ಭಾವದೋಕುಳಿಗೊಂದು ಮೊದಲ ಮಾತು


ಲೇಖಕಿ ಅಂಜನಾ ಹೆಗಡೆ ಅವರ ಅಂಕಣ ಬರಹಗಳ ಸಂಕಲನ ‘ಬೊಗಸೆಯಲ್ಲೊಂದು ಹೂನಗೆ’. ಈ ಕೃತಿಗೆ ಲೇಖಕ, ನಾಟಕಕಾರ ಸೇತುರಾಂ ಅವರು ಬರೆದ ಮುನ್ನುಡಿಯ ಮಾತುಗಳು ನಿಮ್ಮ ಓದಿಗಾಗಿ.

ಬೊಗಸೆಯಲ್ಲೊಂದು ಹೂನಗೆ - ಅಂಜನಾ ಹೆಗಡೆಯವರ ಅಂಕಣಗಳ ಗುಚ್ಛ! ಬಿಡಿಬಿಡಿಯಾಗಿ ಇವು ಈ ಮೊದಲೇ ಪ್ರಕಟವಾಗಿವೆ; ಇಡಿಯಾಗಿ ಈಗ ಓದುಗರ ಕೈಸೇರುತ್ತಿವೆ. ಲೇಖಕಿಯ ಸಾಹಿತ್ಯ ಪ್ರಯತ್ನಕ್ಕೆ ನನ್ನ ಹಾರೈಕೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಈ ಲೇಖಕಿಯ ಬಾಲ್ಯ ಕಳೆದದ್ದು ಕಾಡು, ಗುಡ್ಡ, ನದಿ, ತಿಳಿನೀರ ನಿರಂತರತೆಯ ಝರಿ, ಭೋರ್ಗರೆವ ಜಲಪಾತ, ಧೋ ಎಂದು ಸುರಿವ ಮಳೆ, ಹಾಗೇ ಬಿರುಬಿಸಿಲು, ಸ್ವಾಭಾವಿಕ ವಾತಾವರಣದಲ್ಲಿ! ಬೇರು ಕಿತ್ತು ಬದುಕು ಕಟ್ಟಿಕೊಂಡಿದ್ದು ಬೆಂಗಳೂರೆಂಬ ಭ್ರಮೆಯ ಬೆಂಗಾಡಲ್ಲಿ. ಹಾಗಾಗಿ ಚಂದದ ನೆನಪುಗಳೇನೇ ಇದ್ದರೂ ಬಾಲ್ಯದ್ದು ಮಾತ್ರ. ಎಲ್ಲ ಲೇಖನಗಳಲ್ಲೂ ಬಾಲ್ಯದ ಭಾವಗಳ, ಪಾತ್ರಗಳ ಚಿತ್ರಣವಿದೆ. ಸ್ವಾಭಾವಿಕವೇ! ಬವಣೆಗಳನ್ನೆಂತ ಮೆಲುಕು ಹಾಕುವುದು; ಮೆಲುಕುವುದೇನಿದ್ದರೂ ಭಾವಗಳನ್ನೇ!

