ದೇಸಿತನದ ಸಿಹಿಯ ಹೂರಣ `ನಿರುದ್ಯೋಗಕ್ಕೆ  ಹೆಣವಾದ ಅಪ್ಪ'


ಆನಂದ ಎಸ್. ಗೊಬ್ಬಿ ಅವರ ‘ನಿರುದ್ಯೋಗಕ್ಕೆ ಹೆಣವಾದ ಅಪ್ಪ’ ಕತಾ ಸಂಕಲನದಲ್ಲಿ ಸಮಾಜದಲ್ಲಿನ ಪ್ರತಿಬಿಂಬವಾಗಿ ಚಿತ್ರಿತವಾಗಿರುವ ಕತೆಗಳಿವೆ. ಅವರ ಈ ಕೃತಿಗೆ ಖುಷಿಯಿಂದಲೇ ಲೇಖಕ ಅಮರೇಶ ನುಗಡೋಣಿ ಅವರು ಮುನ್ನುಡಿ ಬರೆದಿದ್ದು ನಿಮ್ಮ ಓದಿಗೆ.


ಶರಣರ ನಾಡು ಮತ್ತು ಸಗರ ನಾಡು ಎಂದು ಹೆಸರಾದ ಯಾದಗಿರಿ ಪ್ರದೇಶದವರಾದ ಆನಂದ ಎಸ್. ಗೊಬ್ಬಿ ಅವರು ಇತ್ತೀಚಿಗೆ ಒಂದು ಕತಾ ಸಂಕಲನವನ್ನು ತರುವ ಯೋಚನೆ ಮಾಡಿ ನನ್ನನ್ನು ಸಂಪರ್ಕಿಸಿ ಸರ್ ನನ್ನ ಕತಾ ಸಂಕಲನಕ್ಕೆ ನಿಮ್ಮದು ಒಂದು ಮುನ್ನುಡಿ ಬರೆದು ಹಾರೈಸಿ. ಎಂದಾಗ ನಾನು ಖುಷಿಯಿಂದಲೇ ಆಗಲಿ ಕಳುಹಿಸಿಕೊಡಿ ಎಂದು ಹೇಳಿದೆ. ಈಗ ಆ ಕಥೆಗಳ ಕುರಿತು ನಾಲ್ಕು ಮಾತನ್ನು ಹೇಳುವೆ.
ಈ ಭಾಗವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ,ಆರ್ಥಿಕವಾಗಿ ,ಹಿಂದುಳಿದ ಪ್ರದೇಶ ಎಂದು ಗುರುತಿಸಿಕೊಂಡಿದೆ. ಆದರೆ ಸಾಹಿತ್ಯಿಕವಾಗಿ ಇದಕ್ಕೆ ಅದರದೇ ಆದ ಹಿನ್ನೆಲೆ ಇದೆ. ವಚನ ಸಾಹಿತ್ಯ ಆರಂಭಗೊಂಡಿದ್ದೇ ಜೇಡರ ದಾಸಿಮಯ್ಯನಿಂದ. ಅವರು ಯಾದಗಿರಿ ಜಿಲ್ಲೆಯ ಮುದನೂರಿನವರು, ಅದೇ ರೀತಿ ಈ ಭಾಗದಲ್ಲಿ ಅನೇಕ ತತ್ವಪದಕಾರರು ಬಂದು ಹೋಗಿದ್ದಾರೆ. ಆ ಭಾಗದ ಯುವ ಕಥೆಗಾರ ಆನಂದ ಎಸ್ ಗೊಬ್ಬಿ ಅವರು. ಇವರ "ನಿರುದ್ಯೋಗಕ್ಕೆ ಹಣವಾದ ಅಪ್ಪ" ಕಥಾಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಎಲ್ಲವೂ ಹೊಸತನದಿಂದ ಕೂಡಿದ ಸ್ಥಳೀಯ ಜ್ಞಾನ ಸಂಯಮ ಕಥೆಗಾರರ ಲೇಖನಿಯಲ್ಲಿ ಮೂಡಿ ಬಂದಿವೆ. ದೇವಿಪುರ ಗ್ರಾಮ ಪಂಚಾಯಿತಿ ಕಥೆಯು, ಇಂದಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಹಳ್ಳಿಗಳು ಎಂದರೆ ಸಮಸ್ಯೆಗಳ ಆಗರ ಎಂದು ಹೇಳಬಹುದು. ಎಲ್ಲವೂ ಉಳ್ಳವರ ಮೂಲಕ ನಡೆಯುತ್ತಿರುತ್ತವೆ. ಅದೇ ರೀತಿ ಈ ದೇವಿಪುರವೂ ಕೂಡ. ಸಿದ್ದಪ್ಪ ಗೌಡರ ಅಣತಿಯ ಮೇರೆಗೆ ಎಲ್ಲವೂ ಮತ್ತು ಎಲ್ಲರೂ ನಡೆಯಬೇಕಾದ ಪ್ರಸಂಗ ಇರುತ್ತದೆ. ಊರಲ್ಲಿ ನಡೆಯುವ ಹಬ್ಬಗಳು ಇತ್ತೀಚಿಗೆ ಜಾತಿಯಿಂದ ಜಗಳದ ದಾರಿ ಹಿಡಿದಿರುವುದನ್ನು ಕಥೆಗಾರರು ಸೂಕ್ಷ್ಮವಾಗಿ ಗಮನಿಸಿ ಹೇಳುತ್ತಾ ಹೋಗುತ್ತಾರೆ. ಹಿಂದೂ-ಮುಸ್ಲಿಂ ಸಂಬಂಧಗಳು ಇಂದಿನ ಸಂದರ್ಭದಲ್ಲಿ ಹದಗೆಡುತ್ತಿರುವುದು ಕಾಣಿಸುತ್ತದೆ.ಒಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಕಾಣದೆ ಹಳ್ಳ ಹಿಡಿದಿರುವುದು ಅಂತೂ ಗ್ಯಾರಂಟಿ.

