ಬಿಡುವಿಲ್ಲದ ಆಗಸದಲ್ಲಿ ಏನೆಲ್ಲ ಎಷ್ಟೆಲ್ಲ..

Date: 20-01-2022

Location: ಬೆಂಗಳೂರು


‘ಮನುಜ ನಿರ್ಮಿತ ಮಾನವಸೃಜಿತ ಎಂದು ಹೆಮ್ಮೆ ಪಡಬಹುದಾದ ಎಲ್ಲ ವಿಷಯಗಳೂ, ವಸ್ತುಗಳೂ ಎಚ್ಚರ ತಪ್ಪಿದ ಬಳಕೆಯಿಂದ ಅನುದ್ದೇಶಿತ "ಸೈಡ್ ಎಫೆಕ್ಟ್"ಗಳಿಂದ  ಭಯವನ್ನು ಹುಟ್ಟಿಸಿದ ವಿನಾಶವನ್ನು ಸೃಷ್ಟಿಸಿದ  ಹಲವು ಉದಾಹರಣೆಗಳು ನಮ್ಮ ಮುಂದೆಯೂ ಹಿಂದೆಯೂ ಇವೆ’ ಎನ್ನುತ್ತಾರೆ ವಿಮಾನಶಾಸ್ತ್ರ ತಂತ್ರಜ್ಞ ಯೋಗೀಂದ್ರ ಮರವಂತೆ. ಅವರು ತಮ್ಮ ಏರೋ ಪುರಾಣ ಅಂಕಣದಲ್ಲಿ ದ್ರೋಣ್ ಗಳ ಕುರಿತು ವಿಶ್ಲೇಷಿಸಿದ್ದಾರೆ.  

ಒಂದಾನೊಂದು ಕಾಲದಲ್ಲಿ ಆಕಾಶದೆತ್ತರದಲ್ಲಿ ಸ್ವತಂತ್ರವಾಗಿ ಹಾರುವವುಗಳೆಲ್ಲ ಹಕ್ಕಿಗಳಾಗಿದ್ದವು. ಕಾವ್ಯ ಕಲ್ಪನೆ ಅಥವಾ ಲೌಕಿಕದ ನಿತ್ಯದ ಬದುಕಿನಲ್ಲಿ ದೇಹದ ಉತ್ಸಾಹಕ್ಕೂ ಮನಸಿನ ಆಹ್ಲಾದಕ್ಕೂ "ಪಕ್ಷಿಯಂತೆ ಹಾರುವ" ಎಂದು ಉದಾಹರಿಸುವುದು  ಸಾಮಾನ್ಯವಾಗಿತ್ತು. ಎಷ್ಟು ಎತ್ತರದ, ಎಷ್ಟು ತಗ್ಗಿನ ಹಾರಾಟಕ್ಕೆ ಪಕ್ಷಿಗಳೇ ವಾಸ್ತವವೂ ಉಪಮೆಯೂ ಆಗಿದ್ದವು. ಆ ಒಂದಾನೊಂದು ಕಾಲ ವಿಮಾನಗಳು ಆಕಾಶದಲ್ಲಿ ಹಾರಾಟ ಆರಂಭಿಸುವುದಕ್ಕಿಂತ ಮೊದಲಿನ ಕಾಲ. ಮನುಷ್ಯನಿಗೆ ಹಾರಾಟದ ಮೊದಲ ಪಾಠ ಹಕ್ಕಿಗಳಿಂದಲೇ. ಅಂತಹ ನೈಸರ್ಗಿಕ ಶಿಕ್ಷಣ ಮತ್ತು ಪ್ರೇರಣೆಯಿಂದಲೇ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ವಿಮಾನ ಹಾರಾಟದ ಯಶಸ್ವೀ ಪ್ರಯತ್ನ ಆರಂಭವಾಯಿತು. ಇಂದು ನಾವು ತಿಳಿದ ವಿಮಾನ ಚರಿತ್ರೆಯ ಮೊದಲ ಹಾರಾಟ ದಾಖಲಾದದ್ದು 1903ರಲ್ಲಿ ಅಮೇರಿಕಾದ ರೈಟ್ ಸಹೋದರರ ಮೂಲಕ. ಈಗ ಅವಲೋಕಿಸಿದರೆ  ಒಂದು ಶತಮಾನಕ್ಕಿಂತ ಮಿಕ್ಕಿದ ಕಲಿಕೆ, ಅನುಭವಗಳು ವಿಮಾನ ಲೋಕಕ್ಕೆ ಅದಮ್ಯ ಚೇತನ ಹಾಗು ಆತ್ಮವಿಶ್ವಾಸ ನೀಡಿವೆ. ಮತ್ತೆ ಅವುಗಳ ಫಲಶೃತಿಯೇ ಪ್ರತಿಕ್ಷಣವೂ ಐದೋ ಹತ್ತೋ ಸಾವಿರ ವಿಮಾನಗಳು ಇಂದು ಆಕಾಶದಲ್ಲಿರುತ್ತವೆ. ಅಂದರೆ   ಅಮೆರಿಕ ಮಲಗಿದ್ದರೆ ಕೆಲವು ಸಾವಿರ ಕಮ್ಮಿ, ಅಮೆರಿಕದಲ್ಲಿ  ಬೆಳಗಾಗಿದ್ದರೆ ಕೆಲವು ಸಾವಿರ ಹೆಚ್ಚು ವಿಮಾನಗಳು ಹತ್ತಿಳಿಯುತ್ತವೆ. ವಿಮಾನ ಯಾನವನ್ನು ಬಹಳ ಬಳಸುವ ಅಮೆರಿಕ ಎದ್ದಿದೇಯೋ ಮಲಗಿದೆಯೋ ಎನ್ನುವುದರ ಮೇಲೆ ಆಕಾಶದಲ್ಲಿ ಹಾರುವ  ವಿಮಾನಗಳು ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ವಿಮಾನಯಾನ ಸಂಚಾರ ಜಾಲವನ್ನು ದೇಶದೊಳಗೆ ಕ್ಷಿಪ್ರಗತಿಯಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಚೈನಾ ಭಾರತಗಳೂ ಮುಂಬರುವ ದಶಕಗಳಲ್ಲಿ ಅತ್ಯಂತ ಹೆಚ್ಚು ವಿಮಾನಗಳನ್ನು ಬಳಸುವ ದೇಶ ಎನ್ನುವ ಹೆಸರನ್ನೂ ಪಡೆಯಲಿವೆ.

