ಭೃತ್ಯಾಚಾರ​​​​​​​

Date: 30-12-2022

Location: ಬೆಂಗಳೂರು


“ಬಸವಣ್ಣವನರ ಈ ವಚನದಲ್ಲಿ ಭೃತ್ಯಾಚಾರದ ಮಹತ್ವವನ್ನು ಹೇಳಲಾಗಿದೆ. ಅರಸರ ಮನೆಯಲ್ಲಿ ಅರಸಿಯಾಗಿದ್ದರೂ ಸ್ವತಂತ್ರವಿರುವುದಿಲ್ಲ. ಅರಸನ ಆಜ್ಞೆಯಂತೆ ನಡೆಯಬೇಕಾಗುತ್ತದೆ. ಆದರೆ ಭಕ್ತರ ಮನೆಯ ತೊತ್ತಾದರೆ ಕರೆದು ಗೌರವಿಸುತ್ತಾರೆ. ಭಕ್ತರ ಸೇವೆ ಮಾಡಿದರೆ, ಕೃತಜ್ಞತೆ ಸಲ್ಲಿಸುತ್ತಾರೆ. ವ್ಯಕ್ತಿಗೆ ಎಲ್ಲಿ ಗೌರವ ಸಿಗುತ್ತದೆಯೋ ಅಲ್ಲಿ ಸೇವೆ ಸಲ್ಲಿಸಬೇಕೆಂದು ಬಸವಣ್ಣನವರು ತಿಳಿಸಿದ್ದಾರೆ” ಎನ್ನುತ್ತಾರೆ ಲೇಖಕ ಬಸವರಾಜ ಸಬರದ. ಅವರು ತಮ್ಮ ಶರಣರ ಧಾರ್ಮಿಕ ಸಿದ್ಧಾಂತಗಳು ಅಂಕಣದಲ್ಲಿ ‘ಭೃತ್ಯಾಚಾರ’ದ ಪರಿಕಲ್ಪನೆಯನ್ನು ಚರ್ಚಿಸಿದ್ದಾರೆ...

ಭೃತ್ಯಾಚಾರ ವಿನಯದ ಸಂಕೇತವಾಗಿದೆಯೇ ಹೊರತು, ವಿಧೇಯತೆಯ ಗುಲಾಮಗಿರಿಯಲ್ಲ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ವೆಂಬ ಶರಣರ ನುಡಿ ವಿನಯದ ನುಡಿಯೇ ಹೊರತು, ಅದು ಕೀಳರಿಮೆಯ ಸಂಕೇತವಲ್ಲ. ಅಹಂಕಾರದ ನಿರಸನವೇ ಭೃತ್ಯಾಚಾರವಾಗಿದೆ. ಮನುಷ್ಯ ಈ ಸಮಾಜವ್ಯವಸ್ಥೆಯ ನಾಗರಿಕನಾಗಿರುವಂತೆ, ಸೇವಕನೂ ಆಗಿದ್ದಾನೆ. ದೇಶಸೇವೆಯೇ ಭೃತ್ಯಾಚಾರವೆನಿಸುತ್ತದೆ. ಸಮಾಜಸೇವೆ ಮಾಡುವದು, ಶರಣರಲ್ಲಿ ವಿನಯದಿಂದಿರುವುದು ಇವು ಭೃತ್ಯಾಚಾರದ ಲಕ್ಷಣಗಳಾಗಿವೆ. ಸಮಾಜದಲ್ಲಿ ಕಸಗುಡಿಸುವವರಿಗೆ, ಊರನ್ನು ಸ್ವಚ್ಛಗೊಳಿಸುವವರಿಗೆ, ವಯಸ್ಸಾದವರಿಗೆ,ಅಂಗವಿಕಲರಿಗೆ, ಮಕ್ಕಳಿಗೆ ಸಹಾಯ ಮಾಡುವವರು ನಿಜವಾದ ಭೃತ್ಯಾಚಾರಿಗಳಾಗಿದ್ದಾರೆ. ಹೀಗಾಗಿ ಶರಣರ ಪ್ರಕಾರ ಭೃತ್ಯಾಚಾರವೆಂಬುದು ಕೀಳರಿಮೆಯ ಸಂಕೇತವಾಗಿರದೆ, ಸೇವಕನೆಂಬ ಹಿಯ್ಯಾಳಿಕೆಯಾಗಿರದೆ, ಅದು ಜೀವನದ ಸರ್ವಶ್ರೇಷ್ಠ ಮೌಲ್ಯವಾಗಿದೆ.

