ಚಂಪಾ ಎಂಬ ಸಾಲಿಯೂ ಮಠವೂ…

Date: 19-06-2022

Location: ಬೆಂಗಳೂರು


“ಚಂಪಾ, ಹೊಸದಾಗಿ ಬರೆಯಲಣಿಯಾದ ಕವಿಗಳ ಮಟ್ಟಿಗಂತೂ ಆಕರ್ಷಣೆಯ ಕೇಂದ್ರವೇ ಆಗಿದ್ದಂಥವರು. ಆ ಕೇಂದ್ರವೇ ಒಂದು ಶಾಲೆ ಯಾ ಸಾಲಿ” ಎನ್ನುತ್ತಾರೆ ಕವಿ ವಿಜಯಕಾಂತ ಪಾಟೀಲ. ಅವರು ತಮ್ಮ ಹಸಿರು ಬಂಡಿ ಅಂಕಣದಲ್ಲಿ ಚಂಪಾ ಅವರನ್ನು ನೆನೆದಿದ್ದಾರೆ.

ಚಂಪಾ ತಮ್ಮ `ಹನ್ನೊಂದು ನಾಟಕಗಳು' ಕೃತಿಯ ಮುನ್ನುಡಿಯಲ್ಲಿ ಹೇಳಿದ ಒಂದು ಮಾತಿನ ಮೂಲಕವೇ ನಾನು `ಚಂಪಾ ಎಂಬ ಮಠ'ವನ್ನು ಚಪ್ಪಲಿಯನ್ನು ಮೆಟ್ಟಿಕೊಂಡೇ ಪ್ರವೇಶಿಸಲೆತ್ನಿಸುತ್ತೇನೆ. ದಯಮಾಡಿ ಸಂಭಾಳಿಸಿಕೊಳ್ಳಿ.

"ಇಂದಿಗೂ ನನ್ನ ಕುತ್ತಿಗೆಗೆ ಬಂದಾಗಲೇ, ಸಮಸ್ಯೆ ಒಂದು ’ಬಿರಿ'ಗೆ ಬಂದಾಗಲೇ, ನಾನು ಹಾಳೆ ಎದುರಿಗಿಟ್ಟುಕೊಂಡು ಪೆನ್ನು ಕೈಗೆತ್ತಿಕೊಳ್ಳುವುದು. ಹೀಗಿದ್ದಾಗ ಮಾತ್ರ ಬರವಣಿಗೆ ಎಂಬುದು ಒಂದು 'ಚಟ'ವಾಗದೇ, ಅದು ಅನಿವಾರ್ಯ ಅಭಿವ್ಯಕ್ತಿಯಾಗಲು ಸಾಧ್ಯ. ಎಂದು ನನ್ನ ನಂಬಿಕೆ. ನನ್ನ ನಂಬಿಕೆ ನನಗೆ..!"

*
`ತಮ್ಮದೇ ಆದ ದಾರಿ' ಎಂಬ ಪದವನ್ನು ಮಾಮೂಲಿಯಾಗಿ ಹಲವರ ಕುರಿತಂತೆ ಬಹಳಷ್ಟು ಜನ ಬಳಸುತ್ತಲೇ ಇರುತ್ತಾರೆ. ಅದು ಅಷ್ಟೊಂದು ಸಾಮಾನ್ಯವಾಗಿ ಬಳಸುವ ಪದವಾಗಿ ತನ್ನ ಅರ್ಥವನ್ನೇ ಕಳೆದುಕೊಂಡ ಈ ಹೊತ್ತಿನಲ್ಲಿ, ಈ ಪದಕ್ಕೆ ಬದ್ಧವಾಗಿ ತಮ್ಮದೇ ಆದ ಹಾದಿಯೊಳಗೆ ಬರೆದ, ಬದುಕಿದ ಸಾಹಿತಿ ಚಂಪಾ ಅವರೊಬ್ಬರೇ. ಚಂಪಾ ಇದ್ದಿದ್ದರೆ ಇದೇ ಜೂನ್ 18ಕ್ಕೆ ಎಂಬತ್ನಾಲ್ಕಕ್ಕೆ ಕಾಲಿಡುತ್ತಿದ್ದರು. ಕನ್ನಡದ ಖರೆ ಖರೆ ಸಾಕ್ಷಿಪ್ರಜ್ಞೆಯಂತಿದ್ದ ಚಂಪಾ, ಲಂಕೇಶ್, ತೇಜಸ್ವಿ, ಪಾಪು, ಕಲಬುರ್ಗಿಯಂತಹ ಮಹನೀಯರನ್ನು ಕಳೆದುಕೊಂಡು ನಾವೀಗ ಒಂದು ಬಗೆಯ ದಿಟ್ಟ ದನಿಗಳ ಕೊರತೆಯನ್ನು ಅನುಭವಿಸುತ್ತಿದ್ದೇವೆ. ಇಂತಹ ನೇರ ನಿಷ್ಟುರ ನಡೆನುಡಿಯ ಚಂಪಾ ಹಲವರಿಗಿಂತ ಹಲವಾರು ಬಗೆಯಲ್ಲಿ ವಿಭಿನ್ನರು.

