'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..

Date: 07-06-2021

Location: ಬೆಂಗಳೂರು


'ಚಂದ್ರಗಿರಿ' ಎಂದ ಕೂಡಲೇ ಪಟ್ಟನೆ ನೆನಪಾಗುವಷ್ಟರವರೆಗೆ ‘ಸಾರ ಅಬೂಬಕ್ಕರ್’ ಅವರ 'ಚಂದ್ರಗಿರಿ ತೀರದಲ್ಲಿ' - ಕಾದಂಬರಿ ಓದುವ ಮನಸ್ಸುಗಳಲ್ಲಿ ಛಾಪನ್ನು ಒತ್ತಿ ಬಿಟ್ಟಿದೆ ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ತಮ್ಮ ‘ಅನಂತಯಾನ’ ಅಂಕಣದಲ್ಲಿ ಚಂದ್ರಗಿರಿ ತೀರದಲ್ಲಿ ಕೃತಿಯ ಕುರಿತು ಅರ್ಥಪೂರ್ಣವಾಗಿ ವಿಶ್ಲೇಷಿಸಿದ್ದಾರೆ.

ರೀತಿ-ನೀತಿಗಳು, ಕಟ್ಟು-ಕಟ್ಟಲೆಗಳು ಬದುಕನ್ನು ಸರಳವಾಗಿಸಬೇಕೇ ವಿನಃ ಕ್ಲಿಷ್ಟಕರವನ್ನಾಗಲ್ಲ. ಸಮುದಾಯದ ರಿವಾಜುಗಳು ಅದೆಷ್ಟು ಪ್ರಭಲವಾಗಿ ಬೇರೂರಿವೆ ಅಂದರೆ; ಅದರಿಂದ ಕಿಂಚಿತ್ತು ಕದಲಿದರೂ ಅದು ಸರ್ವಶಕ್ತನಿಗೆ ವಿರುದ್ಧವಾಗಿ ನಡೆದಂತೆಯೇ ಎಂಬ ತಿಳುವಳಿಕೆಯು ಬದುಕನ್ನು ಜಟಿಲಗೊಳಿಸಿ ಬಿಡುತ್ತದೆ. ಕಾಲಾನುಕಾಲಕ್ಕೆ ಬಾಳುವ ಕ್ರಮದಲ್ಲಿ ಬದಲಾವಣೆಯನ್ನು ಸಮುದಾಯ, ಮತ, ಧರ್ಮಗಳು ಹುಟ್ಟು ಹಾಕಿ ಜೀವಿಸುವ ಉಸಿರಿಗೆ ರಹದಾರಿ ತೋರಬೇಕು. ಜಡ್ಡುಗಟ್ಟಿ ನಿಂತು ಕತ್ತಲಲ್ಲಿ ಕಳೆಯುತ್ತೇನೆ ಎನ್ನುವ ಮನಸ್ಥಿತಿಯಿಂದ ಹೊರ ಬರಬೇಕಾದುದು ಕಾಲದ ತುರ್ತು. ಬದಲಾಗದಿರುವಂತಹ ನಿಯಮಾವಳಿಗಳ ಜೊತೆಗೆ ಬಾಳನ್ನು ಸವೆಯುವ ದರ್ದು ಇರಬಾರದಷ್ಟೇ. ಬದಲಾವಣೆಗಳ ಅಗತ್ಯವಿಲ್ಲವೆಂದು ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ಮನಸ್ಥಿಯಿಂದಲೂ ದೂರವಾಗಬೇಕು. ಅಂತಹ ಒಂದು ನಂಬಿಕೆ, ರಿವಾಜು ಸುಂದರ ಬದುಕನ್ನು ಹೇಗೆ ರೌರವ ನರಕವನ್ನಾಗಿಸಿತು ಎನ್ನುವುದನ್ನು ಇದ್ದಂತೆಯೇ ಚಿತ್ರಿಸಿದ ‘ಸಾರಾ ಅಬೂಬಕರ್’ ಅವರ ಕಾದಂಬರಿ 'ಚಂದ್ರಗಿರಿ ತೀರದಲ್ಲಿ'.

ಚಾಚಿ ಹರಡಿರುವ ಅರಬ್ಬೀ ಕಡಲ ಪಕ್ಕ ಹರಿಯುವ ಚಂದ್ರಗಿರಿ ನದಿಯನ್ನು ಮಳೆಗಾಲವು ಉಕ್ಕೇರಿಸಿ ಬಿಡುತ್ತಿತ್ತು. ಅಂತೆಯೇ ಮನುಷ್ಯನ ಭಾವನೆಯನ್ನೂ. ಭಾವುಕ ವಿಶ್ವಾಸಗಳು ಬದುಕನ್ನು ಕಟ್ಟಲೂ ಬಲ್ಲದು-ಕೆಡವಲೂ ಬಲ್ಲದು ಎನ್ನುವುದಕ್ಕೆ ಕಾದಂಬರಿಯ ನಾದಿರ-ರಶೀದ್ ಪಾತ್ರಗಳು ಸಾಕ್ಷಿ. ತನ್ನದೇ ಮಾತು ನಡೆಯಬೇಕೆಂಬ ಹುಂಬು ಅಹಮಿಕೆಯು ತನ್ನ ಮಗಳ ಬಾಳನ್ನು ಮೂರಾಬಟ್ಟೆ ಮಾಡುವುದರ ಅರಿವಿದ್ದೂ; ತನ್ನ ನಂಬಿಕೆ, ದರ್ಪ, ಅಹಂಭಾವ, ಸಿಡುಕುಗಳು ಸ್ವಂತ ಕಾಲ ಬುಡವನ್ನೇ ಕಚ್ಚುತ್ತಿರುವುದನ್ನೂ ಲೆಕ್ಕಿಸದೆ ಆ ಕ್ಷಣದ 'ನಾನು' ನೀಡುವ ಮತ್ತಿನ ಸುಖಕ್ಕೆ ಶರಣಾದುದರ ಫಲವನ್ನು ಪೂರ್ಣ ಕುಟು೦ಬ ಉಣ್ಣ ಬೇಕಾಯಿತು.

ಸಮುದಾಯ, ಮತ, ಧರ್ಮ, ಜಾತಿ ಎಲ್ಲವನ್ನೂ ಮೀರಿದ್ದು-ದಾಂಪತ್ಯ. ಅಲ್ಲಿರಬೇಕಾದ ಆಪ್ತತೆ-ವಾಂಛೆಗಳು, ಅನ್ಯರ ಮೂಗಿನ ನೇರಕ್ಕೆ ನಡೆಯುವಂತದ್ದಲ್ಲ..ದಾಂಪತ್ಯವೆಂದರೆ ಹೇಗಿರಬೇಕು ಎನ್ನುವುದನ್ನೂ ಕಾದಂಬರಿ ತಿಳಿಸುತ್ತದೆ. ಮಹಮ್ಮದ ಖಾನ್ -ಫಾತಿಮಾ ದಂಪತಿಗಳಿಗೆ ನಾದಿರಾ-ಜಮೀಲಾ ಎಂಬಿಬ್ಬರು ಹೆಣ್ಣು ಮಕ್ಕಳು. ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಹೆತ್ತವರ ಸಂಕಟ ಅಗೆದಷ್ಟೂ ಆಳವಾಗುತ್ತಲೇ ಹೋಗುತ್ತದೆ ಎನ್ನುವುದಕ್ಕೆ ಕಾರಣಗಳು ಹಲವು. ಅದರಲ್ಲಿ ವರದಕ್ಷಿಣೆಯ ಪಿಡುಗೂ ಒಂದು. ತಾನು ಹೇಳಿದಂತೆಯೇ ನಡೆಯಬೇಕೆನ್ನುವ ದರ್ಪಾಭಿಲಾಷೆಯ ಮನುಷ್ಯ ಮಹಮ್ಮದ್ ಖಾನ್. ಅದಕ್ಕಾಗಿ ಆತ ಯಾವ ಮಟ್ಟಕ್ಕಾದರೂ ಹೋಗಬಲ್ಲ. ರಕ್ತದ ಬಿಸಿ ಏರು ಮುಖವಾಗಿ ಚಲಿಸುವಾಗ ಇಂತಹ ಮನಸ್ಥಿತಿಯು ಸಹಜ. ಆದರೆ ಬಿಸಿ ರಕ್ತ ತನ್ನದೇ ಮಗಳ ಬಾಳನ್ನು ಕೆಡಹುವಂತಹ ಕೆಲಸವನ್ನು ಮಾಡಬಾರದಲ್ಲ. ರಕ್ತದ ಬಿಸಿ ಇಳಿಮುಖವಾದಾಗ ತಪ್ಪಿನ ಅರಿವಾಗಲು- ಕಾಲ ಮಿಂಚಿ ಹೋಗಿರುತ್ತದೆ.

ಒಂದೊಮ್ಮೆ ಶಿಕ್ಷಣದ ವಾಸನೆಯೇ ಇಲ್ಲದ ಸಮುದಾಯದ ಹೆಣ್ಣು ಜೀವಗಳಿಗೆ ಮದುವೆ, ದಾಂಪತ್ಯ ಎಂದರೆ ಏನು? ಎನ್ನುವುದರ ಕಲ್ಪನೆಯೇ ಇಲ್ಲದ ಹೊತ್ತಲ್ಲಿ ಕೈ-ಪಾದಗಳಿಗೆ ಮದರಂಗಿಯನ್ನು ಹಚ್ಚಿ, ಆಭರಣ ತೊಡಿಸಿ ನಿಕಾಹ್ ಗೆ 'ಕಬೂಲ್' ಅನ್ನಿಸಿದ್ದರು. ಗಂಡು-ಹೆಣ್ಣಿನ ನಡುವೆ ವಯಸ್ಸಿನ ಅಂತರವೂ ಬಹಳಷ್ಟು ಇದ್ದರೂ ಗಂಡು ಬೇಲಿ ಹಾರುವುದನ್ನು ತಡೆಯಲು ನಿಕಾಹವನ್ನು ಮಾಡಿಸಿ ಬಿಡುತ್ತಿದ್ದರು. ಮಹಮ್ಮದ ಖಾನ್ ರ ತಂದೆ ಕೂಡ ಅದನ್ನೇ ಮಾಡಿದರು. ಅನುಭೋಗಿಸುವ ಸುಖ ಏನಿದ್ದರೂ ಗಂಡಿಗೆ ಮಾತ್ರ ಮೀಸಲು ಎನ್ನುವುದನ್ನು ಕೃತಿಯು ನಿರೂಪಿಸುತ್ತದೆ. ಸಮುದಾಯದ ಇತಿಹಾಸದಲ್ಲಿ ಹೆಣ್ಣಿಗೆ ಬಲುದೊಡ್ಡ ಪ್ರಾಶಸ್ತ್ಯವನ್ನು ಒಂದೊಮ್ಮೆ ನೀಡಲಾಗಿತ್ತು. ಯುದ್ಧ ಭೂಮಿಯಲ್ಲೂ ಖಡ್ಗ ಹಿಡಿದು ಪುರುಷ ಸಮಾನವಾಗಿ ಹೋರಾಡಿದ ಚರಿತ್ರೆಯಿದೆ. ಎಂದು ಸಾರಾ ಅವರು ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ. ಕಾಲಕ್ರಮೇಣ ಪುರುಷ ಅಹಮಿಕೆಯು ಸ್ತ್ರೀಯನ್ನು ತುಳಿಯುತ್ತಾ ಬಂದು. ಹಲವು ಪೂರ್ವಾಗ್ರಹಗಳನ್ನು ಜೊತೆಯಾಗಿಸಿಕೊಂಡು. ಕೇವಲ ಗಂಡಿನ ಸ್ವಾರ್ಥಕ್ಕಾಗಿ ಹೆಣ್ಣಿನ ಸುತ್ತ ನಂಬಿಕೆಯ ಬೇಲಿ ನೆಟ್ಟು ತನ್ನ ಅಡಿಯಾಳನ್ನಾಗಿಸಿದ್ದು ದೊಡ್ಡ ದುರಂತ ಎನ್ನುವುದು ಸಾರಾ ಅವರ ಅಭಿಪ್ರಾಯ.

