ದಾರುಣ ಅಂತ್ಯ ಹೇಳುವ 'ನಗ್ನಸತ್ಯ'

Date: 16-12-2021

Location: ಬೆಂಗಳೂರು


‘ಒಬ್ಬ ಅಧಿಕಾರಿ ವ್ಯವಸ್ಥೆಯನ್ನು ಮೀರಿ ಬೆಳೆದು ದೈವತ್ವಕ್ಕೇರುವುದನ್ನು ಸಿನೆಮಾ ಪರದೆಯಲ್ಲಷ್ಟೇ ಕಾಣಬಹುದು. ವಾಸ್ತವದಲ್ಲಿ ಅಂತಹದ್ದೊಂದು ಸಾಧ್ಯತೆಯು ಕ್ಷೀಣವಾದುದು. ಆ ತೆರನಾದ ಗೀಳು, ಮನಸ್ಸಿನ ಸ್ವಾಸ್ತ್ಯವನ್ನು ಕೆಡಿಸಿ ಭ್ರಾಮಕಲೋಕಕ್ಕೆ ಒಯ್ಯುತ್ತದೆ’ ಎನ್ನುತ್ತಾರೆ ಲೇಖಕ ಸಂತೋಷ್ ಅನಂತಪುರ. ಅವರು ತಮ್ಮ ‘ಅನಂತಯಾನ’ ಅಂಕಣದಲ್ಲಿ ‘ಡಿ.ಕೆ. ರವಿ ದುರಂತ ಕಥೆ ನಗ್ನಸತ್ಯ’ ಕೃತಿಯ ಕುರಿತು ಚರ್ಚಿಸಿದ್ದಾರೆ.

ಭಾರತೀಯ ಆಡಳಿತ ಸೇವೆ (ಐಎಎಸ್)ಯನ್ನು ಸರ್ಕಾರಿ ಯಂತ್ರದ 'ಉಕ್ಕಿನ ಚೌಕಟ್ಟು' ಎಂದು ಕರೆದವರು ದೇಶದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರು. ಸ್ವರಾಜ್ಯದಿಂದ ಸುರಾಜ್ಯಕ್ಕೆ ತೆರಳುವ ಅಗತ್ಯಗಳಲ್ಲಿ ಅಧಿಕಾರಿಗಳ ಪಾತ್ರ ಮಹತ್ತಾದದ್ದೆಂದು ವಿವರಿಸಿ, ಹೇಳಿ ತೋರಿದ್ದರು. ದೇಶ ಸ್ವಾತಂತ್ರ್ಯಗಳಿಸಿ ಎಪ್ಪತ್ತೈದು ಸಂವತ್ಸರಗಳನ್ನು ಪೂರೈಸಿದರೂ, ರಾಷ್ಟ್ರದಲ್ಲಿ ನಾಗರಿಕ ಅಧಿಕಾರಿಶಾಹಿಯ ಮೂಲಕ ತರಬೇಕೆಂದು ಬಯಸಿದ್ದ ಪಟೇಲರ ಸುರಾಜ್ಯದ ಆಶಯವು ಈವರೆಗೂ ಕನಸಾಗಿಯೇ ಉಳಿದಿರುವುದು- ಕಾಲ ತಂದೊಡ್ಡಿದ ಬಹುದೊಡ್ಡ ವಿಪರ್ಯಾಸ.

