‘ಭಾವೈಕ್ಯತಾ ದಿನ’ವಾಗಿ ತೋಂಟದಾರ್ಯ ಶ್ರೀಗಳ ಜಯಂತಿ: ಸಿದ್ಧರಾಮ ಶ್ರೀಗಳ ಆಶಯ

Date: 21-02-2021

Location: ಗದಗ


ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜಯಂತಿಯನ್ನು ‘ಭಾವೈಕ್ಯ ದಿನ’ವನ್ನಾಗಿ ಆಚರಿಸಬೇಕು ಎಂದು ಡಾ.ತೋಂಟದ ಸಿದ್ಧರಾಮ ಶ್ರೀಗಳು ಎಂದು ಆಶಯ ವ್ಯಕ್ತಪಡಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂ. ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ 72ನೇ ಜಯಂತಿ ಅಂಗವಾಗಿ ಜರುಗಿದ ‘ಭಾವೈಕ್ಯ ದಿನಾಚರಣೆ’ ಹಾಗೂ ಶ್ರೀಗಳ ಕುರಿತ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಕೋಮು ಸೌಹಾರ್ದತೆಯ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ ಪಡೆದ ದಕ್ಷಿಣ ಭಾರತದ ಏಕೈಕ ಸ್ವಾಮೀಜಿಗಳಾಗಿದ್ದ ಲಿಂ.ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮದಿನವನ್ನು ಭಾವೈಕ್ಯತಾ ದಿನವನ್ನಾಗಿ ಆಚರಿಸಬೇಕು ಎಂದು ಅವರು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.

ಪುಸ್ತಕ ಪ್ರಕಟಣೆಗೆ ಮಾದರಿ: ನಾಡಿನ ಅನೇಕ ಮಠಗಳು ಪುಸ್ತಕಗಳ ಪ್ರಕಟಣೆಯಲ್ಲಿ ತೊಡಗಿದ್ದರೆ ಅದಕ್ಕೆ ಲಿಂಗೈಕ್ಯ ಶ್ರೀಗಳೇ ಆದರ್ಶ ಮಾದರಿ. ತಮ್ಮ ಜೀವಿತಾವಧಿಯುದ್ದಕ್ಕೂ ಬಸವತತ್ವಗಳ ಅನುಷ್ಠಾನಕ್ಕಾಗಿ ಶ್ರಮಿಸಿದ ಅವರು ಶ್ರೀಮಠವನ್ನು ಭಾವೈಕ್ಯತೆಯ ಕೇಂದ್ರವನ್ನಾಗಿಸಿ ತನ್ಮೂಲಕ ಕೋಮು ಸೌಹಾರ್ದತೆಗೆ ಮೇಲ್ಪಂಕ್ತಿ ಹಾಕಿದರು ಎಂದು ಹೇಳಿದರು.

ಸರ್ವರಿಗೂ ಸುಗಂಧ: ಮುಂಡರಗಿ ತೋಂಟದಾರ್ಯ ಶಾಖಾಮಠದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಮಾತನಾಡಿ, ಹುಟ್ಟು ಸಾವುಗಳು ಎಲ್ಲರಿಗೂ ಸಾರ್ವತ್ರಿಕವಾಗಿ ನಿಸರ್ಗ ವಿಧಿಸಿದ ಪ್ರಕ್ರಿಯೆಗಳು, ಆದಾಗ್ಯೂ ಕೆಲವು ಮಹಾತ್ಮರು ಮಾತ್ರ ಈ ಕ್ರಿಯೆಗಳನ್ನು ಮೀರಿ ತಮ್ಮ ಸಾರ್ಥಕ ಜೀವನದ ಮೂಲಕ ಅಮರರಾಗಿರುತ್ತಾರೆ. ಲಿಂಗೈಕ್ಯ ತೋಂಟದ ಶ್ರೀಗಳು ಈ ಸಾಲಿಗೆ ಸೇರಿದ ಅಗ್ರಗಣ್ಯರಾಗಿದ್ದು, ಸುಂದರವಾದ ಗಂಧದ ಮರದಂತೆ ಜೀವಿಸಿ ಅವರಿವರೆನ್ನದೆ ಎಲ್ಲರಿಗೂ ಸುಗಂಧವನ್ನೇ ನೀಡಿದರು ಎಂದು ಹೇಳಿದರು.

‘ನ್ಯಾಯನಿಷ್ಠುರಿ ದಾಕ್ಷಿಣ್ಯಪರನಲ್ಲ’ ಎಂಬಂತೆ ತಾವು ನಂಬಿದ ತತ್ವಗಳಿಗೆ ಬದ್ಧರಾಗಿ ಬದುಕಿದ ಅವರ ಜೀವನ ಕೇವಲ ಸ್ವಾಮೀಜಿಗಳಿಗೆ ಮಾದರಿಯಲ್ಲ ಬದಲಿಗೆ ಇಡೀ ಸಮಾಜಕ್ಕೆ ಮಾದರಿಯಾಗುವಂಥದ್ದು. 12ನೇ ಶತಮಾನದ ಬಸವತತ್ವಕ್ಕೆ 21ನೇ ಶತಮಾನದಲ್ಲಿ ಯಾರಾದರೂ ಹೊಸ ಭಾಷ್ಯ ಬರೆದ ಸ್ವಾಮೀಜಿಗಳಿದ್ದರೆ ಅದು ಲಿಂಗೈಕ್ಯ ತೋಂಟದ ಶ್ರೀಗಳಾಗಿದ್ದಾರೆ ಎಂದರು.

ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ತೋಂಟದಾರ್ಯ ಶ್ರೀಗಳ ಸಾಮಾಜಿಕ ಕಳಕಳಿಯನ್ನು ಪ್ರಶಂಸಿಸಿದರು. ಮುಖ್ಯ ಅತಿಥಿಗಳಾಗಿದ್ದ ಹಿರಿಯ ಸಾಹಿತಿ ವೀರಣ್ಣ ರಾಜೂರ ಮಾತನಾಡಿ, ನನ್ನ ಸಾಹಿತ್ಯಿಕ ಬದುಕನ್ನು ರೂಪಿಸಿದ ಕೀರ್ತಿ ಗುರುಗಳಾಗಿದ್ದ ಡಾ.ಎಂ.ಎಂ ಕಲಬುರ್ಗಿ ಹಾಗೂ ಲಿಂಗೈಕ್ಯ ಜಗದ್ಗುರುಗಳಿಗೆ ಸಲ್ಲುತ್ತದೆ. ಪ್ರೊ.ಶಶಿಧರ ತೋಡಕರ ಅವರು ಸಂಪಾದಿಸಿರುವ ಶ್ರೀಗಳ ಕುರಿತ ಗ್ರಂಥದಲ್ಲಿ ಗಣ್ಯಾತಿಗಣ್ಯರಿಂದ ಹಿಡಿದು ಶ್ರೀಸಾಮಾನ್ಯರೂ ಸಹ ಲಿಂಗೈಕ್ಯ ಶ್ರೀಗಳ ಕುರಿತು ಬರೆದಿರುವುದು ಅವರ ಶ್ರೇಷ್ಠತೆಯನ್ನು ಸಾಕ್ಷೀಕರಿಸುತ್ತಿದೆ ಎಂದರು. ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಮಾತನಾಡಿದರು.

ಪುಸ್ತಕಗಳ ಬಿಡುಗಡೆ: ಲಿಂ.ಶ್ರೀಗಳ ಕುರಿತು ಡಾ.ಜಗದೀಶ ಕೊಪ್ಪ ಹಾಗೂ ಪ್ರೊ.ಶಶಿಧರ ತೋಡಕರ ಸಂಪಾದಿಸಿದ ’ಸಮಾಜಮುಖಿ’, ಪ್ರೊ.ಮಲ್ಲಿಕಾರ್ಜುನ ಹುಲಗಬಾಳಿ ರಚಿಸಿದ ’ಸನ್ನಿಧಾನ’, ವೀರನಗೌಡ ಮರಿಗೌಡರ ರಚಿಸಿದ ’ವಿಶ್ವ ಮಾನವ’, ಜಿ.ವ್ಹಿ ಹಿರೇಮಠ ರಚಿಸಿದ ’ಡಂಬಳದ ತೋಂಟದ ಅರ್ಧನಾರೀಶ್ವರ ಶಿವಯೋಗಿಗಳು’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಶಿರೋಳ ತೋಂಟದಾರ್ಯ ಶಾಖಾಮಠದ ಪೂಜ್ಯ ಗುರುಬಸವ ಮಹಾಸ್ವಾಮಿಗಳು, ಸಂಡೂರ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಅರಸಿಕೆರೆ ಕೋಲಶಾಂತೇಶ್ವರಮಠದ ಶಾಂತಲಿಂಗ ಮಹಾಸ್ವಾಮಿಗಳು, ಯಶವಂತನಗರ ಸಿದ್ಧರಾಮೇಶ್ವರಮಠದ ಗಂಗಾಧರ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.
ಮಾಜಿ ಸಚಿವ ಎಸ್.ಎಸ್ ಪಾಟೀಲ, ಮಾಜಿ ಶಾಸಕ ಡಿ.ಆರ್ ಪಾಟೀಲ, ತಾ.ಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ತೊಗಲುಗೊಂಬೆ ಕಲಾವಿದ ವೀರಣ್ಣ ಬೆಳಗಲ್ಲು, ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಅಮರೇಶ ಅಂಗಡಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಎಂ.ಸಿ ಐಲಿ, ಶಶಿ ಸಾಲಿ, ಶಂಕರ ಹಲಗತ್ತಿ ಮುಂತಾದವರು ವೇದಿಕೆಯಲ್ಲಿದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

MORE NEWS

ಕುವೆಂಪು ಪರಿಸರದಲ್ಲಿ ದೇವರನ್ನ ಕಂಡರೆ, ರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ದೇವರನ್ನ ಕಂಡರು: ಬರಗೂರು

18-04-2024 ಬೆಂಗಳೂರು

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರೇ ನನ್ನ ವಿಶ್ವ ಮಾನವ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿ ಇರುವುದು ರಾಜ್&zwnj...

ಹಾಸನ ಸಂಸ್ಕೃತ ಭವನದಲ್ಲಿ ವಿಶ್ವ ಕಲಾ ದಿನಾಚರಣೆ, ಚಿತ್ರಕಲಾ ಪ್ರದರ್ಶನ ಸ್ಫರ್ಧೆ

18-04-2024 ಬೆಂಗಳೂರು

ಕಲೆಗೆ ಗೌರವವನ್ನು ವ್ಯಕ್ತಪಡಿಸಲು ವಿಶ್ವ ಕಲಾ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಕಲಾ ದಿನವು ಸಮಾಜದಲ್ಲಿ ಕಲೆಯ ಪ್ರಾ...

ತನುಶ್ರೀ ಸಾಹಿತ್ಯ ವೇದಿಕೆಯಿಂದ ಕವಿಗೋಷ್ಠಿಗೆ ಕವನಗಳ ಆಹ್ವಾನ

16-04-2024 ಬೆಂಗಳೂರು

ಚಿತ್ರದುರ್ಗ: ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆಯಿಂದ ರಾಜ್ಯ ಮಟ್ಟದ ಕವಿಗೋಷ್ಠಿಗೆ ಕವನಗಳನ್ನು ಆಹ್ವಾನಿಸಲಾಗ...