ಏನೂ ಅರಿಯದ ಮುಗ್ಧ ಹೆಣ್ಣು ಮಗಳ ಮನಸ್ಸನ್ನು ಖುದ್ದು ಹೆಣ್ಣಾಗಿರುವ ಒಬ್ಬಾಕೆ ತಾಯಿಯೇ ಅರ್ಥ ಮಾಡಿಕೊಂಡರೂ, ಅದನ್ನು ಪುರುಷ ಪ್ರಧಾನ ಸಮಾಜದೆದುರು ಪ್ರಶಿಸುವ ಧೈರ್ಯ ಹೆಣ್ಣಿಗೆ ಇರುವುದಿಲ್ಲವಷ್ಟೆ. ಅಷ್ಟಕ್ಕೇ ದುಃಖ, ಕಣ್ಣೀರುಗಳನ್ನು ಹೊದ್ದುಕೊಂಡ ಹೆಣ್ಣು ಜೀವ ನಲುಗಿ, ಮಲಗಿ ಬಿಡುತ್ತವೆ. ಕಾಲವು ಎಲ್ಲದಕ್ಕೂ ಸಮಾಧಾನವನ್ನು ನೀಡುತ್ತಾ..ಬದುಕು ಇಷ್ಟೇ.. ಎಂದು ತೀರ್ಮಾನಿಸುವಂತೆ-ಅದರೊಳಗೇ ಸುತ್ತು ಹಾಕುವಂತೆ ಮಾಡುವುದನ್ನು ಕಾಲದ ಕುಚೋದ್ಯ ಎನ್ನೋಣವೇ?

ಮಹಮ್ಮದ ಖಾನ್- ಫಾತಿಮಾರ ದಾಂಪತ್ಯದಲ್ಲಿ ನಲಿವಾಗಲಿ, ನವಿರಾಗಲಿ ಎಳ್ಳಷ್ಟೂ ಇರಲಿಲ್ಲ. ಏಟುಗಳಿಂದ ಫಾತಿಮಾಳ ಬಾಯಿ ಮುಚ್ಚಿಸಿದ ಖಾನ್ ಸಾಹೇಬರು ಜೀವನ ಪೂರ್ತಿ ಆಕೆ ತಮ್ಮೆದುರು ಉಸಿರೆತ್ತದಂತೆ ಮಾಡಿದ್ದರು. ದಾಂಪತ್ಯದಲ್ಲಿ ಪ್ರೀತಿ ಬಿಡಿ, ಸಮಾಧಾನವನ್ನೂ ಕಾಣದೆ-ಈ ಹುಟ್ಟೇ ಇಷ್ಟಕ್ಕೇನೋ…ನಂಬಿ ಬಾಳುವಂತಾಯಿತು ಫಾತಿಮಾಳ ಜೀವನ. ಬೆಳೆಯುತ್ತಿರುವ ಮಕ್ಕಳ ಎದುರು ಹೊಡೆಯುವ; ಅದನ್ನು ಕಂಡು ಬೆದರಿದ ಹೆಣ್ಣು ಜೀವಗಳು ಪ್ರತಿರೋಧವನ್ನು ತೋರಿಸಲಾಗದೆ-ಚಂದ್ರಗಿರಿ ನದಿಯ ತೀರದಲ್ಲಿ ಕುಳಿತು ಬಿಕ್ಕುವವರ ಮನಸ್ಸಲ್ಲಿ 'ಮದುವೆ', 'ಗಂಡ' ಎಂದರೆ ಹೀಗೆಯೇ… ಎಂಬ ಚಿತ್ರಣವು ದಟ್ಟವಾಗಿ ಬೇರೂರುತ್ತಾ ಹೋಗುತ್ತದೆ. ಮಹಮ್ಮದ ಖಾನ್ ತನ್ನ ದಾಂಪತ್ಯವನ್ನು ಅನುಭವಿಸಿದ ರೀತಿಗೂ ನಾದಿರಾ-ರಶೀದ್ ದಾಂಪತ್ಯವನ್ನು ಬಾಳಿ ಬದುಕಿದ ಕ್ರಮಕ್ಕೂ ಅಂತರವಿದೆ. ಖಾನ್ ಸಾಹೇಬರು ತನ್ನ ಭೋಗಕ್ಕೆ ಮತ್ತು ಚಾಕರಿಗೆಂದೇ ಹೆಂಡತಿ ಫಾತಿಮಾಳನ್ನು ಇರಿಸಿ, ನಡೆಸಿ ಬಾಳಿದರು. ಗಂಡಿನ ಕಾಮದ ಹಸಿವು, ಹೊಟ್ಟೆಯ ಹಸಿವು ಅಂತ ಇನ್ನಷ್ಟು ಹಸಿವುಗಳನ್ನು ತಣಿಸುವ ವಸ್ತು-ಹೆಣ್ಣಾಗಿ ಬಿಟ್ಟಿದ್ದಾಳೆಂದು ಕಾದಂಬರಿ ಹೇಳುತ್ತದೆ.

