, ಸರಸ-ವಿರಸ, ಸ್ವೈಪ್ ರೈಟ್, ಸ್ವೈಪ್ ಲೆಫ್ಟ್, ತ್ವರಿತ ಫಲಿತಾಂಶ, ತುಸು ಆದರ್ಶ, ದೂರದ ಕಾಡಿನ ಪ್ರೀತಿ, ಪ್ರಾಣಿದಯೆ, ಓಪನ್ ರಿಲೇಶನ್‌ಶಿಪ್  - ಹೀಗೆ. ಇವೆಗಳೆಲ್ಲವೂ ಮಾಂತ್ರಿಕನೊಬ್ಬ ಗಾಳಿಯಲ್ಲಿ  ಐದಾರು ಚೆಂಡುಗಳನ್ನು ಎಸೆದು ನೆಲಕ್ಕೆ ಬೀಳದಂತೆ ಸಮತೋಲನ ಕಾಯ್ದುಕೊಳ್ಳಬೇಕಾದ ಒತ್ತಡದಲ್ಲಿ ಸಾಗುತ್ತಿರುತ್ತವೆ. ಯಾವುದೋ ಗಳಿಗೆಯಲ್ಲಿ ಅನಿರೀಕ್ಷಿತವೊಂದು ಸಂಭವಿಸಿ ಚೆಂಡುಗಳು ನೆಲಕ್ಕೆ ಬಿದ್ದಾಗ, ಯುವಜಗತ್ತು ಕಂಗಾಲಾಗಿ ಅಧೀರನಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆ ಸ್ಥಿತಿಯನ್ನು ಎದುರಿಸುವ ಒತ್ತಡದಲ್ಲಿಯೇ ಹರೆಯದವನೊಬ್ಬ ಪ್ರಬುದ್ಧನಾಗುತ್ತಾನೆ. ಅಂತಹ ಜಗತ್ತೊಂದನ್ನು, ಅದರದೇ ಆದ ಭಾಷೆ-ಭಾವ-ಧ್ವನಿಗಳ ಲಯದೊಂದಿಗೆ ಈ ಕಾದಂಬರಿಯಲ್ಲಿ ಲೇಖಕಿ ರಂಜನಿ ರಾಘವನ್ ನಮಗೆ  ಕಟ್ಟಿಕೊಟ್ಟಿದ್ದಾರೆ. ಲೇಖಕಿಯು ಅಂತಹ ಬದುಕಿನ ಭಾಗವೇ ಆಗಿರುವುದರಿಂದ, ಈ ಕಾದಂಬರಿಯ ಸಹಜತೆಯ ನಡೆಯಲ್ಲಿ ಒಂಚೂರೂ ಲಯ ತಪ್ಪುವುದಿಲ್ಲ. ಹಿರಿಯ ಕತೆಗಾರರಿಗೆ ಯಾವತ್ತೂ ಸವಾಲೆನ್ನಿಸುವ ಆಧುನಿಕ ಹುಡುಗರ ಕಥನ ಇಲ್ಲಿ ನೀರು ಹರಿದಷ್ಟು ಸರಾಗವಾಗಿ ಚಲಿಸಿದೆ. ಮುಗ್ಧತೆಯನ್ನು ಕಳೆದುಕೊಳ್ಳದೆ ಬದುಕನ್ನು ಕಾಣುವ ಲೇಖಕಿಯ ಸ್ವಭಾವ, ಇಲ್ಲಿ ಕತೆಗೆ ತನ್ನದೇ ಆದ ಕೋಮಲ ಬೆಳದಿಂಗಳನ್ನು ಲೇಪಿಸಿದೆ. ಜಗತ್ತಿನ ಕಠೋರ ಬಿಸಿಲಿನ ಅರಿವೂ ಲೇಖಕಿಗಿರುವುದರಿಂದ, ಸಂಬಂಧಗಳ ಕಗ್ಗಂಟೊಂದನ್ನು ಎದುರಿಸುವ ಸನ್ನಿವೇಶವೂ ಈ ಕೃತಿಯಲ್ಲಿ ಗಾಢವಾಗಿ ಮೂಡಿಬಂದಿದೆ. 

ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜಿನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.

ಅವರ ಹಿಂದಿನ ಕೃತಿಯಂತೆ, ಇದೂ ದೊಡ್ಡ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತೇನೆ.

