‘ಧೀಮಂತ’ ಪತ್ರಕರ್ತ ಪಾಟೀಲ ಪುಟ್ಟಪ್ಪ: ಕೆಲವು ನೆನಪುಗಳು

Date: 17-03-2020

Location: .


ಅಗಲಿದ ನಾಡೋಜ ಪಾಟೀಲ ಪುಟ್ಟಪ್ಪನವರೊಂದಿಗಿನ ಒಡನಾಟ, ಕರ್ನಾಟಕ ಐಕ್ಯತೆಗೆ ದುಡಿದ  ಧೀಮಂತಿಕೆಯನ್ನು ನೆನೆದಿದ್ದಾರೆ - ಪತ್ರಕರ್ತ ದೇವು ಪತ್ತಾರ. ಪಾಪು ಅವರ ವ್ಯಕ್ತಿತ್ವದ ಅನಾವರಣ ಈ ಲೇಖನ. 

ಸುಮಾರು ಮೂರು ದಶಕಗಳಷ್ಟು ಹಿಂದಿನ ಮಾತು, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆ. ಅದಾಗಲೇ ಎರಡುವರೆ ದಶಕಗಳಿಂದ ಸಂಘದ ಅಧ್ಯಕ್ಷರಾಗಿದ್ದ ಪುಟ್ಟಪ್ಪನವರು ಮೊದಲ ಬಾರಿಗೆ  ’ಸವಾಲು’ ಎದುರಿಸುತ್ತಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಚಂಪಾ ಅವರು ಎದುರಾಳಿಯಾಗಿದ್ದರು, ಮಾಧ್ಯಮಗಳಲ್ಲಿ ಸಂಘದ ಚುನಾವಣೆಯ ಚರ್ಚೆಯ ಕಾವು ಕಾಣಿಸಿಕೊಂಡಿತ್ತು. ಬರೀ ದಿನಪತ್ರಿಕೆ-ವಾರಪತ್ರಿಕೆಗಳು ಇದ್ದ ಕಾಲ ಅದು. ಅದಕ್ಕಿಂತ ಮೊದಲು ನಡೆದ ಚುನಾವಣೆಗಳಲ್ಲಿ ಪುಟ್ಟಪ್ಪನವರು ಪ್ರತಿಸ್ಪರ್ಧಿಗಳಿಲ್ಲದೇ ’ಅಧ್ಯಕ್ಷ’ರಾಗಿ ಆಯ್ಕೆಯಾಗುತ್ತ ಬಂದಿದ್ದರು. ಮಾಧ್ಯಮಗಳು ನಿರ್ಣಾಯಕ ಎಂದು ಕರೆದ ಚುನಾವಣೆಯಲ್ಲಿ ’ಚಮತ್ಕಾರ’ವೇನೂ ನಡೆಯಲಿಲ್ಲ. ಹುಬ್ಬಳ್ಳಿಯಿಂದ ವ್ಯಾನುಗಳಲ್ಲಿ ತುಂಬಿ ಕರೆ ತರಲಾಗಿದ್ದ ’ಸದಸ್ಯರು’ ಪುಟ್ಟಪ್ಪ ಪರ ಮತ ಚಲಾಯಿಸಿದರು. ನಿರೀಕ್ಷೆಯಂತೆ ಚಂಪಾ ಅವರು ಪರಾಭವಗೊಂಡರು. ಆದರೆ, ಪುಟ್ಟಪ್ಪನವರಿಗೆ ಕೂಡ ಚುನಾವಣೆಯಲ್ಲಿ ಕನಿಷ್ಠ ಚರ್ಚೆಯ ಮಟ್ಟಿಗಾದರೂ ಠಕ್ಕರ್‌ ಕೊಡಬಲ್ಲವರು ಧಾರವಾಡದಲ್ಲಿ ಇದ್ದಾರೆ ಎಂಬ ಸಂಗತಿ ಬೆಳಕಿಗೆ ಬಂತು. ಹಾಗೆ ಹೊರಗೆ ಬಂದಷ್ಟೇ ಸಹಜವಾಗಿ ಹಿಂದಕ್ಕೂ ಸರಿಯಿತು. ಅದಾದ ಮೇಲೆ ನಡೆದ ಸಂಘದ ಎಲ್ಲ ಚುನಾವಣೆಗಳೂ ಕೇವಲ ’ಸಾಂಕೇತಿಕ’ ಆಗಿದ್ದವು. ಪುಟ್ಟಪ್ಪನವರ ಸಾಮ್ರಾಜ್ಯ ಅಬಾಧಿತವಾಗಿ ಮುಂದುವರೆಯಿತು. ಆ ಚುನಾವಣೆಯಿಂದ ಆದ ಒಂದು ಲಾಭ ಎಂದರೆ ಚಂಪಾ ಅವರು ಮೈಕೊಡವಿ ಎದ್ದು ಸಾರ್ವಜನಿಕ ಜೀವನದಲ್ಲಿ ಢಾಳಾಗಿ ಕಾಣಿಸಿಕೊಳ್ಳತೊಡಗಿದ್ದು. ಅಂದರೆ ಚಂಪಾ ಅದಕ್ಕಿಂತ ಮೊದಲು `ಇರಲಿಲ್ಲ’ ಎಂದೇನೂ ಅಲ್ಲ. ತುರ್ತು ಪರಿಸ್ಥಿತಿಯಲ್ಲಿ ’ಜೈಲು’ ಸೇರಿದ್ದ ಚಂಪಾ ಅವರು ಜೆ.ಪಿ. ಚಳವಳಿ, ಜಾತಿ ವಿನಾಶ ಚಳವಳಿ, ಗೋಕಾಕ್‌ ಗೋಬ್ಯಾಕ್‌, ಗೋಕಾಕ್‌ ವರದಿ ಜಾರಿಗೆ ಬರಲಿ ಚಳವಳಿಗಳಲ್ಲಿ ಸಕ್ರಿಯವಾಗಿದ್ದರು. ಚಂಪಾ ಅವರು ಕವಿಯಾಗಿ, ಗೆಳೆಯರ ಜೊತೆಗೂಡಿ ಆರಂಭಿಸಿದ ’ಸಂಕ್ರಮಣ’ದ ಸಂಪಾದಕರಾಗಿ ಹಾಗೂ ರಂಗ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಆದರೆ, ಚುನಾವಣಾ ರಾಜಕೀಯದಿಂದ ’ದೂರ’ ಇದ್ದರು. ಸಂಘದ ಚುನಾವಣೆಯ ಸ್ಪರ್ಧೆ ಮತ್ತು ಸೋಲು ಚಂಪಾ ಅವರ ವ್ಯಕ್ತಿತ್ವಕ್ಕೆ ಮತ್ತೊಂದು ಆಯಾಮ ತಂದು ಕೊಟ್ಟಿತು. ’ಕನ್ನಡ ಕನ್ನಡ ಬರ್‍ರಿ ನಮ್ಮ ಸಂಗಡ..’ ಎಂದು ಕರೆಯುತ್ತ ಚಂಪಾ ಅವರು ಧಾರವಾಡದ ಸಂಘದ ಚುನಾವಣೆಯಲ್ಲಿ ಸಾಧಿಸಲಾಗದ್ದನ್ನು ಕಸಾಪ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷರಾಗುವ ಮೂಲಕ ಮಾಡಿ ತೋರಿಸಿದರು. ಚಂಪಾ ಕಸಾಪ ಅಧ್ಯಕ್ಷರಾಗಲು ಸಂಘದ ಚುನಾವಣೆಯ ಪರಾಭವವೇ ಕಾರಣ ಎಂದು ನಾನಂತೂ ಖಂಡಿತವಾಗಿ ನಂಬುತ್ತೇನೆ. ಹೀಗಾಗಿ ಚಂಪಾ ಅವರನ್ನು ಕಸಾಪ ಅಧ್ಯಕ್ಷರನ್ನಾಗಿ ಮಾಡಿದ ಹಿರಿಮೆ ಪುಟ್ಟಪ್ಪನವರಿಗೇ ಸಲ್ಲಬೇಕು. ಹಾಗೆಯೇ ಕೊನೆಯುಸಿರು ಎಳೆಯುವ ವರೆಗೂ ಅವರು ಸಂಘದ ಅಧ್ಯಕ್ಷರಾಗಿಯೇ ಇದ್ದರು.