ಮದುವೆಯಲ್ಲಿ ಸಾಮನ್ಯವಾಗಿ ಕಂಡು ಬರುವ ಕೊಂಕುಗಳನ್ನು 'ಜಮೀಲ'ಳ ಮದುವೆಯಲ್ಲಿ ಕಾಣಬಹುದು. ತುಪ್ಪದ ಅನ್ನಕ್ಕೆ ಸರಿಯಾದ ಪ್ರಮಾಣದಲ್ಲಿ ತುಪ್ಪ ಬಿದ್ದಿಲ್ಲವೆಂದೂ, ಸಾರಿನಲ್ಲಿ ಮಾಂಸದ ತುಂಡುಗಳು ಸಾಕಷ್ಟಿರಲಿಲ್ಲವೆಂದೂ ಹೇಳುವ ಗಂಡಿನ ಕಡೆಯವರ ಅಸಹನೆ, ಧಿಮಾಕು ಕಾಲ-ದೇಶವನ್ನು ದಾಟಿದ್ದು. ಗಂಡನ ಮನೆಗೆ ಮದುವೆಯಾದ ಹೆಣ್ಣು ದೋಣಿಯಲ್ಲಿ ಹೋಗುವ ದೃಶ್ಯವು ಅನೇಕ ಪ್ರತಿಮೆಗಳನ್ನು ಕಟ್ಟಿ ಕೊಡುತ್ತದೆ. ಸಂಸಾರ ನೌಕೆಯು ಸಾಗುವುದು ಹೆಣ್ಣಿನ ಜಾಣ್ಮೆಯಿಂದಲೇ. ಆಕೆಗಿರುವ ಸೂಕ್ಷ್ಮತೆ, ಭಾವತೀವ್ರತೆ ಗಂಡಿಗಿರುವುದಿಲ್ಲವಷ್ಟೇ. ಆಕೆಗದು ದೈವದತ್ತವಾದದ್ದು. ಅದನ್ನು ಬಳಸಿಕೊಂಡು ಬೆಳೆಯುವ ಗುಣ ಗಂಡಿಗಿರಬೇಕು.

'ಮೊದಲ ದಿನ ಮೌನ..ಅಳುವೇ ತುಟಿಗೆ ಬಂದಂತೆ…' - ಕವಿ ವಾಣಿಯಂತೆ ನಾದಿರಾಳ ಮೊದಲ ರಾತ್ರಿಯೂ ಆಕೆಗೆ ಭಯ ಹುಟ್ಟಿಸಿತ್ತು. ಅಂದು ಇಡೀ ಕೋಣೆಯೊಳಗೆ ಆಕೆಯ ಎದೆಯ ಢವಗುಟ್ಟುವಿಕೆಯು ಮಾರ್ದನಿಸುತ್ತಿತ್ತು. ಗಂಡ ಎಂದೆರೆ ಏನೆಂಬುದನ್ನು ತನ್ನ ಅಪ್ಪನನ್ನು ನೋಡಿ ತಿಳಿದಿದ್ದ ನಾದಿರಾಳಿಗೆ, ರಶೀದ್ ಕೂಡ ಅದಕ್ಕೆ ಹೊರತಾಗಿ ಇರುವವನಲ್ಲ ಎನ್ನುವ ಭಾವವೇ ಇತ್ತು. ಆದರೆ ಅವೆಲ್ಲವನ್ನೂ ಮೀರಿ ನಿಂತ ರಶೀದ್ ದಾಂಪತ್ಯದ ಮೊದಲ ರಾತ್ರಿಯನ್ನು ನವಿರಾಗಿಸಿದ್ದ. ಕ್ಷಣಕ್ಕೆ ನಂಬುವುದೇ ಕಷ್ಟವೆನಿಸಿದರೂ ವಾಸ್ತವಕ್ಕಿಳಿದು; ಗಂಡನೆಂಬ ಪ್ರಾಣಿಗೆ ಕ್ರೌರ್ಯ ಮಾತ್ರ ಗೊತ್ತಿರುವುದಲ್ಲ ಮೋಹಿಸಲೂ ಗೊತ್ತು ಎಂದು ನಾದಿರಾ ತಿಳಿದದ್ದೇ, ಮನಸ್ಸು ಮತ್ತು ದೇಹವು ಒಂದಾಗಿ ರಶೀದನ ಎದೆಯಲ್ಲಿ ಹುದುಗಿ ಹೋಗುತ್ತಾಳೆ ಬಾಲೆ. ಮಲ್ಲಿಗೆಯ ಕಂಪಿನಂತೆ ನಾದಿರಾಳ ಕಿವಿಯಲ್ಲಿ ಮೆಲ್ಲಗೆ ಉಸುರುತ್ತಾ, ಕೈಯನ್ನು ಮೆತ್ತಗೆ ಅಮುಕುತ್ತ ಭಾವವನ್ನು ಉದ್ದೀಪಿಸಿ ದಾಂಪತ್ಯಕ್ಕೆ ರಶೀದ್ ನಾಂದಿ ಹಾಡುತ್ತಾನೆ. ನವುರಾಗಿ ಉದ್ದೀಪಿಸುವ ಭಾವದಲೆಗಳ ದಾಂಪತ್ಯದ ಚಾದರವನ್ನು ಜೊತೆಯಲ್ಲಿರುವಷ್ಟೂ ಕಾಲ ಅವರು ಹೊದೆದು ಕೊಂಡಿರುತ್ತಾರೆ.

ನಾದಿರಾಳ ಭಾವನೆಯೂ ಸಹ ತನ್ನದೇ ಭಾವನೆ ಎಂದರಿತವನು ರಶೀದ್. "ಸಿನೆಮಾ ಹೇಗಿರುತ್ತದೆ?"- ಕೇಳಿದ ನಾದಿರಾಳನ್ನು ಸಿನೆಮಾಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರೂ- ಅದಾಗಲೇ ಮನದಲ್ಲಿ ಆಳವಾಗಿ ಇಳಿ ಬಿಟ್ಟಿದ್ದ ನಂಬಿಕೆ, ವಿಶ್ವಾಸಗಳು ಆಕೆಯನ್ನು ಪ್ರಶ್ನಿಸಲು ತೊಡಗುತ್ತವೆ. ಜೊತೆಗೆ ಸಮಾಜ ಏನಂದುಕೊಂಡಾತು? ಎಂಬ ಪ್ರಶ್ನೆಯೂ ಚಿಮ್ಮಿ-ಕಟ್ಟಿದ ಸಂಕೋಲೆಗಳ ಒಳಗೆ ಮನುಷ್ಯ ಬದುಕುವುದೇ ಅನ್ಯರಿಗಾಗಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ. ನಾವು ನಮಗಾಗಿ ಬಾಳದೆ, ಪರಂಪರೆಗೆ, ಸಂಪ್ರದಾಯಕ್ಕೆ, ರಿವಾಜುಗಳಿಗೆ, ಆಚರಣೆಗಳಿಗೆ ಕತ್ತನ್ನು ಒಡ್ಡುತ್ತಾ.. ನಾವು ನಾವಾಗಿಯೇ ‘ಬಲಿ ಕಾ ಬಕ್ರಾ’ ಆಗಿ ಬಿಡುತ್ತೇವೆ.

