ಬ್ಲೋ-ಅಪ್: ಆಂತರಿಕ ನವ ವಾಸ್ತವವಾದಿ ಸಿನಿಮಾ 

Date: 06-03-2021

Location: ಬೆಂಗಳೂರು


ಬ್ಲೋ-ಅಪ್ ಚಲನಚಿತ್ರವು ಬಣ್ಣ ಹಾಗೂ ಬಣ್ಣದ ವಸ್ತುಗಳ ಬಳಕೆಯ ದೃಷ್ಟಿಯಿಂದಲೂ ಮಹತ್ವದ್ದು ಎನ್ನುತ್ತಾರೆ ಪ್ರಾಧ್ಯಾಪಕ -ಲೇಖಕ ಡಾ. ಸುಭಾಷ್ ರಾಜಮಾನೆ. ಈ ಚಲನಚಿತ್ರದ ನಿರ್ದೇಶಕ ಮೈಕೆಲೆಂಜಲೋ ಆಂಟೋನಿಯೋನಿ ಅವರ ವ್ಯಕ್ತಿತ್ವ, ಸಿನಿಮಾ ಪ್ರೀತಿ ಹಾಗೂ ಬ್ಲೋ-ಅಪ್ ಸಿನಿಮಾವನ್ನು ತಮ್ಮ ನವಿಲನೋಟ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.

