ಬುದ್ಧ ಅರಳಲಿ ಎಲ್ಲರಲಿ


ಚಿಂತಕ ಎಸ್. ನಟರಾಜ ಬೂದಾಳು ಅವರು ಬೌದ್ಧ ತಾತ್ವಿಕತೆಯ ಪ್ರಮುಖ ಪರಿಕಲ್ಪನೆಯಾದ ಮಧ್ಯಮಮಾರ್ಗದ ಸರಳ ನಿರೂಪಣೆ  ಇರುವ ಕೃತಿ ’ಮಧ್ಯಮಮಾರ್ಗ’. ಈ ಕೃತಿಗಾಗಿ ಬರೆದ ಪ್ರಸ್ತಾವನೆ ಇಲ್ಲಿದೆ -

ನಿಸರ್ಗದೊಂದಿಗೆ ನ್ಯಾಯವಾಗಿ ಬಾಳಲು ಅಗತ್ಯವಾದ ಅರಿವು

ಬುದ್ಧಗುರುವಿನ ತಾತ್ವಿಕತೆ ಕೇವಲ ಉಪದೇಶವಲ್ಲ. ಅದೊಂದು ಜೀವನ ಕ್ರಮ. ಲೋಕವನ್ನು ಸರಿಯಾಗಿ ಅರಿತು ಬಾಳಲು ಬೇಕಾದ ಅರಿವು.  ನಮ್ಮ ಜೀವನಕ್ರಮದಲ್ಲಿ ಈಗಾಗಲೇ ನೆಲೆಗೊಂಡಿರುವ ಕೇಡುಗಳನ್ನು ನಿವಾರಿಸಿಕೊಂಡು ಎಲ್ಲರೊಡನೆ ಮತ್ತು ನಿಸರ್ಗದೊಂದಿಗೆ ನ್ಯಾಯವಾಗಿ ಬಾಳಲು ಅಗತ್ಯವಾದ ಅರಿವು. ಅದು ಚಾಲ್ತಿಗೆ ಬಂದರೆ ಈವರೆಗೆ ತಮ್ಮದಲ್ಲದ  ಅನ್ಯಾಯದ ಪಾಲನ್ನು ಅನುಭವಿಸುತ್ತ ಬಂದವರೂ ನ್ಯಾಯವಾಗಿ ಬಾಳಬೇಕಾಗುತ್ತದೆ. ಎಲ್ಲರೂ ಸರಿಯಾಗಿ ಬಾಳುವಂತಾದರೆ ಇಂತಹ ಪುಸ್ತಕವೊಂದರ ಅಗತ್ಯವೇ ಇರುವುದಿಲ್ಲ. ಆದರೆ ನ್ಯಾಯವಾಗಿ ಬಾಳಲು ಸಿದ್ಧರಿಲ್ಲದವರು ಹೊಸ ಹೊಸ ಕೇಡುಗಳನ್ನು ತಂದು ಸುರಿಯುತ್ತಲೇ ಇರುತ್ತಾರೆ ಮತ್ತು ಎಲ್ಲರೂ ಅವುಗಳನ್ನು ಒಪ್ಪಿಕೊಳ್ಳುವಂತೆ ಮಾಡಲು ಸಮೂಹದ ಯೋಚನಾಕ್ರಮವನ್ನೇ ತಿರುಚುತ್ತಾರೆ.  ಸಮೂಹದ ಬದುಕಿನಲ್ಲಿ ನೆಲೆಗೊಂಡಿರುವ ಕೇಡುಗಳು   ತಾವಾಗಿ ಬಂದವುಗಳಲ್ಲ; ಬದಲಿಗೆ  ಹೊರಗಿನಿಂದ ತಂದು ಸುರಿದು ಅವೇ ಸರಿ ಎಂದು ಒಪ್ಪಿಸಿದ್ದು. ಇಂತಹ ಕೆಡುಕುಗಳ ಸಾಧಕ ಬಾಧಕಗಳನ್ನು ನಮ್ಮ ಅರಿವಿಗೆ ತಂದುಕೊಡುವ ಕೆಲಸವನ್ನು ಅನೇಕ ಚಿಂತನಾಪ್ರಸ್ಥಾನಗಳು ಮಾಡಿವೆ, ಮಾಡುತ್ತಿವೆ. ಅವುಗಳಲ್ಲಿ ಬೌದ್ಧ ಧರ್ಮ, ವಿಜ್ಞಾನ ಮತ್ತು ಪ್ರಜಾಪ್ರಭುತ್ವ ಮುಖ್ಯವಾದವುಗಳು. 
 