ಸೆಟೆದು ನಿಂತು ಕೇಳುವ ಧೈರ್ಯ ಇರುವುದಿಲ್ಲ. ಹೆಣ್ಣನ್ನು ಗಂಡು ಆ ರೀತಿ ಸರಪಳಿಯಿಂದ ಕಟ್ಟಿ ಹಾಕಿದ್ದಾನೆ. ಪ್ರಕೃತಿಯ ಪ್ರಪಂಚ ಏನೆಂಬುದನ್ನು ತೋರಿಸಿ, ಕಟ್ಟಿಯೂ ಕೊಟ್ಟ ಪುರುಷ ನಿಜಾರ್ಥದಲ್ಲಿ ಪ್ರಕೃತಿಯನ್ನು ಎದುರಿಸಲಾಗದವ. ಹೆಣ್ಣಿನ ತಾಳ್ಮೆಯು ಬಹಳಷ್ಟು ಬಾರಿ ಪುರುಷನೆದುರು ಸೋಲುವಂತೆ ಮಾಡುತ್ತದೆ. ಹೆಣ್ಣನ್ನು ಅರಿಯದ ಮಹಮ್ಮದ್ ಖಾನ್ ರಂತವರು ಎಲ್ಲಾ ಕಾಲದಲ್ಲೂ, ಸಮುದಾಯಗಳಲ್ಲೂ ಇದ್ದರು, ಇದ್ದಾರೆ ಕೂಡ. ಹೆಣ್ಣು ಜೀವವನ್ನು ಅರಿತವರು ರಶೀದ್ ನಂತೆ ಮಧುರ ದಾಂಪತ್ಯವನ್ನು ಸವಿಯುತ್ತಾರೆ. ಸಮುದಾಯವು ಹೇರುವ ರೀತಿ-ನೀತಿ-ನಿಯಮಗಳು; ಹೆರುವ, ಮಡಿಲಲ್ಲಿ ಪವಡಿಸುವ, ತೊಡೆಯ ಮೇಲೆ ಏರುವ ಹೆಣ್ಣಿಗೆ ಮಾತ್ರ ಎನ್ನವುದು ವಿಪರ್ಯಾಸ.

ನಾದಿರಾಳನ್ನು ಪುನರ್ ವಿವಾಹ ಮಾಡಿಕೊಳ್ಳಲು ರಶೀದ್ ಒಪ್ಪಿಗೆ ಸೂಚಿಸಲು ಧರ್ಮ ಸಂಕಟವೊಂದು ಎದುರಾಗುತ್ತದೆ. ಮೌಲವಿಗಳ ಸಹಾಯ ಪಡೆದು ಅದರ ಅರ್ಥವನ್ನು ಸರಿಯಾಗಿ ತಿಳಿದುಕೊಂಡರೂ ಮೌಲವಿಯೂ ಸೇರಿದಂತೆ ಯಾರೊಬ್ಬರೂ ಸಮುದಾಯವನ್ನು ಎದುರು ಹಾಕಿಕೊಳ್ಳಲು ತಯಾರಿರುವುದಿಲ್ಲವಷ್ಟೆ. ಅಂತೂ ಒಂದು ದಿನದ ಮಟ್ಟಿಗಾದರೂ ರಿವಾಜಿನಂತೆ ಅನ್ಯನನ್ನು ಮದುವೆಯಾಗಿ ಮರುದಿನ ಆತನಿಂದ ತಲಾಕ್ ತೆಗೆದುಕೊಂಡು ಮೂರು ತಿಂಗಳ ಬಳಿಕ ರಶೀದ್ ನನ್ನು ಮದುವೆಯಾಗುವ ತೀರ್ಮಾನಕ್ಕೆ ನಾದಿರಾ ಸೇರಿದಂತೆ ಮನೆಯವರು ಬರುತ್ತಾರೆ. ಹೆಣ್ಣಿನ ನೋವಿಗೆ ಸ್ಪಂದಿಸುವ, ಉತ್ತರಿಸುವ ಗಂಡು ಜೀವ ಅಲ್ಲೆಲ್ಲಿಯೂ ಇರಲಿಲ್ಲ.

"ಮನೆಬಿಟ್ಟು ಓಡಿ ಹೋಗು ರಶೀದ್ ನ ಬಳಿ.." ಎಂದು ತಂಗಿ ಹೇಳುವ ಮಾತಲ್ಲಿ ಕ್ರಾಂತಿಯ ಸಣ್ಣ ಕಿಡಿಯಿತ್ತು. ಆದರೆ ಅದು ವಿಸ್ತಾರವಾಗಿ ಹಬ್ಬಲಿಲ್ಲವಷ್ಟೆ..