ಎಲ್ಲಾ ಕಥೆಗಳಲ್ಲೂ ಸಾಮಾನ್ಯವಾಗಿ ಲೇಖಕ ಒಂದು ಪಾತ್ರವಾಗಿ ಬಂದು ಹೋಗುತ್ತಾನೆ. ನಿರೂಪಣೆಯ ಶೈಲಿ ಕರಗತವಾಗಿದೆ. ತನ್ನ ಊರು ಮತ್ತು ತನ್ನ ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ, ಅನೈತಿಕ ಚಟುವಟಿಕೆಗಳನ್ನು ಕೆಲವು ಕಥೆಗಳ ಮುಖ್ಯ ಆಕರವನ್ನಾಗಿ ಬಳಸಿಕೊಂಡಿದ್ದಾರೆ. ಜಾತೀಯತೆಯ ಪ್ರಶ್ನೆ ಎದ್ದುಕಾಣುತ್ತದೆ. ಅವರ "ಆಲದ ಮರ" ಕಥೆಯಲ್ಲಿ ಬರುವ ಎತ್ತು ಕೆಳಜಾತಿಯವರದ್ದು ಎಂದು ಅದನ್ನು ಮಾರುವುದು, ನಂತರ ಮನೆ ಅನೇಕ ಸಂಕಷ್ಟಗಳನ್ನು ಅನುಭವಿಸಿ ಕೊನೆಗೆ ನಿಧಿಯ ಆಸೆಗಾಗಿ ಮಗನನ್ನು ಬಲಿಕೊಡುವುದು. ಇವೆಲ್ಲಾ ಇಂದಿನ ಸಮಾಜದಲ್ಲಿ ನಡೆಯುವ ದೊಡ್ಡ ದುರಂತಗಳು ಎಂದು ಹೇಳಬಹುದು. ರಾಮಯ್ಯ ಸಂತೆಯಲ್ಲಿ ಒಂದು ಎತ್ತನ್ನು ಖರೀದಿಸಿ ತರುತ್ತಾರೆ. ಅದು ಬೇಸಾಯಕ್ಕೆ ಉಳುಮೆ ಮಾಡಲು ಎತ್ತಿದ ಕೈ . ಆದರೆ ಅದು ಕೆಳಜಾತಿಯ ಮನೆತನದ ಎತ್ತು ಎಂದು ತಿಳಿದ ತನ್ನ ಹೆಂಡತಿಯಾದ ನಿಂಗಿ ರಂಪ ಮಾಡುತ್ತಾಳೆ "ಏನ್ ಮಾಡೋದು ಬ್ಯಾಡ, ಕೇಳದು ಬೇಡ ಮೊದಲು ಸಣ್ಣ ಜಾತಿಯವರ ಎತ್ತನ್ನು ಬಂದ ರೊಕ್ಕದಾಗ ಸಾಗಾಕ್ಕಿ ಮೈತೊಕ್ಕ. ನಾನು ಪೂಜೆ ಮಾಡಿದ್ನೆವ್ವಾ... ತಾಯಿ. ಮನೆಯೆಲ್ಲಾ ಮೈಲಿಗೆ ಆಯ್ತು" ಎಂದಳು.

