ಚಿತ್ತಾಪುರ ತಾಲೂಕಿನ ಸಾಂಸ್ಕೃತಿಕ ಹರವನ್ನು ವಿವರಿಸಿರುವ ಕೃತಿ


ಚಿತ್ತಾಪುರ ತಾಲೂಕು; ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದ್ದರೂ, ದಾಖಲೆಯ ದೃಷ್ಟಿಯಿಂದ ಆ ಎಲ್ಲ ಬಗೆಯ ಸಂಸ್ಕೃತಿಯ ಒಳಹುಗಳನ್ನು ಒಂದು ಸೂರಿನಡಿ ಹಿಡಿಯುವ ಪ್ರಯತ್ನವಾಗಿ ತಮ್ಮದೇ ಸಂಪಾದಕತ್ವದಡಿ ರಚಿತವಾದ ಕೃತಿ ‘ಚಿತ್ತಾಪುರ ತಾಲೂಕಿನ ಸಾಂಸ್ಕೃತಿಕ ಒಳನೋಟ’. ಕುರಿತು ಲೇಖಕ ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಅವರು ಅಭಿವ್ಯಕ್ತಿಸಿದ ಮಾತು ಇಲ್ಲಿದೆ;

’ಚಿತ್ತಾಪುರ ತಾಲೂಕಿನ ಸಾಂಸ್ಕೃತಿಕ ಒಳನೋಟ’ ಕೃತಿ ಹಲವು ವಿಶಿಷ್ಟತೆಗಳನ್ನು ಒಳಗೊಂಡಿದೆ. ಮೇಲ್ನೋಟಕ್ಕೆ ಇದೊಂದು ಸಾಂದರ್ಭಿಕವಾಗಿ ರೂಪುಗೊಂಡ ಕೃತಿ ಎನಿಸಿದರೂ, ಬೃಹತ್ ಯೋಜನೆಯನ್ನಾಗಿ ರೂಪಿಸಬಹುದಾಗಿದ್ದ ಸಂಶೋಧನ ಯೋಜನೆಯಾಗಿತ್ತು. ಸಂಶೋಧನ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಇರಿಸಿಕೊಂಡ ನಾನು ತಾಲೂಕಿನ ಸಮಗ್ರ ಸಾಂಸ್ಕೃತಿಕ ಹಿನ್ನೆಲೆವುಳ್ಳ ಯೋಜನೆಯೊಂದನ್ನು ಕೈಗೊಳ್ಳುವ ಆಶಯ ಹೊಂದಿ, ಆ ನಿಟ್ಟಿನಲ್ಲಿ ಒಂದೆರಡು ವರ್ಷಗಳ ಕ್ಷೇತ್ರಕಾರ್ಯದ ಮೂಲಕ ಸಾಕಷ್ಟು ಮಾಹಿತಿಯನ್ನೂ ಕಲೆಹಾಕಿದ್ದೆ.

