ದಿಗಂಬರೆಯರ ಉಭಯ ಕುಶಲೋಪರಿ

Date: 25-05-2022

Location: ಬೆಂಗಳೂರು


'ಕ್ಯೂಬಿಸಂನ ಕೆಲವು ಕಲಾವಿದರಂತೆ ಜೀನ್ ಮೆಟ್ಜಿಂಜರ್ ಕೂಡಾ ಆರಂಭದಲ್ಲಿ Pointilism ನಲ್ಲಿಯೂ ಆನಂತರ Fauvismನಲ್ಲಿಯೂ ಕೆಲಸಮಾಡಿದರು ಎನ್ನುತ್ತಾರೆ' ಲೇಖಕ ಲಕ್ಷ್ಮಣ ಬಾದಾಮಿ ಅವರು ತಮ್ಮ ವರ್ಣಯಾತ್ರೆ ಅಂಕಣದಲ್ಲಿ ಫ್ರಾನ್ಸ್ ಮೂಲಕ ಕ್ಯೂಬಿಸಂ ಕಲಾವಿದ ಜೀನ್ ಮೆಟ್ವಿಂಜರ್ ಅವರ ಟು ನ್ಯೂಡ್ಸ್ ಕಲಾಕೃತಿಗಳ ಕುರಿತು ವಿಶ್ಲೇಷಿಸಿದ್ದಾರೆ.

ಕಲಾಕೃತಿ: 'ಟು ನ್ಯೂಡ್ಸ್’
ಕಲಾವಿದ: ಜೀನ್ ಮೆಟ್ಜಿಂಜರ್
ಕಾಲ: 1883-1956
ದೇಶ: ಫ್ರಾನ್ಸ್
ಕಲಾಪಂಥ: ಕ್ಯೂಬಿಸಂ

ಇಲ್ಲಿ ಇಬ್ಬರು ಬಯಲುಡುಗೆಯಲ್ಲಿರುವ ಹೆಂಗಸರು ಎದುರು-ಬದುರಾಗಿ ನಿಂತು ಮಾತುಕತೆಯಲ್ಲಿ ತೊಡಗಿದ್ದಾರೆ. ಇಬ್ಬರೂ ಸಂಪೂರ್ಣ ದಿಗಂಬರೆಯಾಗಿದ್ದರೂ ಕ್ಯೂಬಿಸಂ ಶೈಲಿ ಇವರಿಬ್ಬರ ಅಂಗ ಸೌಷ್ಠವವನ್ನು ಅಮಾನತ್ತಿನಲ್ಲಿಟ್ಟು 'ಮರ್ಯಾದೆ’ಯನ್ನು ಕಾಪಾಡಿದೆ ಎನ್ನಬಹುದು. ಈ ಶೈಲಿಯ ಘನಾಕೃತಿಗಳು ಹೆಂಗಳೆಯರ ಒಳ ಹೊರಗೂ ಸುಳಿದಾಡಿರುವುದರಿಂದ ಅವರ ಮೈವಳಿಕೆ ತೀಕ್ಷ್ಣವಾಗಿ ಕಾಣಿಸುವುದಿಲ್ಲ. ಹೀಗಾಗಿರುವುದರಿಂದಲೇ 'ಬೆತ್ತಲೆ’ಗೆ ಒತ್ತು ಬೀಳುವುದು ತಪ್ಪಿದೆ.

ಚಿತ್ರದಲ್ಲಿಯ ಭಾವವನ್ನು ತಿಳಿಯಲು ಮುಖ ಸಹಕಾರಿಯಾಗಿರುತ್ತದೆ. ಆದರಿಲ್ಲಿ ಒಬ್ಬಳು ನೋಡುಗರಿಗೆ ಬೆನ್ನು ಮಾಡಿ ನಿಂತಿದ್ದರೆ, ಇನ್ನೊಬ್ಬಳು ವೀಕ್ಷಕನ ಎದುರಾಗಿ ನಿಂತಿದ್ದರೂ ಮುಖ ಸ್ಪಷ್ಟವಾಗಿಲ್ಲ. ಆದರೂ ಇವರಿಬ್ಬರ ಭಾವವನ್ನೂ, ಇಲ್ಲಿಯ ಸನ್ನಿವೇಶವನ್ನೂ ಅರಿಯಬಹುದು. ಅದು ಅವರ ದೇಹಭಾಷೆಯ ಮೂಲಕ. ಇಬ್ಬರೂ ತುಂಬಾ ಆಪ್ತರಂತೆ ಸಲುಗೆಯಿಂದ ಕುಶಲೋಪರಿಯಲ್ಲಿ ತೊಡಗಿದ್ದಾರೆ. ಇಬ್ಬರೂ ಕೂಡಾ ಒಂಟಿಕಾಲಿನ ಮೇಲೆ ನಿಂತಿದ್ದಾರೆ. ಅಂದರೆ ಇನ್ನೊಂದು ಕಾಲಿಗೆ ಜಾಸ್ತಿ ಭಾರ ಹಾಕದೇ ವಿರಾಮ ನೀಡಿ ಆರಾಮವಾಗಿ ಮಾತಿನಲ್ಲಿ ಮುಳುಗಿದ್ದಾರೆ. ನೋಡುಗರಿಗೆ ಬೆನ್ನು ತೋರಿಸಿರುವಾಕೆ ಅತ್ಯಂತ ಆತ್ಮೀಯತೆಯಿಂದ ಎದುರಿನವಳ ಹೆಗಲ ಮೇಲೆ ತನ್ನ ಕೈಯಿಟ್ಟು ಅವಳು ಹೇಳುತ್ತಿರುವುದನ್ನು ಕಳಕಳಿಯಿಂದ ಕೇಳುತ್ತಿದ್ದಾಳೆ.