"ನದಿಯೊಂದು ಅಡ್ಡ ಇಲ್ಲದಿದ್ದರೆ ಸಲೀಸಾಗಿ ಗಂಡನ ಮನೆಯನ್ನು ಸೇರಿಕೊಳ್ಳುತ್ತಿದ್ದೆ"- ನಾದಿರಾಳ ಮನದ ಮಾತು ಬಂಧಗಳ ನಡುವೆ ಇರುವ, ಬರುವ, ಮೂಡುವ ಹಲವು ಅಡ್ಡಗಳಿಗೆ ಹರಿವ ಸಾಕ್ಷಿಯಾಗಿದೆ. ಮರು ನಿಕಾಹದ ಗಂಡು- ಕರ್ರಗಿನ, ಕುಳ್ಳ, ಬೋಳು ಮಂಡೆಯ, ವಿಕಾರ ರೂಪಿ ಶೇಕಾಲಿಯನ್ನು ನೋಡಿದಾಕೆಗೆ ಸ್ಪುರದ್ರೂಪಿ ರಶೀದ್ ಕಣ್ಣಿಗೆ ಕಟ್ಟಿದ. ತನ್ನ ತಪ್ಪಿಲದೆ ಗಂಡನಿಂದ ಬೇರೆಯಾಗಿ ಈಗ ಮತ್ತೊಮ್ಮೆ ಅವನನ್ನು ಕೂಡಲು ಅಡ್ಡಿಪಡಿಸುವ ನಿಯಮಕ್ಕೆ ಮನದಲ್ಲೇ ಶಪಿಸುತ್ತಾಳೆ. ತನ್ನಿಷ್ಟದ ಚಂದ್ರಗಿರಿ ನದಿಯನ್ನು ನೆನೆಯುತ್ತ ಮಸೀದಿಯ ಕೊಳದತ್ತ ಬಂದವಳಿಗೆ ರಶೀದ್ ಮತ್ತು ಮಗುವಿನ ನೆನಪು ತೀವ್ರವಾಗಿ ಕಾಡುತ್ತದೆ. “ಸರ್ವಶಕ್ತನ ದಯೆಯಿದ್ದರೆ ನ್ಯಾಯ ತೀರ್ಮಾನದ ದಿನ ಭೇಟಿಯಾಗೋಣ” ಎನ್ನುವವಳು ತನ್ನೆಲ್ಲ ನೋವು, ಸಂಕಟಗಳನ್ನು ಹೊತ್ತುಕೊಂಡು ಮಸೀದಿಯ ಕೊಳಕ್ಕೆ ಧುಮುಕುತ್ತಾಳೆ. ಅಲ್ಲೋಲ ಕಲ್ಲೋಲವಾದ ಕೊಳದ ತಿಳಿನೀರು ಕೊಚ್ಛೆಯನ್ನೆಲ್ಲ ಮೇಲೆದ್ದು ಒಗೆದು ಬಿಟ್ಟಿತು.

ಸಮುದಾಯದ ನಿಯಮಗಳು ಮನುಷ್ಯ ಸ್ನೇಹಿಯಾಗಿ..ಹೆಣ್ಣಿಗೆ ಸ್ವಾತಂತ್ರ್ಯ ನೀಡುವ ದಿನಗಳು ಬರಲಿ ಎಂದು ಆಶಿಸುವ ನಿಜದ ಬಯಕೆ ಕತೆಗಾರ್ತಿಯದ್ದು. ದೇಶದಾಧ್ಯಂತ ಸಮುದಾಯದಲ್ಲಿ ಬದಲಾವಣೆಗಳನ್ನು ತಂದುಕೊಟ್ಟಂತಹ ಸಾರಾ ಅಬೂಬಕರ್ ಅವರ ಹೆಮ್ಮೆಯ ಕೃತಿ- ‘ಚಂದ್ರಗಿರಿ ತೀರದಲ್ಲಿ’.

***
ಸ್ವಾತಂತ್ರ್ಯ ಪೂರ್ವ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಜನಿಸಿದ ‘ಸಾರಾ ಅಬೂಬಕ್ಕರ್’ ಜಿಲ್ಲೆಯ- ಅಂದಿನ ಮದ್ರಾಸ್ ಪ್ರಾಂತ್ಯದ ದಕ್ಷಿಣ ಕನ್ನಡದ ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ ಪಡೆದ ಮೊದಲ ಮಹಿಳೆ. ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿ ಕನ್ನಡವನ್ನೇ ಉಸಿರಾಗಿಸಿದ್ದು ವಿಶೇಷ. ಇನ್ನೂ ಹೆಚ್ಚು ಕಲಿಯಬೇಕೆಂಬ ಅವರ ಆಸೆಯು ಫಲಿಸುವಲ್ಲಿ ಸಮುದಾಯದ ನಿಯಮಾವಳಿಗಳು ತೊಡಕಾಗಲು ಹೆಚ್ಚಿನ ಕಲಿಕೆಯ ಹೆಬ್ಬೆಯಕೆಯು,-“ನಾಲಕ್ಕು ಮಕ್ಕಳನ್ನು ಹೆತ್ತು ಗ್ರಂಥಾಲಯದ ಮೆಂಬರ್ಶಿಪ್ ಪಡೆಯುವಲ್ಲಿ ನಿಂತು ಹೋಯಿತು”- ಎಂದು ಅವರೇ ಹೇಳಿಕೊಳ್ಳುತ್ತಾರೆ. ಪಿ.ಲಂಕೇಶರ ಪ್ರೋತ್ಸಾಹದಿಂದ, ತಮ್ಮ ತಂದೆಯ ಬೆಂಬಲದಿಂದ ಸಮುದಾಯದ ಒಳಗನ್ನು ಮುಕ್ತವಾಗಿ ಬಿಡಿಸಿಡುವಲ್ಲಿ ಸಾರಾ ಅಬೂಬಕ್ಕರ್ ಯಶಸ್ವಿಯಾದರು. 'ಲಂಕೇಶ್ ಪತ್ರಿಕೆ'ಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದದ್ದು ಕಾದಂಬರಿಯಾಗಿ ಮೂಡಿ, ರಂಗದ ಮೇಲೂ ಬಂದು ಬಹುಜನರ ಸುಖಕ್ಕೆ ಕಾರಣವಾಯಿತು. ಅಲ್ಲಿಯವರೆಗೆ ಮುಸ್ಲಿಂ ಸಮುದಾಯದ ಕುರಿತಾಗಿ ಅರಿಯದ ಇತರ ಸಮುದಾಯದವರು ಕೃತಿಯು ಬೀರಿದ ಪ್ರಭಾವಕ್ಕೆ..ಮತ್ತದು ಹಬ್ಬಿದ ವೇಗಕ್ಕೆ ತಂತಮ್ಮ ಕೊರತೆಗಳನ್ನು ತಿದ್ದಿ ಕೊಂಡದ್ದನ್ನು ಮೆಚ್ಚಲೇಬೇಕು. ಮುಸ್ಲಿಂ ಸಮುದಾಯದ ಹೆಂಗಸರ ಕಷ್ಟ-ಸುಖಗಳ ಬಗ್ಗೆ, ಹೆಣ್ಣು ಮಕ್ಕಳಿಗೆ ವಿದ್ಯೆಯು ಕಡ್ಡಾಯವಾಗಿ ದೊರೆಯಬೇಕು ಎನ್ನುವ ತುಡಿತ, ಕಾಳಜಿ.. ಅವರು ಸ್ವಾವಲಂಬಿಯಾಗಿ ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಬೇಕು ಎಂಬ ಆಸ್ಥೆ ಹೊಂದಿರುವ ಮುಸ್ಲಿಂ ಮಹಿಳಾ ಲೇಖಕಿ, ಕತೆಗಾರ್ತಿ - ಸಾರಾ ಅಬೂಬಕರ್.