 
ಬುದ್ಧಗುರುವು ತಿಳಿಸಿಕೊಟ್ಟ ಅರಿವಿನ ದಾರಿ ಎಲ್ಲರಿಗೂ ತೆರೆದಿದೆ. ಅದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅದು ನಿಸರ್ಗಸಹಜವಾಗಿ ಬದುಕುವ ಕ್ರಮ. ಅದರಲ್ಲಿ ಗುಟ್ಟಿನ ಸಂಗತಿಯಾಗಲೀ, ಕಠಿಣ ಸಂಗತಿಗಳಾಗಲೀ ಇಲ್ಲ. ಅದನ್ನು ವಿದ್ವಾಂಸರಿಂದಲೇ, ಪುಸ್ತಕಗಳಿಂದಲೇ ತಿಳಿಯಬೇಕಿಲ್ಲ. ಯಾರಿಗೂ ಕೇಡು ಮಾಡದೆ ಬಾಳ ಬಯಸುವ ಎಲ್ಲ ಅನ್ನ ತಿನ್ನುವ ಮನುಷ್ಯರಿಗೆ ಹೊಳೆಯುವ ನಿಸರ್ಗವಿವೇಕ. ಅದನ್ನು ಕಳೆದುಕೊಳ್ಳದೆ ಬಾಳಬೇಕು ಅಷ್ಟೆ. ಬೌದ್ಧ ಮಹಾಸಿದ್ಧನಾದ ಸರಹಪಾದನು ಬುದ್ಧಧರ್ಮವನ್ನು ಕಮ್ಮಾರಿಕೆ ಕೆಲಸದ ಮೂಲಕ ಅರಿತುಕೊಂಡೆ ಎನ್ನುತ್ತಾನೆ! ಹಾಗಾಗಿ ಬುದ್ಧ ಸತ್ವವೆನ್ನುವುದು ಎಲ್ಲರಲ್ಲಿ ಈಗಾಗಲೇ ಇದೆ. ಅದನ್ನು ಅನಾವರಣ ಮಾಡುವ ಕೆಲಸವಷ್ಟೆ ನಾವು ಮಾಡಬೇಕಾಗಿರುವುದು. 
 
ಬೌದ್ಧ ತಾತ್ವಿಕತೆಯ ಪ್ರಮುಖ ಸಂಗತಿಗಳಾದ ಅನಾತ್ಮ, ಅನಿತ್ಯ, ಪ್ರತೀತ್ಯ ಸಮುತ್ಪಾದ ಮತ್ತು ದುಃಖಗಳನ್ನು ಕುರಿತಾದ ಎರಡು ಲೇಖನಗಳನ್ನು ಈ ಪುಟ್ಟ ಹೊತ್ತಗೆಯಲ್ಲಿ ಕೊಡಲಾಗಿದೆ. ಈ ಪದಗಳನ್ನು ಓದಿ ಗಾಬರಿಯಾಗುವ ಅಗತ್ಯವಿಲ್ಲ. ಈ ಲೋಕದಲ್ಲಿರುವ ಎಲ್ಲವೂ ಅನೇಕ ಅಂಶಗಳನ್ನು ಜೊತೆಮಾಡುವುದರಿಂದ ಉಂಟಾಗುತ್ತವೆ ಎಂಬುದನ್ನು ಪ್ರತೀತ್ಯ ಸಮುತ್ಪಾದವೆನ್ನುತ್ತಾರೆ. ಹೀಗೆ ಉಂಟಾದ ಸಂಗತಿಗಳಲ್ಲಿ ಅದರದ್ದೇ ಆದ ಸ್ವಂತದ್ದು ಎನ್ನುವುದು ಏನೂ ಇಲ್ಲ ಎನ್ನುವುದನ್ನು ಅನಾತ್ಮ ಎಂದೂ, ಎಲ್ಲವೂ ಯಾವಾಗಲೂ ಬದಲಾಗುತ್ತಲೇ ಇರುತ್ತವೆ ಎನ್ನುವುದನ್ನು ಅನಿತ್ಯ ಎಂದೂ ಸೂಚಿಸುತ್ತಾರೆ. ಇದು ಲೋಕವನ್ನು ನೋಡುವ ಕ್ರಮ. ಇದನ್ನು ಬುದ್ಧಗುರು ಮತ್ತು ವಿಜ್ಞಾನ ತಿಳಿಸಿಕೊಟ್ಟಿವೆ. ಬೇರೆ ಯಾವ ಧರ್ಮವೂ ತಾನು ತಿಳಿಸುತ್ತಿರುವುದನ್ನು ವಿಜ್ಞಾನವೂ ತಿಳಿಸಿದೆ ಎಂದು ಹೇಳಲಾರದು. ಅದು ಸಾಧ್ಯವಿರುವುದು ಬೌದ್ಧ ಧರ್ಮಕ್ಕೆ ಮಾತ್ರ. 
 
