ಧಾರವಾಡ-ಮೈಸೂರು ಮಾತ್ರ ಸಾಂಸ್ಕೃತಿಕ ನಗರಿ; ಕಲಬುರಗಿ ಏಕಿಲ್ಲ?

Date: 06-02-2020

Location: ಬೆಂಗಳೂರು


ರಾಜ್ಯದ ಧಾರವಾಡ ಹಾಗೂ ಮೈಸೂರಿಗೆ ಮಾತ್ರ ’ಸಾಂಸ್ಕೃತಿಕ ನಗರಿ” ಪಟ್ಟ, ಸಾಹಿತ್ಯಕ- ಸಾಂಸ್ಕೃತಿಕವಾಗಿ ಹತ್ತು ಹಲವು ಪ್ರಥಮಗಳನ್ನು ನೀಡಿದ ಕಲಬುರಗಿಗೇಕಿಲ್ಲ ಈ ಖ್ಯಾತಿ? 

ಸಾಂಸ್ಕೃತಿಕ ನಗರಿ ಎಂಬುದು ಮಾಧ್ಯಮ ಸೃಷ್ಟಿ, ಅದು ಸ್ವಪ್ರತಿಷ್ಠೆಯ ಒಂದು ರೂಪ, ಆ ನಗರಗಳಿಗೆ ಮಾತ್ರ ಹೀಗೆ ಕರೆದು ಕರೆದು ನೀಡಿದ ಬಿರುದು ಎಂದು ವಾದಿಸಬಹುದು. ಆದರೆ, ಅದು, ತತ್ಕಾಲಿಕ ರಕ್ಷಣಾತ್ಮಕ ತಂತ್ರವಷ್ಟೆ. 

ಇಡೀ ಕನ್ನಡ ಸಾಹಿತ್ಯ ರಚನೆಗೆ ಮೊದಲ ಬಾರಿಗೆ ಅ...ಆ...ಇ...ಈ..ಕಲಿಸಿದ್ದೇ (ಕವಿರಾಜ ಮಾರ್ಗ, ಶಬ್ದಮಣಿ ದರ್ಪಣಂ) ಕಲಬುರಗಿ ಜಿಲ್ಲೆ. ಬಸವಪೂರ್ವ ಸಾಹಿತ್ಯ ರಚನೆಯಾಗಿದ್ದೇ ಇಲ್ಲಿ. ಕುರಿತೋದದೆಯಂ ಕಾವ್ಯ ಪರಿಣಿತ ಮತಿಗಳ್... ಎಂದು ಪ್ರತಿ ಕನ್ನಡಿಗನ ಸಾಹಿತ್ಯ ರಚನಾ ಸಾಮರ್ಥ್ಯವನ್ನು ವೈಭವೀಕರಿಸಿದ್ದೇ ಇಲ್ಲಿ. ಕಾಲಜ್ಞಾನ ವಿಶೇಷ ವಿಜ್ಞಾನದ ಸೃಷ್ಟಿ ಇಲ್ಲಿಯ ಕೊಡೇಕಲ್ಲು. ಮಧ್ವಾಚಾರ್ಯರ ಸಾಹಿತ್ಯದ ಮೊದಲ ಬಾರಿಗೆ ಭಾಷ್ಯೆ ಬರೆದಿದ್ದೇ ಮಳಖೇಡದಲ್ಲಿ. ಕಾವೇರಿಯಿಂದಮಾ ಗೋದಾವರಿವರಮಿರ್ದೆ...ಎಂದು ಕನ್ನಡ ನಾಡಿನ ಗಡಿ ವಿಸ್ತಾರವನ್ನು ಗುರುತಿಸಿದವರು ಕಲಬುರಗಿ ಜಿಲ್ಲೆಯವರು. ಮೊಟ್ಟ ಮೊದಲ ಬಾರಿಗೆ ಗದ್ಯ ಕೃತಿ ‘ವಡ್ಡಾರಾಧನೆ’ ರಚಿಸಿದವರು ಇಲ್ಲಿಯ ಶಿವ ಕೋಟ್ಯಾಚಾರ್ಯರು. ಆದರೂ, ಕಲಬುರಗಿ ಮಾತ್ರ ಧಾರವಾಡ ಹಾಗೂ ಮೈಸೂರು ನಗರಗಳಂತೆ ’ಸಾಂಸ್ಕೃತಿಕ ನಗರಿ’ ಪಟ್ಟ ಪಡೆಯಲಾಗಿಲ್ಲ.

ಸಂಪರ್ಕ ಕೊಂಡಿ ತಪ್ಪಿದ್ದೆಲ್ಲಿ? ವಿಶೇಷವಾಗಿ ಹೈದ್ರಾಬಾದ್ -ಕರ್ನಾಟಕದ ಇತಿಹಾಸ ಕುರಿತು ಕಪಟರಾಳ ಕೃಷ್ಣರಾಯರು ಹೊರತುಪಡಿಸಿದರೆ ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿದ ಈ ಭಾಗದ ಸಂಶೋಧಕರಿಲ್ಲ. ನಂತರ, ಇಂತಹ ಶಾಸ್ತ್ರೀಯ ಸಂಶೋಧನೆ ಮುಂದುವರಿಯಲಿಲ್ಲ. ಬೇರೆ ಭಾಗದ ಸಂಶೋಧಕರು ಇಲ್ಲಿಗೆ ಬಂದು ಸಂಶೋಧನೆ ನಡೆಸಿದರಾದರೂ, ಅದರ ಮುಂದುವರಿದ ಭಾಗವಾಗಿ ಈ ಜಿಲ್ಲೆಯ ಸಂಶೋಧಕರು ಮಾಡಲಿಲ್ಲ ಎಂದೇ ಹೇಳಬೇಕು.

ರಾಷ್ಟ್ರಕೂಟರು, ಚಾಲುಕ್ಯ, ಕಳಚೂರಿಗಳು, ವಾರಂಗಲ್ಲಿನ ಕಾಕತೀಯರು ಹೀಗೆ ಹತ್ತು ಹಲವು ಅರಸು ವಂಶಜರು ಆಡಳಿತ ನಡೆಸಿದರೆಂದು ಐತಿಹಾಸಿಕವಾಗಿ ದಾಖಲಾಗಿದ್ದು ಹೊರತುಪಡಿಸಿದರೆ ಇಲ್ಲಿಯ ಸಾಂಸ್ಕೃತಿಕ ಮಹತ್ವ ಹಾಗೂ ಈ ಅರಸು ವಂಶಜರು ನೀಡಿರುವ ಕಲೆ-ಸಾಹಿತ್ಯ-ಸಂಸ್ಕೃತಿ ಬಗ್ಗೆ ಹೆಚ್ಚು ಅಧ್ಯಯನ  ನಡೆದಿಲ್ಲ. ಈವರೆಗೂ ಮಹತ್ವದ ಸ್ಥಳ-ಕುರುಹುಗಳು-ಸ್ಮಾರಕಗಳು ಅನಾಥವಾಗೇ ಇವೆ. ಅಧ್ಯಯನವಾದ ಈ ಸ್ಥಳ-ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಐತಿಹಾಸಿಕ ಪ್ರಜ್ಞೆ ಹಾಗೂ ಪರಂಪರೆಯ ಬಗ್ಗೆ ಅಭಿಮಾನ ಮೂಡಲು ಇತಿಹಾಸದ ಅರಿವು ಮುಖ್ಯ. ಈ ಕುರಿತು ಸಾಹಿತ್ಯ ರಚನೆಯಾಗಿದ್ದು ಸಹ ಕಡಿಮೆ. ಸುದೀರ್ಘವಾದ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವ ಪ್ರಯತ್ನವಾದರೆ ಕಲಬುರಗಿ ಜಿಲ್ಲೆಯ ಸಾಂಸ್ಕೃತಿಕ ವಲಯದ ಚೌಕಟ್ಟನ್ನು ವಿಸ್ತರಿಸಲು ಸಾಧ್ಯವಿದೆ. ಇತಿಹಾಸದ ಹೊಳವು-ಮಹತ್ವ ಇರುವುದು ಸಾಹಿತ್ಯ-ಸಂಶೋಧನೆಯಿಂದ. ಹೀಗಾಗಿ, ಸಮೃದ್ಧ ಐತಿಹಾಸಿಕ ಸ್ಮಾರಕಗಳಿದ್ದರೂ ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ.ಇದರ ಪರಿಣಾಮ, ಇಲ್ಲಿಯ ಐತಿಹಾಸಿಕ ಅಜ್ಞಾನದ ದರ್ಶನವಾಗುತ್ತಿದೆ. 