***
ಗಡಿನಾಡಿನ ಅಷ್ಟೂ ಸೊಗಡನ್ನು, ಸೊಬಗನ್ನು ಕೃತಿಯಲ್ಲಿ ಹಿಡಿದಿಟ್ಟ ಲೇಖಕಿ- ಆಡು ಭಾಷೆಯ ಮಾತುಗಳನ್ನು ಸಂದರ್ಭಾನುಸಾರ ತಂದು ಗ್ರಾಮ್ಯದ ಅಂದವನ್ನು, ಭಾಷೆಯ ಚಂದವನ್ನು ಕಟ್ಟಿಕೊಟ್ಟಿದ್ದಾರೆ. ಸುಲಭವಾಗಿ ಓದಿಸಿಕೊಳ್ಳುತ್ತ ಹೋಗುವ ಕಾದಂಬರಿ ಸಮುದಾಯದ ಒಳಗನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ. ಕೃತಿಯೊಂದರಿಂದ ಪ್ರಭಾವಿತವಾಗಿ ಸಮುದಾಯವು ಒಂದಷ್ಟು ಬದಲಾವಣೆಗಳನ್ನು ಗಡಿ-ರೇಖೆಗಳನ್ನು ದಾಟಿ ಈ ದೇಶದ ಮಣ್ಣಲ್ಲಿ ಮಾಡಿಕೊಂಡದ್ದು ಕಾದಂಬರಿಗೆ ದೊರಕಿದ ಹೆಗ್ಗಳಿಕೆ. ಹೀಗೆ ಸಮುದಾಯವೊಂದು ವರ್ತಮಾನಕ್ಕೆ ತಕ್ಕಂತೆ ಬದಲಾಗುತ್ತ..ಲಿಂಗ ಭೇದವಿಲ್ಲದೆ ಶಿಕ್ಷಣ ಪಡೆದು..ಸ್ವಾವಲಂಬಿಯಾಗಿ- ಅದರಲ್ಲೂ ಆರ್ಥಿಕವಾಗಿ ಸದೃಢಗೊಂಡು..ಗಂಡಿಗೆ ಸಮಾನವಾಗಿ ನಿಲ್ಲುವ ಯೋಚನೆ, ಸ್ರ್ತೀ ವಿಮೋಚನೆಗಳನ್ನು ಈ ಕೃತಿಯು ಸಮುದಾಯದ ಹೆಣ್ಮಕ್ಕಳಿಗೆ ನೀಡಿದೆ. ಜೊತೆಗೆ ಪುರುಷಾಹಂಕಾರವನ್ನು ಸಹಿಸುವಷ್ಟೇ ಸಹಿಸಿಕೊಳ್ಳಲಾಗುವುದು ಎಂಬ ಎಚ್ಚರಿಕೆಯೂ ಇದೆ. ಹೆಣ್ಣು ಎಂದರೆ ಕೇವಲ ಭೋಗದ ವಸ್ತು ಮಾತ್ರ, ಮನೆಯಲ್ಲಿಯೇ ಕುಳಿತು ಗಂಡಿನ ಚಾಕರಿ ಮಾಡುವ ಜೀವ ಎಂದೇ ಅರಿತು ನಡೆಯುವ ಗಂಡು ಜೀವಕ್ಕೆ, ಹೆಣ್ಣಿಗೂ ಅವಳದ್ದೇ ಆದ ಆಸೆ, ಆಕಾಂಕ್ಷೆ, ಕನಸುಗಳಿರುತ್ತವೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದೆ ಪಶುವಿನಂತೆ ವರ್ತಿಸುವುದು ಸಹ್ಯವಲ್ಲವೆನ್ನುವುದು 'ಚಂದ್ರಗಿರಿ ತೀರದಲ್ಲಿ' ಕುಳಿತಾಗ ವೇದ್ಯವಾಗುತ್ತದೆ.