ಇಲ್ಲಿರುವ ಎರಡು ಮಾನವಾಕೃತಿಗಳು ಸರಳ ನಿಲುವಿನಲ್ಲಿ ಲಂಬವಾಗಿ ನಿಂತಿದ್ದರೂ ಅದರಲ್ಲೊಂದು ಚಂದದ ಸಂಯೋಜನೆ ಇದೆ. ಒಡೆದ ಆಕೃತಿಗಳ ಮಧ್ಯೆಯೂ ಅಂಗರಚನೆಯ ಪ್ರಮಾಣವನ್ನು ಕಲಾವಿದ ಎಲ್ಲೂ ಬಿಟ್ಟು ಕೊಟ್ಟಿಲ್ಲ. ಇಲ್ಲಿ ಬಹಳ ಮುಖ್ಯವಾಗಿ ಹಿನ್ನೆಲೆ-ಮುನ್ನೆಲೆ ಎಂಬ ಭೇದ ಕಾಣಿಸುವುದಿಲ್ಲ, ದೂರ ಸಮೀಪವೆಂಬ ಅಂತರವಿಲ್ಲ. ಎಲ್ಲವೂ ಒಂದು ಸಮತಲದಲ್ಲಿ ಏರ್ಪಟ್ಟಿದೆ. ಇದರಿಂದಾಗಿ ಚೌಕ, ಆಯತಾಕಾರದಲ್ಲಿರುವ ಮರಗಳು ಕಲ್ಲುಬಂಡೆಗಳು ಪದರು ಪದರಗಳಾಗಿ ಒಂದರೊಳಗೊಂದು ಬೆರೆತು ಹೋಗಿವೆ. ಮನುಷ್ಯಾಕೃತಿಗಳ Skin Tone ಮತ್ತು ಅದರ ಮೇಲೆಯೇ ಬಂಡೆಗಳ ಬಣ್ಣ ಪ್ರತಿಫಲನಗೊಂಡು ಕಲಸುಮೇಲೋಗರದಂತೆ ಆಗಿದ್ದರೂ ರೇಖೆಗಳು ಮತ್ತು ನೆರಳ ಛಾಯೆ ಆಕೃತಿಗಳನ್ನು ಎತ್ತಿ ತೋರಿಸಿವೆ. ಕೃತಿಯಲ್ಲಿ ಎಲ್ಲಿಯೂ ನೋಡುಗನ ದೃಷ್ಟಿ ಒಂದೆಡೆ ಕೇಂದ್ರಿಕೃತವಾಗದಂತೆ ಎಲ್ಲ ಕಡೆಯೂ ಅದು ಸಮಚಿತ್ತದಿಂದ ಸಂಚರಿಸುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಬಣ್ಣಗಳ ಸಮತೋಲನವನ್ನು ಕಾಯ್ದುಕೊಂಡಿರುವುದು ಅವುಗಳಲ್ಲೊಂದಾಗಿದೆ.