- ವಸುಧೇಂದ್ರ

***

ಮೊದಲ ಮಾತು

ಒಂದು ಹುಡುಗ ಹುಡುಗಿ ಮಧ್ಯೆ ಪ್ರೀತಿ ಹುಟ್ಟುವ ಕತೆಗಳು ನಮ್ಮೆಲ್ಲರಿಗೂ ಪರಿಚಯ. ಹಾಗಾಗಿ ಹುಟ್ಟಿದ ಪ್ರೀತಿಯನ್ನು ನಿಭಾಯಿಸೋ ದಾರಿಯಲ್ಲಿರುವ ಪ್ರೇಮಿಗಳ ಕತೆಯನ್ನು ಹೇಳಬಯಸಿದ್ದೇನೆ. ಶಾಲೆ ಕಾಲೇಜಿನಲ್ಲಿ ಓದುವಾಗ ಪರಿಚಯವಾಗಿ, ಆಗಲೇ ಹುಟ್ಟಿದ ಪ್ರೀತಿಯನ್ನು ಹತ್ತು ಹನ್ನೆರಡು ವರ್ಷ ಜೋಪಾನ ಮಾಡಿಕೊಂಡು ಬಂದು ಮದುವೆಯಾದ ಜೋಡಿಗಳನ್ನು ನನ್ನ ಪರಿಸರದಲ್ಲಿ  ನೋಡಿದ್ದೇನೆ. ಐಟಿ ಕೆಲಸಕ್ಕೆ ಸೇರಿ ರಾತ್ರಿ ಹಗಲೆನ್ನದೇ ದುಡಿಯುವುದರ ಜೊತೆಗೆ ಎದುರಾಗುವ ಸವಾಲುಗಳು, ಅಭದ್ರತೆಗಳು, ಸಲಿಗೆ, ಪ್ರೀತಿ ನನಗೆ ಬಹಳ ಹತ್ತಿರವಾಗಿದೆ. ಸಮಕಾಲೀನ ಜಗತ್ತಿಗೆ ಆ ಅನುಭವಗಳು ಕನೆಕ್ಟ್ ಆಗಬಹುದು ಅನ್ನೋ ಯೋಚನೆಯಲ್ಲಿ ಅವನ್ನು ಕತೆಗೆ ಸೇರಿಸಿದೆ. ಒಂದು ಕಾದಂಬರಿಯಾಗುವುದಕ್ಕೆ ಇದಷ್ಟೇ ಪರಿಕರ ಸಾಲುವುದಿಲ್ಲ ಎಂದು ಕಥಾವಸ್ತುವಿನ ಹಿಂದೆ ಬಿದ್ದೆ. ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು ಅನ್ನೋ ಡಿವಿಜಿ ಅವರ ಮಾತು ನೆನಪಾಗಿ ನನ್ನ ತಂದೆ ತಾಯಿ ವಯಸ್ಸಿನವರೂ ಸ್ಪಂದಿಸಬಹುದಾದ ಪಾತ್ರಗಳನ್ನು ಹೆಣೆಯಬೇಕೆನಿತು. ಆಗ ಹೊಳೆದ ಯೋಚನೆ ನನಗೆ ಹೊಸದಾದರೂ ಅದನ್ನು ಬರೆಯುವ ಧೈರ್ಯ ಮಾಡಿದ್ದೇನೆ.
 
