ದೇವರ ದಿನದಂದು ಜೀವನದ ವಿಶ್ಲೇಷಣೆ

Date: 08-08-2022

Location: ಬೆಂಗಳೂರು


“ಕಲಾವಿದ ಪಾಲ್ ಗಾಗಿನ್ ನಮಗೆ ಮುಖ್ಯವೆನಿಸುವುದು ಅವನು ಸರಳತೆಯನ್ನು ಅರಸಿ ತಹಿತಿ ದ್ವೀಪ ಪ್ರದೇಶಕ್ಕೆ ನಡೆದದ್ದು ಮತ್ತು ಅಲ್ಲಿನ ಜನಜೀವನವನ್ನು ತನ್ನ ಕಲಾಕೃತಿಗಳಲ್ಲಿ ದಾಖಲಿಸಿ ಚಿರಸ್ಥಾಯಿಗೊಳಿಸಿದ ಕಾರಣಕ್ಕೆ” ಎನ್ನುತ್ತಾರೆ ಲೇಖಕ ಲಕ್ಷ್ಮಣ ಬಾದಾಮಿ. ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ಫ್ರಾನ್ಸ್ ದೇಶದ ಕಲಾವಿದ ಪಾಲ್ ಗಾಗಿನ್ ಬಗ್ಗೆ ಬರೆದಿದ್ದಾರೆ.

ಕಲಾಕೃತಿ: `ದಿ ಡೇ ಆಫ್ ದಿ ಗಾಡ್’
ಕಲಾವಿದ: ಪಾಲ್ ಗಾಗಿನ್
ಕಾಲ: 1848-1903
ದೇಶ: ಫ್ರಾನ್ಸ್
ಕಲಾಪಂಥ: ಪೋಸ್ಟ್ ಇಂಪ್ರೆಶ್ಶನಿಸಮ್

ಈ ಕೃತಿಯಲ್ಲಿ ನಮ್ಮ ನೋಟ ಮೊದಲಿಗೆ ಹರಿಯುವುದು ಕೃತಿಯ ಮಧ್ಯದ ಮೇಲ್ತುದಿಯಲ್ಲಿರುವ ಪ್ರತಿಮೆಯೆಡಗೆ. ನಂತರ ಚಿತ್ರಭಿತ್ತಿಯ ಕೇಂದ್ರಭಾಗದಲ್ಲಿರುವ ಹೆಂಗಸು ಮತ್ತು ಆಕೆಯ ಎಡಬಲದಲ್ಲಿರುವ ಇನ್ನಿಬ್ಬರತ್ತಲೂ ಆ ನಂತರ ಉಳಿದೆಡೆಗೆ ನೋಟ ಸಾಗುವುದು. ಫ್ರೆಂಚ್ ಪಾಲಿನೇಷನ್ ಪುರಾಣ ಮತ್ತು ಒಂದಿಷ್ಟು ಕಾಲ್ಪನಿಕ ಅಂಶಗಳನ್ನು ಸಂಯೋಜಿಸಿ ಈ ಕೃತಿ ರಚಿಸಲಾಗಿದೆ. ಕೃತಿಯ ಕೇಂದ್ರವಾಗಿರುವ ಪ್ರತಿಮೆ ಹಿನಾ ದೇವಿಯದು ಎನ್ನಲಾಗಿದೆ. ಇನ್ನೊಂದೆಡೆ ಆತ ವಿಶ್ವದ ಸೃಷ್ಟಿಕರ್ತ, ತಾರೋವಾ ಮಾವೊರಿ ಎಂದೂ ಹೇಳಲಾಗಿದೆ. ಈ ವಿಗ್ರಹವು ಸ್ಥಳೀಯ ಶಿಲ್ಪಶೈಲಿಯದ್ದಾಗಿರದೇ ಜಾವಾದ ಬಾರಬುದರ್ ಬೌದ್ಧ ದೇವಾಲಯ ಸಂಕೀರ್ಣಗಳಿಂದ ಆಯ್ದ ಶೈಲಿಯದೆಂದು ಹೇಳುತ್ತಾರೆ. ಒಟ್ಟು ಅದೊಂದು ಆರಾಧ್ಯ ದೈವವಾಗಿದೆ. ಇದನ್ನು ತೀರದ ಬಂಡೆಗಳ ಮೇಲೆ ಪ್ರತಿಷ್ಠಾಪಿಸಲಾಗಿದೆ. ಅಲ್ಲಿಯೇ ಕೇದಗಿಯ ಗಿಡವಿದೆ. ಪ್ರತಿಮೆಯ ಎಡಗಡೆಯಲ್ಲಿ ಇಬ್ಬರು ಹೆಂಗಸರು ದೈವಕ್ಕೆ ಸಲ್ಲಿಸಲು ತಲೆಯ ಮೇಲೆ ಹೊತ್ತುಕೊಂಡು ಉಡುಗೂರೆಯನ್ನು ಕೊಂಡೊಯ್ಯುತ್ತಿದ್ದಾರೆ. ಇತ್ತ ಇನ್ನೊಂದು ಬದಿಯಲ್ಲಿ ಇನ್ನಿಬ್ಬರು ಹೆಂಗಸರು ತಹಿತಿ ಸಂಪ್ರದಾಯದ ನೃತ್ಯದಲ್ಲಿ ತೊಡಗಿದ್ದಾರೆ.

