ಚಾಲಕನೆಂಬ ದೊಡ್ಡಪ್ಪನೂ..!

Date: 12-08-2022

Location: ಬೆಂಗಳೂರು


“ಚಾಲಕ ಅಪ್ಪ-ಅಮ್ಮನಂತೆ ಜೀವ ಕಾಯುವವನು, ಪ್ರಾಣ ಉಳಿಸುವವನು, ಸರಕು ತರುವವನು, ಜಗತ್ತು ತೋರಿಸುವವನು, ಮನೆ-ಮನ ಬೆಳಗುವವನು, ಅಗಾಧತೆಯ ಪರಿಚಯಿಸುವವನು, ಅರಿವು ಮೂಡಿಸುವವನು..” ಎನ್ನುತ್ತಾರೆ ಕವಿ ವಿಜಯಕಾಂತ ಪಾಟೀಲ. ಅವರು ತಮ್ಮ ಹಸಿರು ಬಂಡಿ ಅಂಕಣದಲ್ಲಿ ತಾವು ಹತ್ತಿರದಿಂದ ಕಂಡ ಹಲವು ಡ್ರೈವರ್‌ಗಳ ಬಗೆಗಿನ ನೆನಪು ಹಂಚಿಕೊಂಡಿದ್ದಾರೆ.

ಅಪ್ಪ ಅಂದ್ರೆ ಆಕಾಶ ಅಲ್ಲ, ನಕ್ಷತ್ರ ಅಲ್ಲ; ಅಮ್ಮನಂತೆಯೇ ಆತನೂ ಈ ನೆಲ ಜಲ ಗಾಳಿ ಇತ್ಯಾದಿಯಂತೆ...! ಅಂದರೆ ಗಾಬರಿ ಬೀಳುವ ಅಗತ್ಯ ಇಲ್ಲ. ಅಪ್ಪ ಚಾಲಕನಾದರೆ ಅಮ್ಮ ಸಾಕ್ಷಾತ್ ಚಲನೆಯೇ..! ಚಲನೆ ಇರುವ ಚೆಲುವು ತಾಯಿಯದು. ಅಪ್ಪ ಅಮ್ಮ ಇಬ್ಬರೂ ಕೈಯಿಗೆ ಬಾಯಿಗೆ ಎದೆಗೆ ತಾಕಿಕೊಂಡೇ ಇರುವ ಸತ್ಯಗಳು. ಆಕಾಶ-ನಕ್ಷತ್ರಗಳೆರಡೂ ಕೈಗೆಟುಕುವುದಿಲ್ಲ ಅಲ್ಲವೇ? ಈ ಕಾರಣದಿಂದಲಷ್ಟೇ ಈ ಮಾತು ಮತ್ತು ಈ ಹರಿವೂ...

ಮೊನ್ನೆ ನಾನು, ನನ್ನ ಮಗ ಬೆಂಗಳೂರಿಗೆ ಹೋದಾಗ, ಹಂಪಿನಗರ ಬಸ್ ನಿಲ್ದಾಣದ ಹತ್ತಿರದ ಆಟೋ ಸ್ಟ್ಯಾಂಡ್‍ಲ್ಲಿ ಹತ್ತಿಪ್ಪತ್ತು ಆಟೋ ಚಾಲಕರನ್ನು `ರಾಜಾಜಿನಗರಕ್ಕೆ ಬರ್ತೀರಾ..?' ಎಂದು ಕೇಳಿದಾಗ `ಇಲ್ಲ' ಎಂಬ ಉತ್ತರಗಳು ಬಹುಮಟ್ಟಿಗೆ ತಿರಸ್ಕಾರದಿಂದಲೇ ಬಂದವು. ಅನತಿದೂರದಲ್ಲಿ ನಿಂತ ಮತ್ತೊಂದು ಆಟೋದ ಚಾಲಕನನ್ನು ಕೇಳಿದೆವು. `ಹ್ಹೂಂ..!' ಎಂದುಬಿಟ್ಟ. ಆತ ನಾವಿಬ್ಬರೂ ಆ.. ಈ.. ಆಟೋಗಳನ್ನು ಕೇಳುತ್ತ ಬರುವುದನ್ನು ಗಮನಿಸುತ್ತಿದ್ದ. ಸರಿಸಮಾರು ಅರವತ್ತು ದಾಟಿದ ಆ ಚಾಲಕ ಆಟೋ ಚಾಲೂ ಮಾಡಿಕೊಂಡು ಸಾಗುತ್ತ, `ನೀವಿಬ್ಬರೂ ಸ್ನೇಹಿತರೇ..?' ಕೇಳಿದ. `ನಾವಿಬ್ರೂ ಅಪ್ಪ ಮಗ..' ಅಂದೆ. ನನಗಿಂತ ಮಗ ಹೈಟ್ ಇದ್ದು ನಾವು ಜೋಡಿಜೋಡಿಯಾಗಿ ಹತ್ತಿಕೊಂಡು ಬರುವುದನ್ನು ನೋಡಿ ಆತನಿಗೆ ಹಾಗನ್ನಿಸಿರಬೇಕು ಅಂದುಕೊಂಡು ಸುಮ್ಮನಾದೆ. ಆತ ಸುಮ್ಮನಿರದೇ ನನ್ನ ಮಗನಿಗೆ, `ನಂಗೆ ಅಪ್ಪಾ ಅಂತಾ ಒಂದು ಸಾರಿ ಕರೀತೀಯಾ? ನನ್ನ ನಿನ್ನಪ್ಪನ ಹಾಗೇ ನೋಡ್ಕೋತೀಯಾ..?' ಅಂದುಬಿಟ್ಟ. ಮಗನಿಗೆ ಗಾಬರಿ-ಅಚ್ಚರಿ. ಆದರೂ ಸಾವರಿಸಿಕೊಂಡು, `ಅಪ್ಪಾ..!' ಅಂದ. ಆ ಹೊತ್ತಿಗಾಗಲೇ ಆ ಯಜಮಾನನ ಕಣ್ಣಹನಿಗಳು ಬಳಬಳನೇ ಉದುರಶುರುಹಚ್ಚಿದ್ದವು! ನಮ್ಮನ್ನು ನೋಡಿ ಹೆಮ್ಮೆಯಿಂದ, `ನಿನ್ನಪ್ಪನನ್ನು ಈಗಿನಂತೆಯೇ ಎಂದೆಂದಿಗೂ ಚೆನ್ನಾಗಿ ನೋಡಿಕೋಬೇಕು; ಮಾತು ಕೊಡು..!' ಅಂದ. ಮಗ `ಹ್ಹೂಂ..' ಅಂದ. `ನಿಮಗೆ ಮಕ್ಕಳೆಷ್ಟು..?' ಎಂದು ನಾ ಕೇಳಿದ್ದಕ್ಕೆ `ಇಲ್ಲ..' ಅಂದಷ್ಟೇ ನಿಟ್ಟುಸಿರು ಬಿಟ್ಟ. ಆಮೇಲಿನ ಹತ್ತು ಹದಿನೈದು ನಿಮಿಷಗಳ ಪಯಣದಲ್ಲಿ, ತಾನು ಮೂವತ್ತು ವರುಷಗಳಿಂದಲೂ ಹೆಂಡತಿ-ಮಕ್ಕಳಿಂದ ದೂರವಾಗಿಸಿಕೊಂಡ ಕಥೆ ಹೇಳಿ ಕಣ್ಣು ಒರೆಸಿಕೊಂಡ. ನನ್ನನ್ನೂ ಅಳಿಸಿಬಿಟ್ಟ. ಮಗ ಮಾತ್ರ ದಂಗು ಹೊಡೆದವನಂತೇ ಇದ್ದ. ಕಲಬುರ್ಗಿ ಮೂಲದ ನಾಯ್ಡು ಮನೆತನದ ಈತನದೀಗ ಪಕ್ಕಾ ಒಂಟಿ ಬದುಕು. ಆಟೋದ ಗುಂಟ ಬದುಕಿನ ಬಂಡಿ. ಚಲನೆಯೊಂದಿಗೇ ಅಚಲ ಬದುಕು. ಇಳಿಯುವಾಗ ಬಿಲ್ ನಲವತ್ತೆಂಟು ರೂಪಾಯಿ ಆಗಿತ್ತು. ನಾ ಐವತ್ತು ಕೊಟ್ಟೆ. ಎರಡು ರೂ ವಾಪಸ್ಸು ಕೊಟ್ಟ..!