ಮೈಕೆಲೆಂಜಲೋ ಆಂಟೋನಿಯೋನಿ ಇಟಲಿಯ ಫೆರೆರಾ ಎಂಬ ಪ್ರಾಂತ್ಯದಲ್ಲಿ 1912ರಲ್ಲಿ ಶ್ರೀಮಂತ ಭೂಮಾಲಿಕ ಕುಟುಂಬದಲ್ಲಿ ಜನಿಸಿದಾತ. ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಆಂಟೋನಿಯೋನಿ 1930ರ ದಶಕದಲ್ಲಿ ಚಿತ್ರ ವಿಮರ್ಶೆಗಳನ್ನು ಬರೆಯಲಾರಂಭಿಸಿದ. 1940ರಲ್ಲಿ ಸಿನಿಮಾ ನಿರ್ದೇಶನ ಕಲೆಯನ್ನು ಅಧ್ಯಯನ ಮಾಡಿದ. ರೋಸೆಲಿನಿಯಂತಹ ಖ್ಯಾತ ನಿರ್ದೇಶಕನ ಬಳಿ ಚಿತ್ರಕತೆ ಬರಹಗಾರನಾಗಿ ಕೆಲಸ ಮಾಡಿದ. ತನ್ನ ಮೊದಲ ಚಿತ್ರ ಸ್ಟೋರಿ ಆಫ್ ಲವ್ ಅಫೇರ್ (1950) ನಿರ್ದೇಶಿಸುವ ಮೊದಲು ಹಲವು ಡಾಕ್ಯುಮೆಂಟರಿಗಳನ್ನು ತಯಾರಿಸಿದ್ದ.
ಅರವತ್ತರ ದಶಕದಲ್ಲಿ ಬಂದ ಲಾ ಅವೆಂಚುರಾ (ಸಾಹಸ, 1960), ಲಾ ನೊಟ್ಟೆ (ರಾತ್ರಿ, 1961) ಹಾಗೂ ಲಾ ಎಕ್ಲಿಸ್ಸೆ (ಗ್ರಹಣ, 1962)-ಎಂಬ ತ್ರಿವಳಿ ಸಿನಿಮಾಗಳು ಆಂಟೋನಿಯೋನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರವಾದ ಯಶಸ್ಸು ಹಾಗೂ ಖ್ಯಾತಿಯನ್ನು ತಂದು ಕೊಟ್ಟವು. ಆಧುನಿಕತೆ ತಂದೊಡ್ಡಿರುವ ಭೋಗ ಜೀವನ ಮತ್ತು ಅದರ ಅತೃಪ್ತಿಯಲ್ಲಿ ಸಿಲುಕಿ ತೊಳಲಾಡುವ ಮನುಷ್ಯನ ವಿಚಿತ್ರ ಸಂದಿಗ್ಧತೆಯ ಮನಸ್ಥಿತಿಯನ್ನು ಈ ತ್ರಿವಳಿ ಸಿನಿಮಾಗಳಲ್ಲಿ ಕಾಣುತ್ತೇವೆ. ಆಂಟೋನಿಯೋನಿ ತನ್ನ ತ್ರಿವಳಿ ಚಿತ್ರಗಳಿಂದ ಎಷ್ಟು ಪ್ರಖ್ಯಾತನಾದನೆಂದರೆ ವಿದೇಶಗಳಲ್ಲಿ ಸಿನಿಮಾ ಮಾಡುವ ಅವಕಾಶಗಳು ಅವನನ್ನು ಅರಸಿಕೊಂಡು ಬಂದವು. ಲಂಡನ್‌ನಲ್ಲಿ ಬ್ಲೋ-ಅಪ್ (1966) ಚಿತ್ರವನ್ನು ಮತ್ತು ಅಮೆರಿಕದಲ್ಲಿ ಝಬ್ರಿಸ್ಕ್ ಪಾಯಿಂಟ್ (1970) ಹಾಗೂ ಪ್ರೊಫೇಶನ್: ರಿಪೋರ್ಟರ್ (1975) ಎನ್ನುವ ಸಿನಿಮಾಗಳನ್ನು ನಿರ್ದೇಶಿಸಿದ. ಜ್ಯೂಲಿಯೋ ಕೊರ್ಟಝರ್‌ನ ಸಣ್ಣ ಕತೆಯಿಂದ ಪ್ರೇರಿತನಾದ ಆಂಟೋನಿಯೋನಿ ಇಂಗ್ಲಿಷ್‌ನಲ್ಲಿ ಬ್ಲೋ-ಅಪ್ ಚಿತ್ರವನ್ನು ಮಾಡಿದ. ಇದಕ್ಕಾಗಿ ಅತ್ಯುತ್ತಮ ಒರಿಜಿನಲ್ ಚಿತ್ರಕತೆ ಮತ್ತು ಅತ್ಯುತ್ತಮ ನಿರ್ದೇಶನಕ್ಕಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಪಡೆದ. ಬ್ಲೋ-ಅಪ್ ಕಲೆ ಮತ್ತು ವಾಸ್ತವತೆಯ ನಡುವಿನ ಸಂಬಂಧದ ಸ್ವರೂಪವನ್ನು ಶೋಧಿಸುವ ಚಿತ್ರವಾಗಿದೆ.
