Date: 23-05-2023
Location: ಬೆಂಗಳೂರು
"ಸಂಬಂಧಗಳ ಸಮ್ಮೋಹಕತ್ವ ಅಳಿಸಲಾಗದು. ತೆರೆದ ಬಾಗಿಲು ಒಳಗೆ ಬಾ ಎನ್ನುವ ಆಹ್ವಾನವನ್ನು ನೀಡುತ್ತದೆಯೋ, ಇಲ್ಲ ಬಾಗಿಲ ಒಳಗೆ ಪ್ರವೇಶಿಸುವ ಜರೂರತ್ತನ್ನು ಹೇಳುತ್ತದೋ ತಿಳಿಯದು. ಅದೇ ಬಾಗಿಲು ಮುಚ್ಚಿ ಶಾಶ್ವತವಾಗಿ ಎಲ್ಲಕ್ಕೂ ಕೊನೆ ಹಾಡುತ್ತದೋ ತಿಳಿಯದು," ಎನ್ನುತ್ತಾರೆ ಅಂಕಣಗಾರ್ತಿ ಪಿ. ಚಂದ್ರಿಕಾ. ಅವರು ತಮ್ಮ ನಡೆಯದ ಬಟ್ಟೆ ಅಂಕಣದಲ್ಲಿ ‘ಚೂರಾದರೂ ಕಾಣಿಸುವ ನಿಷ್ಠೆಯನ್ನು ಕನ್ನಡಿ ಕಳಕೊಳ್ಳದು' ಎನ್ನುವ ವಿಚಾರವನ್ನು ಕಟ್ಟಿಕೊಟ್ಟಿದ್ದಾರೆ.
ನಿಹಾರಿಕಾಳನ್ನು ಭೇಟಿಯಾಗುವ ದಿನ ಶ್ಯಾಮೂ ವಿಚಲಿತಳಾಗಿದ್ದಳು. 'ಅವಳೇನು ನನ್ನ ವಂಚಿಸಿಲ್ಲ’ ಎಂದು ಎಂಟು ಹತ್ತು ಸಲವಾದರೂ ಹೇಳಿದ್ದಿರಬೇಕು. ಅದು ಯಾರಿಗೋ ಹೇಳಿದ್ದಲ್ಲ ತನಗೆ ತಾನೆ ಹೇಳಿಕೊಂಡಿದ್ದು ಎನ್ನುವುದು ಸ್ವತಃ ಅವಳಿಗೂ ಗೊತ್ತು. ಖಿನ್ನತೆ ಅವಳ ಕಣ್ಣುಗಳಲ್ಲಿ ಮಡುಗಟ್ಟಿತ್ತು. ತನ್ನೆದೆಯಲ್ಲಿ ಎಂಥಾ ಕೋಲಾಹಲ ಇತ್ತೆಂದು ಅವಳು, 'ಹೇಳಲಾಗದ ಹುಚ್ಚು ಬಣ್ಣದ ಹಿಂದೆ ಬಿದ್ದು, ಅದನ್ನು ಚಿತ್ರವೊಂದರ ಎದೆಗೆ ತರಲಾಗದ ತಹತಹ ಇರುತ್ತಲ್ಲ ಹಾಗಿದ್ದೆ. ಪುಟ್ಟ ಹುಡುಗಿ ನಿಜ ಎಷ್ಟೋ ಸಲ ಹನಿಗೇ ನಾನು ಹೇಳಲಾಗದೆ ಹೋಗುತ್ತೇನೆ ಅವಳ ಮಾತುಗಳಿಗೆ ತಡಬಡಾಯಿಸುತ್ತೇನೆ ಅಂಥಾದ್ದರಲ್ಲಿ ನಾನು ಎಂದೂ ನೋಡದೆ ಇರುವ ಮಾತಾಡದೇ ಇರುವ ಹುಡುಗಿಯೊಬ್ಬಳನ್ನು ಏನಂತ ಮಾತಾಡಲಿ? ಏನೆಂದು ಹೇಳಲಿ? ಅಷ್ಟಕ್ಕೂ ಅವಳು ನನ್ನನ್ನು ಏನೆಂದು ಕೇಳುತ್ತಾಳೆ? ನಾನು ಹೇಗೆ ಪ್ರಿಪೇರ್ ಆಗಲಿ ಎನ್ನುವುದೇ ಗೊತ್ತಿರಲಿಲ್ಲ. ಮೊದಲ ಬಾರಿಗೆ ಚಂದ್ರನನ್ನು ಭೇಟಿಯಾಗಿ ಮಾತಾಡುವಾಗಲೂ ನನ್ನಲ್ಲಿ ಅಂಥಾ ಗೊಂದಲ ಇರಲಿಲ್ಲ’ ಎಂದಿದ್ದಳು. ಸಂಬಂಧಗಳ ಅಂತಿಮ ತೆರೆ ನಮ್ಮ ವಿಚ್ಚೇದನದ ದಿನ ಬೀಳಲಿಲ್ಲ. ನಾನು ನಿಹಾರಿಕಾಳನ್ನು ನೋಡಲು ಹೋದೆನಲ್ಲಾ ಅವತ್ತೇ ಎಲ್ಲವೂ ಇತ್ಯರ್ಥವಾದ ಸಮಾಧಾನ ಚಂದ್ರನ ಮುಖದಲ್ಲಿ ಕಂಡಿತ್ತಲ್ಲ! ನೀನು ನಿಹಾರಿಕಾಳನ್ನು ಮಾತಾಡಿಸಲು ನನ್ನನ್ನು ಅಣಿ ಮಾಡಿದ್ದು, ಚಂದ್ರನನ್ನು ಗಿಲ್ಟ್ ನಿಂದ ಬಿಡುಗಡೆ ಮಾಡಿದ್ದು ಒಂದೇ ಸಲ ಎನ್ನುವುದು ನಿನಗೆ ತಿಳಿದಿತ್ತೇ ತೇಜೂ’ ಎಂದಿದ್ದಳು. ಖಂಡಿತಾ ನಾನಿದನ್ನು ಕಲ್ಪನೆ ಕೂಡಾ ಮಾಡಿಕೊಂಡಿರಲಿಲ್ಲ. ನದಿಯು ಸ್ವಲ್ಪ ದೂರ ಹೋದ ಮೇಲೆ ದೊಡ್ದ ಬಂಡೆಯೊಂದು ಅಚಲವಾಗಿ ಕೂತಿರುತ್ತದೆ, ಅದನ್ನು ಹಾಯಲಾಗದ ನದಿಯು ತನ್ನ ದಿಕ್ಕನ್ನು ಬದಲಿಸುತ್ತದೆ ಎಂದು ಯಾರಿಗೆ ಗೊತ್ತಿರುತ್ತದೆ?