**

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಕಾಲ. ಮುಖ್ಯಮಂತ್ರಿಗಳು ಮಾಧ್ಯಮಗಳ ಡಾರ್ಲಿಂಗ್‌ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ದುರಾಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರವನ್ನು ಕರ್ನಾಟಕದಲ್ಲಿ ಮೊದಲ ಬಾರಿಗೆ ಮನೆಗೆ ಕಳಿಸಿದ್ದು ‘ತಾವೇ’ ಎಂದು ಮಾಧ್ಯಮಗಳು ನಂಬಿದ್ದವು. ಅದು ಶತ ಪ್ರತಿಶತ ಸತ್ಯವಲ್ಲದಿದ್ದರೂ ಅಂತಹ ವಾದದಲ್ಲಿ ಹುರುಳಿಲ್ಲದೇ ಇರಲಿಲ್ಲ. ಗುಂಡೂರಾವ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತೊಲಗುವಲ್ಲಿ ಮಾಧ್ಯಮಗಳ ಪಾತ್ರವೂ ಇತ್ತು. ಗುಂಡುರಾವ್‌ ಅವರಿಗೆ ಪ್ರತಿಯಾಗಿ ’ಜನತಾ’ ನಾಯಕರು ಕಟ್ಟಿದ ಹುತ್ತದಲ್ಲಿ ಆಯಾಚಿತವಾಗಿ ಬಂದು ಕುಳಿತವರು ಹೆಗಡೆ. ೧೯೮೩ರ ಚುನಾವಣೆಯ ನಂತರ ಹೆಗಡೆ ನಾಯಕರಾಗಿ ಪ್ರತಿಷ್ಠಾಪಿತರಾಗಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾಂಗ್ರೆಸ್‌ ಸೋಲಿಸಿದ್ದು ತಾವೇ ಎಂದು ಬೀಗುತ್ತಿದ್ದ ಮಾಧ್ಯಮಗಳಿಗೆ ಹೆಗಡೆ ಅಧಿಕಾರಕ್ಕೆ ತಂದದ್ದರಲ್ಲಿಯೂ ತಮ್ಮದೇ ಪಾತ್ರ ಇದೆ ಎಂದು ನಂಬಿದ್ದವು. ಕೇವಲ ಮಾಧ್ಯಮಗಳು ಮಾತ್ರವಲ್ಲ. ಸ್ವತಃ ಹೆಗಡೆಯವರಾದಿಯಾಗಿ ಬಹಳಷ್ಟು ಜನ ನಂಬಿದ್ದರು. ಹಾಗೆ ನಂಬುವುದರಿಂದ ಹೆಗಡೆಯವರಿಗೆ ’ಲಾಭ’ ಇತ್ತು. ಅದನ್ನವರು ಮುಂದುವರೆಸಿದರು. ಪುಟ್ಟಪ್ಪನವರ ಬಗ್ಗೆ ಮಾತನಾಡುವಾಗ ಇಷ್ಟೆಲ್ಲ ಪೀಠಿಕೆ ಬೇಕಿತ್ತೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಆದರೆ, ಪುಟ್ಟಪ್ಪನವರ ವ್ಯಕ್ತಿತ್ವ ಗೊತ್ತಿರುವವರಿಗೆ ಇದು ಅತಾರ್ಕಿಕ ಅಲ್ಲ ಎನ್ನುವುದೂ ಗೊತ್ತು. ಪತ್ರಕರ್ತರೂ ಅದಕ್ಕಿಂತ ಮುನ್ನ ಸಾಹಿತಿಗಳೂ ಆಗಿದ್ದ  ಪುಟ್ಟಪ್ಪನವರ ’ಸಾರ್ವಜನಿಕ’ ಬದುಕು ಕರ್ನಾಟಕದ ರಾಜಕೀಯ-ಸಾಂಸ್ಕೃತಿಕ-ಸಾಹಿತ್ಯಕ ಬದುಕಿನೊಂದಿಗೆ ಹೆಣೆದುಕೊಂಡಿದೆ. ಅವನ್ನು ಬಿಟ್ಟು ಪುಟ್ಟಪ್ಪನವರ ಬಗ್ಗೆ ಮಾತನಾಡುವುದು ಸಾಧ್ಯವೇ ಇಲ್ಲ. ಅದಿರಲಿ.