ನನ್ನ ಓದಿನ ಮಿತಿಯಲ್ಲಿ ಅಥವಾ ನನ್ನ ಗ್ರಾಹ್ಯದ ಎಲ್ಲೆಯಲ್ಲಿ ಹೆಣ್ಣುಮಕ್ಕಳು ಬಾಲ್ಯದ ಅನುಭವಗಳನ್ನು, ಅನಿಸಿಕೆಗಳನ್ನು ಹಾಗೂ ಹತ್ತಿರದ ಪಾತ್ರಗಳನ್ನು ಆಪ್ತವಾಗಿ, ಮನಸ್ಸಿಗೆ ಅಪ್ಯಾಯಮಾನವಾಗಿ ಚಿತ್ರಿಸುತ್ತಾರೆ. ಗಂಡಸರ ಬಾಲ್ಯದ ಚಿತ್ರಣಗಳೇನಿದ್ದರೂ ಬವಣೆಗಳದ್ದೇ ವಿವರಣೆ. ಹೆಣ್ಣು ದಕ್ಕಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರೆ ಗಂಡಿಗೆ ದಕ್ಕದ, ಚಲಾಯಿಸಲಾಗದ ಹಕ್ಕಿನದ್ದೇ ಚಿಂತೆ. ಇವರು ಬಾಲ್ಯ ಕಳೆದ ಕಾಲಘಟ್ಟದಲ್ಲಿ ಬ್ರಾಹ್ಮಣ ಕುಟುಂಬಗಳೇನಿದ್ದರೂ ಬಡತನದ ಹುತ್ತಗಳೇ. ದುಡಿಮೆ ಕಮ್ಮಿ, ಸವಲತ್ತುಗಳಿಲ್ಲ, ಸಾಲದ ಮೇಲೆ ಬದುಕು ಮತ್ತು ಕಂತು ಕಟ್ಟಲೇಬೇಕಾದ ಆತ್ಮಗೌರವದ ಅನಿವಾರ್ಯತೆ. ಬದಲಾದ ಕಾಲ; ಹೆಣ್ಣುಗಳನ್ನು ಚಿಕ್ಕವಯಸ್ಸಿಗೆ ಮದುವೆ ಮಾಡಿ ಕೈತೊಳೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಂತ ಮನೆಯಲ್ಲಿ ಉಳಿಸಿಕೊಳ್ಳಲೂ ಆಗುವುದಿಲ್ಲ. ಈ ಅನಿವಾರ್ಯತೆಯಲ್ಲಿ ಅಷ್ಟಿಷ್ಟು ವಿದ್ಯೆ! ನಗರ ಪ್ರದೇಶದ ಪರಿಸ್ಥಿತಿ ಭಿನ್ನವಾಗಿತ್ತು ಸತ್ಯ; ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇದೇ! ಬೆಳೆಯುತ್ತಿರುವ ಮಗಳು ಎದೆಯ ಮೇಲೆ ಕೂತ ಭಾವ, ಕಟ್ಟಿಕೊಡಬೇಕು. ತಕ್ಕದ್ದು ಸಿಗುತ್ತಿಲ್ಲ, ಬಿಟ್ಟರೆ ಬೇಡವಾದದ್ದನ್ನು ಕಟ್ಟಿಕೊಂಡು ಓಡಿಹೋದರೆ, ಈ ಇಕ್ಕಟ್ಟಿನಲ್ಲಿ ಅಂಗಳ ಯಾವತ್ತೂ ಬಿಸಿಬಿಸಿ! ಸೂಕ್ಷ್ಮ ಬುದ್ಧಿವಂತ ಮನಸ್ಸುಗಳು ಸುಟ್ಟು ಕರಕಾಗುವ ಭಯದಲ್ಲಿ ಕಾಡುಮೇಡು ಸೇರುತ್ತವೆ. ಹಸುವಿನೊಟ್ಟಿಗೆ ಸಂವಹನೆ, ಕರುವಿನೊಟ್ಟಿಗೆ ಚೆಲ್ಲಾಟ, ಚಿಗುರಿದ ಮಾವು ಸಂಭ್ರಮ, ಕುಣಿವ ನವಿಲೇ ಮನರಂಜನೆ. ಹಾಗಾಗಿ, ನೆನಪಿನ ತುಂಬೆಲ್ಲ ಮಾಸದ ಬಣ್ಣಗಳೇ! ಲೇಖಕಿ ಮಾಸದ ನಿರಂತರ ನಳನಳಿಸುವ ಬಣ್ಣಗಳ ದಾಖಲಿಸಿದ್ದಾರೆ.