ಈ ಕಥೆ ಹೇಳಲು ಕಾರಣವಿಷ್ಟೇ, ನಾ ಕಂಡ ಬಹುತೇಕ ಚಾಲಕರು `ಜೀವ ಕಾಯುವವರೇ..' ಎಂದು ನನಗೆ ಈತನಕ ಮನವರಿಕೆ ಆಗಿದ್ದುದು. ಚಾಲಕ ಅಪ್ಪ-ಅಮ್ಮನಂತೆ ಜೀವ ಕಾಯುವವನು, ಪ್ರಾಣ ಉಳಿಸುವವನು, ಸರಕು ತರುವವನು, ಜಗತ್ತು ತೋರಿಸುವವನು, ಮನೆ-ಮನ ಬೆಳಗುವವನು, ಅಗಾಧತೆಯ ಪರಿಚಯಿಸುವವನು, ಅರಿವು ಮೂಡಿಸುವವನು.. ಇತ್ಯಾದಿ ಇತ್ಯಾದಿ. ಬದುಕಿನ ಸುಲಲಿತ ಚಲನೆಗೆ ಆರೋಗ್ಯ ಎಷ್ಟು ಮುಖ್ಯವೋ, ಮನಸ್ಸು ಎಷ್ಟು ಮುಖ್ಯವೋ, ಅಷ್ಟೇ ನಮ್ಮನ್ನು ಮುನ್ನಡೆಸುವ ಈ ಚಾಲಕ ಅರ್ಥಾತ್ ಚಲನಶೀಲ ಕ್ರಿಯಾಶೀಲ ವ್ಯಕ್ತಿಯೂ ಅಷ್ಟೇ ಮುಖ್ಯ ಮತ್ತು ಪ್ರಮುಖ... ಹೀಗಾಗಿ ನನಗೆ ಖಾಸಗಿಯಾಗಿ ಪರಿಚಿತರಿದ್ದ ಚಾಲಕರೊಡನೊಂದು ಪುಟ್ಟ ಪಯಣ ಈ ಮುಖೇನ.. ಈ ಪಯಣದಲ್ಲಿ ಅವರ ಗುಣಾವಗುಣಗಳೂ ರಂಗುರಂಗಿನ ಜೀಕುಗಳೂ ಬಂದುಹೋಗುತ್ತವೆ; ಅಂದಮಾತ್ರಕ್ಕೆ ಅವರ `ಚಲನ'ಮುಖೀ ಕಾಯಕಶ್ರದ್ಧೆಯನ್ನು ಅಲ್ಲಗಳೆಯಲಾಗದು; ಅಲ್ಲಗಳೆಯಲೂಬಾರದಲ್ಲವೇ?