ಡಾ. ರಾಜಕುಮಾರ್‌ ಬೀದಿಗೆ ಬಂದ ನಂತರ ಗೋಕಾಕ್‌ ವರದಿ ಜಾರಿಗೆ ಬರಲಿ ಚಳವಳಿಯ ಕಾವು ಹೆಚ್ಚಿತ್ತು. ಕನ್ನಡದ ಅಸ್ಮಿತೆಯನ್ನು ಕುರಿತ ಪ್ರಮುಖ ಚಳವಳಿ ಅದಾಗಿತ್ತು. ರಾಜ್ಯಾದ್ಯಂತ ಅದಕ್ಕೆ ವ್ಯಕ್ತವಾಗಿದ್ದ ಪ್ರತಿಕ್ರಿಯೆಯೂ ಆಡಳಿತದಲ್ಲಿ ಇರುವ ಪಕ್ಷ ಕನ್ನಡವನ್ನು ಕಡೆಗಣಿಸದೇ ಇರುವಂತಹ ಸ್ಥಿತಿಯನ್ನು ರೂಪಿಸಿತ್ತು. ಅಷ್ಟು ಮಾತ್ರವಲ್ಲ. ಕನ್ನಡದ ಬಗ್ಗೆ ಮತ್ತು ಕನ್ನಡದ ಹೆಸರಿನಲ್ಲಿ ಮಾಡುವ ಕೆಲಸಗಳು ’ಲಾಭ’ ತಂದು ಕೊಡುತ್ತವೆ ಹಾಗೂ ಆ ಮೂಲಕ ನಾಡಿನ ಗಮನ ಸೆಳೆಯಬಹುದು ಎಂಬ ವಾತಾವರಣ ರೂಪುಗೊಂಡಿತ್ತು. ಕನ್ನಡ ಚರ್ಚೆಯ ಕೇಂದ್ರಕ್ಕೆ ಬಂದದ್ದು ಗೋಕಾಕ್‌ ಚಳವಳಿಯ ನಂತರದ ಕಾಲದಲ್ಲಿ. ಚಾಣಾಕ್ಷ ರಾಜಕಾರಣಿ ಅದನ್ನು ಬಳಸಿಕೊಳ್ಳಲು ನಿರ್ಧರಿಸಿದರು. ಕನ್ನಡಕ್ಕೊಂದು ’ವಾಚ್‌ಡಾಗ್‌ ಕಮಿಟಿ’ಯ ಅಗತ್ಯವಿದೆ ಎಂಬ ಶಿಫಾರಸನ್ನು ಜಾರಿಗೆ ತರಲು ನಿರ್ಧರಿಸಿದ ಆಗಿನ ಮುಖ್ಯಮಂತ್ರಿ ಹೆಗಡೆ ಅವರಿಗೆ ಕಾಣಿಸಿದ ಹೆಸರು ’ಉತ್ತರ ಕರ್ನಾಟಕದ ಧೀಮಂತ ಪತ್ರಕರ್ತ’ ಪಾಟೀಲ ಪುಟ್ಟಪ್ಪ ಅವರದಾಗಿತ್ತು. ಉತ್ತರ ಕರ್ನಾಟಕ ಪ್ರಬಲ ಸಮುದಾಯದ ’ನಾಯಕ’ರಾಗಲು ಹವಣಿಸುತ್ತಿದ್ದ ಹೆಗಡೆ ಅವರು ಪುಟ್ಟಪ್ಪನವರೂ ಸೇರಿದಂತೆ ಹೀಗೆ ಬರುವ ಯಾವ ಅವಕಾಶವನ್ನೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಹೀಗಾಗಿಯೇ ಪುಟ್ಟಪ್ಪನವರನ್ನು ’ಕನ್ನಡ ಕಾವಲು ಸಮಿತಿ’ಗೆ ಅಧ್ಯಕ್ಷರನ್ನಾಗಿ ಮಾಡಿದರು. ತೀವ್ರ ಬರ-ತಕರಾರುಗಳ ನಡುವೆಯೂ ಮೈಸೂರಿನಲ್ಲಿ ವಿಶ್ವಕನ್ನಡ ಸಮ್ಮೇಳನ ಕೂಡ ನಡೆಸಿದರು. ಅಧಿಕಾರದಲ್ಲಿ ಮುಂದುವರೆಯಲು ಮಾಧ್ಯಮಗಳಲ್ಲಿ ಚರ್ಚೆಯಲ್ಲಿರಬೇಕು ಎಂಬ ಹೆಗಡೆ ಅವರ ನಂಬಿಕೆಗೆ ಇಂಬುಕೊಡುವ ರೀತಿಯ ಇವೆಂಟ್‌-ಬೆಳವಣಿಗೆಗಳೂ ನಡೆದವು-ನಡೆಸಲಾಯಿತು.

ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾದ ನಂತರ ಪುಟ್ಟಪ್ಪನವರು ಗಡಿನಾಡಿನಲ್ಲಿ ಓಡಾಡಿ ಕನ್ನಡದ ದುಸ್ಥಿತಿಗಳ ಬಗ್ಗೆ ’ಗಮನ’ ಸೆಳೆದರು. ಚಾಟಿ ಏಟು ಬೀಸಿದರು- ಅಬ್ಬರಿಸಿದರು-ಬೊಬ್ಬಿರಿದರು. ಕನ್ನಡ ಶಾಲೆಗಳ ದುಸ್ಥಿತಿಯ ಬಗ್ಗೆ ಚರ್ಚೆ ಅರಂಭವಾಯಿತು. ಆಡಳಿತ ಯಂತ್ರ ಕನ್ನಡ ವಿರೋಧಿಯಾದದ್ದರ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿತು. ಕನ್ನಡದ ಕೆಲಸಕ್ಕಾಗಿ ಪುಟ್ಟಪ್ಪನವರು ’ಕಟಿಬದ್ಧ’ರಾಗಿದ್ದರು. ಸಮಿತಿಯ ಅಧ್ಯಕ್ಷರಿಗೆ ಆಗ ನೀಡಲಾಗುತ್ತಿದ್ದ ಹತ್ತು ಸಾವಿರ ರೂಪಾಯಿ ಗೌರವ ಧನವನ್ನು ಪಡೆಯದೇ ಕೆಲಸ ಮಾಡುವುದಾಗಿ, ಕೇವಲ ಒಂದು ರೂಪಾಯಿ ಗೌರವ ಧನ ಪಡೆಯುವುದಾಗಿ ಪುಟ್ಟಪ್ಪ ಹೇಳಿದರು. ಮತ್ತು ಹಾಗೆ ನಡೆದುಕೊಂಡರು. ಸಮಿತಿಯ ಅಧ್ಯಕ್ಷ ಹುದ್ದೆಯು ಕ್ಯಾಬಿನೆಟ್‌ ದರ್ಜೆಯದಾಗಿತ್ತು. ಪದನಿಮಿತ್ತ ಬಂದ ಸವಲತ್ತುಗಳು ಮಾತ್ರ ಪುಟ್ಟಪ್ಪನವರಿಗೆ ಇದ್ದೇ ಇದ್ದವು.