2013 ಜೂನ್ ತಿಂಗಳಲ್ಲಿ, ಒಂದಿನ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆಯವರನ್ನು ಕಲಬುರಗಿಯ ಅವರ ಮನೆಯಲ್ಲಿ ಕಂಡು ಯೋಜನೆಗೆ ಆರ್ಥಿಕ ನೆರವು ಕೋರಿ ಚರ್ಚೆ ನಡೆಸಿದೆ. ಸಾಂಸ್ಕೃತಿಕ ಮನಸ್ಸುಳ್ಳ ಶಾಸಕರು ನನ್ನ ಕೋರಿಕೆಗೆ ಸ್ಪಂದಿಸುತ್ತಲೇ ತಾಲೂಕಿನ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಯನ್ನು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ರೂಪಿಸಬಹುದಾದ ಸಾಧ್ಯತೆಗಳನ್ನು ನನ್ನೊಟ್ಟಿಗೆ ಚರ್ಚಿಸಿದರಲ್ಲದೇ, ಇಲಾಖೆಯಿಂದಲೇ ಇದಕ್ಕೊಂದು ಆರ್ಥಿಕ ನೆಲೆ ಒದಗಿಸುವುದಾಗಿ ಭರವಸೆ ನೀಡಿದರು.
ಮಾನ್ಯ ಶಾಸಕರ ಪ್ರೋತ್ಸಾಹದ ಮಾತುಗಳಿಂದ ಪ್ರೇರೇಪಿತನಾದ ನಾನು ಯೊಜನಾ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿದೆ. ಮೂರ್‍ನಾಲ್ಕು ತಿಂಗಳುಗಳ ತರುವಾಯ ಪುನಃ ಶಾಸಕರನ್ನು ಕಲಬುರಗಿಯ ಐವಾನ್-ಇ-ಷಾಹಿ ಅತಿಥಿ ಗೃಹದಲ್ಲಿ ಭೇಟಿ ಮಾಡಿದೆ. ಈ ವೇಳೆ ಸಹೋದರ ಡಾ. ಪ್ರಭುರಾಜ ಕಾಂತಾ ಅವರೂ ನನ್ನೊಟ್ಟಿಗಿದ್ದರು. ಮೂರ್‍ನಾಲ್ಕು ತಿಂಗಳಲ್ಲಿ ಕೈಗೊಂಡ ಯೋಜನೆಯ ಆಕರ ಸಂಗ್ರಹವನ್ನು ಅವರೆದುರಿಗಿತ್ತೆ, ನೋಡಿ ಸಂತಸಪಟ್ಟರು. ಇದೇವೇಳೆ ಚಿತ್ತಾಪುರ ಪಟ್ಟಣದ ಮಿತ್ರರ ತಂಡವೊಂದು ಶಾಸಕರನ್ನು ಕಾಣಲು ಬಂದಿದ್ದು, ತಾಲೂಕಿನಲ್ಲಿ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಆಶಯ ಹೊಂದಿ, ಅದರ ರೂಪುರೇಷೆಯನ್ನು ಶಾಸಕರೆದುರು ಪ್ರಸ್ತಾಪಿಸಿದರು. ಈ ಹೊತ್ತು ಮತ್ತೆ ಕೆಲ ವಿಷಯಗಳು ಚರ್ಚೆಗೆ ಬಂದು, ಸಮ್ಮೇಳನ ಪ್ರಯುಕ್ತ ಪುಸ್ತಿಕೆ ಹೊರತರುವ ಆಶಯ ಅಲ್ಲಿ ವ್ಯಕ್ತವಾಯಿತಲ್ಲದೇ, ಮಾನ್ಯ ಶಾಸಕರು ಈ ವಿಷಯವಾಗಿ ನನ್ನ ಮೇಲೆ ವಿಶೇಷ ಒತ್ತು ನೀಡಿದರು. ಸುದೀರ್ಘ ಮಾತುಕತೆ ಅಂದಲ್ಲಿ ನಡೆಯಿತು.

ಕೆಲ ದಿನಗಳ ನಂತರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿರುವ, ಮಿತ್ರ ನಾಗಯ್ಯಸ್ವಾಮಿ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ದೂರವಾಣಿ ಕರೆ ಮೂಲಕ ಸಮ್ಮೇಳನ ಪ್ರಯುಕ್ತ ಹೊರತರಲು ಉದ್ದೇಶಿಸಿರುವ ಪುಸ್ತಿಕೆಯ ರೂಪುರೇಷೆ ಕುರಿತಂತೆ ನನ್ನೊಟ್ಟಿಗೆ ಚರ್ಚಿಸಿದರು. ಮಾನ್ಯ ಶಾಸಕರೊಂದಿಗೂ ಈ ವಿಷಯವಾಗಿ ಮಾತನಾಡಿ ಪುಸ್ತಿಕೆ ರೂಪಿಸುವ ಸಂಪೂರ್ಣ ಜವಾಬ್ದಾರಿ ನನಗೆ ವಹಿಸಿರುವುದಾಗಿ ಹೇಳಿದ್ದನ್ನು ನೆನಪಿಸಿದರು. ಇದರೊಂದಿಗೆ ವೈಯಕ್ತಿಕತೆಯ ಯೋಜನೆಯೊಂದು ಮೊಟಕುಗೊಂಡು ವಿಭಿನ್ನ ಲೇಖಕರ ಮಾಹಿತಿಯನ್ನೊಳಗೊಂಡ ಕೃತಿ ನಿರ್ಮಾಣಕ್ಕೆ ಆ ದಿನ ನಾಂದಿಯಾಯಿತು.

ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನದ ಸಂಭ್ರಮ ಆಚರಿಸಿಕೊಳ್ಳುವ ಹೊತ್ತಿನಲ್ಲೂ, ನಮ್ಮಲ್ಲಿ ಯಾವತ್ತೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಸಹಜವಾಗಿಯೇ ಮಾನ್ಯ ಶಾಸಕರು ಇಂಥದೊಂದು ಕೆಲಸವನ್ನು ಸವಾಲಾಗಿ ಸ್ವೀಕರಿಸಿದರಲ್ಲದೇ ಸಾಹಿತ್ಯಾಸಕ್ತ ಪಡೆಯನ್ನು ಬಲಗೊಳಿಸುತ್ತ ಬಂದರು. ಸಮ್ಮೇಳನ ರೂಪುರೇಷೆ ಕುರಿತಂತೆ ನಾಲ್ಕಾರು ಬಾರಿ ಸಭೆ ನಡೆದು ಅಂತಿಮ ಹಂತಕ್ಕೆ ಬರಲಾಯಿತು. ಇತ್ತ ಪುಸ್ತಿಕೆ ರೂಪಿಸುವ ಕಾರ್ಯದತ್ತಲೂ ಗಮನ ಹರಿಸಲಾಯಿತು. ರಾಜ್ಯದ ದೊಡ್ಡ ತಾಲೂಕುಗಳ ಪಟ್ಟಿಗೆ ಸೇರಿರುವ ಚಿತ್ತಾಪುರ ತಾಲೂಕು ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ತನ್ನೊಡಲಲ್ಲಿ ಇರಿಸಿಕೊಂಡಿದ್ದರೂ ದಾಖಲಾತ್ಮಕ ದೃಷ್ಟಿಯಿಂದ ಆ ಎಲ್ಲ ಬಗೆಯ ಸಂಸ್ಕೃತಿಯ ಒಳಹು ಒಂದು ಸೂರಿನಡಿ ಹಿಡಿದಿಡುವ ಪ್ರಯತ್ನ ನಡೆದಿರಲಿಲ್ಲ. ತಾಲೂಕಿನ ಒಟ್ಟು ಸಂಸ್ಕೃತಿಯನ್ನು ವಿವಿಧ ಸ್ತರಗಳಲ್ಲಿ ಅಧ್ಯಯನ ನಡೆಸಿದ ವಿದ್ವಾಂಸರ ಪಡೆಯೇ ನಮ್ಮಲ್ಲಿದೆ. ಅಂಥ ತಜ್ಞರ ಪಟ್ಟಿಮಾಡಿ, ವಿಷಯಕ್ಕೆ ಸೂಕ್ತರೆನಿಸಿದ ಲೇಖಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿಸ್ತೃತ ಲೇಖನ ಬರೆದುಕೊಡುವಂತೆ ಕೇಳಲಾಯಿತು. ಆ ಎಲ್ಲ ವಿದ್ವಾಂಸರು ವಿದ್ವತ್‌ಪೂರ್ಣ ಲೇಖನಗಳನ್ನು ಬರೆದುಕೊಟ್ಟಿದ್ದಾರೆ. ಲೇಖನಗಳಲ್ಲಿನ ಅನಿಸಿಕೆ-ಅಭಿಪ್ರಾಯಗಳು ಲೇಖಕರದ್ದು.

ಮೊದಲ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲೇ ಈ ಕೃತಿ ಹೊರಬರಬೇಕಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಪ್ರಸ್ತುತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿರುವ ಮಿತ್ರ ಕಾಶಿನಾಥ ಗುತ್ತೇದಾರ ಅವರು ತುಂಬ ಮುತುವರ್ಜಿ ವಹಿಸಿ ಇದೀಗ ಈ ಕೃತಿಯನ್ನು ಹೊರಬರುವಂತೆ ನೋಡಿಕೊಂಡಿದ್ದಾರೆ.
ತಾಲೂಕಿನ ಸಾಂಸ್ಕೃತಿಕ ಹರವು ಅತ್ಯಂತ ವಿಶಾಲವಾಗಿದ್ದು, ಅದನ್ನು ಒಂದು ಸೂರಿನಡಿ ಹಿಡಿದಿಡುವುದು ಸುಲಭದ ಕೆಲಸವಲ್ಲವಾದರೂ ಇಲ್ಲಿ ಆ ಒಂದು ಸಣ್ಣ ಪ್ರಯತ್ನ ನಡೆದಿದೆ. ತಾಲೂಕಿನ ಬಹುತ್ವ ಸಂಸ್ಕೃತಿಯ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುವ ಈ ಕೃತಿ ಮುಂದಿನ ಅಧ್ಯಯನಕಾರರಿಗೆ ಆಕರ ಗ್ರಂಥವಾಗಬಲ್ಲದು ಎಂಬ ಆಶಯ ನಮ್ಮದು. ಪ್ರಸ್ತುತ ಕೃತಿಯಲ್ಲಿನ ಲೇಖಕರು ವಿವಿಧ ನೆಲೆಯಲ್ಲಿ ಕೃಷಿಮಾಡಿ ಹೆಸರು ಮಾಡಿದ್ದಾರೆ. ಇತಿಹಾಸ, ಸಾಹಿತ್ಯ, ಶಿಕ್ಷಣ, ಜಾನಪದ, ಕಲೆ; ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೃಷಿಮಾಡಿದ ತಜ್ಞ ಲೇಖಕರ ಸಮ್ಮಿಲನ ಇಲ್ಲಿದೆ. ಇಂಥದೊಂದು ಅಪೂರ್ವ ಕೃತಿ ಹೊರಬರಲು ಮೂಲ ಕಾರಣರಾಗಿರುವ ಮಾನ್ಯ ಶಾಸಕರೂ, ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆಜೀ ಅವರಿಗೆ ಅತ್ಯಂತ ಕೃತಜ್ಞತೆಗಳು ಸಲ್ಲುತ್ತವೆ.

