Date: 30-10-2025
Location: ಬೆಂಗಳೂರು
ಬೆಂಗಳೂರು: ವಿಮರ್ಶೆ ಮತ್ತು ಸಂಶೋಧನೆಗೆ ಅಪಾರವಾದ ಓದು ಬೇಕು. ಅಂತಹ ಬೆರಗಿನ ಓದು ಓ.ಎಲ್. ನಾಗಭೂಷಣ ಸ್ವಾಮಿ ಅವರಿಗೆ ಇತ್ತು. ಒಂದು ದಿನಕ್ಕೆ ಒಂದು ಸಾವಿರ ಪುಟಗಳನ್ನು ಓ.ಎಲ್.ಎನ್. ಓದುತ್ತಾರೆ ಎಂದರೆ ನಂಬಲೇಬೇಕು ಎಂದು ಪ್ರೊ. ಅಮರೇಶ ನುಗಡೋಣಿ ಪ್ರಸಿದ್ಧ ಕಥೆಗಾರರು, ಹೊಸಪೇಟೆ ಇವರು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ 28ನೇ ಅಕ್ಟೋಬರ್ 2025ರಂದು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ಮತ್ತು ಅಭಿನವ, ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆನು ಒಲಿದಂತೆ ಹಾಡುವೆ - 2 ಕನ್ನಡ ಮನಸ್ಸಿನೊಂದಿಗೆ ಒಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಓ.ಎಲ್.ನಾಗಭೂಷಣ ಸ್ವಾಮಿ : ವಚನ ಸಾಹಿತ್ಯ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡುತ್ತ ವಿದ್ಯಾರ್ಥಿ ದೆಸೆಯಿಂದಲೇ ಅವರು ಕನ್ನಡ ವಿಮರ್ಶೆ ಬರೆದಿದ್ದಾರೆ. ವಚನಗಳಲ್ಲಿ ಕೃತಿನಿಷ್ಠ ಓದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಭಾಷೆಯನ್ನು ಬಹಳ ಸೂಕ್ಷ್ಮವಾಗಿ ಓದಬಲ್ಲ ವ್ಯಕ್ತಿತ್ವ ಅವರದು. ವಚನ ಸಾಹಿತ್ಯದಲ್ಲಿ ಬಹಳಷ್ಟು ಆಲೋಚನೆ ಮಾಡುವುದು ಇದೆ. ಕಾಲ ಕಳೆದಂತೆ ವಚನಗಳು ಜೀವಂತವಾಗಿ ನಮ್ಮನ್ನು ಓದಲು ಹೇಳುತ್ತವೆ ಎಂಬ ನೆಲೆಯಲ್ಲಿ ಓ.ಎಲ್.