ಸಂಕಲ್ಪಶಕ್ತಿ ರಹಿತ ಮನಸ್ಥಿತಿ: ವಿಫುಲ ಸಾಹಿತ್ಯವಿದ್ದರೂ ಸಹ ಅದರ ಜಾಗೃತಿ ಹಾಗೂ ಐತಿಹಾಸಿಕ ಘನತೆಯೊಂದರ ನಿರಂತರ ಉಳಿಯುವಿಕೆಗೆ ಸಂಕಲ್ಪ ಶಕ್ತಿ ಬೇಕು. ಅದಕ್ಕೆ ಐತಿಹಾಸಿಕ ಪ್ರಜ್ಞೆ ಇದ್ದರೆ ತಾನೆ ಈ ಶಕ್ತಿ ಹುರಿಗೊಳ್ಳುವುದು? ಈ ಭಾಗದ ಸೀತಾರಾಮ ಜಾಗೀರದಾರರು, ಜೈಮಿನಿ ಭಾರತದ ಕರ್ತೃ ಲಕ್ಷ್ಮೀಶನು ಅವಿಭಜಿತ ಕಲಬುರಗಿ ಜಿಲ್ಲೆಯ ಸುರಪುರದ  ದೇವಪುರದವನು ಎಂದು ಅಸಂಖ್ಯ ಸಾಕ್ಷ್ಯಾಧಾರ ಸಮೇತ ಸಾಬೀತು ಪಡಿಸಿದ್ದಾರೆ. ರಸ್ತೆಗೆ ದೇವಪುರ ಎಂಬ ಫಲಕ ಬಿಟ್ಟರೆ ’ಜೈಮಿನಿ ಭಾರತ ಕೃತಿ ಕರ್ತೃ ಕವಿ ಲಕ್ಷ್ಮೀಶನ ಊರು ದೇವಪುರ’ ಎಂಬ ಅಭಿಮಾನ ಮೂಡಿಸುವ ಒಂದು ಫಲಕವಿಲ್ಲ. ದೇವಪುರದಲ್ಲಿ ಅಳಿದುಳಿದ ದೇವಾಲಯವೂ ತೀವ್ರ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಆದರೆ, ಕವಿ ಲಕ್ಷ್ಮೀಶನನ್ನು ತಮ್ಮವನಾಗಿಸಿಕೊಳ್ಳಬೇಕೆಂಬ ಹಠದಿಂದ ಚಿಕ್ಕಮಗಳೂರಿನ ಕಡೂರು ಬಳಿಯ ದೇವಪುರ ರೈಲು ನಿಲ್ದಾಣದಲ್ಲಿ ದೊಡ್ಡ ಫಲಕವಿದೆ. ದೇವಪುರದಲ್ಲಿ ಇತ್ತೀಚೆಗೆ ಸರ್ಕಾರಿ ಹಣದಲ್ಲಿ ನಿರ್ಮಿಸಿದ ದೇವಾಲಯವಿದ್ದು, ಅದೇ ಹಳೆಯ ದೇವಾಲಯ ಎಂದೂ, ನಿತ್ಯ ಪೂಜೆ ನಡೆಯುತ್ತಿದೆ. ಕವಿ ಲಕ್ಷ್ಮೀಶನ ಕಾವ್ಯ ತಿಳಿಯದವರು ನೋಡಿದ ತಕ್ಷಣ ಚಿಕ್ಕಮಗಳೂರಿನ ದೇವಪುರವೇ ಲಕ್ಷ್ಮೀಶನ ಊರು ಎಂದು ನಿರ್ಧರಿಸಿ ಬಿಡುತ್ತಾರೆ. ಈ ಅನ್ಯಾಯ ಇಷ್ಟಕ್ಕೆ ಮುಗಿಯದು. ಮಕ್ಕಳ ಪಠ್ಯದಲ್ಲಿ ಲಕ್ಷ್ಮೀಶನ ಊರು ಚಿಕ್ಕಮಗಳೂರಿನ ದೇವಪುರ ಎಂದೇ ಇದೆ. ಸಾಕ್ಷ್ಯಾಧಾರಗಳಿದ್ದರೂ ಇಂತಹ ಸಂಗತಿಗಳನ್ನು ನಿರ್ಲಕ್ಷಿಸುವ ಮನಸ್ಥಿತಿಗೆ ಯಾರು ಕಾರಣ? ಇದೊಂದು ಉದಾಹರಣೆ ಮಾತ್ರ.

ಗುಲಬರ್ಗಾ ವಿಶ್ವವಿದ್ಯಾಲಯ ಎಂಬ ಕಟ್ಟಡಗಳು ಮಾತ್ರ: ಭಾರತದಲ್ಲೇ ಅತ್ಯಂತ ಪ್ರಾಚೀನ ಹಾಗೂ ಮಧ್ಯಯುಗೀನ ಕಾಲದ ಎನ್ನಲಾದ (2-12ನೇ ಶತಮಾನದವರೆಗೂ) ಎನ್ನಲಾದ ಹಾಗೂ ಅಂದಿನ ಕಾಲದಲ್ಲೇ ವಿಶ್ವ ಪ್ರಸಿದ್ಧಿ ಪಡೆದಿದ್ದ ನಾಲಂದಾ ನಾಗಾವಿ ವಿಶ್ವವಿದ್ಯಾಲಯವು (ಆಗಿನ ಘಟಿಕಾ ಸ್ಥಾನ) ಇದೇ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿತ್ತು. ಐತಿಹಾಸಿಕವಾದ ಈ ವಿ.ವಿ. ಅಭಿಮಾನದೊಂದಿಗೆ ಗುಲಬರ್ಗಾ ವಿ.ವಿ. ತನ್ನ ಸಾಂಸ್ಕೃತಿಕ ಸಂಶೋಧನಾ ಕಾರ್ಯಗಳಿಂದ ಇಂದು ವಿಶ್ವ ಪ್ರಸಿದ್ಧಿ ಪಡೆಯಬಹುದಿತ್ತು. ಆದರೆ, ಆಗಿದ್ದೇನು…?

ಕಲಬುರಗಿ ಜಿಲ್ಲೆಯ ಸಾಹಿತ್ಯ ಪರಂಪರೆ ಕುರಿತ ವಿವರ ಮಾಹಿತಿಯೇ ಅಂತರ್ಜಾಲದಲ್ಲಿ ದುರ್ಬಿನು ಹಚ್ಚಿ ಹುಡುಕಿದರೂ ಸಿಗದು. ಅಂದ ಮೇಲೆ ಈ ವಿ.ವಿ. ಸಾಹಿತ್ಯ-ಐತಿಹಾಸಿಕ ಸೇವೆಯನ್ನು ಪ್ರತ್ಯೇಕ ಚರ್ಚಿಸುವುದು ಅನಗತ್ಯ. ಐತಿಹಾಸಿಕವಾಗಿ ಈ ಭಾಗದ ಸಾಂಸ್ಕೃತಿಕ ಬದುಕಿನ ದರ್ಶನ ಮಾಡಿಸಿರುವ ಕೆಲಸಗಳ ಬಗ್ಗೆ ವಿಶ್ವವಿದ್ಯಾಲಯವೇ ಹೇಳಬೇಕು. 

