ಚದುರಂಗರ ವೈಶಾಖ: ಹೊಸ ಬದುಕಿನ ಸಾಧ್ಯತೆಗಳ ಕನಸು

Date: 30-09-2022

Location: ಬೆಂಗಳೂರು


ರುಕ್ಮಿಣಿಯ ಪ್ರಜ್ಞೆಯ ಮೂಲಕ ಕಾದಂಬರಿ ಇನ್ನೊಂದು ಸಮುದಾಯದ ಆಂತರ್ಯವನ್ನು ಹೊರಹಾಕಿದೆ. ನಾಲ್ಕು ಗೋಡೆಗಳ ನಡುವಿನ ಬದುಕನ್ನು ಒಪ್ಪಿಕೊಳ್ಳಬೇಕಾದ, ಅದರಲ್ಲೂ ಗಂಡನನ್ನು ಕಳೆದುಕೊಂಡು ವಿಧವೆಯಾದ ಹೆಣ್ಣಿನ ಬಂಧನಗಳನ್ನು ಚಿತ್ರಿಸಿದೆ ಎನ್ನುತ್ತಾರೆ ಲೇಖಕ ಶ್ರೀಧರ ಹೆಗಡೆ ಭದ್ರನ್. ಅವರು ತಮ್ಮ ಬದುಕಿನ ಬುತ್ತಿ ಅಂಕಣದಲ್ಲಿ ಚದುರಂಗರ ’ವೈಶಾಖ’ವನ್ನು ಕುರಿತು ಚರ್ಚಿಸಿದ್ದಾರೆ.

ತಮ್ಮ ಬದುಕು ಹಾಗೂ ಬರಹ ಎರಡೂ ನಿಟ್ಟಿನಿಂದ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಅತ್ಯಂತ ಭಿನ್ನವಾಗಿ ನಿಲ್ಲುವ ಲೇಖಕ ಚದುರಂಗ. ಸುಬ್ರಹ್ಮಣ್ಯ ರಾಜೇ ಅರಸು (1 ಜನವರಿ 1916 - 19. ಅಕ್ಟೋಬರ್ 1998) ಚದುರಂಗ ನಾಮದಲ್ಲಿ ಕತೆ, ಕಾದಂಬರಿ, ನಾಟಕಗಳನ್ನು ಬರೆದು ವಿಶಿಷ್ಟವಾದ ಸೃಷ್ಟಿಶೀಲ ಸಾಧ್ಯತೆಯನ್ನು ಕನ್ನಡಕ್ಕೆ ತೋರಿಸಿದವರು. ಸರ್ವಮಂಗಳಾ, ಉಯ್ಯಾಲೆ ಕಾದಂಬರಿ ಬರವಣಿಗೆಯ ಬಳಿಕ ಸುಮಾರು ಇಪ್ಪತ್ತು ವರ್ಷಗಳ ಅನಂತರ ಅವರ ವೈಶಾಖ (1981) ಕಾದಂಬರಿ ಪ್ರಕಟವಾಯಿತು. ಈ ಕುರಿತು ಅವರೇ ಹೀಗೆ ಹೇಳಿದ್ದಾರೆ; “ಕಳೆದ ಸುಮಾರು ಇಪ್ಪತ್ತು ವರ್ಷಗಳಿಂದ ನಾನು ಕಾದಂಬರಿ ಬರೆಯದಿದ್ದರೂ ಕಾದಂಬರಿಯೊಂದು ನನ್ನೊಳಗೇ ಮೈಮುರಿದೇಳುತ್ತಿರುವ ಅನುಭವ ಕಳೆದ ಕೆಲವು ವರ್ಷಗಳಿಂದ ಆಗುತ್ತಲೇ ಇತ್ತು...ಇನ್ನು ಮೇಲೆ ಸುಮ್ಮನಿರಲಾರೆ ಅನ್ನಿಸುವಂತೆ ಮಾಡಿ ನನ್ನಿಂದ ಇದೀಗ ಬರೆಸಿಕೊಂಡಿದೆ”. ಚದುರಂಗರ ಬೇರೆಲ್ಲ ಬರಹಗಳಿಗಿಂತ ‘ವೈಶಾಖ’ ಬೇರೆಯಾಗಿಯೇ ನಿಲ್ಲುವ ಬರವಣಿಗೆ. ಇದು ಅನುಭವ ಹಾಗೂ ಅಭಿವ್ಯಕ್ತಿ ಎರಡೂ ನೆಲೆಗಳಲ್ಲಿ ಸಾಬೀತಾಗಿರುವ ಸಂಗತಿ. 1982ರಲ್ಲಿ ಇದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಯಿತು.

‘ವೈಶಾಖ’ ಕಾದಂಬರಿ ನೇರವಾದ ಕಥಾ ಹಂದರವನ್ನು ಹೊಂದಿಲ್ಲ ಹಾಗೂ ಸರಳವಾದ ಕೇಂದ್ರವನ್ನೂ ಗುರುತಿಸಲಾಗುವುದಿಲ್ಲ. ಹಲವು ತುಣುಕುಗಳ ನೇಯ್ಗೆಯ ಮೂಲಕ ಸಿದ್ಧವಾದ ಕೌದಿಯಂತೆ ಇಲ್ಲಿಯ ಕತೆಯ ಎಳೆಗಳಿವೆ. ಲಕ್ಕನ ಮೂಲಕ ಅಭಿವ್ಯಕ್ತವಾಗುವುದು ಒಂದು ಎಳೆಯಾದರೆ, ರುಕ್ಮಿಣಿಯ ಮುಖಾಂತರ ಅಭಿವ್ಯಕ್ತವಾಗುವುದು ಎರಡನೆಯ ಎಳೆ. ಈ ಎರಡರೊಂದಿಗೆ ಸೇರಿಕೊಳ್ಳುವ ಹಲವು ಮುಖ್ಯ, ಅಮುಖ್ಯ ಕಥಾ ಎಳೆಗಳು ಕಾದಂಬರಿಯ ಕೇಂದ್ರ ಎನ್ನಬಹುದಾದ ದರುಮನಹಳ್ಳಿಯ ಒಡಲಿಗೆ ಸಂಲಗ್ನಗೊಳ್ಳುತ್ತವೆ.