 
ನಾವು ಪ್ರಜಾಪ್ರಭುತ್ವದಲ್ಲಿ ಬಾಳುತ್ತಿದ್ದೇವೆ. ಅಷ್ಟರ ಮಟ್ಟಿಗೆ ನಾವು ‘ಪುಣ್ಯವಂತರೆಂದೇ’ ಹೇಳಬೇಕು.  ಪ್ರಜಾಸತ್ತೆ, ವೈಜ್ಞಾನಿಕ ದೃಷ್ಟಿಕೋನ ಮತ್ತು ಬೌದ್ಧಧರ್ಮ ಪರಸ್ಪರ ಸಂಬಂಧದಲ್ಲಿ ಉಂಟಾಗುವ ಸಂಗತಿಗಳು. ಇವುಗಳಲ್ಲಿ ಯಾವುದನ್ನು ಕಳೆದುಕೊಂಡರೂ ಸಾವಿರಾರು ವರುಷಗಳ ಹಿಂದೆ ಇದ್ದ ಪೈಶಾಚಿಕ ಯುಗಕ್ಕೆ ಹೋಗುತ್ತೇವೆ. ಅಮೂಲ್ಯವಾದ ಈ ವಿವೇಕವನ್ನು ನಾವು ತುಂಬಾ ಎಚ್ಚರದಿಂದ ಉಳಿಸಿಕೊಳ್ಳಬೇಕಾಗಿದೆ. ಈ ಎಚ್ಚರವೇ ಬುದ್ಧ ತಿಳಿಸಿಕೊಟ್ಟಿರುವ ಮತ್ತು ಎಲ್ಲರ ಬದುಕಿನಲ್ಲೂ ಆಗಬೇಕಾದ “ಜ್ಞಾನೋದಯವಾಗಿದೆ”.  ಬೆನ್ನುಡಿಯ ಗೆಳೆಯ ಪದ್ಮಾಲಯ ನಾಗರಾಜ್ ಮತ್ತು ಈ ಬುದ್ಧನಡೆಯನ್ನು ನಿಮ್ಮ ಮುಂದಿಟ್ಟ ಪಲ್ಲವ ವೆಂಕಟೇಶ್ ಅವರಿಗೆ ಶರಣು. 

ಬೌದ್ಧ ತಾತ್ವಿಕತೆಯನ್ನು ಸರಳವಾಗಿ ಎಲ್ಲರೊಡನೆ ಹಂಚಿಕೊಳ್ಳುವುದು ಈ ಸರಣಿ  ಪುಸ್ತಕಗಳ ಉದ್ದೇಶ. ಬೃಹತ್ತಾದ ಗ್ರಂಥಗಳನ್ನು ಅಧ್ಯಯನ ಮಾಡಿ ಬೌದ್ಧ ದರ್ಶನವನ್ನು ಅರಿತುಕೊಳ್ಳುವವರ ದಾರಿ ಬೇರೆ. ಅದನ್ನು ಎಲ್ಲರಿಂದಲೂ ನಿರೀಕ್ಷಿಸಲು ಆಗದು. ಆದರೆ ಬುದ್ಧ ಸತ್ವ  ಎಲ್ಲರಲ್ಲಿಯೂ ಇದೆ ಎನ್ನುವುದನ್ನು ಯಾರೂ ನಿರಾಕರಿಸಲಾರರು. ಸ್ವತಃ ಬುದ್ಧನೂ ಕೂಡ. ಹಾಗಾಗಿ ಇದು ಎಲ್ಲರಲ್ಲಿಯೂ ಇರುವ ಬುದ್ಧಸತ್ವದ ಜೊತೆಗಿನ ಮಾತುಕತೆ ಎಂದುಕೊಳ್ಳಲು ಅಡ್ಡಿಯಿಲ್ಲ.

