ಚಿಪ್ಪಿನೊಳಗಡಗಿರುವ ಭಾವ ತೀವ್ರತೆ ಬರಹದಲ್ಲಿ ಮೂಡಿದೆ


''ಅಮ್ಮನಂತಿರುವ ಮಾತೃ ಹೃದಯ ಹೊಂದಿರುವ ಅಪ್ಪನನ್ನೂ ಮಾತನಾಡಿಸಿದ್ದಾರೆ. ಮಮತೆ ಆರ್ದ್ರತೆಯ ಸ್ರವಿಸುವ ಅವಳ ಮೇಲೆ ದಬ್ಬಾಳಿಕೆ ಮಾಡುವ ಗಂಡಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಥವರನ್ನು ಎದುರಿಸಿ ನಿಲ್ಲುವ ಬಗೆಯನ್ನು ವಿವರಿಸಿದ್ದಾರೆ. ತ್ಯಾಗ, ಪ್ರೇಮ, ಸಹನೆಯ ಪ್ರತೀಕವಾದ ಅವಳಾಡದ ಮಾತುಗಳ ಹಿಂದಿನ ಮೌನವನ್ನು ಅದು ಕರಗುವ ಮೊದಲೇ ಅರ್ಥ ಮಾಡಿಕೊಳ್ಳುವಂತೆ ಎಚ್ಚರಿಸಿದ್ದಾರೆ,'' ಎನ್ನುತ್ತಾರೆ ಮೇಘನಾ ಕಾನೇಟ್ಕರ್. ಅವರು ಧಾರಿಣಿ ಮಾಯಾ ಅವರ ‘ಮೌನದ ಚಿಪ್ಪಿನೊಳಗೆ’ ಕೃತಿ ಕುರಿತು ಬರೆದಿರುವ ವಿಮರ್ಶೆ ನಿಮ್ಮ ಓದಿಗಾಗಿ.

ಇದು ಲೇಖಕಿ ಗೆಳತಿ ಧಾರಿಣಿ ಮಾಯಾ ಅವರ ಚೊಚ್ಚಲ ಕೃತಿ. ವೈಚಾರಿಕ ಲೇಖನಗಳ ಗುಚ್ಛವನ್ನು ಹೊಂದಿದ್ದು ಅಮ್ಮನಿಗೆ ಮತ್ತು ಸಮಸ್ತ ಸಖಿಯರಿಗೆ ಅರ್ಪಿಸಿದ್ದಾರೆ.

ಇಲ್ಲಿ ಗೃಹಿಣಿಯೊಬ್ಬಳ ಅದೇ ಮನೆಯವರೆಲ್ಲರ ಇಷ್ಟಾರ್ಥಗಳನ್ನು ನೆರವೇರಿಸುವ ಕಲ್ಪವೃಕ್ಷದಂತಿರುವ ಅಮ್ಮನ ಬಗೆಗಿನ ಅವಳ ಪ್ರೀತಿ, ಮಮತೆ, ನಿಜಾಯಿತಿಯ ಬಗೆಗಿನ ಭಾವಗಳು ಅಕ್ಷರ ರೂಪ ತಳೆದಿವೆ. ಅಷ್ಟೆ ಅಲ್ಲ, ಇಲ್ಲಿ ಅಮ್ಮನ ಕಕ್ಕುಲತೆಯನ್ನು ಮೈಗೂಡಿಸಿಕೊಂಡ ಗೃಹಿಣಿಯೊಬ್ಬಳ ನೋವು, ವಿಷಾದ, ಹತಾಶೆ ಕೂಡಾ ಅಕ್ಷರಗಳನ್ನು ಹೊದ್ದು ನಿಂತಿವೆ.

ತಾ ಹುಟ್ಟಿ ಆಡಿ ಬೆಳೆದ ಮನೆಯನ್ನು ತೊರೆದು ಹೊಸದೇ ಪ್ರಪಂಚಕ್ಕೆ ಅಡಿಯಿಟ್ಟವಳ ಮೇಲೆ ಗಂಡ ಮತ್ತು ಮನೆಯವರು ನಡೆಸುವ ಅಟ್ಟಹಾಸವನ್ನು ಪ್ರತಿಭಟಿಸುವ ಗಟ್ಟಿತನವಿದೆ. ಕಷ್ಟಗಳನ್ನು ಮೆಟ್ಟಿ ಎದುರಿಸಿ ನಿಲ್ಲುವ ಸಾಂತ್ವನದ ನುಡಿಗಳಿವೆ. ಎಲ್ಲಕ್ಕಿಂತ ಮಿಗಿಲಾಗಿ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ಅಮ್ಮನ ಅಕ್ಕರೆಯನ್ನು ಮನಸ್ಫೂರ್ತಿ ಧಾರೆಯೆರೆಯುವ ಸದಾ ಮೌನದ ಚಿಪ್ಪಿನೊಳಗೆ ಹುದುಗಿದ ಅವಳಾಡದ ಮಾತುಗಳಿಗೆ ಅಕ್ಷರಗಳ ಮೂಲಕ ಕಿವಿಯಾಗಿದ್ದಾರೆ. ನಮ್ಮನ್ನೂ ಆಗಿಸಿದ್ದಾರೆ.

