ಬ್ರೆಕ್ಟ್‌ನ ’The Crutches’ - ಪರಾವಲಂಬಿ ಬದುಕಿಗೆ ಒಂದು ಪಾಠ

Date: 01-11-2022

Location: ಬೆಂಗಳೂರು


ಎಲ್ಲರಲ್ಲಿಯೂ ಒಂದೊಂದು ರೀತಿಯ ಹೆಳವತನ ಇದ್ದೇ ಇರುತ್ತದೆ. ಬುದ್ದಿ ಇದ್ದರೂ ವಿವೇಚನೆ ಮಾಡುವ ಶಕ್ತಿ ಇದ್ದಾಗಲೂ ಕೆಲವರು ಇತರರ ಮೇಲೆ ಅವಲಂಬಿತರಾಗಿರುತ್ತಾರೆ ಎನ್ನುತ್ತಾರೆ ಲೇಖಕಿ ನಾಗರೇಖ ಗಾಂವಕರ. ಅವರು ತಮ್ಮ ಪಶ್ಚಿಮಾಭಿಮುಖ ಅಂಕಣದಲ್ಲಿ ಬ್ರೆಕ್ಟ್‌ನ ಒಂದು ಕವಿತೆಯನ್ನು ವಿಶ್ಲೇಷಿಸಿದ್ದಾರೆ.

ಕೆಲವು ವಿಚಾರಗಳು ಅಷ್ಟು ಸುಲಭದಲ್ಲಿ ಅರ್ಥವಾಗುವುದಿಲ್ಲ. ಮತ್ತು ಇತರರರಿಗೂ ಸುಲಭವಾಗಿ ಅರ್ಥೈಸಲಾಗುವುದಿಲ್ಲ. ಅವು ಅನುಭವ ಮತ್ತು ಪಕ್ವತೆಯ ಮೂಲಕವೇ ಒಳಗಿಳಿಯುತ್ತವೆ. ನನ್ನಿಂದ ಸುಲಭ ಸಾಧ್ಯವೆನ್ನುವ ಕೆಲಸಗಳು ಕೆಲವೊಮ್ಮೆ ಅಸಾಧ್ಯವೆನ್ನಿಸಿಬಿಡುತ್ತವೆ. ಅಸಾಧ್ಯವೂ ಸಾಧ್ಯವಾಗಿಸುವ ಧೈರ್ಯ, ಛಲ ಒಮ್ಮಿಂದೊಮ್ಮೇಲೆ ಮೂಡಿ ಕ್ಷಣಾರ್ಧದಲ್ಲಿ ಸಿದ್ದಿಸಿಬಿಡುತ್ತದೆ. ವಿಸ್ಮಯ ಎನ್ನುವಂತೆ ನಡೆಯುವ ನಂಬಲೇಬೇಕಾದ ಘಟನೆಗಳು ಜಗತ್ತಿನ ಎಲ್ಲ ತತ್ವ ಸಿದ್ಧಾಂತಗಳನ್ನು, ವೈದ್ಯಕೀಯ ಪರಿ ಶೋಧನೆಗಳನ್ನು, ವಿಜ್ಞಾನದ ಆವಿಷ್ಕಾರಗಳನ್ನು ಮೀರಿ ಅತೀತವೆನಿಸುತ್ತವೆ. ಕೆಲವೊಮ್ಮೆ ಮನೋಬಲದ ಮುಂದೆ ಎಲ್ಲವೂ ಕುಬ್ಜವೆನಿಸಿಬಿಡುತ್ತದೆ.