**

ಪುಟ್ಟಪ್ಪನವರು ಸರಿ ಸುಮಾರು ಎಂಟು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದರು. ಎಂಟು ದಶಕ ಒಬ್ಬ ವ್ಯಕ್ತಿಯ ಜೀವನದಲ್ಲಿ ಮಾತ್ರವಲ್ಲ ’ಇತಿಹಾಸ’ದ ದೃಷ್ಟಿಯಿಂದಲೂ ಗಣನೀಯವಾದದ್ದು. ರಾಜ್ಯದ-ದೇಶದ ವ್ಯಕ್ತಿತ್ವ ರೂಪುಗೊಂಡ ದಿನಗಳವು. ಸ್ವಾತಂತ್ರ ಹೋರಾಟ, ಏಕೀಕರಣ ಚಳವಳಿಗಳಿಗೆ ’ಸಾಕ್ಷಿ’ಯಾಗಿದ್ದ ಪುಟ್ಟಪ್ಪನವರು ಪತ್ರಿಕೋದ್ಯೋಗ ಆಯ್ದುಕೊಂಡದ್ದು ಅವರ ವ್ಯಕ್ತಿತ್ವಕ್ಕೆ ಸಹಜವಾದ ಆಯ್ಕೆಯೇ ಆಗಿತ್ತು. ಏಕೀಕರಣೋತ್ತರ ಕರ್ನಾಟಕದಲ್ಲಿ ಪುಟ್ಟಪ್ಪನವರು ’ಪಡೆದು’ಕೊಂಡದ್ದು ಕೂಡ ಕಡಿಮೆಯದೇನಲ್ಲ.ಅರವತ್ತರ- ಎಪ್ಪತ್ತರ ದಶಕದಲ್ಲಿಯೇ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಎರಡು ಅವಧಿಗೆ ಎಂ.ಪಿ ಆಗಿದ್ದ ಅವರು ೧೯೪೯ರಲ್ಲಿಯೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ವಿಶಾಲ ಕರ್ನಾಟಕ (1947) ನವಯುಗ (1952) ಪ್ರಪಂಚ ವಾರಪತ್ರಿಕೆ (1954), ಸಂಗಮ ಮಾಸಪತ್ರಿಕೆ (1956), ವಿಶ್ವವಾಣಿ ದಿನಪತ್ರಿಕೆ (1959), ಮನೋರಮ ಸಿನಿಮಾ ಪಾಕ್ಷಿಕ (1961), ಸ್ತ್ರೀ ಮಾಸಪತ್ರಿಕೆ (1964) ಪತ್ರಿಕೆಗಳನ್ನು ಆರಂಭಿಸಿ ಹಲವು ಕಾಲ ಯಶಸ್ವಿಯಾಗಿಯೂ ನಡೆಸಿದ್ದರು. ಹುಬ್ಬಳ್ಳಿಯ ಟ್ರಾಫಿಕ್‌ ಐಲ್ಯಾಂಡ್‌ (ಈಗದನ್ನು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ ಎಂದು ಕರೆಯಲಾಗುತ್ತದೆ) ಕಟ್ಟಿದ ಪುಟ್ಟಪ್ಪನವರ ’ಪ್ರಪಂಚ’ವು ’ವಿಶ್ವವಾಣಿ’ ಆಗಲು ಹೆಣಗಿತು. 

ರಾಜಕೀಯ ಮತ್ತು ಕನ್ನಡದ ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಪ್ರಮುಖ ಘಟನೆಗಳು, ವ್ಯಕ್ತಿಗಳು, ಬೆಳವಣಿಗೆಗಳನ್ನು ದಾಖಲಿಸಿದ ’ಪ್ರಪಂಚ’ ಪುಟ್ಟಪ್ಪನವರ ಕಾಲಾವಧಿಯಲ್ಲಿಯೇ ಬೆಳೆದದ್ದು ಮತ್ತು ಅಸುನೀಗಿದ್ದು ಅವರ ’ಯಶಸ್ಸಿ’ನ ಸ್ವರೂಪವನ್ನು ವಿವರಿಸುತ್ತದೆ. ಕಾಲನ ಓಟದಲ್ಲಿ ವೇಗವನ್ನು ’ಪ್ರಪಂಚ’ ಎದುರಿಸಲಾಗದೇ ಹೋದದ್ದು ಕೇವಲ ಪುಟ್ಟಪ್ಪನವರ ’ಮಿತಿ’ ಮಾತ್ರ ಅಲ್ಲ. ಅದು ಸಮಾಜದ ಪ್ರತಿಕ್ರಿಯೆಯೂ ಹೌದು. ಪುಟ್ಟಪ್ಪನವರು ಕೇವಲ ’ಪತ್ರಕರ್ತ’ ಆಗಿರಲಿಲ್ಲ. ಅವರೊಬ್ಬ ’ಉದ್ಯಮಿ’ಯೂ ಆಗಿದ್ದರು. ಪತ್ರಕರ್ತ ಮತ್ತು ಉದ್ಯಮಿಯ ನಡುವಿನ ಸಂಘರ್ಷದಲ್ಲಿ ಗೆದ್ದವರು ಯಾರು? ಸೋತವರು ಯಾರು? ಉತ್ತರ ಸ್ಪಷ್ಟ ಇದೆ.