ಅಮ್ಮನಂತಿರುವ ಮಾತೃ ಹೃದಯ ಹೊಂದಿರುವ ಅಪ್ಪನನ್ನೂ ಮಾತನಾಡಿಸಿದ್ದಾರೆ. ಮಮತೆ ಆರ್ದ್ರತೆಯ ಸ್ರವಿಸುವ ಅವಳ ಮೇಲೆ ದಬ್ಬಾಳಿಕೆ ಮಾಡುವ ಗಂಡಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಥವರನ್ನು ಎದುರಿಸಿ ನಿಲ್ಲುವ ಬಗೆಯನ್ನು ವಿವರಿಸಿದ್ದಾರೆ. ತ್ಯಾಗ, ಪ್ರೇಮ, ಸಹನೆಯ ಪ್ರತೀಕವಾದ ಅವಳಾಡದ ಮಾತುಗಳ ಹಿಂದಿನ ಮೌನವನ್ನು ಅದು ಕರಗುವ ಮೊದಲೇ ಅರ್ಥ ಮಾಡಿಕೊಳ್ಳುವಂತೆ ಎಚ್ಚರಿಸಿದ್ದಾರೆ. ಅಲ್ಲದೆ ಇಲ್ಲಿ ಮಕ್ಕಳ ಮುಗ್ಧತೆ, ಅವರನ್ನು ಪೋಷಿಸುವ ಸಂರಕ್ಷಿಸುವ ಬಗ್ಗೆಯೂ ಮಿಡಿದಿದ್ದಾರೆ.

ಹೌದು ನವರಸಗಳಲ್ಲಿ ಮಾತು ಮತ್ತು ಮೌನಕ್ಕೆ ಸ್ಥಾನವಿಲ್ಲ. ಅದಕ್ಕಾಗಿಯೇ ಚಿಪ್ಪಿನೊಳಗಡಗಿರುವ ಭಾವ ತೀವ್ರತೆಯನ್ನು ಬರಹದ ಮೂಲಕ ವ್ಯಕ್ತ ಪಡಿಸಲು ಸಾಧ್ಯವಾಗಿದ್ದು. ಸದಾ ಅಡುಗೆಮನೆಯಲ್ಲಿ ಆಹಾರದ ಹದವನ್ನೂ ಮೀರಿ ಬೇಯುವ ಅಮ್ಮನೆಂಬ ಗೃಹಿಣಿಯೊಬ್ಬಳ ಭಾವನೆಗಳನ್ನು ಮೌನಹೊದ್ದ ಅವಳ ಒದ್ದೆಯಾದ ಸೆರಗಿನಂಚನ್ನು ಲೇಖಕಿ ಧಾರಿಣಿ ತಮ್ಮ ಭಾವಗಳೊಂದಿಗೆ ಬೆಸೆದು ಅಕ್ಷರಗಳಲ್ಲಿ ಹಿಡಿದಿಟ್ಟ ಪರಿಯೆ ಚೆಂದ ಮತ್ತು ಆಪ್ತ. ಅದರಲ್ಲೂ ಓದುವಾಗ ಚೆಂದದ ರೇಖಾಚಿತ್ರವುಳ್ಳ ಚಿತ್ತಾಕರ್ಷಕ ಪುಟಗಳು ಮನಸೆಳೆಯದೆ ಇರಲು ಸಾಧ್ಯವಿಲ್ಲ. ಬಹಳ ಆಪ್ಯಾಯತೆ ಮೂಡಿಸಿದ ಮತ್ತಷ್ಟೇ ಮುದ ನೀಡಿದ ಓದು ಇದು.

 

MORE FEATURES

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಈ ಪುಸ್ತಕ ಇರಬೇಕಾದದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ

20-04-2024 ಬೆಂಗಳೂರು

`ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ...

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...