ಕೊರೊನಾ ಕಾಲದಲ್ಲಿ ಮನೋಸ್ಥೈರ್ಯ  ಮೂಡಿಸುವ ‘ಸಂಕಟಗಳ ಮೀರೋಣ’

Date: 07-06-2021

Location: ಬೆಂಗಳೂರು


ಕೊರೊನಾದಂತಹ ದುರಿತ ಕಾಲದಲ್ಲಿ ಮನಸ್ಸು ದಿಕ್ಕು ತೋಚದೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ. ಈ ಸಂಕಟಗಳಿಂದ ಹೇಗೆ ಪಾರಾಗಬೇಕು ಎಂಬ ಗೊಂದಲಮಯ ಸನ್ನಿವೇಶದಲ್ಲಿ ಒಂದು ಆಶಾಕಿರಣವೂ ಮೂಡುತ್ತಿಲ್ಲ. ವದಂತಿಗಳು ಹರಡಿ ಮನಸ್ಸನ್ನು ಮತ್ತಷ್ಟು ಹದಗೆಡುತ್ತಿವೆ. ಲಾಕ್ ಡೌನ್ ಪರಿಣಾಮ ಮನೆಯಲ್ಲೇ ಕುಳಿತು ಕಾಲ ಕಳೆಯುವುದೂ ಹೇಗೆ? ಇನ್ನೆಷ್ಟು ದಿನ ಹೀಗೆ ಸುಮ್ಮನೆ ವೇಳೆ ಕಳೆಯಬೇಕು? ಎಂಬ ಆತಂಕ-ವೇದನೆ ಮನೆ ಮಾಡುತ್ತಿದೆ. ಇದರಿಂದ, ಮನೋ-ದೈಹಿಕ ಅನಾರೋಗ್ಯ ಹೆಚ್ಚುತ್ತಿದೆ. ಇಂತಹ ಸನ್ನಿವೇಶಗಳಿಗೆ ಮುಖಾಮುಖಿಯಾಗುತ್ತಲೇ ಮನೋದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ‘ಸಂಕಟಗಳ ಮೀರೋಣ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ತನ್ನ ಸಾರ್ವಜನಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿತು.

ಜೂನ್ 7 ರಿಂದ 16ರವರೆಗೆ ಒಂದು ವಾರ ಕಾಲ ಪ್ರತಿ ದಿನ ಸಂಜೆ 4:30ಕ್ಕೆ ಅಕಾಡೆಮಿಯ ‘ಚಾಮರಸ ಕವಿಯ ಪ್ರಭುಲಿಂಗ ಲೀಲೆ’ ಪ್ರಮುಖ ವಿಷಯವಾಗಿ ಕಾವ್ಯ ಗಮಕ ವ್ಯಾಖ್ಯಾನವನ್ನು ಫೇಸ್ ಬುಕ್ ಹಾಗೂ ಯು ಟ್ಯೂಬ್ ಚಾನೆಲ್ ದಂತಹ ಸಾಮಾಜಿಕ ಅಂತರ್ಜಾಲದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಿದೆ.

ಅದರಂಗವಾಗಿ, (ಜೂ.7) ಸೋಮವಾರ ಸಂಜೆ 4: 30ಕ್ಕೆ , ‘ಪಾರ್ವತಿಯ ಪ್ರತಿಜ್ಞೆ ಮಾಯಾದೇವಿಯ ಬಾಲ್ಯ’ ವಿಷಯವಾಗಿ ನಡೆದ ಕಾವ್ಯದ ಗಮಕ ವ್ಯಾಖ್ಯಾನವು ಆಸಕ್ತರ ಗಮನ ಸೆಳೆಯಿತು. ಖ್ಯಾತ ಗಮಕಿ ನಿರ್ಮಲಾ ಪ್ರಸನ್ನ ಹಾಗೂ ಎ.ವಿ. ಪ್ರಸನ್ನ ಅವರು ಸಂಯುಕ್ತವಾಗಿ ‘ಚಾಮರಸ ಕವಿಯ ಪ್ರಭುಲಿಂಗ ಲೀಲೆ’ ಕಾವ್ಯವನ್ನು ವ್ಯಾಖ್ಯಾನಿಸಿದರು.

ಸತ್ಯವರ ಕಥೆಯಲ್ಲ….!