ಅಂದು ಬೆಳಗ್ಗೆ ಶ್ಯಾಮುವನ್ನು ಕರೆದೊಯ್ಯಲು ಅವಳ ಮನೆಗೆ ಹೋದಾಗ ಶ್ಯಾಮು ತಿಂಡಿ ಮಾಡುತ್ತಿದ್ದಳು ನನಗೂ ತಿನ್ನುವಂತೆ ಹೇಳಿದಳು. ನನಗೆ ಗೊತ್ತಿತ್ತು ಇಂದು ಅವಳ ಮಾತನ್ನು ಕೇಳುತ್ತಲೇ ಅವಳನ್ನು ನನ್ನ ದಾರಿಗೆ ತಂದುಕೊಳ್ಳಬೇಕೆಂದು. ಅವಳು ನನ್ನ ಕಡೆಗೆ ನೋಡಿದರೆ ಇವಳ್ಯಾಕೆ ನನ್ನ ಕಡೆಗೆ ನೋಡಬೇಕು ಎನ್ನಿಸುವಂತ್ತಿತ್ತು. ಶ್ಯಾಮುವನ್ನು ಹುರಿದುಂಬಿಸಿ ಆ ಹುಡುಗಿಯನ್ನು ಭೇಟಿ ಮಾಡಿಸುವ ಹಟಕ್ಕೆ ಬಿದ್ದ ನನಗೆ ಅವಳನ್ನು ಎದುರಿಸಲಾಗುತ್ತಿಲ್ಲ. ಅರೆ ನಾನೇನು ತಪ್ಪು ಮಾಡಿದ್ದೇನೆ? ಇದರಲ್ಲಿ ನನ್ನ ಪಾತ್ರವೇನಿದೆ? ಆದರೂ ಅವಳ ಮುಖದಲ್ಲಿ ನನ್ನ ಬಗ್ಗೆ ಯಾಕೆ ಸಹಾನುಭೂತಿ ಕಾಣಬೇಕು? ವಿಚಿತ್ರ ಎಂದರೆ ಅವತ್ತು ಶ್ಯಾಮು ಅತ್ಯಂತ ಸುಂದರ ಮತ್ತು ಪೂರ್ಣಳೇನೋ ಎನ್ನುವ ಹಾಗೆ ಭಾಸವಾಗುತ್ತಿದ್ದಳು. ಹನಿಯನ್ನು ಅತ್ಯಂತ ಪ್ರೀತಿಯಿಂದ ಮಾತಾಡಿಸುತ್ತಿದ್ದಾಳೆ ಎನ್ನಿಸಿತ್ತು. ಇದೇನಿದು ನನ್ನ ಕಲ್ಪನೆ? ಅವಳಿಗೆ ಹನಿಯ ಬಗ್ಗೆ ಪ್ರೀತಿ ಸಹಜ ಅವಳ ಪ್ರತಿ ನಡೆಯಲ್ಲೂ ನಾನ್ಯಾನೆ ಏನೇನನ್ನೋ ಹುಡುಕಬೇಕು? ಇಲ್ಲ ಇಡೀ ಸಂದರ್ಭಕ್ಕೆ ಅವಳಿಗಿಂತ ನಾನೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಿರುವೆ, ಅದಕ್ಕೆ ಹೀಗೆಲ್ಲಾ ಅಂದುಕೊಳ್ಳುತ್ತಿರುವೆ ಅನ್ನಿಸಿಬಿಟ್ಟಿತ್ತು.
ತಿಂಡಿ ತಿಂದ ಹನಿಯನ್ನು ಚಂದ್ರನನ್ನು ಕರೆಯುವಂತೆ ಒಳಗೆ ಕಳುಹಿಸಿ, ನನ್ನ ಏನು ಎತ್ತು ಎಂದು ಕೇಳದೆ ಶ್ಯಾಮುವೇ ಮಾತಾಡತೊಡಗಿದಳು. ಸೋಲಿನ ಭಾವನೆ ಅವಳ ಮನಸ್ಸಿನಲ್ಲಿ ಮೂಡಿಬಿಟ್ಟಿತ್ತಾ? ಗೊತ್ತಿಲ್ಲ. `ನಮ್ಮ ಎಲ್ಲ ಸಂಬಂಧಗಳು ಆಯ್ಕೆಗಳೇ. ನಮ್ಮ ಆಯ್ಕೆಯೇ ನಮ್ಮನ್ನು ಅಣಕಿಸಿದಾಗ ಹೇಗನ್ನಿಸುತ್ತದೆ ಹೇಳು ತೇಜೂ’ ಎಂದಳು. ಅವಳ ಮಾತುಗಳಿಗೆ ನನ್ನ ಮನಸ್ಸು ಕೂಡಾ ಮಾತಾಡಲಿಲ್ಲ. ಇಬ್ಬರ ನಡುವೆ ಮೌನ ನೆಲೆಸಿತ್ತು. ಮಾತಾಡಿದರೆ ನಮ್ಮಿಂದ ನಾವೇ ದೂರವಾಗುತ್ತೇವೆ ಎನ್ನಿಸತೊಡಗಿತು. ಮಾತಾಡದೆ ಗತಿಯಿಲ್ಲ, `ನೀನು ತಿಂಡಿ ತಿಂದೆಯಾ ಶ್ಯಾಮೂ’ ಎಂದೆ. ಅದಕ್ಕವಳು ನಕ್ಕಳು- ಗೊತ್ತಿದ್ದೂ ಕೇಳುತ್ತಿದ್ದೀಯಲ್ಲಾ ಎನ್ನುವಂತೆ. ನನ್ನ ಮೂರ್ಖತನಕ್ಕೆ ನಾನೇ ತಲೆ ತಗ್ಗಿಸಿದೆ. ಅಷ್ಟರಲ್ಲಿ ವಾಪಾಸು ಬಂದ ಹನಿ `ಅಪ್ಪನಿಗೆ ಹಸಿವಿಲ್ಲವಂತೆ’ ಎಂದಿದ್ದಳು. ಶ್ಯಾಮುವಿನ ನೋಟಕ್ಕೆ ಕೊಡಬೇಕಾದ ಉತ್ತರಗಳನ್ನು ಅವನು ಸುಲಭವಾಗಿ ತಪ್ಪಿಸಿಕೊಳ್ಳುವ ದಾರಿಯನ್ನು ಕಂಡುಕೊಂಡಿದ್ದ. ಈ ದಾರಿಗಳೇ ಹೀಗೆ ಎಷ್ಟೋ ಮುಂದಕ್ಕೆ ಕೊಂಡೊಯ್ಯಬಲ್ಲದು ಅಂದುಕೊಂಡು ಬಿಡುತ್ತೇವೆ. ಆದರೆ ಅವು ಹಾಗಲ್ಲ ಒಂದು ಕಡೆ ನಿಂತುಬಿಟ್ಟೂ ಮುಂದೆ ಎಲ್ಲಿ ಹೋಗುತ್ತೀರಿ ಎನ್ನುವ ಪ್ರಶ್ನೆಗಳನ್ನು ನಮಗೇ ಹಾಕಿಬಿಡುತ್ತವೆ. ಶ್ಯಾಮು ಖಿನ್ನಳಾದಳು. ಅವಳು ಅತ್ತಿದ್ದಿದ್ದರೆ... ಇಲ್ಲ ಅಳುವನ್ನು ಮರೆಮಾಚುತ್ತಿದ್ದಳು ಇದು ಹನಿಗೂ ಗೊತ್ತಾಯಿತು. ಹನಿ ಚಂದ್ರನಿಗೆ `ಅಮ್ಮ ನೋಯುವುದು ನನಗಿಷ್ಟವಿಲ್ಲ ನಿಮ್ಮ ನಿಮ್ಮ ಜೀವನವನ್ನು ಇತ್ಯರ್ಥ ಮಾಡುಕೊಳ್ಳುವುದು ಒಬ್ಬರಿಗೊಬ್ಬರು ಕೊಡುವ ನೋವಿನಿಂದಲ್ಲ. ಕಡೆಗೆ ಬಿಡುಗಡೆಯೂ ನಿರಾಳವೇ ಅಲ್ಲವೆ’ ಎಂದು ಅವನನ್ನು ಎಳೆದು ಡೈನಿಂಗ್ ಟೇಬಲ್‌ನ ಮುಂದಕ್ಕೆ ತಂದಿದ್ದಳು. ಹನಿಯ ಮಾತಿನಿಂದ ಚಂದ್ರ ವಿಚಲಿತನಾಗಿದ್ದ. ಶ್ಯಾಮು ಅವಳಿಗೆ ಏನೋ ಹೇಳಲು ಹೋದಳಾದರೂ ಹೇಳಲಿಲ್ಲ. ಚಂದ್ರನಿಗೆ ನಾವ್ಯಾರಾದರೂ ಹೀಗೆ ಮಾಡೆಂದು ಅವಳಿಗೆ ಹೇಳಿಕೊಟ್ಟಿರಬಹುದು ಎನ್ನುವ ಅನುಮಾನ ಮೂಡಿರಲಿಕ್ಕೂ ಸಾಕು. ಅವನಿಗೆ ಮನವರಿಕೆ ಮಾಡಿಕೊಡುವುದು ಹೇಗೆ ಸಾಧ್ಯ? ಅವನು ಮಾತಾಡಲೇ ಇಲ್ಲ. ಆಡಿದರೆ ಎಲ್ಲವೂ ಮುಗಿದು ಹೋಗುತ್ತದೆ. ಮುಗಿದು ಹೋದದ್ದಕ್ಕೂ ಅಧಿಕೃತತೆ ದಕ್ಕಿಬಿಡುತ್ತದೆ.