*
ಚಂಪಾ ಹಿಡಿದ ನಡೆದ ತುಳಿದ ದಾರಿ, ಜೀವಿತದ ಕೊನೆಯತನಕ ಇಟ್ಟ ಹೆಜ್ಜೆ ಖಂಡಿತ ಸುಗಮವಾಗಿರಲಿಲ್ಲ. ಸುಲಲಿತವೂ ಆಗಿರಲಿಲ್ಲ. ಸುಲಭವೂ ಆದದ್ದಾಗಿರಲಿಲ್ಲ ಅಂದ ಮೇಲೆ ಅದೇ ಹಾದಿ ಚಂಪಾಗೆ ಏಕೆ ಬೇಕಿತ್ತು?-ಎನ್ನುವವರೂ ಇದ್ದಾರೆ. ಅನ್ನುವವರ, ಅಂದಾಡುವವರ ಬಗ್ಗೆ ಎಂದೂ ತಲೆಕೆಡಿಸಿಕೊಳ್ಳದ ಚಂಪಾ, ಚಂಪಾ ಅಷ್ಟೇ. ಹೌದು, ಅದು ಅವರಿಗೇ ಬೇಕಿತ್ತು. ಅವರ ಅಸ್ತಿತ್ವ ಅರ್ಥಾತ್ ಅಸ್ಮಿತೆ ಇರುವುದೇ ಇಲ್ಲಿ. ಅವರು ಬೇಕಂತಲೇ ರೂಢಿಸಿಕೊಂಡ ಹಾದಿಯೂ ಅದಲ್ಲ. ಅವರೊಳಗೆ ಇರುವ ಚಲನಶೀಲ ದಾರಿ ಅದು. ಕ್ರಿಯಾಶೀಲ ಹಾದಿ ಅದು. ಅದಕ್ಕೆ ನಾ ಚಂಪಾ ಅವರ ಹಾದಿಯನ್ನು `ಚಂಪಾ ಹಾದಿ' ಎಂದೇ ಕರೆಯುತ್ತೇನೆ. ಆ ದಾರಿ ಮತ್ತೊಬ್ಬರಿಗೆ ಅಡ್ಡಾಡಲು ಬಾರದಷ್ಟು ದುರ್ಗಮವಾಗಿದೆ ಎಂದರೂ ಸರಿಯೇ. ಖರಾಬು ಆಗಿದೆ ಎಂದರೂ ಸರಿಯೇ. ಆದರೆ, ಈ ಹಾದಿ ಸ್ವಾರ್ಥದ್ದಲ್ಲ, ಹರಾಮುಕೋರತನದ್ದಲ್ಲ. ಲಾಭಿಕೋರತನದ್ದೂ ಅಲ್ಲ. ಜನಮುಖೀ ಸಮಾಜಮುಖೀ ಬಂಡಾಯಮುಖೀ ಪ್ರಗತಿಶೀಲಮುಖೀ ಹಾದಿಯೂ ಹೌದು; ಈ ನೆಲದ ಸತ್ವ ಹೀರಿಕೊಂಡು ಬೆಳೆದು, ಇದ್ದುದೆಲ್ಲವನ್ನೂ ಬಿಟ್ಟು ಇಲ್ಲದುದರೆಡೆ ತುಡಿವ ಮಿಡಿವ ನಡೆದಾಡುವ ಹಾದಿಯೇ ಇದು ಅಹುದು.