ಎನ್. ತಮ್ಮ ಕೃತಿಗಳನ್ನು ರೂಪಿಸಿದ್ದಾರೆ. ಪ್ರಕ್ಷೇಪಗಳಿಲ್ಲದೇ ವಚನಗಳನ್ನು ಹೇಗೆ ಓದಬಹುದು ಎಂದು ಸಂಶೋಧನೆ ಮಾಡಿ ವಿಮರ್ಶಿಸಿದ್ದಾರೆ. ಪ್ರಕ್ಷೇಪಗಳನ್ನು ಅಧ್ಯಯನ ಮಾಡಲು ಒಂದು ಕ್ರಮವಿದೆ. ಅಲಕ್ಷ್ಯ ಮಾಡಬಾರದು ಎಂದು ಕಿ.ರಂ. ನಾಗರಾಜ, ಡಾ.ಕೆ.ವಿ. ನಾರಾಯಣ, ಓ.ಎಲ್.ಎನ್. ಅವರು ಹೇಳಿದ್ದಾರೆ. ಶೂನ್ಯಸಂಪಾದನೆಯೇ ಪ್ರಥಮಬಾರಿಗೆ ಮಹಿಳೆಯರನ್ನು ಕಾಣಿಸಿದ್ದು. ಮೊದಲ ಬಾರಿಗೆ ಮಹಿಳೆಯರನ್ನು ಚರ್ಚೆಗೆ ತಂದಿದ್ದು ಎಂದು ತಮ್ಮ ಕೃತಿ ಉಲಿವಮರದಲ್ಲಿ ಹೇಳುತ್ತಾರೆ. ಸುಮಾರು ೨೫ರಿಂದ ೩೦ ಸಾವಿರ ವಚನಗಳನ್ನು ನೆನಪಿಟ್ಟುಕೊಂಡು ಚರ್ಚಿಸುತ್ತಾರೆ. ವಚನಗಳನ್ನು ಅವರು ಹಿಂದಿನ ಓದಿನ ತಳಹದಿಯ ಮೇಲೆ ಬರೆಯದೇ ತಾವೇ ಒರಿಜಿನಲ್ ಆಗಿ ಬರೆಯುವುದು ಅಚ್ಚರಿ ತರುತ್ತದೆ. ವಚನಗಳು ಸುಲಭ ಓದು ಎಂಬ ಬೀಸು ಹೇಳಿಕೆ ಇದೆ. ಆದರೆ ಓ.ಎಲ್.ಎನ್. ಇವತ್ತಿಗೂ ವಚನಗಳಲ್ಲಿರುವ ಕಠಿಣ ಪದಗಳಿಗೆ ಪದಕೋಶ ಬೇಕು ಎಂದು ಹೇಳುತ್ತಾರೆ. ವಚನಗಳಲ್ಲಿ ಸಂಸ್ಕೃತ ಪದಗಳು ಅನಂತರ ಸೇರ್ಪಡೆಯಾಗಿವೆ ಎಂದು ತಮ್ಮ ಶೋಧದಲ್ಲಿ ಓ.ಎಲ್.ಎನ್. ತಿಳಿಸಿದ್ದಾರೆ ಎಂದು ಡಾ.ಅಮರೇಶ ನುಗಡೋಣಿ ಅವರು ಓ.ಎಲ್.ಎನ್ ಅವರ ವಚನ ಸಾಹಿತ್ಯವನ್ನು ವಿವರವಾಗಿ ಕಟ್ಟಿಕೊಟ್ಟರು.
ನಂತರ ಓ.ಎಲ್. ನಾಗಭೂಷಣ ಸ್ವಾಮಿ : ಅನುವಾದ ಸಾಹಿತ್ಯ ಕುರಿತು ತುಮಕೂರು ವಿಶ್ವವಿದ್ಯಾಲಯದ ಪ್ರೊ.ಎನ್.ಎಸ್. ಗುಂಡೂರು ಅವರು ಮಾತನಾಡುತ್ತ, ಓ.ಎಲ್.ಎನ್. ಅವರು ಗುಣಾತ್ಮಕ ಓದುಗರಾಗಿ ಬಹಳ ಮುಖ್ಯವಾಗುತ್ತಾರೆ. ಅವರೊಬ್ಬ ಡಿಸರ್‌ನಿಂಗ್ ರೀಡರ್. ಅವರು ತಮಗೆ ಗೊತ್ತಿರುವ ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನು ಕನ್ನಡಕ್ಕೆ ದುಡಿಸಿಕೊಳ್ಳುವ ಬಗೆಯಿಂದ ಬಹಳ ಮುಖ್ಯರಾಗುತ್ತಾರೆ. ದ್ವಿಭಾಷಾ ಸಂವೇದನೆಗಳನ್ನು ಬಳಸಿಕೊಳ್ಳುವ ಮಾದರಿಗೆ ಓ.