ಈಗಿನ ಲೆಕ್ಕಾಚಾರದಲ್ಲಿ ಇಡೀ ಜಗತ್ತಿನಲ್ಲಿ ಪೂರ್ತಿ ದಿನವೊಂದಕ್ಕೆ ಒಂದು ಲಕ್ಷಕ್ಕೂ ಮೀರಿ ವಿಮಾನಗಳು ಹಾರಿ ಇಳಿದಿರುತ್ತವೆ. ಏಕಕಾಲಕ್ಕೆ ನಮ್ಮ ಮೇಲಿನ ವಾಯುಸ್ಥಳವನ್ನು ಬಳಸಿ ಹಾರಾಡುವ ವಿಮಾನಗಳಿಗೆ ಇಂತಿಷ್ಟು ಎತ್ತರದಲ್ಲಿ ಇಂತಹ ದಿಕ್ಕಿನಲ್ಲಿ ಇಂತಿಷ್ಟು ಹೊತ್ತಿಗೆ ಏರುವ ಹಾರುವ ಇಳಿಯುವ ಸಂದೇಶ ಹಾಗು ಆದೇಶ ನೆಲದ ಮೇಲಿರುವ ವಿಮಾನ ನಿಲ್ದಾಣದೊಳಗಿನ ನಿಯಂತ್ರಣಾ  ಕೊಠಡಿಯಿಂದ ಸಿಗುತ್ತಲೇ ಇರುತ್ತದೆ. ಮತ್ತೆ ಈ ವಿಮಾನಗಳು ತಮ್ಮ ಪ್ರಯಾಣದ ಉದ್ದಕ್ಕೂ ಭೂ ಪ್ರದೇಶದ ಮೇಲಿರುವ ಒಂದಿಲ್ಲೊಂದು ದೇಶದ ಊರಿನ ವಿಮಾನ ನಿಲ್ದಾಣದ ನಿಯಂತ್ರಣಾ ಸಿಬ್ಬಂದಿಗಳ ಜೊತೆ ಮಾತಾಡುತ್ತ ಸಲಹೆ ಪಡೆಯುತ್ತ ಸಾಗುತ್ತವೆ. ಗಗನಗಾಮಿ ನಾಗರಿಕ ಸೇವೆ ಮಾಡುವ ಸಣ್ಣ ದೊಡ್ಡ ವಿಮಾನಗಳೆಲ್ಲ ಹೀಗೆ ನೆಲದೊಟ್ಟಿಗೆ ಸಂಪರ್ಕ ಇಟ್ಟುಕೊಂಡೆ ಹತ್ತಿ ಇಳಿಯುವವೇ. ಆಕಾಶವೆಲ್ಲ ತಮ್ಮದೇ ಎಂದು ಖುಷಿಯಲ್ಲಿ ರೆಕ್ಕೆ ಪಟಪಟಗುಡಿಸುವ ಹಕ್ಕಿಪಿಕ್ಕಿಗಳು ತಮ್ಮ ಅಧಿಕಾರದ ಆಕಾಶ ಮಾರ್ಗವನ್ನು ಈಗ ಹೆಚ್ಚು ಹೆಚ್ಚು ವಿಮಾನಗಳ ಜೊತೆ ಹಂಚಿಕೊಳ್ಳಬೇಕಾಗಿದೆ. ಹಾರಲು ತೇಲಲು  ಕಲಿಸಿದ ಗುರುಗಳ ಮನೆಯಲ್ಲೇ ಶಿಷ್ಯರ ಠಿಕಾಣಿ ವಿಸ್ತಾರ ಆಗುತ್ತಿದೆ! ನೆಲ ಮಟ್ಟದಿಂದ ಎಂಟೋ ಹತ್ತೋ ಕಿಲೋಮೀಟರು ಎತ್ತರದಲ್ಲಿ ಕತೆ ಹೀಗಾದರೆ ಅದಕ್ಕಿಂತ ಸ್ವಲ್ಪ ಕೆಳಗೆ ಅಥವಾ ಮೇಲೆ ಹಾರುವ ಸೇನಾ ವಿಮಾನಗಳು ಎಲ್ಲ ದೇಶಗಳಲ್ಲೂ ಇವೆ. ಸೇನಾ ವಿಮಾನಗಳದ್ದು ನಿತ್ಯ ಸೇವೆ ಅಲ್ಲದಿದ್ದರೂ ರಕ್ಷಣೆಯ ಭಾರ ಬಿದ್ದಾಗ ಆಗಸದಲ್ಲಿ ಗುಡುಗಿ ಮೊಳಗುತ್ತವೆ. ಇಷ್ಟಲ್ಲದೇ,  ವಿಮಾನ ಸಂತತಿಯ ದೂರದ ಬಂಧುವಿನಂತೆ ತೋರುವ ಹೆಲಿಕಾಪ್ಟರ್ಗಳು ರಕ್ಷಣೆ ಅಥವಾ ಇನ್ಯಾವುದೋ ತುರ್ತು ಸೇವೆಯ ನೆಪದಲ್ಲಿ ಅಲ್ಲದಿದ್ದರೆ ಯಾವುದೊ ಐಷಾರಾಮಿಗಳ ಸಂಚಾರಕ್ಕೆ ಅನುಕೂಲವಾಗಿ ರೆಕ್ಕೆ ಗಿರಗುಡಿಸುತ್ತ ಗಾಳಿಯನ್ನು ಕತ್ತರಿಸುತ್ತಾ ತಿರುಗಾಡುತ್ತವೆ. ವಿಮಾನಗಳು ಎತ್ತರದಲ್ಲೂ ವೇಗದಲ್ಲೂ ಹೆಲಿಕಾಪ್ಟರ್ಗಳಿಗಿಂತ ಹೆಚ್ಚುಗಾರಿಕೆಯನ್ನು ಕೊಚ್ಚಿಕೊಂಡರೆ, ಹೆಲಿಕ್ಯಾಪ್ಟರ್ಗಳು