ದಲಿತ ಲೋಕ ಮೀಮಾಂಸೆ : ಕೆ.ಬಿ. ಸಿದ್ದಯ್ಯನವರ ಕಾವ್ಯದ ಒಳಾಯ

Date: 18-10-2019

Location: ಬೆಂಗಳೂರು


ಕವಿ ಕೆ.ಬಿ. ಸಿದ್ದಯ್ಯನವರು ತಮ್ಮ ನಾಲ್ಕು ಖಂಡಕಾವ್ಯಗಳು ಮತ್ತು ಕೆಲವು ಬಿಡಿಕವಿತೆಗಳಲ್ಲಿ ಕಲ್ಪಿಸಿರುವ ಜಗತ್ತು ವಿಲಕ್ಷಣವೆನ್ನಿಸುವ ಬಯಲ ಹಾತೊರೆತದ ಜಗತ್ತಾಗಿ ಕಾಣುತ್ತದೆ. ಈ ಬಯಲು ಕೂಡಾ ವಿಲಕ್ಷಣ ಬಯಲಾಗಿ ಕಾಣುತ್ತದೆ. ವಿವಂಚಿತ, ಸಂತ್ರಸ್ತ ಸಾಮಾಜಿಕ ಜಗತ್ತಿನಿಂದ ಸಿಡಿದೆದ್ದು ಅಥವಾ ಪುಟಿದೆದ್ದು ಚಡಪಡಿಸುತ್ತ ಬಯಲ ಆಲಯದಲ್ಲಿ ನೆಲೆಗೊಳ್ಳಲು ಹಂಬಲಿಸುವ ಅವಿಶ್ರಾಂತ ಜಗತ್ತು ಇದು. ಈ ಬಯಲೆನ್ನುವುದು ಒಂದು ಪರಿಹಾರಾತ್ಮಕ ನೆಲೆಯಂತೆ ಇಲ್ಲಿ ಗೋಚರಿಸುತ್ತದೆ.  ಈ ವಿವಂಚಿತ ಜಗತ್ತೇ ಕಡೆದು ನಿಲ್ಲಿಸಿರುವ ಒಂದು ವಿಶೃಂಖಲ ಸೃಜನಶೀಲ ಚೈತನ್ಯ ತನ್ನ ಅನಿರ್ಬಂಧಿತ ಗತಿಯಲ್ಲಿ ಪ್ರವೃತ್ತವಾಗಿದೆ.

ಇಲ್ಲಿ ಹಲವು ದಿಕ್ಕುಗಳಿಂದ ಬಯಲ ಪಯಣಗಳು ಹೊರಡುತ್ತವೆ. ಜನಪದೀಯ ಪೂರ್ವದಿಂದ; ಚಾರಿತ್ರಿಕ ವಚನ ಭೂಮಿಯ ನೆಲೆಯಿಂದ; ಅಕ್ಷರವಂಚಿತ ಹಸಿವಿನ ಮತ್ತು ಅಸ್ಪೃಶ್ಯ ಲೋಕದ ನಡುವಿನಿಂದ… ಹೀಗೆ ಬಹುನೆಲೆಗಳಿಂದ ಈ ಪ್ರಯಾಣ ಆರಂಭಗೊಳ್ಳುತ್ತವೆ. ಈ ಪಯಣ ಆಧುನಿಕದ ಹಿಂಸಾಭೂಮಿಯನ್ನು ತುಳಿಯುತ್ತ ತನ್ನ ಇಚ್ಛೆಯ ನೆಲೆಗಳತ್ತ, ಪರಿಹಾರವೇ ಇಲ್ಲದ ಶೋಕದಿಂದೆಂಬಂತೆ ಬೆಂಕಿ, ಬಿರುಗಾಳಿಗಳಂತೆ ಮೊರೆಯುತ್ತ ಸಾಗುತ್ತದೆ.

ಈ ಕಾವ್ಯದ ಬಯಲ ಇಚ್ಛೆ ಶೋಕ ಪರಿಹಾರ ಮಾರ್ಗದಂತೆ ಕಾಣುತ್ತದೆ. ಈ ಬಯಲು ಕೂಡಾ ಮಾನವ ಸಂಸರ್ಗ ದೂರವಾದದ್ದಲ್ಲ. ಅಲ್ಲಿ ಮಾನವ ಸಂಕಟದ ಅನುರಣನ ಧ್ವನಿಸುತ್ತದೆ. ‘ಬಕಾಲ’ದ  ಈ ಸಾಲುಗಳು ಅದನ್ನು ಮಿಡಿಯುತ್ತವೆ :

“ಬಯಲ ಕುಸುಮದ

ಮೇಲೊಂದಾಲಯದ 

ದುಂಬಿ ಬಂದೆರಗಿತ್ತು

ಪಾತಾಳ ಪಕ್ಷಿಗೆ ಬಿದ್ದೊ

ಗಾವುದ ಗಾವುದ ಕನಸುಗಳು

ರೆಕ್ಕೆ ತೆಕ್ಕೆಯ ಅಮಲಿನಲೆದ್ದೊ

ಬೆಚ್ಚಾವುಗಳು

ಗೋಣ , ಆಲವ ಅರಸಿ ಆಕಾಶಕೆ

ತಾನುಂಡ ಫಲವನು ತನ್ನ ಬಳಗವು

ಭೂಸೂತಕದಲಿ ಮಹಾಭಾರತವು

ಸ್ತ್ರೀಸೂತಕದಲಿ ರಾಮಾಯಣವು    (ಬಕಾಲ)

 

ಆದ್ದರಿಂದ ಈ ಕಾವ್ಯಗುಚ್ಛದಲ್ಲಿ ಒಂದು ಇಚ್ಛಿತ ಅರಾಜಕತೆ ತಾನೇ ತಾನಾಗಿ ಎದ್ದು ಕಾಣುತ್ತದೆ.

ಇಂತಹ ಇಚ್ಛಿತ ಅರಾಜಕತೆಗೆ ಕಾರಣವಾದರೂ ಏನು ಎಂದರೆ, ಈ ಮೊದಲೇ ಪ್ರಸ್ತಾಪಿಸಿದಂತೆ ನಿಗಿನಿಗಿ ಕೆಂಡದಂತಹ ಸಾಮಾಜಿಕ ಅನುಭವದಲ್ಲಿ ಅದ್ದಿ ತೆಗೆಯಲ್ಪಟ್ಟ, ಮುಟ್ಟಿದರೆ ಮಿಡಿಯುವ ರೂಪಕಗಳು ಸರಣ ಯೋಪಾದಿಯಲ್ಲಿ ಅವತರಿಸಿ ಜೊತೆಗಟ್ಟಿ ಸಂತ್ರಸ್ತ ಕಥನವನ್ನು ಬಿಚ್ಚಿಡುತ್ತವೆ.