ಥಾಮಸ್ (ಡೆವಿಡ್ ಹೆಮ್ಮಿಂಗ್) ಲಂಡನ್ ನಗರದ ಅತ್ಯಂತ ಸ್ಟೈಲಿಸ್ಟ್ ಫೋಟೋಗ್ರಾಫರ್. ಆತನ ಫೋಟೋ ಸ್ಟುಡಿಯೋ ಅತ್ಯಾಧುನಿಕ ಸಲಕರಣೆಗಳಿಂದ ತುಂಬಿದೆ. ಹೆಚ್ಚು ಮಾತನಾಡದ ಥಾಮಸ್ ತನ್ನ ಕಣ್ಣೋಟದಲ್ಲೇ ಎಲ್ಲವನ್ನೂ ಅಳೆದು ತೂಗಬಲ್ಲ ಮಹಾ ಚತುರ. ವಿಶಿಷ್ಟ ಕಲ್ಪನಾ ಶಕ್ತಿಯಿರುವ ಥಾಮಸ್ ಕ್ಯಾಮೆರಾ ಹಿಡಿದುಕೊಂಡು ಒಂದು ಸುಂದರ ಉದ್ಯಾನವನಕ್ಕೆ ಹೋಗುತ್ತಾನೆ. ಥಾಮಸ್ ಹೊಸ ಆಲ್ಬಂಗಾಗಿ ವಿಭಿನ್ನ ರೀತಿಯಲ್ಲಿ ಫೋಟೋಗಳನ್ನು ತೆಗೆಯುತ್ತಿರುತ್ತಾನೆ. ಅದೇ ಉದ್ಯಾನವನದಲ್ಲಿ ತರುಣಿಯೊಬ್ಬಳು ಮಧ್ಯೆ ವಯಸ್ಕ ಪುರುಷನೊಂದಿಗೆ ರೋಮ್ಯಾನ್ಸ್‌ನಲ್ಲಿರುತ್ತಾಳೆ. ಇದನ್ನು ಥಾಮಸ್ ನೋಡುತ್ತಾನೆ. ಆಗ ಅಲ್ಲಿಯೇ ಮರೆಯಲ್ಲಿ ನಿಂತುಕೊಂಡು ಅವರ ಫೋಟೋಗಳನ್ನು ತನ್ನ ಪುಟ್ಟ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾನೆ. ಅದನ್ನು ಗಮನಿಸಿದ ಆ ತರುಣಿ ಓಡಿ ಬಂದು ತಮ್ಮ ಫೋಟೋಗಳನ್ನು ತೆಗೆಯಬಾರದೆಂದು ಹೇಳುತ್ತಾಳೆ; ಈಗಷ್ಟೇ ತೆಗೆದ ಫೋಟೋಗಳ ನೆಗೆಟಿವ್‌ನ್ನು ತನಗೆ ಮರಳಿಸಬೇಕೆಂದು ಕೇಳುತ್ತಾಳೆ. ಆಕೆಯ ಮುಖದಲ್ಲಿ ಆತಂಕ ಹಾಗೂ ಭಯ ಕಾಣಿಸುತ್ತಿರುತ್ತದೆ. ಆದರೆ ಥಾಮಸ್ ನೆಗಟಿವ್ ಅ‌ನ್ನು ಕೊಡಲು ನಿರಾಕರಿಸಿ ಅದರ ಫೋಟೋಗಳನ್ನು ಕೊಡುವುದಾಗಿ ಹೇಳಿ ತನ್ನ ಸ್ಟುಡಿಯೋಗೆ ಹೊರಟು ಹೋಗುತ್ತಾನೆ.
ಥಾಮಸ್ ಆ ಫೋಟೋಗಳನ್ನು ಕತ್ತಲ ಕೋಣೆಯಲ್ಲಿ ಎನ್‌ಲಾರ್ಜ್ ಮಾಡಿಕೊಂಡು ಒಂದೊಂದಾಗಿ ಗಮನಿಸುತ್ತಾನೆ. ಗೋಡೆಯ ಮೇಲೆ ಸಾಲಾಗಿ ಅಂಟಿಸಿರುವ ಈ ಫೋಟೋಗಳ ದೃಶ್ಯವು ಸಿನಿಮಾದ ಆಶಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಫೋಟೋದಲ್ಲಿ ಮಧ್ಯೆ ವಯಸ್ಕ ಪುರುಷನನ್ನು ಅಪ್ಪಿಕೊಂಡಿರುವಂತೆ ಕಾಣುವ ಆ ತರುಣಿ ಅನ್ಯಮನಸ್ಕಳಾಗಿ ತನ್ನ ಕತ್ತು ತಿರುಗಿಸಿ ಚಿಂತೆಯಿಂದ ಅಲ್ಲೇ ಪಕ್ಕದಲ್ಲಿರುವ ಮರಗಳ ಪೊದೆಯ ಕಡೆಗೆ ನೋಡುತ್ತಿದ್ದಾಳೆ. ಥಾಮಸ್‌ನ ತಲೆಯಲ್ಲಿ ಅದರ ಬಗ್ಗೆ ಏನೋ ಸಂಶಯ ಸುಳಿಯುತ್ತದೆ. ಆಕೆ ನೋಡುತ್ತಿರುವ ಕಡೆಗೆ ಥಾಮಸ್ ತನ್ನ ಬೆರಳಿನಿಂದ ದೂರವನ್ನು ಲೆಕ್ಕಹಾಕಿ ಮತ್ತೊಂದು ಫೋಟೋವನ್ನು ಎರಡನೆಯ ಸಲ ಎನ್‌ಲಾರ್ಜ್ ಮಾಡಿಸಿಕೊಂಡು ಸೂಕ್ಷ್ಮವಾಗಿ ನೋಡುತ್ತಾನೆ. ಆ ಫೋಟೋದಲ್ಲಿ ಮರದ ಟೊಂಗೆಯ ಎಲೆಗಳ ಹಿಂದೆ ಅಸ್ಪಷ್ಟವಾದ ಕೈಯ ಬೆರಳುಗಳ ಚಿತ್ರವನ್ನು ಹಾಗೂ ಆ ಕೈಯಲ್ಲಿ ಪಿಸ್ತೂಲ್ ಇರುವುದನ್ನು ಥಾಮಸ್ ಗಮನಿಸುತ್ತಾನೆ. ಮೂರನೆಯ ಸಲ ಕಪ್ಪು ಬಿಳಿಯ ಅದೇ ಪೋಟೋವನ್ನು ಥಾಮಸ್ ಎನ್‌ಲಾರ್ಜ್ ಮಾಡಿಸಿಕೊಂಡು ಮತ್ತಷ್ಟು ಸಮೀಪದಿಂದ ವೀಕ್ಷಿಸುತ್ತಾನೆ. ಈ ಸನ್ನಿವೇಶದಲ್ಲಿ ಥಾಮಸ್ ತುಂಬ ಚಿಂತಾಕ್ರಾಂತನಂತೆ ಗೋಚರಿಸುತ್ತಾನೆ. ಇದ್ದಕ್ಕಿದ್ದಂತೆ ಏನೋ ತೋಚಿದಂತಾಗಿ ನಡುರಾತ್ರಿಯಲ್ಲೇ ಒಂಟಿಯಾಗಿ ಆ ಉದ್ಯಾನವನಕ್ಕೆ ತೆರಳುತ್ತಾನೆ. ಫೋಟೋದಲ್ಲಿ ಕಂಡಿದ್ದ ಮರದ ಕೆಳಗೆ ಹೋಗಿ ನೋಡುತ್ತಾನೆ. ಫೋಟೋದಲ್ಲಿ ಕಂಡಿದ್ದ ವ್ಯಕ್ತಿಯ ಹೆಣ ಅಲ್ಲಿರುತ್ತದೆ. ಹೆದರಿಕೆಯಿಂದ ಬೆವೆತುಹೋಗುವ ಥಾಮಸ್ ಆ ಹೆಣವನ್ನು ಮುಟ್ಟಿ ನೋಡುತ್ತಾನೆ. ಅಲ್ಲಿಂದ ತನ್ನ ಸ್ಟುಡಿಯೋಗೆ ಮರಳುತ್ತಾನೆ.
ಥಾಮಸ್ ಫೋಟೋಗಳನ್ನು ಎನ್‌ಲಾರ್ಜ್ ಮಾಡಿ ನೋಡಿದ್ದರಿಂದ ವ್ಯಕ್ತಿಯ ಕೊಲೆಯನ್ನು ಊಹಿಸುತ್ತಾನೆ. ಕ್ಯಾಮೆರಾ ಕಂಡುಹಿಡಿದ ನಂತರ ಅದು ಫೋಟೋಗ್ರಾಫಿಗೆ ಜನ್ಮನೀಡಿತು. ಮನುಷ್ಯನ ಕೈಗೆ ಬಂದ ಕ್ಯಾಮೆರಾ ಸುತ್ತಮುತ್ತಲಿನ ಲೋಕವನ್ನು ಇರುವಂತೆಯೇ ದಾಖಲಿಸಲು ಆರಂಭಿಸಿತು. ಇದು ಕಲೆಯ ಹೊಸ ಸಾಧ್ಯತೆಗಳಿಗೆ ದಾರಿಮಾಡಿ ಕೊಟ್ಟಿತು. ಝಿಗ್ ವರ್ತೋವ್ ಎಂಬ ಸೋವಿಯತ್ ಸಿನಿಮಾ ನಿರ್ದೇಶಕ ತನ್ನ ಲೇಖನವೊಂದರಲ್ಲಿ 1923ರಲ್ಲಿ ಕ್ಯಾಮೆರಾವನ್ನು ಕುರಿತು ನಾನೊಂದು ಕಣ್ಣು. ಒಂದು ಯಾಂತ್ರಿಕ ಕಣ್ಣು. ಕೇವಲ ಒಂದು ಯಂತ್ರವಾದ ನಾನು ಮಾತ್ರ ಕಾಣುವಂತೆ ಜಗತ್ತನ್ನು ಕಾಣಿಸಬಲ್ಲೆ. ಇಂದು ಮತ್ತು ಎಂದೆಂದಿಗೂ ಮಾನವನ ಅಸಹಾಯಕ ಚಲನರಹಿತತೆಯಿಂದ ನಾನು ಬಿಡುಗಡೆ ಹೊಂದಿದ್ದೇನೆ. ನಾನು ನಿರಂತರವಾಗಿ ಚಲನಶೀಲವಾಗಿರುತ್ತೇನೆ. ನಾನು ವಸ್ತುಗಳ ಹತ್ತಿರಕ್ಕೆ ಹೋಗಿ ಹಾಗೆಯೇ ಹಿಂದೆಗೆಯಬಲ್ಲೆ. ಅವುಗಳ ಕೆಳಗೂ ತೂರಬಲ್ಲೆ ನಾನು. ಓಡುತ್ತಿರುವ ಕುದುರೆಯ ಬಾಯಿಯ ಪಕ್ಕದಲ್ಲೂ ನಾನು ಚಲಿಸಬಲ್ಲೆ. ಬಿದ್ದು ಏಳುವ ದೇಹಗಳೊಂದಿಗೆ ನಾನೂ ಸಹ ಏರಿಳಿಯಬಲ್ಲೆ. ನಾನು ಒಂದು ಯಂತ್ರ; ಅತ್ಯಂತ ಗೊಂದಲಮಯ ಸಂದರ್ಭದಲ್ಲೂ ಸರಾಗವಾಗಿ ಪ್ರತಿಕ್ಷಣದ ನಂತರ ಮತ್ತೊಂದು ಕ್ಷಣವನ್ನು ಅತ್ಯಂತ ಸಂಕೀರ್ಣಾವಸ್ಥೆಯನ್ನೂ ದಾಖಲಿಸಬಲ್ಲೆ. ಕಾಲ ಮತ್ತು ಸ್ಥಳದಿಂದ ಮುಕ್ತವಾದ ನಾನು, ವಿಶ್ವದ ಯಾವ ಒಂದು ನೆಲೆಯಿಂದ ಅಥವ ಎಲ್ಲಾ ನೆಲೆಯಿಂದಲೂ ನಾನು ಇಚ್ಚೆಪಟ್ಟಲ್ಲೆಲ್ಲ ಇದ್ದು ಸಹಕರಿಸಬಲ್ಲೆ. ಜಗತ್ತಿನ ಬಗ್ಗೆ ಒಂದು ನವೀನ ಗ್ರಹಣ ಕ್ರಿಯೆಯ ಸೃಷ್ಟಿಗೆ ನನ್ನ ಕಾರ್ಯನಿರ್ವಹಣಾ ಶೈಲಿಯು ದಾರಿ ಮಾಡಿಕೊಡುತ್ತದೆ. ಹೀಗೆ ನಿಮಗೆ ತಿಳಿಯದ ಜಗತ್ತೊಂದನ್ನು ನಾನು ಹೊಸದೊಂದು ರೀತಿಯಲ್ಲಿ ವ್ಯಾಖ್ಯಾನಿಸಬಲ್ಲೆ ಎಂದು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಸಿನಿಮಾ ಎನ್ನುವ ಕಲಾ ಮಾಧ್ಯಮ ಇದೇ ಕ್ಯಾಮೆರಾದ ವಿಸ್ತರಣೆಯ ಒಂದು ರೂಪವಾಗಿದೆ. ಆ ಹೆಣವನ್ನು ನೋಡಲು ಥಾಮಸ್ ಬೆಳಿಗ್ಗೆ ಉದ್ಯಾನವನಕ್ಕೆ ಹೋಗುತ್ತಾನೆ. ಅಚ್ಚರಿಯ ಸಂಗತಿಯೆಂದರೆ, ರಾತ್ರಿ ನೋಡಿದ್ದ ಆ ಮನುಷ್ಯನ ಶವ ಅಲ್ಲಿರುವುದಿಲ್ಲ. ಥಾಮಸ್ ನಿರಾಶಿತನಾಗಿ ಅಲ್ಲಿಂದ ಮರಳುವಾಗ ತೆರೆದ ಕಾರಲ್ಲಿ ಮೈಮ್ ವೇಷದಲ್ಲಿರುವ ಯುವ ಪಡೆಯೊಂದು ಕೂಗಿಕೊಂಡು ಹೋಗುತ್ತಿರುತ್ತದೆ.
ಸಿನಿಮಾದ ಆರಂಭಿಕ ದೃಶ್ಯದಲ್ಲೆ ಚಲಿಸುತ್ತಿರುವ ಕಾರಿನಲ್ಲಿ ಮೈಮ್ ವೇಷವನ್ನು ತೊಟ್ಟುಕೊಂಡು ಮನಬಂದಂತೆ ಕೂಗುವ ತರುಣ ತರುಣಿಯರು ಕಾಣಿಸುತ್ತಾರೆ. ಸಿನಿಮಾದ ಕೊನೆಯಲ್ಲಿ ಇವರು ಮತ್ತೇ ಕಾಣಿಸಿಕೊಳ್ಳುವುದು ಬ್ಲೋ-ಅಪ್ ಸಿನಿಮಾದ ಥೀಮ್ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. ಮೈಮ್ ವೇಷದಲ್ಲಿರುವವರು ಕಾರಿನಿಂದ ಇಳಿದಾಗ ಅವರಲ್ಲೇ ಇಬ್ಬರು ಕಾಲ್ಪನಿಕ ಟೆನ್ನಿಸ್ ಆಟವನ್ನು ಆಡಲು ತೊಡಗುತ್ತಾರೆ. ಉಳಿದವರೆಲ್ಲ ಅವರು ಆಡುತ್ತಿರುವುದು ನಿಜವಾದ ಆಟವೆಂದೇ ಭಾವಿಸಿಕೊಂಡು ವೀಕ್ಷಿಸುತ್ತಿದ್ದಾರೆ. ಆಟವಾಡುವಾಗ ಚೆಂಡನ್ನು ಹೊಡೆಯುವ ಹಾಗೂ ಅದು ಹುಲ್ಲಿನ ಮೇಲೆ ಹೋಗಿ ಬೀಳುವ ಸದ್ದು ಮಾತ್ರ ಕೇಳಿಸುತ್ತಿರುತ್ತದೆ. ಆದರೆ ನಿಜವಾಗಿಯೂ ಚೆಂಡು ಅಲ್ಲಿ ಇರುವುದೇ ಇಲ್ಲ. ಅಲ್ಲಿಂದಲೇ ಹೊರಡುತ್ತಿದ್ದ ಥಾಮಸ್ ಇವರನ್ನು ಕಂಡು ಒಂದು ಕ್ಷಣ ಅಲ್ಲೇ ನಿಲ್ಲುತ್ತಾನೆ. ಅವರು ಟೆನ್ನಿಸ್ ಆಡುವಾಗ ಆ ಕಾಲ್ಪನಿಕ ಚೆಂಡು ಕೋರ್ಟನ ಆಚೆಗೆ ಹೋಗಿ ಬೀಳುತ್ತದೆ. ಆಟ ಆಡುತ್ತಿರುವಾಕೆ ಅಲ್ಲೇ ನಿಂತು ನೋಡುತ್ತಿದ್ದ ಥಾಮಸ್‌ಗೆ ಆ ಚೆಂಡನ್ನು ಎಸೆಯುವಂತೆ ಸನ್ನೆ ಮಾಡುತ್ತಾಳೆ. ಈಗ ಥಾಮಸ್ ನಿಜವಾಗಿಯೂ ಇಲ್ಲದಿರುವ ಚೆಂಡನ್ನು ಇದೆಯೆಂದು ಕಲ್ಪಿಸಿಕೊಂಡು ಅವರತ್ತ ಎಸೆಯುತ್ತಾನೆ. ಮೈಮ್ ಶೋ ಮಾಡುವವರು ಕೂಡ ಇಲ್ಲದಿರುವುದನ್ನು ಇದೆ ಎಂದೇ ಕಲ್ಪಿಸಿಕೊಂಡು ಅಭಿನಯಿಸುತ್ತಾರೆ. ಈ ಸನ್ನಿವೇಶವಂತೂ ಸಾಂಕೇತಿಕತೆಯಿಂದ ಕೂಡಿದೆ. ಇವರಂತೆಯೇ ಥಾಮಸ್ ಸೆರೆಹಿಡಿದ ಆ ಫೋಟೋಗಳಲ್ಲಿ ವಾಸ್ತವವಾಗಿ ಇಲ್ಲದಿರುವುದನ್ನು ತನ್ನ ಕಲ್ಪನೆಯ ಶಕ್ತಿಯಿಂದ ಇದೆ ಎನ್ನುವಂತೆ ಊಹಿಸಿಕೊಂಡನೆ? ಕಲೆ ಮತ್ತು ವಾಸ್ತವತೆಗಳ ನಡುವಿನ ಸಂಬಂಧ ಯಾವ ಸ್ವರೂಪದ್ದು? ಬ್ಲೋ-ಅಪ್ ಸಿನಿಮಾ ನೋಡುವವರ ಮನದಾಳದಲ್ಲಿ ಇಂತಹ ಹಲವು ತಾತ್ವಿಕ ಪ್ರಶ್ನೆಗಳು ಏಳುವುದು ಸಹಜ.
