ಬಿಜಾಪುರ: ಮಧ್ಯಕಾಲೀನ ರಾಜಧಾನಿ ನಗರ

Date: 25-02-2021

Location: ಬೆಂಗಳೂರು


ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ (ICHR) ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿರುವ ಡಾ. ಶಿವಶರಣ ಅರುಣಿ ಅವರು ಪ್ರಾಗೈತಿಹಾಸಿಕ ಇತಿಹಾಸ ಮತ್ತು ಕಲಾ ಇತಿಹಾಸದಲ್ಲಿ ಆಸಕ್ತರು. ಕರ್ನಾಟಕದಲ್ಲಿ ನಗರೀಕರಣ ಪ್ರಕ್ರಿಯೆಯ ಸ್ವರೂಪ ಹಾಗೂ ನಗರಗಳು ರೂಪುಗೊಂಡ ಬಗೆಯನ್ನು ವಿವರಿಸುವ ಈ ಸರಣಿಯ ಬರೆಹದಲ್ಲಿ ಬಿಜಾಪುರ: ಮಧ್ಯಕಾಲೀನ ರಾಜಧಾನಿ ನಗರ ಕುರಿತು ಭಾಗ-1 ರಲ್ಲಿ ಚರ್ಚಿಸಿದ ಪಠ್ಯವಿದು.

ಮಧ್ಯಕಾಲೀನ ಕರ್ನಾಟಕದ ಇತಿಹಾಸ ಹಲವಾರು ವಿಶೇಷತೆಗಳನ್ನು ಹೊಂದಿದ್ದು ಅದರಲ್ಲಿ ಮುಖ್ಯವಾಗಿ ನಗರೀಕರಣ ಪ್ರಕ್ರಿಯೆ ಒಂದು ಮಹತ್ವದ ಅಂಶ. ಬಾದಾಮಿ ಚಾಲುಕ್ಯರ ನಂತರ ನಗರಗಳ ಬೆಳವಣಿಗೆಗಳು ಕುಂಠಿತಗೊಂಡು ನಂತರ 13ನೇ ಶತಮಾನದ ಉತ್ತರಾರ್ಧದಿಂದ ನಗರೀಕರಣ ಪ್ರಕ್ರಿಯೆ ಭಿನ್ನ ಸ್ವರೂಪದೊಂದಿಗೆ ಉಗಮಗೊಂಡಿತು ಎಂದು ಇತಿಹಾಸದ ವಿವಿಧ ಆಧಾರಗಳಿಂದ ಗುರುತಿಸಬಹುದಾಗಿದೆ. ಮುಖ್ಯವಾಗಿ ದೇವಗಿರಿಯ ಯಾದವರು ಮತ್ತು ವಾರಂಗಲ್ಲಿನ ಕಾಕತೀಯರ ಆಳ್ವಿಕೆಯ ಕೊನೆಯ ಹಂತದಲ್ಲಿ ‘ರಕ್ಷಣೆಯುಕ್ತ ಪಟ್ಟಣಗಳು’ ಬೆಳೆಯಲಾರಂಭಿಸಿದ್ದನ್ನು ಕಾಣಬಹುದು. ಅದರಲ್ಲಿಯೂ ಮುಖ್ಯವಾಗಿ ‘ಸೇನಾ-ಮುಂಚುಣ ಯುಕ್ತ ಆಡಳಿತ’ (ಮಿಲಿಟರಿ-ಸ್ಟೇಟ್) ವ್ಯಾಪಕವಾಗಿ ಅಧಿಕಾರಕ್ಕೆ ಬಂದವು. ಇದರಿಂದಾಗಿ ಆಯಕಟ್ಟಿನ ಸ್ಥಳಗಳ ಆಯ್ಕೆ ಮಾಡುವ ಪ್ರಕ್ರಿಯೆ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಗಳನ್ನು ನಿರ್ಮಿಸಿ ಸೇನೆಯನ್ನು ನಿಯೋಜಿಸಿ ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವ ಕ್ರಮವನ್ನು 13ನೇ ಶತಮಾನದ ಅಂತ್ಯದ ದಶಕಗಳಲ್ಲಿ ಆರಂಭಗೊಂಡು ನಂತರ 14ನೇ ಶತಮಾನದಲ್ಲಿ ಕೋಟೆಯುಕ್ತ ಪಟ್ಟಣಗಳಿಗೆ ನಾಂದಿ ಹಾಡಿತು. ಇದರೊಂದಿಗೆ ಮಧ್ಯಕಾಲೀನ ನಗರೀಕರಣದಲ್ಲಿ ಕೋಟೆ ನಿರ್ಮಾಣ ಒಂದು ಪ್ರಮುಖ ಲಕ್ಷಣವಾಗಿ ಹಾಗೂ ಅದನ್ನು ನಿರ್ವಹಿಸುವ ಸೇನಾ ವರ್ಗಗಳ ಉಗಮಕ್ಕೆ ಕಾರಣವಾಯಿತು. ಆರಂಭಿಕವಾಗಿ ಕೇವಲ ರಕ್ಷಣೆಯ ಭಾಗವಾಗಿದ್ದ ಕೋಟೆಗಳು ನಂತರ ರಾಜ್ಯದ ಆಂತರಿಕ ಶಕ್ತಿಯ ಸಂಕೇತದ ರೂಪದಲ್ಲಿ ಪರಿಗಣಿಸಲಾಯಿತು. ಅಲ್ಲದೆ, ಹೊಸದಾಗಿ ಸ್ಥಾಪಿತಗೊಂಡ ರಾಜ್ಯಗಳ ರಾಜಧಾನಿ ನಗರಗಳು ಭದ್ರವಾದ ಕೋಟೆಯಿಂದ ಸುತ್ತುವರೆದು ಅಲ್ಲಿ ವಾಸಿಸುವ ಅರಸರಿಗೆ, ರಾಜ ಪರಿವಾರದವರಿಗೆ, ಆಡಳಿತಗಾರಿಗೆ, ವರ್ಣಿಕರಿಗೆ, ಸೇವಾನಿರತ ಅಧಿಕಾರಿ ವರ್ಗದವರಿಗೆ ಮತ್ತು ಕಲಾವಿದರು, ಕುಶಲಕರ್ಮಿಗಳಿಗೆ ರಕ್ಷಣೆಯನ್ನು ಒದಗಿಸುವುದಾಗಿತ್ತು.

ರಾಜಧಾನಿ ನಗರಗಳು ಆ ರಾಜ್ಯದ ಉಳಿದ ನಗರಗಳಿಗಿಂತ ಭಿನ್ನವಾಗಿ ರಚನೆಯಾಗಿರುತ್ತಿದ್ದವು. ಅನೇಕ ಸಂದರ್ಭದಲ್ಲಿ ಆ ರಾಜ್ಯದ ಆಳುವ ವರ್ಗದವರು ತಮ್ಮ ಸಮಾಜಕ್ಕೆ ತಾವು ನಂಬುವ ಸಂಪ್ರದಾಯಗಳನ್ನು ನಗರ ರಚನೆಯ ಮೂಲಕ ಸೂಚಿಸುವ ಸಾಧನವಾಗಿ ಬಳಸುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಆದಿಲಶಾಹಿ ಸುಲ್ತಾನರು ನಿರ್ಮಿಸಿದ ರಾಜಧಾನಿ ಪಟ್ಟಣ ಬಿಜಾಪುರ. ಇದು ದಖ್ಖನ್ ಪ್ರಸ್ಥಭೂಮಿಯ ಪಶ್ಚಿಮದ ಅಂಚಿನಲ್ಲಿದೆ. ಇದರ ಇತಿಹಾಸ ಪ್ರಾಚೀನವಾದರೂ ಮಧ್ಯಕಾಲೀನ ಸಂದರ್ಭದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿತ್ತು. ರಾಷ್ಟ್ರಕೂಟರ ನಂತರ ಆಳಿದ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಬಿಜಾಪುರ ಪ್ರದೇಶ ಪ್ರಾಮುಖ್ಯತೆಗೆ ಬಂದಿತು, ಅಲ್ಲದೆ, ಇದೊಂದು ಮುಖ್ಯ ಪಟ್ಟಣವಾಗಿತ್ತು. ಮುಖ್ಯವಾಗಿ ಬಹಮನಿ ರಾಜ್ಯದ ನಂತರ ಆಳ್ವಿಕೆಗೆ ಬಂದ ಆದಿಲ ಶಾಹಿ ಸುಲ್ತಾನರು ಬಿಜಾಪುರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡ ನಂತರ ಬಿಜಾಪುರ ನಗರೀಕರಣದ ಸ್ವರೂಪವನ್ನು ಬದಲಾಯಿಸಿತು. ಭದ್ರವಾದ ಕೋಟೆಯುಕ್ತ ನಗರವಾಗಿ, ವಾಣಿಜ್ಯ ಕೇಂದ್ರವಾಗಿ, ಕಲೆ, ಸಂಗೀತ ಕ್ಷೇತ್ರವಾಗಿ, ಸೂಫಿ ಸಂತರ ನೆಲೆಯಾಗಿ ಮತ್ತು ಪರ್ಶಿಯನ್ ಸಂಸ್ಕೃತಿಯ ನೆಲೆಬೀಡಾಗಿ ಬಿಜಾಪುರ ಬೆಳೆಯಿತು.

ಮಧ್ಯಕಾಲೀನ ಸಂದರ್ಭದಲ್ಲಿ ಭಾರತದ ಉಳಿದ ನಗರಗಳಿಗಿಂತ ಹೆಚ್ಚು ಬಿಜಾಪುರ ನಗರವು ಐರೋಪ್ಯ ದೇಶಗಳಲ್ಲಿ ಚಿರಪರಿಚಿತ ನಗರವಾಗಿತ್ತು. ಡಚ್ಛರು, ಪೋರ್ಚಗೀಸರು, ಫ್ರೆಂಚ್ ರ ಪ್ರವಾಸಿಗರು ಬಿಜಾಪುರವನ್ನು ಸಂದರ್ಶಿಸಿದ್ದರು. ಡಚ್ ಪ್ರವಾಸಿಯೊಬ್ಬರು ಕ್ರಿ.ಶ. 1660ರಲ್ಲಿ ಸಂದರ್ಶಿಸಿ ಬಿಜಾಪುರ ನಗರದ ವರ್ಣಚಿತ್ರಗಳನ್ನು ತಯಾರಿಸಿದ್ದು, ಅವು ಈಗ ಹಾಲೆಂಡಿನ ಸರ್ಕಾರಿ ದಾಖಲೆಗಳ ಸಂಗ್ರಹದಲ್ಲಿವೆ.