"ಅಯ್ಯಾ ನಿನ್ನ ದಿಕ್ಕೇಡಿ, ದಿಕ್ಕೇಡಂತ. ನಾವು ಬಡವರೇ ಇರಬಹುದು. ಜಾತ್ಯಾಗ ಜಾತಿ ಇದೀವಿ. ಎತ್ತಿನ ಸಲಗ ಜಾತಿನ ಬುಡಾಕ ಆಗ್ತದೇನು. ಪದ್ಧತಿ ಕೆಡಿಸ್ಯಾಕ ಆತ್ತದೇನು ನಡಿ ನಡಿ ಇದನ್ನ ಸಾಗಾಕ್ಕು" ಎಂದಳು. ಮುಂದೆ ರಾಮಯ್ಯ ಅನೇಕ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಈ ಕಥೆಯು ಲಂಕೇಶ್ ಅವರ "ಮುಟ್ಟಿಸಿಕೊಂಡವನು" ಕಥೆಯನ್ನು ನೆನಪಿಸುತ್ತದೆ.

ಸಮಾಜದಲ್ಲಿ ಇಂದು ಹೆಣ್ಣು ಏಕಾಂಗಿಯಾಗಿ ಬದುಕಲು ಸಾಧ್ಯವಿಲ್ಲ ಮತ್ತು ಬದುಕಲು ಬಿಡುವುದಿಲ್ಲ ಎಂಬುದನ್ನು "ಗಿರಿಕನ್ಯೆ" ಕಥೆಯಲ್ಲಿ ಕಾಣಬಹುದು. ಕಮಲಮ್ಮ ಗಂಡ ಸತ್ತಿರುವ ಹೆಣ್ಣು ಮಗಳು ಅವಳಿಗೆ ಒಬ್ಬ ಮಗಳು ಇರುತ್ತಾರೆ. ಅವಳನ್ನು ಬಹಳ ಜೋಪಾನದಿಂದ ಕಾಪಾಡುತಿರುತ್ತಾಳೆ. ಊರವರ ಕೆಟ್ಟದೃಷ್ಟಿ ಅವಳ ಮೇಲೆ ಬೀಳದ ಹಾಗೆ ಬೆಳೆಸಿ ಅವಳನ್ನು ಮದುವೆ ಮಾಡಿ ಕೊಡುತ್ತಾಳೆ. ಅವಳಿಗೆ ಗಂಡನ ಜೊತೆ ಇರಲು ಮುಜುಗರ ಆಗ ಅವಳನ್ನು ಅವನು ತವರಿಗೆ ಬಿಟ್ಟು ಹೋದಾಗ, ತಾಯಿಯಾದವಳು ಅವಳನ್ನು ತನ್ನ ಗಂಡನೆಡೆಗೆ ಆಕರ್ಷಣೆ ಮಾಡುವ ತರಬೇತಿ ನೀಡುವುದರ ಮೂಲಕ ಒಬ್ಬ ತಾಯಿಯಾಗಿ ಎಲ್ಲಾ ಪಾತ್ರವವನ್ನು ನಾನು ನಿಭಾಯಿಸಬಲ್ಲ ಎಂಬುದನ್ನು ಕಮಲಮ್ಮನ ಮೂಲಕ ಕಥೆಗಾರರು ನಿರೂಪಿಸಿದ್ದಾರೆ.