ಬೆಂಗಳೂರು, ನಾನು ಹುಟ್ಟಿ ಬೆಳೆದ ಊರು. ಉಡುಪಿಯಲ್ಲಿ ವಾಸವಿರೋ ನನ್ನ ಚಿಕ್ಕಮ್ಮನ ಮನೆಗೆ ಆಗಾಗ ಹೋಗಿ ಠಿಕಾಣಿ ಹೊಡೆದಿದ್ದರಿಂದ ಅಲ್ಲಿನ ಜನಜೀವನವೂ ನನಗೆ ಚಿರಪರಿಚಿತವಾಗಿದೆ. ಈ ಎರಡು ಊರಿನಲ್ಲಿ ನಮ್ಮ ಮುಖ್ಯಪಾತ್ರಗಳಿಗೆ ಮನೆ, ಕೆಲಸ ಹುಡುಕಿಕೊಟ್ಟಿರುವುದರಿಂದ ನನ್ನ ಕೆಲಸ ಸುಲಭವಾಯಿತು. ಒಬ್ಬ ಅಭಿನೇತ್ರಿಯಾಗಿ ಸಾಕಷ್ಟು ದೃಶ್ಯಗಳಲ್ಲಿ ನಟಿಸಿ, ಆ ಕ್ಷೇತ್ರದಲ್ಲಿ ಸಂಪಾದಿಸಿದ ಗ್ರಹಿಕೆ ನನಗೆ ಸನ್ನಿವೇಶಗಳನ್ನು ದೃಶ್ಯರೂಪದಂತೆ ಕಟ್ಟಿಕೊಡಲು ದಾರಿಮಾಡಿಕೊಟ್ಟಿದೆ. ಕತೆಡಬ್ಬಿ ಕಥಾಸಂಕಲನಕ್ಕೆ ಸಿಕ್ಕ ಪ್ರೋತ್ಸಾಹವೇ ಈ ಕಾದಂಬರಿ ಬರೆಯಲು ಮುಖ್ಯ ಪ್ರೇರೇಪಣೆ. ನನ್ನಲ್ಲಿರೋ ಕತೆಗಳನ್ನು ಕೇಳೋ ಮನಸ್ಸುಗಳಿವೆ ಅನ್ನೋ ವಿಶ್ವಾಸ ನೂರಾರು ಪುಟಗಳನ್ನು ಬರೆಸಿದೆ.  ಹಾಗೆ ನೋಡಿದರೆ ನನಗೆ ಸಣ್ಣಕತೆಗಳಿಗಿಂತ ಕಾದಂಬರಿಗಳು ಮನಸ್ಸಿಗೆ ಹತ್ತಿರ. ಏಕೆಂದರೆ ನಾನು ಎಸ್.ಎಲ್ ಭೈರಪ್ಪನವರ, ಶಿವರಾಮಕಾರಂತರ, ತೇಜಸ್ವಿವರ ಕಾದಂಬರಿಗಳ ಜೊತೆ ಪತ್ರಿಕೆಗಳಲ್ಲಿ ಸಂಚಿಕೆಗಳ ರೂಪದಲ್ಲಿ ಬರುತ್ತಿದ್ದ ತ್ರಿವೇಣಿ, ಕೌಂಡಿನ್ಯ ಅನುಪಮಾ ನಿರಂಜನ ಅವರ ಸಾಂಸಾರಿಕ ಕಾದಂಬರಿಗಳನ್ನು ಓದುತ್ತಾ ಬಂದಿದ್ದೇನೆ. ಸಣ್ಣವಳಿದ್ದಾಗ ಬೇಸಿಗೆ ರಜೆಯಲ್ಲಿ ಯಾವಾಗಲೋ ತರಂಗ ಪತ್ರಿಕೆಯಲ್ಲಿ ಬಂದಿದ್ದ ಸಂಚಿಕೆಯನ್ನು ಓದುತ್ತಾ ಕೂತಿದ್ದಾಗ "ಗಂಡ ಹೆಂಡತಿ ಸಂಸಾರದ ಕತೆ ನಿಂಗ್ಯಾಕ್ ಬೇಕು" ಅಂತ ದೊಡ್ಡವರಿಂದ ಬೈಸಿಕೊಂಡಿದ್ದೂ ಉಂಟು!
 