ಕೆಳವರ್ಗದ ಲಕ್ಕನ ತಾಯಿ ಕಲ್ಯಾಣಿ, ಅಪ್ಪ ನಿಂಗಯ್ಯ. ಗಂಡನ ಮನೆಯಲ್ಲಿ ಬಾಳು ಕಳೆದುಕೊಂಡು ತನ್ನ ಮಗುವಿನೊಂದಿಗೆ ತವರು ಮನೆ ಸೇರಿರುವ ಸಿವುನಿ, ಅಣ್ಣನಾಗಿದ್ದ ಗೆಜ್ಜುಗಣ್ಣ ತಲಕಾಡಿನ ಕಾವೇರಿ ಮಡುವಿನಲ್ಲಿ ಮುಳುಗಿ ದುರಂತದ ಸಾವು ಕಂಡಿದ್ದಾನೆ. ಇದೇ ಕಾರಣಕ್ಕೆ ಸಾಲದ ಹೊರೆ ಮನೆತನದ ಮೇಲೆ ಬಂದಾಗ ಲಕ್ಕ ಕೆಂಗಣ್ಣಪ್ಪನ ಜೀತದಾಳಾಗಬೇಕಾಗುತ್ತದೆ. ಕಲಿಯಬೇಕೆಂಬ ಲಕ್ಕನ ಹಾಗೂ ಇತರರ ಆಸೆ ಸುಟ್ಟುಹೋಗುತ್ತದೆ. ಲಕ್ಕ ಶಕ್ತಿವಂತ, ಮುಗ್ಧ. ವಿಧೇಯ ಹಾಗೂ ವಿನಯ ಸಂಪನ್ನ. ಅವನಿಗೆ ಕಣ್ಣು, ಕಿವಿಗಳಿವೆ ಹೊರತು ಬಾಯಿಲ್ಲ. ತನ್ನ ಅನಿಸಿಕೆ-ಅಭಿಪ್ರಾಯಗಳನ್ನೆಲ್ಲಾ ಹೊಟ್ಟೆಯೊಳಗೇ ಇಟ್ಟುಕೊಳ್ಳುವ ಕಲೆ ಅವನಿಗೆ ಕರಗತ. ಹೀಗಾಗಿಯೇ ನಂಜೇಗೌಡ, ಮಠದ ಸ್ವಾಮಿ, ಕೆಂಗಣ್ನಪ್ಪ, ಬುಂಡಮ್ಮ, ಕೇಶವಯ್ಯ, ಕೃಷ್ಣಶಾಸ್ತ್ರಿಗಳು, ರುಕ್ಮಿಣಿ ಎಲ್ಲರಿಗೂ ಯಾವುದೇ ಕೆಲಸಕ್ಕಾದರೂ ಲಕ್ಕನೇ ಬೇಕು. ಕುಳವಾಡ ವೃತ್ತಿಯ ಹೊಲೆಯನಾದ ಲಕ್ಕನಿಗೆ ಮೇಲುಜಾತಿಯವರ ಅಮಾನವೀಯ ವರ್ತನೆಯಿಂದ ಬಂಡಾಯವೇಳುವಂತಾದರೂ ಅದು ಆಂತರಿಕವಾಗಿಯಷ್ಟೇ ಉಳಿಯುತ್ತದೆ, ಹೊರಹೊಮ್ಮುವುದಿಲ್ಲ.

ರುಕ್ಮಿಣಿ ಕೃಷ್ಣಶಾಸ್ತ್ರಿಗಳ ಸೊಸೆ. ಶಾಸ್ತ್ರಿಗಳ ಮಗ ವಿಶ್ವ-ವಿಶ್ವೇಶ್ವ್ವರನನ್ನು ಮದುವೆಯಾಗಿ ಬಂದವಳು. ಗಂಡನನ್ನು ಬೇಗನೆ ಕಳೆದುಕೊಂಡು ಅಕಾಲ ವೈಧವ್ಯಕ್ಕೆ ಗುರಿಯಾಗಿದ್ದಾಳೆ. ವಿಧವೆಯಾದರೂ ಸಕೇಶಿಯಾಗಿರುವ ಅವಳ ಬಗ್ಗೆ ಸಮಾಜದ ಅಸಮಾಧಾನವಿದೆ. ಹೊರಗಿನವರಷ್ಟೇ ಅಲ್ಲ, ಮನೆಯಲ್ಲೇ ಇರುವ ಶಾಸ್ತ್ರಿಗಳ ಸಹೋದರಿ ಸುಶೀಲಾ ಸಮಯ ಸಿಕ್ಕಾಗಲೆಲ್ಲ ಅದನ್ನು ಖಂಡಿಸುತ್ತಾ ಬಂದಿದ್ದಾಳೆ. ಅವಳ ಅಸಹನೆ ರಾತ್ರಿ ಹೊತ್ತು ಕತ್ತರಿಯಿಂದ ರುಕ್ಮಿಣಿಯ ಕೇಶವನ್ನು ಕತ್ತರಿಸುವ ಪ್ರಯತ್ನದವರೆಗೂ ಹೋಗುತ್ತದೆ. ಇದರಿಂದ ಬೇಸತ್ತ ಕೃಷ್ಣಶಾಸ್ತ್ರಿಗಳು ಕೆಲದಿನದ ಮಟ್ಟಿಗೆ ರುಕ್ಮಿಣಿಯನ್ನು ಅವಳ ತವರಿಗೆ ಕಳಿಸುತ್ತಾರೆ. ಅಲ್ಲಿ ಅಣ್ಣನ ಮಗಳು ಜಾನಕಿಯ ಮೇಲೆ ಅತ್ಯಾಚಾರ ನಡೆಯುತ್ತದೆ. ಅವಳನ್ನು ಅತಿ ಕಾಳಜಿಯಿಂದ ನೋಡಿಕೊಳ್ಳುವ ರುಕ್ಮಿಣಿಯ ಮೇಲೆ ಅವಳ ಅತ್ತಿಗೆಯ ಹಿಂಸೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇಷ್ಟರಲ್ಲಿ ಸುಶೀಲತ್ತೆಯ ಸಾವಿನ ಸುದ್ದಿ ಬಂದಾಗ ರುಕ್ಮಿಣಿ ಕರೆಯಲು ಹೋದ ಲಕ್ಕನೊಂದಿಗೆ ಊರಿಗೆ ಮರಳಿ ಬರುತ್ತಾಳೆ. ಮಾವ ಕೃಷ್ಣಶಾಸ್ತ್ರಿಯಿಂದ ರುಕ್ಮಿಣಿ ಒಂದು ರಾತ್ರಿ ಅತ್ಯಾಚಾರಕ್ಕೊಳಗಾಗುತ್ತಾಳೆ. ಪೂಜ್ಯರೆಂದು ಭಾವಿಸಿದ್ದ ಮಾವನವರಿಂದಲೆ ನಡೆದ ಈ ಕೃತ್ಯದಿಂದ ರುಕ್ಮಿಣಿಗೆ ಚಿತ್ರಮೂಲನ ಕೋಟೆಯಲ್ಲಿ ಸಿಕ್ಕಿಕೊಂಡ ಅನುಭವವಾಗುತ್ತದೆ. ಈ ಮಧ್ಯೆ, ಅಕ್ಕನ ಮಗಳು ದೊಡ್ಡವಳಾದಳೆಂದು ಇಟ್ಟುಕೊಂಡ ಕಾರ್ಯಕ್ರಮಕ್ಕೆ ಲಕ್ಕನೊಂದಿಗೆ ಚಕ್ಕಡಿಯಲ್ಲಿ ಹೊರಟ ರುಕ್ಮಿಣಿ ದಾರಿಯಲ್ಲಿ ಗುಡುಗು-ಮಳೆಗೆ ಭಯಗೊಂಡು ಬರಿಮೈಯಲ್ಲಿದ್ದ ಲಕ್ಕನನ್ನು ತಬ್ಬಿಕೊಳ್ಳುತ್ತಾಳೆ. ಬಲಾತ್ಕಾರವಾಗಿ ಅವನನ್ನು ಕೂಡುತ್ತಾಳೆ. ಈಗ ಗರ್ಭಿಣಿಯಾದ ರುಕ್ಮಿಣಿಗೆ ಇದು ಯಾರಿಂದ ಎಂಬ ಸಂದಿಗ್ಧ ಕಾಡುತ್ತದೆ. ಲಕ್ಕನಿಂದಲೇ ಗರ್ಭಪಾತಕ್ಕೆ ಔಷಧಿ ತರಿಸುವ ಮಾತಾಡುತ್ತಿದ್ದಾಗ ಹಿತ್ತಲಿನಲ್ಲಿ ಅದನ್ನು ಕೇಳಿಸಿಕೊಂಡ ಪಕ್ಕದ ಮನೆ ಲಕ್ಷ್ಮಮ್ಮ ಊರಿಗೆ ಡಂಗುರ ಸಾರುತ್ತಾಳೆ. ಇಡೀ ಬ್ರಾಹ್ಮಣ ಸಮುದಾಯದಲ್ಲಿ ಇದು ಜಾಹೀರಾಗುತ್ತದೆ. ಶಾಸ್ತ್ರಿಗಳು ಲಕ್ಕ, ರುಕ್ಮಿಣಿಯರು ತಮ್ಮ ಮಾನ ಕಾಪಾಡಲೆಂದೇ ಈ ಸುದ್ದಿ ಹಬ್ಬಿಸಿದ್ದಾರೆಂದು ಭಾವಿಸಿ ಪಶ್ಚಾತ್ತಾಪ ಪಡುತ್ತಾರೆ. ಔಷಧಿ ತಂದ ಲಕ್ಕನಿಗೆ ಗುಲ್ಲು ಊರಿಡೀ ಹಬ್ಬಿರುವುದನ್ನು ಕಂಡು ಘಾತವಾಗುತ್ತದೆ. ಪಂಚಾಯತಿ ಸೇರಿಸಿ ಲಕ್ಕನಿಗೆ ಪಾಂಡವರ ಕಂಬಕ್ಕೆ ಕಟ್ಟಿ ಛಡಿ ಪೆಟ್ಟು ಕೊಡುವುದರೊಂದಿಗೆ ಊರಿನಿಂದ ಗಡೀಪಾರು ಶಿಕ್ಷೆ ಜಾರಿಯಾಗುತ್ತದೆ. ಗೋಸು ಸಾಬರ ಸಹಾಯದಿಂದ ಶಕುನಿಕೊಪ್ಪಲಿನಲ್ಲಿ ಲಕ್ಕ ಗುಡಿಸಲು ಹಾಕಿಕೊಂಡು ವಾಸಮಾಡುತ್ತಾನೆ. ಬ್ರಾಹ್ಮಣ ಸಮುದಾಯ ರುಕ್ಮಿಣಿಗೆ ಘಟಸ್ಫೋಟದ ಶಿಕ್ಷೆ ಕೊಡುತ್ತದೆ. ಆದರೆ ಆಚರಣೆಗಳು ನಡೆಯುವ ಮೊದಲೇ ರುಕ್ಮಿಣಿ ಮನೆಬಿಟ್ಟು ಹೋಗುತ್ತಾಳೆ. ಒಮ್ಮೆ ಒಳಗೆ ಹೋದರೆ ಹೊರಬರಲಾಗದ ಚಿತ್ರಮೂಲನ ಕೋಟೆಯಲ್ಲಿ ಅವಳ ಧ್ವನಿ ಕೇಳುತ್ತದೆ ಎಂಬ ಸುದ್ದಿ ಹಬ್ಬುತ್ತದೆ. ರುಕ್ಮಿಣಿ ದುರಂತದ ಕತೆಯಾಗುತ್ತಾಳೆ. ಲಕ್ಕನಿಗೆ ಶಕುನಿಕೊಪ್ಪಲಿನಲ್ಲಿಯೂ ಇರಲಾರದೆ ಬಿಟ್ಟುಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅವನು ಹೊಸ ಲೋಕವನ್ನರಸಿ ಹೊರಟುಹೋಗುತ್ತಾನೆ. ಧರಮನಹಳ್ಳಿಗೆ ಪ್ಲೇಗ್ ಬಂದು ಇಡೀ ಊರಿನ ಅಂತ್ಯವನ್ನು ಅದು ಸಂಕೇತಿಸುತ್ತದೆ. ಕಾದಂಬರಿಯಲ್ಲಿ ವ್ಯಕ್ತವಾಗಿರುವ ಬದುಕು ವೈದೃಶ್ಯಗಳ ಮೂಲಕವಾಗಿ ಭಗ್ನಗೊಂಡಂತೆ ಕಾಣಿಸಿದರೂ ಆಂತರ್ಯದಲ್ಲಿ ಹೊಸ ಬದುಕಿನ ಅನ್ವೇಷಣೆಗಳತ್ತಲೇ ಮುಖ ಮಾಡಿರುವುದನ್ನು ಕಾಣುತ್ತೇವೆ.