ಪ್ರಾತಿನಿಧಿಕವಾಗಿ ‘ಗಲ್ಲೆಬಾನಿ’ ಖಂಡಕಾವ್ಯವನ್ನು ವಿಶ್ಲೇಷಿಸಿ ನೋಡಬಹುದು. ಒಂದು ರೀತಿಯಲ್ಲಿ ಇದು ಕೆ.ಬಿ. ಸಿದ್ದಯ್ಯನವರ ಸಮಗ್ರ ಕಾವ್ಯ ಶರೀರದ ನೋಟ ಕೂಡಾ. ಸ್ಥಳೀಯ ಚರಾಚರಗಳು ಧಿಗ್ಗನೆದ್ದು ರಚಿಸಿಕೊಳ್ಳುತ್ತಿರುವ ಆತ್ಮಕಥನ. ಅದು ಆತ್ಮಕಥನಕ್ಕೆ ಆತ್ಮಕಥನ ಅಲ್ಲವೆಂದರೆ ರಾಜಕೀಯ ಆಗ್ರಹ. ಅದೂ ಅಲ್ಲವೆಂದರೆ ರಾಜಕಾರಣದ ಬಹಿರಂಗಕ್ಕೆ ತಾನೊಂದು ಆಧ್ಯಾತ್ಮಿಕ ಸುಂಟರಗಾಳಿಯಂತೆ ಸಮ್ಮುಖವಾಗಲೆಳಸಿದ ಪ್ರಯತ್ನ.

ಈ ಕಾವ್ಯಗುಚ್ಛದೊಳಗಡೆ ಬಹುದೊಡ್ಡ, ಬಹು ಸೂಕ್ಷ್ಮ ಪಯಣಗಳೇ ಹೊರಡುತ್ತವೆ. ಆ ಪಯಣಗಳು ನಾವು ಬಿಟ್ಟುಬಂದ ಊರು-ಕೇರಿಗಳಿಗೆ, ಮನೆ-ಮಠಗಳಿಗೆ, ಸತ್ತು-ಕೆಟ್ಟು ಹೋದ ಸಕಲ ಪೂರ್ವಿಕರ ಬೆನ್ನುಹತ್ತಿ ಚಲಿಸುತ್ತವೆ. ನೀರಿಲ್ಲದೆ ಬತ್ತಿದ ಬಾವಿಗಳಿಗೆ, ಕೆರೆ-ಕಟ್ಟೆ, ತಿಟ್ಟು-ತೆವರಿಗಳಿಗೆ; ‘ಮೂಗುತ್ತ’ದ ಬಯಲಿಗೆ ಈ ಪಯಣದ ಹಾದಿಗಳು ನಡೆಯುತ್ತವೆ. ಊರ ದೇವರು ಮೈದುಂಬಿ ಹರಿದಂತೆ ಇಲ್ಲಿನ ಲೋಕ.

ಇದು ಸಾವಿನ ಧ್ಯಾನ ನಿನದಿಸುವ ಲೋಕ ಕೂಡಾ. ಇಲ್ಲಿ ಆಧ್ಯಾತ್ಮದ ಸಾವು ಕೂಡಾ ಇದ್ದು ತಲ್ಲಣ ಉಂಟುಮಾಡುತ್ತದೆ. ವ್ಯಕ್ತಿ ಸತ್ತ ಬಳಿಕ, ಸಾಮಾಜಿಕ ಜೀವಿತ ಹಸನಾಗದ ಬಳಿಕ, ರಾಜಕೀಯ ನಿರರ್ಥಕವೆನ್ನಿಸಿ ಆಹ್ವಾನಿಸಿಕೊಳ್ಳುತ್ತಿರುವಂತೆ ಇಲ್ಲಿನ ಸಾವು. ಅದು ತನ್ನ ವಿದ್ಯೆಯನ್ನು ಇಲ್ಲಿ ತೋರುತ್ತದೆ. ಇದೊಂದು ಸುಸ್ತಿನ ಪಯಣ. ಬದುಕಿನಂತೆ ಅದು ಇದೆ. ಆದರೆ ಅದೇಕೋ ಈ ಕಾವ್ಯ ಶರೀರಕ್ಕೆ ನರ್ತನದ ಜೀವರಸ ಇಳಿದಿದೆ. ಇದು ನರ್ತಿಸಲು ಬಯಸುವ ಶಬ್ದಲೋಕ. ಮಾಂತ್ರಿಕ ಶಬ್ದ ಯೋಜನೆಯಲ್ಲಿ ಜೀವಹಿಡಿದು ಬದುಕುಳಿಯಲು ಹವಣ ಸುವ ಲೋಕ ಇದು. 

ಇಲ್ಲಿಗೆ ಕನ್ನಡದ ಊರು ಕೇರಿಗಳ, ಜಾತಿ-ವಿಜಾತಿಗಳ ಪುರಾತನ ಕೋಶಗಳಿಂದ ಹುಟ್ಟು ಸಾವು ಬದುಕುಗಳಲ್ಲಿ ಅದ್ದಿದ ಮಾಂತ್ರಿಕ ಶಬ್ದಗಳು ಧಾವಿಸಿ ಬಂದು ಕೋಲಾಹಲಗೈಯುತ್ತ ಜಾಗ ಪಡೆಯುತ್ತವೆ. ಇದು ಸ್ವಾಸ್ಥ್ಯವನ್ನು ಧ್ಯಾನಿಸುವ ಕಾವ್ಯವೇ? ಅಥವಾ ಅಸ್ವಾಸ್ಥ್ಯದ ಹೆಣವ ಮುಟ್ಟಿ ಎಬ್ಬಿಸಲು ನಡೆಸಿದ ಸಾಹಸವೆ? ಎಂಬ ಪ್ರಶ್ನೆಗಳು ಏಳುತ್ತವೆ. ಈ ಕಾವ್ಯದಲ್ಲಿ ಭುಗಿಲೇಳುವ ಸ್ಥಳೀಯ ಕುಲಗಳ ಅಂತಃಸ್ವನಗಳು ಆಧುನಿಕ ನಾಗರಿಕತೆಗೆ ದಿಗಿಲು ಹುಟ್ಟಿಸಿದರೆ ಆಶ್ಚರ್ಯವಿಲ್ಲ. ಬೆಟ್ಟಗಳನ್ನು ಕಡಿಯುವ, ನದಿಗಳನ್ನು ಇಂಗಿಸುವ, ಕಾಡುಗಳನ್ನು ‘ನಾಟಾ’ ಮಾಡುವ, ಆಧುನಿಕ ರಾಕ್ಷಸನ ಎದುರು ಇದು ಅಸ್ವಾಸ್ಥ್ಯದ ‘ಸ್ಫೋಟ’ವೆಂದರು ಸೈಯೆ…