ಭಕ್ತ ಭಕ್ತನ ಮನೆಗೆ ಬಂದಡೆ, ಭೃತ್ಯಾಚಾರವ ಮಾಡಬೇಕೆಂದು ಹೇಳಿರುವ ಬಸವಣ್ಣನವರು, ಸದುವಿನಯವೇ ಸದಾಶಿವನ ಒಲಿಸುವ ದಾರಿಯಯ್ಯ ಎಂದು ತಿಳಿಸಿದ್ದಾರೆ. ಸತ್ಯ ಸದಾಚಾರ ಸಂಬಂಧವಾದ ಭೃತ್ಯಾಚಾರ ಎನಗಿಲ್ಲವಯ್ಯಾ ಎಂದು ಹೇಳುವುದರ ಮೂಲಕ ಆತ್ಮಶೋಧನೆಗೆ ತೊಡಗಿದ್ದಾರೆ. ಅಹಂಕಾರವೇ ಭೃತ್ಯಾಚಾರದ ವೈರಿಯೆಂದು ಹೇಳಿದ್ದಾರೆ.

“ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ,
ಭಕ್ತರ ಮನೆಯ ತೊತ್ತಾಗಿಪ್ಪುದು ಕರಲೇಸಯ್ಯಾ,
ತಾರೌ ಅಗ್ಛವಣ , ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ” ಎಂಬುದು.....”
-ಬಸವಣ್ಣ(ಸ.ವ.ಸಂ.1.ವ:356)

ಬಸವಣ್ಣವನರ ಈ ವಚನದಲ್ಲಿ ಭೃತ್ಯಾಚಾರದ ಮಹತ್ವವನ್ನು ಹೇಳಲಾಗಿದೆ. ಅರಸರ ಮನೆಯಲ್ಲಿ ಅರಸಿಯಾಗಿದ್ದರೂ ಸ್ವತಂತ್ರವಿರುವುದಿಲ್ಲ. ಅರಸನ ಆಜ್ಞೆಯಂತೆ ನಡೆಯಬೇಕಾಗುತ್ತದೆ. ಆದರೆ ಭಕ್ತರ ಮನೆಯ ತೊತ್ತಾದರೆ ಕರೆದು ಗೌರವಿಸುತ್ತಾರೆ. ಭಕ್ತರ ಸೇವೆ ಮಾಡಿದರೆ, ಕೃತಜ್ಞತೆ ಸಲ್ಲಿಸುತ್ತಾರೆ. ವ್ಯಕ್ತಿಗೆ ಎಲ್ಲಿ ಗೌರವ ಸಿಗುತ್ತದೆಯೋ ಅಲ್ಲಿ ಸೇವೆ ಸಲ್ಲಿಸಬೇಕೆಂದು ಬಸವಣ್ಣನವರು ತಿಳಿಸಿದ್ದಾರೆ.

“..........ಬಂದ ಜಂಗಮದ ಇಂಗಿತವನರಿದು
ಇದಿರೆದ್ದು ವಂದಿಸಿ ಕೈ ಮುಗಿದು ಕಿಂಕಿಲನಾಗಿ
ಭಯಭೀತಿ ಬೃತ್ಯಾಚಾರವಾಗಿ ಇರಬಲ್ಲಡೆ ಅದು ಭಕ್ತಿ!
ಬಂದವರಾರೆಂದರಿಯದೆ, ನಿಂದ ನಿಲವನರಿಯದೆ
ಕೆಮ್ಮನೆ ಅಹಂಕಾರವ ಹೊತ್ತು ಕೊಂಡಿಪ್ಪವರ
ನಮ್ಮ ಗುಹೇಶ್ವರ ಲಿಂಗನೊಲ್ಲ ನೋಡಾ!
-ಅಲ್ಲಮಪ್ರಭು(ಸ.ವ.ಸಂ.2,ವ:1308)