ಸಮಾಜದಲ್ಲಿ ಹೊಟ್ಟೆಕಿಚ್ಚು ಇರುವ ಜನರು ಹಲವು ಕಡೆ ಸಿಗುತ್ತಾರೆ ತಮ್ಮ ಮನೆ ನೆಟ್ಟಗಿರಲಿ ಬೇರೆಯವರ ಮನೆ ಹಾಳಾದರೂ ತೊಂದರೆ ಇಲ್ಲ ಎಂದುಕೊಳ್ಳುತ್ತಾರೆ. ಅದರಲ್ಲೂ "ಹುಳಿಮೊಸರು" ಕಥೆಯಲ್ಲಿ ಶಿಲವಂತಪ್ಪ ಹೊಲ-ಮನೆ ಮಾಡಿಕೊಂಡು ನೆಮ್ಮದಿಯಾಗಿ ಜೀವನ ಸಾಗಿಸುತ್ತಿರುತ್ತಾನೆ, ಹೆಂಡತಿ ಮಾನವ ಕೆಲಸ ಕಾರ್ಯದಲ್ಲೂ ಎತ್ತಿದ ಕೈ.ಇವರಿಗೆ ಇಬ್ಬರು ಮಕ್ಕಳು ದೊಡ್ಡ, ಮಲ್ಲಪ್ಪ ಸಣ್ಣ ಮಲ್ಲಪ್ಪ. ಇಬ್ಬರಿಗೂ ಯಾದಗಿರಿ ಬತ್ಯಾಗ ಬರುವ ಮೈಲಾಪುರ ಮಲ್ಲಯ್ಯಗ ನಡಕೊಂಡ ಮೇಲೆ ಜನಿಸಿದ ಕಾರಣ ಈ ಹೆಸರನ್ನು ಇಡಲಾಗುತ್ತದೆ. ಮುಂದೆ ಇವರಿಬ್ಬರಿಗೂ ಮದುವೆ ಮಾಡಲಾಗುತ್ತದೆ.ಹಿರಿಯ ಸೊಸೆ ತುಂಬಾ ಒಳ್ಳೆಯವಳು, ಕಿರಿಯ ಸೊಸೆಗೆ ಗಂಡನನ್ನು ಕಂಡರೆ ಆಗುವುದಿಲ್ಲ ತಂದೆ-ತಾಯಿಯ ಒತ್ತಾಯ ಮೇರೆಗೆ ಮದುವೆ ಆಗಿದ್ದಾಳೆ. ಒಂದು ದಿನ ದನ ಕಾಯಲು ಹೋದಾಗ ಅಲ್ಲಿ ಗಂಡನ ಕಾಲಿಗೆ ಕಲ್ಲು ಹಾಕಿ ಹೋಗಿರುತ್ತಾಳೆ. ಮುಂದೆ ಅದನ್ನು ಪಂಚಾಯತಿಯಲ್ಲಿ ಬಗೆಹರಿಸುವುದಕ್ಕೆ ಬರುತ್ತಾಳೆ. ಶಾಂತಿ ತನಗೆ ಅನಿಸಿದ್ದನ್ನು ನೇರವಾಗಿ ಹೇಳಿ ಪ್ರತಿಭಟಿಸುತ್ತಾಳೆ. ನಮ್ಮ ಸಮಾಜ ಇಂದಿಗೂ ಹೆಣ್ಣುಮಕ್ಕಳ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಎಂಬುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆಯುವ ಹೆಣ್ಣುಮಕ್ಕಳಿಗೆ ಆದರ್ಶವಾಗಿ ಶಾಂತಿ ನಿಲ್ಲುತ್ತಾಳೆ.

 

 

 

 

 