ಬುದ್ಧಗುರು ಮಾತನಾಡಿದ್ದು, ತಾನು ಕಂಡುಕೊಂಡ ಅರಿವನ್ನು ಹಂಚಿದ್ದು ಯಾರಿಗಾದರೂ ಇದು ಸ್ವಯವಾಗಲು ಸಾಧ್ಯ ಎಂಬ ವಿಶ್ವಾಸದಿಂದ. ಬೌದ್ಧ ತಾತ್ವಿಕತೆಯನ್ನು ಅರಿತುಕೊಳ್ಳುವುದು ದಣ ವಿನ ಕೆಲಸವಲ್ಲ; ಬದಲಿಗೆ ಭಾರವನ್ನು ಕಳೆದುಕೊಂಡು ಹಗುರಾಗುವ ಸಾಧ್ಯತೆ. ಇದು ಇರುವುದರ ಜೊತೆಗೆ ಇನ್ನೊಂದಷ್ಟನ್ನು ತುಂಬಿಕೊಳ್ಳುವುದಲ್ಲ; ಬದಲಿಗೆ ಅಲ್ಲದ್ದನ್ನು ಇಲ್ಲವಾಗಿಸಿಕೊಳ್ಳುವ ಮೂಲಕ ಮುಂದೆ ಹೋಗುವ ದಾರಿ. ನಾನೂ ನಿಮ್ಮ ಜೊತೆ ನಡೆಯಬಯಸುತ್ತೇನೆ. ಎಲ್ಲರೂ ಸಹಪ್ರಯಾಣ ಕರಾಗಿ ನಡೆಯಲು ಈ ಪುಸ್ತಕಗಳು ಕೈಮರಗಳು. ಇವೇ ದಾರಿಯೂ ಅಲ್ಲ ಗುರಿಯೂ ಅಲ್ಲ

- ಎಸ್. ನಟರಾಜ ಬೂದಾಳು

MORE FEATURES

ಎತ್ತಿಕೊಂಡವರ ಕೂಸು 'ದೇವರಿಗೆ ಜ್ವರ ಬಂದಾಗ' ಕಥಾಸಂಕಲನ

18-04-2024 ಬೆಂಗಳೂರು

'ಮಕ್ಕಳ ಕಥೆಯನ್ನು ಹೆಣೆಯುವುದೆಂದರೆ ಅದೊಂದು ತಪಸ್ಸು ಮತ್ತು ಗಿಜುಗನ ನೇಯ್ಗೆ ಕಾರ್ಯದಂತಹ ಕ್ಷಮತೆ ಅವಶ್ಯಕತೆ ಇದ್ದು...

ಇತ್ತೀಚೆಗೆ ಮನುಷ್ಯನು ಬಹಳಷ್ಟು ಸ್ವಾರ್ಥಿಯಾಗುತ್ತಿದ್ದಾನೆ: ಜಿ.ಎಸ್. ಗೋನಾಳ

18-04-2024 ಬೆಂಗಳೂರು

'ಭೂಮಿ, ಆಕಾಶ, ಸೂರ್ಯ, ಚಂದ್ರ, ಗಾಳಿ, ಬೆಳಕು, ನೀರು, ಗಿಡಮರಗಳು, ಪ್ರಾಣಿ, ಪಕ್ಷಿಗಳ ನಿಸ್ವಾರ್ಥದ ಸೇವೆಯನ್ನು ಮರೆ...

'ಮರ ಬರೆದ ರಂಗೋಲಿಯ ರಂಗಿನೋಕುಳಿ'

18-04-2024 ಬೆಂಗಳೂರು

'ಭಾರತದಲ್ಲಿ ಪ್ರಥಮ ಬಾರಿಗೆ ಹೈಕು ಪರಿಚಯಿಸಿದವರು ಡಾ. ರವೀಂದ್ರನಾಥ್ ಟ್ಯಾಗೋರ್ ರವರು. ಜಪಾನಿನ ಪ್ರಸಿದ್ಧ ಹೈಕು ಕವ...