ಇಲ್ಲಿ ಇಡೀ ಚಿತ್ರವನ್ನು ಒಂದೇ ದೃಷ್ಟಿಕೋನದಿಂದ ನೋಡಿಲ್ಲ. ಮೆಟ್‍ಝಿಂಜರ್ ಹೇಳುವಂತೆ ಇದು `ToneMobile Perspective’. ಹಲವು ಆಯಾಮಗಳ ನೋಟ ಇದಾಗಿರುವುದರಿಂದ ಚಿತ್ರದ ತುಣುಕುಗಳನ್ನು ಬಹುಸಂಖ್ಯೆಯಲ್ಲಿ ವಿಭಜಿಸಲಾಗಿದೆ. ಈ ವಿಭಜನೆಗಳನ್ನು ಅವುಗಳದೇ ಆದ ದಿಕ್ಕಿನಲ್ಲಿಟ್ಟು ಕ್ಯಾನ್‍ವಾಸ್‍ನಲ್ಲಿ ಸಂಯೋಜಿಸಲಾಗಿದೆ. ಚಿತ್ರ ವಿಭಜನೆಯ ತುಣುಕುಗಳAngle ಬೇರೆ ಬೇರೆಯಾಗಿರುವುದರಿಂದ ಒಂದೇ ವಸ್ತುವಿನ ಆಕಾರಗಳು ಸಹ ಬೇರೆಯಾಗಿವೆ, ನೆರಳು-ಬೆಳಕಿನ ವಿನ್ಯಾಸವೂ ಸಾಕಷ್ಟು ಬದಲಾಗಿದೆ. ಇದು ಒಂದರ್ಥದಲ್ಲಿ ಚಿತ್ರವನ್ನು ಚದುರಿಸುವುದು ಎಂದು ಹೇಳಬಹುದು. ಚಿತ್ರದ ಇಡೀಯಾದ ನೋಟದ ಫಲವನ್ನು, ಅನುಭೂತಿಯನ್ನೂ ಬಿಡಿ ಬಿಡಿಯಾಗಿ ನೋಡಿ ದಕ್ಕಿಸಿಕೊಳ್ಳುವ ವಿಧಾನವಿದು ಎನ್ನಬಹುದು.

ಕ್ಯೂಬಿಸಂನ ಕೆಲವು ಕಲಾವಿದರಂತೆ ಜೀನ್ ಮೆಟ್ಜಿಂಜರ್ ಕೂಡಾ ಆರಂಭದಲ್ಲಿ Pointilism ನಲ್ಲಿಯೂ ಆನಂತರ Fauvismನಲ್ಲಿಯೂ ಕೆಲಸಮಾಡಿದರು. ಅನಂತರ ಕ್ಯೂಬಿಸಂನಲ್ಲಿ ಕೃತಿ ರಚಿಸತೊಡಗಿದರು. ಈ ಮೂರೂ ಪಂಥಗಳು ಒಂದು ದೃಶ್ಯದ ನೋಟವನ್ನು ಒಂದಿಷ್ಟು ಪ್ರತ್ಯೇಕಿಸಿ(Divisionism)ನೋಡುವ ವಿಧಾನಗಳಾಗಿವೆ. ಮೊದಲು ಸಣ್ಣ ಸಣ್ಣ ಬಿಂದುಗಳಾಗಿ ನೋಡುವ ಕ್ರಮ ಶುರುವಾಗಿ Fauvismನಲ್ಲಿ ಅದು ಪಟ್ಟೆಪಟ್ಟೆ (Brush Strokes)ಆಕಾರದಲ್ಲಿಯೂ, ಕ್ಯೂಬಿಸಂನ ಹೊತ್ತಿಗೆ ಈ ವಿಭಾಗಣೆ ಇನ್ನಷ್ಟು ದೊಡ್ಡದಾಗಿ ವಸ್ತುವಿನ ಒಂದೊಂದು ಭಾಗವನ್ನು ಒಂದೊಂದು ದಿಕ್ಕಿನಿಂದ ನೋಡಿ ಕಾಣಿಸುವ ಕ್ರಮ ಮೊದಲಾಯಿತು.

ಮೆಟ್ಜಿಂಜರ್ ಹಲವು ಶೈಲಿಗಳಲ್ಲಿ ನಿರಂತರ ಕೆಲಸ ಮಾಡಿದವನು. 'ಚಿತ್ರವು ಏನನ್ನೂ ಅನುಕರಿಸಬಾರದು; ಅದು ತಾನು ಇರುವ ಕಾರಣವನ್ನು ಸ್ಪಷ್ಟವಾಗಿ ತೋರ್ಪಡಿಸಬೇಕು’ ಎನ್ನುವ ಮಹತ್ವದ ಮಾತನ್ನು ಅವನು ಹೇಳುತ್ತಾನೆ. ಸದಾ ಪ್ರಯೋಗನಿರತನಾಗಿದ್ದ ಅವನು Analytical Cubism, Synthetic Cubism ಶೈಲಿಯಲ್ಲಿಯೂ ಕೃತಿ ರಚನೆ ಮಾಡಿದನು. Neo Classicism, Purism ಹೀಗೆಯೇ ಹಲವು ಪಂಥಗಳಲ್ಲಿ ಕೆಲಸ ಮಾಡಿದ್ದರೂ ಅತಿ ಹೆಚ್ಚು ಕ್ರಿಯಾಶೀಲನಾಗಿದ್ದು ಕ್ಯೂಬಿಸಂನಲ್ಲಯೇ.Tea Time, The Blue Bird, Solieder at Game of Chess, Woman with Fan, Woman with Mandolin ಇವೆ ಮೊದಲಾದವು ಅವನ ಮುಖ್ಯ ಕಲಾಕೃತಿಗಳಾಗಿವೆ.