ಕಲಬುರಗಿ ಜಿಲ್ಲಾ ಕಸಾಪ -ಸಂಘ-ಸಂಸ್ಥೆಗಳು: ಯಾರ ಮೇಲೂ ಆರೋಪಿಸುವುದು ಇಲ್ಲಿಯ ಉದ್ದೇಶವಲ್ಲ. ಈ ಭಾಗದ ಐತಿಹಾಸಿಕ ಮಾಹಿತಿ ಸುದೀರ್ಘ ಅಧ್ಯಯನದ ಅಗತ್ಯ ಒಂದು ಕಡೆ. ದೊರೆತ ಐತಿಹಾಸಿಕ ಮಾಹಿತಿ ಆಧರಿಸಿ ಶಾಸನಗಳ ಸಂರಕ್ಷಣೆ, ಸ್ಮಾರಗಳ ಸೌಲಭ್ಯ-ಅಭಿವೃದ್ಧಿಗೆ ಶ್ರಮಿಸುವುದು ಮತ್ತೊಂದೆಡೆ. ಇತಿಹಾಸದ ಮಹತ್ವ ಹೆಚ್ಚಲು ಸಾಹಿತ್ಯ ರಚನೆಯೂ ಪೂರಕ. ಆದ್ದರಿಂದ, ಸಾಹಿತ್ಯಕ ಗುಣಮಟ್ಟದ ಚಿಂತನೆಯೂ ಮಗದೊಂದು ಕಡೆ, ಕನ್ನಡದ ಹೆಸರಲ್ಲಿ ಸಂಸ್ಥೆ-ಸಂಘಗಳನ್ನು ಹುಟ್ಟು ಹಾಕುವುದೊಂದು ಬಿಟ್ಟರೆ ಇಲ್ಲಿ ಚರ್ಚಿತ ಸಂಗತಿಗಳ ಸಾಕಾರಕ್ಕೆ ನೀಡಿದ ಕೊಡುಗೆಗಳು ಏನು ಎಂಬುದರ ಆತ್ಮಾವಲೋಕನವೂ ಆಗಬೇಕು. ಇಂತಹ ಸಂಕಲ್ಪ ಶಕ್ತಿಯೊಂದಿಗೆ ಸಾಮೂಹಿಕ ಪ್ರಯತ್ನಗಳಾದರೆ ಕಲಬುರಗಿಗೂ ‘ಸಾಂಸ್ಕೃತಿಕ ನಗರಿ’ ಎಂಬ ವಿಶೇಷಣೆ ಬಂದೇ ಬರುತ್ತದೆ. 

ನೋಡಿ; ಅವಿಭಜಿತ ಧಾರವಾಡದಲ್ಲಿ ಲಕ್ಕುಂಡಿ ಉತ್ಸವ, ಮೈಸೂರಿನಲ್ಲಂತೂ ಹೇಳುವುದೇ ಬೇಡ. ವಿಜಯಪುರದಲ್ಲಿ ನವಸರ ಉತ್ಸವ ನಡೆಯುತ್ತದೆ. ಕನಿಷ್ಠ ಇಂತಹ ಉತ್ಸವಗಳಿಗೂ ಕಲಬುರಗಿಗೆ ಐತಿಹಾಸಿಕ ಸಮರ್ಥನೆಗಳ ಅಭಾವವಿದೆಯೇ? ಈ ಕುರಿತು ಚಿಂತನೆ ಆಗಬೇಕಲ್ಲವೆ? 

-ವೆಂಕಟೇಶ ಮಾನು

 

MORE NEWS

ನಾಳೆಯಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಕ್ಷರ ಜಾತ್ರೆ

05-01-2023 ಬೆಂಗಳೂರು

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...

ಭಾರತ ಅಖಂಡವಾಗಿ ಉಳಿಯಲಿ- ಎಚ್‌ಎಸ್‌ವಿ ಆಶಯ

07-02-2020 ಕಲಬುರಗಿ

ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...

ಹಾವೇರಿಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ

06-02-2020 ಕಲಬುರಗಿ

ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...