ಭಿನ್ನ ದನಿ, ಸ್ತ್ರೀ ಸಂವೇದನೆಯ ಕಥಾಸಂಕಲನ 'ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು'


ಈ ಸಂಕಲನದಲ್ಲಿ ಮೊದಲನೆಯ ಕತೆಯ ಶೀರ್ಷಿಕೆಯೇ ಹೇಳುವಂತೆ ಈ ಕತೆಗಳ ಸಂಗತಿಗಳಿಗೆ ಲೋಕ ರೂಢಿಯ ಹೆಸರುಗಳು ಅನ್ವಯವಾಗುವುದಿಲ್ಲ. ಗಂಡು ಹೆಣ್ಣು, ಹೆಣ್ಣಿನಂತಹ ಗಂಡು, ನಮ್ಮವರಾಗುವ ಅವರು, ಮಧು ಪಾತ್ರೆಯೇ ಆದ ಹೃದಯ ಉಳ್ಳವರು, ಒಂದೇ ಬದುಕಿನಲ್ಲಿ ಭಿನ್ನ ಚಹರೆಯಲ್ಲಿ ಕಾಣುವವರು, ತನ್ನ ತನಕ್ಕಾಗಿ ತನ್ನವರನ್ನೇ ಬಲಿಕೊಡುವವರು... ಎಲ್ಲಾ ಈ ಬಾಗಿಲ ಹಿಂದಿದ್ದಾರೆ. ಶಾಂತಿ ಆ ಬಾಗಿಲ ತೆರೆದಿದ್ದಾರೆ. ಅದೂ ಹಲವು ಚಿಲ್ಲರೆ ವರ್ಷಗಳ ನಂತರ! ಎಂಬುದು ಲೇಖಕ ಆನಂದ ಋಗ್ವೇದಿ ಅವರ ಮಾತು. ಅವರು ಶಾಂತಿ ಕೆ. ಅಪ್ಪಣ್ಣ ಅವರ ಕಥಾ ಸಂಕಲನ 'ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು' ಕುರಿತು ಬರೆದ ಟಿಪ್ಪಣಿ...

ಕತೆಗಾರ್ತಿ ಶಾಂತಿ ಅಪ್ಪಣ್ಣ ಅವರ ಎರಡನೆಯ ಕಥಾ ಸಂಕಲನ 'ಒಂದು ಬಾಗಿಲು ಮತ್ತು ಮೂರೂ ಚಿಲ್ಲರೆ ವರ್ಷಗಳು. ಕನ್ನಡ ಕಥಾ ಲೋಕಕ್ಕೆ ಸ್ತ್ರೀ ಸಂವೇದನೆ ಈ ಮೊದಲೇ ಪರಿಚಯವಾಗಿದೆ. ತಿರುಮಲಾಂಬ ಅವರಿಂದ ಮೊದಲ್ಗೊಂಡು ಈವರೆಗೆ ಬರೆದ ನೂರಾರು ಕತೆಗಾರ್ತಿಯರು ಸ್ತ್ರೀ ಲೋಕದ ಹಲವು ಮಜಲುಗಳನ್ನು ಪರಿಚಯಿಸಿದ್ದಾರೆ. ಅವೆಲ್ಲವೂ ಆತ್ಮಕತೆಯಂತೆ ಆಪ್ತ ಆಗಿವೆ, ಹಾಗೇ ಅರ್ಧ ಸತ್ಯವೂ! ಈ ಅರ್ಧ ಮಾತ್ರ ತೆರೆದುಕೊಳ್ಳುವುದಕ್ಕೆ ಕಾರಣ ನಮ್ಮ ಸಮಾಜವೇ. ಹೆಣ್ಣು ಮಕ್ಕಳು ಕವಿತೆಯಲ್ಲಿ ಬರೆದಂತೆ ಕತೆಯಲ್ಲಿ ಬರೆಯಲಾಗದ ಒಂದು ಅಮುಕ್ತ ವಾತಾವರಣ ಈ ಸಮಾಜದ್ದೇ ನಿರ್ಮಾಣ. ಕವಿತೆಯಲ್ಲಿ ರೂಪಕವಾಗಿ ಪ್ರತಿಮೆಯಾಗಿ ಬರುವ ಸಂಗತಿಗಳು ಸ್ವಯಂ ವೇದ್ಯವೂ ಆಗಿರುತ್ತವೆ. ಆದರೆ ಕತೆಯ ಸಂಗತಿಗಳಿಗೆ ಸಾವಯವ ವಿವರ ಬೇಕು. ಅತಿಯಾದ ಮಾತುಗಾರಿಕೆಯ ವಾಚ್ಯತ್ವ ಬೇಡವಾದರೂ ಸಂಕ್ಷಿಪ್ತತೆಯ ಸೂಚ್ಯತ್ವ ಕತೆಗಾರಿಕೆಗೆ ಸಹಜವಲ್ಲ. ಎಂದೇ ಎಲ್ಲಾ ಹೇಳಲಾಗದ ಹೇಳದೆಯೇ ಕತೆಯಾಗದ ಅರ್ಧ ಸತ್ಯದ ಸಂದಿಗ್ಧತೆ ಈ ಮೊದಲು ಸ್ತ್ರೀ ಕತೆಗಾರ್ತಿಯರಲ್ಲಿತ್ತು.