ಸುಮಾರು ಇನ್ನೂರೈವತ್ತು ಪುಟಗಳನ್ನು ಬರೆದು ಮುಗಿಸಿದಾಗ ನನ್ನಲ್ಲಿ ಆತಂಕವಿತ್ತು, ಕತೆಯ ಓಘ, ಭಾವನೆಗಳನ್ನು ಕಟ್ಟಿಕೊಡುವಲ್ಲಿ ಸಮರ್ಥಳಾಗಿದ್ದೇನೋ ಇಲ್ಲವೋ ಎಂದು. ಹಾಗಾಗಿ ತಿಳಿದವರ ಮಡಿಲಲ್ಲಿ ಈ ಪುಸ್ತಕದ ಕ್ವಾಲಿಟಿ ಟೆಸ್ಟ್ ನಡೆಯಿತು. ಹೀಗೊಂದು ಹೊಸ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದಾಗ ಒಂದೇ ರಾತ್ರಿಯಲ್ಲಿ ಇಡೀ ಕಾದಂಬರಿಯನ್ನು ಓದಿ ಮುಗಿಸಿದ ಲೇಖಕಿ,ಚಿಂತಕಿ ಮತ್ತು ಮಂಡಲ ಕಲಾವಿದೆ ಚೇತನ ತೀರ್ಥಹಳ್ಳಿಯವರು, ನಿಮ್ಮ ಪಾತ್ರಗಳು ಮನಸ್ಸಿಗಿಳಿದವು ಎಂದು ತಿಳಿಸುವ ಮೂಲಕ ನನ್ನ ಭಯ ಕಡಿಮೆ ಮಾಡಿದರು. ನನ್ನ ನೆಚ್ಚಿನ ಗೆಳೆಯ, ನಟ ಗೋಪಾಲ ಕೃಷ್ಣ ದೇಶ್ಪಾಂಡೆಯವರು, ನನ್ನ ಆತ್ಮೀಯರಾದ ಪಾರ್ಥಸಾರ್ಥಿ ಅಂಕಲ್ ಸಹ ಹಸ್ತಪ್ರತಿಯನ್ನು ಓದಿ ಬೆನ್ನುತಟ್ಟಿದ್ದಾರ‍ೆ.  ಸಿನಿಮಾ ನಿರ್ದೇಶಕರು ಮತ್ತು ನನ್ನ ಸ್ನೇಹಿತರಾದ ಜಡೇಶ್ ಕುಮಾರ್ ಹಂಪಿಯವರು ಈ ಕಾದಂಬರಿ ನಿಮ್ಮ ಬರವಣಿಗೆಯ ಪೂರ್ಣದರ್ಶನ ಮಾಡಿಸಲಿದೆ ಎಂದು ಹೇಳಿ ನನ್ನ ವಿಶ್ವಾಸ ಹೆಚ್ಚಿಸಿದ್ದಾರೆ.              ಇವರೆಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜೋಗಿ ಸರ್ ನನ್ನ ಸಾಹಿತ್ಯಲೋಕದ ಪ್ರಯಾಣಕ್ಕೆ ಮೂಲ ಕಾರಣ. ಅವರ ಪ್ರೋತ್ಸಾಹದಿಂದ ನಾನು ಕತೆಡಬ್ಬಿ ಮತ್ತು ಸ್ವೈಪ್ ರೈಟ್ ಬರೆಯಲು ಸಾಧ್ಯವಾಯಿತು. ಅವರು ಈ ಕಾದಂಬರಿಯನ್ನು ಓದಿ "ನಿಮಗೆ ಬರವಣಿಗೆ ಸಿದ್ಧಿಸಿದೆ" ಎಂದು ಹೇಳಿ ನನ್ನ ವಿಶ್ವಾಸವನ್ನು ಇಮ್ಮಡಿಗೊಳಿಸಿದ್ದಾರೆ. ನನ್ನ ಎರಡನೇ ಪುಸ್ತಕ ಬರುತ್ತಿದೆ ಅಂತ ಗೊತ್ತಾದ ತಕ್ಷಣ ಕಾಯುತ್ತಿದ್ದೇವೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಕೌಂಟ್ ಡೌನ್ ಶುರುಮಾಡಿಕೊಂಡ ನನ್ನ ಪ್ರೀತಿಯ ಓದುಗರಿಗೆ, ಹಿತೈಷಿಗಳಿಗೆ ಎಂದೆಂದೂ ಚಿರಋಣಿ.
 