ಹಾಗಿದ್ದಲ್ಲಿ ಈ ಕಾವ್ಯ ಏನನ್ನು ಸೂಚಿಸುತ್ತಿದೆ? ಮನುಷ್ಯನ ಸ್ವಾಸ್ಥ್ಯದ ನೆಲೆ ಯಾವುದು? ರಕ್ಷಣೆಯ ತಾಣ ಎಲ್ಲಿ? ಈ ಕಾವ್ಯದ ‘ನಿಲುವು’ ನೀಡುತ್ತಿರುವ ಭಾಸದಂತೆ ಅದು ತಾದಾತ್ಮ್ಯದ ಮಾಂತ್ರಿಕ ಕಲೆಯಲ್ಲೆ? ಅಥವಾ ಅದು ವಿಸರ್ಜಿಸುತ್ತಿರುವ ಸಮಾಜೋ ಆಧ್ಯಾತ್ಮಿಕ ತರಂಗಗಳಲ್ಲೆ? ಅಥವಾ ಸಾವಿನ ಮುಖಾಮುಖಿಯಲ್ಲೆ? ಅಥವಾ ರಾಜಕೀಯ ಹೋರಾಟದಲ್ಲೆ?

ಹೀಗೆ ಈ ಕಾವ್ಯ ತನ್ನ ಸ್ವಭಾವದಲ್ಲಿ ವಿಮುಖಕ್ಕೂ ಸಮ್ಮುಖಕ್ಕೂ ಉಯ್ಯಲಾಡುತ್ತ, ಸ್ವಾತ್ಮನಲ್ಲಿ ನೆಲೆಗೊಳ್ಳುತ್ತ, ಅಲ್ಲಿರಲಾಗದೆ ಚಡಪಡಿಸುತ್ತ ತಲಾಂತರಗಳ ಮನುಷ್ಯಾನುಭವಗಳ ಸೂಕ್ಷ್ಮ, ಸ್ಥೂಲ ದೇಹಗಳನ್ನು ಧಾರಣ ಮಾಡುತ್ತದೆ.

ಇಂಥ ಈ ಕವಿತೆಯೊಳಗಿಂದ ಕವಿ ಜನಿಸಬಲ್ಲ; ಅರ್ಥಶಾಸ್ತ್ರಿಗೆ ಇಲ್ಲಿ ಕೈತುಂಬ ಕೆಲಸ ಕಾದಿದೆ. ಸಮಾಜಶಾಸ್ತ್ರಜ್ಞ ಧೂಳು ತಿನ್ನುತ್ತಿರುವ ತನ್ನ ಕ್ರಿಯಾಶೀಲತೆಯ ಹೆಣವನ್ನು ಮತ್ತೆ ಬಡಿದೆಬ್ಬಿಸಬಹುದು. ರಾಜಕಾರಣ  ತನ್ನ ಗುಂಡಿಗೆ ಗಟ್ಟಿಯಿದ್ದರೆ ಇಲ್ಲಿನ ಅಂತಃಸ್ವನಕ್ಕೆ ಕಿವಿಗೊಟ್ಟು ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಲ್ಲ ಮನುಷ್ಯನಾಗಬಹುದು. ‘ಇಂಗ್ಲಿಷ್‍ನಿಂದ ಮಾತ್ರ ಅನ್ನ’ ಎಂದು ಅನ್ನ ತಿನ್ನುವ ಮಾತಾಡದ ಇಲ್ಲಿನ ‘ಭಾಷಾ ತಜ್ಞ’ ಅಥವಾ ಪಟ್ಟಭದ್ರ ಇಲ್ಲಿಂದ ಅವಿರತವಾಗಿ ಎದ್ದೇಳುತ್ತಿರುವ ಸ್ಥಳೀಯ ಭಾಷಾಸ್ವನಗಳೆದುರು ಕಂಗೆಟ್ಟು ಪರಾರಿ ಆದರೆ ಅಚ್ಚರಿಯಿಲ್ಲ. ತಾನೇ ಬರೆದ ಚರಿತ್ರೆಯ ಹಿಂಸಾಭೂಮಿಯಲ್ಲಿ ನಡೆಯುತ್ತಿರುವ ಇತಿಹಾಸಕಾರ ಇಲ್ಲಿ ತಪ್ಪೊಪ್ಪಿಕೊಳ್ಳದೆ ವಿಧಿಯಿಲ್ಲ.

ಈ ಕಾವ್ಯದ ಮುಖ್ಯ ಪ್ರಾಣಗಳನ್ನು ಅಥವಾ ಸಂವೇದನಾ ಕೇಂದ್ರಗಳನ್ನು ಹಸಿವು, ಅಸ್ಪೃಶ್ಯತೆ ಮತ್ತು ಘಾತಗೊಂಡ ಸ್ತ್ರೀತ್ವಗಳನ್ನಾಗಿ ಗುರುತಿಸಬಹುದು. ಈ ಮೂರೂ ಪಾಪಗಳನ್ನು ನಮ್ಮ ಸಮಾಜ ಎಸಗಿರುವ ಘೋರ ಅನ್ಯಾಯಗಳಾಗಿ ಕಾವ್ಯದ ಕೇಂದ್ರ ತತ್ವ ಗ್ರಹಿಸುತ್ತದೆ. ಈ ಮೂರೂ ಅಂಶಗಳಲ್ಲಿ ಈ ದಲಿತ ಅಥವಾ ಸಂತ್ರಸ್ತ ಸಾಮಾಜಿಕ ನೆಲೆಯ ಕಾವ್ಯದ ಚಿಮ್ಮುಹಲಗೆಗಳೋ ನೆಲೆಗಳೋ ಆಗಿವೆ. ಈ ಜರ್ಝರಿತ ನೆಲೆಗಳೇ ಇಲ್ಲಿ ಮಾತಾಡುತ್ತವೆ. ಪ್ರತಿಭಟನೆಯ ಕಲಾತ್ಮಕ ರೂಪ ಗುಚ್ಛದಿಂದ ಇಡೀ ಕೆ.ಬಿ. ಕಾವ್ಯಮಾಲೆ ತೇಜಃಪುಂಜದಂತೆ ಗೋಚರಿಸುತ್ತದೆ.