ಕೆಲವು ಸಿನಿಮಾ ವಿಮರ್ಶಕರು ಆಂಟೋನಿಯೋನಿಯನ್ನು ಆಂತರಿಕ ನವ-ವಾಸ್ತವವಾದಿ ಎಂದು ಗುರುತಿಸುತ್ತಾರೆ. ನವ-ವಾಸ್ತವವಾದವು ಸಾಮಾಜಿಕ ವ್ಯವಸ್ಥೆಯ ಚಿತ್ರಣಕ್ಕೆ ಹೆಚ್ಚಿನ ಒತ್ತನ್ನು ನೀಡಿರುವಂತಹದ್ದು. ಆದರೆ ಆಂತರಿಕ ನವ-ವಾಸ್ತವವಾದ ವ್ಯಕ್ತಿಗತ ಪ್ರಜ್ಞೆಯೊಳಗೆ ನಡೆಯುವ ಸಂಘರ್ಷಗಳ ಅನಾವರಣಕ್ಕೆ ಹೆಚ್ಚು ಅವಕಾಶವನ್ನು ಕಲ್ಪಿಸುತ್ತದೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ ಬ್ಲೋ-ಅಪ್ ಚಿತ್ರದಲ್ಲಿ ಬೇರೆಲ್ಲ ಸಂಗತಿಗಳು ಫೋಟೋಗ್ರಾಫರ್ ಥಾಮಸ್‌ನ ಮಾನಸಿಕ ಅವಸ್ಥೆಯನ್ನು ಸೂಕ್ಷ್ಮವಾಗಿ ತೆರೆದು ತೋರಿಸಲು ಪೂರಕವಾಗಿದೆ. ಥಾಮಸ್‌ನ ಚಲನವಲನ ಹಾಗೂ ಆತನ ವ್ಯಕ್ತಿತ್ವವನ್ನು ಬಗೆದು ತೋರಿಸುವ ಸಲುವಾಗಿಯೇ ಕ್ಯಾಮೆರಾ ಆತನ ಮೇಲೆ ಸದಾ ಫೋಕಸ್ ಆಗಿದೆ. ಆದ್ದರಿಂದಲೇ ಕೊಲೆಯಾದ ವ್ಯಕ್ತಿಯ ಹಿನ್ನೆಲೆ ಹಾಗೂ ತರುಣಿಯೊಂದಿಗೆ ಆತನ ಸಂಬಂಧ ಯಾವ ಬಗೆಯದು ಎಂಬುದರ ವಿವರಗಳು ಸಿನಿಮಾದಲ್ಲಿಲ್ಲ. ನಿಜವಾಗಿಯೂ ಸಿನಿಮಾದ ಕತೆ ನಡೆಯುವುದು ಥಾಮಸ್‌ನ ಪ್ರಜ್ಞೆಯ ಆಳದಲ್ಲಿ ಎಂಬುದು ಸ್ಪಷ್ಟವಾಗಿದೆ.
ಆಂಟೋನಿಯೋನಿ ಅರವತ್ತರ ದಶಕದಲ್ಲಿ ಲಂಡನ್ ನಗರದಲ್ಲಿ ಬೆಳೆಯುತ್ತಿದ್ದ ಪ್ಯಾಷನ್, ಲೈಂಗಿಕ ಸ್ವಚ್ಛಂದತೆ, ವಿಪರೀತ ಕುಡಿತ, ಪಾಪ್ ಸಂಸ್ಕೃತಿ ಮತ್ತು ಉದ್ದೀಪನ ದ್ರವ್ಯಗಳ ದಾಸರಾದ ಯುವ ಜನಾಂಗದ ಸ್ವಭಾವಗಳನ್ನು ಬ್ಲೋ-ಅಪ್ನಲ್ಲಿ ಕಾಣಿಸಿದ್ದಾನೆ. ಚಿತ್ರ ವಿಮರ್ಶಕರು ಇದನ್ನು ಲಂಡನ್ ಸ್ವಿಂಗಿಂಗ್ ಎಂದು ಕರೆದಿದ್ದಾರೆ. ಹುಡುಗಿಯರು ಮಾಡೆಲ್ ಎಂದು ಗುರುತಿಸಿಕೊಳ್ಳಲು ಲೈಂಗಿಕವಾಗಿ ಥಾಮಸ್‌ನ ಮನಸ್ಸನ್ನು ಸೆಳೆಯಲು ಇನ್ನಿಲ್ಲದಂತೆ ಹಪಹಪಿಸುತ್ತಾರೆ. ಇಬ್ಬರು ಹುಡುಗಿಯರೊಂದಿಗೆ ಥಾಮಸ್ ತನ್ನ ಸ್ಟುಡಿಯೋದಲ್ಲಿ ಚೆಲ್ಲಾಟಕ್ಕೆ ಬಿದ್ದವರಂತೆ ಒಬ್ಬರ ಬಟ್ಟೆಗಳನ್ನು ಇನ್ನೊಬ್ಬರು ಒತ್ತಾಯಪೂರ್ವಕ ಬಿಚ್ಚಿ ಬೆತ್ತಲಾಗಿಸುವಿಕೆಯು ವಿಕೃತಿಯ ಪರಾಕಾಷ್ಠೆಯಾಗಿದೆ.
ಬ್ಲೋ-ಅಪ್ ಚಲನಚಿತ್ರವು ಬಣ್ಣ ಹಾಗೂ ಬಣ್ಣದ ವಸ್ತುಗಳ ಬಳಕೆಯ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಲಂಡನ್ ನಗರದ ರಸ್ತೆಗಳಲ್ಲಿ ಥಾಮಸ್ ತನ್ನ ಕಪ್ಪು ಬಣ್ಣದ ತೆರೆದ ಕಾರ್‌ನ್ನು ಓಡಿಸುವಾಗಲೆಲ್ಲ ಆತನ ಹಿಂದೆ ಮುಂದೆ ಕೆಂಪು ಬಣ್ಣದ ಬಸ್ಸುಗಳು ಕಾಣಿಸುತ್ತವೆ. ಥಾಮಸ್ ತನ್ನ ಸ್ಟುಡಿಯೋದಲ್ಲಿ ಫೋಟೋಗಳನ್ನು ಎನ್‌ಲಾರ್ಜ್ ಮಾಡಿಸಲು ಹೋಗುವ ಕತ್ತಲ ಕೋಣೆಯ ಹೊರಗೆ ಕೆಂಪು ಬಣ್ಣದ ದೊಡ್ಡ ಗುಂಡಿಯೊಂದು ಕಾಣಿಸುತ್ತದೆ. ಥಾಮಸ್ ತಾನು ತೆಗೆಯುವ ಫೋಟೋಗಳನ್ನು ಆಲ್ಬಂನಲ್ಲಿ ಪ್ರಕಟಿಸುವ ತನ್ನ ಯಜಮಾನನನ್ನು ಭೇಟಿಯಾಗಲು ಹೋದಾಗಲೆಲ್ಲ ಹಗಲು ಮತ್ತು ರಾತ್ರಿಯ ಹೊತ್ತಿನ ಕ್ಲಬ್‌ನಲ್ಲಿ ಕೆಂಪು ಬೆಳಕು ಢಾಳಾಗಿ ಕಾಣಿಸುತ್ತದೆ. ಸಾಮಾನ್ಯವಾಗಿ ಕೆಂಪು ಬಣ್ಣ ಅಪಾಯವನ್ನು ಹಾಗೂ ಲೈಂಗಿಕತೆಯ ಉದ್ದೀಪನವನ್ನು ಸಂಕೇತಿಸುತ್ತದೆ. ಕೆಂಪು ಬಣ್ಣವು ಆಂಟೋನಿಯೋನಿಗೆ ಪ್ರಿಯವಾದ ಬಣ್ಣವಾಗಿದೆ. ಆತನ ಮೊದಲ ವರ್ಣಚಿತ್ರವಾದ ರೆಡ್ ಡೆಸರ್ಟ್ (1964) ಸಿನಿಮಾದಲ್ಲೂ ಕೆಂಪು ಬಣ್ಣದ ಬಳಕೆಯನ್ನು ನೋಡಬಹುದು. ಇದರಲ್ಲಿ ಕೈಗಾರೀಕರಣದ ಪರಿಣಾಮವಾಗಿ ಬೆಳೆದಿರುವ ಯಂತ್ರ ನಾಗರಿಕತೆಯ ಜಗತ್ತಿನಲ್ಲಿ ಹೊಂದಿಕೊಳ್ಳಲಾಗದೆ ಮಾನಸಿಕ ಅಸ್ವಸ್ಥತೆಯಿಂದ ತೊಳಲಾಡುವ ಹೆಣ್ಣಿನ ಚಿತ್ರಣವಿದೆ.
ಬ್ಲೋ-ಅಪ್ ಸಿನಿಮಾ ಬಿಡುಗಡೆಯಾದಾಗ ಜತ್ತಿನಾದ್ಯಂತ ಅದು ಮಾಡಿದ ಸಂಚಲನೆ ಅಷ್ಟಿಷ್ಟಲ್ಲ. ಜಗತ್ತಿನ ಹಲವು ಭಾಷೆಗಳಲ್ಲಿ ಇದರಿಂದ ಪ್ರೇರಿತವಾಗಿ ಸಿನಿಮಾಗಳು ತಯಾರಾದವು. ಕುಂದನ್ ಶಾ ಎಂಬ ನಿರ್ದೇಶಕ ಬ್ಲೋ-ಅಪ್ ಚಿತ್ರದಿಂದ ಪ್ರೇರಿತರಾಗಿ ಹಿಂದಿಯಲ್ಲಿ ‘ಜಾನೆ ಭಿ ದೋ ಯಾರೋ’ (1983) ಎಂಬ ಚಿತ್ರವನ್ನು ಮಾಡಿದರು. ಇದರಲ್ಲಿ ಇಬ್ಬರು ಫೋಟೋಗ್ರಾಫರಗಳು ಆಕಸ್ಮಿಕವಾಗಿ ಉದ್ಯಾನವನವೊಂದರಲ್ಲಿ ಫೋಟೋಗಳನ್ನು ತೆಗೆದು ಅವುಗಳನ್ನು ಎನ್‌ಲಾರ್ಜ್ ಮಾಡಿದಾಗ ಅದರಲ್ಲಿ ಮುಂಬಯಿಯ ಮುನ್ಸಿಪಾಲ್ ಕಮಿಶ್‌ನರ್ ಕೊಲೆಯಾಗಿರುವುದು ತಿಳಿಯುತ್ತದೆ. ಫೋಟೋ ತೆಗೆದ ಉದ್ಯಾನವನವನ್ನು ಆಂಟೋನಿಯೋನಿ ಪಾರ್ಕ್ ಎಂದೇ ಕರೆಯಲಾಗಿದೆ. ‘ಜಾನೆ ಭಿ ದೋ ಯಾರೋ’ಭಾರತೀಯ ರಾಜಕೀಯ, ನೌಕರಶಾಹಿ ಮತ್ತು ವರ್ತಮಾನ ಪತ್ರಿಕೆಯ ಕ್ಷೇತ್ರಗಳಲ್ಲಿದ್ದ ಭ್ರಷ್ಟಾಚಾರವನ್ನು ಪ್ರಧಾನ ವಸ್ತುವನ್ನಾಗಿಸಿಕೊಂಡಿತ್ತು. ಬ್ಲ್ಯಾಕ್ ಕಾಮಿಡಿ ಎಂದೇ ಹೆಸರಾದ ಈ ಸಿನಿಮಾ ಸಾಮಾಜಿಕ ವಿಡಂಬನೆಯನ್ನು ಗಂಭೀರವಾದ ಹಾಸ್ಯ ಶೈಲಿಯಲ್ಲಿ ನಿರೂಪಿಸಿತ್ತು. ನಾಸಿರುದ್ದೀನ್ ಶಾ, ಓಂ ಪುರಿ, ಸತೀಶ್ ಶಾ, ರವಿ ಬಿಸ್ವಾನಿ ಮೊದಲಾದವರು ನಟಿಸಿದ್ದ ಈ ಸಿನಿಮಾ ನಿರ್ದೇಶನಕ್ಕೆ ಕುಂದನ್ ಶಾ ಅವರು ಇಂದಿರಾ ಗಾಂಧಿ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದರು.