“Disability need not be an obstacle to success” ಎನ್ನುತ್ತಾರೆ ಸ್ಟೀಫನ್ ಹಾಕಿಂಗ್. ಇಂತಹ ಸಾಧಕರ ಸಾಧನೆಗೆ ಅನುಕೂಲತೆಗಿಂತ ಪ್ರತಿಕೂಲಗಳು ಹೆಚ್ಚು ಸಹಕಾರಿಯಾಗಿರುವುದು ನಮ್ಮ ಕಣ್ಣ ಮುಂದಿದೆ. ಗಟ್ಟಿ ಮನಸ್ಸಿದ್ದರೆ ಛಲದ ಬಲ ಇದ್ದರೆ ಅಸಾಧ್ಯವೂ ಸಾಧ್ಯವಾಗುವುದು. ಇದಕ್ಕೆ ಸದೃಢವಾದ ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ಜರ್ಮನ್ ಕವಿ ಬರ್ಟೋಲ್ಟ್ ಬ್ರೆಕ್ಟ್ ಬರೆದ ಕವಿತೆ ’The Crutches’ ಓದಲೇಬೇಕಾದ ಕವಿತೆ. ಜೀವನದಲ್ಲಿ ಬಂದೊದಗುವ ಎಲ್ಲ ಅಡ್ಡಿ ಆತಂಕಗಳಿಂದ ನಿರಾಶಾವಾದಿಗಳಾಗಿ ಪರಾವಲಂಬಿಗಳಾಗಿ ಬದುಕುವ ನಾವೆಲ್ಲ ತಿಳಿದು ಮಾಡುವ ತಪ್ಪೆಂದರೆ ನನ್ನಿಂದ ಸಾಧ್ಯವಿಲ್ಲ ಎಂಬ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಮನುಷ್ಯನ ಮನಸ್ಸೇ ಆತನ ಸಕಲ ಉದ್ಧಾರಕ್ಕೂ, ನಾಶಕ್ಕೂ ಕಾರಣ. ಅದನ್ನೆ ಧ್ವನಿಸುವ ಕವಿತೆ ’The Crutches’. ಕವಿತೆ ಸ್ವಾವಲಂಬನೆಯ ಹಿರಿಮೆಯನ್ನು,, ಸ್ವಸಾಮರ್ಥದ ಮಹತ್ತನ್ನು, ಸಂಕಷ್ಟದ ದಿನಗಳನ್ನು ಮೀರಿ ನಡೆಯುವ ಮನೋಬಲದ ಅಗತ್ಯವನ್ನು ಪ್ರತಿಪಾದಿಸುತ್ತದೆ.

Seven years I could not walk a step
When i to the great physician came
He demanded: why the crutches?
And I told him: I am lame.

ಏಳು ವರ್ಷಗಳಿಂದ ಒಂದೆ ಒಂದು ಹೆಜ್ಜೆ ಎತ್ತಿಡಲಾಗದ ಹೆಳವನೊಬ್ಬನನ್ನು ನೋಡಲು ಬಂದ ವೈದ್ಯ ಆತನನ್ನು ಕೆÉೀಳುವ ಮೊದಲ ಪ್ರಶ್ನೆ. why the crutches? ನಮ್ಮನ್ನು ಪರಾವಲಂಬಿಗಳನ್ನಾಗಿಸುವುದು, ಸಾಮರ್ಥ್ಯಹೀನರನ್ನಾಗಿ ಮಾಡುವುದು ಅಸಹಾಯಕರನ್ನಾಗಿಸುವುದು ಈ ಸವಲತ್ತುಗಳು. ಇಂತಹ ಅಸಹಾಯಕತೆಯನ್ನೆ ಹೊದ್ದು ಕೂತ ನಿರೂಪಕ ತಾನು ಕುಂಟನೆಂದು ಪರಿಚಯಿಸಿಕೊಳ್ಳುತ್ತಾನೆ. ನಿರೂಪಕನ ಮನಸ್ಸಿನಲ್ಲಿ ನೆಲೆನಿಂತ ಆ ಸ್ಥಿತಿ ಆತನನ್ನು ಊರುಗೋಲಿನ ಅವಲಂಬಿಯನ್ನಾಗಿಸಿದೆ. ವೈದ್ಯ ಆತನ ಈ ಸ್ಥಿತಿಯನ್ನು ನೋಡಿ ಮರುಕಪಡುವ ಬದಲು ಕಠೋರವಾಗಿ ವರ್ತಿಸುತ್ತಾನೆ. ಹೆಳವನಾಗಲು ಆ ಊರುಗೋಲೆ ಕಾರಣ ಎಂದ ವೈದ್ಯ ಊರುಗೋಲನ್ನು ಬಳಸುವ ಬದಲು ನೆಲದ ಮೇಲೆ ಬಿದ್ದು ತೆವಳಿ ನಡೆಯುವಂತೆ ತಿಳಿಸುತ್ತಾನೆ.