ಒಂದು ತುದಿಯಲ್ಲಿ ತಲತಲಾಂತರದ ಜಾತಿಗ್ರಸ್ತ ಸಾಮಾಜಿಕ ಬದುಕು ಕ್ರುದ್ಧಗೊಂಡು ಉಸಿರು ಹುಯ್ಯುತ್ತಿದ್ದರೆ, ಮತ್ತೊಂದು ತುದಿಯಲ್ಲಿ ತಕ್ಕಡಿ ಹಿಡಿದು ಬಂದಿರುವ ಜಾಗತಿಕ ರುದ್ರರ ಆಡುಂಬೊಲವಾಗಿರುವ ಈ ಆಧುನಿಕ ಲೋಕ ದಲಿತಲೋಕವನ್ನು ಘಾಸಿಗೊಳಿಸುವುದನ್ನು ಈ ಕಾವ್ಯದ ನೆಲೆಗಾಣದ ಆತ್ಮದ ಚಡಪಡಿಕೆಯಲ್ಲಿ ಕಾಣಬಹುದಾಗಿದೆ. 

ಕಾವ್ಯದ ಹಕ್ಕಿಯ ಪಕ್ಷಿನೋಟವಾಗಿಯೂ ಈ ಕಾವ್ಯಲೋಕವನ್ನು ಕಾಣಬಹುದಾಗಿದೆ. ಈ ಪಕ್ಷಿಯ ಹಾರುವಿಕೆಯಂತೆ ಇಲ್ಲಿನ ಏರಿಳಿತ, ವಿಸ್ತಾರ, ಆಳಗಳು ಕಾಣುತ್ತವೆ. ಇದು ಪಾರಿವಾಳದಂತೆ ಬೆದರುವ ಹಕ್ಕಿ ಬೆಚ್ಚುವ ಹಕ್ಕಿ, ಹದ್ದಿನಂತೆ ಖಗೋಲವನ್ನೆ ಸೀಳುತ್ತ ಹಾರುವ ಹಕ್ಕಿ ಪಾರಿವಾಳದ ಹೃದಯವನ್ನೂ ಹದ್ದಿನ ಬಲಿಷ್ಠ ನಖಗಳನ್ನು ಬಲಿಷ್ಠ ರೆಕ್ಕೆಗಳನ್ನೂ ಹೊಂದಿದ ಹಕ್ಕಿ ಇದು. ಸಂಚಾರವೇ ಇಲ್ಲಿನ ಅನಿವಾರ್ಯ ಹೃದಯ ತತ್ವ.

ಹೀಗಾಗಿ ಈ ಬರಹವು ಈ ಕಾವ್ಯದ ಲೋಕ ಮೀಮಾಂಸೆಯ ಮುಖ್ಯ ಪ್ರಾಣಗಳನ್ನು ಕೆಳಕಂಡಂತೆ ಗ್ರಹಿಸಿ ಕಂಡುಕೊಳ್ಳಲು ಯತ್ನಿಸಿದೆ.

 

ಹಸಿವು

ಮುಟ್ಟು

ಸ್ತ್ರೀ ಘಾತ.

ಹಸಿವು :

ಹಸಿವು ಈ ಕಾವ್ಯಗುಚ್ಛದ ಆದಿ ಮಧ್ಯಾಂತಗಳನ್ನು ಏಕವೆಂಬಂತೆ ಆವರಿಸಿವೆ. ‘ದಕ್ಲ ಕಥಾದೇವಿ ಕಥಾಕಾವ್ಯ’ದಲ್ಲಿ ದಕ್ಲನ ಪ್ರಾರ್ಥನೆ ಅದೇ : “ನನ್ನ ಪ್ರಾರ್ಥನೆ ಏನೆಂದು ಹೇಳಲಿ, ತುಂಬಿದ ಕೆರೆ ಕೆಂಪಾನೆ ಕೆಂಪು ನೀರೆಲ್ಲಾ ಹೆಂಡವಾಗಲಿ ತಾಯಿ, ಏರಿಯಾದ ಏರಿಯೆಲ್ಲಾ ಮಾಂಸಖಂಡವಾಗಲಿ ತಾಯಿ”.

ಇದು ಇಲ್ಲಿ ಮಡುಗಟ್ಟಿರುವ ಅಖಂಡ ಹಸಿವಿನ ಮಹಾರೂಪಕವಾಗಿದೆ. ಹಸಿವಿನ ತತ್ತರವೇ ಇಲ್ಲಿನ ಜೀವಸಂವೇದನೆಯನ್ನು ಸ್ಥಗಿತಗೊಳಿಸಿದಂತೆಯೂ ಕಾಣುತ್ತದೆ. ಹಸಿವು ಎಲ್ಲ ಮಾನವ ಸೌಂದರ್ಯದ ನಾಶಕ ತತ್ವವೆಂಬುದು ಇಲ್ಲಿನ ಘನ ಗ್ರಹಿಕೆಯಾಗಿದೆ. ಮತ್ತು ಇದು ರಾಜಕೀಯ ಪರಿಹಾರದ ಆಗ್ರಹದಂತೆಯೂ ಅಷ್ಟೇ ಏಕೆ ಆಧ್ಯಾತ್ಮಿಕ ಪರಿಹಾರದ ಆಗ್ರಹದಂತೆಯೂ ನಿರೂಪಿತಗೊಳ್ಳುತ್ತದೆ.

‘ದಕ್ಲ ಕಥಾದೇವಿ ಕಾವ್ಯ’ ದಲ್ಲಿ ಕಾಣುವ ದುರ್ಗತಿಯ ಚಿತ್ರ (ಪುಟ : 37)

 

ತಿನ್ನಲು ಎಲ್ಲಿದೆ ಅನ್ನ? ಅಮೇಧ್ಯವೇ ಗತಿ

ಕುಡಿಯಲು ನೀರೂ ಇಲ್ಲ ಪಾಷಾಣವೇ ಗತಿ

ಆಕಾಶದಿಂದಿತ್ತ ಏನು ಗತಿ ? ಎಲ್ಲಿ ಆ ಪಶುಪತಿ ?

ಜೋಳಿಗೆ ತುಂಬಿದ ಭಿಕ್ಷದ ಕಾಳು

ಮೊಳಕೆಯೊಡೆದ ನಕ್ಷತ್ರಗಳು.

 

ಮೇಲೆ ತಂದಿಟ್ಟಿರುವ ಸಾಲುಗಳು ಕಾವ್ಯದ ಆಯಕಟ್ಟಿನ ಜಾಗಗಳಿಂದ ಎತ್ತಿಕೊಂಡಂತಹವು. ಮುಟ್ಟುವಿಕೆ, ಮುಟ್ಟಿನ ಸೂತಕ, ಮುಟ್ಟಿನ ನಿಷೇಧ ಇಲ್ಲಿ ಕೊನೆಗಾಣದ ವಿಪ್ಲವಗಳಿಗೆ ಕಾರಣವಾಗುತ್ತದೆ.