*

ನಮ್ಮೂರಿನಲ್ಲಿ ನಮ್ಮ ಅವಿಭಕ್ತ ಕುಟುಂಬದ ವ್ಯವಹಾರ/ಕೃಷಿಗೆ ಅನುಕೂಲವಾಗಲೆಂದು ನಮ್ಮವೂ ಲಾರಿ, ಟ್ರ್ಯಾಕ್ಟರು, ಜೀಪುಗಳು ಇದ್ದವು. ಅಂದಮೇಲೆ ಡ್ರೈವರ್‌ಗಳೂ ಇರಲೇಬೇಕಲ್ಲವೆ..? ಇದ್ದರು. ಮನೆಯಲ್ಲಿ ಇವೆಲ್ಲ ಇದ್ದರೂ ಈವರೆಗೂ ನಾನು ದ್ವಿಚಕ್ರ ವಾಹನ ಬಿಟ್ಟು ನಾಕಾರು ಗಾಲಿಗಳ ಗಾಡಿ ಓಡಿಸಲು ಮನಸ್ಸು ಮಾಡಲೇ ಇಲ್ಲ; ಐದಾರು ದಿವಸಗಳ ಕಾಲ ಕಾರು ಕಲಿಯಲು ಹೋಗಿ ಅಷ್ಟಕ್ಕೇ ಬಿಟ್ಟು ಚಾಲನಾ ಪರವಾನಿಗಿ ಪಡೆಯಲಾಗಲೂ ಇಲ್ಲ. ಹೋಗಲಿ ಬಿಡಿ! ನಮ್ಮನೆಯ ಈ ಗಾಡಿಗಳ ಹಲವಾರು ಚಾಲಕರನ್ನು ನಾನು ಹತ್ತಿರದಿಂದ ಬಲ್ಲೆ. ಮತ್ತು ಅವರನ್ನು ನನ್ನ ಕುಟುಂಬದೊಂದಿಗೆ ಚಾಲಕನಾಗಿ ಕರೆದುಕೊಂಡು ಎಲ್ಲಿಗಾದರೂ ಹೋದರೆ, ಅವರ ದಿನದ ಭತ್ಯೆ ಕೊಟ್ಟು ಬೇರೆಕಡೆಗೆ ಊಟಕ್ಕೆಂದು ಕಳಿಸುತ್ತಿರಲಿಲ್ಲ. ಅವನೂ ನಮ್ಮಂತೆಯೇ ನಮ್ಮ ಜೊತೆ ಕುಂತೇ ಉಣ್ಣಬೇಕು, ತಿನ್ನಬೇಕು.. ಇದು ನಮ್ಮ ಸಿದ್ಧಾಂತವೋ ಪದ್ಧತಿಯೋ ಆಗಿತ್ತು. ಇವತ್ತು ಲಾರಿಗಳನ್ನು ಈ ತರಹೇವಾರಿ ಚಾಲಕರ-ಕ್ಲೀನರ್‌ಗಳ ಚಂಚಲತೆ ಮತ್ತು ನಿಂತಲ್ಲಿ ನಿಲ್ಲಲಾರದ ಅವರ ಕುಂಡಿಗಳ ಪಲ್ಲಟಗುಣಗಳಿಂದಾಗಿಯೂ ಕೊಟ್ಟುಬಿಟ್ಟೆವು. ಅವುಗಳ ನಿರ್ವಹಣೆಯೂ ಸುಮಾರಾಗಿ ಭಾರವೆಂದೆನಿಸಿದ ಪರಿಣಾಮವಾಗಿಯೂ ಲಾರಿ/ಟ್ರ್ಯಾಕ್ಟರ್‌ಗಳನ್ನು ಇಲ್ಲ ಮಾಡಿಕೊಂಡೆವು ಅನ್ನುವುದು ನಿಜವೇ. ಈ ಅವಧಿಯಲ್ಲಿ ಬಹುತೇಕ ನಾವು ಕಮ್ಮಿ ಕಮ್ಮೀ ಅಂದರೂ ಇಪ್ಪತ್ತು ಮೂವತ್ತು ಚಾಲಕರನ್ನು ಕಂಡೆವು. ನಮ್ಮ ಹಿರಿಯರು ಅವರನ್ನು ಡ್ರೈವರ್ ಆಗಿಯಷ್ಟೇ ಹೆಚ್ಚಾಗಿ ನೋಡಿಕೊಂಡರೆ, ನಾ ಮಾತ್ರ ಅವರ ಖಾಸಗೀ ವಿಚಾರಗಳನ್ನು ವಿವರಗಳನ್ನು ತಿಳಿದುಕೊಳ್ಳುತ್ತಿದ್ದೆ. ತಕ್ಕಮಟ್ಟಿಗೆ ಸ್ಪಂದಿಸುತ್ತಿದ್ದೆ. ಇಂತಿಪ್ಪ ಕಾರಣಗಳಿಂದಾಗಿ ಈ ಚಾಲಕರ ಲೋಕದ ಬಗ್ಗೆ ಒಂದಷ್ಟಾದರೂ ಬರೆದು ಹಂಚಿಕೊಳ್ಳಬೇಕು ಅನ್ನಿಸಲು ಹಲವು ಕಾರಣಗಳಲ್ಲಿ ನಮ್ಮ ಹೊಸೂರಿನ ಕಿರಿಯ ಗೆಳೆಯ ಕಮ್ ಶಿಷ್ಯನಾದ ಪ್ರಕಾಶ ಬ್ಯಾಡಗಿಯ ಪ್ರಬಲವಾದ ಒತ್ತಾಸೆಯೂ ಒಂದು.. `ವಕೀಲ್ರ, ಏನೇನೆಲ್ಲ ಬರ್ದೀರಿ, ನಮ್ಮ ಬಗ್ಗೆ ಇವತ್ತಿಗೂ ಬರ್ದಿಲ್ಲ; ಚಾಲಕರ ಕಷ್ಟ ನಷ್ಟ ಇಷ್ಟಗಳ ಬಗ್ಗೆ ಒಬ್ಬ ಕವಿಯಾಗಿ ನಿಮಗೆ ಸ್ವಲ್ಪವೂ ಮರುಕ-ಕರುಣೆಯಿಲ್ಲವೇ..?' ಅಂತಾ ಕಾಲೆಳೆದ. ಕುಟುಕಿದ. ನನಗೂ ಅದು ತಟಕು ತಾಕಿತು; ಚಿಂತನೆಗೂ ಹಚ್ಚಿತು. `ಅಂವ ಹೇಳಿದ್ದು ಬರೋಬರೀನ ಅದ..' ಅಂದುಕೊಂಡು ತಕ್ಕಷ್ಟಾದರೂ ಈ ಡ್ರೈವರ್‌ಗಳ ಜಗತ್ತಿನಲ್ಲಿ ನನ್ನ ಅಕ್ಷರಗಳ ಗಾಡಿ ಹೊಡದೇಬಿಡೋಣ ಅನ್ನಿಸಿ ಇಷ್ಟರಮಟ್ಟಿಗೆ ಬಂದು ತಲುಪುತ್ತಿದ್ದೇನೆ..!