‘ವೈಶಾಖ’ ಕಾದಂಬರಿಯನ್ನು ಪ್ರಾದೇಶಿಕ ಕಾದಂಬರಿಗಳ ಹಿನ್ನೆಲೆಯಲ್ಲಿ ಅದರಲ್ಲೂ ಕುವೆಂಪುರವರ ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು, ರಾವ್‍ಬಹದ್ದೂರರ ಗ್ರಾಮಾಯಣ, ಕಾರಂತರ ಮರಳಿಮಣ್ಣಿಗೆ ಇವುಗಳೊಂದಿಗೆ ಹೋಲಿಸಿ ಕನ್ನಡ ವಿಮರ್ಶಾ ವಲಯ ಚರ್ಚೆ ಮಾಡಿದೆ. ಪ್ರಾದೇಶಿಕ ಕಾದಂಬರಿಗಳ ಗುಣ ಹಾಗೂ ಯಾವುದೇ ಒಂದು ಕೇಂದ್ರವನ್ನು ಹೊಂದದೇ ಜೀವನವನ್ನೇ ಕೇಂದ್ರವಾಗುಳ್ಳ ವೈಶಾಖದ ರಾಚನಿಕ ದೃಷ್ಟಿಯಿಂದಲೂ ಈ ಚರ್ಚೆ ಸಮಂಜಸವೆನ್ನಿಸುತ್ತದೆ.

ದರುಮನಹಳ್ಳಿ-ಧರ್ಮರಾಯನಹಳ್ಳಿಯ ಕೆಟ್ಟರೂಪ. ಇದಕ್ಕೆ ಮಹಾಭಾರತದ ಕಾಲದ ಐತಿಹ್ಯವಿದೆ. ಹೀಗಾಗಿಯೇ ಇದು ಆದರ್ಶದ ಪ್ರಪಂಚವಲ್ಲ. ಒಳಿತು-ಕೆಡುಕು, ಧರ್ಮ-ಅಧರ್ಮ ಇವೆಲ್ಲವೂ ಸಮ್ಮಿಶ್ರಗೊಂಡ ಪ್ರಪಂಚ. ಇಷ್ಟೇ ಅಲ್ಲ ಈ ಹಳ್ಳಿಯ ಪಕ್ಕದಲ್ಲೇ ಶಕುನಿ ಕೊಪ್ಪಲಿದೆ, ಕುರುಕ್ಷೇತ್ರ ಯುದ್ಧದಲ್ಲಿ ದ್ರೋಣಾಚಾರ್ಯ ಚಕ್ರವ್ಯೂಹ ರಚಿಸಿದ ಸ್ಥಳವಾದ ಚಿತ್ರಮೂಲನ ಕೋಟೆಯಿದೆ, ಪಾಂಡವರು ಕುದುರೆ ಕಟ್ಟುತ್ತಿದ್ದ ಕಂಬಗಳಿವೆ. ಆದರೆ ಗತ ಕಾಲಕ್ಕೆ ಸಂದಿರುವ ಮಹಾಭಾರತದ ಹಿನ್ನೆಲೆಯ ನೆನಪುಗಳ ಭೂತ ಮಾತ್ರ ಅಲ್ಲಿಯ ಜನಕ್ಕೆ ಈಗ ಇರುವುದು. ಅಧರ್ಮ, ಅಸತ್ಯ, ಅಮಾನವೀಯ ಸಂಗತಿಗಳೇ ತಾಂಡವವಾಡುವ ರೂಕ್ಷ ವಾಸ್ತವ ಇಂದಿನ ದರುಮನಹಳ್ಳಿಯದು. ಇದಕ್ಕೆ ‘ಹೆತ್ತ ತಾಯಿ ಲಾಡಿ ಬಿಚ್ಚೋ ಬಡ್ಡಿಹೈದ- ನಂಜೇಗೌಡ, ‘ಮನುಷ್ಯನ ರಕ್ತ್ತದ ರುಚಿ ಪಾಟಾದ ಹುಲಿ’- ಕೆಂಗಣ್ಣಪ್ಪನಂತಹ ವ್ಯಕ್ತಿಗಳು ಕಾರಣರಾಗಿದ್ದಾರೆ. ಊರಿನ ಹೆಸರಲ್ಲಿ ದರುಮವಿದ್ದರೂ ಹಳ್ಳಿಯಲ್ಲಿ ಧರ್ಮದ ಪಸೆ ಇಲ್ಲ.