ಮಧ್ಯಭಾಗದಲ್ಲಿರುವ ಮೂವರು ಹೆಂಗಸರ ಚಿತ್ರಣವು ಈ ಪೇಂಟಿಂಗ್‍ಗೆ ಒಂದು ವೈಚಾರಿಕತೆಯನ್ನು ಒದಗಿಸಿದೆ. ಮಲಗಿರುವವರು ಮೇಲ್ನೋಟಕ್ಕೆ ಸುಸ್ತಾಗಿ ಮಲಗಿರಬಹುದು.. ಎಂದೆನಿಸುತ್ತದೆ. ಆದರೆ ವಿಷಯ ಹಾಗಿರದೆ ಅವರುಗಳು ಹುಟ್ಟು-ಸಾವು, ಜೀವನವನ್ನು ಪ್ರತಿನಿಧಿಸುತ್ತಾರೆ ಎಂಬುದಾಗಿದೆ. ಈ ಕಾರಣವೇ ನೋಡುಗನನ್ನು ವಿಚಾರಪರತೆಯತ್ತ ಮುಖ ಮಾಡಿಸುತ್ತದೆ. ನೋಡುಗರಿಗೆ ಬೆನ್ನು ಮಾಡಿ ಮಲಗಿರುವ ಹೆಂಗಸು ಭ್ರೂಣಾವಸ್ಥೆಯನ್ನು ತೋರಿಸುತ್ತಾಳೆ. ಮಧ್ಯದಲ್ಲಿ ಕುಳಿತಿರುವಾಕೆ ಜೀವನವನ್ನು, ಇನ್ನೊಬ್ಬಳು ಸಾವನ್ನು ಪ್ರತಿನಿಧಿಸುತ್ತಾಳೆ. ಮನುಷ್ಯ ಬದುಕಿನ ಬಹುಮುಖ್ಯ ಹಂತ ಹುಟ್ಟು, ಸಾವು ಇದನ್ನು ಸಂಕೇತಿಸುವ ಆಕೃತಿಗಳು ಮಲಗಿರುವುದು ಮತ್ತು ಅದರ ನಡುವಿನ ಜೀವನವನ್ನು ಕಾಣಿಸುತ್ತಿರುವ ಆಕೃತಿ ಎದ್ದು ಕುಳಿತಿರುವುದು ತುಂಬಾ ಅರ್ಥಪೂರ್ಣವಾಗಿದೆ. ದೇವರ ಸನ್ನಿಧಾನ ಒಂದೆಡೆಯಾದರೆ ಅದರ ಎದಿರು ಮನುಷ್ಯ ಜೀವನದ ಸಾರವನ್ನು ಸಾಂಕೇತಿಸುವ ಆಕೃತಿಗಳನ್ನು ಮುಖಾಮುಖಿಯಾಗಿಸಿರುವುದು ಇಲ್ಲಿ ಹಲವು ಜಿಜ್ಞಾಸೆಗಳನ್ನು ಹುಟ್ಟುಹಾಕುತ್ತದೆ.