ಇಂಥ ಹತ್ತಾರು ಚಾಲಕರ ಸಂದರ್ಶನವನ್ನು ನಾನೇನು ಮಾಡಹೋಗದಿದ್ದರೂ ಅವರ ಜೊತೆ ಬಹಳಷ್ಟು ಒಡನಾಡಿದ್ದೇನೆ. ಅವರ ಕಾಳಜಿಗಳನ್ನೂ ಕಂಡಿದ್ದೇನೆ; ಅವರ ಕೌಟುಂಬಿಕ-ಖಾಸಗಿ ಸಂಗತಿಗಳ ಕುರಿತು ಮುಖಾಮುಖಿಯಾಗಿದ್ದೇನೆ; ಎಲ್ಲೋ ಕೆಲವು ಹುಡುಗಬುದ್ದಿಯ ಡ್ರೈವರ್‌ಗಳ ಕೈಲಿ ಸಿಕ್ಕು (ಚಾಲನಾ ಕೈ ಚಳಕದಲ್ಲಿ) ಎದೆ-ಜೀವ ಎರಡನ್ನೂ ಬಿಗಿಯಾಗಿ ಹಿಡಿದುಕೊಂಡೇ ಅಂತೂ ಜೀವಂತವಾಗಿಯೇ ಮನೆಮುಟ್ಟಿ ನಿಟ್ಟುಸಿರೂ ಬಿಟ್ಟಿದ್ದೇನೆ. ನಮ್ಮೂರಿನವರೇ ಆದ ಮಲ್ಲಯ್ಯನವರು, ಪಕ್ಕದೂರಿನ ಮಹದೇವಪ್ಪ, ಟ್ರ್ಯಾಕ್ಟರ್‌ಗೆ ಸೀಮಿತವಾಗಿದ್ದ ಶೇಖಯ್ಯನವರು ಒಂದೆಡೆಯಾದರೆ, ತರುಣರಾದ ಮಹೇಶ, ರಮೇಶ, ಶಂಕರ ಇವರೆಲ್ಲಾ ಹೆಚ್ಚಾಗಿ ಆಗ ನಮ್ಮಲ್ಲಿದ್ದ ಟ್ರ್ಯಾಕ್ಸ್, ಟಾಟಾ ಸುಮೋಗಳನ್ನೇ ಓಡಿಸುತ್ತಿದ್ದದ್ದು. ಅಂದರೆ ಮನೆಮಂದಿಯೆಲ್ಲ ನೆಂಟರಿಷ್ಟರ ಊರುಕೇರಿಗಳಿಗೋ ಜಾತ್ರೆ-ಸಮಾರಂಭಗಳಿಗೋ ಮದುವೆ-ಗಿದುವೆಗಳಿಗೋ ಹೊರಟಾಗ ಯಾರ ನೇತೃತ್ವದಲ್ಲಿ ಈ ಪಯಣ ಶುರು ಆಗುವುದೋ ಅವರಿಗಿಷ್ಟವಾದ ಮತ್ತು ಸುಲಭಲಭ್ಯವಾದ ಅಂಥ ಡ್ರೈವರ್‌ಗಳೇ ಅವರ ಆಯ್ಕೆಯಾಗಿ ಪ್ರಯಾಣ ಹೊರಡುತ್ತಿತ್ತು. ಈ ಇಷ್ಟು ಜನ ಚಾಲಕರಲ್ಲಿ ಹಿರಿಯರಾದ ಮಲ್ಲಯ್ಯನವರದ್ದೊಂದು ಗತಿಯ ಚಲನೆಯಾದರೆ ಮಹದೇವಪ್ಪನದೊಂದು ಭಿನ್ನ ಥರದ ಚಾಲನಾಶೈಲಿ. ಶೇಖಯ್ಯನವರದು ಟ್ರ್ಯಾಕ್ಟರ್‌ನ ಹಿರೇತನ. ಈ ಮನುಷ್ಯನ ಕೈಲಿ ಆತ ಓಡಿಸುತ್ತಿದ್ದ ಟ್ರ್ಯಾಕ್ಟರ್ ಎಲ್ಲಿಯೇ ಕೆಟ್ಟು ನಿಂತರೂ ಮನೆ ತಲುಪಿಸುವುದು ಮಾತ್ರ ಪಕ್ಕಾ. ಅಂದರೆ ಈತ ಜಗತ್ತಿನಲ್ಲೇ ವಿನೂತನ ಮಾದರಿಯಲ್ಲಿ ಗಾಡಿ ರಿಪೇರಿ ಮಾಡುತ್ತಿದ್ದ. ಟ್ರ್ಯಾಕ್ಟರ್‌ನ ಸಕಲ ಭಾಗಗಳಲ್ಲಿಯೂ ಈತ ಮಾಡಿದ ರಿಪೇರಿಯ ಕುರುಹುಗಳು ಲೋಕಕ್ಕೇ ಎದ್ದುಕಾಣುತ್ತಿದ್ದವು ಮತ್ತು ಅವೆಲ್ಲವೂ ಗಾಡಿಯ ವಿಕಾರರೂಪಕ್ಕೆ ಸಾಕಷ್ಟು ಪುಷ್ಠಿ ಕೊಟ್ಟಂತಿರುತ್ತಿದ್ದವು. ನಮ್ಮ ಕಡೆ ಹುಂಬತನವನ್ನು ರೂಢಿಸಿಕೊಂಡವರಿಗೆ `ಹುಮ್ಮಾರಗುತಗಿ ಮನುಷ್ಯ' ಅಂತಾ ಕರೆಯುತ್ತಾರೆ. ಈತನು ಅದಕ್ಕೆ ಪೂರಕವಾಗಿಯೇ ವ್ಯಕ್ತಿತ್ವ ಹೊಂದಿಸಿಕೊಂಡಿದ್ದ. ಆದರೆ ಬದುಕಿನಲ್ಲೂ ಈತನ ಅತಿಯಾದ ಅಲೆಮಾರಿತನದ ಗುಣವು ಪೆಟ್ಟುಕೊಟ್ಟಿತು. ವ್ಯಕ್ತಿಗತವಾಗಿ ಒಳ್ಳೆಯ, ಪ್ರಾಮಾಣಿಕ ಗುಣಗಳನ್ನು ಹೊಂದಿದ್ದರೂ ಬೇಡವಾದ ಬಣ್ಣಗಳ ಮರುಳಿಗೆ ಬಿದ್ದು ಹೈರಾಣಾಗಿ ಕೊನೆಗೆ ಊರು ಸೇರಿ ಅಕಾಲದಲ್ಲೇ ಇಲ್ಲವಾದದ್ದು ಖೇದದ ಸಂಗತಿಯೇ.. ಹೀಗೇ ಒಬ್ಬೊಬ್ಬ ಡ್ರೈವರ್‌ಗಳಿಗೂ ಒಂದೊಂದು ಬಣ್ಣ; ಕೆಲವರು ಬದುಕನ್ನು ಸುಣ್ಣದಂತೆ ಬೆಳ್ಳಗೆ ಮಾಡಿಕೊಂಡು ನಮ್ಮ ನಡುವೆಯೇ ಉತ್ಸಾಹದಿಂದಿರುವುದೂ ಖುಷಿಯ ಮಾತೇ.