ಕ್ಯೂಬಿಸಂ: ವರ್ಣಚಿತ್ರಕಲೆಯು ಮೂಲದಲ್ಲಿ ಎರಡೇ ಆಯಾಮದ್ದಾಗಿದೆ. 'ಘನತ್ವ’ ಇದರಲ್ಲಿ ಇಲ್ಲ. ಇಲ್ಲದ ಘನತ್ವವನ್ನು ಭ್ರಾಮಕತೆಯ ಮೂಲಕ ತೋರಿಸುವ ಬದಲು ಘನದ ಬೇರೆಬೇರೆ ಮೈಗಳನ್ನು ಒಂದೇ ಮೇಲ್ಮೈ ಅಂದರೆ ಚಿತ್ರಭಿತ್ತಿಯ ಮೇಲೆ ತೋರಿಸುವುದೇ ಕ್ಯೂಬಿಸಂ(ಘನಾಕೃತಿ) ಕಲೆಯಾಗಿದೆ. ದೂರ-ಸಮೀಪಗಳ ಅಂತರವಾಗಲಿ, ತುಂಬಿದ ಮೈವಳಿಕೆಗಳ ಬಿಂಬವಾಗಲಿ ಇಲ್ಲಿಲ್ಲ. ಸಮತಟ್ಟಾದ ಸಮತಲಕ್ಕೆ ಈ ಶೈಲಿಯಲ್ಲಿ ಆದ್ಯತೆಯನ್ನು ನೀಡಿದರು. ಇವರು ಪಾರಂಪರಿಕ ರೂಪಗಳನ್ನು ಬಿಟ್ಟು ತಮ್ಮದೇ ರೂಪ ಸೃಷ್ಟಿಯನ್ನು ಮಾಡಿದರು. ಈ ರೂಪಗಳನ್ನು ವಿಮರ್ಶಕರು 'ಘನಾಕೃತಿಗಳು’ ಅಂತ ಕರೆದರು. ಅದರಲ್ಲೂ ಜಾರ್ಜ ಬ್ರಾಕ್‍ನ Houses at L’Estate ಕೃತಿಯಲ್ಲಿನ ಮನೆಗಳು, ಮರಗಳು ಆಕಾರದಲ್ಲಿ ಘನಾಕೃತಿಯ ಶೈಲಿ ಎದ್ದು ಕಾಣುತ್ತಿತ್ತು ಇದನ್ನು ನೋಡಿದ ವಿಮರ್ಶಕ Louis Vauxelles ಘನಾಕೃತಿಗಳೇ ತುಂಬಿವೆ ಎಂದು ವ್ಯಂಗ್ಯವಾಡಿದನು.