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುವ ಒಂದು ಸಮಸ್ಯೆ ಏನೆಂದರೆ ಆಸ್ತಿ ಕಲಹ ಅಂತ ವಸ್ತುವನ್ನು ಒಂದು ಕಥೆಯನ್ನು ರಚಿಸಿದ್ದಾರೆ. ಅದು "ಒಂದು ಸಾವಿನ ಸುತ್ತ". ಸಾವು ಆದ ಮನೆಯೂ ಸೂತಕದ ಸಂಕೇತವಾಗಿ ಕಂಡುಬರುತ್ತದೆ. ಆದರೆ ಇಲ್ಲಿ ಸಾವಿನ ಸುತ್ತ ಆಸ್ತಿ ಕಲಹದ ಘಟನೆ ಬರುತ್ತದೆ. ಮಲ್ಲಪ್ಪ ಮತ್ತು ಭೀಮವ್ವ ದಂಪತಿಗಳು ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಒಂದು ದಿನ ಭೀಮವ್ವ ಹಾಸಿಗೆ ಹಿಡಿದಾಕೆ ಮೇಲಕ್ಕೆ ಹೇಳಲೇ ಈಲ್ಲ. ಅಲ್ಲೇ ಕಣ್ಮುಚ್ಚಿದಳು. ಮಲ್ಲಪ್ಪ ಅವಳನ್ನು ಉಳಿಸಿಕೊಳ್ಳಲು ಪಡಬಾರದ ಕಷ್ಟಪಟ್ಟಿದ್ದ. ಇದ್ದ ಇಬ್ಬರು ಮಕ್ಕಳಲ್ಲಿ ಹಿರಿಯಮಗ ಹೆಂಡತಿಯ ಮಾತು ಕೇಳಿ ತವರು ಮನೆ ಸೇರಿದ್ದ. ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೆಂಡತಿ ಸಮೇತ ಬಂದಿದ್ದ. ಇಬ್ಬರೂ ಸೊಸೆಯಂದಿರು ಮುಂದೆ ಜಗಳ ಮಾಡುತ್ತಾರೆ. ಆಗ ಅತ್ತೆಯ ಕೊರಳಲ್ಲಿರುವ ಕರೆಳಿ ಮೇಲೆ ಇಬ್ಬಬರ ಕಣ್ಣು ಬಿದ್ದು ಅದು ಯಾರಿಗೇ ಸೇರಬೇಕು ಎಂಬುದೇ ಜಗಳಕ್ಕೆ ಕಾರಣ.ಇದನ್ನು ಗಮನಿಸಿದ ಮಲ್ಲಪ್ಪ ಸೀದಾ ಬಂದವನೇ ಹೆಂಡತಿಯ ಕೊರಳಲ್ಲಿರುವ ಕರೆಳಿ ಕಿತ್ತುಕೊಂಡು ಗೌಡರ ಮನೆಗೆ ಹೋಗಿ ಅದನ್ನು ಒತ್ತೆಯಿಟ್ಟು ಬಂದು ಹೆಂಡತಿ ಶವಸಂಸ್ಕಾರ ನೆರವೇರಿಸುತ್ತಾನೆ. ಮಕ್ಕಳು, ಮರಿ, ಸಂಸಾರ ಸಾಕೆನಿಸಿ ಭಾರಮಾಡಿಕೊಂಡು ದಾರಿ ಕಂಡಂಗ ಭಾರವಾದ ಹೆಜ್ಜೆ ಇಟ್ಟ. ಎಲ್ಲವನ್ನು ಬಿಟ್ಟು ಹೊರಟ ಕಾಣದ ಊರಿಗೆ.

ಶಿಕ್ಷಣ ಎಂಬುದು ಹೆಣ್ಣುಮಕ್ಕಳ ಪಾಲಿಗೆ ದೂರದ ಬೆಟ್ಟ ಎಂಬುದನ್ನು ಎಷ್ಟು ಸತ್ಯ ಮತ್ತು ಶಿಕ್ಷಣ ಪಡೆಯದ ವ್ಯಕ್ತಿಯ ಹೃದಯದಲ್ಲೂ ಕೂಡಾ ಒಳ್ಳೆತನಕ್ಕೆ ಜಾಗ ಇದೆ ಎಂಬುವುದನ್ನು ಸಿದ್ಧ ಎಂಬ ಪಾತ್ರದ ಮೂಲಕ ಈ ಕಥೆಯನ್ನು ಕಟ್ಟಿಕೊಡಲಾಗಿದೆ. ಶಿಕ್ಷಣ ಪಡೆದ ಹುಡುಗಿಯನ್ನು ತನ್ನ ಮನೆಯ ಸೊಸೆಯಾಗಿ ಬರಬೇಕು ಎಂಬುದು ಸಿದ್ದನ ಅಪ್ಪನ ಆಸೆ. ಆದರೆ ಹೊಲದಲ್ಲಿ ದುಡಿಯುವ ನನಗೆ ಯಾಕೆ ಓದಿದ ಹುಡುಗಿ ಎಂದು ಸಿದ್ಧನ ವಾದ. ಆದರೂ ಹತ್ತನೇ ತರಗತಿ ಓದುವ ಹುಡುಗಿಯನ್ನು ಮದುವೆ ಮಾಡಿಕೊಡಲಾಗುತ್ತದೆ. ಮುಂದೆ ಶಿಲವ್ವ ಹತ್ತನೇ ತರಗತಿಯನ್ನು ಉತ್ತಮ ಶ್ರೇಣಿಯಲ್ಲಿ ಪಾಸಾಗುತ್ತಾಳೆ. ಆದರೆ ಅಲ್ಲಿಗೆ ಅವಳ ಶಿಕ್ಷಣಕ್ಕೆ ಬೀಳುತ್ತದೆ. ಕೊನೆಗೆ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆಗ ಮತ್ತೆ ಓದುವ ಹಂಬಲದಿಂದ ಗಂಡ ಮತ್ತು ಮಾವನ ಒಪ್ಪಿಗೆ ಪಡೆದು, ಒಂದು ಟ್ರಸ್ಟ್ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ನಂತರ ಅವಳು ಟ್ರಸ್ಟನ ಅಧ್ಯಕ್ಷರ ಜೊತೆ ಓಡಿ ಹೋಗಿದ್ದಾಳೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಸಿದ್ದ ಬೆಂಗಳೂರಿಗೆ ಪ್ರಯಾಣ ಬೆಳೆಸಿದಾಗ ಬೆಂಗಳೂರಿನಲ್ಲೇ ಸಿದ್ಧನಿಗೆ ಶಿಲವ್ವ ಸಿಗುವಳು. ಅವಳನ್ನು ಮನೆಗೆ ಕರೆದುಕೊಂಡು ಬಂದಾಗ ಸಮಾಜ ಮತ್ತು ಅವಳ ಮಾವನ ದೃಷ್ಟಿಯಲ್ಲಿ ಕೆಟ್ಟವಳು ಆದರೆ ಸಿದ್ದನ ದೃಷ್ಟಿಯಲ್ಲಿ ಮಾತ್ರ ಅವಳು ಒಳ್ಳೆಯವಳೆ. ಸಿದ್ದ ತನ್ನ ಅಪ್ಪನಿಗೆ ಒಂದು ಮಾತನ್ನು ಹೇಳುತ್ತಾನೆ ವ್ಯಕ್ತಿತ್ವ ಅಂಬೋದು ಬಟ್ಟೆ, ಬರೆಯಿಂದ ಬರಲ್ಲ. ನಡಕೊಳ್ಳುವ ರೀತ್ಯಾಗ ಬರ್ತಾದ ಎಂದು ತೋರಿಸಿದ. ಸಿದ್ದನ ದೊಡ್ಡ ಗುಣವನ್ನು ತಂದೆ ಮೆಚ್ಚಿಕೊಂಡ. ಈ ಕಥೆಯು ಮಾಸ್ತಿ ಅವರ "ವೆಂಕಟಿಗನ ಹೆಂಡತಿ" ಕಥೆಯನ್ನು ನೆನಪಿಸುತ್ತದೆ.