ಎಲ್.ಎನ್. ಮಾದರಿಯಾಗುತ್ತಾರೆ. ಹೊಸ ಸಾಹಿತ್ಯ ಸಂಸ್ಕೃತಿಯನ್ನು ಹುಟ್ಟುಹಾಕುವ ಶಕ್ತಿ ಅನುವಾದಕ್ಕಿದೆ. ಅವರ ಹೆಚ್ಚಿನ ಅನುವಾದಗಳು ಇಂಗ್ಲಿಷ್‌ನಿಂದ ಕನ್ನಡಕ್ಕೆ ಆಗಿವೆ. ಅದ್ಭುತವಾದ ವಿಮರ್ಶೆಯ ಪರಿಭಾಷೆಯನ್ನು ಓ.ಎಲ್.ಎನ್. ಅವರು ತಂದರು. ಪ್ರಸ್ತುತದ ಅನುವಾದ ಆಧುನಿಕತೆಯ ಪರಂಪರೆಯಾಗಿದೆ. ಮೂಲಕ್ಕೆ ನಿಷ್ಠವಾಗುವ ಅನುವಾದದ ಲಾಜಿಕ್ ಬಂದಿದೆ. ಆದರೆ ಇದು ಸಹ ಆಧುನಿಕ ಕನ್ನಡ ಜಗತ್ತನ್ನು ರೂಪಿಸಿತು. ಎಲ್ಲ ಅನುವಾದಗಳಿಗೂ ಒಂದು ಕಲ್ಚರಲ್ ಪಾಲಿಟಿಕ್ಸ್ ಇರುತ್ತದೆ ಎಂದು ಗುಂಡೂರು ಅವರು ತಿಳಿಸಿದರು.
ಮುಂದುವರೆದು ಕನ್ನಡದ ಮೇಲಿನ ಬದ್ಧತೆಯಿಂದ ಓ.ಎಲ್.ಎನ್. ಅವರು ಅನುವಾದಗಳ ಮೂಲಕ ಹತ್ತಿರವಾಗುತ್ತಾರೆ. ಅವರ ಬಿಡಿ ಬಿಡಿ ಅನುವಾದಗಳನ್ನು ವಿಶ್ವಾತ್ಮಕತೆಯ ಭಿತ್ತಿಯಲ್ಲಿ ನೋಡಬೇಕು. ಅವರ ಅನುವಾದಗಳಲ್ಲಿ ಕನ್ನಡ ಸಾರಸ್ವತ ಲೋಕ ಇದೆ. ಥೇಯರಿ ಮತ್ತು ಪ್ರಾಕ್ಟಿಸ್‌ನ್ನು ಜೊತೆಯಾಗಿಟ್ಟುಕೊಂಡು ಓ.ಎಲ್.ಎನ್. ಅನುವಾದಿಸುತ್ತಾರೆ. ಇಂಗ್ಲಿಷ್ ಬಂದ ತಕ್ಷಣ ಅನುವಾದ ಮಾಡಲು ಆಗುವುದಿಲ್ಲ. ವಿದ್ವತ್ ಬಹಳ ಮುಖ್ಯವಾಗುತ್ತದೆ. ಜೊತೆಗೆ ಸ್ಥಳೀಯ ಜ್ಞಾನದ ಅಗತ್ಯವು ಬೇಕಾಗುತ್ತದೆ. ಇದೆಲ್ಲವೂ ಓ.ಎಲ್.ಎನ್. ಅವರಲ್ಲಿತ್ತು ಎಂದು, ಓ.ಎಲ್.ಎನ್. ಅವರ ಅನುವಾದಗಳು ನಮ್ಮೊಂದಿಗೆ ಹೇಗೆ ಸಂವಾದಿಸುತ್ತವೆ ಎಂದು ಪ್ರಸ್ತುತಪಡಿಸಿದರು.