ಈ ವಚನದಲ್ಲಿ ಅಲ್ಲಮಪ್ರಭು ಬಹು ಮಹತ್ವದ ಮಾತನ್ನು ಹೇಳಿದ್ದಾರೆ. ಚಲನಶೀಲವಾದ ಜಂಗಮನಿಗೆ ಭೃತ್ಯನಾಗಿರಬೇಕೇ ಹೊರತು, ಆಳರಸರಿಗೆ ಧನಿಕರಿಗೆ ಅಲ್ಲವೆಂದು ತಿಳಿಸಿದ್ದಾರೆ.ಬಂದವರಾರೆಂದು ತಿಳಿಯದೆ ಅಹಂಕಾರ ತೋರಿಸಿದರೆ ಅವರು ಭಕ್ತರಲ್ಲವೆಂದು ಪ್ರಭು ಸ್ಪಷ್ಟಪಡಿಸಿದ್ದಾರೆ. ಭೃತ್ಯಾಚಾರಿಯಾಗಿರಬೇಕಾದುದು ಗುರು-ಹಿರಿಯರಿಗೇ ಹೊರತು ಅರಸರು-ಧನಿಕರಿಗಲ್ಲವೆಂದು ಹೇಳಿರುವ ಮಾತು ತುಂಬ ಮುಖ್ಯವಾಗಿದೆ. ಶರಣರ ಕೂಡ ಅಹಂಕಾರ ಸಲ್ಲದೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಭೃತ್ಯಾಚಾರ, ಸಮಯಭಕ್ತಿ, ಸಂಗನಬಸವಣ್ಣನೊಡನೆ ಹೋಯಿತೆಂದು ಚೆನ್ನಬಸವಣ್ಣ ಹೇಳಿದ್ದಾರೆ. ನಿಜವಾದ ಭೃತ್ಯಾಚಾರಿಯಾರೆಂದರೆ ಬಸವಣ್ಣನವರೆಂದು ಚೆನ್ನಬಸವಣ್ಣ ಸ್ಪಷ್ಟಪಡಿಸಿದ್ದಾರೆ. ಭೃತ್ಯಾಚಾರವಿರದಿದ್ದರೆ ಪಾದೋದಕ ನೀರಾಗುತ್ತದೆ, ಪ್ರಸಾದ-ಕೂಳಾಗುತ್ತದೆ. ಆದುದರಿಂದ ಭಕ್ತಿಯಲ್ಲಿ ಭೃತ್ಯಾಚಾರವಿರಬೇಕೆಂದು ತಿಳಿಸಿದ್ದಾರೆ. ‘ನಾನೆಂಬುದೇ ಅಹಂಕಾರ, ನೀನೆಂಬುದೇ ಭೃತ್ಯಾಚಾರ’ವೆಂದು ಹೇಳಿರುವ ಸಿದ್ಧರಾಮ ತಮ್ಮ ವಚನಗಳಲ್ಲಿ ಭೃತ್ಯಾಚಾರ ಕುರಿತು ಸರಳ ಮಾತುಗಳಲ್ಲಿ ತಿಳಿಸಿ ಹೇಳಿದ್ದಾರೆ.

“ವಂಚಿಸುವ ಸತಿಸುತ ಬಂಧು ಮೊದಲಾದ ಲೋಕವ ನಂಬಿ
ನಿರ್ವಂಚಕರಪ್ಪ ಗುರುಲಿಂಗ ಜಂಗಮರ ವಂಚಿಸಿ
ನರಕಕ್ಕಿಳಿವರನೇನೆಂಬೆನಯ್ಯಾ? ಅಕಟಕಟಾ,
ಈ ಹೀಂಗೆ ಶಿವಾಚಾರ? ಈ ಹೀಂಗೆ ಭೃತ್ಯಾಚಾರ?
ಭಕ್ತಿ ಮುಕ್ತಿಯನರಿಯದೆ ಹೋದರು.......”
-ಉರಿಲಿಂಗಪೆದ್ದಿ(ಸ.ವ.ಸಂ.6,ವ;1535)