**

ಪತ್ರಕರ್ತ ಪುಟ್ಟಪ್ಪ ಅವರು ’ಮೂರು ಕಾಸಿಗೆ’ ಪತ್ರಿಕೆ ಮಾರುವುದರ ವಿರುದ್ಧ ಇದ್ದರು. ಅದನ್ನವರು ಬಹಿರಂಗವಾಗಿ ಟೀಕಿಸಿದ್ದರು. ಅದರ ಫಲವಾಗಿ ಅಂದರೆ ಅವರ ಮಾತಿಗೆ ಪ್ರತಿಕ್ರಿಯೆಯಾಗಿ ಪೊಲೀಸ್‌ ರೇಡ್‌ ನಡೆಯಿತು. ಮಧ್ಯರಾತ್ರಿ ಮುದ್ರಣವಾಗುತ್ತಿದ್ದ ಸರಕನ್ನು ಸೀಜ್‌ ಮಾಡಲಾಯಿತು. ಅದಾದ ಮೇಲೆ ಕೆಲಕಾಲ ಪುಟ್ಟಪ್ಪ ತಣ್ಣಗಾಗಿದ್ದರು. ಸುಮ್ಮನಿದ್ದರು. ಆದರೆ, ಅವರ ವಿಚಾರ-ಬಾಯಿ ಅವರನ್ನು ಸುಮ್ಮನೆ ಇರಗೊಡುತ್ತಿರಲಿಲ್ಲ. ’ಯಜಮಾನ’ರನ್ನು ಯಾರೂ ಗಮನಿಸುತ್ತಿಲ್ಲ-ಕೇಳುತ್ತಿಲ್ಲ ಅನ್ನುವಾಗಲೆಲ್ಲ ’ಗುಡುಗು’ ಹಾಕುತ್ತಿದ್ದರು. ಅದು ಕೆಲಕಾಲ ಪ್ರತಿಧ್ವನಿಸಿ ಆ ಕಡೆಗೆ ತಿರುಗಿ ನೋಡುತ್ತಿದ್ದರು. ’ಶಿವರಾಮ ಕಾರಂತರ ಮದುವೆ’ ಪ್ರಸಂಗವನ್ನು ಅವರು ತೀರಿಕೊಂಡ ಒಂದುವರೆ ದಶಕದ ನಂತರ ಪ್ರಸ್ತಾಪ ಮಾಡುವುದರ ಔಚಿತ್ಯವಾದರೂ ಏನಿತ್ತು? ಶಿವರಾಮ ಕಾರಂತರ ಪತ್ನಿ ಲೀಲಾ ಅವರ ಸಹೋದರಿ, ಕಾದಂಬರಿಕಾರ್ತಿ ಗೀತಾ ಕುಲಕರ್ಣಿ ಅವರಿಗೆ ಆಪ್ತರಾಗಿದ್ದ ಪುಟ್ಟಪ್ಪನವರು ಕಾರಂತರು ಬದುಕಿದ್ದಾಗಲೇ ಆಡಬಹುದಿತ್ತು ಅಥವಾ ಅವರಿಲ್ಲದಾಗ ಬರೆಯಬಹುದಿತ್ತು. ಕಂಬಾರ ಮತ್ತು ಭೈರಪ್ಪ ಅವರ ನಡುವೆ ಜ್ಞಾನಪೀಠ ಪ್ರಶಸ್ತಿಗೆ ಸಂಬಂಧಿಸಿದಂತೆ ಆಡಿದ ಮಾತು ಕೂಡ ಔಚಿತ್ಯಪ್ರಜ್ಞೆಯನ್ನು ಮೀರಿದ್ದಾಗಿತ್ತು. 

**

ಪುಟ್ಟಪ್ಪನವರು ಕೇವಲ ಪತ್ರಕರ್ತ ಮಾತ್ರ ಆಗಿರಲಿಲ್ಲ. ಅವರೊಬ್ಬ ಲೇಖಕರೂ ಆಗಿದ್ದರು. ಅವರು ಕತೆಗಳನ್ನೂ ಬರೆದಿದ್ದಾರೆ. ಲೇಖನಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಅವರ ಬರವಣಿಗೆಯನ್ನು ಗುರುತಿಸಿದ ಕನ್ನಡ ವಾಙ್ಮಯ ಜಗತ್ತು ಅವರಿಗೆ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಮನ್ನಣೆ ನೀಡಿ ಗೌರವಿಸಿತು. ಆಗ ಶಿಕ್ಷಣೋದ್ಯಮಿ ಪ್ರಭಾಕರ ಕೋರೆ ಅವರು ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದದ್ದು ಬರೀ ಕಾಕತಾಳೀಯ ಮಾತ್ರ ಆಗಿರಲಿಲ್ಲ.