ಪ್ರಪಂಚದಲ್ಲಿ ಅತಿ ದೊಡ್ಡ ಸಮಸ್ಯೆ ಎಂದರೆ ಅದು ನಿರುದ್ಯೋಗದ ಸಮಸ್ಯೆ ಎಂಬುದನ್ನು “ನಿರುದ್ಯೋಗಕ್ಕೆ ಹೆಣವಾ ಅಪ್ಪ” ಕತೆಯಲ್ಲಿ ಹೆಣೆದಿದ್ದಾರೆ. ಸಾಮಾನ್ಯವಾಗಿ ಸರಕಾರಿ ಉದ್ಯೋಗದಲ್ಲಿರುವ ತಂದೆ-ತಾಯಿಯರು ಮರಣ ಹೊಂದಿದ ನಂತರ ಅವರ ಉದ್ಯೋಗವನ್ನು ಅವರ ಮಕ್ಕಳಿಗೆ ನೀಡಬೇಕೆಂಬ ನಿಯಮವನ್ನು 1996ರಲ್ಲಿ ಸುತ್ತೋಲೆಯಲ್ಲಿ ಹೊರಡಿಸಲಾಗಿದೆ. ಅದಕ್ಕಾಗಿ ಇಂದು ನಿರುದ್ಯೋಗ ಅನುಭವಿಸುತ್ತಿರುವ ಮಕ್ಕಳು ತಮ್ಮ ಪಾಲಕರನ್ನು ಕೊಲೆ ಮಾಡುವ ಹಂತಕ್ಕೆ ಬಂದು ನಿಂತಿದ್ದಾರೆ. ಅಂತಹ ಒಂದು ಘಟನೆ ಈ ಕಥೆ. ಸಾಗರ ಎಂಬುವ ವ್ಯಕ್ತಿ ಕಾಲೇಜಿನಲ್ಲಿ ಉದ್ಯೋಗ ಪಡೆದು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗ ಮೂರ್ತಿ ಖಾಸಗಿ ಕಂಪನಿ ಸೇರಿ ಅದು ಮುಚ್ಚಿದ ಮೇಲೆ ನಿರುದ್ಯೋಗಿಯಾಗಿ ಅನೇಕ ಚಟಗಳಿಗೆ ದಾಸನಾಗಿ ಸಾಲಗಾರ ಕೂಡ ಆಗಿದ್ದ. ಯಾರೋ ಹೇಳಿದ ಮಾತನ್ನು ಕೇಳಿ ತನ್ನ ತಂದೆಯನ್ನು ಕೊಲ್ಲುವ ಯೋಜನೆಯನ್ನು ಹೆಂಡತಿ ಜೊತೆ ಸೇರಿ ಹಾಕಿಕೊಂಡಿದ್ದ. ಅದಕ್ಕಾಗಿ ದಿನಾಲೂ ಗಂಡ ಹೆಂಡತಿ ಕೂಡಿ ಹಿಂಸಿಸತೊಡಗಿದರು. ಸಾಗರನಿಗೆ ನೆಮ್ಮದಿ ಇಲ್ಲದಾಯಿತು ಒಂದು ದಿನ ಮನೆ ಬಿಟ್ಟು ತನ್ನ ಸ್ನೇಹಿತ ಚಾರ್ಜ್ ಮನೆಗೆ ಹೋದಾಗ ಮಗ ಮೂರ್ತಿ ಪೊಲೀಸ್ ಕಂಪ್ಲೇಂಟ್ ಕೊಟ್ಟು ತಂದೆಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆವತ್ತೇ ಸಿಹಿ ಮಾಡಿಸಿ ಅದರಲ್ಲಿ ವಿಷ ಹಾಕಿ ಕೊಲ್ಲುವ ಯೋಜನೆಯನ್ನು ಮಾಡಿದ್ದ. ಆದರೆ ತನ್ನ ಮಗನ ಕೈಯಲ್ಲಿ ತಾನು ಸಾಯಬಾರದು ಎಂದು ಯೋಚಿಸಿ ಸೀದಾ ತನ್ನ ಕೋಣೆಗೆ ಹೋಗಿ ಅತ್ತು ಕೊನೆಗೆ ಒಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ. ಕೊನೆಗೆ ಸಮಾಜಕ್ಕೆ ಮತ್ತು ಎಲ್ಲಾ ನಿರುದ್ಯೋಗಿ ಯುವಕರಿಗೆ ತನ್ನ ಸಾವು ಒಂದು ಜೀವನ ಪಾಠವಾಗಲಿ ಎಂದು ಹೇಳಿದ.