ಇದು ಅನುಭವ ಲೋಕದ ಮಾತು. ಕತೆಗಾರ್ತಿ ಒಂದು ಅನುಭವವನ್ನು, ಸಂಗತಿಯನ್ನು ಕಥನಿಸಿದಾಗ 'ಇದು ಅವರದೇ ಅನುಭವ ಇರಬಹುದೇ!?' ಎಂದು ತರ್ಕಿಸಿದ ಓದುಗ ವಲಯದಂತೇ ಮಡಿವಂತ ವಿಮರ್ಶಾ ವಲಯವೂ ನಮ್ಮಲ್ಲಿದೆ! ಹಾಗಾಗಿಯೇ ಕತೆಯ ವಸ್ತುವಿನ ಆಯ್ಕೆ, ನಿರೂಪಣೆಯ ತಂತ್ರ, ಬಳಕೆಯ ಭಾಷೆಯ ಬಗ್ಗೆ ಕತೆಗಾರ್ತಿಯರು ಬಹು ಎಚ್ಚರವಹಿಸಿದ್ದು ಸುಳ್ಳಲ್ಲ. ಆದರೆ ಸ್ತ್ರೀಯರು ಬರೆಯುವುದು ಕೇವಲ ಸ್ತ್ರೀ ಲೋಕದ ಅನುಭವಗಳೇ ಅಲ್ಲ, ಅವು ಸ್ತ್ರೀ ಕಣ್ಣಿನಲ್ಲಿ ನೋಡಿದ ಲೋಕಾನುಭವಗಳು. ಈ ದೃಷ್ಟಿಕೋನವನ್ನೇ ನಮ್ಮ ಪರಂಪರಾಗತ ಸಮಾಜ ಶತಮಾನಗಳ ಕಾಲ ನಿಯಂತ್ರಿಸಿದೆ, ನಿರ್ದೇಶಿಸಿದೆ, ನಿರುಪಯುಕ್ತಗೊಳಿಸಲಾಗಿದೆ! ಆದರೆ ಅಂತಹ ನಿಯಂತ್ರಿತ ಮಾರ್ಗದ ಮೂಲಕವೂ ಗಾಳಿ ಬೀಸಲ್ಪಟ್ಟಿದೆ ಎಂಬುದೇ ಒಂದು ದೊಡ್ಡ ಸಮಾಧಾನ.

ಲೋಕದ ಸಂಗತಿಗಳನ್ನು ನೋಡಲು ಮನಃಶಾಸ್ತ್ರದ ನೆರವು ತೋರಿದ ತ್ರಿವೇಣಿ, ಸಾಂಪ್ರದಾಯಿಕ ನೆಲೆಯೊಳಗಿನ ಸಾಂಸ್ಕೃತಿಕ ಅಧಃಪತನದ ರೇಖೆಗಳನ್ನು ಶುದ್ಧ ಸಾಂಸಾರಿಕ ಪರಿಕಲ್ಪನೆಗಳ ಮೂಲಕ ತೋರಿದ ವೈದೇಹಿ, ಹಾಗೆಯೇ ಧಾರ್ಮಿಕ ನೆಲೆಗಳ ಒಳಗಿನ ದಬಾವಣೆಯನ್ನ ಸ್ತ್ರೀ ಬವಣೆಯನ್ನ ಮಾನವೀಯ ದೃಷ್ಟಿಕೋನದ ಮೂಲಕ ನಮ್ಮದಾಗಿಸಿದ ಸಾರಾ ಅಬೂಬಕ್ಕರ್... ಈ ಯಾದಿಯಲ್ಲೇ ಮಹತ್ವದ ಸ್ತ್ರೀ ದನಿ ದಾಖಲಿಸಿದ ಹೊಸ ತಲೆಮಾರಿನ ಸುನಂದಾ ಕಡಮೆ, ವಿನಯಾ ವಕ್ಕುಂದ, ಪ್ರಜ್ಞಾ ಮತ್ತಿಹಳ್ಳಿ, ಗೀತಾ ವಸಂತ, ದೀಪ್ತಿ ಭದ್ರಾವತಿ, ಅರ್ಪಣಾ ಹೆಚ್ ಎಸ್... ಮೊದಲಾದವರ ನಡುವೆಯ ದಿಟ್ಟ ದನಿಯ ಗಟ್ಟಿ ಹೆಸರು ಶಾಂತಿ ಕೆ ಅಪ್ಪಣ್ಣ ಅವರದು.