“ವೈಶಾಖದಲ್ಲಿ ಗಂಡು ಹೆಣ್ಣಿನ ಸಂಬಂಧದ ಅನೇಕ ಪ್ರಕಾರಗಳ ಚಿತ್ರಣವಿದೆಯಾದರೂ ಇಲ್ಲಿ ವಿವಾಹ, ಪ್ರೇಮ ಮತ್ತು ಲೈಂಗಿಕ ಸಂಬಂಧಗಳು ಮುಖ್ಯ ವಸ್ತುವಲ್ಲ” ಎಂಬುದು ಖ್ಯಾತ ವಿಮರ್ಶಕ ಡಾ. ಜಿ. ಎಸ್. ಆಮೂರ ಅವರ ಅಭಿಪ್ರಾಯ. ಆದರೆ ಪುರುಷಾರ್ಥಗಳಲ್ಲಿ ಮುಖ್ಯವಾದ ಕಾಮವನ್ನೇ ಕಾದಂಬರಿ ಕೇಂದ್ರೀಕರಿಸುವುದು ಮೇಲ್ನೋಟಕ್ಕೇ ಕಾಣುತ್ತದೆ. ಡಾ. ಸಿ. ಎನ್. ರಾಮಚಂದ್ರನ್ ಅವರು ಗುರುತಿಸಿರುವಂತೆ; “(ಕಾದಂಬರಿಯ) ಮೊತ್ತಮೊದಲಲ್ಲೇ ಬರುವ ಕಾಲು ಮುರಿದಿರುವ ಹಸುವಿನ ಮೇಲೆ ಹತ್ತಲು ಯತ್ನಿಸುತ್ತಿರುವ ಹೋರಿಯ ವೃತ್ತಾಂತದ ಮೂಲಕ ವೈಶಾಖದ ಒಂದು ಮುಖ್ಯ ಎಳೆಯೇ ಕಾಮ ಎನ್ನುವುದನ್ನು ಚದುರಂಗರು ತೋರಿಸುತ್ತಾರೆ, ...ನೈಸರ್ಗಿಕ ಹಸಿವನ್ನು ವಿವಾಹದ ಮೂಲಕ ತೀರಿಸಿಕೊಳ್ಳಲಾಗದೇ ವಿವಾಹ ಬಂಧನದ ಹೊರಗೆ ನಿಷ್ಪಾಪ ವ್ಯಕ್ತಿಗಳನ್ನು ನೂಕುವ ಕಾಮ ( ಬುಂಡಮ್ಮನ ಸೊಸೆ, ಕಂಚುಗಾರ ಸಾಬಿ, ಅಂಬಿಗರ ಹನುಮನ ಹೆಂಡತಿ ಎಂಕಿ, ಎಂಕಿ-ಅಂಗಡಿ ಬಸಲಿಂಗು); ತೃಪ್ತಿಗೆ ಯಾವ ಸಹಜ ಮಾರ್ಗವೂ ಇಲ್ಲದೇ ಬಲಾತ್ಕಾರವಾಗಿ ತುಳಿಯಲ್ಪಟ್ಟಿದ್ದು ಅಕಸ್ಮಾತ್ತಾಗಿ ಒಂದು ಸಲ ಪುಟಿದೇಳುವ ಕಾಮ ( ಶಾಸ್ತ್ರಿಗಳು-ರುಕ್ಮಿಣಿ, ರುಕ್ಮಿಣಿ -ಲಕ್ಕ); ಬಾಲ್ಯದಲ್ಲಿ ಕುತೂಹಲ ರೂಪಿಯಾಗಿ ಬರುವ ಕಾಮ (ಗಂಗಿ-ಲಕ್ಕ); ವಿವೇಚನಾರಹಿತ ಮೃಗೀಯ ಅತ್ಯಾಚಾರ (ಜಾನಕಿ, ಬಾಲಕಿ ಸಾವಂತ್ರಿ-ಕೆಂಘಣ್ಣಪ್ಪ); ಹದ್ದಿಲ್ಲದ ಲಾಲಸೆ(ಸಿವನಿಯ ಗಂಡ, ಕೆಂಗಣ್ಣಪ್ಪ, ಲಕ್ಕ, ಸ್ವಾಮಿಗಳು-ಚಂದ್ರಿ); ಸಲಿಂಗ ಕಾಮ (ಲಕ್ಕ-ಕೆಂಗಣ್ಣಪ್ಪ); ಪರಿಸ್ಥಿತಿಯ ಕಾರಣದಿಂದ ಇಚ್ಛೆಯಿಲ್ಲದಿದ್ದರೂ ಮತ್ತೊಬ್ಬನ ವಶವಾಗಿಸುವ ಕಾಮ (ಗಂಗಿ-ನಂಜೇಗೌಡ); ಅನ್ಯೋಪಾಯವಿಲ್ಲದೇ ಜೀವನ ನಿರ್ವಹಣ ಮಾರ್ಗವಾದ ಕಾಮ (ಸಿವನಿ-ಕೇಶವಯ್ಯ); ಮೋಸದ ಬಲೆಯಾಗಿ ಬರುವ ಕಾಮ (ಲೂಸಿ-ಪುಟ್ಟಾರಿ, ರೋಸಯ್ಯ ಗುರುಗಳು)-ಮತಭೇದ, ಜಾತಿಭೇದ, ವರ್ಗಭೇದವಿಲ್ಲದೇ ಕಾಡುವ ಈ ಕಾಮ ಪ್ರವೃತ್ತಿಯ ದಬ್ಬಾಳಿಕೆಯನ್ನು ಚದುರಂಗರು ಚಿತ್ರಿಸಿರುವ ರೀತಿ ‘ಮನಸಿಜನ ಮಾಯೆ ವಿಧಿ ವಿಳಸನದ ನೆರಂಬಡೆಯೆ ಕೊಂದು ಕೂಗದೆ ನರರಂ’ ಎಂಬ ಜನ್ನನ ಅಮೃತಮತಿ ಪ್ರಕರಣದಂತೆ ನಮ್ಮನ್ನು ಹೆದರಿಸಿ ನಡುಗಿಸುವಂಥದ್ದು”. ಇವೆಲ್ಲವೂ ಅಸಹಜ ಕಾಮದ ಮಾದರಿಗಳೇ ಹೊರತು ಪ್ರೇಮ-ಪ್ರೀತಿಗಾಗಿ ಗಂಡು ಹೆಣ್ಣು ಒಲಿದು ಸಂಬಂಧ ಏರ್ಪಡಿಸ್ಕೊಂಡ ಗುಣಾತ್ಮಕ ಪ್ರಕರಣಗಳು ಕಾದಂಬರಿಯಲ್ಲಿ ಬರುವುದೇ ಇಲ್ಲ. ರುಕ್ಮಿಣಿ -ವಿಶ್ವರ ಸಂಬಂಧ ಹಾಗಾಗಬಹುದಿತ್ತಾದರೂ ವಿಶ್ವೇಶ್ವರನ ಅಕಾಲಿಕ ಮರಣದಿಂದ ಆ ಪಾತ್ರಕ್ಕೆ ಬೆಳವಣಿಗೆಯೇ ಇಲ್ಲವಾಗಿದೆ. ಇಲ್ಲಿಯ ಎಲ್ಲ ಸಂಬಂಧಗಳ ಬಹುತೇಕ ನೆಲೆಯೂ ಶೋಷಣೆಗೆ ಮೂಲವಾದದ್ದೇ ಆಗಿದೆ. ಕಾದಂಬರಿಯ ಬಹುಪಾಲು ಕ್ರಿಯೆಗಳು ಕಾಮದೊಂದಿಗೆ ನೇರ ಸಂಬಂಧ ಪಡೆದಿರುವುದರಿಂದ ದರುಮನಹಳ್ಳಿಯ ನ್ಯಾಯ ವ್ಯವಸ್ಥೆಯೂ ಇದರೊಂದಿಗೇ ತಳುಕು ಹಾಕಿಕೊಳ್ಳುತ್ತದೆ; ನಂಜೇಗೌಡನಿಗೆ ಗಂಗಿ ದಕ್ಕಿರುವುದು, ಅಡವಿಯಪ್ಪನ ವಿರುದ್ಧವಾದ ನ್ಯಾಯ, ಹಲಗನ ಆತ್ಮಹತ್ಯೆ, ಕುಂದೂರಯ್ಯನ ಕೈಗೆ ಚೆಲುವಿ ಬೀಳುವುದು ಹೀಗೆ ಘಟನೆಗಳು ಜರುಗುತ್ತವೆ.