ಇಲ್ಲಿ ಹೆಣ್ಣು ಮತ್ತು ತೀವ್ರ ಸ್ವರೂಪದ ಅಸ್ಪೃಶ್ಯತೆಗೆ ಈಡಾದ ದಕ್ಲನ ರೂಪಕಗಳು ಕೇಂದ್ರದಲ್ಲಿ ನಿಲ್ಲುತ್ತವೆ. ಈ ಕಾವ್ಯದ ಮತ್ತೊಂದು ಕೇಂದ್ರ ಗಮನ ಹಸಿವಿನದು. ಹಸಿವು ಎಂಥ ಭೀಕರ ಮಾನವ ಸಂಕಷ್ಟಕ್ಕೆ ಎಡೆಕೊಟ್ಟಿದೆಯೆಂಬುದನ್ನು ಮನಗಾನಲು ನಾವು ಕನ್ನಡದಲ್ಲಿ ಕೆ.ಬಿ.ಯವರ ಕಾವ್ಯಕ್ಕೆ ಬರಬೇಕೆನ್ನಿಸುತ್ತದೆ. ಅಂತಹ ಹಸಿವನ್ನೂ, ಆ ದಾರುಣ ವಾಸ್ತವವನ್ನೂ ಮಿಂಚಿನಂತೆ ಈ ಕಾವ್ಯ ಕಾಣ ಸುತ್ತಲೇ ಹೋಗುತ್ತದೆ. 

ಬಕಾಲದಲ್ಲೇ ಈ ತಲ್ಲಣ ಸುವ ನೋಟಗಳಿವೆ.

ಅಂಚಿನ ಸಿಡಿಗಾಳ ಉಗುರ ಕಣ್ಣಲಿ

ಆಯ್ದು

ಸೆರಗ ತುದಿಯಲಿ ಗಂಟಿಕ್ಕಿ ತಂದು

ಎರಡು ಕಾಲಸಂದಿಗೆ ತಲೆ ಯಿಕ್ಕಿ

ಕುಂತು

ಬಾಯ ಮುಕ್ಕಳಿಸಿ ಕಾಸಿದ

ಅಂಬಲಿ

ಒಂದೇ ಗುಟುಕು, ಒಂಬತ್ತು ಬಾಯಿಗಳು

ತೆರೆದೊ

ಯಾವ ಬಾಯಿಗೆ ಸೆರಗು

ಯಾರ ಬಾಯಿಗೆ ಅಂಬಲಿ ?

 

ಅವರ ಮೊದಲ ಕಾವ್ಯ ‘ಬಕಾಲ’ದಲ್ಲಿ ಮೇಲಿನ ಸಾಲುಗಳಿವೆ. ‘ಯಾವ ಬಾಯಿಗೆ ಸೆರಗು, ಯಾರ ಬಾಯಿಗೆ ಅಂಬಲಿ?’ ಎಂಬ ಘನ ಪ್ರಶ್ನೆಯಲ್ಲಿ, ಕೇಳಬೇಕಾದ ಪ್ರಶ್ನೆಯಲ್ಲಿ ಬಹುಶಃ ಕೆ.ಬಿ. ಕಾವ್ಯ ಆರಂಭವಾಗಿದೆ ಅನ್ನಿಸುತ್ತದೆ. ಅದು ಇತ್ತೀಚಿನ ಖಂಡಕಾವ್ಯ ‘ಗಲ್ಲೆಬಾನಿ’ಯ ತನಕ ಮುಂದುವರಿಯುತ್ತಲೇ ಬಂದಿದೆ.

‘ದಕ್ಲಕಥಾ…’ ದಲ್ಲಿ ಕೇಳುವ ‘ತಿನ್ನಲು ಎಲ್ಲಿದೆ ಅನ್ನ? ಅಮೇಧ್ಯವೇ ಗತಿ’ ಎಂಬ ಸಾಲುಗಳು ಆಳದ ಕ್ರುದ್ಧತೆಯಲ್ಲಿ ಹುಟ್ಟಿದ ಸಾಲುಗಳು. 

ಕೊನೆಯ ಮನುಷ್ಯನನ್ನು ಕಂಡುಕೊಳ್ಳಲು ಹೊರಟ ಪಯಣದಂತೆಯೂ ಸಿದ್ದಯ್ಯನವರ ಕಾವ್ಯವನ್ನು ನೋಡಲು ಸಾಧ್ಯ ಎಂಬುದನ್ನು ನಾವು ‘ದಕ್ಕಲ’ನ ಕಥನವನ್ನು ಧ್ಯಾನಿಸುವಲ್ಲಿ (ದಕ್ಲ ಕಥಾ ದೇವಿ ಕಾವ್ಯ) ಸೂಳೆಯ ಸಾವಿನ ವೃತ್ತಾಂತವನ್ನು ಸಂವೇದನೆಯ ಕೇಂದ್ರಕ್ಕೆ ತರುವ ಮೂಲಕ (ಅನಾತ್ಮ) ದಲ್ಲಿ ಕಾಣಬಹುದು.

ಈ ಅಂಶಗಳು ದಲಿತ ಲೋಕ ಮೀಮಾಂಸೆಯ ಪ್ರಾಣಸ್ಪಂದಿಸುವ ಭಾಗಗಳಾಗಿವೆ.

ಮುಟ್ಟು : 

ಸಿದ್ದಯ್ಯನವರ ಕಾವ್ಯದ ಮತ್ತೊಂದು ಮಹತ್ವದ ಜೀವಗಾಣ್ಕೆ ‘ಮುಟ್ಟು’ವಿಕೆಯ ಕುರಿತದ್ದು. ‘ಮುಟ್ಟುವುದು’ ಇಲ್ಲಿನ ಮುಖ್ಯ. ಏಕೆಂದರೆ, ಮುಟ್ಟದೆ ದೂರ ಇಡುವ ಮೂಲಕ ಹೇಗೆ ಮನುಷ್ಯನೊಬ್ಬನನ್ನು ಹೀನನಾಗಿಸಲಾಗಿದೆ ಎಂಬ ಪ್ರಶ್ನೆ ಇದು ಈ ಕಾವ್ಯ ಈ ಸಾಮಾಜಿಕ ಹೀನ ನಡೆಯನ್ನು ಆದ್ಯಂತ ಆವರಿಸಿ ಪ್ರತಿಭಟಿಸುತ್ತದೆ. ಈ ಪ್ರತಿಭಟನೆಯೇ ಕಾವ್ಯದ ಕೇಂದ್ರ ಧ್ವನಿಯಾಗಿದೆ.