ಛಂದ ಪುಸ್ತಕ ಬಹುಮಾನದಿಂದ ಆರಂಭವಾಗಿ ನಾಡಿನ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡು 'ಮನಸು ಅಭಿಸಾರಿಕೆ' ಎಂಬ ಆ ಮೊದಲ ಕಥಾ ಸಂಕಲನಕ್ಕೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ಶಾಂತಿಯವರದು ಸ್ತ್ರೀ ಬರಹಗಾರ್ತಿಯರಲ್ಲೇ ಭಿನ್ನ ದನಿ. ಅವರ ಕತೆಗಳಲ್ಲಿ ಕಾಣಸಿಗುವುದು ಸ್ತ್ರೀ ಪಾತ್ರಗಳು ಮಾತ್ರವಲ್ಲ, ಪುರುಷ, ಗ್ರಾಮ, ನಗರ, ವ್ಯವಹಾರಿಕ... ಹೀಗೆ ಲೋಕಾಂತದ ಸಕಲೆಂಟು ಆಯಾಮಗಳೂ. ಅವರ ಆ ಆರಂಭಿಕ ಕತೆಗಳಲ್ಲಿ ಮುಗ್ಧೆ, ಸಾಂಸಾರಿಕ ಮಿತಿಯಲ್ಲೂ ಅತೀತತೆಯ ಸ್ತ್ರೀ, ತನ್ನ ದೈಹಿಕ ತುರ್ತು ನೀಗಿಸಿಕೊಳ್ಳಲು ವೇಶ್ಯಾಗೃಹಕ್ಕೆ ಹೋಗುವ ಅಂತಃಕರಣದ ಪುರುಷ, ಗಂಡನ ಆಸ್ತಿ ಅಂತಸ್ತಿನ ಮೂಲಕ ಅಧಿಕಾರ ಪಡೆದು ಮನೆಯ ಆಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಯಜಮಾನಿ... ಒಂದೇ ಭಿತ್ತಿಯ ಹಲವು ವಸ್ತುಗಳು ಕತೆಯಾಗಿ ಕನ್ನಡದ ಓದುಗ ವಲಯವನ್ನು ಕೊಂಚ ಅಲುಗಾಡಿಸಿದ್ದಂತೂ ನಿಜ.‌ ಆ ಕಂಪನದ ನೆಪದಲ್ಲೇ ಶಾಂತಿಯವರ ಎರಡನೆಯ ಕಥಾ ಸಂಕಲನಕ್ಕಾಗಿ ಹಲವು ವರ್ಷಗಳಿಂದ ಕಾಯಲಾಗಿತ್ತು. ಅಂತೂ ಹಲವು ಚಿಲ್ಲರೆ ವರ್ಷಗಳ ನಂತರ ಆ ನಿರೀಕ್ಷೆಗೆ ಉತ್ತರವಾಗಿ ಒಂದು ಬಾಗಿಲು ತೆರೆದಿದೆ!

ಈ ಸಂಕಲನದಲ್ಲಿ ಹದಿಮೂರು ಕತೆಗಳಿವೆ.‌ ಮೊದಲನೆಯ ಕತೆಯ ಶೀರ್ಷಿಕೆಯೇ ಹೇಳುವಂತೆ ಈ ಕತೆಗಳ ಸಂಗತಿಗಳಿಗೆ ಲೋಕ ರೂಢಿಯ ಹೆಸರುಗಳು ಅನ್ವಯವಾಗುವುದಿಲ್ಲ. ಗಂಡು ಹೆಣ್ಣು, ಹೆಣ್ಣಿನಂತಹ ಗಂಡು, ನಮ್ಮವರಾಗುವ ಅವರು, ಮಧು ಪಾತ್ರೆಯೇ ಆದ ಹೃದಯ ಉಳ್ಳವರು, ಒಂದೇ ಬದುಕಿನಲ್ಲಿ ಭಿನ್ನ ಚಹರೆಯಲ್ಲಿ ಕಾಣುವವರು, ತನ್ನ ತನಕ್ಕಾಗಿ ತನ್ನವರನ್ನೇ ಬಲಿಕೊಡುವವರು... ಎಲ್ಲಾ ಈ ಬಾಗಿಲ ಹಿಂದಿದ್ದಾರೆ. ಶಾಂತಿ ಆ ಬಾಗಿಲ ತೆರೆದಿದ್ದಾರೆ. ಅದೂ ಹಲವು ಚಿಲ್ಲರೆ ವರ್ಷಗಳ ನಂತರ!