ಇಲ್ಲಿನ ಮೂರು ಮನುಷ್ಯಾಕೃತಿಗಳ ಹಿನ್ನೆಲೆ, ಮುನ್ನೆಲೆ ವಿಭಿನ್ನವಾಗಿ ಕಾಣಿಸುತ್ತ ರಾಚನಿಕ ಗಮನ ಸೆಳೆಯುತ್ತದೆ. ಪಿಂಕ್ ಬಣ್ಣದ ಮರಳು, ಅದರ ಮುಂದಿನ ಬಹುವರ್ಣದ ನೀರು ಚೇತೋಹಾರಿಯಾಗಿ ಕಾಣಿಸುತ್ತದೆ. ಇಲ್ಲಿನ ನೀರು ಮತ್ತೆಮತ್ತೆ ತನ್ನೆಡೆಗೆ ದೃಷ್ಟಿಯನ್ನು ಸೆಳೆದುಕೊಳ್ಳಲಿಕ್ಕೆ ಕಾರಣ-ಅದರಲ್ಲುಂಟಾಗಿರುವ ಪ್ರತಿಬಿಂಬದ ಆಕಾರಗಳಾಗಿವೆ. ಒಂದೆರಡು ಪುಟ್ಟ ಕಲ್ಲುಬಂಡೆಗಳು ನೀರಿನಿಂದ ಮೇಲೆದ್ದು ಕಾಣಿಸಿದರೆ ಅದರ ನೆರಳು ಮತ್ತು ಆ ಕ್ಷಣದ ಆಗಸದ ಬಣ್ಣ ನೀರಿನಲ್ಲಿ ಕಾಣಿಸಬೇಕಿತ್ತು. ಆದರಿಲ್ಲಿ ಕಾಣಿಸಿಕೊಂಡಿದ್ದು ಹಲವು ಪ್ರತಿಕೂಲ ಬಣ್ಣಗಳು, ಸ್ವಲ್ಪ ಆಗಸದ ನೀಲ ಬಣ್ಣ. ಹಳದಿ, ಬಿಳಿ, ಕೆಂಪು, ಕೇಸರಿ ನೇರಳೆ ಮತ್ತು ಕಪ್ಪು ಬಣ್ಣಗಳು ಹಲವು ಆಕಾರದಲ್ಲಿ ಇಲ್ಲಿ ಹರಿದಾಡಿವೆ. ಈ ವ್ಯತಿರಿಕ್ತ ಬಣ್ಣಗಳು ಮನುಷ್ಯ ಬದುಕಿನ ಸಂಕೀರ್ಣತೆಯನ್ನು ತೋರಿಸುತ್ತವೆ ಎನಿಸುತ್ತದೆ. `ನಾವು ಎಲ್ಲಿಂದ ಬಂದೆವು? ನಾವು ಯಾರು? ನಾವು ಎಲ್ಲಿಗೆ ಹೋಗುತ್ತೇವೆ?’ ಎಂಬ ಹೆಸರಿನ ಇನ್ನೊಂದು ಕೃತಿಯು ಇದೇ ರೀತಿಯ ಚರ್ಚೆಗೆ ನಮ್ಮನ್ನೀಡು ಮಾಡುತ್ತದೆ. ಅಲ್ಲಿಯೂ ಇದೇ ದೇವರ ವಿಗ್ರಹವಿದೆ. `ಹುಟ್ಟು-ಬೆಳವಣಿಗೆ-ಸಾವು’ ಇದರ ರೂಪಕವನ್ನು ಬೇರೆ ರೀತಿಯಲ್ಲಿ ನೀಡಲಾಗಿದೆಯಷ್ಟೇ.