ಡಾ. ಎಂ. ಎಸ್. ವೇದಾ ಅವರು ಕಾದಂಬರಿಯ ಕಾಮ ಕಥನದ ಆದಿ ಅಂತ್ಯಗಳನ್ನು ಹೀಗೆ ಗ್ರಹಿಸಿದ್ದಾರೆ; “ಮಾವನ ತಡೆಹಿಡಿದ ಕಾಮಕ್ಕೆ ಬಲಿಯಾಗುವ ರುಕ್ಮಿಣಿ , ರುಕ್ಮಿಣಿಯ ತಡೆ ಹಿಡಿದ ಕಾಮಕ್ಕೆ ಬಲಿಯಾಗುವ ಲಕ್ಕ-ಈ ಸಂದರ್ಭದಲ್ಲಿ ರುಕ್ಮಿಣಿ ಚಿತ್ರಮೂಲನ ಕೋಟೆಯೊಳಗೆ ಹಾದಿ ಕಾಣದೆ ನಿರಂತರ ಬಂಧಿಯಾಗಿ ನೋವಿನ ಧ್ವನಿಯಾಗಿ ಊರಲ್ಲಿ ವದಂತಿ ಇಲ್ಲವೇ ದಂತ ಕಥೆಯಾಗುವ ಸಂದರ್ಭ ಕಾಮದ ಒಂದು ತುದಿಯಾದರೆ, ನೆಲ ಗುದ್ದಿದರೆ ನೀರು ಚಿಮ್ಮೋ ವಯಸ್ಸಿನ ಬಂಡೆಮ್ಮನ ಸೊಸೆ, ಅತ್ತೆ ಕಟ್ಟಿದ ಚಿತ್ರಮೂಲನ ಕೋಟೆಯ ಬಾಗಿಲು ಮುರಿದು ಕಂಚಗಾರ ಸಾಬಿಯೊಂದಿಗೆ ಹೊರಟುಬಿಡುವ ಸಂದರ್ಭ ಮತ್ತೊಂದು ತುದಿಯಾಗಿದೆ. ಒಂದರಲ್ಲಿ ಬಂಧನದ ನೋವಿದ್ದರೆ, ಮತ್ತೊಂದರಲ್ಲಿ ಬಂಧನವನ್ನೇ ಮೀರಿ ನಿಂತ ಬಿಡುಗಡೆಯ ಭಾವವಿದೆ. ಬಿಡುಗಡೆಯಾದ ಕಾಮಕ್ಕೆ ಅಂತ್ಯವಿದ್ದರೆ, ಬಂಧಿತವಾದ ಕಾಮಕ್ಕೆ ಅಂತ್ಯವೆಂಬುದೇ ಇಲ್ಲದ ಸ್ಥಿತಿ. ಅದೇ ಕಾಮವನ್ನು ಆದಿ-ಅಂತ್ಯಗಳೇ ಇಲ್ಲದಂತೆ ಉಪಯೋಗಿಸಿರುವ ವಿಚಿತ್ರ ವ್ಯಕ್ತಿಗಳೂ ಅದೇ ‘ಕಾಮ’ದ ಮತ್ತೊಂದು ಸ್ಥಿತಿಯನ್ನು ಪ್ರತಿನಿಧಿಸುತ್ತಾರೆ”. ಹೀಗೆ ವೈಶಾಖ ಕಾದಂಬರಿಯಲ್ಲಿ ಕಾಮ ಪ್ರಮುಖ ಧಾರೆಯಾಗಿ ಹೆಣೆದುಕೊಂಡಿದೆ. ಇದು ಸೃಷ್ಟಿಶೀಲವಾದ ಧರ್ಮದ ದಾರಿಯ ಕಾಮವಾಗದೇ ವಿನಾಶಕ ಸ್ವರೂಪದ ಕ್ರೌರ್ಯ-ಕೆಡುಕಿನನದ್ದಾದ್ದರಿಂದ ದರುಮನಹಳ್ಳಿಯ ನಾಶಕ್ಕೆ ಮುಖ್ಯ ಕಾರಣವಾಗುತ್ತದೆ.

‘ವೈಶಾಖ’ ಕಾದಂಬರಿಯಲ್ಲಿ ಲೈಂಗಿಕ ವಿವರಗಳಿಗೇ ಯಾಕೆ ಹೆಚ್ಚು ಒತ್ತು ಬಿದ್ದಿದೆ? ಎಂಬ ಮಹತ್ವದ ಪ್ರಶ್ನೆಯನ್ನು ಎತ್ತಿಕೊಂಡ ಹಿರಿಯ ವಿಮರ್ಶಕ ಪ್ರೊ. ಟಿ. ಪಿ. ಅಶೋಕ ಅವರು; “ಲೈಂಗಿಕ ಚಟುವಟಿಕೆಗಳು ಒಟ್ಟೊಟ್ಟಿಗೇ ವೈಯಕ್ತಿಕವೂ ಸಾಮಾಜಿಕವೂ ಆಗಿರುವುದರಿಂದ ಇವುಗಳ ನಿರ್ವಹಣೆ ಮನುಷ್ಯ ಮತ್ತು ಸಮಾಜಗಳ ಅಧ್ಯಯನದಲ್ಲಿ ಕೆಲವು ಮೂಲಭೂತ ಸೂಚನೆಗಳನ್ನು ನೀಡಬಲ್ಲುದು. ದರುಮನಹಳ್ಳಿಯ ಒಟ್ಟು ಬದುಕಿನ ಅವ್ಯವಸ್ಥೆ, ಮೌಲ್ಯಗಳ ಅಧಃಪತನ, ವಿಕೃತಗೊಂಡ ಸಂಬಂಧಗಳನ್ನು ಸಮಗ್ರವಾಗಿ ಹಿಡಿಯಲು ಚದುರಂಗರು ಈ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಅನ್ನಿಸುತ್ತದೆ”. ಇವೇ ಮಾತುಗಳನ್ನು ಕಾರಂತರ ಕಾದಂಬರಿಗಳ ಗಂಡು -ಹೆಣ್ಣಿನ ಸಂಬಂಧಾಂತರಗಳ ಸಂದರ್ಭದಲ್ಲಿ ಅವರು ಹೇಳಿರುವುದನ್ನು ಸ್ಮರಿಸಬಹುದು. ಕಾಮವೇ ಇಂದಿನ ಸಮಾಜ, ಸಮುದಾಯಗಳ ಹಲವು ಮುಂಚೂಣಿಯ ಮುಖ್ಯಸ್ಥರ ಮುಖವಾಡÀಗಳನ್ನು ಕಳಚುತ್ತಿರುವುದರಿಂದ ಈ ಮಾತುಗಳ ಮಹತ್ವ ಹೆಚ್ಚಾಗುತ್ತದೆ.