ಚಿತ್ರ-1 : 17ನೇ ಶತಮಾನದ ಐರೋಪ್ಯ ಪ್ರವಾಸಿಗನ ಕುಂಚದಲ್ಲಿ ಬಿಜಾಪುರ ನಗರದ ನೋಟ ಹಂಪೆಯ ವಿಜಯನಗರ ಸಾಮ್ರಾಜ್ಯದ ಸಮಕಾಲೀನವಾಗಿದ್ದ ಬಿಜಾಪುರದ ಆದಿಲ ಶಾಹಿ ಸುಲ್ತಾನರು ವಿಜಯನಗರದೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದರು. ಆದರೆ ಕೃಷ್ಣದೇವರಾಯನ ಕಾಲದಲ್ಲಿ ರಾಯಚೂರು ಕಾಳಗದ ನಂತರ ಬಿಜಾಪುರದ ಮೇಲೆ ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಆದಿಲಶಾಹಿ ಸುಲ್ತಾನರು ಬಿಜಾಪುರವನ್ನು ತಮ್ಮ ರಾಜಧಾನಿ ನಗರವನ್ನಾಗಿ ಮಾಡಿಕೊಂಡು ವ್ಯವಸ್ಥಿತ ನಗರವನ್ನಾಗಿ ರೂಪಿಸಲು ತೊಡಗಿದ್ದನ್ನು ಈ ನಗರದ ರಚನೆಯ ಆಧಾರದಿಂದ ಗುರುತಿಸಬಹುದು. ಪ್ರಾಚೀನ ಕಾಲದ ಆಯಕಟ್ಟಿನ ಪಟ್ಟಣವಾಗಿದ್ದ ಬಿಜಾಪುರವು ಬಹಮನಿ ಸುಲ್ತಾನರ ಅಂತ್ಯದವರೆಗೂ ತನ್ನ ಸೀಮಿತ ವ್ಯಾಪ್ತಿಯನ್ನು ಹೊಂದಿತ್ತು. ಆದಿಲಶಾಹಿಗಳ ಅಧೀನಕ್ಕೆ ಬಂದ ನಂತರ ಈ ನಗರವು ತನ್ನ ಬದಲಾವಣೆಯತ್ತ ಹೆಜ್ಜೆ ಹಾಕಿತು. ಆದರೆ ರಾಜ್ಯ ಸ್ಥಾಪನೆಯ ನಂತರ ಸುಮಾರು ಮುಕ್ಕಾಲು ಶತಮಾನ ಕಾಲದ ರಾಜಧಾನಿ ನಗರ ಸೀಮಿತ ವ್ಯಾಪ್ತಿಗೆ ಒಳಪಟ್ಟಿತ್ತು. ವಿಜಯನಗರದ ವಿರುದ್ಧ ನಡೆಸಿದ ನಿರ್ಣಾಯಕ ಯುದ್ದ ಮುಖ್ಯವಾಗಿ ಕ್ರಿ.ಶ.1565ರ ತಾಳಿಕೋಟೆ ಯುದ್ಧದ ನಂತರ ಬಿಜಾಪುರ ಆದಿಲಶಾಹಿ ರಾಜ್ಯವು ಹೆಚ್ಚಿನ ಸಂಪನ್ಮೂಲಗಳನ್ನು ಪಡೆಯಿತು. ಇದರೊಂದಿಗೆ ಆದಿಲಶಾಹಿ ಸುಲ್ತಾನರು ತಮ್ಮ ರಾಜಧಾನಿ ನಗರವನ್ನು ಒಂದು ಮಾದರಿ ನಗರವನ್ನಾಗಿ ರಚಿಸಲು ಪ್ರಾರಂಭಿಸಿದರು. ಒಟ್ಟಾರೆ ಬಿಜಾಪುರ ನಗರದ ಬೆಳವಣಿಗೆಯನ್ನು ಮೂರು ಹಂತಗಳಾಗಿ ಗುರುತಿಸಬಹುದಾಗಿದೆ.

ಮೊದಲ ಹಂತ: [ಪ್ರಾಚೀನ ಕಾಲದಿಂದ ಕ್ರಿ.ಶ. 1478ರವರೆಗೆ]. ಬಿಜಾಪುರದ ಈಗೀನ ಅರಕಿಲ್ಲಾ ಎನ್ನುವ ಪ್ರದೇಶ ಅಥವಾ ಜಿಲ್ಲಾಧಿಕಾರಿಗಳ ಕಛೇರಿ ಸಮೂಹದ ಪ್ರದೇಶವು ಪ್ರಾಚೀನ ಕಾಲದ ಶಾಸನಗಳಲ್ಲಿ ಉಲ್ಲೇಖವಾದ ವಿಜಯಪುರ ಪಟ್ಟಣವಾಗಿತ್ತು. ಈ ಪ್ರದೇಶದಲ್ಲಿ ಕಲ್ಯಾಣ ಚಾಲುಕ್ಯರ ಹಾಗೂ ಯಾದವರ ಹನ್ನೊಂದು ಕನ್ನಡ ಶಾಸನಗಳು ಒಂದು ಮರಾಠಿ ಶಾಸನಗಳು ದೊರೆಕಿವೆ. ಹೆಚ್ಚಿನ ಸಂಖ್ಯೆ ಪ್ರಾಚೀನ ಶಾಸನಗಳು ಇಲ್ಲಿಯ ಅರಕಿಲ್ಲಾದ ದಕ್ಷಿಣದ ತುದಿಯಲ್ಲಿರು ಹಳೆಯ ದ್ವಾರದ ಜಗುಲಿಯ ಕಂಬಗಳ ಮೇಲೆ ಇವೆ. ಕ್ರಿ.ಶ. 1033ರ ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಯಸಿಂಹ ಜಗದೇಕಮಲ್ಲನ ಆಳ್ವಿಕೆಯಿಂದ ಯಾದವ ಅರಸ ರಾಮಚಂದ್ರ ದೇವನ ಕ್ರಿ.ಶ. 1304ರ ಅವಧಿಯವರೆಗಿನ ದೊರೆತಿವೆ. ಕೆಲವು ಶಾಸನಗಳಲ್ಲಿ ತರ್ದವಾಡಿ ನಾಡು ಎಂದು ಉಲ್ಲೇಖವಾಗಿದೆ. ಪ್ರಾಚೀನ ಆಡಳಿತ ವಿಭಾಗವಾಗಿದ್ದ ತರ್ದವಾಡಿ ನಾಡು ವಿಶಾಲವಾದ ಪ್ರದೇಶವನ್ನು ಒಳಗೊಂಡಿತ್ತು. ಬಿಜಾಪುರ ಈ ತರ್ದವಾಡಿ ನಾಡಿನ ಒಂದು ಭಾಗವಾಗಿತ್ತು. ಅರಕಿಲ್ಲಾ ದ್ವಾರದ ಕಂಬಗಳ ಮೇಲಿನ ಕನ್ನಡ ಶಾಸನಗಳು ಪುರಾತನ ವಿಜಯಪುರದಲ್ಲಿದ್ದ ಜಲ(ಳ)ಮಂಟಪದ ನರಸಿಂಹ ದೇವರ ಬಗ್ಗೆ ಉಲ್ಲೇಖಿಸುತ್ತವೆ. ಅಲ್ಲದೇ ಈ ದೇಗುಲದ ಜೀರ್ಣೋದ್ಧಾರ ಮಾಡಿದ ಬಗ್ಗೆಯು ಪ್ರಸ್ತಾಪವಿದೆ. ಜೊತೆಗೆ ವಿಜಯಪುರವನ್ನು ಪ್ರಾಚೀನ ಶಾಸನಗಳಲ್ಲಿ ‘ರಾಯ-ರಾಜಧಾನಿ’ ಎಂದು ಕೂಡ ಕರೆದಿರುವುದು ಇದರ ಮಹತ್ವತೆಯನ್ನು ಬಿಂಬಿಸುತ್ತದೆ. ಈ ಪುರಾತನ ಪಟ್ಟಣವು ಸನಿಹದಲ್ಲಿ ಹರಿಯುವ ದೋಣಿ ನದಿಯ ಕಣಿವೆ ಭಾಗವಾಗಿತ್ತು. ಅಲ್ಲದೆ ಈ ಕಣಿವೆಯಲ್ಲಿದ್ದ ಎತ್ತರದ ದಿನ್ನೆಯಂತಿದ್ದ ಪ್ರದೇಶದಲ್ಲಿ ಪ್ರಾಯಶಃ ಮಣ್ಣಿನಿಂದ ನಿರ್ಮಿಸಿದ ಚಿಕ್ಕ ಕೋಟೆಯೊಂದಿಗೆ ಹಳೆಯ ವಿಜಯಪುರ ಹರಡಿಕೊಂಡಿತ್ತು ಎಂದು ಗುರುತಿಸಬಹುದಾಗಿದೆ.

ಈ ಪುರಾತನ ಪಟ್ಟಣವನ್ನೇ ಯಾದವ ಅರಸರ ನಂತರ ದೆಹಲಿ ಸುಲ್ತಾನರು ತಮ್ಮ ಆದೀನಕ್ಕೆ ತೆಗೆದುಕೊಂಡು ಚಿಕ್ಕದಾದ ಮಣ್ಣಿನ ಕೋಟೆಯಲ್ಲಿ ಮಸೀದಿಗಳನ್ನು ಹಾಗೂ ದಕ್ಷಿಣದ ಅಂಚಿನಲ್ಲಿ ಕಲ್ಲಿನ ದ್ವಾರವೊಂದನ್ನು ನಿರ್ಮಿಸಿದರು. ಇದರೊಂದಿಗೆ ಪ್ರಾಚೀನ ವಿಜಯಪುರ ಪಟ್ಟಣವು ಮಧ್ಯಕಾಲೀನ ಕೋಟೆಯುಕ್ತ ನಗರೀಕರಣಕ್ಕೆ ಸಂಪ್ರದಾಯಕ್ಕೆ ಸಾಕ್ಷಿಯಾಯಿತು. ಅಲ್ಲದೇ ಈ ಹಂತದಲ್ಲಿ ಮಹ್ಮದೀಯ ಸಮುದಾಯದವರು ಇಲ್ಲಿ ನೆಲೆಗೊಳ್ಳುವ ಪ್ರಕ್ರಿಯೆ ಪ್ರಾರಂಭವಾಯಿತು.