ಪ್ರಜಾಪ್ರಭುತ್ವದ ಸೊಗಸು ಅಡಗಿರುವುದೇ ಅದು ಹರಿಸುವ ಅಚಾನಕ್ ಬದಲಾವಣೆಗಳಲ್ಲಿ. ಬದುಕಿನಂತೆ ಪ್ರಜಾಪ್ರಭುತ್ವವೂ ಚಲನಶೀಲತೆಯಿಂದ ಕೂಡಿದೆ. ನಿಂತ ನೀರಾಗದೆ ಹರಿಯುತ್ತಿರುವುದೇ ಬದುಕಿನ ಹಾಗೂ ಪ್ರಜಾಪ್ರಭುತ್ವದ ಮೂಲಗುಣ. ರಾಜ್ಯ, ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಯುವ ರಾಜಕೀಯ ಪಕ್ಷಗಳ ಅಧಿಕಾರವು ಪಲ್ಲಟಗೊಳ್ಳುತ್ತಲೇ ಇರುತ್ತದೆ. ಯಾವುದೇ ಪಕ್ಷವು ಅಧಿಕಾರಕ್ಕೆ ಬಂದರೂ, ಆಡಳಿತದ ಮೂಲ ಮಂತ್ರದಂಡ ಇರುವುದು ಅಧಿಕಾರಿಗಳ ಕೈಯಲ್ಲಿ. ಅಂತಹ ಕೈಗಳು ನಿಸ್ಪೃಹತೆಯಿಂದ ಕೂಡಿದ್ದಾದರೆ, ಸಮಾಜದಲ್ಲಿ ಸ್ವಾಸ್ಥ್ಯವು ತಾನಾಗಿಯೇ ಸೃಷ್ಟಿಯಾಗುತ್ತದೆ. ಕುಚೋದ್ಯವೆಂದರೆ ಅಧಿಕಾರವಿದ್ದರೂ ಚಲಾಯಿಸಲಾಗದಂತಹ ಪರಿಸ್ಥಿತಿ. ಇನ್ನೊಂದೆಡೆ ನಿಷ್ಕ್ರಿಯ ಮನಸ್ಥಿತಿಯ ಸ್ವಾರ್ಥ ಚಿಂತನೆ. ಇವೆರಡೂ ದೂರದೃಷ್ಟಿಯನ್ನು ಕಸಿದು, ಸಮಾಜದ ಬೆಳವಣಿಗೆಗೆ ಮಾರಕವೆನಿಸಿ ಬಿಡುತ್ತವೆ. ಈ ನಿಟ್ಟಿನಲ್ಲಿ ಲೇಖಕರು ತಮ್ಮ ಕೃತಿಯನ್ನು ದೂರದೃಷ್ಟಿ ಹೊಂದಿದ್ದ ಕರ್ನಾಟಕದ ಅತ್ಯುತ್ತಮ ‘ಐಎಎಸ್’ ಅಧಿಕಾರಿಗಳಾದ ‘ಶ್ರೀ.ಎನ್.ಲಕ್ಷಣ್ ರಾವ್ ಮತ್ತು ಜೆ.ಸಿ.ಲಿನ್’ಅವರಿಗೆ ಅರ್ಪಿಸಿರುವುದು ಸ್ತುತ್ಯಾರ್ಹ.