ಇನ್ನು ಕೊನೆಯ ಕಥೆ ಜಾನಪದ ಶೈಲಿಯ ನಿರೂಪಣೆಯನ್ನು ಹೊಂದಿದೆ. ಅದರಲ್ಲಿ ಬರುವ ಚೆಲುವ ಸಾಹಿತಿ. ಅವನ ಹೆಂಡತಿ ಇಬ್ಬರದು ಅನ್ಯೋನ್ಯವಾದ ಸಂಬಂಧ. ಒಬ್ಬರನ್ನು ಬಿಟ್ಟು ಒಬ್ಬರು ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಹೆಂಡತಿ ಬಾಣಂತನಕ್ಕೆ ತವರಿಗೆ ಹೋದಾಗ ಗಂಡನು ಅವಳನ್ನು ನೋಡಲು ಹೊರಟ ದಾರಿಯ ಪಯಣವೇ "ನಿಜ ಬದುಕಿನ ಪ್ರೀತಿಯ ಪಯಣ" ಎಂಬ ಕಥೆ. ಪಯಣ ಮನುಷ್ಯನನ್ನು ಒಂದು ಹೊಸ ಲೋಕಕ್ಕೆ ಪರಿಚಯ ಮಾಡಿಸುವುದರ ಜೊತೆಗೆ ಹೊಸ ಜನರ ಒಡನಾಟವನ್ನು ಒದಗಿಸುತ್ತದೆ. ಅಂತಹ ಒಂದು ಒಡನಾಟ ಚೆಲುವನಿಗೆ ಚೆಲ್ವಿಯ ಭೇಟಿಯ ಮೂಲಕ ದಕ್ಕುತ್ತದೆ. ಚೆಲ್ವಿಯ ತಂದೆ ಹೇಳಿದ ಜಾನಪದ ಕಥೆಯ ಮೂಲವನ್ನು ತನ್ನ ಗಂಡನ ಕಲ್ಪನೆಯನ್ನು ಚೆಲ್ವಿ, ಚೆಲುವನ ಮೂಲಕ ಕಾಣುತ್ತಾಳೆ. ಪಯಣದ ಹಾದಿಯಲ್ಲಿ ಹಲವು ನೆನಪಿನ ಬುತ್ತಿಯನ್ನು ಹೊತ್ತುಕೊಂಡು ಚೆಲುವ ತನ್ನ ಹೆಂಡತಿಯ ಊರನ್ನು ತಲುಪುತ್ತಾನೆ.