ತಮ್ಮದು ನಿಶ್ಚಲ ರೆಕ್ಕೆಯಲ್ಲ ಸುತ್ತುವ ರೆಕ್ಕೆ, ಎಲ್ಲೆಂದರಲ್ಲಿ ಸಣ್ಣ ಜಾಗದಲ್ಲಿ ಇಳಿಯಬಹುದು ಹಾರಬಹುದು ಎನ್ನುವ ಹಿರಿಮೆಯಲ್ಲಿ ಬೀಗುತ್ತವೆ. ಹಕ್ಕಿಯ ವಂಶಕ್ಕೂ ಸೇರದ ವಿಮಾನ ಹೆಲಿಕ್ಯಾಪ್ಟರ್ಗಳ ಜಾತಿಪಂಗಡವೂ ಅಲ್ಲದ ಮೋಜಿನ ಯಾನ ಮಾಡಿಸಬಲ್ಲ ಬಿಸಿಗಾಳಿ ಬಲೂನ್ ಗಳೂ ನಮ್ಮ ತಲೆಯ ಮೇಲಿನ ಆಗಸದಲ್ಲಿ ಹಾರುವವುಗಳೇ. ಒಟ್ಟಾರೆ ಆಕಾಶ ಎಂದರೆ ಅವಸರದ ಬಿಡುವಿಲ್ಲದ ಅವಕಾಶ. ಗಗನಗಾಮಿ ಚಟುವಟಿಕೆಗಳ ಬಗ್ಗೆ ಇಷ್ಟೇ ಹೇಳಿದರೆ ಇವೆಲ್ಲವೂ ಕೂಡ ಒಂದಾನೊಂದು ಕಾಲದ ಕತೆಯೇ ಆಗುತ್ತವೆ.  

ಇಂದಿನ ಆಕಾಶದ ಚಟುವಟಿಕೆಯ ಅಲ್ಲ ಆಟಿಕೆಯ ಬಗ್ಗೆ ಹೇಳಬೇಕಾದರೆ ವಿಶ್ವವ್ಯಾಪಿ "ಡ್ರೋನ್" ಗಳ ಬಗ್ಗೆ ಹೇಳಲೇ ಬೇಕು. ಇದೀಗ ಡ್ರೋನ್ ಯುಗ. ಡ್ರೋನ್ ಎನ್ನುವ ಚಾಲಕರಹಿತ ಹಾರುವ ಸಾಧನದ ಹುಟ್ಟು ಎಂದೋ ಆಗಿದ್ದರೂ ಅದು  ಜನಸಾಮಾನ್ಯರ ಕೈ ಸೇರಿ "ನಾಗರಿಕ ಡ್ರೋನ್" ಎಂದು ಹೆಸರು ಪಡೆದು, ಯಾರೂ ಹಾರಿಸಬಲ್ಲ ಯಾರೂ ಪಳಗಿಸಬಲ್ಲ ವಸ್ತುವಾದದ್ದದ್ದು ಕಳೆದ ಒಂದು ದಶಕದಲ್ಲಿಯೇ. ಹಾಗಂತ ಚಾಲಕ ಇಲ್ಲದೆ ಹಾರಿ ಸೆಣಸಬಲ್ಲ ಯುದ್ಧ ಸಾಧನಗಳು ಬೆಳೆದುಬಂದ  ಇತಿಹಾಸದ ಪುಟಗಳನ್ನು ತಿರುವಿದರೆ, 1849ರಲ್ಲಿ ಆಸ್ಟ್ರಿಯಾ ದೇಶ ಇಟಲಿಯ ವೆನಿಸ್ ನಗರದ ಮೇಲೆ ಹಾರುವ ಬಲೂನ್ ಗಳಲ್ಲಿ ಮಾರಕ ಸ್ಪೋಟಕಗಳನ್ನು ತುಂಬಿಸಿ ಹಾರಿಸಿದ್ದನ್ನೇ ಡ್ರೋನ್ ನ ಉಗಮ ಎಂದು ಕರೆದವರೂ ಇದ್ದಾರೆ. ಅಂದು ಗಾಳಿಯಲ್ಲಿ ಎಲ್ಲೆಂದರಲ್ಲಿ ಹಾರಿಬಿಟ್ಟ ಕೆಲವು ಸ್ಪೋಟಕ ಬಲೂನ್ ಗಳು ವಿರೋಧಿ ಪಾಳಯಕ್ಕೆ ಹಾನಿ ಉಂಟು ಮಾಡಿದರೂ ಗಾಳಿಯೇ ದಿಕ್ಕು ಬದಲಿಸಿದಾಗ ತಮ್ಮನ್ನು ಹಾರಿಸಿದ ಆಸ್ಟ್ರಿಯಾ ಸೇನೆಯ ಮೇಲೆಯೂ ತೇಲಿಬಂದು ಬಿದ್ದು ಹಾನಿ ಮಾಡಿದವು. ಮುಂದೆ ರೆಕ್ಕೆಸಹಿತ  ಮಾನವಚಾಲಿತ ವಿಮಾನಗಳು ಹುಟ್ಟಿದ ಮೇಲೆ ಮಿಲಿಟರಿ ಜಗತ್ತಿನಲ್ಲಿಯೂ ಅದೇ ಮಾದರಿಯ ಡ್ರೋನ್ ಗಳು ಹುಟ್ಟಿದವು. ಮಿಲಿಟರಿ ಜಗತ್ತಿನಲ್ಲಿ ಕಾಯಲೆಂದೇ ಕೊಲ್ಲಲೆಂದೇ ಬಳಕೆಯಾಗುವ ಡ್ರೋನ್ ಗಳಿಗೆ ಶತಮಾನದ ರಕ್ತಸಿಕ್ತ ಇತಿಹಾಸ ಇದೆ . ಮಾನವ ಚಾಲಕನನ್ನು ಕೂರಿಸಿಕೊಂಡು