ಈ ವಚನದಲ್ಲಿ ಉರಿಲಿಂಗಪೆದ್ದಿ ಯಾವುದು ಶಿವಾಚಾರ, ಯಾವುದು ಭೃತ್ಯಾಚಾರವೆಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ವ್ಯವಸ್ಥೆಯಲ್ಲಿ ವಂಚಿಸುವವರಿದ್ದಾರೆ, ನಿರ್ವಂಚಕರಿದ್ದಾರೆ. ವಂಚಿಸುವವರ ಹತ್ತಿರ ಭೃತ್ಯಾಚಾರ ತೋರಿಸದೆ ನಿರ್ವಂಚಕರಲ್ಲಿ, ಪ್ರಾಮಾಣ ಕರಲ್ಲಿ, ಶಿವಶರಣರಲ್ಲಿ ಗುರು-ಲಿಂಗ-ಜಂಗಮರಲ್ಲಿ ಭೃತ್ಯಾಚಾರಿಯಾಗಿರಬೇಕೆಂದು ಹೇಳಿದ್ದಾರೆ.

“ಎತ್ತಪ್ಪೆ ಶರಣರಿಗೆ, ತೊತ್ತಪ್ಪೆ ಶರಣರಿಗೆ
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲ ಕಾಯ್ದಿಪ್ಪ ಸೂಭಗನಪ್ಪೆ
ಕರ್ತಾರ! ನಿನಗೆ ಕರವೆತ್ತಿ ಹೊರವಡುವ
ಭಕ್ತರ ಮನೆಯ ಹಿತ್ತಲ ಬೇಲಿಯಾಗಿಪ್ಪೆನಯ್ಯಾ, ರಾಮನಾಥ!”
-ಜೇಡರ ದಾಸಿಮಯ್ಯ(ಸ.ವ.ಸಂ.7,ವ:754)

ಈ ವಚನದಲ್ಲಿ ಜೇಡರ ದಾಸಿಮಯ್ಯನವರು ಯಾರಿಗೆ ಭೃತ್ಯನಾಗಬೇಕೆಂದು ಹೇಳಿದ್ದಾರೆ? ಶರಣರಿಗೆ ಭೃತ್ಯನಾಗಬೇಕು. ಏಕೆಂದರೆ ಶಿವನೇ ಸದ್ಭಕ್ತರ ಮನೆಯ ಬಾಗಿಲ ಕಾಯ್ದಿದ್ದಾನೆ. ಅಂತಹ ಭಕ್ತರ ಮನೆಯ ಹಿತ್ತಲ ಬೇಲಿಯಾಗುವೆನಯ್ಯಾ ಎಂದು ತಿಳಿಸಿದ್ದಾರೆ. ಶಿವನೂ ಕೂಡ ಸದ್ಭಕ್ತರ ಕಡೆಗಿದ್ದಾನೆಯೇ ಹೊರತು ರಾಜ ಮಹಾರಾಜರ ಪರವಾಗಿಲ್ಲ. ಇಂತಹ ಉದಾಹರಣೆಗಳ ಮೂಲಕ ಶರಣರು ಭೃತ್ಯಾಚಾರವೇನೆಂಬುದನ್ನು ವಿವರಿಸಿದ್ದಾರೆ.

ಲಿಂಗಾಂಗಿಗಳಾದ ಶಿವಭಕ್ತರೇ ಮತ್ರ್ಯದಲ್ಲಿ ಶ್ರೇಷ್ಠರೆಂದು ಹೇಳಿರುವ ಅಕ್ಕಮಹಾದೇವಿ, ಅಂತಹ ನಿಜಲಿಂಗಾಂಗಿಗಳ ಚಮ್ಮಾವುಗೆ ಕಾಯ್ದಿಪ್ಪುದೇ ಭೃತ್ಯಾಚಾರವೆಂದು ಹೇಳಿದರೆ, ಭೃತ್ಯಾಚಾರವಳಿಯೆ ಭೃತ್ಯವನನುಭವಿಸಿದೆನೆಂದು ನೀಲಮ್ಮ ಹೇಳಿದ್ದಾರೆ. ಹೀಗೆ ಭೃತ್ಯಾಚಾರದ ಪರಿಕಲ್ಪನೆಯನ್ನು 12ನೇ ಶತಮಾನದ ವಚನಕಾರರು ಅನೇಕ ಉದಾಹರಣೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.