ಈ ಶೈಲಿಯ ಆರಂಭಿಕ ಹಂತದಲ್ಲಿ ಪಾಲ್ ಸೆಜಾನ್‍ನ ಲ್ಯಾಂಡ್‍ಸ್ಕೇಪ್‍ಗಳು ಪರಿಣಾಮ ಬೀರಿದವು. ಅಲ್ಲಿಯ ಸಿಲಿಂಡರಿನಾಕರದ ಮರಗಳು, ಕಂದು-ಹಸಿರು ಬಣ್ಣದ ಸಂಯೋಜನೆ ಪ್ರೇರಣೆಯನ್ನು ನೀಡಿದವು. ಇದರ ಮೊದಲ ಅಧಿಕೃತ ಕಲಾಕೃತಿ 1907ರಲ್ಲಿ ಪಿಕಾಸೋನ Les Demoisells d’Avignon ಕೃತಿ ಮೂಡಿಬಂತು. ಕ್ಯೂಬಿಸಂನಲ್ಲಿಯೇ ಮತ್ತೆ ಎರಡು ಶೈಲಿಗಳು ಮೂಡಿಬಂದವು. ವಸ್ತುವಿನ ಭಾಗಗಳನ್ನು ಪ್ರತ್ಯೇಕ ಘಟಕವಾಗಿ ಕಾಣಿಸುವುದನ್ನು Analytical Cubism ಎಂದರೆ; ಇನ್ನೊಂದು Synthetic Cubism. ಇಲ್ಲಿ ಬಣ್ಣಗಳು ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ನೈಜ ವಸ್ತುಗಳುನ್ನು ಬಟ್ಟೆಚೂರು, ದಿನಪತ್ರಿಕೆ ತುಣುಕು, ತಂಬಾಕಿನ ಕವರ್, ಗಾಜಿನ ಚೂರು ಇಂತವುಗಳನ್ನು ಅಂಟಿಸಿ ಸಂಯೋಜಿಸಲಾಗುತ್ತದೆ. ಇದು ಮುಂದೆ ಕೋಲಾಜ್ ತಂತ್ರವಾಗಿ ಬೆಳೆಯಿತು. . Pablo Picasso ಮತ್ತು Georges Braque ಈ ಪಂಥದ ಹರಿಕಾರರಾದರು. Juan Gris, Fernand Leger, Albert Gleizes ಇವರುಗಳು ಸಹ ಈ ಪಂಥದಲ್ಲಿ ಕೆಲಸ ಮಾಡಿದರು.

ಕಲಾವಿದ ಜೀನ್ ಮೆಟ್ಜಿಂಜರ್ ಅವರ ಪ್ರಸಿದ್ಧ ಕಲಾಕೃತಿಗಳು:

ಈ ಅಂಕಣದ ಹಿಂದಿನ ಬರೆಹಗಳು:
ವರ್ಣ ವ್ಯಾಖ್ಯಾನ
ಚಂದವಿರುವುದಷ್ಟೇ ಕಲೆಯಲ್ಲ
ಕನಸುಗಳು ಮೈದೋರಿದಾಗ
ಕತ್ತಲೆಯ ಅಳತೆಗಾರ
ದುಃಖದ ಉತ್ಪಾತ - ದಿ ಸ್ಕ್ರೀಮ್
ಹಸಿವು ತಣಿಸುವ ತಾಯಿ
ಹೆಣ್ಣಿನ ಆತ್ಮಚರಿತ್ರಾತ್ಮಕ ಚಹರೆಗಳು
ಗೌಳಿಗಿತ್ತಿಯ ಮೌನ ಜಾಗರಣೆ!
ಲಿಯೋನಾರ್ಡೋ ಡ ವಿಂಚಿ-ತಾಯ್ತನದ ತಾದ್ಯಾತ್ಮತೆ

MORE NEWS

ಸಂಶೋಧನೆಯಲ್ಲಿ ಆಕರಗಳ ಸಂಗ್ರಹ, ವಿಂಗಡಣೆ ಮತ್ತು ಪೂರ್ವಾಧ್ಯಯನ ಸಮೀಕ್ಷೆ

23-04-2024 ಬೆಂಗಳೂರು

"ಒಂದನ್ನು ಬಿಟ್ಟು ಇನ್ನೊಂದನ್ನು ಚಿಂತಿಸಲಾಗದು. ಅಲ್ಲದೆ; ಶೀರ್ಷಿಕೆ ಆಖೈರು ಮಾಡಿಕೊಳ್ಳುವುದಕ್ಕೆ ನಾವು ಅವಸರ ಮಾಡ...

ಪರಿಘಾಸನ ಮತ್ತು ಅರ್ಧ ಚಕ್ರಾಸನ 

16-04-2024 ಬೆಂಗಳೂರು

"ಪರಿಘಾಸನ ಆಸನವು ) ಪಿತ್ತ ಜನಕಾಂಗ ಮತ್ತು ಮೇದೋಜೀರಕ ಚೈತನ್ಯಗೊಳ್ಳುವಂತೆ ಮಾಡುತ್ತದೆ. ಹಾಗೆಯೇ ‘ಅರ್ಧ ಚಕ್...

ಲೋಕಸಭಾ ಚುನಾವಣೆಗಳ ಸುತ್ತಮುತ್ತ ಒಂದು ಸುತ್ತು

15-04-2024 ಬೆಂಗಳೂರು

"ಪರಸ್ಪರ ರೋಚಕ ನಿಂದನೆಗಳು. ಕ್ಷೇತ್ರವಾರು ಚಕ್ಕರಗುಳ್ಳಿ ಇಡುವ ಚತುರ ವಿವರಗಳು. ಹೊಸ ಹೊಸ ಬೈಗುಳಗಳು. ಮಾಧ್ಯಮಗಳಿಗ...