 

ಗಲ್ಲೆಬಾನಿ’ಯಲ್ಲಿ :

ಈ ದೇಹ ನನ್ನ ದೇಹ ಇಡೀ ದೇಹ

ಮುಟ್ಟಬಾರದೆಂದು ಕೇಳಿ

ಕೇಳಿ ಕೇಳಿ ಕಟ್ಟಕಡೆಗೆ

ಮುಟ್ಟಬೇಕೆಂದು ಅರಿತು

ಕಾಯವನ್ನು ಕಾಯಕದಿಂದ 

ವಿಸರ್ಜಿಸಿದೆ

ಮಲ ಮೂತ್ರ ವಿಸರ್ಜಿಸಿದಂತೆ

ದಕ್ಲಮಕ್ಕಳು ಮಾದಿಗರ ಕಣ್ಣಿಗೆ ನಿಶಾಚರರು. ಮಾದಿಗರು ಸಾಕು ತಂದೆ ತಾಯಿ ಎಂದು ತಿಳಿದು ಅವರ ಮನೆಗೆ ವರ್ಷಕ್ಕೆ ಒಂದು ಸಾರಿ ಬಂದು ಹೋಗುವುದು ರೂಢಿ. ಊರಾಚೆ ಮೂರು ದಾರಿ ಕೂಡುವ ಸ್ಥಳದಲ್ಲಿ ನೆಲೆಗೊಂಡಂಥ ಹುಣಸೆ ಮರ, ಮರವಾಗಿ ಹುಟ್ಟಿದೆನಲ್ಲ ಎಂಬ ಕಾರಣಕ್ಕೋ ಏನೋ ಒಂದು ರಾತ್ರಿ ಆ ದಕ್ಲ ಕುಟುಂಬವನ್ನು ತನ್ನ ಹೊಟ್ಟೆಯೊಳಗೆ ಇಟ್ಟುಕೊಂಡು ಸಲಹುವ ದಯಾಮಯಿ. ಮುಖ ಉಯ್ದರೆ ಮುಖ ಕಾಣಬಾರದಂಥ ವೇಳೆಯಲ್ಲಿ ದಕ್ಲ ಕುಟುಂಬ ಧಾವಿಸಿ ಬಂದು ಹುಣಸೆ ಮರದ ಬುಡದಲ್ಲಿ ತಂಗುವುದು. ಊರು ಉಂಡು ಕೆಮ್ಮಿ ಕ್ಯಾಕರಿಸಿ ಮಲಗುವ ಹೊತ್ತಿಗೆ ಹಟ್ಟಿ ಮನೆ ಒಲೆ ಬೆಂಕಿ ಮುಖ ಕಾಣೋದು.

ಹಟ್ಟಿ ಮಧ್ಯದಲ್ಲಿ ನಿಂತು ‘ಯವವ್ವದೋ... ಯಪ್ಪಲೋ... ದಕ್ಲಮಗ ಬಂದವ್ನೆ’, ಎಲ್ಲಾರ ಮನೆಯಿಂದ ಕೂಳಿನಮಡಕೆ ಬರ್ಲಿ ಎಂದು ಕೂಗಾಕುವನು. ಕಟ್ಟೆಮನೆ ಯಜಮಾನನ ಕೂಗಿನ ಪ್ರತಿಧ್ವನಿಯಂತೆ ದಕ್ಲಪುರುಷ ತನ್ನೊಳಗಿನ ಸಕಲ ಶಕ್ತಿಯನ್ನು ಒಗ್ಗೂಡಿಸಿ ‘ಯಪ್ಪದೋ........ ಯವ್ವಲೋ........ಸಾಕುಮಗ ಬಂದಿದ್ದೀನಿ ಕಣ್ರವ್ವೋ’ ಎಂದು ಕೂಗು ಮುಗಿಸುವನು. 

 

ಸ್ತ್ರೀ ಘಾತ :

ಹೆಣ್ಣಿನ ಮೇಲಿನ ಘೋರ ಆಕ್ರಮಣವನ್ನು ಈ ಕಾವ್ಯ ಅಪರಿಹಾರ್ಯ ದೌರ್ಜನ್ಯವೆಂಬಂತೆ ಗುರ್ತಿಸಿ ತಲ್ಲಣ ಸುತ್ತದೆ. ಬಕಾಲದ ‘ಗಿಡಬಾಲೆ’ಯ ಚಲನವಲನದೊಂದಿಗೆ ಒಡನಾಡಿಯಾಗಿ ಸಂಭ್ರಮಿಸುವ ಕಾವ್ಯಾರಂಭ ‘ಸೂಳೆಯ’ ಸಾವಿನ ಸುದ್ದಿಯನ್ನು, ಅದರ ಸಾಮಾಜಿಕ ದುರಂತವನ್ನು ಮೀರಿ ದಕ್ಕಿರುವ ಆಧ್ಯಾತ್ಮಿಕ ದರ್ಶನಕ್ಕೊಯ್ಯುವ ಮೂಲಕ ಪ್ರತಿಭಟನೆಗೆ ಒಂದು ಪಾರಮಾರ್ಥಿಕ ಆಯಾಮ ತರುತ್ತದೆ.

‘ಅನಾತ್ಮ’ದಲ್ಲಿ ಈ ಸಾಲುಗಳಿವೆ.

ನಿಲ್ಲು ನಿಲ್ಲು ದೂರ ನಿಲ್ಲು

ಮುಟ್ಟಾದ ಹೆಣ್ಣು ನೀನು

ಹೋಗು ಹೋಗು ದೂರ ಹೋಗು

ವಾಯುದೇವನ ಹೆಗಲನೇರಿ

ತೇಲಿ, ತೇಲಿ, ತೇಲಿ ಹೋಗು

ಜಲವ ಮುಟ್ಟಿ ಕುಲವ ಗೆದ್ದು

ಮದ್ಯ ಕುಡಿದು ಅಮೇಧ್ಯ ತಿಂದು

ಬಳಿಕ ಬದುಕಿ

ಒಳಗೆ ಬಾ.


 ‘ಗಲ್ಲೆಬಾನಿ’ಯಲ್ಲಿ ಈ ಸಾಲುಗಳಿವೆ.