ಈ ಅಂಕಣದ ಹಿಂದಿನ ಬರೆಹಗಳು

ರೈಜ್ ದ ರೆಡ್ ಲ್ಯಾಂಟರ್ನ್: ದೃಶ್ಯದಲ್ಲಿ ಅರಳಿದ ದುರಂತ ಕಾವ್ಯ

ದಿ ಗಿಲ್ಟಿ: ವೀಕ್ಷಕರನ್ನು ಹುಡುಕಾಟದಲ್ಲಿ ತೊಡಗಿಸುವ ಸಿನಿಮಾ

ದೇರ್ ವಿಲ್ ಬಿ ಬ್ಲಡ್: ಸಂಪತ್ತಿನ ಲಾಲಸೆ ಹಾಗೂ ವ್ಯಕ್ತಿತ್ವದ ವಿನಾಶ

’ಕಿರಗೂರಿನ ಗಯ್ಯಾಳಿಗಳು: ಗಂಡು ಪ್ರಧಾನತೆಯ ನಿರಾಕರಣೆ ಹಾಗೂ ಮಹಿಳೆಯರ ಸಾಂಘಿಕ ಹೋರಾಟ’

’ದಿ ಪರ್‌ಸ್ಯೂಟ್ ಆಫ್ ಹ್ಯಾಪಿನೆಸ್: ಕಂಗೆಟ್ಟ ಬದುಕಿನಲ್ಲಿ ಮಗನಿಗೆ ಆಪ್ತಮಿತ್ರನಾಗುವ ಅಪ್ಪ’

ಮರಾಠಿ ಸಿನಿಮಾ ‘ನಟ ಸಮ್ರಾಟ್: ಮನುಷ್ಯ ಸಂಬಂಧದ ಬಿಕ್ಕಟ್ಟುಗಳ ಕತೆ’

ಜೆನ್ ದಾರ್ಶನಿಕತೆಯ ಸಿನಿಮಾ: ‘ಸ್ಪ್ರಿಂಗ್ ಸಮ್ಮರ್ ಫಾಲ್ ವಿಂಟರ್ ಅಂಡ್... ಸ್ಪ್ರಿಂಗ್’

ಡ್ರೀಮ್ಸ್: ಅಕಿರ ಕುರೋಸಾವನ ಭಗ್ನ ಹಾಗೂ ಸುಂದರ ಕನಸುಗಳ ಜಗತ್ತು

ಮಸಾನ್: ’ಸ್ಥಾಪಿತ ಮೌಲ್ಯಗಳ ದಾಟುವಿಕೆ’

ಟೇಸ್ಟ್ ಆಫ್ ಚೆರಿ: ‘ಮನುಷ್ಯನ ಒಂಟಿತನ ಮತ್ತು ದ್ವಂದ್ವಗಳ ತಾಕಲಾಟ’

MORE NEWS

ಅನಾಮಿಕರಾಗಿ ಉಳಿದ ಮಹಾನ್ ಗಾಯಕಿಯರು...

17-04-2021 ಬೆಂಗಳೂರು

ಉತ್ತರ-ದಕ್ಷಿಣ ಎಂಬ ಭೇದವಿಲ್ಲದೆ ಬಹುತೇಕ ಪ್ರತಿಭಾವಂತ ಕಲಾವಿದೆಯರ ಮಾಹಿತಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿಲ್ಲ ಎನ್ನು...

‘ಸೂಳ್ನುಡಿ’ಯಾಗಬೇಕಾದ ಮಾತು ‘ಸುಳ್ಳ...

15-04-2021 ಬೆಂಗಳೂರು

ಸ್ವಜನ-ಸ್ವಜಾತಿ ಪಕ್ಶಪಾತಿಯ ಇಂದಿನ ‘ಜಾತಿಶ್ರೀ’ ಸ್ವಾಮೀಜಿಗಳು ಜ್ಞಾನಯೋಗಿ ತತ್ವದ ಅರ್ಥವನ್ನೇ ನಾಶ ಮಾಡುತ...

ಬದುಕಿನ ಮುಜುಗರಗಳಿಗೆ ಹೊರದಾರಿ- ಸ್...

14-04-2021 ಬೆಂಗಳೂರು

ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ ...