ಚರ್ವಿತ ಚರ್ವಣದ ಜಾಡಿನಲ್ಲಿ ಸಮ್ಮೇಳನದ ವಿಚಾರ ಗೊಷ್ಠಿ-ಚರ್ಚೆಗಳು

Date: 24-01-2020

Location: ಬೆಂಗಳೂರು


’ಅಖಿಲ ಭಾರತ’ ಕನ್ನಡ ಸಾಹಿತ್ಯ ಸಮ್ಮೇಳನವು ಬದಲಾದ ಸಂದರ್ಭಕ್ಕೆ ತಕ್ಕಂತೆ ಅರ್ಥವಂತಿಕೆ ಹೆಚ್ಚಿಸಿಕೊಂಡಿದೆಯೇ? 

ಕಲಬುರಗಿಯಲ್ಲಿ ಜರುಗಲಿರುವ 85ನೇ ಸಮ್ಮೇಳನದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಕೇಳಿಕೊಳ್ಳುವ ಅಗತ್ಯವಿದೆ. ಅಷ್ಟು ಮಾತ್ರವಲ್ಲದೆ ಅದಕ್ಕೆ ಉತ್ತರವನ್ನೂ ಕಂಡುಕೊಳ್ಳಬೇಕಿದೆ.

ಕನ್ನಡ ನಾಡು- ನುಡಿಯ ನಡೆಯ ಸ್ವರೂಪವನ್ನು ’ನಿರ್ದೇಶಿಸುವ’ (! ?) ಸಾಹಿತ್ಯ ಸಮ್ಮೇಳನ ಸಮಕಾಲೀನ ಆಗಿದೆಯೇ? ಹಾಗೂ ಅಲ್ಲಿ ಚರ್ಚಿತ ವಾಗುವ ಗೋಷ್ಠಿಗಳ ವಿಷಯಗಳು ಹಾಗೂ ಅದರ ಸ್ವರೂಪದಲ್ಲಿ ಹೊಸತನ ತರುವುದು ಸಾಹಿತ್ಯ ಪರಿಷತ್ತಿಗೆ ಏಕೆ ಸಾಧ್ಯವಾಗುತ್ತಿಲ್ಲ? ಎಂಬುದು ಸಾಹಿತ್ಯ-ಸಂಸ್ಕೃತಿಯಲ್ಲಿ ಆಸಕ್ತರಾಗಿರುವವರ ಪ್ರಶ್ನೆ. ವಿಷಯಗಳು ಕಾಲದ ಚಲನಶೀಲ ಸವಾಲುಗಳಿಗೆ ಸಮರ್ಥ ಉತ್ತರವಾಗುತ್ತಿವೆಯೇ? ವಚನ -ಕೀರ್ತನ ಸಾಹಿತ್ಯ, ಮಹಿಳಾ ಸಾಹಿತ್ಯ, ಕೃಷಿ-ನೀರಾವರಿ, ತತ್ವಪದ-ಸೂಫಿ-ಬೌದ್ಧಧರ್ಮ, ಕನ್ನಡ ಮಾಧ್ಯಮ-ಶಿಕ್ಷಣ, ಜಾನಪದ ಜಗತ್ತು ಇತ್ಯಾದಿ ವಿಷಯಗಳು ಈವರೆಗೂ ನಡೆದ ಸಮ್ಮೇಳನಗಳಲ್ಲಿ ಚರ್ಚೆಯಾದ ಚರ್ವಿತ ಚರ್ವಣಗಳೇ ಆಗಿವೆ. ಇಂತಹ ’ಕ್ಲೀಷೆ’ಯ ಸ್ವರೂಪದ ಗೋಷ್ಠಿಗಳ ನಿರ್ಧಾರಕ್ಕಾಗಿ ವಿಶೇಷ ತಜ್ಞರ ತಂಡವನ್ನೂ ನೇಮಿಸಲಾಗಿತ್ತು ಎಂಬುದು ಮತ್ತೊಂದು ಸೋಜಿಗದ ಸಂಗತಿ.

ಬಹುತೇಕ ಪ್ರತಿ ವರ್ಷವೂ ಸಮ್ಮೇಳನ ನಡೆಯುತ್ತದೆ. ಎರಡು ಸಮ್ಮೇಳನಗಳ ನಡುವಿನ ಅವಧಿಯಲ್ಲಿ ಹಠಾತ್ ಬದಲಾಗುವಂತಹದ್ದೇನೂ ಇರುವುದಿಲ್ಲ. ಹೀಗಾಗಿ, ಅಚ್ಚಿನಲ್ಲಿ ಎದ್ದಿ ತಂದಂತಿರುವ ವಸ್ತುಗಳ ಹಾಗೆ ಚರ್ಚಿತ ವಿಷಯಗಳು ಸಮ್ಮೇಳನದಲ್ಲಿ ಇರಬೇಕಿಲ್ಲ. ಅಷ್ಟಕ್ಕೂ ಸಮ್ಮೇಳನದ ಚರ್ಚೆ-ಸಂವಾದಗಳು ಕನ್ನಡ ಸಂಸ್ಕೃತಿಯ ಸಮಕಾಲೀನ ಚಲನೆಯ ’ಸ್ವರೂಪ’ ನಿರ್ಧರಿಸುವ ಸಾಮರ್ಥ್ಯ ಕಳೆದುಕೊಂಡು ದಶಕಗಳೇ ಆಗಿವೆ. 

ನವೋದಯದ ಆರಂಭವಾದ ಈ ಸಾಹಿತ್ಯ ಸಮ್ಮೇಳನಗಳ ಆರಂಭದಲ್ಲಿ ಶಾಸ್ತ್ರೀಯ ಸಾಹಿತ್ಯವೇ ಚರ್ಚೆ ವಿಷಯ ಆಗಿರುತ್ತಿತ್ತು. ನಂತರ, ಪ್ರಗತಿಪರ, ನವ್ಯ ಹಾಗೂ ದಲಿತ-ಬಂಡಾಯ ಸಾಹಿತ್ಯವೂ ಸಮ್ಮೇಳನದಲ್ಲಿ ಚರ್ಚೆಗೆ ಒಳಗಾದವು. ಕಳೆದ ಎರಡು ದಶಕಗಳ ಅವಧಿಯಲ್ಲಿ ಬೇರೆ ಯಾವ ವಲಯದಲ್ಲೂ ಬದಲಾವಣೆಗಳೇ ಆಗಿಲ್ಲವೆ? ಅವು ಸಾಂಪ್ರದಾಯಿಕ ಸಾಹಿತ್ಯದ ನಡೆಯ ಮೇಲೆ ಯಾವುದೇ ಪ್ರಭಾವ ಬೀರಿಲ್ಲವೆ? ಬಂಡಾಯ ಎನ್ನುವುದು ಕಾಲದ ಮನೋಧರ್ಮ ಎಂದರೂ ಅದರ ನಿಧಾನಗತಿ ನಡೆಯ ಸಾಹಿತ್ಯ ವಿಶ್ಲೇಷಣೆ ಏಕಿಲ್ಲ? ದಲಿತ ಸಾಹಿತ್ಯವು  ಅದರದೇ ಆದ ಸಮೂಹದಲ್ಲಿ ಮೂಡಿಸಿದ ಎಚ್ಚರವು ಚರ್ಚಿತವಾಗಬಾರದೆ? 

ನ್ಯಾನೋ ತಂತ್ರಜ್ಞಾನ, ಪರಿಸರ ವಿಜ್ಞಾನ ಸಾಹಿತ್ಯ, ಸಾಮಾಜಿಕ ಜಾಲ ತಾಣಗಳಲ್ಲಿಯ ಸಾಹಿತ್ಯ, ಇ-ಸಾಹಿತ್ಯ, ಫೇಸ್ ಬುಕ್ ಲೈವ್ ಕೃತಿ ಬಿಡುಗಡೆಯ ಚಟುವಟಿಕೆಗಳು ಸಾಹಿತ್ಯದ ಮೂಲ ರಚನಾ-ವಿನ್ಯಾಸವನ್ನೇ ಬದಲಿಸಿವೆ. ಇದು ಕೇವಲ ರಚನೆಗೆ ಸಂಬಂಧಿಸಿದ ಮಾತ್ರ ಸಂಗತಿಯಲ್ಲ. ಸಾಹಿತ್ಯದ ಓದುಗರು ಕೂಡ ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ಆಸಕ್ತಿ-ಕಾಳಜಿಗಳನ್ನು ಬದಲಿಸಿಕೊಂಡಿದ್ದಾರೆ. ತಂತ್ರಜ್ಞಾನದ ಪರಿಣಾಮಗಳಿಂದ ಸಾಹಿತ್ಯರಚನೆ- ಪ್ರಸಾರ ಹಾಗೂ ಪ್ರಚಾರದ ಮೇಲೆ ವಿಶೇಷ ಬದಲಾವಣೆ ಕಾಣಿಸಿದೆ. ಇಂತಹ ವರ್ತಮಾನದ ಸಂಗತಿ ಕುರಿತ ಚರ್ಚೆ ಬೇಡವೆ?

’ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎಂದು ಬೀಗುವ ಕನ್ನಡ ಸಾಹಿತ್ಯ ಪರಿಷತ್ತು, ವರ್ತಮಾನದ ಬಿಕ್ಕಟ್ಟು-ಕಂಡುಕೊಳ್ಳಬೇಕಾದ ಉತ್ತರಗಳ ಬಗ್ಗೆ ಚಿಂತಿಸುವ ಸದವಕಾಶವನ್ನು ಕೈ ಬಿಟ್ಟಿರುವುದು ಸೋಜಿಗ ಮಾತ್ರವಲ್ಲ, ವಿಷಾದದ ಸಂಗತಿ ಕೂಡ.

ಪ್ರಸ್ತುತ ಕಾಲಘಟ್ಟದ ಸಾಹಿತ್ಯಕ -ಸಾಂಸ್ಕೃತಿಕ ಬದಲಾವಣೆಗಳಿಗೆ ಸ್ಪಂದಿಸಿ, ಸಮ್ಮೇಳನಗಳಲ್ಲಿ ಚರ್ಚಿಸುವ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವಿತ್ತು. ಅಂತಹ ಅವಕಾಶವನ್ನು ಕೈಚೆಲ್ಲಿರುವ ಪರಿಷತ್ತು ಸಮ್ಮೇಳನವನ್ನು ಸರಕಾರದ ಖರ್ಚಿನಲ್ಲಿ ನಡೆಯುವ ಸಾಂಪ್ರದಾಯಿಕ ಚಟುವಟಿಕೆಗೆ ಸೀಮಿತವಾಗಿಸಿದೆ. ಕನ್ನಡ ನಾಡು-ನುಡಿ ರಕ್ಷಣೆ ಕುರಿತ ಸಮರ್ಥ ವೇದಿಕೆಯಾಗುವುದು ಪರಿಷತ್ತಿಗೆ ಸಾಧ್ಯವಾಗಿಲ್ಲ. ಹಿಂದಿನ ದಿನಮಾನಗಳಲ್ಲಿ ಖರೀದಿ-ಸಂಭ್ರಮ- ಒಂದೆಡೆ ಸೇರುವುದಕ್ಕೆ ಕಾರಣವಾಗಿದ್ದ ಸಂತೆ- ಜಾತ್ರೆಗಳೂ ತಮ್ಮ ಸ್ವರೂಪವನ್ನು ಬದಲಿಸಿಕೊಂಡಿವೆ. ಸಾಹಿತ್ಯ-ಸಂಸ್ಕೃತಿಯ ವಾರಸುದಾರಿಕೆಯ ’ಹೊಣೆಗಾರಿಕೆ’ ಹೊತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಅದರ ಅರಿವೇ ಇಲ್ಲದಂತೆ ವರ್ತಿಸುತ್ತಿರುವುದು ಅದರ ಔಚಿತ್ಯವೇ ಪ್ರಶ್ನಾರ್ಹ ಆಗುವಂತೆ ಮಾಡಿದೆ.

- ವೆಂಕಟೇಶ ಮಾನು

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...