**

ನಾನು ಪಠ್ಯಪುಸ್ತಕವಲ್ಲದೆ ಬೇರೆ ಓದಲು ಆರಂಭಿಸಿದ್ದು ಪುಟ್ಟಪ್ಪನವರ ’ಪ್ರಪಂಚ’ ಪತ್ರಿಕೆಯ ಮೂಲಕ. ಪ್ರಪಂಚ ಪತ್ರಿಕೆಯಲ್ಲಿ ಬರುತ್ತಿದ್ದ ’ಪ್ರಶ್ನೋತ್ತರ’ ಅಂಕಣದಲ್ಲಿ ನಾನು ಪೋಸ್ಟ್‌ ಕಾರ್ಡ್‌ ಬರೆದು ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರ ಪ್ರಕಟವಾಗಿತ್ತು. ನನ್ನ ಹೆಸರು ಮೊದಲ ಬಾರಿಗೆ ಮುದ್ರಣ ಕಂಡದ್ದು ’ಪ್ರಪಂಚ’ದಲ್ಲಿಯೇ. ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ನನ್ನ ತಂದೆಯವರು ’ಲಂಕೇಶ್‌ ಪತ್ರಿಕೆ’ ಆರಂಭವಾಗುವ ಮುನ್ನ ’ಪ್ರಪಂಚ’ ತರಿಸುತ್ತಿದ್ದರು. ಕೆಲಕಾಲ ಲಂಕೇಶ್ ತರಿಸಿದರೂ ನಂತರ ಅವರಿಗೆ ಅದು ಇಷ್ಟವಾಗದೇ ಬಿ.ವಿ. ವೈಕುಂಠರಾಜು ಅವರ ’ವಾರಪತ್ರಿಕೆ’ ಓದಲು ಆರಂಭಿಸಿದರು. ನಾನು ಮಾತ್ರ ಬೇರೆ ಬೇರೆ ಕಡೆಗಳಿಂದ ಪ್ರಪಂಚ- ಲಂಕೇಶ್‌ಪತ್ರಿಕೆ- ವಾರಪತ್ರಿಕೆಗಳನ್ನು ನೋಡುತ್ತಿದ್ದೆ-ಆಗಾಗ ಓದುತ್ತಿದ್ದೆ. ಚಂಪಾ ಅವರು ’ಸಂಕ್ರಮಣ’ ವಾರಪತ್ರಿಕೆ ಆರಂಭಿಸಿದಾಗ, ಅದನ್ನು ಓದಲು ಆರಂಭಿಸಿದ ತಂದೆಯವರಿಗೆ ಅವರ ರಾಜಕೀಯ ಆಸಕ್ತಿ ತಣಿಸುವ  ಪತ್ರಿಕೆಯೊಂದರ ಹುಡುಕಾಟದಲ್ಲಿದ್ದರು ಅಂತ ಅನ್ನಿಸುತ್ತದೆ.

ನಾನು ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಬೇಂದ್ರೆಯವರನ್ನು ಕುರಿತು ’ಪ್ರಪಂಚ’ ಪತ್ರಿಕೆಯಲ್ಲಿ ಬಂದ ಲೇಖನ-ವರದಿಗಳನ್ನು ನೋಡಿದೆ. ಅವು ಸದಭಿರುಚಿಯಿಂದ ಕೂಡಿದವುಗಳಾಗಿರಲಿಲ್ಲ. ಟೀಕೆ ಮಾಡುವ ಉದ್ದೇಶದಿಂದಲೇ ಬರೆದವುಗಳಂತೆ ಅನ್ನಿಸಿದ್ದವು. ಈಗ ಮತ್ತೊಮ್ಮೆ ನೋಡಿದರೆ ಏನನ್ನಿಸುತ್ತದೆ? ನೋಡಬೇಕು.

’ಪ್ರಜಾವಾಣಿ’ ಸೇರಿದ ಮೇಲೆ ಅವರ ಹಲವು ಲೇಖನಗಳನ್ನು ಹಸ್ತಪ್ರತಿಯಲ್ಲಿ ಓದುವ-ನೋಡುವ ಅವಕಾಶ ದೊರೆಯಿತು. ಅಷ್ಟೊತ್ತಿಗಾಗಲೇ ಅವರ ಬರವಣಿಗೆಯ ಸೊಗಡು-ಸೊಗಸು ಕೈಕೊಡಲು ಆರಂಭಿಸಿತ್ತು. ಚರ್ವಿತಚರ್ವಣ ಅನ್ನಿಸತೊಡಗಿದ್ದವು. ಉತ್ತರ ಕರ್ನಾಟಕದ ವಿಷಯದಲ್ಲಿ ಅವರು ಆಗಾಗ ’ಉಗ್ರಪ್ರತಾಪಿ’ ಆಗುತ್ತಿದ್ದರು. ಇದ್ದಕ್ಕಿದ್ದಂತೆ ಟೋನ್‌ ಡೌನ್‌ ಆಗುತ್ತಿದ್ದುದರ ಮರ್ಮ ನನಗೆ ಈ ವರೆಗೂ ಅರ್ಥವಾಗದ್ದು. ಸಾಹಿತ್ಯ ಸಮ್ಮೇಳನದ ಪುರವಣಿಗಾಗಿ ಒಮ್ಮೆ ಅವರನ್ನು ಫೋನ್‌ ಸಂದರ್ಶನ ಮಾಡಿದ್ದೆ. ರಿಯಾಕ್ಷನ್‌ ಕೇಳಿ ಹಲವು ಬಾರಿ ಪುಟ್ಟಪ್ಪನವರೊಂದಿಗೆ ಮಾತನಾಡಿದ್ದಿದೆ.