ಕನ್ನಡ ಕಾವ್ಯಲೋಕದಲ್ಲಿ ಒಬ್ಬ ಕವಿಯಾಗಿ ಒಂದು ರೀತಿಯ ಬೆರಗು ಮೂಡಿಸಿದ /ಹೊಸಹಾದಿ ಅರ್ಥಾತ್ ವಿಭಿನ್ನ ಹಾದಿ ತುಳಿದ, ತೋರಿದ ಚಂಪಾ, ಹೊಸದಾಗಿ ಬರೆಯಲಣಿಯಾದ ಕವಿಗಳ ಮಟ್ಟಿಗಂತೂ ಆಕರ್ಷಣೆಯ ಕೇಂದ್ರವೇ ಆಗಿದ್ದಂಥವರು. ಆ ಕೇಂದ್ರವೇ ಒಂದು ಶಾಲೆ ಯಾ ಸಾಲಿ. ನನ್ನನ್ನೂ ಒಳಗೊಂಡು ಹಲವರು ಅಲ್ಲಿ ವಿದ್ಯಾರ್ಥಿಗಳು. ನಿಷ್ಠೆಯಿಂದ ಅಲ್ಲಿ ಕಲಿತವರ್ಯಾರೂ ಫೇಲಾಗಿದ್ದೇ ಇಲ್ಲ. ಅಂಥಾ ಪರಿ ಭಯಾನಕ ಸ್ಕೂಲೂ ಇದು ಹೌದು. ಅಷ್ಟೇ ಪ್ರೀತಿಕಾರುಣ್ಯದ ಈ ಶಾಲಿಗೆ ಮಠವೆಂಬ ಅಡ್ಡಹೆಸರೂ ಇದೆ. ಇಲ್ಲಿ ಕ್ಯಾವಿ ಇಲ್ಲ. ಆಶೀರ್ವಾದ ಮಾಡುವ ಹಸ್ತಗಳಿಲ್ಲ. ಅಂತಃಪುರ ಇಲ್ಲ. ವಿಲಾಸೀ ಮಂಚವಿಲ್ಲ. ಮಂತ್ರಿಸಿ ಕೊಡಲು ರುದ್ರಾಕ್ಷಿ-ವಿಭೂತಿ-ಗಿಬೂತಿಯೂ ಇಲ್ಲಿಲ್ಲ. ಇಲ್ಲಿ ನೀಡುವ ಪ್ರಸಾದದ ಹೆಸರು `ಪ್ರೀತಿ-ಕಾಳಜಿ'. ಇಲ್ಲಿಯ ಮಾರ್ಗದರ್ಶನದ ಮಾತು ಎಂದರೆ: `ಹಾದಿ ಸೊಟ್ಟಗಿದ್ದರೂ ನೆಟ್ಟಗೆ ನಡೆ; ದಾರಿ ಟಾರೇ ಆಗಿದ್ದರೂ ನೋಡಿ ನಡೆ; ಸಿಗ್ನಲ್ ನಿರೀಕ್ಷಿಸದೇ ಒಳಗಿನ ಲೈಟ್ ಆನ್ ಮಾಡಿಕೊಂಡು ನುಡಿ-ಮಾತಾಡು.!' ಇಷ್ಟೇ. ಹೀಗಾಗಿ ಈ ಮಠ ಅಥಾತ್ ಸಾಲಿಗೆ ಸಿಕ್ಕಾಪಟ್ಟೆ ಎಡ್ಮಿಷನ್‍ಗಳು. ಮಾಸ್ತರು/ಸ್ವಾಮೀಜಿ ಮಾತ್ರ ಒಬ್ಬರೇ. ಫೀ ಇಲ್ಲದೆ ಪಾಠ ಹೇಳಿಕೊಡುವ, ಬಿಲ್ಡಿಂಗ್ ಇಲ್ಲದ ಸುಸಜ್ಜಿತ `ಮಹಾಮನೆ' ಮಾದರಿಯ ನಿರಾಕಾರ ಕಟ್ಟೋಣವಿದು. ಇದು ಎಂದಿಗೂ ಸ್ಥಾವರವಾಗಲೇ ಇಲ್ಲ. ಜಂಗಮಸ್ವರೂಪಿ ಪಕ್ಕಾ.!

*
ಚಂದ್ರಶೇಖರ ಪಾಟೀಲ ಯಾ ಸಿ.ಬಿ.ಪಾಟೀಲ ( ಪಟ್ಟಣಶೆಟ್ಟಿ ಸರ್ ಬಾಯಲ್ಲಿ ಯಾವಾಗಲೂ `ಸೀಬಿ' ಎಂದೇ ಕರೆಯಿಸಿಕೊಳ್ಳುತ್ತಿದ್ದರು..) ಬರೀ ಬರೆದೇ ಇವರು ಚಂಪಾ ಆಗಲಿಲ್ಲ. ಬೀದಿಗೆ ಇಳಿದು ಹೋರಾಟ ಮಾಡಿದರು. ತಮ್ಮದೇ ಆದ ರೀತಿಯಲ್ಲಿ ಮಾತಾಡಿದರು. ಯಾರಿಗೂ ಬರೆಯಲಸಾಧ್ಯವಾದ ವಿಶಿಷ್ಟ ನಾಟಕಗಳನ್ನು ಬರೆದರು. ಇವರ ಪ್ರಬಂಧಗಳು ಕೂಡ ಅವರ ಹಾದಿಯದ್ದೇ ಆದ ಉತ್ಪನ್ನಗಳು. `ಸಂಕ್ರಮಣ' ಸಾಹಿತ್ಯ ಮಾಸಿಕದ ಮೂಲಕ ಐವತ್ತು ವರ್ಷಗಳ ಕಾಲ ಏನು ಮಾಡಬೇಕಿತ್ತೋ ಅದನ್ನೇ ಮಾಡಿದರು. ಇವರ ಕಾಲಂಗಳೆಂದರೆ ಆಟಂಬಾಂಬುಗಳು. ಏಕೆ-47.. ಇತ್ಯಾದಿಯೆಂದು ಕೊಂಡಾಡಿದವರಿದ್ದಾರೆ. ಭಯಬಿದ್ದು ಹೋದವರಿದ್ದಾರೆ. ಉಳಕೊಂಡವರು ಕ್ವಾಪೀಡಿತರಾಗಿದ್ದಾರೆ. ನಾಡು-ನುಡಿಯ ಮಟ್ಟಿಗಿನ ಇವರ ನಿಷ್ಠೆ ಬಗ್ಗೆ ಮಾತಾಡುವುದೇ ಸಲ್ಲದು. ಅಂಥ ಸಾರ್ಥಕ ಬದುಕಿನ ಹಾದಿಯಲ್ಲಿ ಚಂಪಾ 2017ರಲ್ಲಿ ಮೈಸೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಸಾ ಪರಿಷತ್ತು ಎಂದು ಅವರೇ ಹೀಗಳೆಯುತ್ತಿದ್ದ ಸಾಹಿತ್ಯ ಪರಿಷತ್ತಿಗೆ ಅಧ್ಯಕ್ಷರಾಗಿಯೂ ಆಯ್ಕೆಯಾಗಿ ತಮ್ಮತನವನ್ನೇ ಅಲ್ಲಿಯೂ ಮೆರೆದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಅಲ್ಲಿ ತಮ್ಮ ಛಾಪು ಮೂಡಿಸಿದರು. ಚಂಪಾ ಅವರ ಯಡವಟ್ಟುತನವನ್ನು ಹೀಯಾಳಿಸಬಲ್ಲವರನ್ನೂ ತಬ್ಬಿಕೊಂಡು ಮಾತಾಡುತ್ತಿದ್ದರು. ಪ್ರೀತಿಯಿಲ್ಲದೇ ಚಂಪಾ ಏನನ್ನೂ ಮಾಡಲಿಲ್ಲ; ದ್ವೇಷವನ್ನೂ ಕೂಡ..! ಖರೆ ಅಂದರೆ ನಮ್ಮೆಲ್ಲರ ಪಾಲಿಗೆ ಅವರು `ಜಾಗೃತ ಭಾರತ'ವಾಗಿದ್ದರು. ಈ ಹೊತ್ತು ನಮ್ಮ ದನಿಯಲ್ಲಿ ಏನಾದರೂ ಕಸುವು ತುಸುವಾದರೂ ಇದೆಯೆಂದು ಭಾವಿಸಬಹುದಾದರೆ ಅದರ ಹಿಂದಿನ ಶಕ್ತಿ ಚಂಪಾ ಅವರೇ. ಇಂತಹ ಚಂಪಾ ಇವತ್ತು ನಮ್ಮನ್ನು ಬಿಟ್ಟು ಹೋಗಿದ್ದಾರೆ ಅಂದರೆ ನಮ್ಮೊಳಗೂ ಒಬ್ಬ `ಮರಿಚಂಪಾ'ನನ್ನು ಇಟ್ಟೇ ಹೋಗಿದ್ದಾರೆಂದು ತಿಳಿಯಬೇಕು.