ತೌಲನಿಕ ವಿವೇಚನೆ

ಪಂಚಾಚಾರಗಳು ಒಂದಕ್ಕೊಂದು ಪೂರಕವಾಗಿದ್ದು, ಒಂದರ ಮೂಲಕ ಒಂದು ಬೆಳೆದು ನಿಲ್ಲುತ್ತವೆ. ಶರಣರು ಹೇಳಿರುವಂತೆ ಪಂಚಾಚಾರಗಳು ಭಕ್ತನ ಪ್ರಾಣವಾಗಿವೆ. ಪಂಚಾಚಾರಗಳನ್ನಾಚರಿಸುವುದರಿಂದ ವ್ಯಕ್ತಿ-ಶಕ್ತಿಯಾಗಿ ಬೆಳೆಯುತ್ತಾನೆ. ಭಕ್ತನಾದವನು ಶರಣನಾಗಿ ಕಾಣ ಸುತ್ತಾನೆ. ವಿಚಾರವಿಲ್ಲದ-ಆಚಾರವಿಲ್ಲದ ನಡೆಯಿಲ್ಲದ-ನುಡಿಸಲ್ಲದೆಂದು ಪಂಚಾಚಾರಗಳು ತಿಳಿಸುತ್ತವೆ.ಪಂಚಾಚಾರಗಳ ಒಟ್ಟು ಪರಿಣಾಮವನ್ನು ಕುರಿತು ವಚನಕಾರರು ತಮ್ಮ ವಚನಗಳಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಬಸವಣ್ಣನವರು ಪಂಚಾಚಾರಗಳ ವಿಷಯದಲ್ಲಿ ಚೆನ್ನಬಸವಣ್ಣನವರೇ ಪರಮಾರಾಧ್ಯರೆಂದು ಹೇಳಿದ್ದಾರೆ. ಪಂಚಾಚಾರ ಸ್ಥಲಗಳನ್ನು ಎನ್ನಲ್ಲಿ ನೆಲೆಗೊಳಿಸಿದಾತ ಚೆನ್ನಬಸವಣ್ಣನೆಂದು, ಬಸವಣ್ಣನವರು ತಿಳಿಸಿದ್ದಾರೆ.

ಶ್ರೀಗುರು ಕರುಣ ಸಿಕೊಟ್ಟ ಲಿಂಗ-ಜಂಗಮವಲ್ಲದೆ ಅನ್ಯದೈವಗಳನ್ನು ಅರ್ಚಿಸದಿಪ್ಪುದೇ ಲಿಂಗಾಚಾರ, ಸಕಲಜೀವಿಗಳನ್ನು ಸಮಾನತೆಯಿಂದ ಕಾಣುವುದೇ ಸದಾಚಾರವೆಂದು ಚೆನ್ನಬಸವಣ್ಣ ಹೇಳಿದ್ದಾರೆ. ಶಿವಲಾಂಛನಧಾರಿಗಳನ್ನು ಪರಶಿವಲಿಂಗವೆಂದು ಭಾವಿಸುವುದು ಶಿವಾಚಾರವಾದರೆ, ಅಷ್ಟಾವರಣಗಳನ್ನು ನಿಂದಿಸುವವರ ವಿರೋಧಿಸುವುದೇ ಗಣಾಚಾರ, ಭಕ್ತಗಣಂಗಳಲ್ಲಿ ವಿನಯದಿಂದಿರ್ಪುದೆ ಭೃತ್ಯಾಚಾರವೆಂದು ಚೆನ್ನಬಸವಣ್ಣ ತಿಳಿಸಿದ್ದಾರೆ.

“..........ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ,
ಸಜ್ಜನ ಕಾಯಕದಲ್ಲಿ ತಂದು, ಗುರು- ಲಿಂಗ-ಜಂಗಮಕ್ಕೆ ನೀಡಿ
ಸತ್ಯಶುದ್ದನಾಗಿಹುದೇ ಸದಾಚಾರ.
ಶಿವಭಕ್ತರಲ್ಲಿ ಕುಲಗೋತ್ರ ಜಾತಿ ವರ್ಣಾಶ್ರಯವನರಂಸದೆ
ಅವರೊಕ್ಕುದ ಕೊಂಬುದೆ ಶಿವಾಚಾರ,
ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ
ಶಿವಶರಣರೆ ಹಿರಿಯರಾಗಿ, ತಾನೆ ಕಿರಿಯನಾಗಿ,
ಭಕ್ತಿಯಿಂದಾಚರಿಸುವುದೇ ಭೃತ್ಯಾಚಾರ........”
- ಚೆನ್ನಬಸವಣ್ಣ(ಸ.ವ.ಸಂ.3, ವ:1611)