ಮೊದಲ ಬಾರಿಗೆ ವಿಮಾನ ಹಾರಿತಲ್ಲ 1903ರಲ್ಲಿ, ಅಲ್ಲಿಂದ ಸುಮಾರು ಹದಿನೈದು ವರ್ಷಗಳ ನಂತರ ಡ್ರೋನ್ ಗಳು ಸೇನಾ ಪಡೆಯಲ್ಲಿ ಮೊದಲಾಗಿ ಬಳಸಲ್ಪಟ್ಟವು. ರೇಡಿಯೋ ಸಂದೇಶಗಳನ್ನು ಬಳಸಿ ಹಾರಿಸುವ ನಿಯಂತ್ರಿಸುವ ಡ್ರೋನ್ ಗಳು ಅಮೆರಿಕಾದ ಯೂರೋಪಿನ ರಷ್ಯಾದ ಬಲಿಷ್ಠ ಸೇನಾ ಪಡೆಗಳ ಖಾಯಂ ಹಾಗು ಗುಪ್ತ ಸದಸ್ಯರಾಗಿದ್ದವು. ರಕ್ಷಣಾ ವ್ಯವಸ್ಥೆಯಲ್ಲಿ ಎಲ್ಲೆಲ್ಲಿ ಮಾನವ ಚಾಲಿತ ಯುದ್ಧ ವಿಮಾನಗಳ ಅಥವಾ ಹೆಲಿಕ್ಯಾಪ್ಟರ್ ಗಳ  ಬಳಕೆ ಅತ್ಯಂತ ಅಪಾಯಕಾರಿಯೋ, ಸಂಪೂರ್ಣ ಅಸಾಧ್ಯವೋ ಅಲ್ಲೆಲ್ಲ ಡ್ರೋನ್ ಗಳ ಬಳಕೆ ಶುರು ಆಗಿತ್ತು. ಗಡಿಯ ಮೇಲೆ, ವಿರೋಧಿ ಪಾಳಯದ ಮೇಲೆ ನಿಗಾ ಇಡುವುದಕ್ಕೆ, ಗುಟ್ಟಾಗಿ ಧಾಳಿ ಮಾಡುವುದಕ್ಕೆ ಡ್ರೋನ್ ಗಳು ಉಪಯುಕ್ತ ಎಂದು ಎಂದೋ ಜಗತ್ತಿನ ಮುಂಚೂಣಿ ಸೇನಾಪಡೆಗಳು ಕಂಡುಕೊಂಡಿದ್ದವು.

ಡ್ರೋನ್ ನಂತಹ ಮಾನವರಹಿತ ಹಾರುವ ಸಾಧನಗಳ ಬಳಕೆ ಮೊದಲ ಮಹಾಯುದ್ಧದ ನಂತರ ಹೆಚ್ಚಾಯಿತು. ಸೇನೆಗಳಲ್ಲಿ ಬಳಕೆಯಾಗುತ್ತಿದ್ದ ಡ್ರೋನ್ ಗಳು ಇಂದು ನಾವು ಕೈಯಲ್ಲಿ ಹಿಡಿದು ಆಡುವ ನಾಗರಿಕ ಬಳಕೆಯ ಡ್ರೋನ್ ಗಳಷ್ಟು ಚಿಕ್ಕವು ಅಲ್ಲ. ಉದ್ದೇಶಿತ ಕೆಲಸವನ್ನು ಅವಲಂಬಿಸಿ ಮಿಲಿಟರಿ ಡ್ರೋನ್ ಗಳು ಗಾತ್ರದಲ್ಲಿ  ಸುಮಾರಿಗೆ ಚಿಕ್ಕ ವಿಮಾನಗಳಂತೆಯೇ ಕಾಣಿಸುತ್ತವೆ. ಅಂತಹ ಡ್ರೋನ್ ಗಳ ಪುರಾತನ ಸಂತತಿಯಲ್ಲೇ ಹೊಸ ಕವಲೊಂದು ಹುಟ್ಟಿ ಜನಸಾಮಾನ್ಯರ ಬಳಕೆಯ "ಗಗನಗಾಮಿ ಕ್ಯಾಮೆರಾ" ದಂತಹ ಸಾಧನವಾಗಿ  ಮಾರ್ಪಡುವಾಗ ಸಣ್ಣ ತೂಕ ಹೊತ್ತು ತುಸು ಸಮಯದ ಮಟ್ಟಿಗೆ ಹಾರಿ ಸುತ್ತಿ ಕೆಳಗಿಳಿಯುವ ಅರ್ಧ ಕೆ.ಜಿಯೋ ಒಂದು ಕೆ.ಜಿಯೋ ಭಾರದ ಪುಟಾಣಿ ಹಕ್ಕಿಯಂತಾದವು. ಇಂದು ಊರೂರಲ್ಲಿ ಕಾಣಸಿಗುವ ಡ್ರೋನ್ ಗಳು ಇಂತಹ ಆಕಾಶಕಾಯಗಳೇ. ಮನೆಯೊಳಗೋ ಬಯಲಲ್ಲಿಯೋ ಸುರಸುರ ಸುತ್ತುತ್ತ  ನೆಗೆಯುವ ಹಾರುವ ತಾಜಾ ಆಟಿಕೆಗಳೂ ಹೌದು ಇವು. ಛಾಯಾಗ್ರಹಣಕ್ಕೆ ಚಲನಚಿತ್ರಗಳಿಗೆ ಹೊಸ ದೃಷ್ಟಿಕೋನವನ್ನು ಒದಗಿಸಿರುವ ನಾಗರಿಕ ಬಳಕೆಯ ಅಥವಾ "ಕಮರ್ಷಿಯಲ್ ಡ್ರೋನ್" ಗಳು ನಮಗೆ ನವ ನೇತ್ರವನ್ನು ನೀಡಿವೆ. ನಮ್ಮೆಲ್ಲರ ಎರಡು