ಕಲಾವಿದ ಪಾಲ್ ಗಾಗಿನ್ ನಮಗೆ ಮುಖ್ಯವೆನಿಸುವುದು ಅವನು ಸರಳತೆಯನ್ನು ಅರಸಿ ತಹಿತಿ ದ್ವೀಪ ಪ್ರದೇಶಕ್ಕೆ ನಡೆದದ್ದು ಮತ್ತು ಅಲ್ಲಿನ ಜನಜೀವನವನ್ನು ತನ್ನ ಕಲಾಕೃತಿಗಳಲ್ಲಿ ದಾಖಲಿಸಿ ಚಿರಸ್ಥಾಯಿಗೊಳಿಸಿದ ಕಾರಣಕ್ಕೆ. ಬಹುಶಃ 19ನೇ ಶತಮಾನದಲ್ಲಿ ದ್ವೀಪ ಪ್ರದೇಶವೊಂದಕ್ಕೆ ತೆರಳಿ ಅಲ್ಲಿಯ ಮೂಲನಿವಾಸಿಗಳ ಸಾಂಪ್ರದಾಯಿಕ ಬದುಕನ್ನು ಚಿತ್ರಣದಲ್ಲಿ ಒಡಮೂಡಿಸಿದ ಮೊದಲ ಕಲಾವಿದ ಗಾಗಿನ್‍ನೇ ಇರಬೇಕು. ಅವನ ಈ ಸರಣಿಯ ಚಿತ್ರಗಳನ್ನು ನೋಡಿದಾಗ Tahiti ದ್ವೀಪದ ಜನಾಂಗದ ಬದುಕು ನಮ್ಮ ಕಣ್ಮುಂದೆ ಬರುತ್ತದೆ. ಎಲ್ಲ ಚಿತ್ರಗಳ ಹಿನ್ನೆಲೆಯಲ್ಲಿ ಕಾಣಿಸಿರುವ ಭೂದೃಶ್ಯಗಳಿಗೆ ಅವನು ನೀಡಿರುವ ಪ್ರಾಮುಖ್ಯತೆಯು Impressionismನ ಅಭಿವ್ಯಕ್ತಿಯಾಗಿದೆ. ವಸ್ತು-ವಿಷಯ ಮತ್ತು ಹಿನ್ನೆಲೆಗಳು ಇಲ್ಲಿ ಸಮಪಾಲು ಪಡೆದಿವೆ ಎನ್ನಬಹುದು. ಹಾಗೆಂದು ಅದು ನಿಸರ್ಗದ ನೇರ ನಿರೂಪಣೆ ಏನೂ ಅಲ್ಲ. `ನಿಸರ್ಗದಿಂದ ನೇರವಾಗಿ ಹೆಚ್ಚಾಗಿ ಚಿತ್ರಿಸದಿರಿ. ನಿಸರ್ಗವು ಅಮೂರ್ತವಾದದು. ಅದರ ಅಧ್ಯಯನ ಮಾಡಿ, ಅದಕ್ಕೆ ಕಾವು ಕೊಡಿ. ಇದರಿಂದ ಫಲಪ್ರದಗೊಂಡ ಸೃಷ್ಟಿಯನ್ನು ಭದ್ರಪಡಿಸಿ. ಇದು ಮಾತ್ರವೇ ದೇವರೆಡೆಗೆ ಸಾಗುವ, ನಮ್ಮ ಪವಿತ್ರ ಒಡೆಯನಂತೆ ಸೃಷ್ಟಿಸುವ ಏಕಮಾತ್ರ ದಾರಿ’ ಎಂದು ಗಾಗಿನ್ ಹೇಳುತ್ತಾನೆ. ಇಲ್ಲಿನ ಮಾನವಾಕೃತಿಗಳ Skin toneಲ್ಲಿ ಹೆಚ್ಚಾಗಿ Burnt Sienna, Chrome Yellow ಕಲರ್‍ಗಳು ಎದ್ದು ಕಾಣುತ್ತವೆ. ಇವು ಮಂದವರ್ಣ ಅನ್ನಿಸಿದರೂ ತಹಿತಿಗಳ ಮೈಬಣ್ಣದ ಗುಣಲಕ್ಷಣವಾಗಿದೆ. ಅದರಾಚೆ ಬಳಸಿರುವ ಭೂದೃಶ್ಯದಲ್ಲಿದ ಶ್ರೀಮಂತ, ರಮ್ಯ ವರ್ಣಗಳು Contrast DV ಆಗಿ ಮಾನವಾಕೃತಿಗಳ ಸೌಂದರ್ಯವನ್ನು ಹೆಚ್ಚಿಸಿದೆ.