ಸುಮಾರು ನಾಲ್ಕು ದಶಕಗಳಿಂದ ಅಧಿಕಾರಿ ವರ್ಗದ ಕಾರ್ಯಕ್ಷಮತೆಯನ್ನು ಬಲು ಸಮೀಪದಿಂದ ನೋಡಿದವರು ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಶ್ರೀ.ರಾಮಕೃಷ್ಣ ಉಪಾಧ್ಯ. ಹತ್ತಾರು ರಾಜಕೀಯ ಏಳುಬೀಳುಗಳನ್ನು ಕಂಡವರು, ಅಧಿಕಾರ ಪಲ್ಲಟಕ್ಕೆ ಸಾಕ್ಷಿಯಾದವರು, ರಾಜಕೀಯ ನಾಯಕರ ತವಕ ತಲ್ಲಣಗಳನ್ನು ಹತ್ತಿರದಿಂದ ನೋಡಿ ಬಲ್ಲವರು. ವಿವಿಧ ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ ಇವರು, ವ್ಯವಸ್ಥೆಯೊಂದಿಗೆ ಎಂದೂ ರಾಜಿ ಮಾಡಿಕೊಳ್ಳದವರು. ಹಾಗಾಗಿಯೇ ಪತ್ರಿಕೋದ್ಯಮದಲ್ಲಿ ಉಪಾಧ್ಯರಿಗೆ ತಮ್ಮದೇ ಆದ ಛಾಪನ್ನು ಮೂಡಿಸಲು ಸಾಧ್ಯವಾದದ್ದು. ಅವರೊಬ್ಬ ವೆಲ್ ಕಂಪೋಸ್ಡ್ ಜರ್ನಲಿಸ್ಟ್. ಭಾವಾತಿರೇಖದ ಪತ್ರಕರ್ತರಲ್ಲ. ಸಮಚಿತ್ತ, ಸಮಯೋಚಿತ ಮನೋಭಾವ ಹೊಂದಿರುವ ಶಾಂತ ಸ್ವಭಾವದ ವ್ಯಕ್ತಿ. ಇಂತಹ ಗುಣವಿಶೇಷಣಗಳನ್ನು ಹೊಂದಿರುವುದರಿಂದಲೇ ಅವರಿಗೆ ಪೂರ್ವಾಗ್ರಹವಿಲ್ಲದೆ ನಿಖರವಾಗಿ ರಾಜಕೀಯ ವಿಶ್ಲೇಷಣೆಗಳನ್ನು ಮಾಡಿ, ಸತ್ಯಾಸತ್ಯತೆಯನ್ನು ಅರಿಯಲು ಸಾಧ್ಯವಾದದ್ದು. ಹಾಗಿರುವುದರಿಂದಲೇ ಇಂದಿಗೂ ತಮ್ಮನ್ನು ಅದೇ ಚೌಕಟ್ಟಿನಲ್ಲಿ ಬಂಧಿಸಿ ಸಕ್ರಿಯರಾಗಿರಲು ಅವರಿಗೆ ಸಾಧ್ಯವಾಗಿರುವುದು.ಡಿ.ಕೆ ರವಿಯವರ ಕುರಿತು ಇಂಗ್ಲಿಷಿನಲ್ಲಿ ಉಪಾಧ್ಯರು ಬರೆದ ಪುಸ್ತಕವನ್ನು ಕನ್ನಡಕ್ಕೆ ‘ಅ.ನಾ.ಪ್ರಹ್ಲಾದರಾವ್’ಅವರು 'ಡಿ.ಕೆ.ರವಿ ದುರಂತ ಕಥೆ-ನಗ್ನಸತ್ಯ' ಶೀರ್ಷಿಕೆಯಡಿಯಲ್ಲಿ, ಮೂಲ ಆಶಯಕ್ಕೆ ಎಲ್ಲೂ ಧಕ್ಕೆ ಬಾರದ ರೀತಿಯಲ್ಲಿ ಅನುವಾದಿಸಿದ್ದಾರೆ. ಹೆಸರಿಗೆ ತಕ್ಕಂತೆ ಪುಸ್ತಕ ತುಂಬಾ 'ನಗ್ನಸತ್ಯ'ಗಳೇ ಅಚ್ಚಾಗಿ ಕುಳಿತಿವೆ. ಜೀರ್ಣಿಸಿಕೊಳ್ಳುವುದು, ಬಿಡುವುದು ಆಯಾ ಜಠರದ ಪಚನಶಕ್ತಿಗೆ ಬಿಟ್ಟ ವಿಚಾರ.