If you are lame: it’s these contraptions
Fall then! Crawl across the floor

ಅಷ್ಟಕ್ಕೆ ಸುಮ್ಮನಾಗದೇ ‘ಮರಳಿ ಯತ್ನವ ಮಾಡು’ ಎನ್ನುತ್ತಾ, ವಿಕಟವಾಗಿ ನಗುತ್ತಾ, ಆ ಊರುಗೋಲನ್ನು ಮೆಟ್ಟಿ ತುಂಡರಿಸಿ ಬೆಂಕಿಗೆ ಎಸೆಯುತ್ತಾನೆ. ಆತನ ಆ ನಡೆ ಕ್ರೂರತೆಯನ್ನು ಬಿಂಬಿಸಬಹುದು. ಆದರೆ ವ್ಯಕ್ತಿಯೊಬ್ಬಲ್ಲಿ ಅಂತರ್ಗತವಾಗಿರುವ ಶಕ್ತಿಯ ಉದ್ದೀಪನಕ್ಕೆ ತೈಲವಾಗುತ್ತದೆ. ಅವಲಂಬನೆ ನಮ್ಮ ಸ್ವಸಾಮರ್ಥ್ಯವನ್ನು ಹೇಗೆ ಕುಂಠಿತಗೊಳಿಸುತ್ತದೆ ಎಂಬುದನ್ನು ಎತ್ತಿ ತೋರುತ್ತದೆ.

And he took my lovely crutches
Laughing with a fiend’s grimace
Broke them both across my back and
Threw them in the fire place.

ವೈದ್ಯನ ಕ್ರೂರ ವರ್ತನೆ ನಿರೂಪಕನ ಒಳಮನಸ್ಸನ್ನು ಬಡಿದೆಬ್ಬಿಸುತ್ತದೆ. ಅಂತರ್‌ ಶಕ್ತಿ ಸಂಚಯಗೊಳ್ಳುತ್ತದೆ. ತಾನು ಸಾಧ್ಯಮಾಡಿ ತೋರಿಸಬೇಕೆಂಬ ಛಲ ಮೂಡುತ್ತದೆ. ಅದು ಮುಂದೆ ಆತ ಊರುಗೋಲಿಲ್ಲದೇ ನಡೆಯುವ ತಾಕತ್ತನ್ನು ನೀಡುತ್ತದೆ. ನಗುವೊಂದೆ ತನ್ನನ್ನು ಗುಣಪಡಿಸಿತೆನ್ನುವ ಕವಿಯ ಸಕಾರಾತ್ಮಕ ನಿಲುವು ಹೇಗೆ ವ್ಯಕ್ತಿಯ ಪರಿವರ್ತನೆಗೆ ಕಾರಣವಾಗಬಲ್ಲದು ಎಂಬುದನ್ನು ನಿರೂಪಿಸುತ್ತದೆ. ಆದರೂ ಕೊನೆಯ ಎರಡು ಸಾಲುಗಳಲ್ಲಿ ಕವಿ ನೀಡುವ ಸಂದೇಶ ವಿಶಿಷ್ಟವಾದದ್ದು. ಗುಣಮುಖನಾದ ಕವಿಗೆ ಕೆಲವೊಮ್ಮೆ ಈ ಊರುಗೋಲು ಕಣ್ಣಿಗೆ ಬಿದ್ದರೆ ಅವನಿಗರಿವಿಲ್ಲದೆ ಆತ ಹೆಳವನಂತೆ ನಡೆಯತೊಡಗುತ್ತಾನೆ. ಇದು ಕೇವಲ ದೈಹಿಕ ನ್ಯೂನ್ಯತೆಯಲ್ಲ. ಮಾನಸಿಕ ನ್ಯೂನ್ಯತೆ ಕೂಡಾ ಹೌದು.

Well i’m cured now: I can walk
Cured by nothing more than laughter
Sometimes, though, when I see sticks
I walk worse for some hours after.