ಚಂಪಾ ಕಾವ್ಯದ ಬಗ್ಗೆ ಮಹತ್ವದ ವಿಮರ್ಶಕರಾದ ಎಚ್ ಎಸ್ ರಾಘವೇಂದ್ರರಾವ್ ಅವರು ಹೇಳಿದ ಮಾತೊಂದನ್ನು ಅನುಮೋದಿಸುತ್ತ ನನ್ನ `ಪುಟ್ಟ ಚಂಪಾಪುರಾಣ'ವನ್ನು ಮುಗಿಸುತ್ತೇನೆ ಸದ್ಯಕ್ಕೆ.

"ಆಧುನಿಕ ಕನ್ನಡ ಕಾವ್ಯದಲ್ಲಿ ರಾಜಕೀಯವನ್ನೇ ಪೂರ್ಣಪ್ರಮಾಣದ ವಸ್ತುವಾಗಿ, ಪ್ರೇರಕವಾಗಿ ಮಾಡಿಕೊಂಡ ಕವಿಗಳು ಕಡಿಮೆ. ಎಲ್ಲ ಕವಿತೆಯ ಹಿಂದೆಯೂ ರಾಜಕೀಯದ ಅವತಾರಗಳನ್ನು ಕಾಣಬಹುದೆನ್ನುವ ಮಾತು ಬೇರೆಯೇ. ಆದರೆ, ರಾಜಕೀಯವೇ ಕೇಂದ್ರವೆನ್ನಬಹುದಾದ ಕಾವ್ಯಸಂಕೀರ್ಣವನ್ನು ರೂಪಿಸಿದವರಲ್ಲಿ ಅಡಿಗರು ಮತ್ತು ಚಂಪಾ ಇಬ್ಬರೇ ಮುಖ್ಯವಾದವರು.. ಪಾಟೀಲರು ಹಲವು ಅರ್ಥದಲ್ಲಿ ಅಂತರಂಗ ಮತ್ತು ಬಹಿರಂಗಗಳ ಅಂತರವನ್ನು ಕಳೆದುಕೊಂಡಿರುವ ಕೆಲವೇ ಕವಿಗಳಲ್ಲಿ ಒಬ್ಬರು... ತನಗೆ, ಕವಿತೆ ಬರೆಯಲು ಏಕಾಂತ ಬೇಡವೆಂದು ಹೇಳಿದ ಪಾಟೀಲರು ಲೋಕಾಂತವನ್ನೇ ಏಕಾಂತದಲ್ಲಿ ಅಡಗಿಸಿಕೊಂಡವರು."

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...