ಹೀಗೆ ಚೆನ್ನಬಸವಣ್ಣನವರು ಈ ವಚನದಲ್ಲಿ ಪಂಚಾಚಾರದ ಗುಣಲಕ್ಷಣಗಳನ್ನು ಸಂಕ್ಷಿಪ್ತವಾಗಿ ಮತ್ತು ಸ್ಪಷ್ಟವಾಗಿ ತಿಳಿಸಿದ್ದಾರೆ. ಲಿಂಗವಂತನಾದವನು ಲಿಂಗಾಚಾರಿ-ಸದಾಚಾರಿ-ಭೃತ್ಯಾಚಾರಿಯಾಗಿ ಲಿಂಗವನೊಲಿಸಬೇಕೆಂದು ಉರಿಲಿಂಗಪೆದ್ದಿಗಳು ಹೇಳಿದ್ದಾರೆ. ಪಂಚಾಚಾರ ಶುದ್ಧವಾಗಿ ನಡೆವಾತನೆ ಎನಗೆ ಸದ್ಗುರು ಮೂರ್ತಿಯೆಂದು ಏಲೇಶ್ವರ ಕೇತಯ್ಯ ತಿಳಿಸಿದ್ದಾರೆ.

‘ಗುರು-ಲಿಂಗ-ಜಂಗಮವೆಂದು ಭೇದವ ಮಾಡಿದರೆ ಪಂಚಾಚಾರಗಳಿಗೆ ಹೊರಗು’-ಎಂದು ಅರಿವಿನ ಮಾರಿತಂದೆ ಹೇಳಿದರೆ; ಪಂಚಾಚಾರವೇ ಪ್ರಾಣವಾಗಿ,ಅಷ್ಟಾವರಣವೇ ಅಂಗವಾಗಿ, ಸದ್ಭಕ್ತಿಯೇ ಮುಕ್ತಿ ಮಂದಿರವಾಯಿತೆಂದು ಮಡಿವಾಳ ಮಾಚಿದೇವರು ತಿಳಿಸಿದ್ದಾರೆ. ಭಕ್ತನಾಗಿದ್ದಲ್ಲಿ ಪಂಚಾಚಾರ ಶುದ್ಧಕ್ಕೆ ನಿರತನಾಗಿರಬೇಕೆಂದು ಶಿವಲೆಂಕ ಮಂಚಣ್ಣನವರು ಹೇಳಿದ್ದಾರೆ.

“ಭವಿಯಾಚಾರವ ಬಿಡದೆ ಭಯಾಗರವ ಹೊಗದೆ
ಶಿವಾಚಾರದಲ್ಲಿ ನಡೆವ ನಾಯಿಗಳು ಬರಿದೆ ತಾವು ಶಿವಾಚಾರಿಗಳೆಂದರೆ
ನಮ್ಮ ಶಿವಾಚಾರಿ ಶರಣ ಬಸವಣ್ಣ ಮೆಚ್ಚ ನೋಡಯ್ಯ
ಶಿವಾಚಾರದ ವಿಸ್ತಾರವನು ನಮ್ಮ ಶರಣ ಬಸವಣ್ಣ ಬಲ್ಲನಲ್ಲದೆ
ಉದರವ ಹೊರೆವ ವೇಷಾಧಾರಿಗಳೆತ್ತ ಬಲ್ಲರಯ್ಯ.”
-ಅಕ್ಕಮಹಾದೇವಿ(ಸ.ವ.ಸಂ.5,ವ:314)

ಭವಿತನವ ಬಿಡದೆ ಭಕ್ತನಾಗಲಾರನೆಂದು ಹೇಳಿರುವ ಅಕ್ಕಮಹಾದೇವಿ, ಶಿವಾಚಾರದ ವಿಸ್ತಾರವನ್ನು ಬಸವಣ್ಣ ಮಾತ್ರಬಲ್ಲನಲ್ಲದೆ, ವೇಷಾಧಾರಿಗಳೆತ್ತ ಬಲ್ಲರೆಂದು ವಿಡಂಬಿಸಿದ್ದಾರೆ. ‘ರಸ, ಗಂಧ, ರೂಪು, ಶಬ್ದ, ಸ್ಪರ್ಷವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿಯಬೇಕೆಂದು” ಅಕ್ಕಮ್ಮ ತಮ್ಮ ವಚನಗಳಲ್ಲಿ ವಿವರಿಸಿದ್ದಾರೆ.