'ಮೃತ ದೇಹವು ಯಾವಾಗಲೂ ಸತ್ಯವನ್ನೇ ಹೇಳುತ್ತದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ‘ಶ್ರೀ.ಉಮೇಶ್ ಎಸ್.ಕೆ’ಹೇಳಿರುವ ಮಾತು, ಅವರ ಅನುಭವದ ಮೂಸೆಯಿಂದ ಬಂದಂತಹದ್ದು. ಅಂತಹ ಅನುಭವ ಇರುವುದರಿಂದಲೇ ಮಾರ್ಮಿಕ ಮಾತೊಂದು ಅವರಿಂದ ಹೊಮ್ಮಲು ಸಾಧ್ಯವಾದದ್ದು. ಅವರ ಮಾತು ಸತ್ಯಕ್ಕೆ ಆಪ್ತವೂ ಹೌದು. ಆದರೆ ಸತ್ಯ ಯಾರಿಗೆ ಬೇಕಿದೆ? ಟಿ.ವಿ ಚಾನೆಲಿನ ಪ್ಯಾನೆಲ್ ಡಿಸ್ಕಶನಿನಲ್ಲಿ ಕುಳಿತು, ತಮ್ಮದೇ ಶ್ರೇಷ್ಠವೆಂದು ಅರುಚುವ ಹಲವಾರು ಧ್ವನಿಗಳ ಮಧ್ಯೆ, ಬಹುತೇಕ ಸತ್ಯಗಳು ಕಳೆದೇ ಹೋಗಿ ಬಿಡುತ್ತವೆ. ಅದಕ್ಕೆ ಡಿ.ಕೆ.ರವಿಯವರ ದುರಂತವೂ ಹೊರತಲ್ಲ. ಆ ಸಾಲಿನಲ್ಲಿ ಸಾವೂ ಕೂಡಾ ರಾಜಕೀಯ ದಾಳವಾಗುವುದನ್ನು ನೋಡುತ್ತೇವೆ. ಭಿನ್ನ ಚಹರೆಗಳ ರಾಜಕೀಯ ರುಚಿ, ನೋಟಗಳನ್ನು ಹೇಳುವಾಗಲೂ ಉಪಾಧ್ಯರು ಯಾವುದರತ್ತಲೂ ವಾಲುವುದಿಲ್ಲ. ಆಯಾ ಕಾಲದ ರಾಜಕೀಯ ಪ್ರಜ್ಞೆಯು-ವಿಷಯಗಳನ್ನು ಹೇಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ ಮತ್ತು ಯಾವರೀತಿ ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡು ನೈತಿಕ ಅಧ:ಪತನವನ್ನು ಕಾಣುತ್ತವೆ ಎನ್ನುವುದನ್ನೂ ಅವರು ಕೃತಿಯಲ್ಲಿ ನಿರೂಪಿಸಿದ್ದಾರೆ.

ಮಾಧ್ಯಮ ರಂಗದ ಕ್ಷಿಪ್ರ ಪ್ರಗತಿಯ ಬೆಳವಣಿಗೆ ಮತ್ತು ತಾಂತ್ರಿಕ ಕ್ಷಮತೆಯು ಪತ್ರಿಕೆ-ಚಾನೆಲ್ಲುಗಳನ್ನು ರೆಕ್ಕೆಬಿಚ್ಚಿ ಹಾರಲು ಪ್ರೇರೇಪಿಸಿತು. ಅಂದಿನಿಂದ ವ್ಯಕ್ತಿಗೆ ಖಾಸಗಿತನ ಎನ್ನುವುದೇ ಇಲ್ಲದಂತಾಯಿತು. ಕುಂತರೂ..ನಿಂತರೂ..ಉಂಡರೂ..ತೇಗಿದರೂ..ಬಿದ್ದರೂ..ಎದ್ದರೂ..ಮಲಗಿದರೂ..ಮಲಗಿದಲ್ಲಿಂದಲೇ ಮಗ್ಗುಲು ಬದಲಾಯಿಸಿದರೂ..ಅದೆಲ್ಲವೂ ಸುದ್ದಿಯೇ…ಮಾಧ್ಯಮಕ್ಕದು ಬರೀ ಟಿ.ಆರ್.ಪಿಯನ್ನು ಹೆಚ್ಚಿಸಲಿಕ್ಕಿರುವ ಸುದ್ಧಿಯಷ್ಟೇ.ಎಲ್ಲಿಯವರೆಗೆಂದರೆ ದಾಂಪತ್ಯ ಕಲಹವು ಕೂಡಾ ಮಾಧ್ಯಮಕ್ಕೆ ಟಿ.ಆರ್.ಪಿಯ ಸರಕಾಗುತ್ತದೆ! ಹೀಗಿರಲು ಸುದ್ಧಿಯನ್ನು ಪಡೆಯುವ ಧಾವಂತದಲ್ಲಿ ತೋರುವ ಸ್ವೇಚ್ಛೆಯು ಅದೆಷ್ಟೋ ಬಂಧಗಳನ್ನು ಕಮರಿಸಿ, ಬಾಂಧವ್ಯವನ್ನು ಮುರುಟಿಸಿ, ಯಾವ ರೀತಿ ಕ್ಲೇಶವನ್ನು ಸೃಷ್ಟಿಸಿದೆ. ಪೂರ್ಣರೂಪದಲ್ಲಿ ಹೇಳಿಕೆಗಳು ಪ್ರಕಟವಾದದ್ದೇ ಇಲ್ಲ. ತಮ್ಮ ಮೂಗಿನ ನೇರಕ್ಕೆ ಎಷ್ಟು ಬೇಕೋ ಅಷ್ಟನ್ನೇ ಕೊಯ್ದು, ಅಂದಗಾಣಿಸಿ ಮೆರವಣಿಗೆ ಹೊರಡುವ ಮಾಧ್ಯಮ ಲೋಕದ ಟಿ.ಆರ್.ಪಿ ಮೋಹಕ್ಕೆ ಏನನ್ನೋಣ? ಅಷ್ಟು ಸಾಲದ್ದಕ್ಕೆ-'ಇದು ನಮ್ಮಲ್ಲಿ ಮಾತ್ರ. ನಮ್ಮಲ್ಲೇ ಮೊದಲು. ನಾವು ಮೊದಲೇ ಹೇಳಿದ್ದೆವು'ಎಂಬ ಸ್ವಪ್ರತಿಷ್ಠಿತ ಒಕ್ಕಣೆ, ಶೀರ್ಷಿಕೆಗಳೊಂದಿಗೆ ಸ್ವಯಂ ಬೆನ್ನನ್ನು ತಟ್ಟಿ ಚಪ್ಪರಿಸುವುದನ್ನು ನೋಡುತ್ತೇವೆ. ಮಾಧ್ಯಮ ಲೋಕದೊಳಗಿದ್ದು, ಹಿರಿಯ ಪತ್ರಕರ್ತನಾಗಿ ಮಾಧ್ಯಮಗಳ ಅತಿರೇಕದ ವರ್ತನೆಗಳನ್ನು ಉಪಾಧ್ಯರು ಯಾವುದೇ ಮುಚ್ಚುಮರೆ ಇಲ್ಲದೆ ಈ ಕೃತಿಯಲ್ಲಿ ಹೇಳಿದ್ದಾರೆ. ಇದು ನಿಜವಾಗಿಯೂ ನೈಜ್ಯ ಪತ್ರಕರ್ತನೊಬ್ಬನ ಹೊಣೆಗಾರಿಕೆ ಎಂದೇ ನನಗನಿಸಿದೆ.