ಸರಿ ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕೃತಿಯಿದು. ಅಂದಿನ ಸಮುದಾಯದಕ್ಕೂ ಇಂದಿನ ಸಮುದಾಯಕ್ಕೂ ಬಹಳ ವ್ಯತ್ಯಾಸವಿದೆ. ಅಂದಿನ ಪರಿಸರದಲ್ಲಿ ನಮ್ಮನ್ನಿಟ್ಟುಕೊಂಡು ಕೃತಿಯನ್ನು ಓದಿದರೆ ಸಮುದಾಯದ ಹೆಣ್ಣಿನ ತಲ್ಲಣಗಳನ್ನು ನಮ್ಮೊಳಕ್ಕೆ ಇಳಿಸಿ ಕೊಳ್ಳಬಹುದು. ಶತಮಾನ ಇಪ್ಪತ್ತೊಂದಾದರೂ ಇನ್ನೂ ಹಿಂದೆ ಹಿಂದಕ್ಕೆ ಮಹಿಳೆಯನ್ನು ತಳ್ಳುವ ಕಾರ್ಯ ಪೂರ್ಣವಾಗಿ ನಿಂತಿಲ್ಲವೆಂದೇ ಹೇಳಬಹುದು. ಜೀವನ ಕ್ರಮವು ದಾಂಪತ್ಯದ ಸೊಗಸನ್ನು ನವಿರಾಗಿಸುವಂತಿರಬೇಕು. ಬಾಳಿನುದ್ದಕ್ಕೂ ಸಾಂತ್ವನ ಸ್ವೀಕರಿಸುವುದೇ ಹೆಣ್ಣಿನ ಏಕೈಕ ಕಾಯಕವಾಗಬಾರದು ನೋಡಿ.
***
ಹೆತ್ತು ಕೊಡಲು- ಶಾಪ ಹೊತ್ತು ಬಂದ ಹೆಣ್ಣೇ ಬೇಕು ಮತ್ತೆ! ಅದೂ ಹೆರುತ್ತಲೇ ಹೋಗುವ ಒಂದು ಯಂತ್ರವಾಗಿ. ಭಾವಲೇಪ ಇಲ್ಲದ ಹೆರಿಗೆ, ಬಾಣಂತನ ಜೊತೆಗೆ ತಾಯ್ತನಗಳ ಹೆಣಭಾರ…ಅವಳ ಒಳಗೆ ಮಿಡಿಯುವ ಹೃದಯ ನಿಜಕ್ಕೂ ಯಂತ್ರದ್ದೇನೋ ಎನ್ನುವ ಆಶ್ಚರ್ಯ. ಆದರೂ ಬಾಯಿ ತೆರಯುವ ತಪ್ಪು ಮಾಡದೆ ಬಗ್ಗಿ ಬಗ್ಗಿ ಗುದ್ದಿಸಿಕೊಂಡು ಎಂದೋ ಬತ್ತಿ ಹೋದ ಕಣ್ಣೀರಿಗೆ ಅರ್ಥ ಹುಡುಕಲು ಹೋಗುವುದಿಲ್ಲವಷ್ಟೆ. ಕಲ್ಲುಗಟ್ಟಿದ ಹೃದಯ-ಮನಸ್ಸು ಪುರುಷ ಕಾಯಕ್ಕೆ ತನ್ನ ಮಾಂಸವನ್ನು ಹೊತ್ತ ಚರ್ಮದ ಹೊದಿಕೆಯನ್ನು ಅರ್ಪಿಸಿದ್ದೇ- ಕಾರ್ಯ ಸಾಧಿಸಿದ ವಿಜಯದ ಅಹಂಭಾವ ಪುರುಷ ಜೀವಿಯದ್ದು. ಅಷ್ಟಕ್ಕೇ ಗಂಡಿನ ಗುಂಡಿಗೆಯಲ್ಲಿ ಯುದ್ಧ ಗೆದ್ದ ಅನುಭವ.. ಅದೊಂದು ದಾಹವಾಗಿ ಮಾರ್ಪಟ್ಟು ಮತ್ತೆಮತ್ತೆ ಆಕ್ರಮಿಸುವ ಮನೋವೃತ್ತಿಯತ್ತ ನುಗ್ಗುವ ಪುರುಷ ಮೃಗ...

ಭಾವ ಹರಿಯದ, ಮಾತು ಹುಟ್ಟದ, ಗಂಡಿನ ಸ್ಪರ್ಶಗಳು ಚೇಳಿನ ಕಡಿತಗಳಾಗುವ ಹೊತ್ತು ಯಾವ ಹೆಣ್ಣಿನ ಬಾಳಲ್ಲೂ ಬಾರದಿರಲೆಂಬ 'ದುಆ' ಬಹು ಮಂದಿಯದ್ದು. ಅಲ್ ಹಮದುಲಿಲ್ಹ!

ಚಂದ್ರಗಿರಿ ನದಿಯಲ್ಲಿ ನೀರು ಹರಿದು ಹೋದಂತೆಲ್ಲ ಜೊತೆಗೆ ಒಂದಷ್ಟು ಕೊಳೆಯನ್ನೂ ಹೊತ್ತುಕೊಂಡು ಕಡಲ ಒಡಲಲ್ಲಿ ಮುಳುಗಿಸಿದೆ. ಪರಿಣಾಮ ನೀರು ಶುದ್ಧವಾಗುತ್ತಾ ಹೋಗಿ ಒಂದಷ್ಟು ಬದಲಾವಣೆ, ಹೊಸತನಗಳಿಂದ ಜೀವಿಸುವಂತೆ ಮಾಡಿದೆ. ಅಷ್ಟಕ್ಕೇ ಎಲ್ಲವನ್ನೂ ಪಡೆದಂತೆ ಎಂದಲ್ಲ. ಚಂದ್ರಗಿರಿ ನದಿಯ ಪುಟ್ಟ ಪುಟ್ಟ ಅಲೆಗಳು ಹೊತ್ತು ತೇಲುತ ತರುವ ಮಂದ ಮಾರುತದ ಕುಳಿರ್ ಗಾಳಿಯ ನವಿರನ್ನು ಬದುಕ ಬೊಗಸೆಯಲ್ಲಿ ಸ್ವೀಕರಿಸಿ, ಅನುಭವಿಸಿ ಜೀವಿಸಬೇಕು.

'ಚಂದ್ರಗಿರಿ' ಎಂದ ಕೂಡಲೇ ಪಟ್ಟನೆ ನೆನಪಾಗುವಷ್ಟರವರೆಗೆ ‘ಸಾರ ಅಬೂಬಕ್ಕರ್’ ಅವರ 'ಚಂದ್ರಗಿರಿ ತೀರದಲ್ಲಿ' - ಕಾದಂಬರಿ ಓದುವ ಮನಸ್ಸುಗಳಲ್ಲಿ ಛಾಪನ್ನು ಒತ್ತಿ ಬಿಟ್ಟಿದೆ. ನಾನೂ ಆ ನದಿಯ ತೀರದವನೇ… ಮರು ಓದು ಕೊಟ್ಟ ಖುಷಿಗೆ ಇಷ್ಟೆಲ್ಲಾ ಬರೆಯ ಬೇಕಾಯಿತು.

ಈ ಅಂಕಣದ ಹಿಂದಿನ ಬರೆಹಗಳು:
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...