ಎರಡನೇಯ ಹಂತ : [ಬಹಮನಿ ರಾಜ್ಯ ಸ್ಥಾಪನೆಯಿಂದ [ಕ್ರಿ.ಶ.1347] 1565ರ ತಾಳಿಕೋಟೆ ಕದನದವರೆಗೆ]: ಬಹಮನಿ ಸುಲ್ತಾನ ರಾಜ್ಯ ಸ್ಥಾಪನೆಯಾಗುತ್ತಿದ್ದಂತೆ ಬಿಜಾಪುರ ಪರಿಸರದ ಮಹತ್ವತೆ ಹೆಚ್ಚಾಯಿತು. ಕೊಂಕಣಿ ಪ್ರದೇಶದಲ್ಲಿ ಸಮುದ್ರಯಾನ ವ್ಯಾಪಾರ ಸಂಪರ್ಕಗಳು ವೃದ್ಧಿಸುತ್ತಿದ್ದಂತೆ ಬೆಳಗಾವಿ ಮೂಲಕ ದಖ್ಖನ್ ಪ್ರಸ್ಥಭೂಭಾಗಕ್ಕೆ ಸಂಪರ್ಕಿಸುವ

ವಾಣಿಜ್ಯ ಮಾರ್ಗಗಳು ಬಿಜಾಪುರದ ಮೂಲಕ ಸಂಚರಿಸುತ್ತಿದ್ದವು. ಜೊತೆಗೆ ಆಯಕಟ್ಟಿನ ಸ್ಥಳವಾಗಿದ್ದರಿಂದ ಸುತ್ತಲಿನ ಪ್ರದೇಶಗಳ ಮೇಲೆ ಆಡಳಿತದ ಹಿಡಿತವನ್ನು ಸಾಧಿಸಲು ಬಿಜಾಪುರವನ್ನು ಒಂದು ಮುಖ್ಯ ಪ್ರಾಂತ್ಯವನ್ನಾಗಿ ವಿಭಾಗಿಸಿ ಅದರ ಆಡಳಿತ ಕೇಂದ್ರವಾನ್ನಾಗಿ ಬಿಜಾಪುರವನ್ನು ಆಯ್ಕೆ ಮಾಡಲಾಯಿತು. ಮುತ್ಸದ್ಧಿ ಸೇನಾಪತಿಯಾಗಿದ್ದ ಯುಸೂಫ್ ಖಾನ್ ಎಂಬವನನ್ನು ಇದರ ಪ್ರಾಂತ್ಯಾಧಿಕಾರಿಯನ್ನಾಗಿ ನೇಮಿಸುವುದರ ಮೂಲಕ ಬಿಜಾಪುರ ದಖ್ಖನ್ನಿನ ರಾಜಧಾನಿ ನಗರವಾಗಿ ಬೆಳೆಯಲು ಪೂರಕ ತಯಾರಿಗೆ ಕಾರಣವಾಯಿತು. ಬಹಮನಿ ರಾಜ್ಯದ್ನ ಆಡಳಿತದ ಹಿಡಿತ ಕ್ಷೀಣ ಸುತ್ತಿದ್ದಂತೆ ಬಿಜಾಪುರ ಪ್ರಾಂತ್ಯದ ಮುಖ್ಯಸ್ಥನಾಗಿದ್ದ ಯುಸೂಫ್ ಆದಿಲಖಾನ್ ಬಿಜಾಪುರದಲ್ಲಿ ತನ್ನ ಸ್ವತಂತ್ರ ರಾಜ್ಯದ ಸ್ಥಾಪನೆಯನ್ನು ಘೋಷಿಸಿಕೊಂಡನು. ಇದರೊಂದಿಗೆ ಬಿಜಾಪುರ ಒಂದು ರಾಜಧಾನಿ ನಗರವಾಗಿ ಹೊರಹೊಮ್ಮಿತು. ಇದರೊಂದಿಗೆ ಪಟ್ಟಣವಾಗಿದ್ದ ಬಿಜಾಪುರದ ನಗರ ರಚನೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿತು. ಹೊಸದಾಗಿ ಸ್ಥಾಪಿತವಾಗಿದ್ದ ರಾಜಧಾನಿ ನಗರದಲ್ಲಿ ಸುಲ್ತಾನರ ಆಡಳಿತಕ್ಕಾಗಿ ಮತ್ತು ಅವರ ವಾಸಕ್ಕಾಗಿ ರಕ್ಷಣೆಯನ್ನು ಒದಗಿಸುದಕ್ಕಾಗಿ ಅರಕಿಲ್ಲಾವನ್ನು ನಗರ ನಿವಾಸಿಗಳಿಂದ ಪ್ರತ್ಯೇಕಿಸಿದರು. ಅರಕಿಲ್ಲಾದ ಸುತ್ತಲೂ ವೃತ್ತಾಕಾರದ ಕೋಟೆಯನ್ನು ನಿರ್ಮಿಸಿ ಅದರ ಒಳಾಂಗಣದಲ್ಲಿ ಸುಲ್ತಾನರ ವಾಸದ ಅರಮನೆಗಳು, ಉದ್ಯಾನಗಳು, ಮಸೀದಿಗಳು ಮತ್ತು ಆಡಳಿತಕ್ಕಾಗಿ ಒಡ್ಡೊಲಗಗಳು ಇತ್ಯಾದಿಗಳು ನಿರ್ಮಾಣಗೊಂಡವು.

ಅಧಿಕಾರಿಗಳು ಮತ್ತು ಸಮಾಜದ ಉನ್ನತ ವರ್ಗದವರು ನೆಲೆಸಲು ಅರಕಿಲ್ಲಾ ಆವರಣಕ್ಕೆ ಹೊಂದಿಕೊಂಡಂತೆ ಹೊರಭಾಗದಲ್ಲಿ ನಗರ ನಿರ್ಮಾಣ ಮಾಡಲಾಯಿತು. ನಗರದಲ್ಲಿ ಸಾರ್ವಜನಿಕರಿಗಾಗಿ ಜುಮ್ಮಾ ಮಸೀದಿ, ವಿಶಾಲ ರಸ್ತೆಗಳು, ಉದ್ಯಾನಗಳು ಮತ್ತು ನೀರಿನ ಬಾವಿಗಳು ನಿರ್ಮಾಣವಾದವು. ನಗರದ ರಕ್ಷಣೆಗೆ ಕೋಟೆಯಂತಹ ವ್ಯವಸ್ಥೆ ಇರಲಿಲ್ಲ. ಕೇವಲ ಸುಲ್ತಾನರ ರಕ್ಷಣೆಗಾಗಿ ಅರಕಿಲ್ಲಾ ಆವರಣವನ್ನು ಮಾತ್ರ ಕೋಟೆಯಿಂದ ರಕ್ಷಣೆ ಒದಗಿಸಲಾಗಿತ್ತು. ಈ ಹಂತದ ಬಿಜಾಪುರ ನಗರವು ಬಹುತೇಕವಾಗಿ ಬಹಮನಿ ಸುಲ್ತಾನರ ಮೊದಲ ರಾಜಧಾನಿಯಾಗಿದ್ದ ಕಲಬುರ್ಗಿ ನಗರದ ರಚನೆಯ ಮಾದರಿಯಲ್ಲಿತ್ತು. ಪ್ರತ್ಯೇಕವಾದ ಕೋಟೆ ಮತ್ತು ನಗರಗಳಿಂದ ಕೂಡಿತ್ತು.

ಮೂರನೇಯ ಹಂತ : [ತಾಳಿಕೋಟಿ ಯುದ್ಧದಿಂದ ಮೊಗಲರ ಆಕ್ರಮಣದವರೆಗೆ [1565 ರಿಂದ 1688]: ನಿರ್ಣಾಯಕ ಯುದ್ಧವೆಂದು ಗುರುತಿಸುವ 1565ರ ತಾಳಿಕೋಟೆ ಕದನವು ಬಿಜಾಪುರ ನಗರ ಬೆಳವಣ ಗೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ಬಿಜಾಪುರದ ಆದಿಲಶಾಹಿ ಸುಲ್ತಾನರ ನೇತೃತ್ವದಲ್ಲಿ ನಡೆದ ತಾಳಿಕೋಟೆ ಕದನದ ನಂತರ ಬಿಜಾಪುರ ಮುಂಚೂಣ ಗೆ ಬಂದಿತು. ಯುದ್ಧದಿಂದ ದೊರೆತ ಅಪಾರ ಸಂಪತ್ತು ಆದಿಲಶಾಹಿ ಸುಲ್ತಾನರನ್ನು ಬಲಶಾಲಿಗಳನ್ನಾಗಿ ಮಾಡಿದ್ದಲ್ಲದೆ, ಬಿಜಾಪುರ ನಗರವನ್ನು ವಿಸ್ತರಿಸಿ ದಖ್ಖನ್ ಪ್ರಸ್ಥಭೂಮಿಯಲ್ಲಿಯೇ ಒಂದು ವಿಶಿಷ್ಟ ಹಾಗೂ ವ್ಯವಸ್ಥಿತ ನಗರವಾಗಿ ರೂಪಗೊಂಡಿತು. ಅಲ್ಲಿಯವರೆಗೂ ಕೇವಲ ಸುಲ್ತಾನರ ನೆಲೆಸುವ ಅರಕಿಲ್ಲಾ ಮಾತ್ರ ಕೋಟೆಯಿಂದ ಭದ್ರಗೊಳಿಸಲಾಗಿತ್ತು. ತಾಲಿಕೋಟೆಯ ಯುದ್ಧದ ನಂತರ ಅರಕಿಲ್ಲಾವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಸುಮಾರು 6 ಮೈಲು ವಿಸ್ತಿರ್ಣದ ವೃತ್ತಾಕಾರದ ನಗರವನ್ನು ನಿರ್ಮಿಸಲಾಯಿತು. ವಿವಿಧ ಬಜಾರಗಳು, ಕುಡಿಯುವ ನೀರಿನ ದೊಡ್ಡ ಗಾತ್ರದ ಕಲ್ಯಾಣಿಗಳು, ಉದ್ಯಾನವನಗಳು, ಅದ್ಭುತವೆನಿಸುವ ಸುಲ್ತಾನರಿಗಾಗಿ ಗೊಲ್-ಗುಂಬಜ್‍ದಂತಹ ಭವ್ಯವಾದ ಗೋರಿಗಳು, ನಗರದಲ್ಲಿ ನಿರ್ಮಾಣಗೊಂಡವು. ಜೊತೆಗೆ ಮುತ್ಸದ್ಧಿಯಾದ ಇಮ್ಮಡಿ ಇಬ್ರಾಹಿಮ್ ಸುಲ್ತಾನನು ರಾಜಧಾನಿ ನಗರಕ್ಕೆ ಹೊಂದಿಕೊಂಡಂತೆ ನವರಸಪುರ ಎಂಬ ಹೊಸದಾದ ಮತ್ತೊಂದು ನಗರ ಇದೇ ಹಂತದಲ್ಲಿ ನಿರ್ಮಾಣವಾಯಿತು. ನಗರಕ್ಕೆ ಹೊಂದಿಕೊಂಡಂತೆ ಬೆಟ್ಟದಲ್ಲಿ ನೆಲೆಸಿದ್ದ ಸೂಫಿ ಸಂತರಿಗಾಗಿ ಶಹಾಪುರ ಉಪನಗರವನ್ನು ರಚಿಸಲಾಯಿತು.

ಪ್ರಸ್ತುತ ಲೇಖನದಲ್ಲಿ ಈ ಮೂರು ಹಂತಗಳ ಬಿಜಾಪುರ ನಗರದ ರಚನೆ ಮತ್ತು ಅದರ ಮಹತ್ವತೆಯನ್ನು ವಿವರಿಸಲು ಪ್ರಯತ್ನಿಸಲಾಗುವುದು.

ಸ್ಥಳದ ಆಯ್ಕೆ: ಬಯಲುನಾಡಿನ ಪ್ರದೇಶವಾಗಿದ್ದರೂ ಬಿಜಾಪುರ ಪ್ರದೇಶವು ಕೃಷ್ಣಾ ನದಿ ಕಣಿವೆಯ ಪ್ರದೇಶದಲ್ಲಿದ್ದು, ಉಪನದಿ ದೋಣಿ ನದಿಯ ಹರಿವಿನಲ್ಲಿದೆ. ಪ್ರಾಚೀನ ಆಡಳಿತ ವಿಭಾಗವಾದ ತರ್ದವಾಡಿ ನಾಡು-ಸಾಸಿರ ನಾಡಿನ ವಿಜಯಪುರ ಎಂದು ಇದನ್ನು ಮುಖ್ಯ ವಾಣಿಜ್ಯ ಪಟ್ಟಣವಾಗಿ ಗುರುತಿಸಲ್ಪಟ್ಟಿತ್ತು. ಬಿಜಾಪುರವು ಬಯಲುನಾಡಿನ ಪ್ರದೇಶದಲ್ಲಿದ್ದರೂ ಇದು ಆಯಕಟ್ಟಿನ ಸ್ಥಳವಾಗಿತ್ತು ಎಂಬುದು ಗಮನಿಸಬಹುದು. ಹಳೆಯ ವಾಣಿಜ್ಯ ಮಾರ್ಗಗಳು ಈ ನಗರವನ್ನು ಆಯಕಟ್ಟಿನ ಸ್ಥಳವಾಗಿ ರೂಪಿಸುವಲ್ಲ್ಲಿ ಪ್ರಮುಖ ಪಾತ್ರವಹಿಸಿದ್ದವು. ಮಲೆನಾಡಿನ ಸರೆಗಿನ ಪರಿಸರದಲ್ಲಿ ಬರುವ ಬೆಳಗಾವಿ ಮತ್ತು ಧಾರವಾಡ ಪ್ರದೇಶಗಳ ಮೂಲಕ ಸಾಗಿ ಬರುವ ಪ್ರಾಚೀನ ವಾಣ ಜ್ಯ ಮಾರ್ಗಗಳು ಬಿಜಾಪುರ ಪ್ರದೇಶವನ್ನು ಸಂಪರ್ಕಿಸಿ ಸೋಲಾಪುರ ಪ್ರದೇಶಗಳಿಗೆ ಸೇರುತ್ತಿದ್ದವು. ಅದರಂತೆ ಕರಾವಳಿಯ ಕೊಂಕಣದಿಂದ ದಖ್ಖನ್ ಪ್ರಸ್ತಭೂಮಿಯ ಒಳನಾಡಿನ ಪ್ರದೇಶಗಳಿಗೆ ಸಂಪರ್ಕಿಸುವ ಮಾರ್ಗಗಳು ಬಿಜಾಪುರ ಪ್ರದೇಶವನ್ನು ಬಳಸಿಕೊಂಡು ಬೀದರ್, ಗೊಲ್ಕೊಂಡಾ ಮತ್ತು ಸೋಲಾಪುರ ಪ್ರದೇಶಗಳಿಗೆ ಸಂಚರಿಸುತ್ತಿದ್ದವು. ದಕ್ಷಿಣ ಭಾರತದ ಒಳನಾಡಿನ ಪ್ರದೇಶಗಳಿಗೂ ಬಿಜಾಪುರ ಪ್ರದೇಶ ಸಂಪರ್ಕ ಸೇತುವೆಯಾಗಿತ್ತು.

ಚಿತ್ರ-2 : ಪಶ್ಚಿಮ ಕರಾವಳಿಯಿಂದ ಬಿಜಾಪುರಕ್ಕೆ ಸಂಚರಿಸುವ ವಾಣಿಜ್ಯ ಮಾರ್ಗಗಳನ್ನು ಸೂಚಿಸುವ ಹಳೆಯ ನಕ್ಷೆ ನಗರದ ಸುತ್ತಲಿನ ಪ್ರದೇಶವು ತರಂಗಗಳಂತೆ ಗೋಚರಿಸುವ ದಿನ್ನೆಗಳಿಂದ ಕೂಡಿವೆ. ಉಪನದಿಯಾದ ದೋಣಿ ನದಿಯ ಉಗಮದ ಕಣಿವೆಯ ಪ್ರದೇಶ ಇದಾಗಿದೆ. ನಗರವು ಈಶಾನ್ಯದ ಮೂಲೆಯಿಂದ ನೈರುತ್ಯ ದಿಕ್ಕಿನೆಡೆಗೆ ಇಳಿಜಾರಾಗಿದೆ. ಅಮೀನ್ ದರ್ಗಾ ಇರುವ ಶಹಾಪುರ ಗುಡ್ಡ ಪ್ರದೇಶವು ಸುತ್ತಲಿನ ಸ್ಥಳಗಳಿಂತ ಎತ್ತರವಾಗಿದೆ. ಉಳಿದಂತೆ ನಗರವು ಸಮತ್ತಟ್ಟಾದ ಪ್ರದೇಶವಾಗಿದೆ. ಕಿರುಗಾತ್ರದ ದಿನ್ನೆಗಳಿರುವ ಸುತ್ತಲಿನ ಪ್ರದೇಶವು ಶಿಲೆಗಳಿಂದ ಕೂಡಿದ್ದು. ನಿರ್ಮಾಣಕ್ಕೆ ಭೂಗರ್ಭದ ಶಿಲೆಗಳನ್ನು ಸುಲಭವಾಗಿ ಕಣ ಗಳಂತೆ ಕೊರೆಯಬಹುದಾಗಿವೆ. ಆದ್ದರಿಂದ ಮಧ್ಯಕಾಲೀನ ಬೃಹತ್ ಸ್ಮಾರಕಗಳನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಶಿಲೆಗಳನ್ನು ಕುಣಿಗಳಾಗಿ ಕೊರೆದು ಬಳಸಲಾಗಿದೆ. ಜೊತೆಗೆ ಕೊರೆಯುವುದರಿಂದ ದೊರೆಯುವ ನೈಸರ್ಗಿಕ ನೀರಿನ ಸೆಲೆಗಳನ್ನು ನಿವಾಸಿಗರ ಕುಡಿಯುವ ನೀರಿನ ಬಾವಿಗಳನ್ನಾಗಿ ಮಾಡಿಕೊಂಡಿರುವುದನ್ನು ನಗರದಲ್ಲಿ ಕಾಣಬಹುದು.