ಪುಸ್ತಕವನ್ನು ಓದುತ್ತಾ ಹೋದಂತೆ ಪತ್ತೇದಾರಿ ಕತೆಯನ್ನು ಓದಿದ ಅನುಭವವಾಗುತ್ತದೆ. ಹದಿಮೂರು ಅಧ್ಯಾಯಗಳ ಚಿಕ್ಕ ಚೊಕ್ಕ ಪುಸ್ತಕವು ಬಗೆದಿಡುವ ಸತ್ಯ ಮಾತ್ರ ಇಲ್ಲಿ ಸತ್ವಯುತವಾಗಿ ಮೂಡಿ ಬಂದಿದೆ. ಎಲ್ಲೂ ಅತಿರೇಖ, ಕ್ಲೀಷೆಗಳಿಲ್ಲ. ಗೊತ್ತಿಲ್ಲದನ್ನು ತಿಳಿದಿಲ್ಲವೆಂದೇ ಹೇಳುವ ಪ್ರಾಮಾಣಿಕತೆಯು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದೆ. ಊಹಾಪೋಹಗಳು, ಕಪೋಕಲ್ಪಿತಗಳೇ ತುಂಬಿರುವ ಕಾಲದೊಳಗೆ ರೆಕ್ಕೆಪುಕ್ಕಗಳು ಹೇಗೆ ಕಟ್ಟಿಕೊಳ್ಳುತ್ತವೆ ಎನ್ನುವುದನ್ನೂ ಹೇಳಿರುತ್ತಾರೆ. ತಳೆಯುವ ಆಯಾಮಗಳು ಕಾಲಾನುಕಾಲಕ್ಕೆ ಅನಿರೀಕ್ಷಿತ ತಿರುವುಗಳನ್ನು ಪಡೆಯುತ್ತಾ ಸಾಗುವುದು ನಿಜವಷ್ಟೇ. ಗ್ಲಾಮರ್ ಲೋಕದ ಕನಸು, ಪ್ರಚಾರದ ಗೀಳುಗಳೆಲ್ಲವೂ ಉತ್ತಮ ಅಧಿಕಾರಿಯು ತನ್ನ ಕಾರ್ಯವ್ಯಾಪ್ತಿಯನ್ನು ಹೇಗೆ ಮೀರುತ್ತಾನೆ ಎನ್ನುವುದನ್ನು ಇಲ್ಲಿ ಕಾಣಬಹುದಾಗಿದೆ. ಭ್ರಾಮಕಾವಸ್ಥೆಯು ಸೃಜಿಸುವ ಉನ್ಮಾದದ ಸ್ಥಿತಿ ಮತ್ತು ಸಿನೆಮ್ಯಾಟಿಕ್ ಯೋಚನೆಯು, ವಾಸ್ತವ ಬದುಕಿನ ಮುಖ ತುಂಬಾ ದಪ್ಪನೆಯ ಮೇಕಪ್ ಬಳಿದು ಕುಳಿತಿರುತ್ತದೆ.