ನಿನಗೆ ನೆನಪಿದೆಯಾ ತೇಜೂ, ಕರೆಂಟು ಹೋದಾಗ ಎರಡು ಕನ್ನಡಿಗಳ ಮಧ್ಯೆ ಒಂದು ಮೇಣದ ಬತ್ತಿಯನ್ನು ಇರಿಸುತ್ತಿದ್ದೆವು. ಒಂದೇ ಮೇಣದ ಬತ್ತಿ ಎರಡು ಕನ್ನಡಿಗಳ ಮಧ್ಯೆ ಅಸಂಖ್ಯವಾಗುತ್ತಿತ್ತು. ಬೆಳಕು ಜಾಸ್ತಿಯಾಗಲಿ ಎಂದು ಒಂದು ಕನ್ನಡಿಯನ್ನು ಇಡುತ್ತಿದ್ದುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರು ಆದರೆ ನಾವು ಎರಡು ಕನ್ನಡಿಗಳ ಮಧ್ಯೆ ಇಟ್ಟು ಹೊಸ ಆಟ ಕಟ್ಟಿದ್ದೆವು. ಒಂದು ಕನ್ನಡಿ ಇನ್ನೊಂದು ಕನ್ನಡಿಗೇ ಬಿಟ್ಟುಕೊಡುತ್ತಿದ್ದ ಬಿಂಬ ಯಾವುದೆ ನಿಜವಾದ ಮೇಣದ ಬತ್ತಿಯದ್ದೋ ಅಥವಾ ಕನ್ನಡಿಯ ಬಿಂಬದ್ದೋ. ನಾನೊಂದು ಕಡೆ ನೀನೊಂದು ಕಡೆ ಕೂತು ಅದನ್ನು ಎಣಿಸಲು ಯತ್ನಿಸುತ್ತಿದ್ದೆವು. ಈ ಆಟ ನಮ್ಮ ನಿದ್ರೆಯನ್ನೂ ಕಳೆದುಬಿಡುತ್ತಿತ್ತಲ್ಲವೇ? ಒಂದರೊಳಗೊಂದು ಮೂಡುತ್ತಾ, ಚಿಕ್ಕದಾಗುತ್ತಾ ಕೊನೆಯ ಬಿಂಬ ಯಾವುದೆಂದು ಅರಿವೇ ಆಗದಂತೆ ನಾವು ಕಂಗಾಲಾಗಿಬಿಡುತ್ತಿದ್ದೆವಲ್ಲಾ? ಎಣಿಸಿದ ಲೆಕ್ಕದಲ್ಲಿ ನೀನು ತಪ್ಪು ಹುಡುಕುತ್ತಿದ್ದರೆ, ಅನಂತ ಸಾಧ್ಯತೆ ಹೇಗಾಯಿತು ಎಂದು ನಾನು ಹುಡುಕುತ್ತಿದ್ದೆ. ನಮ್ಮ ಜಗಳದಲ್ಲಿ ಕೈತಪ್ಪಿ ಬಿದ್ದ ಕನ್ನಡಿಯ ಚೂರುಗಳೂ ಕೂಡಾ ಮೇಣದ ಬತ್ತಿಯ ಅದೇ ಬಿಂಬವನ್ನು ಪ್ರತಿಫಲಿಸಿದ್ದವಲ್ಲೇ. ಚೂರಾದರೂ ಕಾಣಿಸುವ ನಿಷ್ಠೆಯನ್ನು ಕನ್ನಡಿ ಕಳಕೊಳ್ಳಲೆ ಇಲ್ಲ. ಅದೊಂದು ಬೆರಗಾಗಿ ನಮ್ಮನ್ನು ಕಾಡಿತ್ತಲ್ಲವೇ ತೇಜೂ. ಅಷ್ಟರ ನಡುವೆಯೂ ಒಡೆದುಬಿದ್ದ ಕನ್ನಡಿಯ ಚೂರುಗಳನ್ನು ಎತ್ತಿ ಹಾಕದಿದ್ದರೆ ಬೈಗುಳ ಗ್ಯಾರೆಂಟಿ ಎಂದು ತೆಗೆಯುವಾಗ ನಿಷ್ಠೆಯ ಕನ್ನಡಿ ಕೈಗೆ ತಾಕಿ ರಕ್ತ ಬರಿಸಿತ್ತಲ್ಲೆ. ನಿಷ್ಠತೆಗೆ ಕಠೋರತೆ ಜಾಸ್ತಿಯಲ್ಲವೇ. ಚುರುಗುಟ್ಟಿದ ಆ ನೋವು ನಮ್ಮ ಎಲ್ಲ ಸಂಭ್ರಮವನ್ನೂ ಅಳಿಸಿ ಹಾಕಿತ್ತಲ್ಲೆ!
ನಾನೂ ನೀನೂ ಒಂದೊಂದು ಕನ್ನಡಿಗಳಾಗಿ ದೀಪವನ್ನು ಫಲಿಸಿದ್ದರಿಂದಲೇ ಬೆಳೆದೆವು. ವಿವರಿಸುವುದೆಂದರೆ ವಿಷಯವನ್ನು ಸರಳ ಮಾಡುವುದೆಂದು ಕೊಂಡರೆ ತಪ್ಪು. ವಿವರಣೆಯೇ ಭೂತ ಅಂತ ಯಾರೋ ಹೇಳಿದ್ದ ನೆನಪು. ಅದು ವಿಸ್ತರಿಸುವುದು ಎಂದುಕೊಂಡರೆ ಹತ್ತಿರ ಆಗಬಹುದೆಂದುಕೊಳ್ಳುತ್ತೇನೆ. ನನಗೆ ಈಗಲೂ ಕಾಡುವ ಸಂಗತಿ ಎಂದರೆ ಕನ್ನಡಿಗಳು ಯಾಕೆ ಯಾವುದನ್ನಾದರೂ ಆಧರಿಸಬೇಕು ಎಂದು? ನಾನೂ ನೀನೂ ಕನ್ನಡಿಗಳಾಗೇ ಎಷ್ಟು ದಿನ ಉಳಿಯುವುದು? ಇಷ್ಟಕ್ಕೂ ಆ ಕನ್ನಡಿಗಳು ಯಾವ ಬಾಗಿಲಾಗಿದ್ದವು ನಮಗೆ? ನೋವನ್ನು ಕಣ್ಣೀರೇ ಹೇಳಬೇಕಾಗಿಲ್ಲ-ಹಿಂದಿರುಗಿ ನೋಡಿದಾಗ ಎಷ್ಟು ಚಿತ್ರಗಳೇ? ನಾನು ಬರೆದದ್ದರಲ್ಲಿ ಸಫಲತೆಯನ್ನು ಒಂದೇ ಚಿತ್ರ ಹೇಳಲಾಗದಲ್ಲವೇ! ಎಲ್ಲವೂ ಒಂದೊಂದು ಹಂತಗಳು. ನಿನಗೆ ಗೊತ್ತಾ, ಚಂದ್ರ ನನ್ನ ಪ್ರೀತಿಸಿದಾಗ ಹೇಳಿದ್ದ, `ಶ್ಯಾಮು ನಾನು ನಿನ್ನ ಸಾವಿರ ಬಾಗಿಲು ಕಣೇ’ ಎಂದು. ಕನ್ನಡಿಯ ಒಳಗಿನ ಬಿಂಬದ ಹಾಗೆ. ಸಾವಿರ... ಊಹುಂ ಲೆಕ್ಕಕ್ಕೆ ಸಿಗದಷ್ಟು ಬಾಗಿಲುಗಳು ಒಮ್ಮೆಗೆ ತೆರೆದುಬಿಟ್ಟಿದ್ದವು. ನಾನು ಅವತ್ತು ಹಾಗೆಂದಾಗ ಎಷ್ಟು ಸಂಭ್ರಮಿಸಿದ್ದ! ಆದರೆ ಈಗ... ಆ ಸಂಭ್ರಮ ಇಲ್ಲ. ನಾನು ಭ್ರಮಾಧೀನಳು ಎಂದು ಚಂದ್ರ ನಂಬಿಬಿಟ್ಟಿದ್ದಾನೆ. ಹೇಳದೇ ಇದ್ದರೂ ನಿನ್ನ ಮನಸ್ಸಿನಲ್ಲೂ ಅದೇ ಇರಬಹುದು. ಆದರೆ ಆ ಭ್ರಮೆ ನನಗೆ ಎಂಥೆಂಥಾ ಸಹಾಯ ಮಾಡಿವೆ ಗೊತ್ತಾ? ಮುಳುಗುವ ನನಗೆ ತೇಲು ಹಲಗೆಯಾಗಿದೆ. ಏನು ಪಡೆದಿದ್ದೀಯಾ? ಎಂದು ಕೇಳಿದರೆ ಎಲ್ಲವನ್ನೂ ನಾನು ಈಗ ಏನಾಗಿದ್ದೆ ಅದನ್ನೂ ಕೂಡಾ. ನೆರಳಿನ ಹಾಗೆ ನನ್ನ ಜೊತೆ ನಡೆದು ಬಂದಿದೆ. ಇರುಳಿನ ಹಾಗೆ ಭಯ ಹುಟ್ಟಿಸಿದೆ, ಒಂಟಿತನದ ಹಾಗೆ ಕಾಡಿದೆ. ಆದರೆ ಜೊತೆಗಿರುವ ಭರವಸೆಯನ್ನು ಮಾತ್ರ ಬಾಚಿ ಬಾಚಿ ಕೊಟ್ಟಿದೆ. ಅದಕ್ಕೆ ಬರೀ ಕೊಡುವುದಷ್ಟೇ ಗೊತ್ತು. ಎಂದೂ ವಾಪಾಸು ಬೇಡಿಲ್ಲ. `ನನ್ನ ಯಾವತ್ತೂ ದೂರ ಮಾಡುವುದಿಲ್ಲ ತಾನೆ’ ಎಂದು ಚಂದ್ರನನ್ನು ಕೇಳಿದಾಗ ಅವನು ಯೋಚಿಸಲೂ ಸಮಯ ತೆಗೆದುಕೊಳ್ಳದೆ ತಕ್ಷಣ ಹೇಳಿದ್ದ, 'ಖಂಡಿತಾ ಇಲ್ಲ’ ಎಂದು. ನಾನಂದೆ, 'ನೀನು ನನ್ನಿಂದ ದೂರ ಆದರೆ ನನಗೆ ತಡೆದುಕೊಳ್ಳುವ ಶಕ್ತಿ ಇಲ್ಲ’ ಎಂದು. ಚಂದ್ರ ನನ್ನ ತನ್ನ ಬಾಹುಗಳಲ್ಲಿ ಬಾಚಿ ತಬ್ಬಿದ್ದ. ಆದರೆ ಕೊಟ್ಟ ಹಾಗೆ ಮಾಡಿ ಮತ್ತೆ ಇನ್ನೊಂದೇ ಕೈಲಿ ಅದನ್ನು ಕಸಿದುಕೊಂಡು ಬಿಟ್ಟ’ ಅವಳ ಕಣ್ಣುಗಳಲ್ಲಿ ಕಂಡು ಕಾಣದ ಹಾಗೆ ಆಡಿದ ನೀರ ಪಸೆ ನನಗೆ ಕಾಣಲಿಲ್ಲ ಅಂತ ಅವಳು ಅಂದುಕೊಳ್ಳಬಹುದು, ಅಡ್ಡಿಯಿಲ್ಲ. ಆದ್ರೆ ಅದು ನನಗೆ ಕಂಡಿತ್ತು.
`ಸಂಬಂಧಗಳ ಸಮ್ಮೋಹಕತ್ವ ಅಳಿಸಲಾಗದು. ತೆರೆದ ಬಾಗಿಲು ಒಳಗೆ ಬಾ ಎನ್ನುವ ಆಹ್ವಾನವನ್ನು ನೀಡುತ್ತದೆಯೋ, ಇಲ್ಲ ಬಾಗಿಲ ಒಳಗೆ ಪ್ರವೇಶಿಸುವ ಜರೂರತ್ತನ್ನು ಹೇಳುತ್ತದೋ ತಿಳಿಯದು. ಅದೇ ಬಾಗಿಲು ಮುಚ್ಚಿ ಶಾಶ್ವತವಾಗಿ ಎಲ್ಲಕ್ಕೂ ಕೊನೆ ಹಾಡುತ್ತದೋ ತಿಳಿಯದು. ಆದರೆ ಒಂದಂತೂ ನಿಜ ಬಾಗಿಲುಗಳಿಲ್ಲದ ಗೋಡೆಗಳಿಗೆ ಯಾವತ್ತೂ ಬೆಲೆಯಿರುವುದಿಲ್ಲ. ಬೆಲೆ ಬರುವುದಿಲ್ಲ. ಹಾಗೆ ಈ ಸಂಬಂಧಗಳಿಗೆ ಸಮ್ಮೋಹಕತೆ ಎಂಥದೋ ಮಾರ್ದವತೆಯನ್ನು ಕೊಟ್ಟುಬಿಟ್ಟು ಬಿಡಿಸಲಾಗದ ಭಾವವೊಂದನ್ನು ಎದೆಯಲ್ಲಿ ಮೊಳೆಯುವ ಹಾಗೆ ಮಾಡುತ್ತದೆ. ತೇಜೂ ಅಂದು ವಿಚಿತ್ರವೊಂದು ಜರುಗಿತು. ನಾನು ಚಂದ್ರನನ್ನು ಕೇಳಿದೆ, `ಚಂದ್ರಾ ನಿನ್ನ ಹತ್ತಿರ ಮಾತಾಡಬೇಕು’ ಅಂದು ತೆರೆದಿದ್ದ ಸಾವಿರ ಬಾಗಿಲುಗಳಲ್ಲಿ ದಢಾರನೆ ಒಂದು ಬಾಗಿಲು ಮುಚ್ಚಿತು. ಅಷ್ಟು ಶಬ್ದ ಮಾಡುವ ಅಗತ್ಯ ಇರಲಿಲ್ಲ. ಅದು ಬಾಗಿಲ ಇಚ್ಚೆ. ದಿಕ್ಕೆಟ್ಟವಳಂತೆ ನಾನು ನಿಂತೇ ಇದ್ದೆ. ನನ್ನ ಒಂದೊಂದು ಮಾತೂ ಒಂದೊಂದೇ ಬಾಗಿಲುಗಳನ್ನು ಮುಚ್ಚುತ್ತಾ ಬಂತು. ನನಗೆ ಅರ್ಥ ಆಗಿತ್ತು, ಇನ್ನು ಈ ಬಾಗಿಲುಗಳು ನನ್ನ ಪಾಲಿಗೆ ಶಾಶ್ವತವಾಗಿ ತೆರೆಯಲಾರದೆಂದು. ಆದರೂ ಕೇಳಿದೆ, `ನನ್ನ ಮಾತು ಕೇಳುತ್ತಿಲ್ಲವೇ?’ ಸಾವಿರದ ಬಾಗಿಲುಗಳ ಕೊನೆಯ ಬಾಗಿಲೂ ಮುಚ್ಚಿಕೊಂಡಿತು. ಆದರೆ ಅದು ಮೊದಲ ಬಾಗಿಲಷ್ಟು ಜೋರು ಶಬ್ದ ಮಾಡಲಿಲ್ಲ. ಅದಕ್ಕೂ ಮುಚ್ಚಿಕೊಳ್ಳುವುದು ಅಭ್ಯಾಸವಾಗಿತ್ತು ಅನ್ನಿಸುತ್ತೆ. ಮುಚ್ಚಿಕೊಂಡಿದ್ದು ತಿಳಿಯಲಾರದಷ್ಟು ನಾಜೂಕುತನ ಇತ್ತು. ಅಥವಾ ಆ ಶಬ್ದ ನನಗೆ ಅಭ್ಯಾಸವಾಗಿ ಕಠೋರ ಅನ್ನಿಸಲೇ ಇಲ್ಲವಾ? ಇಲ್ಲ ತೇಜೂ ಯಾವುದನ್ನೂ ಖಚಿತವಾಗಿ ಹೇಳಲಾರೆ. ಆಯಿತು ಇಷ್ಟೆಲ್ಲವನ್ನೂ ನಿನಗೆ ಹೇಳಿ ನಾನೇನು ಸಾಬೀತು ಮಾಡಲಿಕ್ಕೆ ನೋಡ್ತಾ ಇದ್ದೀನೋ ನನಗೆ ಅರ್ಥವಾಗುತ್ತಿಲ್ಲ. ಚಂದ್ರ ಕೆಟ್ಟವನಾಗುವುದು ನನಗೂ ಬೇಕಿಲ್ಲ ಖಂಡಿತಾ. ನನ್ನೊಳಗಿನ ಸುನೀತವಾದ ಅವನ ರೂಪವನ್ನು ಯಾವುದೂ ಕಲಕದೆ ಹಾಗೇ ಉಳಿದರೆ ಸಾಕಾಗಿದೆ. ಮೊಳಕಾಲು ಊರಿ ಊರಿ ಗಾಯವನ್ನೂ ಮೀರಿ ಮೊಂಡಾದ ಜಡ್ಡುಗಟ್ಟಿದ್ದ ಚರ್ಮ ಸ್ಪರ್ಷವನ್ನು ಕಳೆದುಕೊಂಡರೂ ಆಗಾಗ ತುರಿಸುತ್ತಲ್ಲ ಹಾಗೆ ಮೊಂಡಿಗೆ ಬಿದ್ದ ಮನಸ್ಸೂ ನೆನಪು ಮಾಡಿಕೊಳ್ಳುತ್ತಲೇ ಇದೆ’. ಶ್ಯಾಮು ಮಾತಾಡುತ್ತಲೇ ಇದ್ದಳು. ಇಂಥಾ ಭಾವುಕತೆಯಿಂದ ಇವಳು ನನ್ನ ಜೀವವನ್ನೂ ನಲುಗಿಸುತ್ತಿದ್ದಾಳೆ ಎಂದು ಒಂದು ಕ್ಷಣ ಅನ್ನಿಸಿತು. ತಕ್ಷಣವೇ ಪಾಪ ಅವಳ ಮನಸ್ಸಿನಲ್ಲಿ ಗೂಡುಕಟ್ಟಿದ ದುಃಖಕ್ಕೆ ಉತ್ತರಕ್ಕಾಗಿ ಅವಳೆಷ್ಟು ಹಪಹಪಿಸುತ್ತಿರಬೇಕು ಅನ್ನಿಸಿ ಬೇಸರವೆನ್ನಿಸಿತು.