ಪ್ರಸ್ತುತ ಕೃತಿ ಪ್ರಕಟಗೊಳ್ಳುವಲ್ಲಿ ಒತ್ತಾಸೆಯಾಗಿ ನಿಂತು ಸಹಕರಿಸಿದ ಚಿತ್ತಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಗಯ್ಯಸ್ವಾಮಿ ಅಲ್ಲೂರ ಅವರಿಗೆ, ಈಗಿನ ಅಧ್ಯಕ್ಷರಾಗಿರುವ ಕಾಶಿನಾಥ ಗುತ್ತೇದಾರ ಸೇರಿದಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬಳಗಕ್ಕೆ, ಕಾಲ ಮಿತಿಯೊಳಗೆ ಲೇಖನಗಳನ್ನು ಬರೆದುಕೊಟ್ಟ ವಿದ್ವಾಂಸ ಬಳಗಕ್ಕೆ, ಲೇಖನಗಳ ಕರಡು ಪ್ರತಿ ತಿದ್ದುವಲ್ಲಿ ನೆರವಾದ ಮಡದಿ ನಂದಾ ಹಾಗೂ ಸ್ನೇಹಿತರಾದ ಸುನೀತಾ, ಸುರೇಖಾ ಅವರಿಗೆ, ಕೃತಿಯನ್ನು ಸುಂದರವಾಗಿ ವಿಶ್ವಾಸ್ ಪ್ರಿಂಟರ್‍ಸ್ ಅವರಿಗೆ ವಂದನೆಗಳು.

MORE FEATURES

ಬೇಂದ್ರೆ ನಾಟಕಗಳ ರಂಗ ಪ್ರವೇಶಕ್ಕೆ ...

07-05-2021 ಬೆಂಗಳೂರು

‘ಬೇಂದ್ರೆಯವರ ಹದಿನಾಲ್ಕು ನಾಟಕಗಳ ಅಭಿವ್ಯಕ್ತಿ, ಆಶಯ ಹಾಗೂ ರಂಗ ಭಾಷೆಯ ಹಿನ್ನೆಲೆಯಲ್ಲಿ ಓದಿಗೆ ಅವಕಾಶ ಮಾಡಿಕೊಳ್...

‘MAKING OF ಬಂಗಾರದ ಮನುಷ್ಯ’ ಸಾಧನ...

05-05-2021 ಬೆಂಗಳೂರು

ಕನ್ನಡ ಸಿನಿಮಾ ಗಗನಮಂಡಲದಲ್ಲಿ ಧ್ರುವತಾರೆಯಂತಿದ್ದ ‘ಬಂಗಾರದ ಮನುಷ್ಯ’ ಸಿನಿಮಾದ ಸಾಧನೆಯ ಶ್ರಮವನ್ನು ಲೇಖಕ...

ಇಲ್ಲಿ ರುಚಿ ನೋಡಿ, ಲೋಕ ಪಾಕಶಾಲೆಯಲ...

30-04-2021 ಬೆಂಗಳೂರು

‘ಕಾಕ್ ಟೇಲ್’ -ಲೇಖಕಿ ಚೇತನಾ ತೀರ್ಥಹಳ್ಳಿ ಅವರ ಹೊಸ ಕೃತಿ. ಅವರೇ ಹೇಳುವಂತೆ ಇದೊಂದು ಮಿಶ್ರಣಗಳ ಕಾಕ್ ಟೇಲ...