ಕಣ್ಣುಗಳು ಮುಖದ ಮೇಲಿದ್ದರೆ ಮೂರನೆಯದು ಹಾರುವ ಡ್ರೋನ್ ಮೇಲಿದೆ. ನಾವು ನೋಡದ ನಮ್ಮೂರಿನ ನದಿ ಸಮುದ್ರಗಳ ಬೆಟ್ಟ ಗುಡ್ಡ ಕಂದರಗಳ ಆಸುಪಾಸಿನ ಭೂಪ್ರದೇಶಗಳ ಬಗ್ಗೆ ಕಲ್ಪನೆಗಳನ್ನು ಒರೆಸಿ ನೈಜಚಿತ್ರಣವನ್ನು ಒದಗಿಸಿವೆ. ಮಿಲಿಟರಿ ಡ್ರೋನ್ ಗಳಂತೆ ಯಾರ ಮೇಲೋ ಗೂಢಚಾರಿಕೆ ಮಾಡುವ ಅಥವಾ ಕೊಲ್ಲುವ ಉದ್ದೇಶ ಇರದ ಅಹಿಂಸಾವಾದಿ ಸೌಮ್ಯಸ್ವರೂಪಿ ಸಂಭಾವಿತ ಡ್ರೋನ್ ಗಳು ಇಂದು ಹೊಸ ಹವ್ಯಾಸದ, ನವ್ಯ  ಆಟದ ಸಾಧನವಾಗಿ ಜಗದ ಮೂಲೆಮೂಲೆಯಲ್ಲೂ  ಜನಪ್ರಿಯವಾಗಿವೆ. ತನ್ನ ಕೆಳಗಿರುವ ಜಗವನ್ನು ಕುತೂಹಲದಿಂದ ನೋಡುವ ದಾಖಲಿಸುವ ಸಾಮರ್ಥ್ಯದ  ಜನಸಾಮಾನ್ಯರ  ಡ್ರೋನ್ ಗಳನ್ನು "ಆಕಾಶದ ಕಣ್ಣು " ಎಂದೂ ಕವಿ ಮನಸ್ಸುಗಳು ಕರೆಯಬಹುದು.

ಮನುಜ ನಿರ್ಮಿತ ಮಾನವಸೃಜಿತ ಎಂದು ಹೆಮ್ಮೆ ಪಡಬಹುದಾದ ಎಲ್ಲ ವಿಷಯಗಳೂ, ವಸ್ತುಗಳೂ ಎಚ್ಚರ ತಪ್ಪಿದ ಬಳಕೆಯಿಂದ ಅನುದ್ದೇಶಿತ "ಸೈಡ್ ಎಫೆಕ್ಟ್"ಗಳಿಂದ  ಭಯವನ್ನು ಹುಟ್ಟಿಸಿದ ವಿನಾಶವನ್ನು ಸೃಷ್ಟಿಸಿದ  ಹಲವು ಉದಾಹರಣೆಗಳು ನಮ್ಮ ಮುಂದೆಯೂ ಹಿಂದೆಯೂ ಇವೆ. ಡ್ರೋನ್ ಗಳು ಕೂಡ ಇದಕ್ಕೆ ಹೊರತಾಗಿಲ್ಲ. ಮಿಲಿಟರಿ ಡ್ರೋನ್ ಗಳ ಮಟ್ಟಿಗೆ 2017 ಅತ್ಯಂತ ಕರಾಳ ವರ್ಷ ಎಂದು ಪರಿಗಣಿಸಲ್ಪಡುತ್ತದೆ. ಅಮೆರಿಕವು ಡ್ರೋನ್ ಗಳನ್ನು ಬಳಸಿ ಅಫ್ಘಾನಿಸ್ತಾನ್, ಪಾಕಿಸ್ತಾನ, ಯೆಮೆನ್, ಸಿರಿಯಾಗಳಲ್ಲಿ ಹಲವು ಧಾಳಿಗಳನ್ನು ನಡೆಸಿದ ಕಾಲ ಅದು. ಮತ್ತೆ ಇಂತಹ ಧಾಳಿಗಳಲ್ಲಿ ಸಾವಿರಾರು ಜನಸಾಮಾನ್ಯರು ಮೃತರಾಗಿದ್ದಾರೆ. 2017ರ ಅಂಕಿ ಅಂಶದ ಪ್ರಕಾರ, ಡ್ರೋನ್ ಧಾಳಿಯಲ್ಲಿ ಸತ್ತ ಸಾಯುವ ಐವರಲ್ಲಿ ಕನಿಷ್ಠ ಒಬ್ಬ ಅಮಾಯಕ  ಜನಸಾಮಾನ್ಯನೂ ಸೇರಿರುತ್ತಾನೆ. ಗುರಿತಪ್ಪಿದ ಅಥವಾ  ತಪ್ಪಿಸಿಕೊಂಡ  ಡ್ರೋನ್  ಮದುವೆಯ ದಿಬ್ಬಣದ ಮೇಲೆ ಬಿದ್ದ, ಮಕ್ಕಳ ಆಟದ ಬಯಲಲ್ಲಿ ಎರಗಿದ, ಹೊಲದಲ್ಲಿ ಉಳುವ ರೈತರನ್ನು ಘಾತಿಸಿದ ವೃತ್ತಾಂತಗಳೂ ಇವೆ. ಇನ್ನು  2018ರ ಡ್ರೋನ್ ಘಟನೆಯ  ಬಿಸಿ ಚರ್ಚೆ ಲಂಡನ್ ಅಲ್ಲಿ ಇನ್ನೂ ಆರಿಲ್ಲ. 2018ರ ಡಿಸೆಂಬರ್ ಕೊನೆಯ ವಾರ ಬ್ರಿಟನ್ನಿನ ಎರಡನೆಯ ಅತಿ ಬ್ಯುಸಿ ಏರ್ಪೋರ್ಟ್ ಎನ್ನುವ ಖ್ಯಾತಿಯ "ಗ್ಯಾಟ್ ವೀಕ್ " 36 ಗಂಟೆಗಳ ಕಾಲ ಸ್ಥಗಿತಗೊಂಡಿತು. ಇಳಿಯಬೇಕಿದ್ದ  ನೂರಾರು ವಿಮಾನಗಳು ಬೇರೆ ಊರು ನೆರೆಯ ದೇಶಗಳಲ್ಲಿ ಇಳಿಸಬೇಕಾಯಿತು. ಏರಬೇಕಾದ ನೂರಾರು ವಿಮಾನಗಳು ತಣ್ಣಗೆ ಕಾಯುತ್ತ ಕುಳಿತವು. ಹತ್ತಾರು ಸಾವಿರ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಮಲಗಿ ಎದ್ದು ಕಾದರು. ಕ್ರಿಸ್ಮಸ್ ಆಚರಣೆಗೆ ಹೊರಟವರು, ರಜೆಗೆ ತೆರಳಬೇಕಾದವರು ಅಲ್ಲಲ್ಲೇ ಇರಬೇಕಾಯಿತು. ಗ್ರೀಸ್ ದೇಶದಲ್ಲಿ  ತೀವ್ರವಾಗಿ ಅಸ್ವಸ್ಥಳಾಗಿದ್ದ ಅಜ್ಜಿ  ಇಂಗ್ಲೆಂಡ್ ನಿಂದ ತನ್ನ ಮಕ್ಕಳು ಮೊಮ್ಮಕ್ಕಳು ಕೊನೆ ಕ್ಷಣದಲ್ಲಿ ನೋಡಲು ಬರಬೇಕೆಂದು ಬಯಸಿದ್ದ ಆಸೆ ಪೂರೈಸಲೇ ಇಲ್ಲ.

ಇಷ್ಟಕ್ಕೆಲ್ಲ ಕಾರಣ  "ಗ್ಯಾಟ್ ವೀಕ್" ವಿಮಾನ ನಿಲ್ದಾಣದ ಆವರಣದೊಳಗೆ, ವಿಮಾನ ಪಥದ ಬಳಿ ಹಾರುತ್ತಿದ್ದ ಎರಡು ಅನಾಮಿಕ  ಡ್ರೋನ್ ಗಳು. ಈ ಕಮರ್ಷಿಯಲ್ ಡ್ರೋನ್ ಗಳು ಹತ್ತುವ ಇಳಿಯುವ ವಿಮಾನಕ್ಕೆ ಬಡಿಯುವ ಸಾಧ್ಯತೆ ಇದ್ದದ್ದು ಮತ್ತೆ ಹೀಗೆ ಹಾರಾಡುತ್ತಿದ್ದ ಡ್ರೋನ್ ಗಳನ್ನೂ ಹಾರಬಿಟ್ಟವರು ಯಾರು ? ಇವನ್ನು ಹೊಡೆಯುವುದು ಬೇಡವೋ? ಹೊಡೆದುರುಳಿಸಿದರೆ ಇನ್ನೇನು ಅನಾಹುತ ಕಾದಿದೆಯೋ ? ಎಂಬೆಲ್ಲ ಗೋಜಲುಗಳು ಕಗ್ಗಂಟಾಗಿ ಬಲಿಷ್ಠ ದೇಶದ  ಜಗದ್ವಿಖ್ಯಾತ ವಿಮಾನನಿಲ್ದಾಣವನ್ನು ತಟಸ್ಥಗೊಳಿಸಿದವು.   ವೇಗವಾಗಿ ಹತ್ತುವ ಇಳಿಯುವ ವಿಮಾನಕ್ಕೆ ಒಂದೋ ಎರಡೋ ಕೆ.ಜಿ ತೂಗುವ ಸಣ್ಣ ವಸ್ತುವೊಂದು ಬಡಿದರೆ ನಮ್ಮ ಊಹೆಗೆ ನಿಲುಕದಷ್ಟು ದೊಡ್ಡ ಹಾನಿ ಆಗುತ್ತದೆ. ವಿಮಾನಗಳಿಗೆ ಹಾರುವ ಬಾತುಕೋಳಿಗಳೋ ಇನ್ಯಾವುದೋ ಹಕ್ಕಿಗಳೋ ಬಡಿದು ಎಂಜಿನ್ ಒಳಗೆ ಸಿಕ್ಕಿ ವಿಮಾನ ಇಳಿಯಲು ಒದ್ದಾಡಿದ್ದು ಇದೆ. ಹಕ್ಕಿಯೊಂದು  ವಿಮಾನದ ರೆಕ್ಕೆಗೆ ಬಡಿದು ತೂತು ಆದದ್ದೂ, ಚಾಲಕರ  "ಕಾಕ್ ಪಿಟ್ " ಕಿಟಕಿ ಒಡೆದು ಚೂರಾದದ್ದೂ ಇದೆ. ಮತ್ತೆ ಇಂತಹ ಅಪಘಾತಗಳಿಂದ ವಿಮಾನ ಹತೋಟಿ ತಪ್ಪಿ ಬಿದ್ದದ್ದೂ ಇದೆ. ವಿಮಾನವೊಂದರ ವಿನ್ಯಾಸಕ್ಕೆ ಹುಟ್ಟಿಗೆ ಕಾರಣವಾದ ಹಕ್ಕಿಗಳು ವಿಮಾನದ ಪರಮ ಶತ್ರುವಾಗಿರುವುದು ಅಂತರಿಕ್ಷಲೋಕದ  ವ್ಯಂಗ್ಯ ಹಾಗು ವಿಪರ್ಯಾಸವೇ ಇರಬೇಕು.  