Tahitian ಚಿತ್ರಗಳು ಮತ್ತು ಉಳಿದ ಇನ್ನಿತರ ಚಿತ್ರಗಳಿಗೆ ಹೋಲಿಸಿದರೆ ಈ Tahitian ಚಿತ್ರಗಳ ಪ್ರಕಾರವೇ ತುಂಬಾ ಬೇರೆ ರೀತಿಯದು ಅನ್ನಿಸುತ್ತದೆ.ಇವೆರಡರ ರಚನಾ ತಂತ್ರ ತುಂಬಾ ವಿಭಿನ್ನವಾಗಿದೆ. Tahitian ಚಿತ್ರಗಳಲ್ಲಿ ಸಮತಲತ್ವ, ನೆರಳು-ಬೆಳಕಿನ ಪರಿಣಾಮ ಮತ್ತು ದೂರ-ಸಮೀಪದ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡದಿರುವುದು ಇದು ಮುಂದಿನ `ಫಾವಿಸಂ’ ಪಂಥದ ಕಲಾವಿದರ ಮೇಲೆ ಹೆಚ್ಚಿನ ಪರಿಣಾಮ ಬೀರಿರುವ ಸಾಧ್ಯತೆ ಇದೆ.

ಗಾಗಿನ್ ತಹಿತಿಗೆ ತೆರಳುವ ಮೊದಲು ಹಲವಾರು ಇಂಪ್ರೆಶ್ಶನಿಸಂ, ಪೋಸ್ಟ್ ಇಂಪ್ರೆಶ್ಶನಿಸಂ ಶೈಲಿ ಕಲಾಕೃತಿಗಳನ್ನು ರಚಿಸಿದ್ದಾನೆ. ಇವುಗಳಲ್ಲಿ ಬಹುತೇಕ ಲ್ಯಾಂಡ್‍ಸ್ಕೇಪ್ ಮತ್ತು ಕೆಲವು ಸ್ಟಿಲ್‍ಲೈಫ್‍ಗಳಾಗಿವೆ. ಈ ಕೃತಿಗಳ ಶೈಲಿಯು ಕಲಾವಿದ ವಿನ್ಸೆಂಟ್ ವ್ಯಾನ್‍ಗಾಗ್‍ನನ್ನು ಬಹುವಾಗಿ ಪ್ರೇರೇಪಿಸಿವೆ. ಇಬ್ಬರ ನಡುವೆ ಒಳ್ಳೆಯ ಸ್ನೇಹವಿತ್ತು. ಪರಸ್ಪರರ ಪೋರ್ಟ್ರೇಟ್‍ಗಳನ್ನು, ಕೆಲವು ಕಲಾಕೃತಿಗಳನ್ನು ಇಬ್ಬರೂ ವಿನಿಮಯ ಮಾಡಿಕೊಂಡಿದ್ದರು. 1888ರಲ್ಲಿ ಫ್ರಾನ್ಸ್‌ನ ಆರ್ಲೆಸ್‍ನಲ್ಲಿ ಸಣ್ಣ ಅಪಾರ್ಟ್‍ಮೆಂಟ್‍ವೊಂದರಲ್ಲಿ ಗಾಗಿನ್ ಮತ್ತು ವ್ಯಾನ್‍ಗಾಗ್ ಇಬ್ಬರು ತಿಂಗಳುಗಳ ಕಾಲ ಸ್ಟುಡಿಯೋ ಮಾಡಿಕೊಂಡಿದ್ದರು.

1)Where did we come from? Who are we? Where are we going? 2) Barbrous Tales 3) Farm and Pond 4) Arearea I 5) Are you Jealous? 6) Apple-Trees in Blossom 7) Alone 8) The Spirit of the Dead Keeps Watch 9) The Yellow Christ ಇವೇ ಮೊದಲಾದವು ಗಾಗಿನ್‍ನ ಪ್ರಸಿದ್ಧ ಕಲಾಕೃತಿಗಳಾಗಿವೆ.