ಮೊದಲ ಹಂತದ ಬಿಜಾಪುರ ಪಟ್ಟಣ [ಪ್ರಾಚೀನ ಕಾಲದಿಂದ ಕ್ರಿ.ಶ. 1478ರವರೆಗೆ]. ಬಿಜಾಪುರವನ್ನು ವಿಜಯಪುರ ಎಂದು ಪ್ರಾಚೀನ ಕನ್ನಡ ಶಿಲಾಶಾಸನದಲ್ಲಿ ಕರೆಯಲಾಗಿದೆ. ಬಿಜಾಪುರದ ಅರಕಿಲ್ಲಾದ ಪೂರ್ವದ ದ್ವಾರದ ಜಗಲಿಯ ಮೇಲಿನ ಕಂಬದ ಮೇಲಿರುವ ಕನ್ನಡ ಶಾಸನವಿದೆ. ಇದು ಕ್ರಿ.ಶ. 1033ರ ಕಾಲದ್ದು ಇದನ್ನು ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಯಸಿಂಹನ ಆಳ್ವಿಕೆಯದ್ದಾಗಿದೆ. ಚಾಲುಕ್ಯ ಅರಸ ಇಮ್ಮಡಿ ಜಯಸಿಂಹನ ಸೇನಾಪತಿ ಆನಂದಪಾಲನು ಇಲ್ಲಿಯ ವಿಜಯಪುರದಲ್ಲಿದ್ದ ಜಲಮಂಟಪ ನರಸಿಂಹ ದೇಗುಲಕ್ಕೆ ಮುನ್ನೂರು ಮತ್ತರ ಅಳತೆಯ ಭೂಮಿಯನ್ನು ದಾನವಾಗಿ ನೀಡಿದನೆಂದು ಈ ಶಾಸನ ವಿವರಿಸುತ್ತದೆ. ವಿಜಯಪುರವನ್ನು ‘ರಾಯ-ರಾಜಧಾನಿ’ ಎಂದು ಶಾಸನದಲ್ಲಿ ಕರೆಯಲಾಗಿದೆ. ದೊರೆತ ಅತಿ ಹಳೆಯ ದಾಖಲೆಯಾದ ಈ ಶಾಸನದಿಂದ ಬಿಜಾಪುರ ನಗರದ ಇತಿಹಾಸ ಗುರುತಿಸಬಹುದಾಗಿದೆ. ಇದು ನಗರ ಬೆಳವಣಿಗೆ ಮೊದಲ ಹಂತವೆಂದು ಗುರುತಿಸಬಹುದು. ಕನ್ನಡದ ಕವಿ ನಾಗಚಂದ್ರನ ಮಲ್ಲಿನಾಥ ಪುರಾಣದಲ್ಲಿ ಉಲ್ಲೇಖವಾಗುವ ವಿಜಯಪುರ ಸ್ಥಳವು ಕೂಡ ಈ ಬಿಜಾಪುರವನ್ನು ಉಲ್ಲೇಖಸುತ್ತದೆ ಎಂದು ವಿದ್ವಾಂಸರ ಅಭಿಪ್ರಾಯ. ಒಟ್ಟಿನಲ್ಲಿ ಪ್ರಾಚೀನ ಕಾಲದಲ್ಲಿ ಬಿಜಾಪುರ ಒಂದು ಪ್ರಾರಂಭಿಕ ಹಂತದ ಪಟ್ಟಣ ಹಾಗೂ ಆಡಳಿತ ಕೇಂದ್ರಸ್ಥಾನವಾಗಿತ್ತೆಂದು ಹೇಳಬಹುದು.

ದೆಹಲಿ ಸುಲ್ತಾನರ ಆಳ್ವಿಕೆಯಲ್ಲಿ ಬಿಜಾಪುರ : ಕಲ್ಯಾಣ ಚಾಲುಕ್ಯರ ನಂತರ ಯಾದವರ ಆಳ್ವಿಕೆಯಲ್ಲಿ ಬಿಜಾಪುರವು ತನ್ನ ಮಹತ್ವತೆಯನ್ನು ಉಳಿಸಿಕೊಂಡಿತು. ಜೊತೆಗೆ ಯಾದವರ ರಾಜ್ಯದ ಒಂದು ಮುಖ್ಯ ಸ್ಥಳವಾಗಿ ಗುರುತಿಸಿಕೊಂಡಂತೆ ತೋರುತ್ತದೆ. ಯಾದವರನ್ನು ಸೋಲಿಸಿ ರಾಜ್ಯ ವಿಸ್ತಾರ ಮಾಡಿದ ದೆಹಲಿ ಸುಲ್ತಾನರಾದ ಖಲ್ಜಿ ಸುಲ್ತಾನರು ದೇವಗಿರಿಯ ಜೊತೆಗೆ ಬಿಜಾಪುರವನ್ನು ಕೂಡ ತಮ್ಮ ಹತೋಟಿಗೆ ತೆಗೆದುಕೊಂಡರು. ಅಲ್ಲಾವುದ್ಧೀನ್ ಖಲ್ಜಿಯ ಸೇನಾಧೀಪತಿಯಾಗಿದ್ದ ಮಲ್ಲಿಕಾಫೂರ್ನ ಮಗನಾದ ಮಲೀಕ್ ಕರೀಮ್ ಅಲ್-ದೀನ್‍ನನ್ನು ಬಿಜಾಪುರದ ಆಡಳಿತ ವಿಭಾಗಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿದರು. ಕರೀಮುದ್ದೀನ್ ಮಸೀದಿ ಎಂಬ ಒಂದು ಹಳೆಯ ಮಸೀದಿಯು ಬಿಜಾಪುರದ ಅರಕಿಲ್ಲಾ ಆವರಣದಲ್ಲಿದೆ. ಇದು ಖಲ್ಜಿ ಸುಲ್ತಾನರ ಕಾಲದಲ್ಲಿ ಈ ಅಧಿಕಾರಿ ಕರೀಮ್ ಅಲ್-ದೀನ್ ನಿರ್ಮಿಸಿದ್ದು ಎಂದು ತಿಳಿದುಬರುತ್ತದೆ. ಈ ಮಸೀದಿಯು ಅರಕಿಲ್ಲಾ ಆವರಣದ ದಕ್ಷಿಣದ ಅಂಚಿನಲ್ಲಿ ನಿರ್ಮಿಸಲಾಗಿದ್ದು, ಅರಕಿಲ್ಲಾ ಪ್ರದೇಶವು ಬಿಜಾಪುರದ ಹಳೆಯ ಪ್ರದೇಶವೆಂದು ತಿಳಿದುಬರುತ್ತದೆ. ಪ್ರಾಯಶಃ ಅರಕಿಲ್ಲಾದ ಪರಿಸರದಲ್ಲಿ ಪ್ರಾಚೀನ ಶಾಸನದಲ್ಲಿ ಉಲ್ಲೇಖವಾದ ವಿಜಯಪುರ ಪಟ್ಟಣ ಇದ್ದಂತೆ ತೊರುತ್ತದೆ. ತದನಂತರ ಈ ಹಳೆಯ ಪಟ್ಟಣವನ್ನು ಸುಲ್ತಾನರ ಆಡಳಿತಗಾರ ಮಲೀಕ್ ಕರೀಮುದ್ದೀನ್ ಇದನ್ನು ಭದ್ರಗೊಳಿಸಿ ನೆಲೆಯೂರಿದ ಮಹ್ಮದೀಯರಿಗಾಗಿ ಒಂದು ಮಸೀದಿಯನ್ನು ರಚಿಸಿದನೆಂದು ಕಾಣುತ್ತದೆ. ಕರೀಮುದ್ದೀನ್ ನಿರ್ಮಿಸಿದ ಮಸೀದಿ ಬಹಳ ವಿಶೇಷವಾಗಿದೆ. ಮಹ್ಮದೀಯ ಸಂಪ್ರದಾಯದಂತೆ ಈ ಮಸೀದಿಯನ್ನು ನಿರ್ಮಿಸಿದ್ದರೂ ಇದನ್ನು ಕಟ್ಟಲು ಚಾಲುಕ್ಯರ ಕಾಲದ ಪ್ರಾಚೀನ ದೇಗುಲದ ಕಂಬಗಳು, ಬೋದಿಗೆಗಳು, ದ್ವಾರಬಂಧಗಳು ಇತ್ಯಾದಿಗಳನ್ನು ಬಳಸಿಕೊಂಡು ಇದರ ಅಂಕಣಗಳನ್ನು ಮತ್ತು ಪ್ರವೇಶದ್ವಾರಗಳನ್ನು ನಿರ್ಮಿಸಲಾಗಿದೆ.

ದೇವಗಿರಿ ಕೋಟೆಯಲ್ಲಿರುವಂತೆ ಬಿಜಾಪುರದ ಕೋಟೆಯಲ್ಲಿಯೂ ಹಳೆಯ ದೇಗುಲದ ಕಂಬಗಳನ್ನು ಬಳಸಿಕೊಂಡು ನಿರ್ಮಿಸಿದ ಮಸೀದಿ ಇದಾಗಿದೆ. ಈ ಮಸೀದಿಯ ಕಂಬದ ಮೆಲೆ ಮರಾಠಿ ಮತ್ತು ಪಾರ್ಷಿ ಭಾಷೆಗಳ ಶಿಲಾಶಾಸನವನ್ನು ಕೊರೆಯಲಾಗಿದೆ. ಈ ಶಾಸನವು ದೆಹಲಿ ಖಲ್ಜಿ ಸುಲ್ತಾನರ ಆಳ್ವಿಕೆಯ ಕಾಲದ್ದಾಗಿದ್ದು ಇದೊಂದು ದ್ವಿಭಾಷಾ ಶಾಸನವಾಗಿದೆ. ಮರಾಠಿ ಭಾಷೆಯ ಶಾಸನವು ಪಾರಶಿ ಶಾಸನಗಿಂತಲೂ ದೀರ್ಘವಾಗಿದೆ, ಅಲ್ಲದೇ ಇದರಲ್ಲಿ ದೇಸಿಯ ಮಾದರಿಯಲ್ಲಿ ಶಾಸನವನ್ನು ಬರೆಯಲಾಗಿದೆ. ಶಕವರ್ಷ 1242 [ಕ್ರಿ.ಶ. 1320] ರುದ್ರ ಸಂವತ್ಸರ ದೆಹಲಿಯ ಖಲ್ಜಿ ಸುಲ್ತಾನರ ಆಳ್ವಿಕೆಯಲ್ಲಿ ಸೇನಾಮುಖ್ಯಸ್ಥನಾಗಿದ್ದ ಮಲ್ಲಿಕ್ ಕಫೂರ್‍ನ ಮಗ ಮಲೀಕ್ ಕರೀಮುದ್ಧೀನ್ ಅಧಿಕಾರಿ ವಿಜಯಪುರದಲ್ಲಿ ಈ ಮಸೀದಿಯನ್ನು ಸಾಲೋಟಿಗೆ ಗ್ರಾಮದ ರೇವಯ್ಯನೆಂಬ ಸೂತ್ರಧಾರ [ಶಿಲ್ಪಿ] ನಿರ್ಮಿಸಿದನು ಎಂದು ತಿಳಿದುಬರುತ್ತದೆ. ಈ ಸೂತ್ರಧಾರ ರೇವಯ್ಯನಿಗೆ ಆಶ್ರಯದಾತ ಮಲೀಕ್ ಕರೀಮುದ್ಧೀನ್‍ನು ಬೀತೂರು ಗ್ರಾಮದ ಬಳಿಯ ಇಪ್ಪತ್ತಾಲ್ಕು ನಿತಾನ ಅಳತೆಯ ಭೂಮಿಯನ್ನು ಉಂಬಳಿಯಾಗಿ ನೀಡಿದ್ದಲ್ಲದೆ ಅದರಿಂದ ಬರುವ ಆದಾಯಕ್ಕೆ ಕರ ಮುಕ್ತತೆಯನ್ನು ಕೂಡ ನೀಡಿದನು ಎಂಬ ವಿಷಯವೂ ಈ ಶಾಸನ ಉಲ್ಲೇಖಿಸುತ್ತದೆ. ಇದೊಂದು ವಿಶೇಷವಾದ ಶಾಸನವಾಗಿದ್ದು ಸ್ಥಳೀಯ ವಾಸ್ತುಶಿಲ್ಪಿ ರೇವಯ್ಯನ ಬಗ್ಗೆ ಮಾಹಿತಿ ನೀಡುತ್ತದೆ. ಈ ಮೇಲೆ ಹೇಳಿದಂತೆ, ಪ್ರಾಚೀನ ಪಟ್ಟಣವಾದ ವಿಜಯಪುರದಲ್ಲಿ ಕ್ರಿ.ಶ. 14ನೇ ಶತಮಾನದ ಅವಧಿಯಲ್ಲಿ sಸ್ಥಳಿಯ ಕಲಾವಿದರನ್ನು ನೇಮಕ ಮಾಡಿಕೊಂಡು ಮಹ್ಮದೀಯ ಸಂಪ್ರದಾಯದಂತೆ ಮಸೀದಿಯನ್ನು ಬಿಜಾಪುರದಲ್ಲಿ ನಿರ್ಮಿಸಿರುವುದು ವಿಶೇಷ. ಇದರೊಂದಿಗೆ ಈ ಹಳೆಯ ಪಟ್ಟಣದಲ್ಲಿ ಮಹ್ಮದೀಯರ ನೆಲೆ ನಿಲ್ಲುವುದನ್ನು ಇದು ಸೂಚಿಸುತ್ತದೆ. ಅರಕಿಲ್ಲಾ ಆವರಣದ ಇನ್ನೊಂದು ತುದಿಯಲ್ಲಿ ಉತ್ತರದ ಅಂಚಿನಲ್ಲಿ ಮತೊಂದು ಹಳೆಯ ಮಸೀದಿ ಇದೆ. ಇದನ್ನು ಖ್ವಾಜಾ ಜಹಾನ್ ಮಸೀದಿಯೆಂದು ಕರೆಯುತ್ತಾರೆ. ಇದು ಕರೀಮುದ್ಧೀನ್ ಮಸೀದಿಯಂತೆ ಹಳೆಯ ದೇಗುಲದ ಕೆಲವು ಕಂಬಗಳು, ದ್ವಾರಬಂಧಗಳ ಅವಶೇಷಗಳನ್ನು ಬಳಸಿಕೊಂಡು ಕಟ್ಟಲಾಗಿದೆ. ಇದು 48 ಕಂಬಗಳಿಂದ ರಚಿಸಿದ 54 ಅಂಕಣದ ಮಸೀದಿಯಾಗಿದೆ. ಪ್ರಾರ್ಥನೆ ಮಾಡುವ ಮಿರಾಬ್ ಕೋಷ್ಟಕವು ಕಮಾನು ವಿನ್ಯಾಸದಿಂದ ರಚಿಸಲಾಗಿದೆ, ಉಳಿದಂತೆ ಅಂಕಣಗಳನ್ನು ಹಳೆಯ ದೇಗುಲದ ಕಂಬಗಳನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಕರೀಮುದ್ಧೀನ್ ಮಸೀದಿಯ ಶೈಲಿಯಲ್ಲಿ ಇದನ್ನು ನಿರ್ಮಿಸಿದ್ದರೂ ವಿಸ್ತಾರದಲ್ಲಿ ಚಿಕ್ಕದು ಹಾಗೂ ಇದಕ್ಕೆ ಗೋಡೆಯುಕ್ತ ಅಂಗಳವಿಲ್ಲ. ರಚನೆಯ ವಿನ್ಯಾಸ ಮತ್ತು ಆದ್ದರಿಂದ ಇದೊಂದು ಗಣ್ಯರ ಆಥವಾ ಉನ್ನತ ಅಧಿಕಾರಿಯ ಖಾಸಗಿ ಮಸೀದಿಯಾಗಿತ್ತು ತೊರುತ್ತದೆ. ಕರೀಮುದ್ದೀನ್ ಮಸೀದಿಯ ಮಾದರಿಯಲ್ಲಿ ಇದನ್ನು ನಿರ್ಮಿಸಿದ್ದರಿಂದ ಇದು ಕೂಡ ಹಳೆಯ ಮಸೀದಿಯೆಂದು ಗುರುತಿಸಲಾಗಿದೆ.

ಈ ಎರಡು ಮಸೀದಿಗಳು ಅರಾಕಿಲ್ಲಾ ಕೋಟೆಯ ಒಳಾಂಗಣದಲ್ಲಿದ್ದು ಇವು ಆದಿಲಶಾಹಿ ಸುಲ್ತಾನರು ಬಿಜಾಪುರವನ್ನು ತಮ್ಮ ರಾಜಧಾನಿ ನಗರವನ್ನಾಗಿ ಮಾಡುವ ಮೊದಲು ಬಿಜಾಪುರವು ಒಂದು ಮಹ್ಮದೀಯರ ಪಟ್ಟಣವಾಗಿ ರೂಪಗೊಳ್ಳುವುದನ್ನು ಗುರುತಿಸಬಹುದು. ಅದರಂತೆ ಸ್ಥಳೀಯ ಕುಶಲಕರ್ಮಿಗಳನ್ನು ಬಳಸಿಕೊಂಡು ಆಡಳಿತ ವ್ಯವಸ್ಥೆಯನ್ನು ರೂಪಿಸುವ ಪ್ರಕ್ರಿಯೆಯನ್ನು ಕೂಡ ಇವು ಬಿಂಬಿಸುತ್ತವೆ. ಒಟ್ಟಾರೆಯಾಗಿ ಆದಿಲಶಾಹಿ ಸುಲ್ತಾನರು ಬಿಜಾಪುರದಲ್ಲಿ ತಮ್ಮ ಅಸ್ತಿತ್ವ ಸ್ಥಾಪಿಸುವುದಕ್ಕೆ ಮುಂಚೆಯೇ ಬಿಜಾಪುರವು ಒಂದು ಬಹು ಮುಖ್ಯ ಆಯಕಟ್ಟಿನ ವಿಜಯಪುರವೆಂಬ ಹೆಸರಿನ ಆಡಳಿತ ಕೇಂದ್ರವಾಗಿತ್ತು ಅಲ್ಲದೇ ಗಣ್ಯಾತಿಗಣ್ಯರು ಮತ್ತು ಆಡಳಿತಗಾರರು ಇಲ್ಲಿ ನೆಲೆಸಿದ್ದರೆಂಬುದು ಸ್ಪಷ್ಟವಾಗುತ್ತದೆ. ಪ್ರಾಚೀನ ಕಾಲದ ವಿಜಯಪುರ ಪಟ್ಟಣವು ಇಂದಿನ ಅರಕಿಲ್ಲಾ ಮತ್ತು ಜುಮ್ಮಾ ಮಸೀದಿಯ ನಡುವಿನ ಪ್ರದೇಶದಲ್ಲಿ ಇದ್ದಿರಬಹುದಾದ ಸಾಧ್ಯತೆಯನ್ನು ವಿವಿಧ ಆಧಾರಗಳ ಮೇಲೆ ಊಹಿಸಬಹುದು.

ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ಬಿಜಾಪುರ ನಗರದ ರಚನೆ : ಕ್ರಿ,ಶ. 1437ರಲ್ಲಿ ಸ್ಥಾಪನೆಗೊಂಡ ಬಹಮನಿ ಸುಲ್ತಾನರ ರಾಜ್ಯವು ಪ್ರಾಚೀನ ಯಾದವರ ಮತ್ತು ತೊಘಲಕ್ ಸುಲ್ತಾನರ ರಾಜ್ಯದ ಪ್ರದೇಶಗಳನ್ನು ತನ್ನ ಆಡಳಿತಕ್ಕೆ ತೆಗೆದುಕೊಂಡಿತು. ಇದರಿಂದಾಗಿ ಬಿಜಾಪುರವು ಸೇರಿದಂತೆ ಬೆಳಗಾವಿ, ಕೊಂಕಣ ಪ್ರದೇಶಗಳು ಬಹಮನಿ ರಾಜ್ಯದ ಭಾಗಗಳಾದವು. ಆರಂಭಿಕವಾಗಿ ಬಹಮನಿ ಸುಲ್ತಾನರು ಬಿಜಾಪುರವನ್ನು ತಮ್ಮ ರಾಜ್ಯದ ಒಂದು ಮುಖ್ಯ ಸ್ಥಳವನ್ನಾಗಿ ಮಾಡಿಕೊಂಡಿದ್ದರು. ಆಡಳಿತದ ಕೇಂದ್ರವಾಗಿರಲಿಲ್ಲ. ಅದರ ಬದಲಾಗಿ ಬೆಳಗಾವಿ ಬಹಮನಿ ರಾಜ್ಯದ ಮುಖ್ಯ ಪಟ್ಟಣವಾಗಿತ್ತು. ಆದರೆ ಕ್ರಿ.ಶ. 1478ರಲ್ಲಿ ಬಹಮನಿ ರಾಜ್ಯವನ್ನು ಆಡಳಿತ ಕಾರಣಕ್ಕೆ ಮರುವಿಂಗಡನೆ ಮಾಡಿದ ನಂತರ ಬಿಜಾಪುರ ಪ್ರಾಂತ್ಯವನ್ನು ರಚಿಸಿ ಅದರ ಕೇಂದ್ರಸ್ಥಾನವಾಗಿ ಬಿಜಾಪುರ ಮಾಡಲಾಯಿತು. ಈ ಹೊಸ ಬಿಜಾಪುರ ಪ್ರಾಂತ್ಯದ ಆಡಳಿತಗಾರನಿಗೆ ವಕೀಲ್-ಉಸ್ ಸುಲ್ತಾನೆನತ್ ಎಂದು ಕರೆಯಲಾಗುತ್ತಿತ್ತು. ಮಹ್ಮದ ಗವಾನ್ ಈ ಹುದ್ದೆಯನ್ನು ಅಲಂಕರಿಸಿದ್ದನು. ಒಳ ಪಿತೂರಿಗಳಿಂದಾಗಿ ಗವಾನ್‍ನು ಗಲ್ಲುಶಿಕ್ಷೆ ಅನುಭವಿಸಬೇಕಾಯಿತು. ಗವಾನ್‍ನ ನಂತರ ಬಿಜಾಪುರ ಪ್ರಾಂತ್ಯದ ವಕೀಲ್ ಉಸ್-ಸುಲ್ತಾನತ್‍ನನ್ನಾಗಿ 1482ರಲ್ಲಿ ಯೂಸೂಫ್ ಆದಿಲಖಾನ್‍ನನ್ನು ನೇಮಿಸಲಾಯಿತು. ಇದರೊಂದಿಗೆ ಬಿಜಾಪುರ ಹೊಸ ಪರ್ವಕ್ಕೆ ಹೆಜ್ಜೆ ಹಾಕಿತು. ಹಲವು ಸೂಫಿ ಸಂತರು ಬಿಜಾಪುರದಲ್ಲಿ ಮತ್ತು ಹತ್ತಿರದಲ್ಲಿ ನೆಲೆಸಿದರು. ಸಮಾಜದ ಎಲ್ಲಾ ವರ್ಗದ ಮೇಲೆ ಈ ಸೂಫಿ ಸಂತರ ಪ್ರಭಾವ ಪ್ರಬಲವಾಗಿತ್ತು. ಸ್ವತಃ ಯೂಸೂಫ್ ಆದಿಲಖಾನ್ ಕೂಡ ಗೋಗಿಯ ಚಂದಾಹುಸೇನ್ ಸೂಫಿ ಸಂತನ ಅನುಯಾಯಿಯಾಗಿದ್ದನು. ಬಹಮನಿ ಸುಲ್ತಾನ ರಾಜ್ಯ ಅವನತಿ ಹಂತಕ್ಕೆ ಬರುತ್ತಿದ್ದಂತೆಯೆ ಯುಸೂಫ್ ಖಾನ್‍ನು ಸ್ವಾತಂತ್ಯವನ್ನು ಸಾರಿಕೊಂಡನು ಅಲ್ಲದೇ ಬಹಮನಿ ರಾಜ್ಯ ಆಡಳಿತವನ್ನು ತೆಗೆದು ಹಾಕಿ ಹೊಸದಾದ ಆದಿಲಶಾಹಿ ರಾಜ್ಯದ ಆಡಳಿತವನ್ನು ಕ್ರಿ.ಶ. 1489ರಲ್ಲಿ ಸ್ಥಾಪಿಸಿದನು. ಬಿಜಾಪುರವನ್ನು ತನ್ನ ಹೊಸ ರಾಜ್ಯದ ರಾಜಧಾನಿ ನಗರವನ್ನಾಗಿ ಮಾಡಿಕೊಂಡನು. ಕೊಂಕಣ, ಸಹ್ಯಾದ್ರಿ, ಅರೆ-ಮಲೆನಾಡು ಮತ್ತು ಬಯಲು ಸೀಮೆಯ ಪ್ರದೇಶಗಳಾದ ಗೋವಾ, ಕೊಂಕಣ, ಕೊಲ್ಹಾಪುರ, ಬೆಳಗಾವಿ, ಬಿಜಾಪುರ, ಬಾದಾಮಿ, ಧಾರವಾಡ, ಸಾತಾರ, ಮೀರಜ್, ಸೋಲಾಪುರ, ರಾಯಚೂರು, ಇತ್ಯಾದಿಗಳು ಬಿಜಾಪುರದ ಆದಿಲಶಾಹಿ ರಾಜ್ಯಕ್ಕೆ ಸೇರಿದವು.

ಚಿತ್ರ-3 : ಅರಕಿಲ್ಲಾ ಕೋಟೆಯ ನಕ್ಷೆ [ಕೃಪೆ: ಡಾ: ಎಂ.ಎ. ನಯೀಮ್]

ಈ ವಿಸ್ತಾರವಾದ ರಾಜ್ಯದ ರಾಜಧಾನಿ ನಗರವಾಗಿ ರೂಪಿತವಾದ ಬಿಜಾಪುರಕ್ಕೆ ಸಮಾಜದ ವಿವಿಧ ವರ್ಗದವರು ಬಂದು ನೆಲೆಸಲು ಪ್ರಾರಂಭವಾಯಿತು. ರಾಜಧಾನಿ ನಗರದ ರಕ್ಷಣೆಯು ಒಂದು ಸವಾಲು ಆಗಿ ಪರಿಣಮಿಸಿತು. ಅದಕ್ಕಾಗಿ ಈ ಹಿಂದೆ ಇದ್ದ ಅರಕಿಲ್ಲಾ ಆವರಣವನ್ನು ಬದಾಮಿಯಾಕಾರದ ಕೋಟೆಯಿಂದ ಭದ್ರಗೊಳಿಸಲಾಯಿತು. ಸುಮಾರು 19000 ಮೀಟರ್ ಸುತ್ತಳತೆಯ ಇಲ್ಲಿಯ ಅರಕಿಲ್ಲಾ ಕೋಟೆಯ ಆವರಣವು 550 ಮಿಟರ್ ಉದ್ದ ಹಾಗೂ 420 ಮಿಟರ್ ಅಗಲವಾಗಿದೆ. ಇದೊಂದು ನೆಲದುರ್ಗವಾಗಿದ್ದರಿಂದ ಹೆಚ್ಚಿನ ರಕ್ಷಣೆಗಾಗಿ ಕೋಟೆಯ ಸುತ್ತಲೂ ಕಂದಕವನ್ನು ನಿರ್ಮಿಸಲಾಯಿತು. ಇದರ ಈಶಾನ್ಯ ದಿಕ್ಕಿನಲ್ಲಿ ಹೆಚ್ಚಿನ ರಕ್ಷಣೆ ಒದಗಿಸುವದಕ್ಕಾಗಿ ಎರಡು ಕಂದಕಗಳು ಮತ್ತು ಎರಡು ರಕ್ಷಣಾಗೋಡೆಗಳನ್ನು ರಚಿಸಲಾಗಿದೆ. ಈ ವಿಸ್ತಾರದ ಕೋಟೆಯ ಪ್ರವೇಶಕ್ಕಾಗಿ ಕೇವಲ ಒಂದು ದ್ವಾರವನ್ನು ಅಳವಡಿಸಲಾಗಿದೆ.

ಈ ದ್ವಾರವು ವಾಯುವ್ಯ ಮೂಲೆಯಲ್ಲಿದೆ. ವೈರಿಗಳಿಗೆ ದ್ವಾರದಲ್ಲಿ ಸುಲಭವಾಗಿ ನುಗ್ಗಲು ಸಾಧ್ಯವಾಗದಂತೆ ದ್ವಾರದ ಎರಡು ಬದಿಗಳಲ್ಲಿ ಬುರುಜುಗಳನ್ನು ನಿರ್ಮಿಸಿ ಇಕ್ಕಟ್ಟಾಗಿ ಮಾಡಲಾಗಿದೆ. ಅಲ್ಲದೆ ಪ್ರತ್ಯೇಕವಾಗಿ ಎರಡು ಬಾಗಿಲುಗಳನ್ನು ಅಳವಡಿಸಿ ವೈರಿಗಳನ್ನು ಸೆರೆಹಿಡಿಯು ತಂತ್ರಗಳನ್ನು ಇಲ್ಲಿ ಬಳಸಲಾಗಿದೆ. ಜೊತೆಗೆ ಎರಡು ದಿಡ್ಡಿ ದ್ವಾರಗಳು ಕೂಡ ನಿರ್ಮಿಸಲಾಗಿದೆ. ಪಶ್ಚಿಮದಲ್ಲಿರುವ ದಿಡ್ಡಿದ್ವಾರವನ್ನು ಈಗ ಅರಕಿಲ್ಲಾಕ್ಕೆ ಪ್ರವೇಶಿಸಲು ಬಳಸಲಾಗುತ್ತಿದೆ. ಎರಡು ಸುತ್ತಿನ ಗೋಡೆಗಳಿರುವ ಈ ಕೋಟೆಯಲ್ಲಿ ಒಟ್ಟು 44 ಎತ್ತರವಾದ ಬುರುಜುಗಳನ್ನು ನಿರ್ಮಿಸಲಾಗಿದೆ. ಪೂರ್ವದ ಕೆಲವು ಬುರುಜುಗಳು ಕ್ರಿ.ಶ. 1514 ಮತ್ತು 1544ರ ಅವಧಿಯಲ್ಲಿ ನಿರ್ಮಿತವಾಗಿವೆ ಎಂದು ಇಲ್ಲಿಯ ಪರ್ಷಿಯನ್ ಶಾಸನಗಳು ಉಲ್ಲೇಖಿಸುತ್ತವೆ. ಹೊಸದಾದ ರಾಜ್ಯ ಸ್ಥಾಪನೆಯೊಂದಿಗೆ ಅರಕಿಲ್ಲಾ ಆವರಣವನ್ನು ಸಾರ್ವಜನಿಕರಿಂದ ಪ್ರತ್ಯೇಕಿಸಿ ದರ್ಬಾರ ಹಾಲ್‍ಗಳು, ಅರಮನೆಗಳು, ಮಸೀದಿಗಳು, ಇತ್ಯಾದಿಗಳನ್ನು ನಿರ್ಮಿಸಲಾಯಿತು. ಇವುಗಳಲ್ಲಿ ಅತ್ಯಂತ ಮುಖ್ಯವಾದದ್ದು ಇಲ್ಲಿಯ ಚೀನಿಮಹಲ್. ಇದರ ಮೂಲ ಹೆಸರು ಫರೂಕ್ ಮಹಲ್. ಇದನ್ನು ಜಿಲ್ಲಾಧಿಕಾರಿಗಳ ಕಛೇರಿಯನ್ನಾಗಿ ಈಗ ಬಳಸಲಾಗುತ್ತಿದೆ. ಇದೊಂದು ಬಹು ವಿಸ್ತಾರದ ದರ್ಬಾರ್ ಅಥವಾ ಒಡ್ಡೋಲಗ. ಇದರ ಒಳಾಂಗಣ ಬಹು ವಿಸ್ತಾರವಾಗಿದೆ. ಅನೇಕ ಕೋಣೆಗಳಿಂದ ಕೂಡಿದ ಈ ಅರಮನೆ ಆದಿಲಶಾಹಿ ರಾಜ್ಯದ ಮೊದಲ ಸುಲ್ತಾನ ಯುಸೂಫ್ ಖಾನ್ ನಿರ್ಮಿಸಿದನು. ಈ ಅರಮನೆಯ ದುರಸ್ತಿ ಕಾರ್ಯ ನಡೆಸುವಾಗ ಹಳೆಯ ಕಾಲದ ಚೀನಾ ದೇಶದ ಪಿಂಗಾಣ ಪಾತ್ರೆಗಳು ದೊರೆತಿದ್ದರಿಂದ ಇದನ್ನು ಚೀನಿ-ಮಹಲ್ ಎಂದು ಕರೆಯಲಾಗಿದೆ. ಈ ಮಹಲ್ ಅರಾಕಿಲ್ಲಾ ಆವರಣದಲ್ಲಿರುವ ಹಳೆಯ ಅರಮನೆ ಕಟ್ಟಡವೆಂದು ಹೇಳಬಹುದು.

