ಕೊರೋನದ ಕರಿಡಬ್ಬಿ


ವಿಮಾನ ಅಪಘಾತವಾದಾಗ ಅದರ ಕಾರಣ ತಿಳಿಯಲು 'ಬ್ಲ್ಯಾಕ್ ಬಾಕ್ಸ್' ಎನ್ನುವ ಉಪಕರಣವನ್ನು ಪರಿಶೀಲಿಸುವ ಹಾಗೆ ಕೊರೋನಾಘಾತದ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸಲು ನೆರವಾಗುವಂತೆ ಈ 'ಕರಿಡಬ್ಬಿ' ಇದೆ. ಇದರ ಮುದ್ರಣ ವಿನ್ಯಾಸವೂ ಕರಿಡಬ್ಬಿಯಂತೆ ವಿಶಿಷ್ಟವಾಗಿದೆ ಎನ್ನುತ್ತಾರೆ ಲೇಖಕ ಜನಾರ್ದನ ಭಟ್. ಹಿರಿಯ ಪತ್ರಕರ್ತ, ಲೇಖಕ ರಾಜಾರಾಂ ತಲ್ಲೂರು ಅವರ ಕರಿಡಬ್ಬಿ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಕೃತಿ: ಕರಿಡಬ್ಬಿ
ಲೇ.: ರಾಜಾರಾಂ ತಲ್ಲೂರು
ಪ್ರಕಾಶಕರು: ಸಂಕಥನ, ಮಂಡ್ಯ.
ಮೊದಲನೆಯ ಮುದ್ರಣ: 2022
ಬೆಲೆ: ರೂ. 600

ಖ್ಯಾತ ಪತ್ರಕರ್ತ ಮತ್ತು ಸಾಮಾಜಿಕ ಚಿಂತಕ ರಾಜಾರಾಂ ತಲ್ಲೂರು ಅವರು ಪತ್ರಕರ್ತರಾಗಿ ಮತ್ತು ಮಾಹಿತಿ ತಂತ್ರಜ್ಞಾನ, ಔಷಧಿ ಸಂಸ್ಥೆಗಳಿಗೆ ಸಹಿತ ಗ್ಲೋಬಲ್ ಮಟ್ಟದ ಚಟುವಟಿಕೆ ನಡೆಸುವ ಸಂಸ್ಥೆಗಳಿಗೆ ಭಾಷಾ ಸೇವೆ ಒದಗಿಸುವ ಸಂಸ್ಥೆಯ (ತಲ್ಲೂರ್ಸ್ ಇನ್ಫೋವ್ಯಾಲಿಡೇಷನ್ಸ್ ಪ್ರೈ.ಲಿ.) ಮುಖ್ಯಸ್ಥರಾಗಿ ಕೆಲಸ ಮಾಡಿರುವ ಅನುಭವದಿಂದಾಗಿ ಜಾಗತಿಕ ವಿದ್ಯಮಾನಗಳ ಬಗ್ಗೆ ಒಂದು ಮಾಹಿತಿ ಕೋಶವಾಗಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಅವರು ಸಾಮಾಜಿಕ ವಿದ್ಯಮಾನಗಳ ಬಗ್ಗೆ ಮತ್ತು ಮಾಧ್ಯಮಗಳ ಜವಾಬ್ದಾರಿಯ ಬಗ್ಗೆ ಸ್ವತಃ ಬಹಳ ಜವಾಬ್ದಾರಿಯಿಂದ ಮತ್ತು ಕಳಕಳಿಯಿಂದ ಪ್ರತಿಕ್ರಿಯಿಸುತ್ತಾರೆ. ಅಂಕಿ ಅಂಶಗಳ ಗಟ್ಟಿ ಹಿನ್ನೆಲೆ (ಈ ಅಂಕಿ ಅಂಶಗಳ ಮೂಲವನ್ನೂ ಅವರು ಸೂಚಿಸುವುದರಿಂದ ಅವುಗಳ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿಕೊಳ್ಳುವ ಅವಕಾಶ ಓದುಗರಿಗೆ ಇದ್ದೇ ಇರುತ್ತದೆ) ಇಟ್ಟುಕೊಂಡು ಅವರು ಓದುಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಾರೆ ಮತ್ತು ಪ್ರತಿಕ್ರಿಯೆಗಳನ್ನು ನೀಡುತ್ತಾರೆ. 