*

ಈ ಇವರೆಲ್ಲ ಬರೀ ನಮ್ಮನೆಯ ವಾಹನಗಳ ಚಾಲಕರಾಗಿಯಷ್ಟೇ ಇರಲಿಲ್ಲ. ನಮ್ಮನೆ ಜನ ಹೋಗಿಬರುವವರೆಗಿನ ಬಹುತೇಕ ಜವಾಬ್ದಾರಿಗಳನ್ನು ಅವರೇ ನಿಭಾಯಿಸುತ್ತಿದ್ದರು. ಇವರಲ್ಲಿ ಕೆಲವರು ಸ್ಪೀಡ್ ಮನೋಭಾವದವರಾದರೆ ಕೆಲವರು ನಿಧಾನಗತಿಗೇ ಅಂಟಿಕೊಂಡಿದ್ದರು. ಅಚ್ಚರಿಯೆಂದರೆ, ನಿಧಾನಗತಿಯ ಚಾಲಕರೇ ಸಣ್ಣಪುಟ್ಟ ಅಪಘಾತಗಳನ್ನು ಮಾಡಿದ್ದರೆ, ಜೋರು ಗಾಡಿ ಓಡಿಸುವವರೇ ಇಂಥ ಅವಘಡಗಳಿಂದ ನಮ್ಮನ್ನೂ ಗಾಡಿಯನ್ನೂ ಪಾರಾಗಿಸಿ ಬಿಡುತ್ತಿದ್ದರು. ಮಾತಿನ ಮಲ್ಲರಾದ ಕೆಲವರು ಊಹಾಪೋಹಗಳ, ಊರ ಉಸಾಬರಿಯ ಹೊಸ ಹೊಸ ಸುದ್ದಿಸಂಗತಿಗಳನ್ನು ಕಥೆ ಮಾಡಿ ಹೇಳುತ್ತ ನಗಾಡಿಸುತ್ತ ಗಾಡಿ ಓಡಿಸಿದರೆ, ಕೆಲವರು ಒಂದೂ ಮಾತನಾಡದೇ ಕೆಮ್ಮು ಸೀನುಗಳ ಮೂಲಕವೇ ದಾರಿ ಸಾಗಿಸುತ್ತಿದ್ದರು. ಇನ್ನು ನಮ್ಮ ಲಾರಿ ಚಾಲಕರ ಕಥೆಗಳೋ, ಮಹಾ ಕಾದಂಬರಿಯ ಸ್ವರೂಪದವೂ ಇದ್ದವು..!