ಹಾಗಂತ ಶ್ಯಾಮು ಏನೂ ತಗ್ಗಲಿಲ್ಲ, ಕೊಚ್ಚೆ ನೀರಿನಲಿ ಅರಳುವ ತಾಕತ್ತು ಗಿಡಕ್ಕಿದ್ದರೆ ಕೊಚ್ಚೆ ಅದಕ್ಕೆ ಒಳ್ಳೆಯದೇ, ನನಗೆ ಅದು ಕೊಚ್ಚೆ ಅಸಹ್ಯ ಆದ ತಕ್ಷಣ ಅದು ಗಿಡಕ್ಕೂ ಅಸಹ್ಯ ಆಗಿ ಅದರಲ್ಲಿ ಬೆಳೆಯದೆ ಮುರುಟಬೇಕು ಎನ್ನುವುದು ಯಾವ ನ್ಯಾಯ? ಎಲ್ಲ ಸಂಬಂಧಗಳು ನಡು ಮಧ್ಯದಲ್ಲೇ ನಿಲ್ಲುತ್ತದೆ ತೇಜೂ, ಇಲ್ಲದಿದ್ದರೆ ಅಪ್ಪ ಅಮ್ಮ, ಗಂಡ ಮಕ್ಕಳು ಎಲ್ಲರೂ ಯಾಕೆ ನಮ್ಮಿಂದ ದೂರ ಆಗುತ್ತಾರೆ ಹೇಳು? ಮತ್ತು ನಾವೇ ಈ ಸಂಬಂಧಗಳು ಶಾಶ್ವತ ಎನ್ನುವ ಭ್ರಮೆಗೆ ಬಿದ್ದು ಮುಂದುವರೆಸುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ. ಈ ಜಂಗಿ ಕುಸ್ತಿ ಯಾಕೇ ಬೇಕು? ಅಲ್ಲವೇನೇ’ ಎಂದಿದ್ದಳು.
ಅಷ್ಟಾದರೂ ಶ್ಯಾಮು ಚಂದ್ರನಿಗೆ ಯಾವ ವಿಷಯವನ್ನೂ ಹೇಳದೇ ಉಳಿಯಲಿಲ್ಲ, ಆ ಹುಡುಗಿ ನಿಹಾರಿಕಳನ್ನು ಭೇಟಿಯಾಗುವೆ ಎಂದಾಗ ಅವನು ಮಾತಾಡಲಿಲ್ಲ. ಬೇಡ ಎನ್ನಲಿಕ್ಕೆ ಅವನಿಗೆ ಯಾವ ನೈತಿಕತೆ ಇತ್ತು? ಅವನೂ ಎಲ್ಲದಕ್ಕು ಪ್ರಿಪೇರ್ ಆಗಿದ್ದ ಅನ್ನಿಸುತ್ತೆ. ಅನ್ನಿಸುವುದೇನು ಖಚಿತವಾಗಿ ಗೊತ್ತಿರುತ್ತೆ ಆ ಹುಡುಗಿ ಹೇಳೇ ಇರುತ್ತಾಳೆ. ಎಲ್ಲಾ ಗೊತ್ತಿದ್ದೂ ಚಂದ್ರ ಒಂದು ಮಾತನ್ನೂ ಹೇಳಲಿಲ್ಲ. ಶ್ಯಾಮುವಿನ ಪ್ರಕಾರ ಅವನು ಹೇಳಬೇಕಿಲ್ಲ ಯಾಕೆಂದರೆ ಬರೆದ ಚಿತ್ರ ಯಾವುದನ್ನು ಹೇಳುತ್ತದೆ ನೋಡುವ ಕಣ್ಣುಗಳು ಅದರ ಜೊತೆ ಸಂವಾದಿಸುವ ಮನಸ್ಸುಗಳು ಅದನ್ನು ಅರ್ಥದ ಬಾಗಿಲು ತೆರೆದು ಬಾ ಎಂದು ಕರೆದುಕೊಳ್ಳುತ್ತದೆ. ಚಂದ್ರ ಅವನು ಹಾಗಿದ್ದಾನೋ ಅವನು ನಾನೇ ಬರೆದುಕೊಂಡ ಚಿತ್ರವೋ ಯಾರಿಗೆ ಗೊತ್ತು? ಯಾಕೆಂದರೆ ಯಾವಾಗಲೂ ಅಷ್ಟೇ ನಮ್ಮದನ್ನಾಗಿಸಿಕೊಳ್ಳಲು ನಮ್ಮ ಕಣ್ಣುಗಳನ್ನು ಅವುಗಳಿಗೆ ಕೊಟ್ಟುಬಿಡುತ್ತೇವೆ. ಜೀವವನ್ನು ಎರೆದುಬಿಡುತ್ತೇವೆ.
ಆ ಹೊಟೇಲಿನ ಜೊತೆ ಶ್ಯಾಮುವಿಗೆ ಗಾಢವಾದ ಅನುಬಂಧವಿತ್ತು. ಅದನ್ನು ಅವಳ ಕಾಲುಗಳೇ ಹೇಳುತ್ತಿದ್ದವು. ಅವಳು ಹೊಟೇಲಿನ ಆವರಣವನ್ನು ಪ್ರವೇಶ ಮಾಡುತ್ತಿದ್ದರೆ, ಸಿಬ್ಬಂದಿವರ್ಗದವರು ಅವಳನ್ನು ಹಾರ್ದಿಕವಾಗಿ ಸ್ವಾಗತಿಸಿದ್ದರು. ನನ್ನ ಕೈಹಿಡಿದು ಒಳಗೆ ಕರೆದೊಯ್ದ ಶ್ಯಾಮು ನಮಗಾಗಿ ಕಾಯ್ದಿರಿಸಿದ್ದ ಟೇಬಲ್‌ಗೆ ಬಂದಳು. ಮುಂಚೆಯೇ ಎಲ್ಲ ಅರೇಂಜ್ ಮಾಡಿದ್ದಳು ಅನ್ನಿಸುತ್ತೆ. ಕುರ್ಚಿಯನ್ನು ಎಳೆದು ಕೂರಲು ಅನುವು ಮಾಡಿಕೊಡಲು ಬಂದ ಸಿಬ್ಬಂದಿಗಳಿಗೆ ಬೇಡ ಎನ್ನುವಂತೆ ಸೂಚಿಸಿದಳು. ಅವರಿಗೆ ತಾನು ಕರೆವ ವರೆಗೂ ಯಾರೂ ಬರುವುದು ಬೇಡ ಎನ್ನುವ ಸಂದೇಶವನ್ನು ರವಾನಿಸಿದಳು. ಅವರು ಅತ್ಯಂತ ಗೌರವದಿಂದ ಅವಳ ಮಾತಿಗೆ ಸಮ್ಮತಿ ಸೂಚಿಸಿದರು. ಅವಳಿಗೆ ಹೊರಗಿನ ಜಗತ್ತಿನಲ್ಲಿ ಅಂಥಾ ದೊಡ್ದ ಮರ್ಯಾದೆ ಇತ್ತು.