ಗಾತ್ರ ತೂಕದಲ್ಲಿ ಯಾವುದೇ ಹಕ್ಕಿಯಂತೆಯೇ ಇರುವ ಡ್ರೋನ್ ಗಳು ವೇಗವಾಗಿ ಸಾಗುವ ವಿಮಾನಕ್ಕೆ ಡಿಕ್ಕಿ ಹೊಡೆದರೆ ಗಂಭೀರ  ಹಾನಿ ಮಾಡಬಲ್ಲವು. ಇನ್ನು "ಗಾಟ್ ವೀಕ್" ಅಲ್ಲಿ ಹಾರಾಡಿದ ಡ್ರೋನ್ ಗಳು  ದುಷ್ಕರ್ಮಿಗಳ  ಬಾಂಬ್ ಹುಡುಗಿಸಿಕೊಂಡಿದೆಯೇ ಅಥವಾ ಇನ್ಯಾರ ತುಂಟ ಕೀಟಲೆಯೇ, ಗುಂಡಿಕ್ಕಿ ಕೆಳಗುರುಳಿಸಿದರೆ  ಮತ್ತೇನೋ ಅವಘಡ ಕಾದಿದೆಯೋ, ಅಥವಾ ಹೊಡೆದುರುಳಿಸಬೇಕಾದ ಗುಂಡು ಗುರಿತಪ್ಪಿ ಇನ್ಯಾರಿಗೋ ತಾಗಿದರೆ ಎನ್ನುವ ತಬ್ಬಿಬ್ಬಿನಲ್ಲಿ 36 ಗಂಟೆಗಳ ಕಾಲ ವಿಮಾನ ನಿಲ್ದಾಣ, ಅಧಿಕಾರಿಗಳು ಆಡಳಿತ ವ್ಯವಸ್ಥೆಗಳು ಡ್ರೋನ್ ಗಳಿಗೆ ಸಂಪೂರ್ಣ ಶರಣಾದವು. ಜನಸಾಮಾನ್ಯರು ಬಳಸುವ ಕ್ಷುಲ್ಲಕ ಡ್ರೋನ್ ಗಳು ಹೇಗೆ ಎಲ್ಲರೂ ನಂಬಿದ ಅಭೇದ್ಯ ವ್ಯವಸ್ಥೆಗಳನ್ನು  ಅಲ್ಲೋಲಕಲ್ಲೋಲವಾಗಿಸಬಲ್ಲವು ಎಂಬುದಕ್ಕೆ ಸಾಕ್ಷಿ ಆದವು.

ಅಂಗಡಿಗಳಲ್ಲಿ ಖರೀದಿಗೆ ಸಿಗುವ ಡ್ರೋನ್ ಗಳ ಒಳಗಿನ ಸಾಫ್ಟ್  ವೇರ್, ಡ್ರೋನ್ ಅನ್ನು ವಿಮಾನ ನಿಲ್ದಾಣದ ಹತ್ತಿರ ಹಾರಲು ಬಿಡುವುದಿಲ್ಲ. ನಾಗರಿಕ  ಡ್ರೋನ್ ಗಳಲ್ಲಿ ಅಂತರ್ಗತವಾಗಿರುವ  ಪ್ರೋಗ್ರಾಮ್ ಇಂತಹ ಕೆಲವು ನಿಬಂಧನೆ ನಿಯಂತ್ರಣಗಳಿಗೆ ಒಳಪಟ್ಟಿರುತ್ತದೆ, ಆದರೆ ಯಾರೋ ಚಾಣಾಕ್ಷರು ಮನೆಯಲ್ಲಿ ಕೂತು ತಯಾರಿಸಿದ ಡ್ರೋನ್ ಗಳನ್ನು ಇಂತಹ ನಿಯಮಾವಳಿಗಳ ಬಂಧನಕ್ಕೆ ಒಳಪಡದಂತೆ ನಿರ್ಮಿಸಬಹುದು. ಲಂಡನ್ ವಿಮಾನ ನಿಲ್ದಾಣದಲ್ಲಿ ಮೂರು ವರ್ಷಗಳ ಹಿಂದೆ ಇದೇ ಸಮಯಕ್ಕೆ ಹಾರಿ ಸುದ್ದಿಯಾದ ಡ್ರೋನ್ ಗಳು ಕೂಡ ಹೀಗೆ ಯಾರದೋ ಕೈಕಸುಬಿನ ಡ್ರೋನ್ ಗಳು ಆಗಿರಬಹುದು ಎನ್ನುವ ಗುಮಾನಿ ಇದೆ.  ಕೊನೆಗೂ ಡ್ರೋನ್ ಅನ್ನು ಹೊಡೆದುರುಳಿಸಿ ವಿಮಾನ ಸಂಚಾರ ಶುರು ಆದರೂ ಇಂತಹ ದುಬಾರಿ ಹಾಗು ಕೆಟ್ಟ ಕೀಟಲೆ ಮಾಡಿದವರು ಯಾರು ಎನ್ನುವ ಹುಡುಕಾಟ ನಿರೀಕ್ಷಿತ ಅಂತ್ಯವನ್ನು ಕಾಣದೆ  ನಿಂತು ಹೋಯಿತು.  