ಬಸವ ಎಂಬವನೊಬ್ಬನಿದ್ದ. ಆತ ಮಹಾ ನಕಲಿಶ್ಯಾಮ. ನಗು ಅವನ ಮುಖದಲ್ಲಷ್ಟೇ ಯಾವಾಗಲೂ ಟೆಂಟು ಹೊಡಕೊಂಡಿರುತ್ತಿತ್ತು. ಮಾಲಕರು ಎಷ್ಟೇ ಬೈದರೂ ಆತ ನಗುತ್ತಲೇ ಇರುತ್ತಿದ್ದ. ಅಂದರೆ ಎಲ್ಲಿಯಾದರೂ ಹೋಗಿ ಬಂದರೆ ನೂರೆಂಟು ಮಿಸ್ಟೇಕುಗಳನ್ನು ಹೊತ್ತುಕೊಂಡು ಬರದಿದ್ದರೆ ಅವನಿಗೆ ಬಹುಶಃ ನಿದ್ದೆ ಬರುತ್ತಿರಲಿಲ್ಲವೇನೋ. ಯಾವಾಗಲೂ ಅವನನ್ನು ಮನಸಾರೆ ಹರಗುತ್ತಿದ್ದ ನಮ್ಮ ಭಾವನ ಸುಳಿವು ಎದುರುಗೊಳ್ಳುವುದನ್ನು ಕಂಡರೆ, `ಯಪ್ಪಾ, ಏ.ಕೆ.47 ಬಂತ್ರೀ ಗೌಡ್ರ..!' ಎಂದು ಮುಖ ಕೆಳಹಾಕಿಬಿಡುತ್ತಿದ್ದ. ಆದರೆ ಗುಂಡು ಹಾರುವುದೇನು ಮಿಸ್ ಆಗುತ್ತಿರಲಿಲ್ಲ. ಭಂಡನಾದ ಈ ಬಸಣ್ಣ ಇಂಥವುಗಳಿಗೆ ಗುಂಡಿಗೆ ರೆಡಿ ಮಾಡಿಕೊಂಡೇ ಇರುತ್ತಿದ್ದ ಒಳ ಒಳಗೆ. ಜೊತೆಗೆ ಒಂದಕ್ಕೆ ಹತ್ತು ಹಚ್ಚಿ ಮಾತನಾಡುವುದು ಅವನಿಗೆ ಕರಗತ; ಸುಳ್ಳು ಅನ್ನುವುದರ ಪಿತಾಮಹ ಇವನೇ ಇದ್ದಿರಬೇಕು ಅನ್ನುವ ಮಟ್ಟಿಗೆ!. ಇವನ ಲೀಲಾವಿನೋದಗಳು ಕಾಮಲೀಲೆಗಳು ಅವಾಗಾವಾಗ ನಮ್ಮಂಥವರ ಮುಂದೆ ಹೊರೆಹೊರೆಯಾಗಿ ಗಂಟು ಬಿಚ್ಚಿಕೊಳ್ಳುತ್ತಿದ್ದವು. ಒಮ್ಮೊಮ್ಮೆ ಈತ ಕೆಲವು ದಿನಗಳ ಕಾಲ ಏಕ್‌ದಂ ನಾಪತ್ತೆಯಾಗಿಬಿಡುತ್ತಿದ್ದ. ಮತ್ತೆ ಪ್ರತ್ಯಕ್ಷನಾಗಿ ಬೈಸಿಕೊಂಡು ಲಾರಿ ಏರುತ್ತಿದ್ದ. ಅವನ ನಗುವಿನ ಹಿಂದಿನ ನೋವು ಅನ್ನುವುದಕ್ಕಿಂತ ಅವನೇ ಮಾಡಿಕೊಂಡ ಬಹಳಷ್ಟು ಎಡವಟ್ಟುಗಳಿಂದಾಗಿ ಅಪಾರ ಹಿಂಸೆ-ಯಾತನೆ ಅನುಭವಿಸಿದ. ಮದುವೆ ಅನ್ನುವುದೆಂದರೆ ಅವನ ಮಟ್ಟಿಗೆ ಚಾಲಕನಾಗಿ ಬೇರೆ ಬೇರೆ ಲಾರಿ ಹತ್ತಿದಂತೆ. ಆಗ ನಾ ಇನ್ನೂ ಧಾರವಾಡದಲ್ಲಿ ಓದುತ್ತಿದ್ದೆ. ಊರಿಗೆ ಬಂದು ನಮ್ಮಂಗಡಿಯಲ್ಲಿ ಕುಂತಾಗ, ಹಿರಿಯರಿಲ್ಲದಾಗ ಈ ಈತನ ಕತೆಗಳನ್ನು ಕೇಳಿ ನಕ್ಕೂ ಮತ್ತೆ ಗಂಭೀರನಾಗಿಯೂ ಪದೇ ಪದೇ ನಾನವನಿಗೆ ಹೇಳುತ್ತಿದ್ದೆ: `ಬಸಣ್ಣ ಕೇಳೋ ಇಲ್ಲಿ.. ಬದುಕೆಂದರೆ ಬರೀ ನಗೆಚಾಟಕಿ ಹೊಡೆದಂತಲ್ಲವೋ; ಬೇರೆ ಬೇರೆ ಲಾರಿ ಹತ್ತಿ ಇಳಿದಂತಲ್ಲವೋ..!' ಅಂತ. ಅದಕ್ಕೂ ನಗುತ್ತಿದ್ದ. ಮತ್ತದನ್ನೇ ಮಾಡುತ್ತಿದ್ದ. ನಾವು ಲಾರಿಗಳನ್ನು ಕೊಟ್ಟಾದ ಮೇಲೆ ಯಾವಾಗಲೋ ಎಲ್ಲೋ ಈ ಬಸಣ್ಣ ಸಿಕ್ಕು `ಅಣ್ಣಯ್ಯಾರ ಅರಾಮ್ ಅದೀರ್ಯಾ..!' ಅಂದು ನೋಡಿ ನಕ್ಕಾಗ ಅವನ ಗುರುತು ಹಿಡಿಯುವುದೇ ನನಗೆ ಕಷ್ಟಸಾಧ್ಯವಾಗಿತ್ತು. ಅವನ ಸ್ಥಿತಿ ಗತಿ ನೋಡಿ ಕ್ಷಣಕಾಲ ಗಲಿಬಿಲಿಗೊಂಡೆ. ಅದೇನೇ ಇದ್ದರೂ ಆ ಬಸಣ್ಣನ ನಗು ಮುಖ ಮಾತ್ರ ನನಗೆ ಆಗಾಗ ಕಾಡುತ್ತದೆ. ಮನಸು ಮರುಗುತ್ತದೆ: `ಈಗ ಎಲ್ಲಿದ್ದಾನೋ ಹೇಗಿದ್ದಾನೋ ಇದ್ದಾನೋ ಇಲ್ಲವೋ..!'