`ನನ್ನ ಪ್ರಿಯವಾದ ಟೇಬಲ್ ಇದೇ ಕಣೆ, ಇಲ್ಲೇ ನನ್ನ ಮೊದಲ ಚಿತ್ರದ ವ್ಯಾಪಾರವಾಗಿದ್ದು, ಮೊದಲ ಎಕ್ಸಿಬಿಷನ್ ಸೋಫಿಯಾದಲ್ಲಿ ಫಿಕ್ಸ್ ಆಗಿದ್ದು... ಈ ಟೇಬಲ್‌ನ ಜೊತೆ ಏನೇನೋ ನೆನಪುಗಳಿವೆ’ ಎಂದಳು. ಅವಳ ತುಟಿಗಳಲ್ಲಿ ಕಂಡೂ ಕಾಣದ ದಿವ್ಯವಾದ ಹಾಸವಿತ್ತು. ಅದೆಲ್ಲಾ ಇರಲಿ ನಿಹಾರಿಕಾ ಬಂದಾಗ ಏನನ್ನು ಮಾತಾಡುವೆ? ಎಂದೆ. ಮಾತು ಲೆಕ್ಕಾಚಾರ ಅಲ್ಲಕಣೆ ಬಂದಾಗ ಏನು ಮಾತಾಡಲಿ ಎಂದು ಮುಂಚೆಯೇ ಅಂದುಕೊಂಡು ಇಟ್ಟುಕೊಳ್ಳುವುದಕ್ಕೆ. ಆ ಕ್ಷಣಕ್ಕೆ ಏನನ್ನಿಸುತ್ತೋ ಹೇಗಿರುತ್ತೋ ಹಾಗೆ ಅಷ್ಟೇ ಎಂದಿದ್ದಳು.
ನಿಹಾರಿಕಾ ಬಂದಳು ಅವಳ ಹೆಜ್ಜೆಯಲ್ಲಿ ಎಂಥಾದ್ದೋ ದೃಢತೆ ಇತ್ತು. ಅವಳ ನಿಲುವಿನಲ್ಲಿ ಆತ್ಮವಿಶ್ವಾಸ, ವಯಸ್ಸಿಗೆ ತುಸು ಜಾಸ್ತಿಯೇ ಎನ್ನುವ ದೇಹ. ಅವಳನ್ನು ನೋಡಿದ್ರೆ ಗೊತ್ತಾಗುತ್ತಿತ್ತು ತುಂಬಾ ಬೋಲ್ಡ್ ಹುಡುಗಿ ಅಂತ. ಬಂದವಳೇ ತನ್ನನ್ನು ನಿಹಾರಿಕಾ ಎಂದು ಪರಿಚಯಿಸಿಕೊಂಡಳು ಅವಳಿಗೆ ಶ್ಯಾಮು ಚಂದ್ರನ ಹೆಂಡತಿ ಅಂತ ಗೊತ್ತಿತ್ತು. ಅವಳನ್ನು ಮೀಟ್ ಮಾಡ್ತಾ ಇದ್ದೀನಿ ಎನ್ನುವ ಖಚಿತತೆಯೂ ಇತ್ತು. ಆದರೆ ಅವಳು ಚಂದ್ರನ ಹಾಗೆ ತಲೆ ತಪ್ಪಿಸಿಕೊಳ್ಳಲಿಲ್ಲ. ಶ್ಯಾಮುವಿನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದಳು `ನಿಮ್ಮ ಬಗ್ಗೆ ನನಗೆ ತುಂಬಾ ಗೊತ್ತಿದೆ, ನೀವು ತುಂಬಾ ದೊಡ್ಡ ಆರ್ಟಿಸ್ಟ್, ನಾನು ಸರ್‌ಗೆ ಬೇಕಾಗಿ ಹತ್ತಿರ ಆಗಲಿಲ್ಲ. ಎಲ್ಲವೂ ನನಗೂ ಗೊತ್ತಿಲ್ಲದೆ ಆಗಿಬಿಟ್ಟಿತ್ತು ಆಂಟಿ’. ಶ್ಯಾಮು ಅವಳನ್ನು ನಿರುಕಿಸುತ್ತಿದ್ದಳು. ಅವಳ ಮುಖದಲ್ಲಿ ಏನಾದರೂ ಕಸಿವಿಸಿ ಕಂಡಿತೇ ನೋಡಿದೆ.
ನಿಹಾರಿಕಾ ತುಂಬು ಉತ್ಸಾಹದ ಊಟೆ ವಯಸ್ಸೇ ಅಂಥಾದ್ದು. ತುಂಬಾ ಬೋಲ್ಡ್ ಆಗಿದ್ದಳು ಕೂಡಾ. ಚಂದ್ರ ಹೇಳಿದ ಹಾಗೆ ಅವನನ್ನು ಬಿಟ್ಟರೆ ಅವಳಿಗೇನೋ ಆಗಿ ಬದುಕುವುದು ಕಷ್ಟವಾಗಿಬಿಡುತ್ತೆ ಅನ್ನುವ ಹಾಗಲ್ಲ. ತನ್ನೆದುರು ಕುಳಿತಿರುವುದು ತಾನು ಪ್ರೀತಿಸಿದವನ ಹೆಂಡತಿ ಅಂತ ಗೊತ್ತಾದ ಮೇಲೂ ಅವಳು, `ಆಂಟಿ’ ಎಂದಿದ್ದಳು. ಇಂಥಾ ಪದಗಳಿಗೆ ಸಂಬಂಧದ ಹಂಗು ಇರುತ್ತೆ ಅಂತ ಅಲ್ಲ. ಅದೊಂದು ಗೌರವ ಸೂಚಕವಾ? ಅಥವಾ ನೀನು ನನಗಿಂತ ತುಂಬಾ ದೊಡ್ಡವಳು ಎಂದು ಹೇಳುವುದಾ? `ನಿಹಾರಿಕಾ ಮ್ಯಾಡಂ ಎನ್ನಬಹುದು’ ಎಂದೆ. ಅವಳಿಗೆ ಸ್ವಲ್ಪ ಗಲಿಬಿಲಿಯಾಯಿತು ಅನ್ನಿಸುತ್ತೆ ಶ್ಯಾಮುವಿನ ಕಡೆಗೆ ನೋಡಿದಳು. ಶ್ಯಾಮು ತಡೆಯುತ್ತಾ, `ಬಿಡು ತೇಜೂ ನನ್ನ ಇವಳು ಹೇಗೂ ಕರೆಯಬಹುದು. ಹನಿಗಿಂತ ಸ್ವಲ್ಪ ದೊಡ್ಡವಳು ಮಾತ್ರ’ ಎಂದಳು. ನಿಹಾರಿಕಾ ಮುಖದಲ್ಲಿ ಅವಮಾನದ ಎಳೆಗಳು ಕಂಡೂ ಕಾಣದ ಹಾಗೆ ಸುಳಿದಾಡಿತು. ಶ್ಯಾಮು ಅದನ್ನು ಗಮನಿಸಿ, ಅವಳ ಕೈಗಳನ್ನು ಹಿಡಿದಳು. ಇಬ್ಬರ ನಡುವೆ ಏನು ಸಂವಹನವಾಗುತ್ತಿದೆ ತಿಳಿಯದು ಸ್ವಲ್ಪ ಹೊತ್ತಿನ ನಂತರ ಶ್ಯಾಮು, `ಇದೆಲ್ಲಾ ನಿನಗಿಷ್ಟ ಆದರೆ ನಾನು ಮಾತಾಡೊಲ್ಲ. ಆದರೆ ಕಾನೂನಿನ ಪ್ರಕಾರ ನಾವು ಬೇರೆಯಾಗುವವರೆಗೂ ಸ್ವಲ್ಪ ತಾಳ್ಮೆ ತೆಗೆದುಕೋ. ನನ್ನ ಮಗಳಿಗೂ ನಾನು ಇದೆಲ್ಲವನ್ನೂ ತಿಳಿಹೇಳಬೇಕಲ್ಲ’ ಎಂದಳು. ಆಟವನ್ನು ಹೀಗೆ ಬಿಟ್ಟುಕೊಡುತ್ತಾರಾ? ನನ್ನ ಪ್ರಯತ್ನವೆಲ್ಲಾ ವ್ಯರ್ಥವಾದಂತೆನ್ನಿಸಿ ಕೋಪ ಬಂತು. ಅದು ಅವಳಿಗೂ ಅರಿವಾಗಿತ್ತು. ಮಾತು ಮರೆಸುವಂತೆ ನನ್ನನ್ನೂ ಸೇರಿಸಿ ಏನು ತೆಗೆದುಕೊಳ್ಳೋಣ ಎಂದಳು. ಮಧ್ಯಾಹ್ನ ಊಟದ ಹೊತ್ತು ಹತ್ತಿರ ಬಂದಿದ್ದರಿಂದ ಊಟವನ್ನೇ ಮಾಡುವ ನಿರ್ಧಾರ ಮಾಡಿದೆವು. ಅವಳ ಆಸಕ್ತಿಯ ಬಗ್ಗೆ ಶ್ಯಾಮು ಏನೇನೋ ಪ್ರಶ್ನಿಸುತ್ತಿದ್ದಳು. ಮೆಲುದನಿಯಲ್ಲೆ ಇಬ್ಬರೂ ಮಾತಾಡುತ್ತಿದ್ದರು. ನಿಹಾರಿಕಾ ಹೊರಡುವಾಗ ತನ್ನ ಕೈಚೀಲದಿಂದ ಸುರಳಿ ಸುತ್ತಿದ್ದ ಕ್ಯಾನ್ವಾಸ್ ಅನ್ನು ತೆಗೆದು ಕೊಟ್ಟಳು. ಅದನ್ನು ಬಹು ಪ್ರೀತಿಯಿಂದ ತೆಗೆದುಕೊಳ್ಳುತ್ತಾ, `ನೀನು ಮಾಡಿದ ಚಿತ್ರವಾ?’ ಎಂದಳು ಶ್ಯಾಮು. ಅವಳೂ ತಲೆ ಆಡಿಸಿದಳು. ನಾನು ಅವಳಿಗೆ `ಇದೆಲ್ಲಾ ಯಾಕೆ ನಿಹಾರಿಕಾ ಒಂದು ಸಂಬಂಧ ಎಂದರೆ ಅದು ಎಷ್ಟೋ ವರ್ಷಗಳಿಂದ ಕಟ್ಟಿಕೊಳ್ಳುತ್ತಾ ಬಂದಿರುತ್ತೇವೆ. ಹೀಗೆ ಮೂರನೆಯವರ ಪ್ರವೇಶದಿಂದ ಅದು ಒಡೆಯುವುದು ಸರಿಯಲ್ಲ. ಮತ್ತಿದು ಎಷ್ಟು ದೊಡ್ದ ಸುದ್ದಿಯಾಗುತ್ತೆ ಗೊತ್ತಾ ಸಿಕ್ಕವರೆಲ್ಲಾ ನಿನ್ನ ಸುಮ್ಮನೆ ಬಿಡಲ್ಲ ಮಾತಲ್ಲೇ ಹಂಗಿಸಿಬಿಡುತ್ತಾರೆ. ನೀನು ಬಿಟ್ಟು ಹೋಗು, ಎಲ್ಲ ಮರೆತು ಹೋಗುತ್ತೆ. ನಿನಗಾಗಿ ಬದುಕೊಂದು ಕಾಯುತ್ತಿದೆ- ಅದು ಸುಂದರ ಆಗಿರುತ್ತೆ’ ಎಂದೆ. ನಿಹಾರಿಕಾ ತಲೆ ತಗ್ಗಿಸಿದಳು. ಇನ್ನು ಸ್ವಲ್ಪ ಹೊತ್ತ್ತು ಬಿಟ್ಟರೆ ಅವಳ ಕಣ್ಣುಗಳು ತುಂಬುತ್ತಿದ್ದವಾ? ಗೊತ್ತಿಲ್ಲ.
ಶ್ಯಾಮು ಅದಕ್ಕೆ ಅವಕಾಶ ಕೊಡದ ಹಾಗೆ, `ನೀನು ಹೊರಡು ನಿಹಾರಿಕಾ, ನಿನ್ನ ಬದುಕಿನ ಹಾದಿ ಸುಗಮವಾಗಿರಲಿ’ ಎಂದಳು. ಬರುವಾಗ ಇದ್ದ ದೃಢತೆ, ವಿಶ್ವಾಸ, ಖಚಿತತೆಗಳು ಹೋಗುವಾಗ ಇರಲಿಲ್ಲ. ಸ್ವಲ್ಪ ತಟ್ಟಾಡುತ್ತಿದ್ದಳು. ಶ್ಯಾಮು ಅವಳಿಗೆ, `ನಮ್ಮ ಡ್ರೈವರ್‌ಗೆ ಹೇಳಲೇ ಮನೆಯ ತನಕ ಬಿಡಲಿಕ್ಕೆ’ ಎಂದಳು. ನಿಹಾರಿಕಾ ಬೇಡವೆಂಬಂತೆ ತಲೆ ಆಡಿಸಿದಳು. ಅವಳು ಹೊರಟ ಮೇಲೆ ನಾನು ಶ್ಯಾಮೂಗೆ ಬೈದೆ. ಅದಕ್ಕವಳು `ಆ ಹುಡುಗಿಯ ಕಣ್ಣುಗಳನ್ನು ನೋಡಿದೆಯಾ? ಹತ್ತಿದ್ದ ಹಡಗು ಬಿರುಗಾಳಿಗೆ ಸಿಲುಕಬಾರದು ಎನ್ನುವ ಪ್ರಾರ್ಥನೆ ಅದರಲ್ಲಿತ್ತು. ನಾನಲ್ಲದೆ ಅದನ್ನು ಬೇರೆ ಯಾರು ಕೇಳಿಸಿಕೊಳ್ಳುವವರು?’ ಎಂದಳು. ನಾನು ಅವಳಿಗೆ ಕೈ ಮುಗಿದೆ, `ನೀನು ದೊಡ್ಡ ಮಹಾತಾಯಿ ಇನ್ನು ಚಂದ್ರನನ್ನು ಮನಸ್ಸಿನಿಂದ ಕಿತ್ತುಹಾಕಿಬಿಡು’ ಎಂದೆ. `ನಮಗೆ ಬೇಡವೆಂದು ಸಂಬಂಧಿಸಿದ ವಸ್ತುಗಳನ್ನು ಎಸೆಯಬಹುದೇ ವಿನಃ ಮನಸ್ಸಿನಲ್ಲಿ ಜಾಗ ಮಾಡಿಕೊಂಡು ಕುಳಿತ ವ್ಯಕ್ತಿಯನ್ನಲ್ಲ. ಒಂದು ಕಾಲಕ್ಕೆ ಆನಂದವೇ ಆದ ವ್ಯಕ್ತಿ ಇವತ್ತು ಏನೂ ಅಲ್ಲ ಎಂದರೆ ಅದು ಕಾಲದ ಮಹತ್ವವೇ? ಆಳವಾದ ಅನುರಾಗ ನನ್ನೊಳಗೆ ಮೂಡಿದ ಕ್ಷಣವನ್ನು ದ್ವೇಶವಾಗಿ ಹೇಗೆ ಮಾರ್ಪಡಿಸಲೇ? ಇನ್ನೂ ಮಾಗಲಿಲ್ಲವೇ ಎಂದು ಎಂದು ಕೇಳಿದಾಗ ಜೀವನದ ಅರ್ಥವನ್ನು ಇನ್ನೂ ಕಂಡುಕೊಳ್ಳಲಿಲ್ಲವೇ ಎಂದು ಕೇಳಿದ ಹಾಗಾಗುತ್ತದೆ. ವಯಸ್ಸಾದಂತೆಲ್ಲಾ ಮುಖದ ಗೆರೆಗಳು ಸ್ಪಷ್ಟವಾಗುತ್ತಾ ಹೋಗುತ್ತದೆ ಅದಕ್ಕೆ ಯಾವ ಪ್ರಯತ್ನವನ್ನೂ ಪಡಬೇಕಾಗಿಲ್ಲ. ಮಾಗುವುದು ಎಂದರೆ ಮಹತ್ತಿನ ಮಾತು ಅಲ್ಲವೇನೇ? ಹಣ್ಣಾದೆ ಎಂದರೆ ಒಳಗೇ ಸಿಹಿಯಾದ ರಸವಾಗುವುದು ಎಂದು ತಾನೆ. ಯಾವುದಕ್ಕೆ ಶಾಶ್ವತವಾದ ಸಾಕ್ಷಿಗಳಿವೆ ಹೇಳು?’ ಯಾಕೋ ಶ್ಯಾಮು ಎಲ್ಲೋ ಗಿರಕಿ ಹೊಡೆಯುತ್ತಿದ್ದಾಳೆ ಅನ್ನಿಸಿಬಿಟ್ಟಿತ್ತು. ನಿಜ ನಾನು ಅಂದುಕೊಂಡಿದ್ದು ಸತ್ಯವೇ ಆಗಿತ್ತು ನಿಹಾರಿಕಾ ಚಂದ್ರನಿಗೆ ಮಾತ್ರವಲ್ಲ ಶ್ಯಾಮೂಗೂ ಇಷ್ಟವಾಗಿಬಿಟ್ಟಿದ್ದಳು. `ನನಗೆ ಅವಳು ಇಷ್ಟವಾದ ಮೇಲೆ ಚಂದ್ರನಿಗೆ ಆಗಿದ್ದರಲ್ಲಿ ಆಶ್ಚರ್ಯವಿಲ್ಲ. ಎಳೆಯ ಎಲೆಯ ಮೇಲಿನ ಶುಭ್ರ ಹಿಮ ಬಿಂದುವಿನ ಹಾಗಿದ್ದಳೆ’ ಎಂದುಬಿಟ್ಟಳು. ಇದೆಲ್ಲಾ ಅವಳನ್ನು ಅವಳ ಪರಿಸ್ಥಿತಿಯನ್ನು ಅವಳೇ ಸಮಾಧಾನದಿಂದ ಇಟ್ಟುಕೊಳ್ಳುವ ಪ್ರಯತ್ನವಾ? ಯಾಕೋ ಶ್ಯಾಮು ಒಗಟಾಗುತ್ತಿದ್ದಾಳೆ.