Post Impressionism: ಇಂಪ್ರೆಶ್ಶನಿಸ್ಟ್‌ರು ತಮ್ಮ ತಂತ್ರ ಮತ್ತು ನೈಸರ್ಗಿಕ ಬೆಳಕಿನ ಪರಿಣಾಮಕ್ಕೆ ಹೆಚ್ಚಿನ ಗಮನ ನೀಡುತ್ತ ವಿಷಯವನ್ನು ಕಡೆಗಣಿಸಿದರು ಎಂಬ ಮಾತು 1886ರಲ್ಲಿ ನಡೆದ ಇಂಪ್ರೆಶ್ಶಸ್ಟ್‌ರ ಕೊನೆಯ ಪ್ರದರ್ಶನದ ಹೊತ್ತಿಗೆ ಕೇಳಿಬಂತು. ಇಂಪ್ರೆಶ್ಶನಿಸಂನಲ್ಲಿಯೇ ಇದ್ದ ಕೆಲವು ಯುವ ಕಲಾವಿದರು ತಮ್ಮ ಮಹತ್ವಾಕಾಂಕ್ಷೆಯ ಅಭಿವ್ಯಕ್ತಿಯನ್ನು ಪ್ರಚುರಪಡಿಸಲು ಇಂಪ್ರೆಶ್ಶನಿಸಂನ ಕೆಲವು ಸೀಮಿತ ಗುರಿಗಳನ್ನು ಕೈಬಿಟ್ಟರು. ಆದಾಗ್ಯೂ ಶುದ್ಧವರ್ಣಗಳ ಬಳಕೆ, ಕಿರಿದಾದ ಬ್ರಶ್‍ಸ್ಟ್ರೋಕ್‍ಗಳಂತಹ ಕೆಲವು ರಚನಾ ತಂತ್ರಗಳನ್ನು ಉಳಿಸಿಕೊಂಡು ಮುಂದುವರೆದರು. ರೋಜರ್ ಫ್ರೈ ಮೊದಲಿಗೆ ಈ ಶೈಲಿಯನ್ನು Post Impressionism ಎಂದು ಕರೆದರು. ಪಾಲ್ ಸೆಜಾನ್‍ನನ್ನು ಈ ಪಂಥದ ಮುಂಚೂಣಿಯ ನೇತಾರ ಎಂದಿದ್ದಲ್ಲದೆ ಪೋಸ್ಟ್ ಇಂಪ್ರೆಶ್ಶನಿಸಂನ ಪಿತಾಮಹ ಎಂದೂ ಹೇಳಲಾಯಿತು. ಸರಳವಾದ ಬಣ್ಣಗಳು ಮತ್ತು ನಿರ್ಣಾಯಕ ರೂಪಗಳನ್ನು ಬಳಸುವ ಮೂಲಕ ಇವರು ಕಲೆಯನ್ನು ಹೊಸ ಸೌಂದರ್ಯ ಪ್ರಜ್ಞೆಯ ಮೂಲಕ ನಿರೂಪಿಸತೊಡಗಿದರು. ಕ್ಲೋಯಿಸ್‍ನಿಸ್‍ಂ, ಸಿಂಥೆಟಿಸಮ್ ಇದೇ ಪಂಥದ ಕವಲುಗಳಾಗಿವೆ.

ಪಾಲ್ ಸೆಜಾನ್, ಹೆನ್ರಿ ರೂಸೋ, ವಿನ್ಸೆಂಟ್ ವ್ಯಾನ್‍ಗಾಗ್, ಸ್ಯೂರಟ್, ಒಡಿಲಾನ್ ರೆಡಾನ್, ಪಾಲ್ ಸಿಗ್ನಾಕ್, ಹೆನ್ರಿ ಡಿ ಟೌಲೌಸ್ ಲೌಟ್ರೆಕ್, ಎಡ್ವರ್ಡ್ ವಿಲ್ಲಾರ್ಡ ಇವರು ಪೋಸ್ಟ್ ಇಂಪ್ರೆಶ್ಶನಿಸಂನ ಕೆಲವು ಪ್ರಮುಖ ಕಲಾವಿದರಾಗಿದ್ದಾರೆ.

 

ಈ ಅಂಕಣದ ಹಿಂದಿನ ಬರೆಹಗಳು:
ಬನ್ನಿ, ಬದುಕು ಹಂಚಿಕೊಳ್ಳೋಣ
ವರ್ಣಯಾತ್ರೆ
ವರ್ಣ ವ್ಯಾಖ್ಯಾನ
ಚಂದವಿರುವುದಷ್ಟೇ ಕಲೆಯಲ್ಲ
ಕನಸುಗಳು ಮೈದೋರಿದಾಗ
ಕತ್ತಲೆಯ ಅಳತೆಗಾರ
ದುಃಖದ ಉತ್ಪಾತ - ದಿ ಸ್ಕ್ರೀಮ್
ಹಸಿವು ತಣಿಸುವ ತಾಯಿ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು
ಗೌಳಿಗಿತ್ತಿಯ ಮೌನ ಜಾಗರಣೆ!
ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

 

MORE NEWS

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...