*

ಹತ್ತಿಪ್ಪತ್ತಾರು ಡ್ರೈವರಗಳನ್ನು ಕಂಡ ನಮ್ಮಲ್ಲಿ ಸೊರಬ ಮೂಲದ ನಾಗರಾಜ ಎಂಬುವ ಇನ್ನೊಬ್ಬನಿದ್ದ. ಅವನ ತಮ್ಮನೂ ನಮ್ಮಲ್ಲಿಯೇ ಬಹುವರ್ಷ ಕಾಲ ಇದ್ದ. ಇವರು ಮಾತ್ರ ಎಷ್ಟೇ ವಿಕ್ಷಿಪ್ತ-ಅನಾಹುತ ಗುಣಸಂಪನ್ನರಾದರೂ ತಮ್ಮ ಕುಟುಂಬ ಮತ್ತು ಜೀವನದ ಲೆಕ್ಕಾಚಾರದಲ್ಲಿ ಸಾಕಷ್ಟು ಶಾಣ್ಯಾ ಇದ್ದರು. ನಾಗರಾಜನಿಗಂತೂ `ಬೂಸಿ' ನಾಗ್ರಾಜಾ, ಭುಸ್ ಭುಸ್ ನಾಗ ಎಂಬ ಅಡ್ಡ ಅಗಲ ಉದ್ಧದ ಹೆಸರುಗಳೇ ಅಂಟಿಕೊಂಡಿದ್ದವು. ನಾಗರಾಜನಂತೂ, ಆಗಿನ ಮುಖ್ಯಮಂತ್ರಿಗಳೊಬ್ಬರ ಹಣವನ್ನು ಕಾರು ತುಂಬ ತಂದು ಎಲ್ಲಿಯೂ ಸಿಗದೇ ಅವರೂರ ತೋಟ ತಲುಪಿಸಿದ್ದನ್ನು ಮತ್ತು ತಾನು ಮಾತ್ರ ಅದರಲ್ಲಿ ಒಂದು ಪೈಸೆಯನ್ನೂ ಮುಟ್ಟಲಿಲ್ಲವೆಂಬುದನ್ನು ಚೆಂದ ಕಥೆ ಮಾಡಿ ಹೇಳುತ್ತಿದ್ದ. ಕೆಲಕಾಲದ ನಂತರ ಒಮ್ಮೆ ಆತ ತನ್ನ ದುಃಖ ತೋಡಿಕೊಂಡ: `ಆ ಹಣದಲ್ಲಿನ ಒಂದು ಪೆಂಡಿಯನ್ನಾದರೂ ನಾ ಎತ್ತಿಕೊಂಡಿದ್ದಿದ್ದರೆ ನನ್ನ ಮಕ್ಕಳು-ಹೆಂಡತಿ ಸಮೇತ ಅರಾಮಾಗಿರುತ್ತಿದ್ದೆ' ಎಂದು ತನ್ನ ಈ ಅನ್ನಹಾಕುವ ವೃತ್ತಿಯನ್ನು ಹಳಿದು ಮಾತನಾಡುತ್ತಿದ್ದ. ಈ ಕುರಿತು ಈತ ಹೇಳಿದ್ದರಲ್ಲಿ ಸತ್ಯದ ಪಾಲು ಇತ್ತು ಅನ್ನುವುದನ್ನು ನಾ ಆನಂತರ ಪಕ್ಕಾ ಮಾಡಿಕೊಂಡದ್ದೂ ಆಯಿತು. ಇರಲಿ, ಈತನೂ ನಗುವನ್ನು ಎಕರೆಗಳಷ್ಟು ತನ್ನದಾಗಿ ಮಾಡಿಕೊಂಡಿದ್ದ. ಬದುಕಿನ ಪಡಿಪಾಟಲುಗಳನ್ನು ನನ್ನ ಮುಂದೆ ಆಗಾಗ ಹೇಳಿಕೊಂಡು ಸಾಕಷ್ಟು ಹಗೂರಾಗುತ್ತಿದ್ದ. ನಮ್ಮಲ್ಲಿದ್ದ ಈತನ ತಮ್ಮನಿಗೆ ಮೂರು ಮಕ್ಕಳಿದ್ದರೂ ಅದು ಆಗಿದ್ದರ ಹಿಂದಿನ ವಿಜ್ಞಾನದ ಅರಿವು ಮಾತ್ರ ಭಾಳ ಕಮ್ಮಿ ಇತ್ತು. ಹಾಗೇ ಬಹಳಷ್ಟು ಸಣ್ಣ ವಿಷಯಗಳ ಮಟ್ಟಿಗೂ ಈತ ನಿರಕ್ಷರಿಯೇ ಆಗಿದ್ದ. ಆದರೆ ಇವರೆಲ್ಲ ಒಳ್ಳೆಯ ಚಾಲಕರಾಗಿದ್ದರು ಮತ್ತು ಅದಕ್ಕಿಂತ ಹೆಚ್ಚಾಗಿ ಉತ್ತಮ ಮನುಷ್ಯರೂ ಆಗಿದ್ದರು ಎಂಬುದನ್ನು ನಾನೀಗ ನೆನೆಯಲೇಬೇಕು.

ಮಗದೊಬ್ಬ ಲಾರಿಚಾಲಕ ಮಕಬೂಲ್ ಬಗ್ಗೆ ಹೇಳದೇ ಹೋದರೆ ಈ ಪ್ರಬಂಧಕ್ಕೇ ಅನ್ಯಾಯ ಮತ್ತು ಅವಮಾನವಾಗುವ ಸಾಧ್ಯತೆ ಇರುವುದರಿಂದ ಈ ಅಸಾಧಾರಣ ವ್ಯಕ್ತಿಯ ಬಗೆಗೂ ಎರಡು ಮಾತು ಹೀಗೇ. ಇವನ ಹುರಿಮೀಸೆ ಮತ್ತು ಕಟ್ಟುಮಸ್ತು ಪರ್ಸನಾಲಿಟಿ ನೋಡಿದ ಹಲವರು ಈತನನ್ನು `ಮಚ್ಚರ್ ವಾಲಾ' ಎಂದೂ `ಗೌಡರ ಬಲಗೈ ಭಂಟ'ನೆಂದೂ ಕರೆಯುತ್ತಿದ್ದರು. ಈತ ಬಹಳ ಜವಾಬ್ದಾರಿ ಮತ್ತು ನಿಯತ್ತಿನ ಮನುಷ್ಯನಾಗಿದ್ದ; ಧೈರ್ಯಸ್ಥನೂ ಹೌದು. ನಮ್ಮಲ್ಲಿರುವತನಕ ಚಟಾಧೀನನಾಗದೆ ನಗುನಗುತ್ತಲೇ ಕಾರ್ಯನಿರ್ವಹಿಸುತ್ತಿದ್ದ. ಬಹಳ ಮಂದಿಗೆ ಬೇಕಾದವನೂ ಆಗಿದ್ದ. ನಂತರ ನಮ್ಮ ಲಾರಿ ಬಿಟ್ಟಿಳಿದು ತನ್ನದೇ ಲಾರಿ ಮಾಡಿಕೊಂಡ. ರಾಜಕಾರಣಿಯೂ ಆಗಿ ಈಗ ಯಾಕ್ಟೀವ್ ಆಗಿದ್ದಾನೆ. ಏನೇನೋ ಕಮಿಷನ್ ವ್ಯವಹಾರಗಳನ್ನು ಮಾಡಿಕೊಂಡು ಇರುವ ಮಕಬೂಲ್ ನಾವು ಕಂಡಾಗೊಮ್ಮೆ ಬಾಯಿತುಂಬ ನಕ್ಕು ಉಭಯಕುಶಲೋಪರಿ ವಿಚಾರಿಸುತ್ತಾನೆ. ಇದಕ್ಕಿಂತ ಹೆಚ್ಚು ನಾವೊಬ್ಬ ಮನುಷ್ಯರಾಗಿ ಅಪೇಕ್ಷಿಸುವುದಾದರೂ ಏನಿದೆಯಲ್ಲವೇ..?