ರಾಜಾರಾಂ ತಲ್ಲೂರು ಅವರು ಕನ್ನಡದಲ್ಲಿ ಬರೆದಿರುವ ಲೇಖನಗಳು ಮತ್ತು ಪ್ರಕಟಿಸಿರುವ ಕೃತಿಗಳು ಎಲ್ಲವೂ ವಿಶಿಷ್ಟವಾದವುಗಳು. ಹೆಚ್ಚಿನವರು ತಾವೇ ಆಧಾರವಿಲ್ಲದ ಅಭಿಪ್ರಾಯಗಳನ್ನು ರೂಪಿಸಿಕೊಂಡು, ಪರ ಅಥವಾ ವಿರೋಧ ಟೀಕೆಗಳನ್ನು ಸುರಿಸುತ್ತಾ ಆರೋಗ್ಯಕರ ಸಾಮಾಜಿಕ ಚಿಂತನೆ ಮೂಡದಂತೆ ಮಾಡುವ ಈ ಕಾಲಘಟ್ಟದಲ್ಲಿ, ತಲ್ಲೂರು ಅವರಂತಹ ನಿಜವಾದ ಚಿಂತಕರು ಮತ್ತು ಅಧ್ಯಯನಶೀಲರು ತಮ್ಮ ವಿಚಾರಗಳನ್ನು ಮಂಡಿಸುವುದರಿಂದ ಸಮಾಜಕ್ಕೆ ಪ್ರಯೋಜನವಿದೆ. ತಲ್ಲೂರು ಅವರು ಈ 'ಕರಿಡಬ್ಬಿ' ಕೃತಿಯಲ್ಲಿ ಒಂದು ಕಡೆ, 'ಕೊರೋನಾದಲ್ಲಿ ಬರುವಂತಹ ವಾಸನೆ ತಿಳಿಯದ ಸ್ಥಿತಿ ಸಮಾಜಕ್ಕೆ ಬಂದಿದೆ' ಎನ್ನುವುದು ಇದನ್ನೆ!

'ಕರಿ ಡಬ್ಬಿ' ಕೊರೋನಾ ವಿದ್ಯಮಾನವನ್ನು ಸಮಗ್ರವಾಗಿ ದಾಖಲಿಸಲು ಮತ್ತು ವಿಶ್ಲೇಷಿಸಲು ನೆರವಾಗುವಂತಹ ೭೫ ಬರಹಗಳ ಕೃತಿ. ಎಲ್ಲ ಬರಹಗಳಲ್ಲಿ ಕೊಟ್ಟಿರುವ ವಿವರಗಳಿಗೆ ಮೂಲವನ್ನು ಬರಹಗಳ ಕೊನೆಯಲ್ಲಿ ಕೊಡಲಾಗಿದೆ. ಇದರಲ್ಲಿ ದಾಖಲಾಗಿರುವ ಮಾಹಿತಿ, ಅಂಕಿ ಅಂಶಗಳ ಸಂಗ್ರಹ ಬೆರಗು ಹುಟ್ಟಿಸುತ್ತದೆ. ಒಂದು ಶತಮಾನ ಕಳೆದರೂ ಈ ಪುಸ್ತಕದ ಮಹತ್ವ ಕಡಿಮೆಯಾಗುವುದಿಲ್ಲ.

ವಿದ್ಯಮಾನಗಳನ್ನು ಮತ್ತು ಘಟನೆಗಳ ಸಮಗ್ರ ಚರಿತ್ರೆಯನ್ನು ದಾಖಲಿಸಿ ಇಟ್ಟವರಿಗೆ ಕ್ರಾನಿಕ್ಲರ್ (Chronicler) ಎನ್ನುತ್ತಾರೆ. ಪ್ರಪಂಚದ ಚರಿತ್ರೆಯನ್ನು ಅರಿಯುವುದರಲ್ಲಿ ಅವರ ಕೊಡುಗೆ ಬಹಳ ಮಹತ್ವದ್ದು. ಅದೇ ರೀತಿ ಕೊರೋನಾ ವಿದ್ಯಮಾನ ಮನುಕುಲದಲ್ಲಿ ಶಾಶ್ವತವಾಗಿ ದಾಖಲಾಗುವ ಒಂದು ಚಾರಿತ್ರಿಕ ಘಟನೆ. ಇದನ್ನು ಸರಳವಾಗಿ 'ಇಲ್ಲಿಂದ ಇಲ್ಲಿಯವರೆಗೆ ಸಂಭವಿಸಿದ ಕೊರೋನಾ ಮಹಾಮಾರಿಯಿಂದಾಗಿ ಇಷ್ಟು ಜನ ಪ್ರಾಣ ಕಳೆದುಕೊಂಡರು' ಎಂಬ ಒಂದು ವಾಕ್ಯದ ಷರಾ ಬರೆದು ಮುಗಿಸಲಾಗುವುದಿಲ್ಲ. ಅದರ ಹಿನ್ನೆಲೆಯಲ್ಲಿ ಎಂತಹ ಧೂರ್ತತನಗಳು, ನೀಚತನಗಳು, ಸಂಕಟಗಳು, ಕಷ್ಟಗಳನ್ನು ನಿರ್ದಿಷ್ಟವಾಗಿ ನಮ್ಮ ದೇಶ, ನಮ್ಮ ರಾಜ್ಯ ಕಂಡಿತು ಎನ್ನುವುದನ್ನು ಕ್ರಾನಿಕ್ಲರ್ ರೀತಿಯಲ್ಲಿ ರಾಜಾರಾಂ ತಲ್ಲೂರು ಅವರು ದಾಖಲಿಸಿದ್ದಾರೆ. ಇಲ್ಲಿ ಯಾವುದೇ ಉದಾಹರಣೆ ನೀಡದೆ, ಇದು ಬಹಳ ದೊಡ್ಡ ಕೆಲಸ, ತುಂಬಾ ಶ್ರಮವಹಿಸಿ ಮಾಡಿರುವಂಥದ್ದು ಎಂದು ಸೂಚಿಸಿದರೆ ಸಾಕು ಅನಿಸುತ್ತದೆ.