ಎರಡು ಸಮುದಾಯಗಳ ಆಂತರಿಕ ಬಿಕ್ಕಟ್ಟುಗಳನ್ನು ವೈಶಾಖ ಸ್ಪಷ್ಟವಾಗಿ ತೆರೆದು ತೋರಿಸುತ್ತದೆ. ಮೊದಲನೆಯದಾದ ಲಕ್ಕನ ಲೋಕ ದಲಿತ ಸಮುದಾಯದ ಪ್ರಾತಿನಿಧಿಕ ಜಗತ್ತು. ಲಕ್ಕ ಒಳಗಾಗುವ ಶೋಷಣೆ, ಅನ್ಯಾಯಗಳು ಕೇವಲ ಅವನ ವೈಯಕ್ತಿಕ ಅನುಭವಗಳು ಮಾತ್ರವಾಗದೇ ಅವನ ಪರಿಸರದಲ್ಲಿ ಬಾಳುವವರ ಜೀವನದ್ದೂ ಆಗುವುದರಿಂದ ಆ ಸಮುದಾಯದ ಸಾರ್ವತ್ರಿಕ ಅನುಭವಗಳಾಗಿ ಪರಿಣಮಿಸಿ ವ್ಯಾಪಿಸಿಕೊಳ್ಳುತ್ತದೆ. ದರುಮನಹಳ್ಳಿಯ ನೀತಿರಹಿತ ಸಮಾಜದಲ್ಲಿ ಲಕ್ಕನ ಪ್ರಜ್ಞೆಯನ್ನು ಕಲಕುವ ಅನುಭವಗಳು ಮತ್ತೆ ಮತ್ತೆ ಘಟಿಸುವುದರಿಂದ ಸತತವಾಗಿ ಅನ್ಯಾಯ, ಶೋಷಣೆಗಳ ಆಘಾತ ಆಗುತ್ತಲೇ ಸಾಗುತ್ತದೆ. ನ್ಯಾಯದ ಹೆಸರಿನಲ್ಲಿ ಸಂಘಟಿತ ಶೋಷಣೆ ನಡೆಸುವ ಜಪ್ಪಯ್ಯನ ಮಠದ ಬೆಂಬಲ ಪಡೆದ ನಂಜೇಗೌಡ, ಕೆಂಗಣ್ಣಪ್ಪ ಮುಂತಾದ ಧೂರ್ತರಿದ್ದರೆ; ಶೋಷಿತ ವರ್ಗದ ಪ್ರತಿನಿಧಿಗಳಾಗಿ ಬುಂಡ, ಟಗರೂರ, ಅಡಿವೆಪ್ಪ, ಗಂಗಿ ಮತ್ತು ಅನೇಕರು ಬರುತ್ತಾರೆ. ಸ್ವತಃ ಲಕ್ಕನೇ ಶೋಷಿತ ಸಮುದಾಯದ ಕೇಂದ್ರವಾಗಿದ್ದಾನೆ. “ಲಕ್ಕನನ್ನು ಪುಸಲಾಯಿಸಿ ಅವನನ್ನು ಕಳ್ಳಸೆರೆ ತರುವ ಅನೀತಿ ಕಾರ್ಯಕ್ಕೆ ಹಚ್ಚುವ ಘಟನೆಯಿಂದ ಪ್ರಾರಂಭವಾಗುವ ಕಾದಂಬರಿ ಅವನ ಶಿಕ್ಷೆ, ಬಹಿಷ್ಕಾರಗಳಲ್ಲಿ ಕೊನೆಗೊಳ್ಳುತ್ತದೆ. ಬುದ್ಧಿಪೂರ್ವಕವಾಗಿ ವರ್ಗಪ್ರಜ್ಞೆಯನ್ನು ಬೆಳೆಸಿಕೊಂಡು ಬರುವ ಶಕ್ತಿ ಲಕ್ಕನಲ್ಲಿಲ್ಲವಾದರೂ ಅಮೂರ್ತ ರೂಪದಲ್ಲಿ ಅದು ಅವನಲ್ಲಿ ವಿಕಾಸ ಹೊಂದುತ್ತಲೇ ಇದೆ” - ಎಂದು ಈ ಸಂದರ್ಭವನ್ನು ಡಾ. ಜಿ. ಎಸ್. ಆಮೂರ ವಿಶ್ಲೇಷಿಸಿದ್ದಾರೆ. ಕಾದಂಬರಿಯಲ್ಲಿ ಒಂಡೆಡೆ ಲಕ್ಕ; ನಾಗರಹಾವನ್ನು ಕಚ್ಚಿ ಸಾಯಿಸಿದ ಇರುವೆಗಳ ಸಾಹಸವನ್ನು ಹೀಗೆ ವರ್ಣಿಸುತ್ತಾನೆ-“ಅಂತು ಈಟು ಸಣ್ಣ ಪ್ರಾಣಿಗೋಳು ಒಟ್ಟಾಗಿ ಎಂತಾ ಭಾರೀ ಗೋದಿ ನಾಗರಾವ ಸಾಯಿಸಿಬುಟ್ಟೋ? ಏಟು ಆಚರ್ಯ ಇದು? ಇಂತಾ ಇರುವೇನೂವೆ ಒಂದು ಬಾರಿ ಸರ್ಪವ ಕೊಲ್ಲಬೌದು ಅಂತ ನನಗೆ ತಿಳಿದೇ ಇರನಿಲ್ಲ”. ಅಶಕ್ತ ಸಮುದಾಯವೂ ಒಟ್ಟಾಗಿ ಸಾಧಿಸಬಹುದಾದ ಕ್ರಿಯೆಯ ಆಶ್ಚರ್ಯಪೂರ್ವಕ ವಿಷ್ಲೇಷಣೆಯನ್ನು ಲಕ್ಕ ಮಾಡುವಲ್ಲಿ ಅವನ ಹಾಗೂ ದಲಿತ ಸಮುದಾಯ ಕಂಡುಕೊಳ್ಳುತ್ತಿದ್ದ ಹೊಸ ಸಾಧ್ಯತೆಯೆಡೆಗೆ ಕೃತಿ ಬೆಳಕು ಚೆಲ್ಲುತ್ತದೆ. ಇದರ ಮುಂದುವರಿಕೆಯಾಗಿ ಕಾದಂಬರಿಯಲ್ಲಿ ಬಳಕೆಯಾಗುವ ಹಲವು ಪ್ರತಿಮೆಗಳು: ರಣಹದ್ದುಗಳು ಹರಿದು ತಿನ್ನುತ್ತಿರುವ ಬಾಣಂತಿಯ ದೇಹ, ಆಕಾಶದಲ್ಲಿ ದಿಟ್ಟಿ ನೆಟ್ಟ ಗರುಡಾಳು ಪಕ್ಷಿ, ಮತ್ತೆ ಪುಚ್ಛಗಳನ್ನು ಬೆಳೆಸಿಕೊಂಡು ಪುನರ್ಜನ್ಮ ಹೊಂದಿದ ಪುಟ್ಟ ಹಕ್ಕಿ, ಸಮುದಾಯದ ಬಲವನ್ನು ಸೂಚಿಸುವ ಆನೆಗಳ ಹಿಂಡು ಮುಂತಾದವು ಕಾದಂಬರಿಯ ನಿರೂಪಣೆಗೆ ಸಾಂಕೇತಿಕತೆಯ ಬಲ ತುಂಬುತ್ತವೆ.