ಓ.ಎಲ್.ಎನ್. ನಾಗಭೂಷಣ ಸ್ವಾಮಿ ಅವರು ಮಾತನಾಡುತ್ತ, ಪ್ರಯಾಣ ಮಾಡದೇ ಊರು ತಲುಪುವ ಹಾಗಿದೆ ಇಂದಿನ ಶಿಕ್ಷಣ ಎಂದು ವಿಷಾದ ವ್ಯಕ್ತಪಡಿಸುತ್ತ, ಅನುವಾದ ಮಾಡುವಾಗ ಭಾಷೆ ಮುಖ್ಯ ಅಲ್ಲ, ಕೃತಿಯ ಭಾವ ಲಯವನ್ನು ನಮ್ಮ ಭಾಷೆಯಲ್ಲಿ ಹಿಡಿಯಬೇಕು. ಅನುವಾದ ಮಾಡುವಾಗ ಇರುವುದನ್ನು ಬಿಡದೇ ಇಲ್ಲದಿರುವುದನ್ನು ಹೇಳದೇ ಕನ್ನಡಕ್ಕೆ ನಿಷ್ಠೆಯಿಂದ ಕೆಲಸ ಮಾಡಬೇಕು. ವಿದ್ಯಾರ್ಥಿಗಳೇ ನೀವು ಓದಲು ಭಯಪಡಬೇಡಿ. ನಿಮ್ಮ ಮನಸ್ಸಿನಂತೆ ಓದಿ. ಸಾಹಿತ್ಯದ ಮೂಲಕ ಮನಸ್ಸಿನ ಮಾತುಗಳನ್ನು ಹೊರಹಾಕಿ ಎಂದು ಯುವ ಸಂಶೋಧಕರಿಗೆ ಟಿಪ್ಸ್‌ಗಳನ್ನು ನೀಡಿದರು.
ಭಾಷೆ ಬೇರೆಯಾದರೂ ಮನುಷ್ಯನ ಅನುಭವಗಳು ಒಂದೇ ಆಗಿರುತ್ತವೆ. ನಮ್ಮದಲ್ಲದ ಕಾಲದಲ್ಲಿ ನಮ್ಮದಲ್ಲದ ಭಾಷೆಯಲ್ಲಿ ನಮ್ಮನ್ನು ನೋಡಿಕೊಳ್ಳಬೇಕು. ಇದೆಲ್ಲ ನನಗೆ ಹೇಳಿಕೊಟ್ಟಿದ್ದು ಕನ್ನಡ ವಿಶ್ವವಿದ್ಯಾಲಯ, ಅನುವಾದ ಮತ್ತು ವಚನಗಳು ಎಂದು ಹೇಳಿಕೊಂಡರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಂತರ ವಿಭಾಗವು ಅನಾಥವಾಗಿದೆ. ಸರ್ಕಾರದ ನೀತಿ ನಿಯಮಗಳು ಇದಕ್ಕೆ ಕಾರಣವಾಗಿದೆ ಎಂದು ನೋವಿನಿಂದ ನುಡಿದರು. ವಿಭಾಗದಲ್ಲಿರುವ ಸಂಶೋಧನಾರ್ಥಿಗಳಿಂದ ಸ್ವಲ್ಪ ಜೀವಂತಿಕೆಯಿದೆ. ಅವರು ಪದವಿ ಪಡೆದು ಹೊರಟು ಹೋದರೆ ಮುಂದೇನು ಎಂಬ ಕತ್ತಲೆಯ ಪ್ರಶ್ನೆಯಿದೆ ಎಂದು ಸಂಕಟವನ್ನು ಹಂಚಿಕೊಳ್ಳುತ್ತ ಕನ್ನಡ ವಿಶ್ವವಿದ್ಯಾಲಯವು ಸಂಶೋಧನಾ ವಿಶ್ವವಿದ್ಯಾಲಯ ಆಗಿರುವುದರಿಂದ ಅತಿಥಿ ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಯುಜಿಸಿ ನಿಯಮದಲ್ಲಿ ಅವಕಾಶವಿರುವುದಿಲ್ಲ. ಈಗ ೩೭ ಅಧ್ಯಾಪಕರು ವಿಶ್ವವಿದ್ಯಾಲಯದಲ್ಲಿದ್ದಾರೆ. ೨ ವರ್ಷಗಳಿಂದ ಸರ್ಕಾರಕ್ಕೆ ಮೇಲಿಂದ ಮೇಲೆ ಮನವಿ ಮಾಡಿದರೂ ಯಾವ ಪ್ರಯೋಜನ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯಕ್ಕೆ ಇವತ್ತಿಗಿಂತಲೂ ಮುಂದೆಯೂ ಹೆಚ್ಚು ಅಪಾಯ ಇರುವ ಸಾಧ್ಯತೆ ಇದೆ. ಆದ್ದರಿಂದ ಕನ್ನಡದ ಮನಸ್ಸುಗಳು ಈ ಬಗ್ಗೆ ಯೋಚಿಸಬೇಕಾಗಿದೆ. ಆದರೂ ಇರುವ ಅಧ್ಯಾಪಕರಿಂದಲೇ ಕನ್ನಡ ವಿಶ್ವವಿದ್ಯಾಲಯವು ಮೊದಲಿನಂತೆ ಸದೃಢವಾಗಿದೆ. ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಜೀವಂತವಾಗಿ ಇರಿಸುತ್ತಿದ್ದಾರೆ ಎಂದು ಹೇಳುತ್ತ, ಓ.ಎಲ್.ನಾಗಭೂಷಣ ಸ್ವಾಮಿ ಅವರು ವಿದ್ವತ್ತಿನ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಇವರಿಂದ ಎಳೆಯ ಮನಸ್ಸುಗಳಿಗೆ ಪ್ರೇರಣೆ ಸಿಗಲಿ ಎಂದು ಆಶಿಸಿದರು.