ಗಂಡಾಗಿ ಹುಟ್ಟಿ ಹೆಣ್ಣಾಗುವ 'ಅಭಿರಾಮಿ'ಯ ಒಳಗಿನ ಆ ಹೆಣ್ಣನ್ನು ಪರಿಚಯ ಮಾಡಿಕೊಳ್ಳಲು ಆ ಕತೆಯನ್ನೇ ಓದಬೇಕು. ಹೆಸರಿಲ್ಲದ ಸಂಬಂಧಗಳ ನಡುವಿನ ಮಾತು ಮೌನ, ಕತೆಯಾಗುವ ಅವರ ಒಡನಾಟ, ಬದುಕು ಮತ್ತು ಸಾವು ಎಂಬೆರಡು ಪರಿಧಿಯ ಒಳಗೇ ತುಡಿಯುವ ತುಯ್ಯುವ ಮನುಷ್ಯ ಸಹಜ ಭಾವುಕ ತೀವ್ರತೆಯನ್ನು ಆಧುನಿಕ ಜಾಲತಾಣಗಳ ತಂದಿತ್ತ ಆಕರ್ಷಣೆ ಮತ್ತು ಸ್ವಯಂ ನಿಯಂತ್ರಣದ ಅಗತ್ಯತೆಯನ್ನು ವಿವರಿಸದೇ ತಿಳಿಸುವ ಮೊದಲ ಕತೆ ಅಷ್ಟು ಸುಲಭವಾಗಿ ವ್ಯಾಖ್ಯಾನಕ್ಕೂ ಒಗ್ಗುವುದಿಲ್ಲ. ಒಂದೆರಡು ಓದಿನ ನಂತರವೂ ಹೊಸದೆಂಬಂತೆ ಓದಿಸಿಕೊಳ್ಳುವ ಈ ಕತೆಗಳ ಬಗ್ಗೆ ನಾನೇನೂ ಇದಂ ಇಥ್ಥಂ ಎಂದು ಹೇಳುತ್ತಿಲ್ಲ. ಬಾಗಿಲು ತೆರೆಯುವವರೆಗಿನ ನಿರೀಕ್ಷೆ, ಬಾಗಿಲು ತೆರೆದಾಗಿನ ಬೆರಗು, ಬಾಗಿಲ ಒಳ ಹೊರಗು ಎಲ್ಲವೂ ಸಮ್ಮಿಲಿತವಾದ ಈ ಕ್ಷಣ ಮತ್ತೆ ಮತ್ತೆ ಓದುತ್ತಾ ಒಳ ಹೊಗುತ್ತಾ...

ಆನಂದ ಋಗ್ವೇದಿ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..
ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು ಕೃತಿ ಪರಿಚಯ...
ಶಾಂತಿ ಕೆ. ಅಪ್ಪಣ್ಣ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ..

 

MORE FEATURES

ಆಧುನಿಕ ಮಾಧ್ಯಮರಂಗದ ಅಗತ್ಯಕ್ಕನುಗು...

19-01-2022 ಬೆಂಗಳೂರು

ಮಾಧ್ಯಮ ರಂಗಕ್ಕೆ ಪ್ರವೇಶ ಬಯಸುವ ವಿದ್ಯಾರ್ಥಿಗಳನ್ನು ರೂಪಿಸುವ ಪತ್ರಿಕೋದ್ಯಮ ಶಿಕ್ಷಣದ ಪಠ್ಯಕ್ರಮ, ಕಲಿಸುವ ವಿಧಾನದಲ್ಲೂ...

ಶಿಕ್ಷಣ ಕ್ಷೇತ್ರದ ಧನಾತ್ಮಕ ಅನುಭವಗ...

19-01-2022 ಬೆಂಗಳೂರು

ಲೇಖಕರ ಶಿಕ್ಷಣ ಕ್ಷೇತ್ರದ ಅನುಭವಗಳು ಶಾಲಾಹಂತದಿಂದ ಆಡಳಿತ ಹಂತದವರೆಗಿನ ವಿಚಾರಗಳನ್ನು ಸ್ಪಷ್ಟಪಡಿಸುತ್ತವೆ. ಶಾಲಾ ವಾತಾವ...

ಸಾಮಾನ್ಯ ಹೆಣ್ಣಿನ ಅಸಾಮಾನ್ಯ ಕಥನ ‘...

18-01-2022 ಬೆಂಗಳೂರು

ಮೀನಾಕ್ಷಮ್ಮನವರ ಈ ಆತ್ಮಕಥೆ 'ಹರಿವನದಿ' ನಮ್ಮ ನಾಡಿನ ಹೆಸರಾಂತ ನದಿಗಳಂತೆ ಜನಮನದಲ್ಲಿ ನೆಲೆನಿಂತ ಯಾವ ಪ್ರಸಿದ್...