ಯಾರು ಯಾರಲಾ ತಾಯಿ

ನಿನ್ನ ತೊಡೆಗಂಭದ ಮೇಲೆ

ಬಾಸುಂಡೆಗಳ ಬಿಡಿಸಿದವರು

ಹಸಿರ್ಹೆಪ್ಪುಗಟ್ಟುವಂತೆ

ಯೋನಿಮೊಲೆಗಳ ಮೇಲೆ

ಸುಟ್ಟಗಾಯಗಳ ಕೆತ್ತಿದವರು.

 

‘ಅನಾತ್ಮ’ದಲ್ಲಿ

 

ಪ್ರಾತಃಕಾಲದಲ್ಲಿ

ಸಾವಿನ ಸುದ್ದಿ ಬಂತು

......

ಯಾರ ಸಾವು... ಮಂತ್ರಿಯದೊ

ಮುಖ್ಯಮಂತ್ರಿಯದೊ

ಪ್ರಧಾನಮಂತ್ರಿಯದೊ ಎಂದು ಕೇಳಿತು

 

ಇಲ್ಲ, ಇಲ್ಲ, ಇಲ್ಲ

ನಾನು, ಅವರು, ನೀವು

ಇನ್ನೂ ಸತ್ತಿಲ್ಲ.

 

ಇದು ಊರ ಸೂಳೆಯ ಸಾವು

ಸುಖವನರಿಯದ ಸೂಳೆ ಸತ್ತರೆ

ಕಣ್ಣೀರಕೋಡಿ ಹರಿಸುವುದೆ?

ಸೂಳೆಯ ಸಾವು ಸುಮ್ಮನೆ

ಬೆಚ್ಚಗೆ ಹರಿಯುತ್ತಿದೆ

ಊರದೇಹದ ನರನಾಡಿಗಳಲ್ಲಿ

ರಕ್ತದಂತೆ.

 

ಸೂಳೆಯ ವೃತ್ತಾಂತ ಕಾವ್ಯದ ಒಡಲಿನಿಂದ ಧಿಗ್ಗನೆದ್ದು ಪೂರ್ಣ ಪ್ರಮಾಣದಲ್ಲಿ ಬೆಂಕಿಯಂತೆ ಅರಳಿ ನಿಲ್ಲುತ್ತದೆ. ಸೂಳೆಯ ಮೇಲಿನ ಪುರುಷಾಕ್ರಮಣ ತನ್ನ ವಿಕಾರ ಅವತಾರ ತಾಳುತ್ತದೆ. ಅದು ಈ ಥರವಾಗಿ ಗತಿ ಕಾಣುತ್ತದೆ.

 

ಹಾಳು ಬಾವಿಗೆ ಮಗುಚಿಕೊಂಡ

ಊರು ಸೂಳೆಗೆ,

ಆಳಿಗೊಂದು ಕಲ್ಲು ಎಸೆದರು

ಕಲ್ಲು ಕಲ್ಲು ಕೂಡಿ ಗುಟ್ಟೆ

ಗುಟ್ಟೆ ಗುಟ್ಟೆ ಕೂಡಿ ಬೆಟ್ಟ

ಬೆಟ್ಟ ಬೆಟ್ಟ ಬೆರೆತು ಪರ್ವತ

ಪರ್ವತದ ನಡುನೆತ್ತಿ ಬಾಯಿಂದ

ಊರುಸೂಳೆ ಕತ್ತನೆತ್ತಿ

ಸುತ್ತಮುತ್ತ ನೋಡುತ್ತಾಳೆ

ಎತ್ತ ನೋಡಿದರೂ ದಾರಿ ಇಲ್ಲವಣ್ಣ

ಓಂ ಗುರುಸಿದ್ಧ !

‘ಹುತ್ತದೊಳಗೆ ಒಂದು ಸರ್ಪ’

ತಲೆಯೆತ್ತಿ ನೋಡುತಲಿಹುದು

ಎತ್ತ ನೋಡಿದರೂ ದಾರಿ ಇಲ್ಲವಣ್ಣ

ಓಂ ಗುರುಸಿದ್ಧ |

 

ಬಿಡುಗಡೆ ಆಹ್ಲಾದ : ಅಕ್ಷರ ಮತ್ತು ಕಾವ್ಯನಾಟ್ಯ

‘ಅಕ್ಷರ’ ಇಲ್ಲಿನ ಸಂಭ್ರಮದ ಕೇಂದ್ರ. ಸಮಸ್ತ ಸಂಕಟಗಳೂ ಇಲ್ಲಿ ಅಕ್ಷರದೆದುರು ತಹಬಂದಿಗೆ ಬಂದಂತೆ ಕಾಣುತ್ತದೆ. ಅಕ್ಷರದೆದುರು ಇಲ್ಲಿನ ಆಧ್ಯಾತ್ಮಿಕ ಬಿಡುಗಡೆಯ ಭಾವ ಗೀತವಾಗಿ ಹೊಮ್ಮುತ್ತದೆ. ಬಹುಶಃ ಈ ಕಾವ್ಯದ ಲೋಕ ಮೀಮಾಂಸೆಯ ಅತ್ಯಂತ ಹಸುರಾದ ಸಾಂತ್ವನದ ಭಾಗ ಇದೇ ಎನ್ನುವಂತೆ ಕಾಣುತ್ತದೆ.

 

ಅತ್ತಲೂ ಇತ್ತಲೂ ಎತ್ತಲೂ

ಚೆಲ್ಲಿದ ಕತ್ತಲು

ನೆತ್ತಿ ಮೇಲೆ ಉಸಿರು ಗಂಭ

ಮಿಂಚುಳ್ಳಿ ಸಂತೆ ಸುತ್ತಲೂ

ಹಾಲುಗೆನ್ನೆ ಸಣ್ಕಲು ಹುಡುಗನ

ಅಂಗೈಯಗಲ ಗಂಗಳದೊಳಗೆ

ಮಿಣುಕು ಮಿಣುಕು ಮಿಣುಕು ಬೆಳಕು

ಬೀಜ ಬಿತ್ತೊ ಅಕ್ಷರ

ಅನ್ನಾಕ್ಷರ, ಚಿನ್ನಾಕ್ಷರ

ಬಿನ್ನಹಕ್ಕೆ ಬಾಯಾದ ಅಕ್ಷರ

ಮುಟ್ಟು ಮುಟ್ಟು ಅಕ್ಷರ

ನೀ ಮುಟ್ಟದಿರು ಅಕ್ಷರ

ಬಾರೊ ಬಾರೊ ಅಕ್ಷರ

ನೀ ಬಂದೋ ಗೊ ಅಕ್ಷರ (ಗಲ್ಲೆಬಾನಿ)

 

ಆರಂಭದಲ್ಲಿ ನಾನು ಕೆ.ಬಿ. ಸಿದ್ದಯ್ಯನವರ ಕಾವ್ಯದ ಅಲೆಮಾರಿತನವನ್ನು ಇಚ್ಛಿತ ಅರಾಜಕತೆ ಎಂದು ಕರೆದರೆ. ಈ ಅರಾಜಕತೆಯೊಳಗೆ ಒಂದು ಸುಸ್ಥಿರ, ಜೀವಪರ ರಾಜಕಾರಣವಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ.