ಮಹತ್ವಾಕಾಂಕ್ಷೆಗಳು ಎಡವಟ್ಟುಗಳನ್ನು ಸೃಷ್ಟಿಸುವುದೇ ಹೆಚ್ಚು. ವ್ಯವಹಾರದಲ್ಲಿ ಇರಬೇಕಾದ ತಂತ್ರಗಾರಿಕೆಯೇ ಬೇರೆ. ಅಧಿಕಾರ ಇದ್ದ ಮಾತ್ರಕ್ಕೆ ಎಲ್ಲ ಗುಣಗಳೂ ಸಿದ್ದಿಸಿ ಮೇಳೈಸಬೇಕೆಂದೇನಿಲ್ಲ. ‘ಹೆಣ್ಣು-ಹೊನ್ನು-ಮಣ್ಣು ಬಿಟ್ಟೆನೆಂದರೂ ಬಿಡದ ಮಾಯೆ’-ರಿಯಲ್ ಎಸ್ಟೇಟ್ ಅಂತಹ ಒಂದು ಲೋಕ. 'ಭುಮ್..'ಎಂದು ತನ್ನೊಳಗೆ ಸೆಳೆದುಕೊಳ್ಳುವ ಭೂಮಿಯ ಗುಣ-ಲಕ್ಷಣಗಳನ್ನು ಅರಿತುಕೊಳ್ಳುವುದು ಸುಲಭದ ಮಾತಲ್ಲ. ಹೊನ್ನಾಗಿಸುವುದೂ ಮಣ್ಣು, ಹೆಣವಾಗಿಸುವುದೂ ಮಣ್ಣೇ. ಮಣ್ಣಿನ ಲೋಕವೇ ಅಂತದ್ದು. ಅದಕ್ಕೆ ಹೆಣ್ಣೂ ಹೊರತಲ್ಲ ಎನ್ನುವ ವಾಸ್ತವವನ್ನು ಪುಸ್ತಕ ತೆರೆದಿಟ್ಟಿದೆ.