ಚಾಮರಸ ಪ್ರಭುಲಿಂಗ ಲೀಲೆಯು ಸತ್ತವರ ಕಥೆಯಲ್ಲ ಅಥವಾ ಕಾವ್ಯವಲ್ಲ. ಅದು ಎಂದಿಗೂ ಸಾಯದವರ ಅಮರತ್ವ ಎಂಬ ಸಂದೇಶ ಸಾರಿದ ಅಮರ ಸಾಹಿತ್ಯವಿದು. ಜೀವನದ ನೈಜ-ಶಾಶ್ವತ ಸುಖ-ನೆಮ್ಮದಿಯ ಮೂಲವನ್ನು ಗುರುತಿಸಿದ್ದು, ಅದರಂತೆ ಪಾಲಿಸುವುದೇ ಜೀವನದ ಯಶಸ್ಸು ಎಂಬ ಅರ್ಥದಲ್ಲಿ ಕಾವ್ಯವು ಮೌಲ್ಯಗಳನ್ನು ತನ್ನೊಳಗಡೆ ಇಟ್ಟುಕೊಂಡಿದೆ. ಇದೇ ಕಾವ್ಯ ಸಂಪತ್ತೂ ಆಗಿದೆ ಎಂದು ವ್ಯಾಖ್ಯಾನಕಾರ ಎ.ವಿ. ಪ್ರಸನ್ನ ಅವರು ಕೇಳುಗರ ಗಮನ ಸೆಳೆದರು.

ತಾಪತ್ರಗಳಲ್ಲಿ ಆದಿ ದೈವಿಕ, ಆದಿ ಭೌತಿಕ ಹಾಗೂ ಆಧ್ಯಾತ್ಮಿಕತೆ ಎಂದು ಮೂರು ಭಾಗದಲ್ಲಿ ವಿಭಾಗಿಸಲಾಗಿದೆ. ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳಿಂದಲೂ ಸಂಕಷ್ಟಗಳು ಬರುತ್ತವೆ ಎಂಬುದಕ್ಕೆ ಇಂದಿನ ಕೊರೊನಾ ಸಾಕ್ಷಿಯಾಗಿದೆ. ಇಂತಹ ಸಂಕಷ್ಟಗಳನ್ನು ಹೇಗೆ ಮೀರಬೇಕು ಎಂಬುದನ್ನು ‘ಚಾಮರಸನ ಪ್ರಭುಲಿಂಗ ಲೀಲೆಯ ಆಶಯವೂ ಆಗಿದೆ ಎಂದು ಹೇಳಿದರು.

ಸುಶ್ರಾವ್ಯವಾಗಿ ಹಾಡಿದ ಗಮಕಿ ನಿರ್ಮಲಾ ಪ್ರಸನ್ನು ಅವರ ಗಾಯನ, ಎ.ವಿ. ಪ್ರಸನ್ನ ಅವರ ವ್ಯಾಖ್ಯಾನವು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದು, ಚಾಮರಸನ ಪ್ರಭುಲಿಂಗ ಲೀಲೆಯ ಓದಿನ ಅಗತ್ಯವನ್ನು ಆಸಕ್ತರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಲ್ಲಮನ ಅನುಭಾವ, ಭಕ್ತಿಯ, ಜ್ಞಾನದ ಮಾರ್ಗ ತೋರಿದ ಪ್ರಭುಲಿಂಗ ಲೀಲೆಯ ಮಹತ್ವವನ್ನು ವಿವರಿಸಿದರು.

ಅಕಾಡೆಮಿ ರಿಜಿಸ್ಟ್ರಾರ್ ಎನ್. ಕರಿಯಪ್ಪ:ಅವರು ಸ್ವಾಗತಿಸಿದರು. ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಎಚ್. ಚೆನ್ನಪ್ಪ ಈ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು.

 

MORE NEWS

ಸಾಹಿತಿ ಪ್ರೊ. ಎಚ್.ಎಂ. ಮಹೇಶ್ವರಯ್...

13-06-2021 ಬೆಂಗಳೂರು

ಭಾಷಾ ಶಾಸ್ತ್ರ ವಿದ್ವಾಂಸ, ಅಂತಾರಾಷ್ಟ್ರೀಯ ದ್ರಾವಿಡ ಭಾಷಾಶಾಸ್ತ್ರ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಹಿತಿ ಪ್ರೊ. ಎಚ್.ಎಂ. ಮ...

‘ಶೇಕ್ಸ್ ಪಿಯರ್ ಸಾಹಿತ್ಯ’ ಬೋಧಕರ ಬ...

12-06-2021 ಅಂತರ್ಜಾಲ

‘ಶೇಕ್ಸ್ ಪಿಯರ್ ಸಾಹಿತ್ಯ ಕುರಿತು ಮಾತನಾಡಬಲ್ಲೆ. ಆದರೆ, ಶೇಕ್ಸ್ ಪಿಯರ್ ಸಾಹಿತ್ಯ ಕುರಿತು ಇಂದಿನ ಬೋಧಕರ ಬಗ್ಗೆ ...

ಕಲಾಗ್ರಾಮದಲ್ಲಿ ಹಿರಿಯ ಕವಿ ಸಿದ್ಧಲ...

12-06-2021 ಬೆಂಗಳೂರು

ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾಲಯ ವ್ಯಾಪ್ತಿಯ ಕಲಾಗ್ರಾಮದಲ್ಲಿ ಶನಿವಾರ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರ ಅ...