ಹೆಣ್ಣುಮಕ್ಕಳು ಕನಸು ಕಾಣ್ತಾರಾ, ನನಗನ್ನಿಸಿದ ಹಾಗೆ ಇಲ್ಲ! ಅವರು ವಾಸ್ತವವನ್ನು ಸ್ಪಷ್ಟವಾಗಿ ಕಾಣುತ್ತಾರೆ ಮತ್ತು ಅದಕ್ಕೆ ಅವರ ಚೈತನ್ಯ ಮತ್ತು ಸ್ವಾತಂತ್ರ್ಯದ ಮಿತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಕನಸನ್ನು ಬದುಕುತ್ತಾರೆ. ಇವರಿಗೆ ನಾಲಿಗೆಯಲ್ಲೇ ರುಚಿ, ಮೂಗಿನಲ್ಲೇ ಪರಿಮಳ, ಕಣ್ಣುಗಳಲ್ಲೇ ಸೌಂದರ್ಯ ಮತ್ತು ಕಿವಿಗಳಲ್ಲೇ ಇಂಪು. ಅಸಹಾಯಕ ಮಗುವಿನ ಹೊಲಸನ್ನು ಬಳಿಯುವಷ್ಟೇ ಆಸ್ಥೆಯಲ್ಲಿ ಅಶಕ್ತ ಗಂಡನದ್ದೂ ತೊಳೆಯುತ್ತಾರೆ; ಕಾಯಿಲೆ ಅತ್ತೆ-ಮಾವ, ಅಪ್ಪನದ್ದೂ! ಮುಖದ ಭಾವದಲ್ಲಿ ವ್ಯತ್ಯಾಸವೇ ಇರುವುದಿಲ್ಲ. ಅಹಂಕಾರಿಗಳನ್ನು ಬಿಟ್ಟವರಿದ್ದಾರೆ; ಅಶಕ್ತರನ್ನು, ಅಸಹಾಯಕರನ್ನು ಬಿಟ್ಟವರು ಕಮ್ಮಿ. ನಿರಂತರ ನಗುಮುಖದವರು ನನಗೆ ದಿಗಿಲು ಹುಟ್ಟಿಸುತ್ತಾರೆ. ಆತ್ಮಕ್ಕೆ ಕಲ್ಮಷದ ಸೋಂಕು ತಟ್ಟದ ಹಾಗೆ ಪಾತಾಳದಲ್ಲಿ ಜತನವಾಗಿ ಹುಗಿದಿಟ್ಟು ಪ್ರತಿಕ್ರಿಯೆಗಳನ್ನು ದೇಹಕ್ಕೆ ಸೀಮಿತಗೊಳಿಸಿರುತ್ತಾರೆ. ಅವರಿಗೆ ಕೇಳುವ ಕಿವಿಗಳು ಬೇಕು ಸತ್ಯ, ಆದರೆ ಹುಡುಕುವ ಕಣ್ಣು ದಿಗಿಲು ಹುಟ್ಟಿಸುತ್ತದೆ; ಒರಗೋಕೆ ಹೆಗಲು ಬೇಕು ಸತ್ಯ, ಆದರೆ ತಡಕುವ ಕೈಗಳು ದಿಗಿಲು ಹುಟ್ಟಿಸುತ್ತವೆ. ಪ್ರಪಂಚದೊಟ್ಟಿಗಿನ ಸಂವಹನ ಸತ್ತು ಆಳದಲ್ಲಿ ಬಚ್ಚಿಟ್ಟುಕೊಂಡಿರುವ ಆತ್ಮ ಬಿಚ್ಚಿಕೊಳ್ಳಬೇಕು; ಅದಕ್ಕಾಗಿ ಸಾಹಿತ್ಯ, ಕಲೆ, ವೇದಿಕೆಗಳು! ಅವ್ಯಕ್ತ ಭಾವಗಳು ಬರಹಗಳಾಗಲಿ. ಸುಂದರ ನಗುವಿನ ಹಿಂದೆ ಸುಖ, ಸಂತೋಷ, ಸಂಭ್ರಮವೇ ಇರಲಿ.

ಒಳಗಿನದ್ದರ ಪರಿಚಯ ಹೊರಪ್ರಪಂಚಕ್ಕೂ ಆಗಲಿ. ಅಂಕಣಗಳ ವಿಮರ್ಶೆಗೆ ಹೋಗುವುದಿಲ್ಲ. ಭಾವಗಳಲ್ಲಿ ಸುಳ್ಳಿಲ್ಲ; ಕುತರ್ಕವಿಲ್ಲ. ಹಾಗಾಗಿ ವಿಮರ್ಶೆ ಸಲ್ಲ! ಆದರೆ ಇಡಿಯಾಗಿ ಓದಿ ಮುಗಿಸಿದಾಗ ವಿಷಾದದ ಭಾವ ಕಾಡಿದ್ದಂತೂ ಸತ್ಯ. ಇರಲಿ! ಇಲ್ಲಿ ತಲುಪಿದಷ್ಟು ಅಲ್ಲಿ ಕಮ್ಮಿಯಾದರೆ ಬರಹವೂ ಸಾರ್ಥಕ; ಓದೂ ಸಾರ್ಥಕ.

ಪುಸ್ತಕದ ಕುರಿತಾದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

MORE FEATURES

ಸಾಮಾನ್ಯರ ಹಲವು ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ

25-04-2024 ಬೆಂಗಳೂರು

"ಓದುವ ಗುಣವನ್ನು ಕಳೆದುಕೊಂಡಿರುವ ನಮ್ಮ ನಾಗರಿಕರು ನಿಜಾರ್ಥದಲ್ಲಿ ಸತ್ಯ ಬೇಕಾದರೆ ಈ ಪುಸ್ತಕವನ್ನು ಓದಬೇಕು. ಮುಂದ...

ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ, ಅದೊಂದು ಬದುಕಿನ ಪಯಣ

25-04-2024 ಬೆಂಗಳೂರು

"ಬೆಟ್ಟ ಹತ್ತುವುದೆಂದರೆ ಕೇವಲ ಚಾರಣವಲ್ಲ. ಅದೊಂದು ಬದುಕಿನ ಪಯಣ. ಪ್ರತಿ ಕ್ಷಣ ಎದಿರಾಗುವ ಅಪಾಯಗಳನ್ನು ಸಲೀಸಾಗಿ ಗ...

ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು

25-04-2024 ಬೆಂಗಳೂರು

‘ನನ್ನ ಪತಿಯ ಪ್ರೋತ್ಸಾಹದಿಂದ ನನಗೆ ಬರೆಯುವ ಗೀಳು ಬಂತು. ಹಾಗಾಗಿ, ಕೆಲವೊಂದು ಪುಸ್ತಕಗಳನ್ನು ಬರೆದಿದ್ದೇನೆ. 202...