ವಿಭಾಗದ ಮುಖ್ಯಸ್ಥರಾದ ಪ್ರೊ. ವೆಂಕಟಗಿರಿ ದಳವಾಯಿ ಇವರು ಆಶಯ ನುಡಿಯುತ್ತ, ಸಾಮಾಜಿಕ ನ್ಯಾಯ ಎಂದರೆ ಕಾನೂನಿನ ಮೂಲಕ ಪರಿಹರಿಸುವಂತಹದ್ದಲ್ಲ ಎಂದು ಓ.ಎಲ್.ಎನ್. ಹೇಳಿದ್ದಾರೆ. ಇವತ್ತಿನ ಸ್ತ್ರೀವಾದದ ಮೂಲಕ ಅಕ್ಕಮಹಾದೇವಿಯನ್ನು ನೋಡಲು ಆಗುವುದಿಲ್ಲ. ಮಹಿಳಾ ವಚನಕಾರ್ತಿಯರನ್ನು ಒಳಗೊಂಡಂತೆ ವಚನಕಾರರ ಅಂಕಿತಗಳು ಗಂಡು ದೇವರುಗಳೇ ಆಗಿರುವುದನ್ನು ಓ.ಎಲ್.ಎನ್. ಅವರು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥರು ಎಲ್ಲರನ್ನು ಸ್ವಾಗತಿಸಿದರು. ಸಂಶೋಧನಾರ್ಥಿ ಮಂಜುನಾಥ ನಿರೂಪಿಸಿದರು. ಗುರುರಾಜ ಎನ್. ವಂದಿಸಿದರು. ಆನಂದ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಅಲ್ಲದೇ ಹೊಸಪೇಟೆಯ ವಿಜಯನಗರ ಕಾಲೇಜಿನಿಂದ ಆಗಮಿಸಿದ ಪದವಿ ವಿದ್ಯಾರ್ಥಿಗಳು, ನಾಗಭೂಷಣಸ್ವಾಮಿ ಅವರ ಅಭಿಮಾನದ ಕನ್ನಡದ ಮನಸ್ಸುಗಳು ಉಪಸ್ಥಿತರಿದ್ದರು.
ಮಧ್ಯಾಹ್ನ ಡಾ.ಮಲ್ಲಿಕಾರ್ಜುನಗೌಡ ಎಂ., ಶ್ರೀ ಪುನೀತ ಅಪ್ಪು, ಶ್ರೀ ಮುಹಮ್ಮದ್ ಝೈನುದ್ದೀನ್, ಡಾ.ಎಚ್.ಸಿ. ಅನುಷಾ, ಮೊದಲಾದವರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಯುವಸಂಶೋಧಕರು ಓ.ಎಲ್.ಎನ್ ಅವರೊಂದಿಗೆ ಸಂವಾದಿಸಿದರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.