“ಗುರುವನರಿದು ಲಿಂಗವನರಿದವರುಂಟು
ಲಿಂಗವನರಿದು ಜಂಗಮವನರಿದವರುಂಟು
ಪಂಚಾಚಾರವನರಿದು ಜಂಗಮವನರಿವವರುಂಟು.....
-ಮೋಳಿಗೆಮಹಾದೇವಿ(ಸ.ವ.ಸಂ.5,ವ:1166)

ಎಂದು ಹೇಳಿರುವ ಮೋಳಿಗೆಮಹಾದೇವಿ, ಗುರು-ಲಿಂಗ-ಜಂಗಮಕ್ಕೂ ಮತ್ತು ಪಂಚಾಚಾರಕ್ಕೂ ಗಾಢಸಂಬಂಧವಿದೆಯೆಂದು ಹೇಳಿದ್ದಾರೆ. ಹೀಗೆ ಅನೇಕ ವಚನಕಾರರು 12ನೇ ಶತಮಾನದಲ್ಲಿ ಮೊದಲ ಬಾರಿಗೆ ಪಂಚಾಚಾರಗಳನ್ನು ಕುರಿತು ವೈಜ್ಞಾನಿಕವಾಗಿ ಚಿಂತಿಸಿ, ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ. ಈ ಧರ್ಮದಲ್ಲಿ ಪಂಚಾಚಾರಗಳಿಗೆ ಮಹತ್ವದ ಸ್ಥಾನ ನೀಡಿದ್ದಾರೆ.

ಈ ಅಂಕಣದ ಹಿಂದಿನ ಬರಹಗಳು:
ಶಿವಾಚಾರ
ಅಷ್ಟಾವರಣಗಳಲ್ಲಿ ಮಂತ್ರ
ರುದ್ರಾಕ್ಷಿ ಮಹತ್ವ
ಶೈವಾಗಮಗಳಲ್ಲಿ ವಿಭೂತಿ
ಶರಣರ ಪರಿಕಲ್ಪನೆಯಲ್ಲಿ ಪ್ರಸಾದ
ಅಷ್ಟಾವರಣಗಳಲ್ಲಿ ಜಂಗಮ
ಅಷ್ಟಾವರಣಗಳಲ್ಲಿನ ಇಷ್ಟಲಿಂಗ ವಿಚಾರ
ಅಷ್ಟಾವರಣಗಳಲ್ಲಿ ಗುರು ಮತ್ತು ಲಿಂಗ
ಹೊಸ ದೃಷ್ಟಿಯುಳ್ಳ ಶರಣರ ತಾತ್ವಿಕ ನೆಲೆಗಳು
ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ ವಚನ ಚಳವಳಿ
ಹೆಣ್ಣು ಮಾಯೆಯಲ್ಲ… ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಹೆಣ್ಣಿನ ಸಮಾನತೆಗೆ ಮಿಡಿದ ವಚನ ಚಳವಳಿ
ಶರಣರ ಸಮಾನತೆ ಹಾದಿಯಲ್ಲಿ ಶ್ರಮಜೀವಿಗಳ ಸಮೂಹವೇ ಹಾಲಹಳ್ಳ
ಶರಣರ ಅಂತಃಕರಣದಲ್ಲಿ ಸಮ ಸಮಾಜದ ಕನಸು
ವಚನಕಾರರು ಮತ್ತು ಜಾತಿ ವಿರೋಧಿ ಹೋರಾಟ
ವರ್ಣವ್ಯವಸ್ಥೆಯ ವಿರುದ್ಧ ಶರಣರ ದನಿ
ಅಸಮಾನತೆಯ ವಿರುದ್ಧದ ಚಳವಳಿಯಾದ ಬಸವಧರ್ಮ
ಶರಣರ ದಾಸೋಹ ತತ್ವ - ಹಲವು ಆಯಾಮಗಳು
ಆಚಾರವೇ ಲಿಂಗವಾಗುವ,, ಅನುಭಾವವೇ ಜಂಗಮವಾಗುವ ನಿಜ ದಾಸೋಹ
ಶರಣರ ಪಾಲಿಗೆ ಕಡ್ಡಾಯ ಮಾತ್ರವಾಗಿರದೆ, ಕೈಲಾಸವೂ ಆಗಿದ್ದ ಕಾಯಕ
ಕಾಯಕವೇ ನಿಜ ವ್ರತವೆಂದು ನಂಬಿದ್ದ ಶರಣರು
ಶರಣರ ಕಾಲದ ಮನರಂಜನೆಯ ಕಾಯಕಗಳು
ಶರಣರ ಕಾಲದಲ್ಲಿ ಕಾಯಕಕ್ಕೆ ಬಂದ ಹೊಸ ಆಯಾಮ