ಪುಸ್ತಕ ಬಿಡುಗಡೆಯ ದಿನಾಂಕ ಹಿಂದೂಡಿದ ಕಾರಣದಿಂದ ನಾನು ಅವಸರ ಮಾಡಿದರೂ ಚಿಂತೆ ಬೇಡ ಎಂದು ಹೇಳಿ ಮನಸ್ಪೂರ್ವಕವಾಗಿ ಮುನ್ನುಡಿ ಬರೆದುಕೊಟ್ಟ ವಸುಧೇಂದ್ರ ಸರ್ ಗೆ ನನ್ನ ಅನಂತಾನಂತ ವಂದನೆಗಳು. ಎರಡನೇ ಬಾರಿ ನನ್ನ ಬರವಣಿಗೆಯನ್ನು ಪುಸ್ತಕವಾಗಿಸೋ ಜವಾಬ್ದಾರಿ ಹೊತ್ತ ಬಹುರೂಪಿ ಪ್ರಕಾಶನಕ್ಕೆ ಮತ್ತು ಜಿ.ಎನ್ ಮೋಹನ್ ಸರ್ ಗೆ ನನ್ನ ಧನ್ಯವಾದಗಳು, ಎಂದಿನಂತೆ ಈ ಸಲವೂ ಪುಸ್ತಕವನ್ನು ಮುದ್ದಾಗಿ ಕಾಣುವಂತೆ ನೋಡಿಕೊಂಡಿದ್ದಾರೆ. ಎಲ್ಲರೂ ಮೆಚ್ಚುವಂತೆ ಮುಖಪುಟ ವಿನ್ಯಾಸ ಮಾಡಿದ ಅರುಣ್ ಕುಮಾರ್ ಅವರಿಗೂ ನನ್ನ ನಮನಗಳು. ಸಾಹಿತ್ಯ ಲೋಕದಲ್ಲಿ ಅಂಬೆಗಾಲಿಡುತ್ತಿರೋ ನನಗೆ ಇಷ್ಟೆಲ್ಲಾ ಬೆಂಬಲ ಸಿಗುತ್ತಿರುವುದು ನನ್ನ ಭಾಗ್ಯ ಮತ್ತು ನನ್ನ ಜವಾಬ್ದಾರಿಯೂ ಹೌದು ಎಂದು ಭಾವಿಸಿ ವಿನಮ್ರತೆಯಿಂದ ಈ ಕೃತಿಯನ್ನು ನಿಮ್ಮೆಲ್ಲರ ಮುಂದಿಡುತ್ತಿದ್ದೇನೆ. ಈ ಕಾದಂಬರಿ ನನ್ನ "ಸ್ವೈಪ್ ರೈಟ್" ಪ್ರಯತ್ನವಾಗಲಿದೆ ಎಂದು ನಂಬಿದ್ದೇನೆ.
 
ಪ್ರೀತಿಯಿಂದ,
ರಂಜನಿ ರಾಘವನ್.

ರಂಜನಿ ರಾಘವನ್ ಅವರ ಲೇಖಕ ಪರಿಚಯ...

MORE FEATURES

ತುಳುನಾಡಿನ ದೈವಾರಾಧನೆಯ ಒಳ, ಹೊರಗಿನ ವಿಚಾರಗಳನ್ನು ಈ ಕೃತಿ ದಾಖಲಿಸಿದೆ

24-04-2024 ಬೆಂಗಳೂರು

"ಇದನ್ನು ಪುಸ್ತಕ ಅನ್ನುದಕ್ಕಿಂತಲೂ ದೈವಗಳ ಬಗ್ಗೆ ಭಕ್ತಿ , ಪ್ರೀತಿ ಇರುವವರ ಮನೆಯಲ್ಲಿರಲೆಬೇಕಾದ ಅಧ್ಬುತವಾದ ಗ್ರಂ...

ಸಾಮಾಜಿಕ ನ್ಯಾಯದ ಪ್ರಜ್ಞೆಯಾಗಿ ಡಾ. ರಾಜ್ ಕುಮಾರ್

24-04-2024 ಬೆಂಗಳೂರು

ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಮೇರು ಕಲಾವಿದ ಡಾ.ರಾಜ್ ಕುಮಾರ್. ನಟಸಾರ್ವಭೌಮ, ವರನಟ ಡಾ.ರಾಜ್ ಕುಮಾರ್ ತಮ್ಮ ಚಿ...

ಉಪನಿಷತ್ತುಗಳನ್ನು ವಿಮರ್ಶಾತ್ಮಕ ನೆಲೆಯಲ್ಲಿ ಕಾಣುವ ಪ್ರಯತ್ನವೇ ಈ ಕೃತಿ

23-04-2024 ಬೆಂಗಳೂರು

‘ಉಪನಿಷತ್ತುಗಳನ್ನು ಪರಿಚಯಿಸುವ ಪುಸ್ತಕವೇ ಆದರೂ ವಿಮರ್ಶಾತ್ಮಕ ನೆಲೆಯಲ್ಲಿ ಅವನ್ನು ಕಾಣುವ ಪ್ರಯತ್ನವಾಗಿದೆ. ನಿಗ...