ರುಕ್ಮಿಣಿಯ ಪ್ರಜ್ಞೆಯ ಮೂಲಕ ಕಾದಂಬರಿ ಇನ್ನೊಂದು ಸಮುದಾಯದ ಆಂತರ್ಯವನ್ನು ಹೊರಹಾಕಿದೆ. ನಾಲ್ಕು ಗೋಡೆಗಳ ನಡುವಿನ ಬದುಕನ್ನು ಒಪ್ಪಿಕೊಳ್ಳಬೇಕಾದ, ಅದರಲ್ಲೂ ಗಂಡನನ್ನು ಕಳೆದುಕೊಂಡು ವಿಧವೆಯಾದ ಹೆಣ್ಣಿನ ಬಂಧನಗಳನ್ನು ಚಿತ್ರಿಸಿದೆ. ಜಾತಿಯಿಂದ ಮೇಲುವರ್ಗದವಳು, ಸಂಸ್ಕಾರವಂತ ಮನೆತನದವಳು, ತನ್ನ ಅಸ್ತಿತ್ವ ಗಂಡನ ನೆರಳಡಿಯೇ ಎಂದು ನಂಬಿದವಳು, ವೈಧವ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡವಳೂ ಆಗಿರುವ ರುಕ್ಮಿಣಿಯ ಅನುಭವ ಪ್ರಪಂಚದ ಪರಿಧಿ ಸೀಮಿತವಾದುದು. ಅವಳ ಅನುಭವ ಪ್ರಪಂಚ ಅವಳ ಹಾಗೆಯೇ ವಿಧವೆಯರಾದ ಲಕ್ಷ್ಮಮ್ಮ, ಸುಶೀಲ ಇವರೊಂದಿಗೆಯೇ ತಳುಕು ಹಾಕಿಕೊಂಡದ್ದು.

ಮಾವನ ಪೂಜೆಗೆ ಸಿದ್ಧ ಮಾಡುವುದು, ನೈವೇದ್ಯ ತಯಾರಿಸುವುದು, ಅಡುಗೆ, ಮನೆಗೆಲಸ ಹೀಗೆ ಅಗ್ರಹಾರದ ಚೌಕಟ್ಟಿನಲ್ಲಿ ಬಂಧಿಯಾಗಿರುವ ರುಕ್ಮಿಣಿಗೆ ಸಮುದಾಯದ ದ್ವೇಷದೊಂದಿಗೆ ಸಕೇಶಿಯಾಗಿರುವುದರಿಂದ ಮನೆಯಲ್ಲಿ ಸುಶಿಲತ್ತೆಯಿಂದಲೇ ದೊಡ್ಡ ವಿರೋಧ ಎದುರಾಗುತ್ತದೆ. ತಾನು ಮಡಿ ಹೆಂಗಸಾಗಿರುವಾಗ ರುಕ್ಮಿಣಿ ವಿಧವೆಯಾಗಿದ್ದೂ ಸಕೇಶಿಯಾಗಿರುವುದು ಅವಳ ಕ್ರೌರ್ಯಕ್ಕೆ ಕಾರಣವಾಗುತ್ತದೆ; “ಬೇಕೆಂದೇ ಜಗಳ ತೆಗೆಯುವುದು, ಕೆನ್ನೆಗೆ ತಿವಿಯುವುದು, ಮುಂದಲೆ ಹಿಡಿದು ಜಗ್ಗುವುದು” ಎಲ್ಲವೂ ರುಕ್ಮಿಣಿಯೊಂದಿಗೆ ಸುಶೀಲತ್ತೆಯ ದಿನಚರಿಯಾಗಿರುತ್ತದೆ. ಆದರೆ ಇಡೀ ಸಮುದಾಯವನ್ನು ರುಕ್ಮಿಣಿಯನ್ನು ಸಕೇಶಿಯನ್ನಾಗಿ ಉಳಿಸಿಕೊಳ್ಳಲು ಎದುರು ಹಾಕಿಕೊಳ್ಳುವ ಅವಳ ಮಾವ ಕೃಷ್ಣಶಾಸ್ತ್ರಿಗಳದ್ದೂ ಕುತೂಹಲದ ನಡೆ; “ಈ ಎಳೆ ಪ್ರಾಯದ ತರುಣಿಯ ಮಂಡೆ ಬೋಳಿಸಿ ವಿರೂಪಗೊಳಿಸಲು ನಾನೆಂದೂ ಒಪ್ಪಲಾರೆ” ಎಂದೇ ಅವರು ಪ್ರತಿಪಾದಿಸುತ್ತಾರೆ. ಇದು ಸೌಂದರ್ಯ ಸಂಬಂಧೀ ನಿಲುವೇ ಹೊರತು ಬಂಡಾಯವೂ ಅಲ್ಲ, ಪ್ರತಿಭಟನೆಯೂ ಅಲ್ಲ ಎಂಬುದು ಕೃಷ್ಣಶಾಸ್ತ್ರಿಗಳು ಸೊಸೆ ರುಕ್ಮಿಣಿಯ ಮೇಲೆ ಅತ್ಯಾಚಾರ ನಡೆಸಿದಾಗ ಬಯಲಾಗುತ್ತದೆ. ಪಕ್ಕದ ಮನೆ ಲಕ್ಷ್ಮಮ್ಮನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ಗುಮಾನಿ; “ಗಂಡಸು, ಹೆಂಗಸು ಇಬ್ಬರೇ ಒಂದೇ ಜಾಗದಲ್ಲಿ ಹಗಲೂ ರಾತ್ರಿ ವಾಸ ಮಾಡಬಹುದೇ? ಸಾಕ್ಷಾತ್ ಬ್ರಹ್ಮದೇವ ತಾನೇ ಸೃಷ್ಟಿಸಿದ ಮಗಳು ಶಾರದೆಯಲ್ಲಿ ಮೋಹಗೊಳ್ಳಲಿಲ್ಲವೇ?” ಹಾಗೂ “ಕೃಷ್ಣಶಾಸ್ತ್ರಿಗಳು ಪ್ರಾಯದ ಹೆಣ್ಣು ರುಕ್ಮಿಣಿ ಇಬ್ಬರೇ ಒಟ್ಟಿಗಿರುವಾಗ ಎಲ್ಲವೂ ಮುಗಿದೇ ಹೋಗಿರಬೇಕು” ಎಂಬ ಅವಳ ಮಾತುಗಳು ಕ್ರಿಯೆಯಲ್ಲಿ ನಿಜವಾಗಿಬಿಡುತ್ತವೆ. ಮನೆಯಲ್ಲಿ ಸುುಶೀಲತ್ತೆ ಇರುವವರೆಗೆ ಇರದಿದ್ದ ಈ ಆತಂಕ ರುಕ್ಮಿಣಿ ಹಾಗೂ ಸಮುದಾಯಕ್ಕೆ ಅವಳು ಸತ್ತ ನಂತರ ಕಾಡತೊಡಗುತ್ತದೆ.

ಚದುರಂಗರು ಕಾದಂಬರಿಯಲ್ಲಿ ಬಳಸಿಕೊಂಡಿರುವ ಭಾಷೆ; ಶಿಷ್ಟ ಹಾಗೂ ಗ್ರಾಮ್ಯಗಳ ಸಮ್ಮಿಶ್ರಣ. ಲಕ್ಕನ ಪ್ರಜ್ಞೆಯ ಭಾಗವಾದ ನಿರೂಪಣೆಯಲ್ಲಿ ಗ್ರಾಮ್ಯ ಭಾಷೆ, ರುಕ್ಮಿಣಿಯ ಪ್ರಜ್ಞೆಯ ಮೂಲಕ ನಿರೂಪಿಸುವಾಗ ಶಿಷ್ಟ ಭಾಷೆಗೆ ಬದಲಾಗುತ್ತದೆ. ಇದು ಕಾದಂಬರಿಯ ಅಗತ್ಯವಾಗಿಯೂ ಸ್ವಾಗತಾರ್ಹ ಉಪಕ್ರಮ. ಇದರಿಂದಾಗಿಯೇ ಕಾದಂಬರಿಗೆ ಗಟ್ಟಿಯಾದ ನೆಲೆ ದೊರಕಿದೆ. ಪಾತ್ರ, ಘಟನೆಗಳು ತಮ್ಮ ಸ್ವವನ್ನು ಸ್ಥಾಪಿಸಿಕೊಳ್ಳಲು ಇದು ಅತ್ಯಂತ ಪ್ರಯೋಜನಕಾರೀ ವಿಧಾನವಾಗಿದೆ.