ಒಬ್ಬ ಅಧಿಕಾರಿ ವ್ಯವಸ್ಥೆಯನ್ನು ಮೀರಿ ಬೆಳೆದು ದೈವತ್ವಕ್ಕೇರುವುದನ್ನು ಸಿನೆಮಾ ಪರದೆಯಲ್ಲಷ್ಟೇ ಕಾಣಬಹುದು. ವಾಸ್ತವದಲ್ಲಿ ಅಂತಹದ್ದೊಂದು ಸಾಧ್ಯತೆಯು ಕ್ಷೀಣವಾದುದು. ಆ ತೆರನಾದ ಗೀಳು, ಮನಸ್ಸಿನ ಸ್ವಾಸ್ತ್ಯವನ್ನು ಕೆಡಿಸಿ ಭ್ರಾಮಕಲೋಕಕ್ಕೆ ಒಯ್ಯುತ್ತದೆ. ಅದಕ್ಕೆ ಡಿ.ಕೆ.ರವಿಯವರೂ ಹೊರತಲ್ಲ ಎನ್ನುವುದನ್ನು 'ನಗ್ನಸತ್ಯ' ಪುಸ್ತಕವು ಹೇಳುತ್ತದೆ. ಒಬ್ಬ ಉತ್ತಮ ಅಧಿಕಾರಿಯಾಗುವ ಗುಣಗಳನ್ನು ಹೊಂದಿದ್ದ ಡಿ.ಕೆ.ರವಿಯವರು ಎಡವಿದ್ದೆಲ್ಲಿ ಎನ್ನುವುದನ್ನು ಪುಸ್ತಕವು ಹೇಳುತ್ತದೆ. ಜೊತೆಗೆ ‘ಸಿಐಡಿ’-‘ಸಿಬಿಐ’ ಸಂಸ್ಥೆಗಳು ಹಾಗೂ ರಾಜ್ಯ ಪೊಲೀಸ್ ತಂಡವು ನಿರ್ವಹಸಿದ ಜವಾಬ್ದಾರಿಯುತ ಕಾರ್ಯವೂ ಪ್ರಶಂಸೆಗೆ ಅರ್ಹವಾದುದು.

ಅಧಿಕಾರಿಗೆ 'ಮಾನಸಿಕ ಸ್ಥಿರತೆ' ಎಷ್ಟು ಮುಖ್ಯವಾದದ್ದು ಎನ್ನುವುದನ್ನು ಹಿರಿಯ ಪೊಲೀಸ್ ಅಧಿಕಾರಿ ‘ಶ್ರೀ'. ಗೋಪಾಲ್ ಹೊಸೂರು’ತಮ್ಮ ಅನಿಸಿಕೆಯಲ್ಲಿ ತೋಡಿಕೊಂಡಿದ್ದಾರೆ. ಅವರೇ ಹೇಳುವಂತೆ-"ನಾಗರಿಕ ಸೇವೆಗಳಿಗೆ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಯ ಬಗ್ಗೆ ನನಗೆ ಹೆಚ್ಚು ಕಾಳಜಿ ಇದೆ. ಸಾಕಷ್ಟು ಸಾಮಾನ್ಯ ಜ್ಞಾನ ಅಥವಾ ಆಢಳಿತಾತ್ಮಕ ಪ್ರಕ್ರಿಯೆಗಳಲ್ಲಿ ಸ್ವಲ್ಪ ತರಬೇತಿ ಪಡೆದರೆ ಸಾಕಾಗುವುದಿಲ್ಲ. ದುಃಖದ ಸಂಗತಿ ಎಂದರೆ ನಾಗರಿಕ ಸೇವೆಗಳಿಗೆ ಆಯ್ಕೆಯಾಗುವ ವ್ಯಕ್ತಿಯ 'ಮಾನಸಿಕ ಸ್ಥಿರತೆ' ಬಗ್ಗೆ ಯಾವುದೇ ಗಮನ ನೀಡುತ್ತಿಲ್ಲ"ಎಂಬ ಅವರ ಕಾಳಜಿ ನೈಜ್ಯವೂ, ಪ್ರಸ್ತುತವೂ ಆಗಿದೆ.

'ದೇಶದ ರಾಜಕೀಯ ಪರಿಸ್ಥಿತಿ 'ಸತ್ಯದ ನಂತರದ' ನಂಬಿಕೆ ಮತ್ತು ಪ್ರಚಾರದ ಜಗತ್ತಾಗಿ ಮಾರ್ಪಟ್ಟಿದೆ. ಕಠಿಣ ವಾಸ್ತವಕ್ಕಿಂತಲೂ, ಭಾವನೆಗಳು ಮೇಲುಗೈ ಸಾಧಿಸುತ್ತವೆ. ಸತ್ಯವನ್ನೇ ಆಧರಿಸುವುದಕ್ಕಿಂತಲೂ ಮಿಗಿಲಾಗಿ ಭಾವನೆ ಮತ್ತು ನಂಬಿಕೆಗಳ ಆಧಾರದ ಮೇಲೆ ವಾದವನ್ನು ಒಪ್ಪಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗುತ್ತದೆ' ಎಂಬ ಕಠೋರ ಸತ್ಯವನ್ನು ರಾಮಕೃಷ್ಣ ಉಪಾಧ್ಯರು ಈ ಕೃತಿಯಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ದಾರುಣ ಅಂತ್ಯವೊಂದರ ‘ನಗ್ನಸತ್ಯ’ವು ಅನಾವರಣಗೊಂಡಿದೆ.

ಡಿ.ಕೆ.ರವಿ ದುರಂತ ಕಥೆ ನಗ್ನಸತ್ಯ ಪುಸ್ತಕದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಈ ಅಂಕಣದ ಹಿಂದಿನ ಬರೆಹಗಳು:
ಮೂಲ ಸ್ವರೂಪದಿಂದ ವಿಮುಖವಾಯಿತೇ ಯಕ್ಷಗಾನ?
ಮಲೆಯಾಳಂ ಸಿನಿಮಾವೆಂಬ ಸುಂದರಿ ಕುಟ್ಟಿ..
ಮತ್ತೇರಿಸಿ ಕಾಡುವ ಕಾಡ ಸುಮ
ಜಾಗತೀಕರಣ: ವೃದ್ಧಾಶ್ರಮಗಳಾಗುತ್ತಿರುವ ಹಳ್ಳಿಗಳು
ಆಧುನಿಕ ತಂತ್ರಜ್ಞಾನ ಮತ್ತು ಹರಕು-ಮುರುಕು ಬಂಧಗಳು
ಪ್ರಜಾಪ್ರಭುತ್ವದ ಮೂಲ ಅಂಗಗಳು ವಿಕಲಗೊಂಡಿವೆಯೇ?
ದಾಸ್ಯವೂ..ಸ್ವಾತಂತ್ರ್ಯವೂ..
ಮುಸ್ಸಂಜೆಯ ಒಳಗೊಂದು ಅರ್ಥ
ಧಮ್ಮ ಗುಮ್ಮನ ನಂಬಿ ಕೆಟ್ಟರೆ ಎಲ್ಲರೂ ?
ಭರವಸೆಯ ಜೊತೆ ಹೆಜ್ಜೆ ಹಾಕೋಣ..
ಚಾದರದೊಳಗಿನ ಕಥೆ, ವ್ಯಥೆ...
'ಚಂದ್ರಗಿರಿ ತೀರದಲ್ಲಿ' ತೀರದ ಬವಣೆ..
‘ಬಯಲರಸಿ ಹೊರಟವಳು’- ಇಟ್ಟ ಹೆಜ್ಜೆಯ ಜಾಡು
ಬೆಳಕ ದಾಟಿಸುವ ಹಣತೆ- ಎಸ್.ದಿವಾಕರ್
ಅನುಭವಿಸಿ ಬರೆಯುವ ಜಯಂತ ಕಾಯ್ಕಿಣಿ
ಜೀವ ಜೀವಗಳ ಅಳು…
ಹನಿ ಹನಿಸಿದ ಚೊಕ್ಕಾಡಿ
ಶಾಂತ ಕಡಲೊಳು ಬೀಸಿದ ಬಿರುಗಾಳಿ
ರಂಗದ ಮೇಲಿನ ಬಣ್ಣದ ಭಾವಗಳು
ಬೆಳಕ ದಾಟಿಸುವ ಹಣತೆಯೂ...ಒಳ್ಳೆಯವರಾಗುವ ವ್ಯಸನವೂ...
ಟ್ಯಾಗ್ ಹಾಕಿ ನೋಡುವ ಮನಸ್ಸುಗಳ ನಡುವೆ
ಸಖನೂ ಸುಖವೂ ಒಂದೇ ಆಗುವ ಕ್ಷಣ

 

 

MORE NEWS

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...

ಉಪವಿಷ್ಟಕೋನಾಸನ ಮತ್ತು ಪವನಮುಕ್ತಾಸನ

09-04-2024 ಬೆಂಗಳೂರು

"ಉಪವಿಷ್ಟಕೋನಾಸನ ಯೋಗಾಸನವು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಮಾಂಸಗಳ ತೂಕವನ್ನು ಕಡಿಮೆಗೊಳಿಸುತ್ತದೆ. ಪವನಮು...