ಮೇಲ್ಕಾಣಿಸಿದ ಕಥೆಗಳನ್ನು ಗಮನಿಸಿದಾಗ ಅದು ಉರಿಯುವ ಜನರ ಬದುಕಿನ ಘಟನೆಗಳನ್ನು ಹೇಳುತ್ತಾ ಹೊಗುತ್ತವೆ. ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಈ ಕಥೆಗಳು ಹೊಂದಿವೆ. ಪ್ರಾದೇಶಿಕತೆಯಿಂದ ಕೂಡಿದ ಆಡುಭಾಷೆ ಕಥೆಗಳಿಗೆ ಸಹಜವಾಗಿ ಒಗ್ಗಿಕೊಂಡಿದೆ. ಅಲ್ಲಿ ಬಳಸುವ ಪದಗಳು ಮತ್ತು ಬೈಗುಳಗಳು ಸಹಜವಾಗಿ ಪಾತ್ರಗಳ ಮೂಲಕ ಮೈತಾಳಿವೆ. ಒಟ್ಟಿನಲ್ಲಿ ಇವರ ಕಥೆಗಳು ಸಮಾಜದಲ್ಲಿನ ಪ್ರತಿಬಿಂಬದಂತೆ ಚಿತ್ರಿತವಾಗಿವೆ. ಎಲ್ಲೂ ಕೂಡಾ ಊಹೆಗೆ ಅವಕಾಶವೇ ಇಲ್ಲ. ಓದುಗರು ಇದರೊಳಗೆ ಪರಕಾಯ ಪ್ರವೇಶ ಪಡೆಯುತ್ತಾರೆ.

ಆ ಭಾಗದಲ್ಲಿ ಇನ್ನೂ ಹೆಚ್ಚಿನ ಕಥೆಗಾರರು ಬೆಳೆಯಲಿ ಅದೇ ರೀತಿ ಆನಂದರವರು ಮೊದಲ ಕಥಾಸಂಕಲನದ ಮೂಲಕ ಸಾಹಿತ್ಯಕ್ಕೆ ಪ್ರವೇಶ ಪಡೆದಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಕಥೆಗಳು ರಚನೆಗಳಲ್ಲಿ ಎಂದು ಹಾರೈಸುತ್ತೇನೆ.

MORE FEATURES

ಅಕ್ಷರಗಳ ಬ್ರಹ್ಮಾಂಡವ ಕಾಣಿಸಿದ ಅರಿವಿನ ಗುರು ‘ಗೀತಾ ವಸಂತ’

20-04-2024 ಬೆಂಗಳೂರು

“ಕಲ್ಪತರು ನಾಡಿನ ಹೆಮ್ಮೆಯ ಸಾಹಿತಿ” ಎಂಬ ಗೌರವ ಪಡೆದ ಡಾ. ಗೀತಾ ವಸಂತ ಮೂಲತಃ ಶಿರಸಿಯವರು. ಎಕ್ಕಂಬಿಯ ಕಾಡ...

ಈ ಪುಸ್ತಕ ಇರಬೇಕಾದದ್ದು ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ

20-04-2024 ಬೆಂಗಳೂರು

`ಪ್ರತಿಯೊಬ್ಬ ಪುಸ್ತಕ ಪ್ರೇಮಿಯ ಮನೆಯಲ್ಲಿ, ಮನದಲ್ಲಿ ಎಂಬ ಆಸೆಯಿಂದಾಗಿ ಹರಿಯುವ ಸ್ಥಿತಿಯಲ್ಲಿದ್ದ ಆ ಹಾಳೆಗಳನ್ನೇ ಚೀಲದಲ...

ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ಕತೆ ಇದೆ

19-04-2024 ಬೆಂಗಳೂರು

'ಹಲವರ ಬದುಕಿನ ಅಕ್ಷಯ ಅನುಭವಗಳಲ್ಲಿ ಕೆಲವು ಮಾತ್ರ ಇಲ್ಲಿ ಅಕ್ಷರವಾಗಿದೆ. ಇಲ್ಲಿ ಇರುವ ಎಲ್ಲರ ತಲೆಯೊಳಗೂ ಒಂದೊಂದು ...