ನಿತ್ಯ ಜೀವನದಲ್ಲಿ ಇಂತಹ ಹತ್ತಾರು ಪ್ರಸಂಗಗಳು ಎದುರಾಗುತ್ತದೆ. ಎಲ್ಲರಲ್ಲಿಯೂ ಒಂದೊಂದು ರೀತಿಯ ಹೆಳವತನ ಇದ್ದೇ ಇರುತ್ತದೆ. ಬುದ್ದಿ ಇದ್ದರೂ ವಿವೇಚನೆ ಮಾಡುವ ಶಕ್ತಿ ಇದ್ದಾಗಲೂ ಕೆಲವರು ಇತರರ ಮೇಲೆ ಅವಲಂಬಿತರಾಗಿರುತ್ತಾರೆ. ಇನ್ನು ಕೆಲವರು ಕೆಲಸ ಮಾಡಬೇಕಾಗುವುದು ಎಂಬ ಕಾರಣಕ್ಕೆ ಇತರರನ್ನು ಆಶ್ರಯಿಸುವುದು, ಅಗತ್ಯವಾದದ್ದನ್ನು ಕಲಿಯದೇ ಇರುವುದು, ಆಲಸ್ಯಕ್ಕೆ ಖುದ್ದು ಒಗ್ಗಿಕೊಳ್ಳುವುದು ಇವೆಲ್ಲವೂ ಹೆಳವತನವೇ ಆಗಿವೆ. ಶಕ್ತಿ ಸಂಚಯ ಇದ್ದಾಗಲೂ ಮೂರ್ಖರಾಗುವ ನಾವೂ ನಿಜಕ್ಕೂ ಹೆಳವರೇ. ಹೆಳವನೆಂದರೆ ಯಾರು? ಎಲ್ಲ ಅಂಗಗಳು ಸರಿಯಾಗಿದ್ದಾಗಲೂ ಜೀವನದಲ್ಲಿ ಏನನ್ನೂ ಸಾಧಿಸದೇ ಬದುಕುವವನೇ ನಿಜವಾದ ಹೆಳವ ಎನ್ನುತ್ತಾರೆ ಅಸಾಧ್ಯವಾದದ್ದನ್ನು ಸಾಧಿಸಿದ ಡೇವಿಡ್ ಹಾರ್ಟಮೆನ್ ಎಂಬ ಕುರುಡ ವೈದ್ಯ. ಎಲ್ಲ ಸರಿಯಾಗಿದ್ದರೂ, ಇಲ್ಲದಿದ್ದರೂ, ಅತಿ ಅವಲಂಬನೆ ವ್ಯಕ್ತಿತ್ವಕ್ಕೆ ಮಾರಕ ಅಲ್ಲವೇ?

-ನಾಗರೇಖಾ ಗಾಂವಕರ

ಈ ಅಂಕಣದ ಹಿಂದಿನ ಬರಹಗಳು:
ಬದಲಾಗುವ ನೈತಿಕ ನಿಲುವುಗಳ ಕುರಿತು ಲಿಂಡಾ ಪ್ಯಾಸ್ಟನ್ ಬರೆದ ''ETHICS”
ಓ ಹೆನ್ರಿಯ “AFTER TWENTY YEARS” - ಪ್ರಯತ್ನಿಸಿದ್ದಲ್ಲಿ ಭೌತಿಕ ಚಹರೆ ಗುರುತಿಸಬಹುದು, ಆದರೆ ಸ್ವಭಾವ ಸ್ಥಿತಿ?
‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಜಲಾಲ್-ಅಲ್-ದಿನ್-ರೂಮಿಯ FOREST AND RIVER - ಅಸ್ತಿತ್ವದ ವೈರುದ್ಧ್ಯಗಳು
ಸಿಲ್ವಿಯಾ ಪ್ಲಾತ್ ಮತ್ತು ಜೂಲಿಯಾ ಡಿ ಬರ್ಗೋಸ್ ಕವಿತೆಗಳು

‘THE HOUSE BY THE SIDE OF THE ROAD’ - ಸಾಮಾನ್ಯ ಬದುಕಿನ ಅಸಾಮಾನ್ಯ ಸಂದೇಶಗಳು
ಗ್ಯಾಬ್ರಿಯಲ್ ಒಕಾರಾನ ’ONCE UPON A TIME’ : ಮುಖವಾಡದ ಜೊತೆ ಮುಖಾಮುಖಿ
ಆಕಸ್ಮಿಕಗಳನ್ನು ತೆರೆಯುವ ‘ದಿ ಗ್ರೀನ್ ಡೋರ್’

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...