ಮೊಹಲ್ಲಾ : ಅರಕಿಲ್ಲಾ ಆವರಣಕ್ಕೆ ಹೊಂದಿಕೊಂಡಂತೆ ಪೂರ್ವ ದಿಕ್ಕಿನಲ್ಲಿ ಸುಲ್ತಾನರ ಕಾಲದಲ್ಲಿ ನಾಗರಿಕರಿಗಾಗಿ ಮೊಹಲ್ಲಾವನ್ನು ಗ್ರಿಡ್ ಮಾದರಿಯ ನಗರವನ್ನು ನಿರ್ಮಿಸಲಾಗಿತ್ತು. ಇದು ಅರಾಕಿಲ್ಲಾದ ಮುಖ್ಯ ದ್ವಾರದ ಮುಂಭಾಗದಿಂದ ಪ್ರಾರಂಭಗೊಂಡು ಪೂರ್ವಕ್ಕೆ ಅಲ್ಲಾಪುರ ದ್ವಾರದವರೆಗೂ ವಿಸ್ತರಿಸಿತ್ತು. ವಿಶಾಲವಾದ ರಸ್ತೆ ಈ ಎರಡು ದ್ವಾರಗಳಿಗೆ ಸಂಪರ್ಕಿಸುತ್ತಿತ್ತು. ಈ ಮುಖ್ಯ ರಸ್ತೆಯ ಇಕ್ಕೆಡೆಗಳಲ್ಲಿ ವಿವಿಧ ವರ್ಗದವರ ಬಡಾವಣೆಗಳನ್ನು ನೆಲೆಗೊಳಿಸಲಾಗಿತ್ತು. ಮಹ್ಮದೀಯರ ನಗರಗಳು ಅಥವಾ ಮೊಹಲ್ಲಾಗಳಲ್ಲಿ ಮುಖ್ಯವಾದ ಲಕ್ಷಣವೆಂದರೆ ಜುಮ್ಮಾ ಮಸೀದಿ. ಊರಿನ ಜನರು ಸಾಮೂಹಿಕ ಪ್ರಾರ್ಥನೆ ಮಾಡುವುದಕ್ಕಾಗಿ ನಿರ್ಮಿಸುವ ಮಸೀದಿ ಇದಾಗಿರುತ್ತದೆ. ಸಾಮಾನ್ಯವಾಗಿ ಜುಮ್ಮಾ ಮಸೀದಿಯು ಬಹಳ ವಿಸ್ತಾರವಾಗಿ ನಿರ್ಮಿಸಲಾಗಿರುತ್ತದೆ. ಅದರಂತೆ ನಾಗರಿಕರು ಮತ್ತು ಸುಲ್ತಾನರು ಒಟ್ಟಾಗಿ ಪ್ರಾರ್ಥನೆ ಮಾಡಲು ಸಹಕಾರಿಯಾಗುವಂತೆ ಅರಮನೆಯ ಆವರಣಕ್ಕೆ ಹೊಂದಿಕೊಂಡಂತೆ ನಿರ್ಮಿಸುವುದು ಸಂಪ್ರದಾಯ. ಬಿಜಾಪುರದಲ್ಲಿಯೂ ಹಳೆಯ ಜುಮ್ಮಾ ಮಸೀದಿಯು ಅರಾಕಿಲ್ಲಾದ ಪೂರ್ವದ ದ್ವಾರದ ಹತ್ತಿರದಲ್ಲಿಯೇ ನಿರ್ಮಿಸಲಾಗಿದೆ. ನಗರದಲ್ಲಿಯ ದೊಡ್ಡ ಜುಮ್ಮಾ ಮಸೀದಿಯ ನಿರ್ಮಾಣಕ್ಕೆ ಮುಂಚೆಯೇ ಮೊದಲ ಇಬ್ರಾಹಿಮ್ ಸುಲ್ತಾನ ನಿರ್ಮಿಸಿದ ಜುಮ್ಮಾ ಮಸೀದಿಯೊಂದು ಅರಾಕಿಲ್ಲಾ ಮುಖ್ಯದ್ವಾರದ ಹತ್ತಿರದಲ್ಲಿದೆ. ಇದನ್ನು ಅಸನ್ ಬೇಗ್ ಮಸೀದಿ ಆಥವಾ ಯುಸೂಫ್‍ನ ಹಳೆಯ ಮಸೀದಿ ಎಂದು ಕರೆಯಲಾಗುತ್ತದೆ. ನಾಗರಿಕರ ಅನುಕೂಲಕ್ಕಾಗಿ ಹಲವು ಸಾಲು ಮಳಿಗೆಗಳಿರುವ ಬಜಾರು ಕೂಡ ನಿರ್ಮಿಸಲಾಗಿತ್ತು.

ಒಟ್ಟಿನಲ್ಲಿ ತಾಳಿಕೋಟೆ ಯುದ್ಧಕ್ಕಿಂತಲೂ ಮೊದಲು ಅಂದರೆ ಕ್ರಿ.ಶ. 1489 ರಿಂದ 1565ರವರೆಗೆ ರಾಜಧಾನಿ ನಗರ ಅರಕಿಲ್ಲಾ ಮತ್ತು ಪೂರ್ವ ದಿಕ್ಕಿನಲ್ಲಿ ಹರಡಿಕೊಂಡಿದ್ದ ಜುಮ್ಮಾ ಮಸೀದಿಯ ಸುತ್ತಲಿನ ನಾಗರಿಕರ ನೆಲೆಗೆ ಸೀಮಿತವಾಗಿತ್ತು. ವಿಜಯನಗರದ ಅರಸ ಕೃಷ್ಣದೇವರಾಯ 1520ರ ರಾಯಚೂರು ಕಾಳಗ ಮಾಡಿದ ನಂತರ ಬಿಜಾಪುರದ ಅರಮನೆಗೆ ನುಗ್ಗಿದ ಸಮಯದಲ್ಲಿ ಅರಕಿಲ್ಲಾ ಮತ್ತು ಅದರ ಸುತ್ತಿಲಿನ ಪ್ರದೇಶಗಳು ಮಾತ್ರ ಒಳಗೊಂಡ ನಗರವಾಗಿತ್ತು. 1565ರ ತಾಳಿಕೋಟೆ ಯುದ್ಧ ನಡೆದು ವಿಜಯನಗರ ಪತನವಾದ ನಂತರ ಬಿಜಾಪುರ ರಾಜ್ಯ ಹೆಚ್ಚು ಬಲಿಷ್ಟವಾಯಿತಲ್ಲದೆ, ತನ್ನ ಅಧಿಪತ್ಯವನ್ನು ಹೆಚ್ಚಿಸಿಕೊಳ್ಳಲು ವಿಶಾಲವಾದ ನಗರದ ರಚನೆಗೆ ತೊಡಗಿತು. ಬಿಜಾಪುರ ಆದಿಲಶಾಹಿ ಸುಲ್ತಾನ ಒಂದನೇಯ ಅಲಿ ಆದಿಲ ಶಹಾನು ರಾಜಧಾನಿ ನಗರದ ವಿಸ್ತಾರಕ್ಕೆ ಅಡಿಪಾಯ ಹಾಕಿದನು. ವೃತ್ತಾಕಾರದಲ್ಲಿರುವ ಮೂಲ ಅರಕಿಲ್ಲಾ ಕೋಟೆಯ ವಿನ್ಯಾಸದಂತೆಯೇ ಇದಕ್ಕೆ ಸುತ್ತುವರೆದಂತೆ ಬೃಹತ್ ವಿಸ್ತಾರದ ವೃತ್ತಾಕಾರದ ನಗರ ನಿರ್ಮಾಣಗೊಳ್ಳ ತೊಡಗಿತು. ಈ ದೊಡ್ಡ ಗಾತ್ರದ ನಗರದ ಕೇಂದ್ರ ಬಿಂದುವಿನಂತೆ ಅರಾಕಿಲ್ಲಾ ಆವರಣವಾಯಿತು. ನಗರ ವಿಸ್ತರಿಸುತ್ತಿದ್ದಂತೆ ವಿವಿಧ ಸೌಕರ್ಯಗಳಿಗಾಗಿ ಬಜಾರಗಳನ್ನು, ಕುಡಿಯುವ ನೀರಿನ ಸರಬುರಾಜಿಗಾಗಿ ಬಾವಿಗಳನ್ನು, ಒಳಚರಂಡಿಗಳನ್ನು, ವಿಶಾಲವಾದ ಉದ್ಯಾನಗಳನ್ನು, ಪ್ರವಾಸಿಗರಿಗಾಗಿ ವಿಶ್ರಾಂತಿಧಾಮಗಳು, ವಿವಿಧ ಕಚೇರಿಗಳು, ಹಾಗೂ ನಾಗರಿಕರ ರಕ್ಷಣೆಗಾಗಿ ಭದ್ರವಾದ ಕೋಟೆ ಮತ್ತು ಸುಸಜ್ಜಿತ ಫಿರಂಗಿಗಳುಳ್ಳ ಎತ್ತರವಾದ ಕೊತ್ತಳಗಳು, ಭತೇರಿಗಳು ಊರಿಗೆ ಪ್ರವೇಶಕ್ಕಾಗಿ ಐದು ಮುಖ್ಯದ್ವಾರಗಳು ಇತ್ಯಾದಿಗಳನ್ನು ನಿರ್ಮಿಸಲಾಯಿತು.

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...