೨೦೦೪ ಜನವರಿ ಮೊದಲ ಭಾನುವಾರ. ಸರಿಯಾಗಿ ಒಂದು ತಿಂಗಳ ಹಿಂದಷ್ಟೇ ನನ್ನ ಮದುವೆಯಾಗಿತ್ತು. ರಜೆಯ ದಿನವಾದದ್ದರಿಂದ ನಾನು ಮತ್ತು ಮಡದಿ ಗೀತಾ ಜೊತೆ ಚಿತ್ರಕಲಾ ಪರಿಷತ್ತಿಗೆ ಹೋಗಿದ್ದೆವು. ಅಲ್ಲಿಂದ ಹೊರಬಂದು ಗಾಂಧಿ ಭವನದ ಖಾದಿ ಭಂಡಾರದ ಮಳಿಗೆಯಲ್ಲಿ ಸುತ್ತಾಡುತ್ತಿರುವಾಗ ಪುಟ್ಟಪ್ಪನವರು ತಮ್ಮ ಮಗಳೊಂದಿಗೆ ಅಲ್ಲಿಗೆ ಆಗಮಿಸಿದರು. ಪರಿಚಯದವರು-ಹಿರಿಯರು ಎಂಬ ಕಾರಣಕ್ಕಾಗಿ ಹೋಗಿ ಅವರನ್ನು ಮಾತನಾಡಿಸಿದೆ. ಪುಟ್ಟಪ್ಪನವರು ಸಿಡಿದೆದ್ದರು. ಆಕ್ರೋಶಗೊಂಡರು. ಕೆಲಕಾಲ ಅವರ ಕೋಪ-ಅಟಾಟೋಪಕ್ಕೆ ಕಾರಣ ಏನೆಂದು ಗೊತ್ತಾಗಲೇ ಇಲ್ಲ. ಸುತ್ತಲಿದ್ದ ಜನ ನಮ್ಮನ್ನು ನೋಡತೊಡಗಿದರು. ಅವರು ದನಿ ಎತ್ತರಿಸಿ ಮಾತನಾಡತೊಡಗಿದ್ದರು. ಅದಕ್ಕೆ ಏನು ಕಾರಣ? ಏನು ಉತ್ತರ ಹೇಳುವುದು ಎಂದು ಗೊತ್ತಾಗದೇ ತಬ್ಬಿಬ್ಬಾಗಿ ನಿಂತಿದ್ದೆ. ಸ್ವಲ್ಪ ಹೊತ್ತಿನ ಅವರ ಮಾತಿನ ಮೂಲಕ ಗೊತ್ತಾದದ್ದು ಏನೆಂದರೆ ಆಗ ಕುವೆಂಪು ಅವರ ಜನ್ಮಶತಮಾನೋತ್ಸವ ವರ್ಷ ನಡೆಯುತ್ತಿತ್ತು. ಆಚರಣೆಯನ್ನು ಆರಂಭಿಸುವ ಉದ್ಘಾಟನಾ ಸಮಾರಂಭ ಮುಗಿದು ಒಂದು ವಾರವಷ್ಟೇ ಆಗಿತ್ತು. ಆ ಕಾರ್ಯಕ್ರಮದಲ್ಲಿ ಕವಿ ಚೆನ್ನವೀರ ಕಣವಿ ಅವರು ಭಾಗವಹಿಸಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿರುವಾಗ ಕಣವಿಯವರು ಕುವೆಂಪು ಜನ್ಮಶತಮಾನೋತ್ಸವ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದು ಅವರಿಗೆ ಬಹುದೊಡ್ಡ ’ಅಪರಾಧ’ವಾಗಿ ಕಾಣಿಸಿತ್ತು. ಅದನ್ನು ವ್ಯಕ್ತಪಡಿಸುವುದಕ್ಕೆ ನಾನು ಸಿಕ್ಕಿದ್ದೆ. ಜಗಳ ನಡೆಯುತ್ತಿದೆಯೇನೋ ಎಂಬಂತೆ ಜನ ನಮ್ಮತ್ತ ನೋಡತೊಡಗಿದ್ದರಿಂದ ನನಗೆ ಮುಜುಗರ ಆಗತೊಡಗಿತು. ಏನಾಗುತ್ತಿದೆ? ಎನ್ನುವುದು ಗೊತ್ತಾಗದೇ ಗೀತಾ ಬೆರಗಾಗಿ ನೋಡುತ್ತಿದ್ದಳು. ಅವರ ಅಬ್ಬರ ಕಡಿಮೆಯಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೊನೆಗೆ ಪುಟ್ಟಪ್ಪನವರ ಮಗಳು ಮಧ್ಯೆ ಪ್ರವೇಶಿಸಿ ’ಕಣವಿ ಸಮಾರಂಭಕ್ಕೆ ಹೋದರೆ ಇವರೇನು ಮಾಡಬೇಕು?’ ಎಂದು ಪ್ರಸಂಗಕ್ಕೆ ತಾರ್ಕಿಕ ಅಂತ್ಯ ಕಾಣಿಸಿದರು. ನನಗೆ ಪುಟ್ಟಪ್ಪ ಎಂದರೆ ಹಲವು ಏರಿಳಿತಗಳನ್ನು ಕಂಡ ಹಿರಿಯ ಪತ್ರಕರ್ತ-ರಾಜಕಾರಣಿ. ಪತ್ರಿಕೆಯಲ್ಲಿ ಹೆಸರು ಮಾತ್ರ ನೋಡಿದ್ದ ಗೀತಾಗೆ ಮಾತ್ರ ಕಾರಣವಿಲ್ಲದೇ ಜಗಳಕ್ಕೆ ಬಂದ ’ಉಗ್ರಪ್ರತಾಪಿ’.

**

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...