ವಿಮಾನ ಅಪಘಾತವಾದಾಗ ಅದರ ಕಾರಣ ತಿಳಿಯಲು 'ಬ್ಲ್ಯಾಕ್ ಬಾಕ್ಸ್' ಎನ್ನುವ ಉಪಕರಣವನ್ನು ಪರಿಶೀಲಿಸುವ ಹಾಗೆ ಕೊರೋನಾಘಾತದ ಕಾರಣ ಮತ್ತು ಪರಿಣಾಮಗಳನ್ನು ವಿಶ್ಲೇಷಿಸಲು ನೆರವಾಗುವಂತೆ ಈ 'ಕರಿಡಬ್ಬಿ' ಇದೆ. ಇದರ ಮುದ್ರಣ ವಿನ್ಯಾಸವೂ ಕರಿಡಬ್ಬಿಯಂತೆ ವಿಶಿಷ್ಟವಾಗಿದೆ.

ಬಿ. ಜನಾರ್ದನ ಭಟ್ ಅವರ ಲೇಖಕ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ..

 

MORE FEATURES

ಪೂರ್ಣಿಮಾ ಮಾಳಗಿಮನಿ ಕಂಡ `ಗಿಣಿಬಾಗಿಲು' 

28-03-2024 ಬೆಂಗಳೂರು

"ಸಪ್ನ ಬುಕ್ಸ್ ಪ್ರಕಟಿಸಿದ ಹರೀಶ್ ಕೇರ ಅವರ ವಿಶಿಷ್ಟವಾದ ಶೀರ್ಷಿಕೆ ಇರುವ ಈ ಕೃತಿಯಲ್ಲಿನ ಒಂದೊಂದು ಅಧ್ಯಾಯವೂ ಒಂದ...

ಹೋರಾಡಲು ಹಂಬಲಿಸುವವರಿಗೆ ಈ ಕೃತಿ ಮುಖ್ಯವಾಗಬಲ್ಲದು

27-03-2024 ಬೆಂಗಳೂರು

'ಸಮಾನತೆಯನ್ನಾಧರಿಸಿದ ಸಮಾಜ, ಜನಪರ ರಾಜಕೀಯದ ಜನತಂತ್ರ ಹಾಗೂ ಭಾವೈಕ್ಯ, ಬಹುಮುಖಿ ಸಂಸ್ಕೃತಿಯ ಉಳಿವಿಗಾಗಿ ಹೋರಾಡುತ್...

ಆರ್ಟ್ ಸಿನಿಮಾವನ್ನು ಅರ್ಥಮಾಡಿಕೊಳ್ಳುವುದೂ ಒಂದು ಆರ್ಟ್

27-03-2024 ಬೆಂಗಳೂರು

'ಸಿನಿಮಾವೊಂದು ಕಲೆ, ಪ್ರಭಾವಿ ಮಾಧ್ಯಮ ಎಂದುಕೊಂಡವರಿಗೆ ಕಲಾತ್ಮಕ ಸಿನಿಮಾಗಳು ಹಬ್ಬದೂಟದಂತೆ' ಎನ್ನುತ್ತಾರೆ ವೀ...