ಎಲ್ಲರ ದುಡಿಮೆಗೂ ಗೌರವ ನೀಡಿದ್ದ ವಚನ ಚಳವಳಿ
ವೃತ್ತಿಪ್ರತಿಮೆಯು ಆಧ್ಯಾತ್ಮದ ಪರಿಭಾಷೆಯಾಗುವ ಪರಿ
ಶರಣರ ಕಾಯಕ ಮೀಮಾಂಸೆ: ಸಮಾನತೆಯೆಡೆಗಿನ ಅಸ್ತ್ರ
ಶರಣರ ಸಾಮಾಜಿಕ ಸಿದ್ಧಾಂತವಾದ ‘ಕಾಯಕ’ದ ಉದ್ದೇಶ
ಶರಣರ ಸಾಮಾಜಿಕ ಸಿದ್ಧಾಂತ ‘ಕಾಯಕ’ದ ಮಹತ್ವ
ಷಟ್‍ಸ್ಥಲಗಳ ರೂಪ-ಸ್ವರೂಪ
ಶರಣಧರ್ಮದಲ್ಲಿ ‘ಐಕ್ಯಸ್ಥಲ’ದ ಮಹತ್ವ

ಶರಣಧರ್ಮದಲ್ಲಿ ‘ಪ್ರಸಾದಿಸ್ಥಲ’ದ ಮಹತ್ವ
ಶರಣಧರ್ಮದಲ್ಲಿ ‘ಗಣಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಮಹೇಶ್ವರಸ್ಥಲ’
ಶರಣಧರ್ಮದಲ್ಲಿ ‘ಭಕ್ತಸ್ಥಲ’ ಮಹತ್ವ
ಶರಣಧರ್ಮದಲ್ಲಿ ‘ಷಟ್‍ ಸ್ಥಲಗಳ’ ಮಹತ್ವ
ಶರಣಧರ್ಮದಲ್ಲಿ ‘ಭೃತ್ಯಾಚಾರ’ದ ಮಹತ್ವ
ಶರಣಧರ್ಮದಲ್ಲಿ ‘ಶಿವಾಚಾರ’ದ ಮಹತ್ವ
ಶರಣಧರ್ಮದಲ್ಲಿ 'ಸದಾಚಾರ'ದ ಮಹತ್ವ
ಶರಣಧರ್ಮದ ಪ್ರಾಣ ಪಂಚಾಚಾರಗಳು
ಅಷ್ಟಾವರಣಗಳ ತೌಲನಿಕ ವಿವೇಚನೆ
ಅಷ್ಟಾವರಣಗಳಲ್ಲಿ ಪಾದೋದಕ, ಪ್ರಸಾದ ಹಾಗೂ ಮಂತ್ರಗಳ ಮಹತ್ವ
ಶರಣ ಧರ್ಮದ ತಾತ್ವಿಕ ನೆಲೆಗಳು
ಶರಣರ ದೇವಾಲಯ
ಶರಣರ ದೇವರು
ಶರಣರ ಧರ್ಮ
ಶರಣರ ವಚನಗಳಲ್ಲಿ ‘ಬಸವಧರ್ಮ’ದ ನೀತಿ ಸಂಹಿತೆಗಳು

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...