ವಾಹನವಿಲ್ಲದೇ ಒಂದಡಿಯನ್ನು ಮುಂದಿಡಲಾರದಂತಹ ಈ ಕಾಲಘಟ್ಟದಲ್ಲಿ ಈ ಡ್ರೈವರ್ ಎಂಬ ದೊರೆಯ ಪ್ರೀತಿ ಇಲ್ಲದೇ ಹೋದರೆ ನಾವೆಲ್ಲ ಬದುಕಿನ ಹಲವನ್ನು ತಲುಪಲಾದೀತೆ..? ಚಾಲಕನಾದವನು, ಅದನ್ನೇ ಬದುಕಿಗಾಸರೆ ಮಾಡಿಕೊಂಡವನು. ಒಮ್ಮೆ ಮನೆಮಾರು ಬಿಟ್ಟು ಗಾಡಿಯ ಸ್ಟೇರಿಂಗ್ ಹಿಡಿದರೆ ಹದಿನೈದೋ ಮೂವತ್ತು ದಿನಗಳಿಗೊಮ್ಮೆ ಕುಟುಂಬ ದರ್ಶನ ಮಾಡದರೆ ಅದೇ ಅವನ ಪುಣ್ಯವೆಂದೆಣಿಸುವಂತೆ, ವಸ್ತುವೋ ಜೀವವೋ ಸಕಲಾರುಗಳನ್ನು ಸಾಗಿಸುವ ಈತ ಅವುಗಳನ್ನು ಜತನದಿಂದ ಕಾಯ್ದು ಕಟ್ಟಿ ತಂದು ದಂಡೆಗೆ ಹಾಕುವುದೆಂದರೆ ಈ ಜಗತ್ತನ್ನೇ ಕಾಯ್ದ ಹಾಗೆ ಎಂದುಕೊಳ್ಳುವ ನಿಜದಲ್ಲಿ ಈ ಚಾಲಕನ ಚಾಲನಾ ದಾರಿಯ ತುಂಬ ಎಷ್ಟೊಂದು ಕಲ್ಲು ಮುಳ್ಳು ಅಡ್ಡಿ ಆತಂಕಗಳಿವೆ ಎಂಬುದನ್ನು ಮನಸ್ಸಿಗೆ ತಂದುಕೊಂಡರೆ ಈ ಅಪ್ಪನಂಥ ಚಾಲಕನಿಗಾರು ಸಾಟಿಯುಂಟು, ಅಂದನ್ನಿಸುವುದು ಸಹಜವಲ್ಲವೇ..!

*

ಇಂಥ ಚಾಲಕ ಒಂದರೆಕ್ಷಣ ಅಜಾಗರೂಕನಾದರೆ;
ಹಳಿ ತಪ್ಪಿದರೆ... ಕೈ ಕೊಡವಿಕೊಂಡರೆ;
ಕಾಲು ಜಾಡಿಸಿದರೆ ಕಣ್ಣುಜ್ಜಿಕೊಂಡರೆ-ಮುಚ್ಚಿಕೊಂಡರೆ;
ಅತ್ತಿತ್ತ ದಿಟ್ಟಿ ಹರಿಸಿದರೆ....!?
ಅಪ್ಪನೇ ಎಡವಿದಂತೆ, ಅಲ್ಲವೆ?
ಮನ ಏನಾದೀತು, ಮನೆ ಏನಾದೀತು, ಮಾರು ಏನಾದೀತು, ಊರು ಏನಾದೀತು, ಕೇರಿ ಏನಾದೀತು..?!
ಚಾಲಕನೂ ಅಪ್ಪನೇ..!
ಅವನಿಗೊಂದು ಸೆಲ್ಯೂಟು ಹೊಡೆದರಷ್ಟೇ ಆಗದು; ಚಾಲಕನನ್ನು ನಮ್ಮ ಪರಿವಾರ/ಕುಟುಂಬದ `ಅತೀ ಮಹತ್ವದ ವ್ಯಕ್ತಿ' (ವಿ.ಐ.ಪಿ)ಯೆಂದೇ ಪರಿಗಣಿಸಿ ಗೌರವಿಸೋಣ.
ನಮ್ಮ ದೇಹದ ಅಂಗಾಂಗಗಳೆಂದೇ ಪರಿಭಾವಿಸಿ ಜೋಪಾನವಾಗಿಟ್ಟುಕೊಳ್ಳೋಣ. ಅಪ್ಪನೆಂದೇ ಅಪ್ಪಿಕೊಳ್ಳೋಣ; ಏನಂತೀರಿ..!?

-ವಿಜಯಕಾಂತ ಪಾಟೀಲ

 

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...