`ಅಚ್ಚರಿಯೆಂದರೆ ಇದೇ ನೋಡು ತೇಜೂ ತೆಂಗಿನ ಮರ ಗರಿ ಕಳಚಿಕೊಂಡ ಮೇಲೆ ಮತ್ತೆ ಅಲ್ಲೇ ಚಿಗುರೊಡೆಯಲ್ಲ. ಅದೇ ಬಳ್ಳಿಯನ್ನೋ, ಗಿಡಗಳನ್ನೋ ನೋಡು ಇನ್ನೇನು ಎಲೆ ಉದುರಿ ಬೋಳಾಗುತ್ತೆ ಎಂದುಕೊಳ್ಳುವಾಗಲೇ ಅಲ್ಲೇ ಉದುರಿದ ಎಲೆಯ ಪಕ್ಕದಲ್ಲೇ ಚಿಗುರು ಕಣ್ಣಾಗಿ ಗಿಡದ ಅರಳುವ ತಾಕತ್ತನ್ನು ಹೇಳುತ್ತದೆ. ನಿಹಾರಿಕಾ ನನ್ನ ಮತ್ತು ಚಂದ್ರನ ನಡುವಣ ಉದುರಿದ ಸಂಬಂಧದ ಫಲವಾಗಿ ದಕ್ಕಿಬಿಟ್ಟಳು’ ಹೀಗೆಂದ ಶ್ಯಾಮು, ನಕ್ಷತ್ರಗಳು ತೋರುವ ಬೆಳಕಲ್ಲಿ ಹೆಜ್ಜೆ ಹಾಕುತ್ತಾ ಹೊರಟವಳು ಆಕಾಶವನ್ನು ತನ್ನದನ್ನಾಗಿ ಮಾಡಿಕೊಳ್ಳಬೇಕೆಂದಿದ್ದವಳು ಎಲ್ಲವನ್ನೂ ಬಿಟ್ಟುಕೊಟ್ಟು ಏನು ಮಾಡಬೇಕೆಂದಿದ್ದಾಳೆ? ಅವಳೇ ಹೇಳಿದ ಮಾತು ಕಿವಿಯಲ್ಲಿ ಗುಂಯ್ಗುಡುತ್ತಿದೆ, `ಬೀಸಿದ ಬಲೆಯಲ್ಲಿ ಮೀನೇ ಬೀಳಬೇಕಿಲ್ಲ ಸಮುದ್ರದ ಆಳ ತಳಮಳಿಸುವಾಗ ಎದ್ದುಬರುವ ಏನೂ ಬಲೆಯನ್ನು ತುಂಬಬಹುದು’
ಈ ಅಂಕಣದ ಹಿಂದಿನ ಬರಹಗಳು:
ಜಂಗು ಹಿಡಿದ ಹಳೆಯ ಡಬ್ಬ ಗುರುತಿಲ್ಲದಂತೆ ಕರಗುವುದು
ಮಗುವ ತುಟಿಯಿಂದ ಜಾರಿದ ಜೊಲ್ಲು ಹರಳುಗಟ್ಟಿ ವಜ್ರಗಳಾಗಿದ್ದವು
ದಾರ ಕಟ್ಟಿಸಿಕೊಂಡ ಪೇಪರ್ ಹಕ್ಕಿಗಳೂ ಗಾಳಿಗೆದುರು ಹಾರುವವು.
ಮರೆವೆಯೇ ದಂಡೆಯನ್ನು ರೂಪಿಸುತ್ತಿರುತ್ತದೆ.
ಅಂಕೆ ಮೀರುವ ನೆರಳುಗಳು ಕಾಯುವುದು ಬೆಳಕಿಗಾಗೇ
ಕೊಳದ ಮೇಲೆ ಬಿದ್ದ ಬೆಳಕು ಕೊಳವನೆಂದೂ ಕಲಕದು
ತೆರೆದುಹೋದ ಅರಿಯದ ಸಮ್ಮೋಹಕ ಲೋಕ
ತತ್ತಿಯೊಡೆದ ಪುಟ್ಟ ಕೀಟದ ಕಣ್ಣಲ್ಲಿ ಫಲಿಸಿದ ಬೆಳಕು
ಪದದೂಳಿಗೆ ಮುತ್ತಿಟ್ಟವನ ಜೀವದ ಗುರುತು ಎದೆ ಮೇಲೆ
ನೆತ್ತರಲೂ ರತ್ನವಾಗುವ ಗುಣ
ಅಘಟಿತ ಘಟನೆಗಳು
ಪ್ರಪಂಚ ಒಂದು ಸುಂದರ ಕನಸು
ನಮ್ಮನ್ನು ಕಾಣಿಸಲು ನಡುಹಗಲೇ ಬೇಕಿಲ್ಲ!
''ನಿರ್ಮಲೆ’ ಕತೆಯಲ್ಲಿ ಒಂದೆಡೆ; “ಸಂಬಂಧಗಳನ್ನು ಹೇಳುವ ಎಷ್ಟೊಂದು ನಾಮಪದಗಳಿದ್ದರೂ ಪ್ರತಿಯೊಂದು...
“ಮೋಳಿಗೆಯ ಮಹಾದೇವಮ್ಮನಂತೂ ಮಹತ್ವದ ಸಾಧಕಿಯಾಗಿದ್ದಾಳೆ. ಸತಿಪತಿಗಳೊಂದಾದ ಇವರು ಆಧ್ಯಾತ್ಮ ಸಾಧನೆ ಮಾಡಿ ಕಲ್ಯಾಣ ಕ...
“ಬೇಡವೆಂದು ಬಿಡುವುದು ಆದರೆ ಮತ್ತೆ ಮತ್ತೆ ನಾವೇ ಬಂಧನಕ್ಕೆ ಸಿಕ್ಕಿಕೊಳ್ಳುವುದು ಯಾಕೋ ಗೊತ್ತಾಗುತ್ತಿಲ್ಲ. ಬರಿಯ ...
©2023 Book Brahma Private Limited.