 

ಈ ಕಾವ್ಯದ ಮೂಲಸೆಲೆ ಹಸಿವು ಮತ್ತು ಸ್ತ್ರೀಯ ಶೋಕದ ಕೇಂದ್ರಗಳಲ್ಲಿದೆ. ಮುಟ್ಟುವಿಕೆಯ ನಿರಾಕರಣೆಯ ಆದಿಮ ದುಃಖದಲ್ಲಿದೆ. ಇದು ಸತತವಾಗಿ ಹುಟ್ಟು, ಮರುಹುಟ್ಟುಗಳಾಗಿ ಎಚ್ಚೆತ್ತು ಕಾವ್ಯದ ರಾಜಕಾರಣವನ್ನು ಜೀವಂತವಾಗಿರಿಸಿದೆ.

ಹೀಗಾಗಿ ಇದು ಯಾರ ಹಂಗೂ ಇಲ್ಲದೆ ಅಲೆವ, ಲೋಕದ ಈ ಹಂಗು ತೊರೆದ ಕಾವ್ಯಕ್ಕೆ, ಈ ನಿಷ್ಠುರ ನೋಟಗಳ ನಿಷ್ಠುರ ನುಡಿಯ ಕಾವ್ಯಕ್ಕೆ ಕಾರಣಗಳಿವೆ. ಆ ಕಾರಣಗಳು ಮೂಲತಃ ಆಧ್ಯಾತ್ಮಿಕವಲ್ಲ, ಧಾರ್ಮಿಕವಲ್ಲ… ಮತ್ತಿನ್ಯಾವುದೂ ಅಲ್ಲ. ಅದು ಮೂಲತಃ ದಾರುಣ ಸಾಮಾಜಿಕತೆಯದು ಎಂದು ಈ ಅಭ್ಯಾಸ ಕಂಡುಕೊಂಡಿದೆ. ಈ ಸಾಮಾಜಿಕ ಅನುಭವ ಇಲ್ಲಿನ ಮಾನವ ಚೇತನಕ್ಕೆ ಆಳವಾದ ಗಾಯ ಮಾಡಿದೆ. ಈ ಗಾಯಕ್ಕೆ ಮದ್ದಿಲ್ಲ ಎಂಬಂತೆ ಇಲ್ಲಿನ ವ್ಯಾಧಿ ಭುಗಿಲೇಳುತ್ತದೆ. ಇದು ಒಂದು ರೀತಿ ಕ್ರುದ್ಧತೆಯಿಂದಾದ ವ್ಯಾಧಿಗ್ರಸ್ತತೆ. ಈ ಸಾಮಾಜಿಕ ಮೂಲದ ಕಾರಣಗಳು ಇಲ್ಲಿನ ಮೂಲಭೂತ ಕುರೂಪಕ್ಕೆ ಕಾರಣ ಎಂಬ ಅಪ್ರಜ್ಞಾಪೂರ್ವಕ ಅರಿವೇ ಇಲ್ಲಿನ ಸಂವೇದನೆಯನ್ನು ಸೌಂದರ್ಯಶೀಲವಾಗಿಸಿದೆ. ಈ ಕಾವ್ಯದೇಹದ ಎಲ್ಲೇ ಮುಟ್ಟಿದರೂ ಸೌಂದರ್ಯವೇ ಒಸರುವಂತಿದೆ. ಆ ಸೌಂದರ್ಯವೆಂತಹದು? ಅದು ಮಾನವೀಯತೆಯ ಸೌಂದರ್ಯ. ಅದು ಈ ಕಾವ್ಯದ ಪ್ರಾಣತಂತ್ರದಂತಿದೆ.

 

“ನಿಮ್ಮೆದೆಯ ಕವಲುಗಳಲ್ಲೇನು ಚಿಗುರು?

ಉಗುರು ಉಗುರಿಗೂ ಹೂವುಗಳು

ಹೂದುಂಬಿದ ಕಂಕುಳೆತ್ತಲಾಗದು

ಇಳಿಸಲಾಗದು

ಗೊಂಚಲು ಗೊಂಚಲೇ ಕತ್ತರಿಸಿಕೊಳ್ಳಿ.   (ಬಕಾಲ)


 

ಊರಾಚೆ ಮೂರು ದಾರಿ ಕೂಡುವ ಸ್ಥಳದಲ್ಲಿ

ನೆಲೆಗೊಂಡಂಥ ಹುಣಸೆಮರ ಮರವಾಗಿ

ಹುಟ್ಟಿದೆನಲ್ಲಾ ಎಂಬ ಕಾರಣಕ್ಕೋ ಏನೋ

ಒಂದು ರಾತ್ರಿ ಆ ದಕ್ಲ ಕುಟುಂಬವನ್ನು ತನ್ನ

ಹೊಟ್ಟೆಯೊಳಗೆ ಇಟ್ಟುಕೊಂಡು ಸಲಹುವ

ದಯಾಮಯಿ ಮುಖ ಉಯ್ದರೆ ಮುಖ

ಕಾಣಬಾರದಂಥ ವೇಳೆಯಲ್ಲಿ (ದಕ್ಲದೇವಿ ಕಥಾಕಾವ್ಯ)


 

ಒಂಭತ್ತು ಮಹಡಿಗಳು ಒಂಭತ್ತು

ಇರುವ ಕಟ್ಟಡವು

ಇರುವೆ ಎಂಭತ್ತು ಕೋಟಿ

ಜೀವರಾಶಿಗಳೊಳಗೆ

ಇರುವ ಕಟ್ಟಡಕೆ

ಒಂಭತ್ತು ಕಂಗಳು ಒಂಭತ್ತು. (ಅನಾತ್ಮ)

 

ಈ ಬಗೆಯಲ್ಲಿ ಈ ಕಾವ್ಯ ಶಬ್ದನೃತ್ಯದಲ್ಲಿ ತಲ್ಲೀನವಾಗುತ್ತದೆ. ಬಹುಶಃ ಇದೇ ಈ ಕಾವ್ಯದ ಪರಿಹಾರಾತ್ಮಕ ಆಯಾಮವಾಗಿದೆ.


 

  - ಡಾ. ಕೆ.ಪಿ. ನಟರಾಜ

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...