ಹಕ್ಕಿಗಳಿಗಿಂತಲೂ ಚಿಕ್ಕದಾದ ಒಂದೆರಡು ಹಾರುವ ಸಾಧನಗಳು ಬ್ರಿಟನ್ನಿನ ವಿಮಾನ ನಿಲ್ದಾಣದ ವ್ಯವಸ್ಥೆ, ಪೊಲೀಸು, ಮಿಲಿಟರಿ, ಸರಕಾರಗಳ ಅಸಹಾಯಕತೆಯನ್ನು ನಭದಿಂದ ನೋಡಿ ನಗುತ್ತ ಡ್ರೋನ್ ಲೋಕದಲ್ಲೊಂದು  ಹೊಸ  ಪ್ರಹಸನ ಬರೆದಿವೆ. 2018ರ ಲಂಡನ್ ಡ್ರೋನ್ ಪ್ರಸಂಗ ಇದೀಗ ಮುಗಿದಿದ್ದರೂ ಅಲ್ಲಿ ಹುಟ್ಟಿದ ಪ್ರಶ್ನೆಗಳು ಈಗಲೂ  ಆಕಾಶದಲ್ಲಿಯೂ ಹಾರಾಡುತ್ತಿವೆ. ಮುಂಬರುವ ವರ್ಷಗಳಲ್ಲಿ, ಇದೀಗ ಪರೀಕ್ಷೆ ಪ್ರಯೋಗಗಳ ಹಂತದಲ್ಲಿರುವ "ಫ್ಲೈಯಿಂಗ್ ಟ್ಯಾಕ್ಸಿ " ಗಳೂ ಅಂಬರವನ್ನೇರಲಿವೆ, ನಮ್ಮನ್ನು ಮನೆಯಿಂದ ಹತ್ತಿಸಿಕೊಂಡು ಪೇಟೆಗೋ ಪಟ್ಟಣಕ್ಕೋ ಆಫೀಸಿಗೋ ಆಕಾಶಮಾರ್ಗವಾಗಿ  ಮುಟ್ಟಿಸಲಿವೆ.      

ಬಿಡುವಿಲ್ಲದ ಆಗಸದಲ್ಲೀಗ ಹೊಸ ಸಂಶೋಧನೆಗಳು ನವನವೀನ ಸಾಧನಗಳನಂತಹ ಒಂದಿಷ್ಟು ಉತ್ತರಗಳು, ಮತ್ತೆ ಆ ಉತ್ತರಗಳ ಜೊತೆಗೆ ಉದ್ಭವಿಸುವ ಒಂದಿಷ್ಟು ಪ್ರಶ್ನೆಗಳು. ಇವುಗಳ ಸಂಗಡ ಅದೇ ಆಕಾಶದೆತ್ತರದಲ್ಲಿ ನಿತ್ಯವೂ ಲಕ್ಷ್ಯ ಜೀವಗಳನ್ನು ಸಾಗಿಸುವ ವಿಮಾನಗಳು. ಧಾಳಿ ಮಾಡಿ ಎಷ್ಟು ಜೀವಗಳನ್ನೂ ಕ್ಷಣದಲ್ಲಿ ನಾಶಮಾಡಬಲ್ಲ ಮಿಲಿಟರಿ ವಿಮಾನಗಳು. ಯಾವುದೋ  ಗುರಿ ಇಟ್ಟು ಯಾರ ಮೇಲೊ ಕಣ್ಣಿಟ್ಟು ಮೈಲಿಗಟ್ಟಲೆ ಸಾಗುವ ಸೇನಾ ಡ್ರೋನ್ ಗಳು, ವಿಹಂಗಮ ಭಾವಚಿತ್ರಗಳನ್ನು ವಿಶಿಷ್ಟ ನೋಟಗಳನ್ನು ನೀಡಬಲ್ಲ, ವಸ್ತುಗಳ ತುರ್ತು ಸಾಗಾಣಿಕೆಗೆ ಸಹಕಾರಿಯಾಗಬಲ್ಲ ನಾಗರಿಕ ಡ್ರೋನ್ ಗಳು. ಉಳಿದಿರುವ ಸ್ಥಳ, ಅವಕಾಶದಲ್ಲಿ ಮಾನವನಿರ್ಮಿತ ಎಲ್ಲ ಹಾರಾಟಗಳಿಗೆ ಸ್ಪೂರ್ತಿ ಉತ್ತೇಜನ ನೀಡಿದ ಹಕ್ಕಿ ಪಿಕ್ಕಿಗಳು.

ಈ ಅಂಕಣದ ಹಿಂದಿನ ಬರಹಗಳು
ತುರ್ತು ನಿರ್ಗಮನದ ವಿಲಕ್ಷಣ ಕ್ಷಣಗಳು
ಮನೆಗೆ ಮರಳಿದ ಮಹಾರಾಜ
ಲೋಕೋಪಕಾರಿಯ ಪಾತ್ರದಲ್ಲಿ ಲೋಹದ ಹಕ್ಕಿ
ಆಕಾಶದ ರಾಣಿಯೂ ಕನಸಿನ ಹಕ್ಕಿಯೂ.....
ಅಸಲಿ ವಿಮಾನಗಳು ಮತ್ತು ನಕಲಿ ಹಕ್ಕಿಗಳು
ವಿಮಾನ ನಿಲ್ದಾಣಕ್ಕೆ ಸ್ವಾಗತ
ವಿಮಾನ ಸಂತತಿಯ ಶಬ್ದ ಬಣ್ಣ ಚಿತ್ರಗಳು
ಒಂದು ಆಕಾಶ ಹಲವು ಏಣಿಗಳು
ಆಗಸದ ಬಂಡಿಗಳ ಅಂಗರಚನಾಶಾಸ್ತ್ರ
ಕಟ್ಟಿಗೆಯ ಆಟಿಕೆಗಳು ಲೋಹದ ಹಕ್ಕಿಯಾದ ಅಧ್ಯಾಯ
ಗಗನಯಾನದ ದೈತ್ಯ ಹೆಜ್ಜೆಗಳು


 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...