***

ಲೇಖಕ ಚದುರಂಗರ ಬದುಕು ವಿಶೇಷ ಚರ್ಚೆಗೆ ಗುರಿಯಾದದ್ದು. ಅವರು ತಂದೆಯ ಕಡೆಯಿಂದ ತಲಕಾಡಿನ ಗಂಗರಸರ ವಂಶಸ್ಥರು. ತಾಯಿಯ ಕಡೆಯಿಂದ ಅರಸ ಮತ್ತು ಕವಿ ಎರಡೂ ಆಗಿದ್ದ ಮೂರನೆಯ ಮಂಗರಸನ ವಂಶಜರು. ಅಷ್ಟೇ ಅಲ್ಲ ಅವರ ಹಿರಿಯಣ್ಣನಿಗೆ ಮೈಸೂರು ಒಡೆಯರ ವಂಶದ ಸಂಬಂಧದಲ್ಲಿ ಮದುವೆಯಾದ ಮೇಲೆ ಚದುರಂಗರಿಗೆ ರಾಜಮನೆತನದ ಒಡನಾಟ ಸಹಜವಾಗಿಯೇ ಪ್ರಾಪ್ತವಾಯಿತು. ಮೈಸೂರಿನ ಕೊನೆಯ ಅರಸರಾದ ಜಯಚಾಮರಾಜ ಒಡೆಯರ್ ಅವರ ಓರಗೆಯವರಾಗಿ ಇವರು ರಾಯಲ್ ಶಾಲೆಯಲ್ಲಿ ಕಲಿತರು. ಯೌವ್ವನದಲ್ಲಿ ಸ್ವಾತಂತ್ರ್ಯ ಚಳವಳಿ, ಗಾಂಧೀ ವಿಚಾರಗಳು ಹಾಗೂ ಕಮ್ಯುನಿಸಂ ಮತ್ತು ಎಂ. ಎನ್. ರಾಯ್ ವಿಚಾರಧಾರೆಗಳು ಚದುರಂಗರ ಮೇಲೆ ಪ್ರಭಾವ ಬೀರಿದ್ದವು. ಡೋಂಗೀ ಬಾಬಾಗಳ ವಿರುದ್ಧ ಚಳವಳಿಯನ್ನೂ ಅವರು ಸಂಘಟಿಸಿದ್ದರು. ಇವರ ಖಾದೀ ಪ್ರೇಮ ಮನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ತಮ್ಮ ಅಣ್ಣ ಹಾಗೂ ತಾಯಿ ನೋಡಿದ ಸಂಬಂಧ ಹೆಂಡತಿಯೊಂದಿಗೆ ಶ್ರೀಮಂತಿಕೆಯನ್ನೂ ತರಬಹುದಾದ್ದರೂ ಅದನ್ನು ನಿರಾಕರಿಸಿ ಸಾಮಾಜಿಕ ಕಟ್ಟುಪಾಡುಗಳಿಗೆ ವಿರುದ್ಧವಾಗಿ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಂಡರು. ಮುಂದೆ ಹುಟ್ಟೂರಾದ ಕಲ್ಲಹಳ್ಳಿಯಲ್ಲಿ ಪಿತ್ರಾರ್ಜಿತ ವ್ಯವಸಾಯವನ್ನು ವೃತ್ತಿಯನ್ನಾಗಿ ಆಯ್ದುಕೊಂಡದ್ದೂ ಚದುರಂಗರ ಬದುಕಿನ ಕ್ರಾಂತಿಕಾರಕ ಆಯ್ಕೆ. ಬದುಕಿನ ಇಂತಹ ಹಲವು ಅನುಭವಗಳು ಅವರ ಅಭಿವ್ಯಕ್ತಿಯಲ್ಲಿ ಪಾಲುಪಡೆದಿರುವುದನ್ನು ಕನ್ನಡ ಸಾಹಿತ್ಯ ಸಮುದಾಯ ಗುರುತಿಸಿದೆ.

ಈ ಅಂಕಣದ ಹಿಂದಿನ ಬರೆಹಗಳು:
ಮಾನುಷ ಬೇಟೆಯ ರೂಪಕ: ಚಿತ್ತಾಲರ ಶಿಕಾರಿ
ಎ. ಎನ್. ಮೂರ್ತಿರಾಯರ - ದೇವರು; ವಾದ –ವಾಗ್ವಾದದ ನೆಲೆ

ಕಾರಂತರ ಬೆಟ್ಟದ ಜೀವ: ಕೃತಿ ಮತ್ತು ಪ್ರಕೃತಿ
ನಿಸರ್ಗ: ಪ್ರಾದೇಶಿಕ ಪರಿಸರದ ದಟ್ಟ ಚಿತ್ರಣ
ಚಂದ್ರಶೇಖರ ಕಂಬಾರರ ಚಕೋರಿ: ಕನಸುಗಳು ಕಾವ್ಯವಾಗುವ ಪರಿ
ದೇವನೂರರ ಒಡಲಾಳ: ದಲಿತ ಬದುಕಿನ ದರ್ಶನ
ವಾಸ್ತವ–ವಿಕಾಸಗಳ ನಡುವಿನ ಜೀಕುವಿಕೆ: ತೇಜಸ್ವಿಯವರ ಕರ್ವಾಲೊ
ಅನಂತಮೂರ್ತಿಯವರ ‘ಸಂಸ್ಕಾರ’ : ಬದುಕಿನ ಭಿನ್ನ ಮುಖಗಳ ಅನಾವರಣ
ಕಾರ್ನಾಡರ ತುಘಲಕ್: ವರ್ತಮಾನವಾಗುವ ಇತಿಹಾಸದ ತುಣುಕು
ಎಂದಿಗೂ ಮುಪ್ಪಾಗದ ’ಹಸಿರು ಹೊನ್ನು’
ಪ್ರಾದೇಶಿಕತೆಯ ದಟ್ಟ ವಿವರಗಳ-ಮಲೆಗಳಲ್ಲಿ ಮದುಮಗಳು
ಗ್ರಾಮಾಯಣ ಎಂಬ ಸಮಕಾಲೀನ ಪುರಾಣ
ಬದುಕಿನ ದಿವ್ಯದರ್ಶನ ಮೂಡಿಸುವ `ಮರಳಿ ಮಣ್ಣಿಗೆ’
ಮಾಸ್ತಿಯವರ ಕತೆಗಾರಿಕೆಗೆ ಹೊಸ ಆಯಾಮ ದಕ್ಕಿಸಿಕೊಟ್ಟ ಕೃತಿ ‘ಸುಬ್ಬಣ್ಣ’
ಮೈಸೂರ ಮಲ್ಲಿಗೆ ಎಂಬ ಅಮರ ಕಾವ್ಯ
ಪುಸ್ತಕ ಲೋಕವೆಂಬ ಬದುಕಿನ ಬುತ್ತಿ
ಎ.ಆರ್. ಕೃಷ್ಣಶಾಸ್ತ್ರಿಯವರ 'ವಚನ ಭಾರತ'
ಅಂಬಿಕಾತನಯದತ್ತರ ಸಖೀಗೀತ
ಡಿ. ವಿ. ಜಿ.ಯವರ ಮಂಕುತಿಮ್ಮನ ಕಗ್ಗ

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...